Friday, June 24, 2011

ಮಾತೃ ದೇವೋ ಭವ - ಅನಾಥ ರಕ್ಷಕಿ

ನಮ್ಮಲ್ಲಿ ಸಾವಿರಾರು ಪ್ರಭೇದಗಳಿರಬಹುದು. ಎಲ್ಲರಿಗಿಂತಲೂ ನಾವು ಮಿಗಿಲು! ನಾವು “ರಾಜ” ವಂಶಕ್ಕೆ ಸೇರಿರುವವರು! ಇಂಗ್ಲೀಷಿನಲ್ಲಿ “ಕಿಂಗ್” ಎಂದೇ ನಮ್ಮನ್ನು ಕರೆಯುತ್ತಾರೆ.

ಸರಿಸೃಪಗಳಲ್ಲೆಲ್ಲ ಜನರು ಬಹಳವಾಗಿ ಹೆದರುವುದು ನಮ್ಮನ್ನು ಕಂಡೇ. ವಿಷವಿರಲಿ, ಬಿಡಲಿ - ಜನರಿಗೆ ನಾವೆಂದರೆ ಭಯ. “ಜನ್ಮ ಕೊಟ್ಟ ತಾಯಿ ವಿಷ ಕೊಡುವಳೇ?” ಎಂದು ಏನೇನೋ ಭಾವನಾತ್ಮಕ ಮಾತುಗಳನ್ನು ನೀವು ಕೇಳಿರಬಹುದು. ಆದರೆ ನಮ್ಮ ತಾಯಿಯ ದೆಸೆಯಿಂದಲೇ ನಮ್ಮಲ್ಲಿ ವಿಷವೂ ನೆಲೆಯೂರಿರುವುದು. ಸರ್ಪಗಳೆಂದರೆ ಏನು ಸಾಮಾನ್ಯವೇ? ಹೇಗೂ ಇರಲಿ, ನಮ್ಮ ಅಮ್ಮನ ಮಹದ್ವಿಷಯವನ್ನು ಹೇಳುವ ಮುನ್ನ, ನಮ್ಮ ಸಂಬಂಧಿಕರ ಬಗ್ಗೆ ಒಂದಿಷ್ಟು ತಿಳಿಸುತ್ತೇವೆ.

ನಮ್ಮ ಅಮ್ಮನಿಗೆ ಇರುವ ಹಾಗೆ ನಮ್ಮ ಯಾವುದೇ ಸಂಬಂಧಿಕರುಗಳ ತಾಯಂದಿರಿಗೂ ಮಕ್ಕಳ ಬಗೆಗೆ ಪ್ರೇಮವಿರುವುದನ್ನು ಕಾಣೆವು. ಹಾಗಂತ ದ್ವೇಷವೇನೂ ಇಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸಿ ನಾಣ್ನುಡಿಯನ್ನೂ ಮಾಡಿದ್ದಾರೆ - ಹಾವುಗಳು ತಮ್ಮ ಮೊಟ್ಟೆಗಳನ್ನು ತಾವೇ ತಿನ್ನುತ್ತವೆ ಎಂದು. ಎಲ್ಲಾದರೂ ಉಂಟೇ? ಮೊಟ್ಟೆಯಿಡುವುದು ಮರಿಯಾಗಲೆಂದು, ಸಂತತಿ ಬೆಳೆಯಲೆಂದು. ತನ್ನ ಕರುಳಿನ ಕುಡಿಯನ್ನೇ ತಾಯಿಯೆಂದಾದರೂ ತಿಂದಾಳೇ? ಈ ಮಹದುಪಕಾರವನ್ನು ನಮ್ಮ ಸಂಬಂಧಿಕರುಗಳ ತಾಯಂದಿರು ಮಾಡುವುದರಿಂದ ಮೊಟ್ಟೆಯೊಡೆದು ಹೊರಗೆ ಬರುವ ವೇಳೆಗೆ ಅವರು ಅನಾಥರೇ ಸರಿ. ಪಕ್ಷಿಗಳ ಹಾಗೆ ಸರ್ಪಗಳ ಮೊಟ್ಟೆಗಳಿಗೆ ಕಾವು ಕೊಡುವ ಅಗತ್ಯವೇನಿದೆ?

ಕಾವು ಕೊಡುವ ಅಗತ್ಯ ನಮ್ಮ ಹತ್ತಿರದ ಸಂಬಂಧಿ ಹೆಬ್ಬಾವುಗಳ ಮೊಟ್ಟೆಗಳಿಗಿವೆ. ಅದೂ ಕೂಡ ಹೆಚ್ಚಿಗೆ ದಿನಗಳೇನಿಲ್ಲ. ಸ್ವಲ್ಪ ಕಾಲವಾದ ಮೇಲೆ ಹೆಬ್ಬಾವು ಮರಿಗಳೂ ಕೂಡ ಅನಾಥರೇ.

ನಾವು ಕಾಳಿಂಗ ಸರ್ಪಗಳು! ನಮ್ಮನ್ನೂ ಅನಾಥರನ್ನಾಗಿಸಿ ಎಲ್ಲೋ ಹೋಗಿ, ಮುಂದಿನ ವರ್ಷ ಮತ್ತೆ ಮೊಟ್ಟೆಯಿಡುವ ನಮ್ಮಮ್ಮ ನಮ್ಮ ಪಾಲಿಗೆ ದೇವರಂತೆ ಹೇಗೆ ಎಂದು ಯೋಚಿಸುತ್ತೀರಾ? ಅಥವಾ, ನಮ್ಮೆಲ್ಲ ಸಂಬಂಧಿಕರಿಗಿಂತ ನಮ್ಮ ತಾಯಿಯು ಹೇಗೆ ವಿಶೇಷ ಎಂದು ಕೇಳುತ್ತೀರಾ?ಸರ್ಪಗಳಲ್ಲೇ ಯಾರೂ ಕೈಹಾಕದ ಸಾಹಸ ಒಂದನ್ನು ನಮ್ಮಮ್ಮ ಮಾಡಿದ್ದಾಳೆ - ನಾವು, ಮೂವತ್ತು ಒಡಹುಟ್ಟಿದವರೂ, ಮೊಟ್ಟೆಯೊಳಗಿರುವಾಗ ನಮಗೊಂದು ಮನೆ, ಅರ್ಥಾತ್ ಗೂಡು ನಿರ್ಮಿಸಿದ್ದಾಳೆ! “ಈ ಪರಿಯ ಸಾಮರ್ಥ್ಯ ಬೇರಾವ ಅಮ್ಮನಲು ಕಾಣೆವು ನಮ್ಮಮ್ಮನಿಗಲ್ಲದೆ!”

ನಮ್ಮೆಲ್ಲರನ್ನೂ - ಅಂದರೆ ಮೊಟ್ಟೆಗಳನ್ನು - ಗೂಡಿನಲ್ಲಿ ಭದ್ರವಾಗಿರಿಸಿ, ಅತಿ ತೇವಾಂಶವುಳ್ಳ ಪ್ರದೇಶವಾಗಿರುವುದರಿಂದ ನಮ್ಮನ್ನು ಬೆಚ್ಚಗೆ ತಬ್ಬಿಕೊಂಡು ಎರಡುವರೆ ತಿಂಗಳು ಕಾದಿದ್ದಾಳೆ, ರಕ್ಷಿಸಿದ್ದಾಳೆ! ಇದಕ್ಕಿಂತಲೂ ಅವಳು ಮಾಡಿರುವ ಅತ್ಯದ್ಭುತ ಕೆಲಸವೆಂದರೆ ನಾವು ಹುಟ್ಟುವ ಕೆಲವೇ ಸಮಯಗಳ ಮುಂಚೆ ನಮ್ಮನ್ನು ತೊರೆದು ಹೋಗಿರುವುದು.

ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಇದ್ದಳೇನೋ ಅನ್ನಿಸುತ್ತೆ ಅಮ್ಮ, ನಮಗೆ ಯಾರಿಗೂ ಗೊತ್ತಿಲ್ಲ. ನಾವು ಅವಳನ್ನು ಕಂಡಿದ್ದರೆ ತಾನೆ? ಹೇಳೆದೆವಲ್ಲ, ನಾವು ಹುಟ್ಟುವ ಕೆಲವೇ ಸಮಯದ ಮುಂಚೆ ನಮ್ಮನ್ನೆಲ್ಲಾ ಬಿಟ್ಟು ಹೊರಟುಹೋಗಿದ್ದಾಳೆಂದು. ಅವಳಲ್ಲಿರುವಷ್ಟು ವಿಷ ನಮ್ಮಲ್ಲಿಲ್ಲದಿರಬಹುದು. ಆದರೆ ಮನುಷ್ಯರನ್ನು ಸಲೀಸಾಗಿ ಕೊಲ್ಲಬಲ್ಲಷ್ಟು ವಿಷ ಅಗತ್ಯವಾಗಿ ಇದೆ.

ವಿಷಯಕ್ಕೆ ಬರೋಣ. ಅಮ್ಮ ನಮ್ಮನ್ನು ಬಿಟ್ಟು ಹೋಗಿರುವುದು ಏಕೆ? ಮತ್ತು ಅದು ಮಹತ್ತಿನ ಕೃತ್ಯ ಎಂದು ನಾವು ಕರೆದು, ಅಮ್ಮನನ್ನು ಪೂಜ್ಯವಾಗಿಸಲು ಕೊಡುತ್ತಿರುವ ಕಾರಣವೂ ಸಹ ಅದೇ, ಏಕೆ?

ನಾವು ಹುಟ್ಟಿದ್ದೇವಲ್ಲ, ಮೂವತ್ತು ಸೋದರ ಸೋದರಿಯರು, ಒಟ್ಟಿಗೆ ಬಾಳುವವರಲ್ಲ. ಅಮ್ಮ ಹೋದ ಹಾಗೆಯೇ ನಾವೂ ಹೋಗಬೇಕು. ಒಟ್ಟಿಗೆ ಇರಲು ಸಾಧ್ಯವೇ ಇಲ್ಲ. ನಮ್ಮ ಹೆಸರು “ಕಿಂಗ್” ಎಂದು ಆಗಲೇ ಹೇಳಿದೆವಷ್ಟೆ? “ಕಿಂಗ್” ಯಾವತ್ತಿದ್ದರೂ ಏಕಾಂಗಿಯೇ. ಇದಕ್ಕೆಲ್ಲ ಮೂಲಭೂತವಾದ ಕಾರಣ ನಮ್ಮ ಆಹಾರ.

ನಾವು ಸರ್ಪಭಕ್ಷಕರು!

ನಾವು ಹುಟ್ಟುವ ವೇಳೆಗೆ ಅಮ್ಮ ಇದ್ದಿದ್ದರೆ ಬಲವಂತವಾಗಿ ತನ್ನ ಮಕ್ಕಳನ್ನೇ ತಿನ್ನಬೇಕಾಗಿರುತ್ತಿತ್ತು - ನಿಯಮಾನುಸಾರ. ಆದರೆ, ನಿಯಮ ಬೇರೆ ರೀತಿಯದೇ ಆಗಿದೆ. ನಾವು ಹುಟ್ಟುವ ಸಮಯಕ್ಕೆ ಅವಳು ನಮ್ಮೊಡನೆ ಇರಲು ಸಾಧ್ಯವೇ ಇಲ್ಲ! ಹಾಗೇ ನಾವೂ ಸಹ ಜೊತೆಗೆ ಇರಲು ಸಾಧ್ಯವೇ ಇಲ್ಲ. ಇದ್ದರೆ ಯಾರು ಬಲಿಷ್ಠರೋ ಅವರು ದುರ್ಬಲರನ್ನು ತಿಂದುಬಿಡುತ್ತಾರೆ! ಸ್ವಜಾತಿಭಕ್ಷಣೆಯು ಅಪರಾಧವಷ್ಟೆ.

ವಿಕಾಸವಾದಿಗಳು ನಮ್ಮನ್ನು ಈ ಕಾರಣಕ್ಕೆ ಬಹಳ ಗೌರವಿಸುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲವು ದೂರವಿರದೆ ಇರಲಿ.

-ಅ
07.05.2011
2AM

೧. http://www.hinduonnet.com/2001/06/20/stories/0420402s.htm

೨. http://www.stanford.edu/group/stanfordbirds/text/essays/Parental_Care.html

Thursday, June 02, 2011

ಮಾತೃ ದೇವೋ ಭವ - ರಾಕ್ಷಸ ಮಾತೆ

ನಮ್ಮನ್ನು ರಾಕ್ಷಸರಿಗೆ ಹೋಲಿಸಿದ್ದಾರೆ ಹಿಂದಿನ ಮನುಷ್ಯರು. ನೋಡೋದಕ್ಕೂ ಹಾಗೆಯೇ ಇದ್ದೇವೆಂದಿಟ್ಟುಕೊಳ್ಳಿ. ಯಾರೋ ನನ್ನ ಪೂರ್ವಜರು ಆನೆಯನ್ನೇ ಕೆಳಗುರುಳಿಸಿರಬೇಕು, ಅದನ್ನು ನೋಡಿದ ಕವಿಯು ತಮ್ಮ ಕಣ್ಣಿಗೆ ಚೆನ್ನಾಗಿ ಕಾಣದ ನನ್ನ ಪೂರ್ವಜನನ್ನು ರಾಕ್ಷಸನಿಗೂ, ಆನೆಯು ತಮಗೆ ಸಹಾಯ ಮಾಡುವ ಸಲುವಾಗಿ ಅದನ್ನು ಸಾಧುವನ್ನಾಗಿಯೂ ಹೋಲಿಸಿರುವ ಕಥೆ ನಿಮಗೆ ಗೊತ್ತೇ ಇದೆ. ಆ ಕಥೆಯೆಲ್ಲಾ ಈಗ ಕಟ್ಟುಕೊಂಡು ಏನಾಗಬೇಕಿದೆ! ಈ ಕವಿಯ ಜಾತಿಯವರು ಹುಟ್ಟುವ ಎಷ್ಟೋ ಲಕ್ಷ ವರ್ಷಗಳ ಕೆಳಗೆಯೇ ನನ್ನ ಜಾತಿಯವರು ಈ ಗ್ರಹದ ಮೇಲೆ ಹುಟ್ಟಿರುವಾಗ, ಕೇವಲ ಎರಡು ಲಕ್ಷ ವರ್ಷದ ಕೆಳಗೆ ಹುಟ್ಟಿದ ಮನುಷ್ಯನ ವಿರುದ್ಧ ಹಠ ಸಾಧಿಸಲು ನಾನೇನು ಮನುಷ್ಯನೇ?

ನಮ್ಮನ್ನು ರಾಕ್ಷಸರೆಂದು ಕರೆದಿರಬಹುದು. ನಮ್ಮವರೇ ನಮ್ಮನ್ನು ಕೊಂದು ತಿನ್ನುವ ಅಭ್ಯಾಸವೂ ನಮ್ಮವರಿಗಿರಬಹುದು. ಅದರಲ್ಲೂ ಚಿಕ್ಕ ಮಕ್ಕಳನ್ನು! ಅದಕ್ಕಾಗಿಯೇ ಅಲ್ಲವೇ, ಅಮ್ಮ ನಮ್ಮನ್ನೆಲ್ಲಾ - ಇಪ್ಪತ್ತು ಜನ ಒಡಹುಟ್ಟಿದವರೆಲ್ಲರನ್ನೂ - ತನ್ನ ಬಾಯೊಳಗೆ ಬಚ್ಚಿಟ್ಟುಕೊಂಡು ಕಾಪಾಡಿದ್ದು!

ಆ ಕೋರೆಹಲ್ಲುಗಳು, ಖಡ್ಗದಂತೆ ಹರಿತವಾಗಿರುವ ಹಲ್ಲುಗಳು, ಸ್ವಲ್ಪವೂ ಸೌಮ್ಯವಾಗಿರದ ಕಣ್ಣುಗಳು, ಮೈಯೆಲ್ಲಾ ಮುಳ್ಳು ಮುಳ್ಳಾಗಿರುವ ನಮ್ಮಮ್ಮ ಅಲ್ಲಲ್ಲಿ ಓಡಿ ಹೋಗುತ್ತಿದ್ದ ನಮ್ಮನ್ನೆಲ್ಲಾ ತಿನ್ನುತ್ತಿರುವ ಹಾಗೆಯೇ ಕಂಡೀತು ಬುದ್ಧಿಹೀನರಿಗೆ. ಅಮ್ಮ ಎಲ್ಲಾದರೂ ಮಕ್ಕಳನ್ನು ತಿನ್ನಲು ಸಾಧ್ಯವೇ? ಹಾಗಿದ್ದರೆ, ಅಮ್ಮನನ್ನು ದೇವರೆಂದು ಕರೆಯುತ್ತಿದ್ದರೇ?

ಬೇರೆಯವರು ಸ್ವಜಾತಿಭಕ್ಷಕರಾಗಬಹುದು. ಅದರಲ್ಲೂ ಬೇರೆ ಗಂಡಸರೂ. ಅಪ್ಪನನ್ನೂ ಸೇರಿಸಿ! ಆದರೆ ಅಮ್ಮ ಹಾಗಾಗೋಕೆ ಸಾಧ್ಯವೇ ಇಲ್ಲ. ನಾವು ಇಪ್ಪತ್ತು ಜನ ಒಡಹುಟ್ಟಿದವರು ಮಾತ್ರವಲ್ಲ. ಕಳೆದ ವರ್ಷ ಒಂದಿಪ್ಪತ್ತು, ಮತ್ತೆ, ಅದಕ್ಕೆ ಮುಂಚಿನ ವರ್ಷ ಇನ್ನೊಂದಿಪ್ಪತ್ತು, ಹೀಗೆ ವರ್ಷಾನುಗಟ್ಟಲೆಯಿಂದಲೂ ಇಪ್ಪತ್ತಿಪ್ಪತ್ತು ಮಕ್ಕಳನ್ನು ಹಡೆಯಲು ಅದೇ ಜಾಗವನ್ನು ನೆನಪಿನಲ್ಲಿಟ್ಟುಕೊಂಡು, ಪ್ರತೀ ಸಾರಿಯೂ ಕಾಲಿನಲ್ಲೇ ಗೂಡನ್ನು ನಿರ್ಮಿಸಿ, ಶ್ರಮ ಪಡುತ್ತಿದ್ದಳೇ? ಅದೂ ಅಲ್ಲದೆ, ನಾವುಗಳು ಮೊಟ್ಟೆಯೊಳಗಿರುವಾಗ - ಅಂದರೆ - ಸುಮಾರು ಎರಡು ತಿಂಗಳುಗಳ ಕಾಲ ನಮ್ಮನ್ನು ಕಾವಲಾಗಿಯೇ ಇರುತ್ತಿದ್ದಳೇ? ಜೊತೆಗೆ, ಎರಡು ತಿಂಗಳೂ ಸಹ, ಮೊಟ್ಟೆಗಳಲ್ಲಿದ್ದ ನಮಗೆ ತೊಂಭತ್ತು ಡಿಗ್ರೀ ಸೆಲ್ಷಿಯಸ್ ಉಷ್ಣಾಂಶ ಬೇಕಿದ್ದಾಗ, ಅದನ್ನು ಒದಗಿಸುವುದು ಅವಳ ಕರ್ತವ್ಯವಾಗಿತ್ತು, ಮತ್ತು ಆ ಕರ್ತವ್ಯವನ್ನು ಅವಳು ಸ್ವಲ್ಪವೂ ದೋಷವಿಲ್ಲದೇ ನಿರ್ವಹಿಸಿದಳು. ಮುಂದೆಯೂ ನಿರ್ವಹಿಸುತ್ತಾಳೆ.

ಚಿಕ್ಕ ಮಕ್ಕಳನ್ನು ಬರೀ ನಮ್ಮ ಜಾತಿಯವರೇ ತಿನ್ನುವವರು ಎಂದು ಭಾವಿಸದಿರಿ. ಚಿಕ್ಕಂದಿನಲ್ಲಿರುವವರು ಯಾವಾಗಲೂ ದುರ್ಬಲರೇ. ನಮ್ಮನ್ನು ಮುಗಿಸಲು ನಮ್ಮಮ್ಮ ಒಬ್ಬಳನ್ನು ಬಿಟ್ಟು, ಬೇರೆಲ್ಲರೂ ಕಾದಿರುತ್ತಾರೆ - ಎಲ್ಲ ಜಾತಿಯವರೂ! ಅದಕ್ಕೇನೇ ನಮ್ಮನ್ನು ನಾವು ಶಕ್ತಿಗೊಳಿಸಿಕೊಳ್ಳಬೇಕು. ನಮ್ಮ ಶಕ್ತಿ ಏನಿದ್ದರೂ ನೀರಿನಲ್ಲಿ ತಾನೆ? ನೆಲದ ಮೇಲೆ ನಾವು ನಿಷ್ಪ್ರಯೋಜಕರಂತೆ. ಅಮ್ಮನೇ ಹೇಳಿದ್ದು ಇದನ್ನು. ನೀರಿನಲ್ಲಿ ಈಜಲು ಕಲಿಸಿದ್ದೂ ಸಹ ಅಮ್ಮನೇ. ಮೊಟ್ಟೆಯಿಂದ ಹೊರಗೆ ಬಂದು ಇನ್ನೂ ಒಂದು ಘಂಟೆಯೂ ಆಗಿಲ್ಲ, ಆಗಲೇ ಬಂದು ನಮ್ಮನ್ನೆಲ್ಲಾ ತಿಂದುಬಿಡುತ್ತಾಳೋ ಎಂಬಂತೆ ಬಾಯಲ್ಲಿ ಕಚ್ಚಿಕೊಂಡಳು. ಹಲ್ಲುಗಳು ನಮಗೆ ಯಾರಿಗೂ ಸೋಕಲಿಲ್ಲ. ನಾವೋ, ಒಬ್ಬರೂ ನಿಂತಲ್ಲಿ ನಿಲ್ಲುವವರಲ್ಲ. ಕಪ್ಪೆತಕ್ಕಡಿ ಸಹವಾಸ. ಅಮ್ಮ ಬೇಸರಗೊಳ್ಳದೇ ಎಲ್ಲರನ್ನೂ ತನ್ನ ವಿಶಾಲ ಬಾಯಿಯ ವಾಹನದಲ್ಲಿ ನಮ್ಮನ್ನೆಲ್ಲ ಕರೆದೊಯ್ದು ನೀರೊಳಗೆ ಮುಳುಗಿಸಿಬಿಟ್ಟಳು. ಈಜು ಕಲಿಯಿರಿ ಎಂದು. ಐದು ನಿಮಿಷದಲ್ಲಿ ಕಲಿತುಕೊಂಡೆವು!

ಭಯವಾದರೆ ಸಾಕು, ನಮಗೆಲ್ಲ ಅಮ್ಮನ ಬಾಯಿಯೇ ರಕ್ಷೆಗೂಡು. ಅಲ್ಲೇ ನಮಗೆ ಬೇಟೆಯ ಪಾಠ ಕೂಡ. ಅಲ್ಲೇ ನಮಗೆ ತಾಳ್ಮೆಯ ಪಾಠ ಕೂಡ. ನಾವುಗಳೆಲ್ಲ ಬಾಯಲ್ಲಿ ಇರುವಾಗ ಅಮ್ಮ ಎಂದೂ ಬಂಡೆಯ ಮೇಲೆ ಬಂಡೆಯ ಹಾಗೆ ಬಿದ್ದುಕೊಂಡಿಲ್ಲ. ಹಾಗೆ ಬಿದ್ದುಕೊಂಡಿರುವವರನ್ನು ತೋರಿಸಿದ್ದಾಳೆ. ಮತ್ತೆ ಹಾಗೆ ಬಿದ್ದುಕೊಂಡಿರುವವರ ಹತ್ತಿರ ಹೋಗಬಾರದೆಂದೂ ಎಚ್ಚರಿಕೆ ಕೊಟ್ಟಿದ್ದಾಳೆ. ಆ ಎಚ್ಚರಿಕೆಯನ್ನು ಗಮನವಿಟ್ಟು ಕೇಳಿಸಿಕೊಂಡಿದ್ದು ನಾನು ಮತ್ತು ನನ್ನ ಅಣ್ಣ ಅಷ್ಟೆ ಅನ್ನಿಸುತ್ತೆ, ಅದಕ್ಕೆ ಜೊತೆ ಹುಟ್ಟಿದವರಲ್ಲಿ ನಾವಿಬ್ಬರೇ ಬದುಕಿರುವುದು. ಒಂದು ರೀತಿಯಲ್ಲಿ ಒಳ್ಳೆಯದೇ ಬಿಡಿ, ಇಪ್ಪತ್ತು ಜನರೂ ಬದುಕಿಬಿಟ್ಟಿದ್ದರೆ, ಆಮೇಲೆ ನಮ್ಮ ಜನಸಂಖ್ಯೆ ಹೆಚ್ಚಾಗುತ್ತಿತ್ತಷ್ಟೆ? ನಮ್ಮ ಅಮ್ಮ ನಮಗೆ ಹೇಳಿಕೊಟ್ಟ ಪಾಠ ಇದಾದರೆ, ಪ್ರಕೃತಿಯೆಂಬ ಅಮ್ಮ ಬೇರೆಯದೇ ಪಾಠವನ್ನು ಬೇರೆಯವರಿಗೆ ಹೇಳಿಕೊಟ್ಟಿದ್ದಾಳೆ.
ಈಗ ನನಗೆ ಶತ್ರುವೇ ಇಲ್ಲ - ಒಬ್ಬ ಮನುಷ್ಯ ಪ್ರಾಣಿಯನ್ನು ಹೊರೆತು. ಅವನ ದೃಷ್ಟಿಯಲ್ಲಿ ನಾನು ರಾಕ್ಷಸ ವಂಶದವನು. ಸೃಷ್ಟಿಯ ನಿಯಮದಲ್ಲಿ ನಾನು ಡೈನೊಸಾರ್ ವಂಶದವನು. ಒಟ್ಟಿನಲ್ಲಿ ನಾವು ಹುಟ್ಟಿದ ನಂತರ ದೊಡ್ಡವರಾಗುವವರೆಗೂ ಬದುಕುವುದು ಬಹಳ ಕಷ್ಟ. ಹೆಜ್ಜೆ ಹೆಜ್ಜೆಗೂ ಅಪಾಯ. ದೊಡ್ಡವರಾದರೆಂದರೆ ಸಾಯುವುದು ಬಹಳ ಕಷ್ಟ.

ಮೊಸಳೆಗಳಾಗಿ ಬದುಕುವುದೂ ಸಹ ಅಷ್ಟು ಸುಲಭ ಎಂದುಕೊಂಡೀರಾ?-ಅ
20.04.2011
12.25AM

http://animal.discovery.com/convergence/safari/crocs/expert/expert8.html

ಒಂದಷ್ಟು ಚಿತ್ರಗಳು..