Saturday, March 26, 2011

ಶೆರ್ಪಾಗಳು - ೧

ಬಹುಶಃ ಶೆರ್ಪಾಗಳ ಸೃಷ್ಟಿಯಾಗದಿದ್ದರೆ ಎವೆರೆಸ್ಟ್ ಶಿಖರವನ್ನು ಯಾರೂ ಸಹ ಏರಲು ಸಾಧ್ಯವೇ ಇರುತ್ತಿರಲಿಲ್ಲವೆನಿಸುತ್ತೆ. ಹಿಮಾಲಯದ ಪರ್ವತಾರೋಹಣದ ಬಗ್ಗೆ ಶೆರ್ಪಾಗಳನ್ನು ಬದಿಗಿಟ್ಟು ಯೋಚಿಸುವುದೂ ಸಹ ಅಸಾಧ್ಯ! ಹಿಮಾಲಯ ಪರ್ವತ ಶ್ರೇಣಿಗೆ ಸೇರಿದ ಈ ಶೆರ್ಪಾಗಳ ತವರು ಪೂರ್ವ ನೇಪಾಳದ ಸೋಲು - ಖುಂಬು ಜಿಲ್ಲೆ. ನೇಪಾಳದ ಈ ಭಾಗ ಲ್ಹೋತ್ಸೆ, ನುಪ್ಸೆ, ಪುಮೊರಿ, ಚೊ ಒಯು ಎಂಬ ಹಿಮಭರಿತ ಸ್ಥಳಗಳಿಂದ ಆವೃತವಾಗಿದೆ. ನಾಮ್‍ಚೆ ಬಜಾರ್ ಎಂಬ ಪ್ರಮುಖ ಹಳ್ಳಿಯು ಎವೆರೆಸ್ಟಿನ ಬುಡದಲ್ಲೇ ಇದೆ.


ಸುಮಾರು ಆರು ನೂರು ವರ್ಷಗಳ ಕೆಳಗೆ ಪೂರ್ವದ ಟಿಬೆಟ್ಟಿನಿಂದ ನೇಪಾಳಕ್ಕೆ ವಲಸೆ ಬಂದು ಬಿಡಾರ ಹೂಡಿದವರು ಈ ಶೆರ್ಪಾಗಳು. ಶೆರ್ಪಾ ಎಂದರೆ - ಪೂರ್ವ ದಿಕ್ಕಿನ ಜನ ಎಂದರ್ಥ. ಟಿಬೆಟ್ಟಿನ ಸಮಸ್ಯೆಯಿಂದಲೋ, ಹೊಸ ಆವಾಸ ಸ್ಥಾನಕ್ಕಾಗಿಯೋ, ಆರು ನೂರು ವರ್ಷಗಳಿಂದಲೂ ನೇಪಾಳಕ್ಕೆ ವಲಸೆ ಬರುತ್ತಲೇ ಇದ್ದಾರೆ. ಅಲ್ಲಿನ ಬೌದ್ಧ ಧರ್ಮದ ಅನುಯಾಯಿಗಳಾಗಿದ್ದರೂ, ಇಲ್ಲಿಗೆ ಬಂದು ಚೊಮೊಲುಂಗ್ಮಾ (ಮೌಂಟ್ ಎವೆರೆಸ್ಟ್)ನ ಪೂಜೆ ಮಾಡುತ್ತಾರೆ. ಗದ್ದಲದ ಪ್ರಪಂಚದಿಂದ ದೂರವಿರುವ ಇವರು ಜೋಳ ಮತ್ತು ಆಲುಗೆಡ್ಡೆಯನ್ನು ಬೆಟ್ಟಗಳ ಬದಿಯಲ್ಲಿಯೇ ಬೆಳೆದುಕೊಂಡು ಶಾಂತಿಯುತ ಜೀವನವನ್ನಾಚರಿಸುತ್ತಿರುತ್ತಾರೆ. ಇವರದು ಕಠಿಣ ಬದುಕು, ಆದರೆ ಈ ಜನ ತಮ್ಮ ಬದುಕಿಗಿಂತ ಕಠಿಣರು. ಹಿಮಾಲಯದ ದನ (ಯಾಕ್)ವನ್ನು ಮೇಯಿಸುತ್ತಾ ಮತ್ತು ಅವುಗಳ ಕೂದಲಿನಿಂದ ಬೆಚ್ಚನೆಯ ಬಟ್ಟೆಯನ್ನು ನೇಯುತ್ತಾ ತಮ್ಮ ಬೇಸಿಗೆಯನ್ನು ಕಳೆಯುತ್ತಾರೆ. ಚಳಿಗಾಲದಲ್ಲಿ ಹೊರಗೆ ಬರುವುದಿಲ್ಲ. ಪ್ರಯಾಣಿಕರನ್ನು ನಗು ನಗುತ್ತಾ ತಮ್ಮ ಮನೆಗಳೊಳಗೆ ಸ್ವಾಗತಿಸಿ ಬಿಸಿ ಬಿಸಿ ಚಹವನ್ನು ನೀಡಿ ಊಟ ಉಪಚಾರಗಳನ್ನು ಮಾಡಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ ಶೆರ್ಪಾಗಳು.


ಈಚೆಗೆ ಶೆರ್ಪಾಗಳು ಡಾರ್ಜಿಲಿಂಗ್‍ವರೆಗೂ ವಲಸೆ ಬಂದು ವ್ಯವಹಾರಿಕ ಬದುಕನ್ನು ನಡೆಸಲಾರಂಭಿಸಿದ್ದಾರೆ. ಆದರೆ ಈಗಲೂ ಅನೇಕರು ಸೋಲೊ-ಖುಂಬುವಿನಲ್ಲೇ ಉಳಿದಿದ್ದಾರೆ. ಡಾರ್ಜಿಲಿಂಗಿನಲ್ಲೇ ಇವರನ್ನು ಮೊದಲು ಗುರುತಿಸಿದ್ದು! ಡಾರ್ಜಿಲಿಂಗಿನವರ ಭಾಷೆಯೇ ಬೇರೆ, ಶೆರ್ಪಾಗಳ ಭಾಷೆಯೇ ಬೇರೆ. ಇವರ ಭಾಷೆ ಟಿಬೆಟ್ಟಿನಿಂದ ಕವಲೊಡೆದು ಅದಕ್ಕೆ ತೀರಾ ಸಮೀಪವಾಗಿದೆ. ಆದರೆ ಟಿಬೆಟ್ ಭಾಷೆಗೂ ಶೆರ್ಪಾಗಳ ಭಾಷೆಗೂ ಸಾಕಷ್ಟು ಭೇದವಿದೆ.

ಇವರ ನಾಮಕರಣ ಶೈಲಿಯು ಬಹಳ ವಿನೋದವೆನಿಸುತ್ತೆ ನಮಗೆ; ಕಾರಣ, ಅನೇಕರ ಹೆಸರು ಒಂದೇ ಆಗಿರುತ್ತೆ. ಒಬ್ಬರಿಗೊಬ್ಬರು ಗುರುತಿಸಿಕೊಳ್ಳುವುದು ಸಂಖ್ಯೆಗಳಿಂದ! ಆಂಗ್ ಶೆರಿಂಗ್ ೧, ಆಂಗ್ ಶೆರಿಂಗ್ ೨ ಹೀಗೆ!! ಬಹುತೇಕ ಜನರ ಹೆಸರುಗಳು ವಾರಗಳ ಹೆಸರುಗಳಾಗಿರುತ್ತೆಂದರೆ ಆಶ್ಚರ್ಯ ಪಡಬೇಕಿಲ್ಲ. ದವಾ (ಸೋಮ), ಮಿಂಗ್ಮಾ (ಮಂಗಳ), ಲ್ಹಾಕ್ಪಾ (ಬುಧ), ಫುರ್ಬಾ (ಗುರು), ಪಸಂಗ್ (ಶುಕ್ರ), ಪೆಂಬಾ (ಶನಿ) ಮತ್ತು ನಿಮ (ಭಾನು).

ಶೆರ್ಪಾಗಳು ಬೌದ್ಧ ಧರ್ಮಾನುಯಾಯಿಗಳೆಂದು ಆಗಲೇ ಹೇಳಿದೆನಷ್ಟೆ. ಆದರೂ ಉಳಿದ ಸಾಮಾನ್ಯ ಬುಡಕಟ್ಟಿನ ಜನಾಂಗದವರಂತೆ ಇವರಲ್ಲೂ ಮೂಢನಂಬಿಕೆಗಳು ಮನೆಮಾಡಿಕೊಂಡಿವೆ. ಐವತ್ತರ ದಶಕದಲ್ಲಿ ನಂದಾ ಕೋಟ್ ಪರ್ವತಾರೋಹಣ ಕಾರ್ಯಕ್ರಮದಲ್ಲಿ ಮುಂದಾಳತ್ವ ವಹಿಸಿದ್ದ ಆಂಗ್ ಶೆರಿಂಗ್ ಎಂಬಾ ಶೆರ್ಪಾ ಶಿಖರದ ಕೊನೆಯ ಭಾಗವನ್ನೇರಲು ನಿರಾಕರಿಸಿಬಿಟ್ಟ. ಯಾಕೆಂದರೆ ಹಿಂದಿನ ರಾತ್ರಿ ಅವನ ಕನಸಿನಲ್ಲಿ ನಂದಾ ದೇವಿಯು ಬಂದು ಈ ಪರ್ವತವನ್ನು ಏರಕೂಡದೆಂದು ಅಪ್ಪಣೆ ಮಾಡಿದ್ದಳಂತೆ.


ಶೆರ್ಪಾಗಳ ನಂಬಿಕೆಗಳೇ ಹೀಗೆ. ಚೋಮೋಲುಂಗ್ಮಾ ಅಥವಾ ಜೋಮೋಲಂಗ್ಮಾ (ಇಂದಿನ ಮೌಂಟ್ ಎವೆರೆಸ್ಟ್) ಪರ್ವತದಲ್ಲಿ ಜೋಮೋ ಮಿಯೋ ಸಂಗ್ಮಾ ಎಂಬಾಕೆ ಇದ್ದೂ ಆಕೆಯು ಇಡೀ ಪರ್ವತ ಪ್ರದೇಶದ ಜನತೆಗೆಲ್ಲಾ ಊಟವನ್ನು ಕೊಡುತ್ತಾಳೆ. ಅವಳ ತಂಗಿಯರಾದ ಟಾಷಿ ಸೆರಿಂಗ್ಮಾ ಎಂಬಾಕೆಯು ಗೌರಿಶಂಕರದಲ್ಲಿದ್ದು, ಆಯುಷ್ಯವನ್ನು ಕರುಣಿಸುತ್ತಾಳೆ. ಮತ್ತೊಬ್ಬ ತಂಗಿಯಾದ ಟೇಕರ್ ಡೊಸಂಗ್ಮಾ ಎಂಬಾಕೆಯು ಒಳ್ಳೆಯ ಭವಿಷ್ಯವನ್ನು ನೀಡುತ್ತಾಳೆ. ಚೊಪೆನ್ ಡಿನ್ಸಂಗ್ಮಾ ಎಂಬಾಕೆಯು ಐಶ್ವರ‍್ಯವನ್ನು ಕೊಟ್ಟರೆ ಥಿಂಗಿ ಶೆಲ್ಸಂಗ್ಮಾ ನೀಡುವುದು ಮಾನಸಿಕ ಶಕ್ತಿಯನ್ನು. ಗುರು ರಿಂಪೊಚೆ - ಟಿಬೆಟ್ಟಿನ ಬೌದ್ಧ ಧರ್ಮದ ಸ್ಥಾಪಕನು ಈ ಖುಂಬು ಕಣಿವೆಯಲ್ಲಿ ತಪಸ್ಸು ಮಾಡಿದನೆಂಬ ಪ್ರತೀತಿಯೂ ಇದೆ.

ಯೇತಿಗಳ ಬಗ್ಗೆ ಶೆರ್ಪಾಗಳಿಗೆ ಅಪಾರವಾದ ನಂಬಿಕೆ. ಯೇತಿಯೆಂದರೆ ಹಿಮದಲ್ಲಿ ವಾಸಿಸುವ ಮನುಷ್ಯ. ಅವರ ನಂಬಿಕೆಯ ಪ್ರಕಾರ ಹಿಮದಲ್ಲಿ ವಾಸಿಸುವ ರಾಕ್ಷಸನೆಂದೇ ಹೇಳಬಹುದು. ಆದರೆ ಯಾವ ಶೆರ್ಪಾನೂ ಸಹ ಇದುವರೆಗೂ ತಾನು ಯೇತಿಯನ್ನು ನೋಡಿದ್ದೇನೆಂದು ಸಾಕ್ಷ್ಯ ಒದಗಿಸಿಲ್ಲ. ಅವರ ಪ್ರಕಾರ ಯಾರಾದರೂ ಯೇತಿಯನ್ನು ನೋಡಿದರೆ ಅವರು ಕೂಡಲೆಯೇ ಸಾಯುತ್ತಾರೆ! ಎಂ.ಎಸ್ ಕೋಹ್ಲಿಯವರು ತಮ್ಮ ಮೊದಲ ಎವೆರೆಸ್ಟ್ ಪರ್ವತಾರೋಹಣದ, ಅಂದರೆ ಸುಮಾರು ಅರವತ್ತರ ದಶಕದ ಸಮಯದಲ್ಲಿ ತಮ್ಮ ಅನುಭವವೊಂದನ್ನು ದಾಖಲಿಸುತ್ತಾರೆ. ಅವರು ಟೆಂಟಿನೊಳಗೆ ನಿದ್ರಿಸುತ್ತಿರುವಾಗ ಇಬ್ಬರು ಶೆರ್ಪಾಗಳು ಬಂದು ಆಶ್ರಯ ಕೊಡಿಯೆಂದು ಕೇಳಿಕೊಂಡರಂತೆ. ಇಬ್ಬರೂ ಗಾಬರಿಯಾಗಿದ್ದರಿಂದ ಏನಾಯಿತೆಂದು ಕೇಳಿದ್ದಕ್ಕೆ, ಇಲ್ಲಿ ಯೇತಿಯಿದೆಯೆಂಬ ಗುಮಾನಿಯು ಬಂದಿದೆ, ಹಾಗಾಗಿ ಅದನ್ನು ನೋಡದೇ ಇರುವ ಸಲುವಾಗಿ ವಿರುದ್ಧ ದಿಕ್ಕಿನಲ್ಲಿ ಓಡಿಬಂದೆವು ಎಂದು ಹೇಳಿದರಂತೆ.


ಇವರು ಪರ್ವತಗಳ ಆರಾಧಕರೆಂಬುದಕ್ಕೆ ಸಾಕ್ಷಿಯಾಗಿ ಇವರದು ಇನ್ನೊಂದು ನಂಬಿಕೆಯಿದೆ. ಯಾರಾದರೂ ಎಡುವಿ ಬಿದ್ದು ಸತ್ತು ಹೋದರೆ ಅದು ಆಕಸ್ಮಿಕವಲ್ಲ. ಆ ವ್ಯಕ್ತಿಯನ್ನು ಪರ್ವತದೇವನು ಆಹುತಿಯಾಗಿ ಪಡೆದುಕೊಂಡದ್ದು. ಒಂದು ವೇಳೆ ಯಾರಾದರೂ ಹಾಗೆ ಸತ್ತರೆ, ಇನ್ನು ಮುಂದಿನ ವರ್ಷಗಳಲ್ಲಿ ಆ ಜಾಗಕ್ಕೆ ಅದೇ ದಿನ, ಅದೇ ಸಮಯದಲ್ಲಿ ಬೇರೆ ಯಾರಾದರೂ ಬಂದರೆ ಅವರೂ ಸಾಯುತ್ತಾರೆ. ಅದೂ ಕೂಡ ಪರ್ವತ ದೇವನ ಆಹುತಿಯೇ.ತೀರಿಕೊಂಡ ಶೆರ್ಪಾಗಳ ಸಂಸ್ಕಾರವನ್ನು ಮಾಡುವುದಕ್ಕೆ ಒಬ್ಬ ಲಾಮಾ ಬರುತ್ತಾನೆ. ಲಾಮಾ ಎಂದರೆ ನಮ್ಮಲ್ಲಿ ಪುರೋಹಿತರು ಇದ್ದ ಹಾಗೆ. ಶೆರ್ಪಾಗಳ ಸಂಸ್ಕಾರ ಕ್ರಿಯೆಗೆ ಫೋವಾ ಎಂದು ಹೆಸರು. ಪ್ರಾರ್ಥನೆಯನ್ನು ಮಾಡಿದ ನಂತರ ಶವದ ತಲೆಯ ಮೇಲಿನ ಕೂದಲನ್ನು ಲಾಮಾ ಕೀಳುತ್ತಾನೆ. ಆತ್ಮವು ತಲೆಯಿಂದಲೇ ಹೊರಗೆ ಹೋಗಬೇಕು, ಬೇರೆ ರಂಧ್ರಗಳಿಂದ ಹೋದರೆ ಒಳ್ಳೆಯದಾಗುವುದಿಲ್ಲ. ಆತ್ಮತತ್ತ್ವದ ನಂಬಿಕೆಯು ಬೌದ್ಧರಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಹಿಮಾಲಯದ ಶೆರ್ಪಾಗಳೆಂಬ ಬೌದ್ಧರಲ್ಲಂತೂ ಇದೆ.

........

ಶೆರ್ಪಾಗಳ ಬಗ್ಗೆ ಇನ್ನಷ್ಟು ಅಧ್ಯಯನವನ್ನು ಮುಂದೆ ಮಾಡೋಣ..

-ಅ
26.03.2011
11PM

3 comments:

 1. Very informative! What are the sources for this research?

  Thanks again for sharing.
  Srik

  ReplyDelete
 2. [Srik] Thank you, Srik.

  Well, 3 years back, Manali valley li ondu trek ge hOdaaga, Darjeeling inda banda sherpa familyOru parichaya aadaaga alpa svalpa maahiti kottidru. notes maadi itkondidde.

  bengLur ge banda mele Kohli anta obru bardirO "The Sherpas" annO pustaka Odi, school makkaLige ondu presentation ready maadkonde. aa presentation-ina kannaDa roopa ne idu.

  next post alli (sherpaagaLu 2) idanna baribeku antidde. aadre neevu illi keLdri anta ille heLtideeni..

  ReplyDelete
 3. ಉಪಯುಕ್ತವಾದ ಲೇಖನ..ಇಷ್ಟವಾಯಿತು.ಮು೦ದುವರೆಸಿ.

  ReplyDelete

ಒಂದಷ್ಟು ಚಿತ್ರಗಳು..