Friday, January 25, 2013

ವೈಭವದ ಪಥ

ಡಾಕ್ಟರ್ ಲ್ಯಾಂಪ್ಟನ್ ತಮ್ಮ ಜಿಮ್‍ನ ಮಧ್ಯ ನಿಂತು ಹನ್ನೆರಡೂ ಜನರನ್ನೂ ತಮ್ಮ ಸುತ್ತಲೂ ನಿಲ್ಲಲು ಹೇಳಿದರು. “ಮೊದಲ ಹಂತದ ಪರೀಕ್ಷೆಗೆ ಅರ್ಹರಾಗಿರುವ ನಿಮಗೆಲ್ಲರಿಗೂ ಶುಭಾಶಯಗಳು. ಎಂದರೆ, ನನ್ನ ’ಟಾರ್ಚರ್ ಛೇಂಬರ್’ನ್ನು ಪ್ರವೇಶಿಸುವ ಅರ್ಹತೆಯನ್ನು ಪಡೆದ್ದಿದ್ದೀರಿ.” ಎಂದರು. ಡಾಕ್ಟರ್ ಲ್ಯಾಂಪ್ಟನ್ನರ ಹಾಸ್ಯಪ್ರಜ್ಞೆಗೆ ಎಲ್ಲರೂ ನಕ್ಕರು. “ಇನ್ನೊಂದು ಗಂಟೆಯಾದ ಮೇಲೆ ಹೀಗೆ ನಗುತ್ತಾರೋ ಇಲ್ಲವೋ” ಎಂದು ಮನದಲ್ಲೇ ಅಂದುಕೊಂಡು ಎಲ್ಲರನ್ನೂ ಒಳಕ್ಕೆ ಕರೆದೊಯ್ದರು. ಎದುರು ಸಿಕ್ಕ ಬಾಗಿಲನ್ನು ತೆರೆದು, ಒಳಗಿದ್ದ ದೊಡ್ಡ, ಬಹಳ ದೊಡ್ಡ ಕೋಣೆಯೊಳಕ್ಕೆ ಹೋದರು.

“ಯುವಕರೇ, ಜಲಾಂತರ್ಗಾಮಿ (submariners) ಗಳನ್ನು ಸಮುದ್ರದೊಳಗೆ ಹೆಚ್ಚು ಹೊತ್ತು ಕಳೆಯಬಲ್ಲರೋ ಇಲ್ಲವೋ ಎಂಬ ಪರೀಕ್ಷೆ ಮಾಡುವ ಛೇಂಬರಿನ ಮೇಲೆ ನೀವುಗಳು ನಿಂತಿದ್ದೀರ. ಆದರೆ ಈ ಛೇಂಬರನ್ನು ಸ್ವಲ್ಪ ಬದಲಿಸಿದ್ದೇವೆ. ನೀವು ಎವೆರೆಸ್ಟ್ ಹತ್ತುವಾಗ ಎದುರಾಗುವ ಸ್ಥಿತಿಗಳನ್ನು ಇಲ್ಲಿ ಎದುರಿಸುತ್ತೀರ.”

“ಇಲ್ಲಿರುವುದನ್ನೆಲ್ಲಾ ಗಮನಿಸಿ. ಈ ಛೇಂಬರಿನ ಮಧ್ಯದಲ್ಲಿರುವ ಮೆಟ್ಟಿಲುಗಳು – ಚಲಿಸುವ ಮೆಟ್ಟಿಲುಗಳು – ಸಾಮಾನ್ಯ ಎಸ್ಕಲೇಟರಿನಂತಲ್ಲ. ಇದು ನಿಮಗೆ ಸಹಾಯಕವಾಗಿರುವುದಕ್ಕಿಂತಲೂ ನಿಮ್ಮನ್ನು ತಡೆಗಟ್ಟುವ ಕೆಲಸವನ್ನೇ ಮಾಡುತ್ತೆ. ಈ ಮೆಟ್ಟಿಲುಗಳು ಕೆಳಕ್ಕೆ ಚಲಿಸುತ್ತಿರುತ್ತವೆ, ನೀವು ಮೇಲೆ ಹತ್ತುತ್ತಿರುತ್ತೀರಿ. ಈ ಮೆಟ್ಟಿಲುಗಳು ಗಂಟೆಗೆ ಐದು ಮೈಲುಗಳ ವೇಗದಲ್ಲಿ ಚಲಿಸುತ್ತಿರುತ್ತವೆ.”

“ಇದೇನು ಹುಚ್ಚಾಟ? ಒಂದು ಗಂಟೆಯ ಕಾಲ ಚಲಿಸುವ ಮೆಟ್ಟಿಲನ್ನೇರುವುದು ಯಾವ ಮಹಾ ಪರೀಕ್ಷೆ? ಎಂದು ನೀವು ಅಂದುಕೊಳ್ಳಬಹುದು. ಇಲ್ಲಿ ಒಂದೆರಡು ಸಂಗತಿಗಳನ್ನು ನೀವು ಗಮನಿಸಬೇಕು. ಸದ್ಯ ಈ ಛೇಂಬರಿನ ತಾಪಮಾನವು ಸಾಮಾನ್ಯ ಉಷ್ಣಾಂಶದಲ್ಲಿರುತ್ತೆ. ಇನ್ನೊಂದು ಗಂಟೆಯೊಳಗೆ ನೀವುಗಳು 29,000 ಅಡಿ ಎತ್ತರದಲ್ಲಿ ಯಾವಯಾವ ಸ್ಥಿತಿಗಳಿರುತ್ತವೋ ಅವನ್ನೇ ಅನುಭವಿಸುತ್ತಿರುತ್ತೀರಿ. ತಾಪಮಾನವೂ ಸಹ –40 ಡಿಗ್ರೀ ಸೆಲ್ಷಿಯಸ್ ಇರುತ್ತೆ. ಅದಕ್ಕಾಗಿಯೇ ನಾನು ಹೇಳಿದ್ದು, ನೀವು ಪರ್ವತಾರೋಹಣ ಮಾಡುವಾಗ ಯಾವ ಬಟ್ಟೆಯನ್ನು ಧರಿಸುತ್ತೀರೋ ಅದನ್ನೇ ಧರಿಸಿಕೊಳ್ಳಿ ಎಂದು.”

“ಇನ್ನೂ ಒಂದು ಸವಾಲೊಡ್ಡುತ್ತೇನೆ ನಿಮಗೆ. ಅದೋ ದೂರದ ಗೋಡೆಯ ಮೇಲೆ ಎರಡು ಬೀಸಣಿಗೆಗಳು ಕಾಣಿಸುತ್ತಿವೆಯಲ್ಲಾ, ಅವೇ ನನ್ನ ಗಾಳಿ ಯಂತ್ರಗಳು. ಅವೇನೂ ನಿಮ್ಮ ಶೆಖೆಯನ್ನು ಆರಿಸಲು ಇರುವ ಫ್ಯಾನುಗಳಲ್ಲ. ಅವುಗಳನ್ನು ನಾನು ಆನ್ ಮಾಡಿದ ತಕ್ಷಣವೇ, ತಮ್ಮೆಲ್ಲ ಶಕ್ತಿಯಿಂದಲೂ, ನಿಮ್ಮನ್ನು ಎಸ್ಕಲೇಟರಿನಿಂದ ಕೆಳಕ್ಕೆ ತಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತವೆ." ಒಂದಿಬ್ಬರು ಭೀತಿಯಿಂದ ನಕ್ಕರು.

"ಕೋಣೆಯ ಸುತ್ತಲೂ ಹೊದಿಕೆಗಳು, ಹಾಸಿಗೆಗಳು, ಬಕೆಟ್ಟುಗಳು ಇರುವುದನ್ನು ಗಮನಿಸಿ. ಚಲಿಸುವ ಮೆಟ್ಟಿಲಿನಿಂದ ನೀವು ಕೆಳಕ್ಕೆ ಬಿದ್ದ ಮೇಲೆ ನೀವು ಸುಧಾರಿಸಿಕೊಳ್ಳಲೆಂದೇ ಈ ವ್ಯವಸ್ಥೆ. ಬಕೆಟ್ಟುಗಳನ್ನು ಯಾಕಿರಿಸಿದ್ದೇನೆಂಬುದನ್ನು ನಾನು ವಿವರಿಸಬೇಕಿಲ್ಲ." ಈ ಬಾರಿ ಯಾರೂ ನಗಲಿಲ್ಲ. "ಏನಾದರೂ ಪ್ರಶ್ನೆಗಳಿವೆಯಾ?" ಡಾಕ್ಟರ್ ಕೇಳಿದರು.

"ಗೋಡೆಯ ಆ ಬದಿಯಲ್ಲಿ ಏನಿದೆ?" ನಾರ್ಟನ್ ಕೇಳಿದನು. ಅದಕ್ಕೆ ಡಾಕ್ಟರ್ ಉತ್ತರಿಸುತ್ತ, "ಅಲ್ಲಿರುವುದೇ ಕಂಟ್ರೋಲ್ ರೂಮು. ನಾವು ನಿಮ್ಮನ್ನು ನೋಡಬಲ್ಲೆವು. ಆದರೆ ನೀವು ನಮ್ಮನ್ನು ನೋಡಲಾಗುವುದಿಲ್ಲ. ಒಂದು ಗಂಟೆಯಾದ ಮೇಲೆ ಎಸ್ಕಲೇಟರು ನಿಲ್ಲುತ್ತೆ. ವಾಯುಯಂತ್ರಗಳು ಆಫ್ ಆಗುತ್ತವೆ. ತಾಪಮಾನವು ಸಾಮಾನ್ಯ ಸ್ಥಿತಿಗೆ ಮರಳುತ್ತೆ. ಆಮೇಲೆ ಹಲವು ವೈದ್ಯರು ಬಂದು ನಿಮ್ಮನ್ನು ತಪಾಸಣೆ ಮಾಡುತ್ತಾರೆ. ನಿಮ್ಮ ನಿಮ್ಮ ಮೆಟ್ಟಿಲನ್ನು ಆರಿಸಿಕೊಂಡು ನಿಂತುಕೊಳ್ಳಿ, ಗೆಳೆಯರೇ." ಎಂದರು.

ನಿರೀಕ್ಷಿಸಿದಂತೆಯೇ ಫಿಂಚ್ ಮೊದಲ ಮೆಟ್ಟಿಲನ್ನು ಆರಿಸಿಕೊಂಡ. ಎರಡು ಮೆಟ್ಟಿಲನ್ನು ಬಿಟ್ಟು ಜಾರ್ಜ್ ನಿಂತುಕೊಂಡ. ಜಾರ್ಜ್‍ನ ಹಿಂದೆ ಸೋಮರ್ವೆಲ್. ಹೀಗೆ, ಎರಡೆರಡು ಮೆಟ್ಟಿಲುಗಳ ಅಂತರದಲ್ಲಿ ಎಲ್ಲರೂ ನಿಂತರು. "ಮೆಟ್ಟಿಲುಗಳು ಬಜ಼ರ‍್ ಸದ್ದಾದ ಕೂಡಲೇ ಚಲಿಸಲು ಶುರುವಾಗುತ್ತೆ. ಹತ್ತು ನಿಮಿಷದ ನಂತರ ಮತ್ತೆ ಬಜ಼ರ್ ಸದ್ದು ಕೇಳಿಸುತ್ತೆ. ಆಗ ಈ ಛೇಂಬರಿನ ಸ್ಥಿತಿಯು ಐದು ಸಾವಿರ ಅಡಿ ಎತ್ತರದಲ್ಲಿರುವ ಹಾಗಿರುತ್ತೆ - ತಾಪಮಾನವು ಸೊನ್ನೆಯಾಗಿರುತ್ತೆ. ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಬಜ಼ರ್ ಸದ್ದಾಗುತ್ತಿರುತ್ತೆ. ನಲವತ್ತು ನಿಮಿಷಗಳಾದ ನಂತರ ಗಾಳಿಯು ಶುರುವಾಗುತ್ತೆ. ಯಾರಾದರೂ ಒಂದು ಗಂಟೆಯ ನಂತರವೂ ಮೆಟ್ಟಿಲಿನ ಮೇಲೆ ಇದ್ದರೆ ಅವರು 29,000 ಅಡಿ ಎತ್ತರದ ಸ್ಥಿತಿಯನ್ನೇ ಅನುಭವಿಸುತ್ತಿರುತ್ತಾರೆ. ಮತ್ತೆ ಮತ್ತೆ ಹೇಳಿದ್ದನ್ನೇ ಹೇಳುತ್ತಿದ್ದೇನೆ, ಕ್ಷಮಿಸಿ. ಗುಡ್ ಲಕ್ ಜಂಟಲ್‍ಮೆನ್! " ಇಷ್ಟು ಹೇಳಿ ಡಾಕ್ಟರ್ ಲ್ಯಾಂಪ್ಟನ್ ಕೋಣೆಯಿಂದ ಹೊರಹೋದರು. ಹನ್ನೆರಡೂ ಜನರು ಬಾಗಿಲು ಬೀಗ ಹಾಕಿದ ಸದ್ದನ್ನು ಕೇಳಿಕೊಂಡರು.

ನಮ್ಮ ಕಥಾನಾಯಕ ಜಾರ್ಜ್ ಒಂದು ಸುದೀರ್ಘ ಉಸಿರನ್ನು ಒಳಗೆ ತೆಗೆದುಕೊಂಡ. ಮುಂದೆ, ಹಿಂದೆ ಯಾರು ಯಾರಿದ್ದಾರೆಂದು ನೋಡುವ ಗೋಜಿಗೂ ಹೋಗಲಿಲ್ಲ. ಬಜ಼ರ್ ಸದ್ದಾಯಿತು. ಮೆಟ್ಟಿಲುಗಳು ಕೆಳಕ್ಕೆ ಚಲಿಸಲು ಆರಂಭಿಸಿದವು. ಜಾರ್ಜ್ ನಿಧಾನ ಗತಿಯಲ್ಲಿ ಮೇಲೇರ ತೊಡಗಿದನು. ಹನ್ನೆರಡೂ ಜನರು ತಮ್ಮ ತಮ್ಮ ಸ್ಥಾನಗಳನ್ನು ಉಳಿಸಿಕೊಂಡರು. ಎರಡನೆಯ ಸಲ ಬಜ಼ರ್ ಸದ್ದಾದ ಮೇಲೂ ಜಾರ್ಜ್‍ಗೆ ಹೆಚ್ಚೇನೂ ಬದಲಾವಣೆಯಾದಂತೆ ತೋರಲಿಲ್ಲ - ಐದು ಸಾವಿರ ಅಡಿ ಎತ್ತರದಲ್ಲಿರುವ ತಾಪಮಾನವು, ಅಂದರೆ ಸೊನ್ನೆ ಡಿಗ್ರೀ ಇದ್ದರೂ!  ಇಪ್ಪತ್ತು ನಿಮಿಷವಾದ ನಂತರವೂ ಹನ್ನೆರಡೂ ಜನರು ತಮ್ಮ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದರು. ಇನ್ನೂ ಹತ್ತು ನಿಮಿಷವಾದ ಮೇಲೆ, ಹದಿನೈದು ಸಾವಿರ ಅಡಿ ಎತ್ತರವನ್ನು ತಲುಪಿದರು. ತಾಪಮಾನವು -10ಕ್ಕೆ ಇಳಿದಿತ್ತು. ಕೆನ್‍ರೈಟ್ ಪಕ್ಕಕ್ಕೆ ಚಲಿಸಿದ, ಹಿಂದಿದ್ದವರು ಮೇಲೆ ಹೋಗಲು ಜಾಗ ಮಾಡಿಕೊಟ್ಟ. ತಾನು ಕೆಳಗಿನ ಕೊನೆಯ ಮೆಟ್ಟಿಲನ್ನು ತಲುಪಿದ! ಕಷ್ಟ ಪಟ್ಟು ಹತ್ತಿರದ ಹಾಸಿಗೆಯನ್ನು ಹಾಸಿಕೊಂಡು ಹೊದ್ದು ಕುಳಿತ. ಡಾಕ್ಟರ್ ಲ್ಯಾಂಪ್ಟನ್ ಕೆನ್‍ರೈಟಿನ ಹೆಸರನ್ನು ಹೊಡೆದು ಹಾಕಿದರು.

ಫಿಂಚ್ ಮತ್ತು ಜಾರ್ಜ್ ಇಬ್ಬರೂ ಬಹಳ ಸೊಗಸಾಗಿ ತಮ್ಮ ವೇಗವನ್ನು ಉಳಿಸಿಕೊಂಡಿದ್ದರು. ಜಾರ್ಜ್‍ಗೆ ವಾಯುಯಂತ್ರಗಳ ಬಗ್ಗೆ ಮರೆತೇ ಹೋಗಿತ್ತು. ಐದನೇ ಸಲದ ಬಜ಼ರ್ ಸದ್ದಾದ ಕೂಡಲೇ ಮುಖಕ್ಕೆ ಅತಿ ತಣ್ಣನೆಯ ಗಾಳಿಯು ರಾಚಿದಾಗಲೇ ಅದರ ನೆನಪಾಗಿದ್ದು. ಕಣ್ಣುಜ್ಜಬೇಕೆನ್ನಿಸಿತು. ಆದರೆ, 29,000 ಅಡಿ ಎತ್ತರದಲ್ಲಿ, ನಿಜವಾದ ಪರ್ವತದ ಮೇಲೆ  ತಾನು ಧರಿಸಿದ್ದ ಗಾಗಲ್ಸ್ ತೆರೆಯುವುದು ಕ್ಷೇಮವಲ್ಲ, ಅದರಿಂದ ಸ್ನೋ ಬ್ಲೈಂಡ್ನೆಸ್ ಉಂಟಾಗುವುದೆಂಬ ಅರಿವು ಜಾರ್ಜ್‍ಗೆ ಇತ್ತು. ಮುಂದಿದ್ದ ಫಿಂಚ್ ಕೊಂಚ ಗಾಬರಿಯಾದಂತೆ ಕಂಡಿತು. ಆದರೆ, ಕೆಲವೇ ಹೆಜ್ಜೆಗಳ ಹಿಂದಿದ್ದವನು ತನ್ನ ಕನ್ನಡಕವನ್ನು ತೆಗೆದಿದ್ದ ಕಾರಣ, ಮುಖಕ್ಕೆ ಹೊಡೆದ ತಣ್ಣನೆಯ ಗಾಳಿಯ ಅಬ್ಬರಕ್ಕೆ ಕೆಲವೇ ಕ್ಷಣದಲ್ಲಿ ಎಸ್ಕಲೇಟರಿನ ಕೆಳಗಿದ್ದ - ವಾಂತಿ ಮಾಡುತ್ತ! ಅವನ ಹೆಸರನ್ನೂ ಡಾಕ್ಟರ್ ಹೊಡೆದು ಹಾಕಿದರು.

ಐವತ್ತು ನಿಮಿಷಕ್ಕೆ ಬಜ಼ರ್ ಸದ್ದಾದಾಗ ಮೆಟ್ಟಿಲಿನ ಮೇಲೆ ಉಳಿದವರಿಗೆ ಅರಿವಾಯಿತು - ತಾವು ಇಪ್ಪತ್ತನಾಲ್ಕು ಸಾವಿರ ಅಡಿಯನ್ನು ತಲುಪಿದ್ದೇವೆಂದು. ತಾಪಮಾನವು -25 ಡಿಗ್ರೀ ಸೆಲ್ಷಿಯಸ್ ಆಗಿತ್ತು. ಫಿಂಚ್, ಜಾರ್ಜ್, ಓಡೆಲ್, ಸೋಮರ್ವೆಲ್, ಬುಲ್ಲಕ್, ಮತ್ತು ನಾರ್ಟನ್ ಇಷ್ಟೇ ಜನ ಉಳಿದಿದ್ದು. ಇನ್ನೊಂದು ಸಾವಿರ ಅಡಿ ಎತ್ತರ ಹೋಗುವಷ್ಟರಲ್ಲಿ ಬುಲ್ಲಕ್ ಮತ್ತು ಓಡೆಲ್ ಕೆಳಗುರುಳಿದರು. ತಮ್ಮ ಹಾಸಿಗೆ ಹೊದಿಕೆಗಳನ್ನೆಳೆದುಕೊಳ್ಳುವ ಶಕ್ತಿಯೂ ಅವರಿಗಿರಲಿಲ್ಲ. ಡಾಕ್ಟರ್ ಲ್ಯಾಂಪ್ಟನ್ ಗಡಿಯಾರವನ್ನೊಮ್ಮೆ ನೋಡಿ, ಅವರಿಬ್ಬರ ಹೆಸರುಗಳ ಪಕ್ಕ ಟಿಕ್ ಮಾಡಿದರು. ಐವತ್ತಮೂರು ನಿಮಿಷಕ್ಕೆ ಸೋಮರ್ವೆಲ್ ಕೆಳಗೆ ಬಿದ್ದ. ಇನ್ನೊಂದು ನಿಮಿಷದ ಬಳಿಕ ನಾರ್ಟನ್ ಬಿದ್ದ. ಇಬ್ಬರ ಹೆಸರ ಪಕ್ಕದಲ್ಲಿಯೂ ಸಮಯವನ್ನು ಗುರುತಿಸಿ ಡಾಕ್ಟರ್ ಲ್ಯಾಂಪ್ಟನ್ ಅವರು ಟಿಕ್ ಗುರುತು ಹಾಕಿದರು. ನಂತರ ಅಲ್ಲಿ ಉಳಿದಿದ್ದ ಇನ್ನೂ ಇಬ್ಬರ ಮೇಲೆ ಗಮನ ಹರಿಸಿದರು.

ತಾಪಮಾನವು -40 ಡಿಗ್ರೀ ಆಯಿತು. ಇಪ್ಪತ್ತೊಂಭತ್ತು ಸಾವಿರ ಅಡಿ ಎತ್ತರದಲ್ಲಿರುವ ಒತ್ತಡವೂ ಅಲ್ಲಿ ಏರ್ಪಟ್ಟಿತು. ವಾಯುಯಂತ್ರಗಳು ಗಂಟೆಗೆ ನಲವತ್ತು ಮೈಲಿ ವೇಗದಲ್ಲಿ ಗಾಳಿ ಬೀಸತೊಡಗಿದವು. ಫಿಂಚ್ ಇನ್ನೇನು ಬೀಳುವವನಿದ್ದ. ಆದರೆ ಸುಧಾರಿಸಿಕೊಂಡ. ಇನ್ನು ಮೂರೇ ನಿಮಿಷ ಬಾಕಿ ಇದ್ದಿದ್ದು. ಜಾರ್ಜ್ ಸೋಲನ್ನೊಪ್ಪಿಕೊಳ್ಳಲು ಸಿದ್ಧನಾದ. ಉಸಿರಾಟವು ಕ್ಲಿಷ್ಟವಾಯಿತು. ಫಿಂಚ್ ಗೆದ್ದನೆಂದೇ ತಿಳಿದು ಕೈ ಸಡಿಲಗೊಳಿಸಿದ. ಅಷ್ಟರಲ್ಲಿ ಸೂಚನೆಯೇ ಇಲ್ಲದಂತೆ ಫಿಂಚ್ ಒಂದು ಹೆಜ್ಜೆ ಹಿಂದಿಟ್ಟ. ಇನ್ನೊಂದಿಟ್ಟ. ಮತ್ತೊಂದಿಟ್ಟ. ಜಾರ್ಜ್‍ಗೆ ಇದರಿಂದ ಹುಮ್ಮಸ್ಸು ಹೆಚ್ಚಾಗಿ ಮತ್ತೆ ಕೈ ಬಿಗಿ ಮಾಡಿಕೊಂಡ. ಇನ್ನು ತೊಂಭತ್ತೇ ಸೆಕೆಂಡುಗಳು ಬಾಕಿ ಇದ್ದಿದ್ದು. ಕೊನೆಯ ಬಜ಼ರ್ ಸದ್ದಾಯಿತು! ಮೆಟ್ಟಿಲುಗಳು ನಿಂತವು. ಬಹಳ ಸುಸ್ತಾದ ಫಿಂಚ್ ಮತ್ತು ಜಾರ್ಜ್ ಇಬ್ಬರೂ ತಬ್ಬಿಕೊಂಡರು. ಅಲ್ಲಿದ್ದ ಉಳಿದವರೆಲ್ಲರೂ ಇವರಿಬ್ಬರಿಗೂ ಶುಭ ಕೋರಿದರು. ವೈದ್ಯರುಗಳು ಒಳ ಬಂದು ತಪಾಸಣೆಗಳನ್ನು ನಡೆಸಿದರು.

29,000 ಅಡಿಯನ್ನು ಯಾರಾದರೂ ತಲುಪಿ, ಜಗತ್ತಿನ ಅತ್ಯಂತ ಎತ್ತರದ ಪ್ರದೇಶದ ಮೇಲೆ ಮೊಟ್ಟಮೊದಲ ಬಾರಿಗೆ ನಿಲ್ಲುತ್ತಾರೆಂದರೆ, ಅದು ಫಿಂಚ್ ಮತ್ತು ಜಾರ್ಜ್ ಇಬ್ಬರಲ್ಲೊಬ್ಬರು ಎಂದು ಡಾಕ್ಟರ್ ಲ್ಯಾಂಪ್ಟನ್‍ಗೆ ಖಚಿತವಾಯಿತು.

ಮೌಂಟ್ ಎವೆರೆಸ್ಟ್ ಅನ್ನು ಹತ್ತಬೇಕೆಂದರೆ, ಅದೂ ಪ್ರಪ್ರಥಮ ಬಾರಿಗೆ - ಸಾಕಷ್ಟು ತಯಾರಿಗಳು ಆಗಲೇ ಬೇಕಷ್ಟೆ? ಈ ತಯಾರಿ ನಡೆದದ್ದು 1921ರಲ್ಲಿ. ಅಂದರೆ ಎಡ್ಮಂಡ್ ಹಿಲರಿ ಎವೆರೆಸ್ಟ್ ಶಿಖರವನ್ನೇರುವುದಕ್ಕಿಂತ ಸುಮಾರು ಮೂವತ್ತು ವರ್ಷಕ್ಕೂ ಮುಂಚೆ. ಜಾರ್ಜ್ ಮ್ಯಾಲೋರಿ ತನ್ನ ಕನಸಾದ ಕೋಮೋಲಂಗ್ಮಾ (ಬ್ರಿಟಿಷರಿಟ್ಟ ಹೆಸರಾದ ಎವೆರೆಸ್ಟ್) ಪರ್ವತವನ್ನು ಪ್ರಪ್ರಥಮ ಬಾರಿಗೆ ಏರಿದನೆಂಬ ನಂಬಿಕೆಯು ಬಹಳ ಪರ್ವತಾರೋಹಿಯರಲ್ಲಿದೆ. ಇದನ್ನು ಸ್ವತಃ ಹಿಲರಿಯೇ ಒಪ್ಪುತ್ತಾರಾದರೂ "ಯಶಸ್ವಿ ಪರ್ವತಾರೋಹಣವೆಂದರೆ ಶಿಖರವನ್ನು ತಲುಪಿ ನಂತರ ಸುರಕ್ಷಿತವಾಗಿ ಹಿಂದಿರುಗುವುದು, ಆದರೆ ಮ್ಯಾಲರಿ ಹಿಂದಿರುಗಲಿಲ್ಲವಾದ್ದರಿಂದ ನಮಗೆ ಗೊತ್ತಿಲ್ಲ - ಅವರು ಶಿಖರವನ್ನು ತಲುಪಿದರೋ ಇಲ್ಲವೋ ಎಂದು" ಎಂದು ಹೇಳುತ್ತಾರೆ. ಈ ಕಥೆಯನ್ನು ಜೆಫೆರಿ ಆರ್ಚರ್ ಬಹಳ ಸೊಗಸಾಗಿ ತಮ್ಮ ಕೃತಿ - ಪಾತ್ಸ್ ಆಫ್ ಗ್ಲೋರಿಯಲ್ಲಿ ಹೇಳಿದ್ದಾರೆ. ಜಾರ್ಜ್ ಮ್ಯಾಲರಿ (ಮತ್ತು ಇರ್ವೀನ್) ಇಬ್ಬರೂ ಜಗತ್ತಿನ ಪ್ರಪ್ರಥಮ ಪರ್ವತಾರೋಹಿಗಳು - ಕೋಮೋಲಂಗ್ಮಾ ಶಿಖರವನ್ನೇರಲು - ಎಂಬುದನ್ನು ನಿರೂಪಿಸುತ್ತಾರೆ. ಈ ನಿರೂಪಣೆಯ ಶೈಲಿಯೇ ಸೊಗಸು.

ಕೃತಿಯಲ್ಲಿ ಜಾರ್ಜ್‍ನ ಬಾಲ್ಯದಲ್ಲಿದ್ದ ಪರ್ವತಾರೋಹಣ, ಚಾರಣದ ಆಸಕ್ತಿ ಮತ್ತು ಆ ಕೃತ್ಯಗಳು, ನಂತರ ತಾನು ಇಷ್ಟ ಪಟ್ಟು ಮದುವೆಯಾದ ರುಥ್ ಮತ್ತು ಜಾರ್ಜ್‌ನ ಪ್ರಣಯ ಪ್ರಸಂಗಗಳು, ನಂತರ ಎವೆರೆಸ್ಟ್ ಕಮಿಟಿಯು ಇವನನ್ನು (ಮತ್ತು ತಂಡವನ್ನು) ಆಯ್ಕೆ ಮಾಡಿ ಭಾರತಕ್ಕೆ ಕಳುಹಿಸಿದಾಗ ಇಲ್ಲಿ ಬಂದಾಗ ಒಬ್ಬ ಆಂಗ್ಲನ ದೃಷ್ಟಿಯಲ್ಲಿ ಭಾರತದ ಚಿತ್ರಣ (ನಮ್ಮ ಕಥಾನಾಯಕನೂ ಆಂಗ್ಲನು, ಕಥೆಗಾರನೂ ಆಂಗ್ಲನು), ರುಥ್ ಮತ್ತು ಜಾರ್ಜ್‍ನ ನಡುವಿನ ಪತ್ರ ಸಂಭಾಷಣೆಗಳು, ಹಿಮಾಲಯದ ಮನೋಹರ ಚಿತ್ರಣವು, And of course, ಮೌಂಟ್ ಎವೆರೆಸ್ಟ್ ಶಿಖರವನ್ನು ಪ್ರಪ್ರಥಮ ಬಾರಿಗೆ ಏರುವ ತಂಡವು ಮಾಡಿಕೊಂಡ ಸಿದ್ಧತೆಯ ವಿವರಣೆ - ಪಾತ್ಸ್ ಆಫ್ ಗ್ಲೋರಿಯಲ್ಲಿ ಮೂಡಿವೆ.

ನಾನಂತೂ ಕೋಮೋಲಂಗ್ಮಾ ಏರುವ ಅರ್ಹತೆಯನ್ನು ಪಡೆದಿಲ್ಲ. ಆದರೆ ಪುಸ್ತಕದೊಳಗೆ ಮುಳುಗಿ, ಅನೇಕ ಬಾರಿ ಶಿಖರವನ್ನು ತಲುಪಿ ಬಂದಾಯಿತು.

-ಅ
25.01.2013
11.35PM

ಒಂದಷ್ಟು ಚಿತ್ರಗಳು..