Wednesday, February 02, 2011

ಕರುಳಿನ ಕೂಗುಅಧ್ಯಾಪಕನಾದ ನಾನು, ನಮ್ಮ ಶಾಲೆಯಲ್ಲಿರುವ ಕೆಲವು ಅವಳಿ-ಜವಳಿ ಮಕ್ಕಳನ್ನು ಸರಿಯಾಗಿ ಗುರುತಿಸಲು ಬಹಳ ಸಮಯ ತೆಗೆದುಕೊಂಡೆ - ಅದೂ ಆ ಅವಳಿ ಮಕ್ಕಳಿರುವ ತರಗತಿಗೆ ನಾನು ಹೋಗಿ ಹೋಗಿ, ಪಾಠ ಮಾಡುತ್ತಿದ್ದುದರಿಂದ! ನನ್ನ ಸಹೋದ್ಯೋಗಿಗಳು ಕೆಲವರು "ಯಾವಾಗಲೂ ನಂಗೆ ಇವರಿಬ್ಬರಲ್ಲಿ ಎ ಯಾರು ಬಿ ಯಾರು ಅಂತ ಗೊಂದಲ ಆಗುತ್ತೆ" ಎಂದು ಹೇಳುತ್ತಲೇ ಇರುತ್ತಾರೆ. ನನಗೂ ಈ ಗೊಂದಲ ಆಗುವುದುಂಟು. ನಮ್ಮ ಸಿನಿಮಾಗಳಲ್ಲಂತೂ, ದಿಲೀಪ್ ಕುಮಾರ್ ಇಂದ ಹಿಡಿದು ಹೃತಿಕ್ ರೋಷನ್ ವರೆಗೂ, ರಾಜ್ ಕುಮಾರ್ ಇಂದ ಹಿಡಿದು ಸುದೀಪ್ ವರೆಗೂ (ಬೇರೆ ಭಾಷೆಗಳಲ್ಲೇನೂ ಕಡಿಮೆಯಿಲ್ಲ) ಎಲ್ಲರೂ ತಮ್ಮ ಹೆತ್ತ ತಾಯಿಯನ್ನೂ ಗೊಂದಲಕ್ಕೀಡು ಮಾಡಿರುವುದನ್ನು ನಾವು ನೋಡಿದ್ದೇವೆ.ಆದರೆ ತಾಯಿ ಮತ್ತು ಮಕ್ಕಳು ಅತ್ಯಂತ ಹತ್ತಿರದ ಬಾಂಧವ್ಯವನ್ನನುಸರಿಸಲು ಪ್ರಕೃತಿಯು ಅದ್ಭುತವಾದ ರೀತಿಯನ್ನು ನೀಡಿದೆ. ಮನುಷ್ಯರ ಕಥೆಯನ್ನು ಸದ್ಯಕ್ಕೆ ಬದಿಗಿಟ್ಟು ಪ್ರಾಣಿಗಳ ಕಡೆ ಗಮನ ಹರಿಸೋಣ. ಬುದ್ಧಿವಂತ ಜೀವಿ ಮನುಷ್ಯನಿಗೇ ಅಷ್ಟು ಕಷ್ಟವಾಗಬೇಕಾದರೆ, ಅದೂ ಕೇವಲ ಎರಡು ಮಕ್ಕಳನ್ನು ನೋಡಿಯೇ, ಇನ್ನು ಪ್ರಾಣಿಗಳು ತಮ್ಮ ಮಕ್ಕಳನ್ನು ಗುರುತಿಸುವುದಾದರೂ ಹೇಗೆ? ಇಷ್ಟಕ್ಕೂ ಯಾವುದಾದರೂ ತಾಯಿ ಪ್ರಾಣಿಗೆ ತನಗಿರುವ ನಾಲ್ಕೋ ಐದೋ ಮರಿಗಳನ್ನು ಬೇರೆ ಬೇರೆಯಾಗಿ ಗುರುತಿಸಲು ಸಾಧ್ಯವೇ? ಹೌದೆನ್ನುತ್ತೆ ವೈಜ್ಞಾನಿಕ ಅಧ್ಯಯನ. ಆದರೆ ಸರಿಸೃಪಗಳು ಕೀಟಗಳು ಕ್ರಿಮಿಗಳು ಈ ಗುಣಕ್ಕೆ ಹೊರತಾಗಿವೆ. ಸಂಬಂಧಗಳನ್ನು ಮರೆತು ವರ್ತಿಸುವವರನ್ನು cold blooded animal ಎಂದು ಹೋಲಿಸುವುದಿದೆಯಷ್ಟೆ?

ಬಹುತೇಕ ಪ್ರಾಣಿಗಳ ಮರಿಗಳು ತಾಯಿಯ ಪೋಷಣೆಯಲ್ಲಿಯೇ ಬೆಳೆಯುತ್ತವೆಯಾದ್ದರಿಂದ ತಾಯಿಯೊಡನೆ ಮರಿಗಳ ನಿಕಟ ಬಾಂಧವ್ಯ ಸ್ವಾಭಾವಿಕವಾಗಿಯೇ ಅಗತ್ಯ. ಸಸ್ತನಿಗಳು ಸಾಮಾನ್ಯವಾಗಿ ತಮ್ಮ ಮರಿಗಳನ್ನು ವಾಸನೆಯಿಂದ ಗುರುತಿಸುತ್ತವೆ. ತಾಯಿಯು ತನ್ನ ಮರಿಗಳನ್ನು ಅವುಗಳು ಹುಟ್ಟಿದ ತಕ್ಷಣವೇ ಮೂಸಿ ತನ್ನ ಸ್ಮೃತಿಯಲ್ಲಿ ದಾಖಲೆ ಮಾಡಿಕೊಂಡುಬಿಡುತ್ತವೆ. ಒಂದು ಕುರಿಯು ಎರಡೋ ಮೂರೋ ಮರಿಗಳನ್ನು ಹಾಕಿತೆಂದಿಟ್ಟುಕೊಳ್ಳೋಣ. ಒಂದೊಂದು ಮರಿಯ ವಾಸನೆಯೂ ಭಿನ್ನವಾಗಿದ್ದು, ಅದರ ಭಿನ್ನತೆಯೇ ತಾಯಿಗೆ ಮರಿಯನ್ನು ಗುರುತಿಸುವ ಮಾನದಂಡ. ಮಂದೆಯಲ್ಲಿರುವ ಸಾವಿರಾರು ಕುರಿಗಳಿಗೆ ತಮ್ಮ ತಮ್ಮ ಮರಿಗಳನ್ನು ಗುರಿತಿಸಲು ವಾಸನೆಯೇ ಸಾಧನ.

ಇನ್ನೂ ಉನ್ನತ ಸಸ್ತನಿಗಳಾದ ಆನೆಗಳು, ಬೆಕ್ಕು - ನಾಯಿ - ಕೋತಿ ಜಾತಿಯ ಪ್ರಾಣಿಗಳು - ಇವೆಲ್ಲವೂ ವಾಸನೆಯ ಜೊತೆ ಸ್ಪರ್ಶವನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತವೆ. ಪ್ರತಿಯೊಂದು ದೇಹದ ಸ್ಪರ್ಶವೂ ಭಿನ್ನವಾದುದರಿಂದ (ವಾಸನೆಯೂ ಕೂಡ) ತನ್ನ ಮರಿ ಯಾವುದು, ಬೇರೆ ಮರಿ ಯಾವುದು ಎಂಬ ವ್ಯತ್ಯಾಸ ಈ ತಾಯಿಗಳಿಗೆ ಗೊತ್ತಾಗುತ್ತೆ. ಮನುಷ್ಯರಲ್ಲಿಯೂ ಈ ವಿಷಯದಲ್ಲಿ ಸ್ಪರ್ಶವು ಕೆಲಸ ಮಾಡುತ್ತೆ. ಬೇರೆಯವರು ಎತ್ತಿಕೊಂಡರೆ ಅತ್ತು ರಂಪ ಮಾಡುವ ಕೇವಲ ಮೂರೇ ತಿಂಗಳಾದ ಮಗುವು ತನ್ನ ತಾಯಿಯು ಎತ್ತಿಕೊಂಡ ತಕ್ಷಣವೇ ಸಮಾಧಾನಗೊಳ್ಳುವುದನ್ನು ನಾವು ಅದೆಷ್ಟು ಸಲ ನೋಡಿಲ್ಲ? ತಾಯಿಗೂ ಈ ಸ್ಪರ್ಶ ವ್ಯತ್ಯಾಸ ತಿಳಿಯುವುದೆಂಬುದೂ ಸತ್ಯ.

ಆಸ್ಟ್ರಿಯಾದ ಪ್ರಕೃತಿ ಶಾಸ್ತ್ರಜ್ಞ ಡಾ. ಲಾರೆಂಜ಼್ ಎಂಬಾತ ಬಾತುಕೋಳಿಗಳ ಮೇಲೆ ಪ್ರಯೋಗವೊಂದನ್ನು ನಡೆಸಿದನಂತೆ. ಇನ್ನೇನು ಮೊಟ್ಟೆಯೊಡೆದು ಮರಿಯಾಗಬೇಕೆಂದಿರುವಾಗ ತಾಯಿ ಪಕ್ಷಿಯನ್ನು ಮರಿಗಳಿಂದ ಬೇರ್ಪಡಿಸಿ, ಮರಿಗಳು ಹೊರ ಬರುವ ವೇಳೆ ಮೊಟ್ಟೆಗಳೆದುರು ತಾನೇ ಕುಳಿತುಕೊಂಡು ತಾಯಿ ಹಕ್ಕಿಯ ಶಬ್ದವನ್ನು ಮಾಡಿದನಂತೆ. ಆ ಬಾತುಕೋಳಿ ಮರಿಗಳು ಈತನನ್ನೇ ತಾಯಿಯೆಂದು ಭಾವಿಸಿ, ಈತ ಹೋದಲ್ಲೆಲ್ಲಾ ಹಿಂಬಾಲಿಸಿ, ಕೂಗಿದಾಗ ತಾವೂ ಕೂಗಿ, ಜೊತೆಗೇ ಇದ್ದವಂತೆ. ಬಹುತೇಕ ಪಕ್ಷಿಗಳು ಧ್ವನಿಯನ್ನಾಧರಿಸಿಯೇ ತಮ್ಮ ಮರಿಗಳನ್ನು ಗುರುತಿಸುವುವು. ಮರಿಯೂ ಸಹ ತಾಯಿಯನ್ನು ಗುರುತಿಸಲು ಧ್ವನಿಯನ್ನೇ ಅವಲಂಬಿಸುವುದು.ವಾನರ ಪ್ರಾಣಿಗಳು ಮನುಷ್ಯರಂತೆಯೇ ಧ್ವನಿ, ಸ್ಪರ್ಶದ ಜೊತೆಗೆ ಮರಿಯ (ಮಗುವಿನ) ಆಕಾರ, ಗಾತ್ರಗಳನ್ನೂ ಗಮನಿಸಿ ಮರಿಗಳನ್ನು ಗುರುತಿಸುತ್ತವೆ. ಮನುಷ್ಯರ ಮಕ್ಕಳೂ ಸಹ ತಾಯಿಯ ಸ್ಪರ್ಶವನ್ನು ಹೇಗೆ ಗುರುತಿಸುವುವೆಂದು ನೋಡಿದೆವು. ಸ್ಪರ್ಶ ಮಾತ್ರವಲ್ಲದೆ, ತಾಯಿಯ ಧ್ವನಿಯನ್ನು ಬೇರೆಯವರ ಧ್ವನಿಗಳಿಂದ ಬೇರ್ಪಡಿಸಿ ಗುರುತಿಸುವ ಗುಣವನ್ನು ಪ್ರಕೃತಿಯು ಕರುಣಿಸಿದೆ. ಈ ಗುಣಕ್ಕೇ ಕರುಳಿನ ಕೂಗು ಎನ್ನಬಹುದು!

- ಅ
02.02.2011
3.30PM

ಒಂದಷ್ಟು ಚಿತ್ರಗಳು..