Friday, June 24, 2011

ಮಾತೃ ದೇವೋ ಭವ - ಅನಾಥ ರಕ್ಷಕಿ

ನಮ್ಮಲ್ಲಿ ಸಾವಿರಾರು ಪ್ರಭೇದಗಳಿರಬಹುದು. ಎಲ್ಲರಿಗಿಂತಲೂ ನಾವು ಮಿಗಿಲು! ನಾವು “ರಾಜ” ವಂಶಕ್ಕೆ ಸೇರಿರುವವರು! ಇಂಗ್ಲೀಷಿನಲ್ಲಿ “ಕಿಂಗ್” ಎಂದೇ ನಮ್ಮನ್ನು ಕರೆಯುತ್ತಾರೆ.

ಸರಿಸೃಪಗಳಲ್ಲೆಲ್ಲ ಜನರು ಬಹಳವಾಗಿ ಹೆದರುವುದು ನಮ್ಮನ್ನು ಕಂಡೇ. ವಿಷವಿರಲಿ, ಬಿಡಲಿ - ಜನರಿಗೆ ನಾವೆಂದರೆ ಭಯ. “ಜನ್ಮ ಕೊಟ್ಟ ತಾಯಿ ವಿಷ ಕೊಡುವಳೇ?” ಎಂದು ಏನೇನೋ ಭಾವನಾತ್ಮಕ ಮಾತುಗಳನ್ನು ನೀವು ಕೇಳಿರಬಹುದು. ಆದರೆ ನಮ್ಮ ತಾಯಿಯ ದೆಸೆಯಿಂದಲೇ ನಮ್ಮಲ್ಲಿ ವಿಷವೂ ನೆಲೆಯೂರಿರುವುದು. ಸರ್ಪಗಳೆಂದರೆ ಏನು ಸಾಮಾನ್ಯವೇ? ಹೇಗೂ ಇರಲಿ, ನಮ್ಮ ಅಮ್ಮನ ಮಹದ್ವಿಷಯವನ್ನು ಹೇಳುವ ಮುನ್ನ, ನಮ್ಮ ಸಂಬಂಧಿಕರ ಬಗ್ಗೆ ಒಂದಿಷ್ಟು ತಿಳಿಸುತ್ತೇವೆ.

ನಮ್ಮ ಅಮ್ಮನಿಗೆ ಇರುವ ಹಾಗೆ ನಮ್ಮ ಯಾವುದೇ ಸಂಬಂಧಿಕರುಗಳ ತಾಯಂದಿರಿಗೂ ಮಕ್ಕಳ ಬಗೆಗೆ ಪ್ರೇಮವಿರುವುದನ್ನು ಕಾಣೆವು. ಹಾಗಂತ ದ್ವೇಷವೇನೂ ಇಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸಿ ನಾಣ್ನುಡಿಯನ್ನೂ ಮಾಡಿದ್ದಾರೆ - ಹಾವುಗಳು ತಮ್ಮ ಮೊಟ್ಟೆಗಳನ್ನು ತಾವೇ ತಿನ್ನುತ್ತವೆ ಎಂದು. ಎಲ್ಲಾದರೂ ಉಂಟೇ? ಮೊಟ್ಟೆಯಿಡುವುದು ಮರಿಯಾಗಲೆಂದು, ಸಂತತಿ ಬೆಳೆಯಲೆಂದು. ತನ್ನ ಕರುಳಿನ ಕುಡಿಯನ್ನೇ ತಾಯಿಯೆಂದಾದರೂ ತಿಂದಾಳೇ? ಈ ಮಹದುಪಕಾರವನ್ನು ನಮ್ಮ ಸಂಬಂಧಿಕರುಗಳ ತಾಯಂದಿರು ಮಾಡುವುದರಿಂದ ಮೊಟ್ಟೆಯೊಡೆದು ಹೊರಗೆ ಬರುವ ವೇಳೆಗೆ ಅವರು ಅನಾಥರೇ ಸರಿ. ಪಕ್ಷಿಗಳ ಹಾಗೆ ಸರ್ಪಗಳ ಮೊಟ್ಟೆಗಳಿಗೆ ಕಾವು ಕೊಡುವ ಅಗತ್ಯವೇನಿದೆ?

ಕಾವು ಕೊಡುವ ಅಗತ್ಯ ನಮ್ಮ ಹತ್ತಿರದ ಸಂಬಂಧಿ ಹೆಬ್ಬಾವುಗಳ ಮೊಟ್ಟೆಗಳಿಗಿವೆ. ಅದೂ ಕೂಡ ಹೆಚ್ಚಿಗೆ ದಿನಗಳೇನಿಲ್ಲ. ಸ್ವಲ್ಪ ಕಾಲವಾದ ಮೇಲೆ ಹೆಬ್ಬಾವು ಮರಿಗಳೂ ಕೂಡ ಅನಾಥರೇ.

ನಾವು ಕಾಳಿಂಗ ಸರ್ಪಗಳು! ನಮ್ಮನ್ನೂ ಅನಾಥರನ್ನಾಗಿಸಿ ಎಲ್ಲೋ ಹೋಗಿ, ಮುಂದಿನ ವರ್ಷ ಮತ್ತೆ ಮೊಟ್ಟೆಯಿಡುವ ನಮ್ಮಮ್ಮ ನಮ್ಮ ಪಾಲಿಗೆ ದೇವರಂತೆ ಹೇಗೆ ಎಂದು ಯೋಚಿಸುತ್ತೀರಾ? ಅಥವಾ, ನಮ್ಮೆಲ್ಲ ಸಂಬಂಧಿಕರಿಗಿಂತ ನಮ್ಮ ತಾಯಿಯು ಹೇಗೆ ವಿಶೇಷ ಎಂದು ಕೇಳುತ್ತೀರಾ?ಸರ್ಪಗಳಲ್ಲೇ ಯಾರೂ ಕೈಹಾಕದ ಸಾಹಸ ಒಂದನ್ನು ನಮ್ಮಮ್ಮ ಮಾಡಿದ್ದಾಳೆ - ನಾವು, ಮೂವತ್ತು ಒಡಹುಟ್ಟಿದವರೂ, ಮೊಟ್ಟೆಯೊಳಗಿರುವಾಗ ನಮಗೊಂದು ಮನೆ, ಅರ್ಥಾತ್ ಗೂಡು ನಿರ್ಮಿಸಿದ್ದಾಳೆ! “ಈ ಪರಿಯ ಸಾಮರ್ಥ್ಯ ಬೇರಾವ ಅಮ್ಮನಲು ಕಾಣೆವು ನಮ್ಮಮ್ಮನಿಗಲ್ಲದೆ!”

ನಮ್ಮೆಲ್ಲರನ್ನೂ - ಅಂದರೆ ಮೊಟ್ಟೆಗಳನ್ನು - ಗೂಡಿನಲ್ಲಿ ಭದ್ರವಾಗಿರಿಸಿ, ಅತಿ ತೇವಾಂಶವುಳ್ಳ ಪ್ರದೇಶವಾಗಿರುವುದರಿಂದ ನಮ್ಮನ್ನು ಬೆಚ್ಚಗೆ ತಬ್ಬಿಕೊಂಡು ಎರಡುವರೆ ತಿಂಗಳು ಕಾದಿದ್ದಾಳೆ, ರಕ್ಷಿಸಿದ್ದಾಳೆ! ಇದಕ್ಕಿಂತಲೂ ಅವಳು ಮಾಡಿರುವ ಅತ್ಯದ್ಭುತ ಕೆಲಸವೆಂದರೆ ನಾವು ಹುಟ್ಟುವ ಕೆಲವೇ ಸಮಯಗಳ ಮುಂಚೆ ನಮ್ಮನ್ನು ತೊರೆದು ಹೋಗಿರುವುದು.

ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಇದ್ದಳೇನೋ ಅನ್ನಿಸುತ್ತೆ ಅಮ್ಮ, ನಮಗೆ ಯಾರಿಗೂ ಗೊತ್ತಿಲ್ಲ. ನಾವು ಅವಳನ್ನು ಕಂಡಿದ್ದರೆ ತಾನೆ? ಹೇಳೆದೆವಲ್ಲ, ನಾವು ಹುಟ್ಟುವ ಕೆಲವೇ ಸಮಯದ ಮುಂಚೆ ನಮ್ಮನ್ನೆಲ್ಲಾ ಬಿಟ್ಟು ಹೊರಟುಹೋಗಿದ್ದಾಳೆಂದು. ಅವಳಲ್ಲಿರುವಷ್ಟು ವಿಷ ನಮ್ಮಲ್ಲಿಲ್ಲದಿರಬಹುದು. ಆದರೆ ಮನುಷ್ಯರನ್ನು ಸಲೀಸಾಗಿ ಕೊಲ್ಲಬಲ್ಲಷ್ಟು ವಿಷ ಅಗತ್ಯವಾಗಿ ಇದೆ.

ವಿಷಯಕ್ಕೆ ಬರೋಣ. ಅಮ್ಮ ನಮ್ಮನ್ನು ಬಿಟ್ಟು ಹೋಗಿರುವುದು ಏಕೆ? ಮತ್ತು ಅದು ಮಹತ್ತಿನ ಕೃತ್ಯ ಎಂದು ನಾವು ಕರೆದು, ಅಮ್ಮನನ್ನು ಪೂಜ್ಯವಾಗಿಸಲು ಕೊಡುತ್ತಿರುವ ಕಾರಣವೂ ಸಹ ಅದೇ, ಏಕೆ?

ನಾವು ಹುಟ್ಟಿದ್ದೇವಲ್ಲ, ಮೂವತ್ತು ಸೋದರ ಸೋದರಿಯರು, ಒಟ್ಟಿಗೆ ಬಾಳುವವರಲ್ಲ. ಅಮ್ಮ ಹೋದ ಹಾಗೆಯೇ ನಾವೂ ಹೋಗಬೇಕು. ಒಟ್ಟಿಗೆ ಇರಲು ಸಾಧ್ಯವೇ ಇಲ್ಲ. ನಮ್ಮ ಹೆಸರು “ಕಿಂಗ್” ಎಂದು ಆಗಲೇ ಹೇಳಿದೆವಷ್ಟೆ? “ಕಿಂಗ್” ಯಾವತ್ತಿದ್ದರೂ ಏಕಾಂಗಿಯೇ. ಇದಕ್ಕೆಲ್ಲ ಮೂಲಭೂತವಾದ ಕಾರಣ ನಮ್ಮ ಆಹಾರ.

ನಾವು ಸರ್ಪಭಕ್ಷಕರು!

ನಾವು ಹುಟ್ಟುವ ವೇಳೆಗೆ ಅಮ್ಮ ಇದ್ದಿದ್ದರೆ ಬಲವಂತವಾಗಿ ತನ್ನ ಮಕ್ಕಳನ್ನೇ ತಿನ್ನಬೇಕಾಗಿರುತ್ತಿತ್ತು - ನಿಯಮಾನುಸಾರ. ಆದರೆ, ನಿಯಮ ಬೇರೆ ರೀತಿಯದೇ ಆಗಿದೆ. ನಾವು ಹುಟ್ಟುವ ಸಮಯಕ್ಕೆ ಅವಳು ನಮ್ಮೊಡನೆ ಇರಲು ಸಾಧ್ಯವೇ ಇಲ್ಲ! ಹಾಗೇ ನಾವೂ ಸಹ ಜೊತೆಗೆ ಇರಲು ಸಾಧ್ಯವೇ ಇಲ್ಲ. ಇದ್ದರೆ ಯಾರು ಬಲಿಷ್ಠರೋ ಅವರು ದುರ್ಬಲರನ್ನು ತಿಂದುಬಿಡುತ್ತಾರೆ! ಸ್ವಜಾತಿಭಕ್ಷಣೆಯು ಅಪರಾಧವಷ್ಟೆ.

ವಿಕಾಸವಾದಿಗಳು ನಮ್ಮನ್ನು ಈ ಕಾರಣಕ್ಕೆ ಬಹಳ ಗೌರವಿಸುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲವು ದೂರವಿರದೆ ಇರಲಿ.

-ಅ
07.05.2011
2AM

೧. http://www.hinduonnet.com/2001/06/20/stories/0420402s.htm

೨. http://www.stanford.edu/group/stanfordbirds/text/essays/Parental_Care.html

6 comments:

 1. ನಿಜವಾಗಿಯೂ ಪರಿಸರ ಪ್ರೇಮಿಯೇ...ಒಳ್ಲೆಯ ಲೇಖನ..ಸ್ವಜನ ಭಕ್ಷಣೆ ಪ್ರಾಣಿಗಳಲ್ಲಿ ಇರುವ ಸ್ವಾಭಾವಿಕೆ ಕ್ರಿಯೆ...ಮೀನುಗಳಲ್ಲೂ ಇದು ಕಂಡು ಬರುತ್ತದೆ...ಇದು ನಿಸರ್ಗ ನಿಯಮ...ಅಭಿನಂದನೆ ಒಳ್ಳೆಯ ಲೇಖನಕ್ಕೆ,,,

  ReplyDelete
 2. ಒಳ್ಳೆಯ ಲೇಖನ ಅರುಣ್. ಗೂಡು ಕಟ್ಟುವ ಏಕೈಕ ಸರ್ಪ ಕಾಳಿಂಗಸರ್ಪ. ನಿಸರ್ಗದ ನಿಯಮಗಳು ಎಷ್ಟು ವಿಚಿತ್ರ ಮತ್ತು ಎಷ್ಟು ಕರಾರುವಾಕ್ಕ್ ಅಲ್ಲವೆ? ಹಾವನ್ನೆ ತಿನ್ನುವ ಕಾಳಿಂಗ ತನ್ನ ಮರಿಗಳನ್ನು ತಿನ್ನದಿರಲಿ ಎಂಬ ದೃಷ್ಟಿಯಿಂದ ಅದುವರೆಗೂ ರಕ್ಷಿಸಿದ ಮೊಟ್ಟೆಯನ್ನು ಮರಿಯಾಗುವಾಗ ತೊರೆದು ಹೊರಟುಹೋಗುತ್ತದೆ...ಅದು ಹಾಗೆ ಹೋಗುವಂತೆ ಮಾಡುವ instinct ಯಾವುದೋ...
  ಕಾಳಿಂಗನ ಬಗ್ಗೆ ಇರುವ ಇನ್ನೊಂದು ನಂಬಿಕೆಯೆಂದರೆ ಅದರ ವಿಷ ಎಲ್ಲಕ್ಕಿಂತ ತೀಕ್ಷ್ಣ ಎಂದು. ಆದರೆ ನಿಜವೆಂದರೆ ಅದಕ್ಕಿಂತ ಸರ್ಪಗಳ ವಿಷದ ತೀಕ್ಷ್ಣತೆಯೇ ಹೆಚ್ಚು. ಕಾಳಿಂಗ ಕಚ್ಚಿದಾಗ ಬಿಡುವ ವಿಷದ ಪ್ರಮಾಣ ತುಂಬ ಹೆಚ್ಚಾಗಿರುವುದರಿಂದ ಬದುಕುವ ಸಾಧ್ಯತೆ ಕಡಿಮೆಯಷ್ಟೇ.

  ReplyDelete
 3. [ಸುಮ] :-) ಧನ್ಯವಾದಗಳು ಸುಮ ಅವರೇ. ಹಾವಿಗೆ ಇರುವ ಇನ್ಸ್ಟಿಂಕ್ಟ್ ನಾಯಿ ಬೆಕ್ಕುಗಳಿಗೆ ಇರಲಾರದೇ ಎಂಬ ಡೌಟು ನನಗೆ ಇನ್ನೂ ಇದೆ. :-)

  ಕಿಂಗ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಶೇರ್ ಮಾಡಿದ್ದಾಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು ಸುಮ ಅವರೇ.

  [ಜಲನಯನ] ಬಹಳ ಧನ್ಯವಾದಗಳು ಜಲನಯನ ಅವರೇ. ಸ್ವಜನಭಕ್ಷಣೆಯು ವಿಕಾಸದ ಹಂತಗಳಲ್ಲಿ ಕಡಿಮೆಯಾಗುತ್ತಾ ಬರುತ್ತದೆಂಬುದು ಕೆಲವು ವಿಜ್ಞಾನಿಗಳ ಅಂಬೋಣ..

  ReplyDelete
 4. motte galanna kaayodakke innond kaarana ide. aa hennu kaalinga sarpa taayi aagodrallide antha aaliro bere gandu kaalinga sarpakke gothaadre (aa marigala thande allade iro gandu), avu aa motte galanna, ondondu sala aa hennu sarpavannoo saha kollutte. Bere gandina santati beyodakke bidodilla. Idu saamanya vaagi valase hogiro hennu sarpakke iro thondre. Nat Geo nallo Animal planet nallo nodiddu.

  ReplyDelete
 5. beyodakke alla ... belyodakke :-) - correction!

  ReplyDelete

ಒಂದಷ್ಟು ಚಿತ್ರಗಳು..