Monday, November 07, 2011

ಅಪ್ಪನ ಕಥೆ - ೯ - ರಿಯಾ

ರಿಯಾ ಮನೆ ಎಂದರೆ ಇದೇನೆ. ಬನ್ನಿ.

ಈಗ ಒಳಗೆ ಬರಬಹುದು. ಮೂರು ತಿಂಗಳುಗಳ ಕೆಳಗೆ ಬಂದಿದ್ದರೆ, ಗೊತ್ತಿಲ್ಲ, ಬಹುಶಃ ಕೊಂದುಬಿಡುತ್ತಿದ್ದೆ. ಪುಣ್ಯ, ಈಗ ಬಂದಿದ್ದೀರಿ. ಬನ್ನಿ.

ಮೂರು ತಿಂಗಳುಗಳ ಕೆಳಗೆ ನೀವೇ ಏನು, ನನ್ನ ಹೆಂಡತಿ ಬಂದಿದ್ದರೂ ನಾನು ಕೊಂದು ಬಿಡುತ್ತಿದ್ದೆ. ಮೊಟ್ಟೆಯನ್ನು ಕಾಯುವುದೆಂದರೇನು ಸಾಮಾನ್ಯವಾದ ವಿಷಯವೇ? ಕಳೆದ ಬಾರಿ ಹೀಗೇ, ಯಾರೋ ಒಂದಷ್ಟು ಜನ ಬಂದಿದ್ದರು. ಚಳಿಗಾಲ ಮುಗಿದಿತ್ತು. ನಾನು ಒಂಟಿಯಾಗಿರಬೇಕಾದ ಸಮಯ. ನನ್ನ ಹೆಂಡತಿಯರು ಮೊಟ್ಟೆಗಳನ್ನಿಟ್ಟಿದ್ದರು. ಸುಮಾರು ನಲವತ್ತೈದು ಮೊಟ್ಟೆಗಳಿದ್ದವು ನಮ್ಮ ಮನೆಯಲ್ಲಿ. ಮೊಟ್ಟೆಯಿಟ್ಟು ಮನೆಯಲ್ಲಿರದೆ ಕಾಡು ಮೇಡು ತಿರುಗಲು ಹೋಗಿದ್ದರು! ಅದು ಅವರುಗಳ ಹವ್ಯಾಸ. ಮೊಟ್ಟೆಗಳಿಗೆ ಕಾವು ಕೊಡುವುದು ಹೆಣ್ಣಿನ ಕೆಲಸವೇನಲ್ಲ, ಅದು ನನ್ನ ಕೆಲಸ ತಾನೆ?ನಾನೇನೋ ನನ್ನ ಕೆಲಸವನ್ನು ಮಾಡುತ್ತಲೇ ಇದ್ದೆ, ಆದರೆ, ಬಂದಿದ್ದರಲ್ಲ ಯಾರೋ ಒಂದಷ್ಟು ಜನ, ನಾನು ಒಂಟಿಯಾಗಿ ಮೊಟ್ಟೆಯನ್ನೇ ನೋಡುತ್ತ ಕನಸು ಕಾಣುತ್ತಿದ್ದಾಗ, ಬಂದೂಕ ತೋರಿಸಿ ನನ್ನನ್ನು ಕೊಲ್ಲಲು ಸಿದ್ಧರಾಗಿದ್ದರು! ಹೇಗೋ ನಾನು ತಪ್ಪಿಸಿಕೊಂಡೆ, ಆ ಕಥೆ ಈಗ ಯಾಕೆ. ಆದರೆ ನನ್ನ ಮುದ್ದಿನ ಕನಸುಗಳು ಮಾತ್ರ ಆ ಜನಗಳ ಪಾಲಾಗಿ ಹೋಯಿತು. ನಮ್ಮ ಮೊಟ್ಟೆಗಳು ಅಷ್ಟು ರುಚಿಯಂತೆ, ನನ್ನನ್ನು ಕೊಂದಾದರೂ ತಿನ್ನುವಷ್ಟು!

ಚಳಿಗಾಲದಲ್ಲಿ ಬಂದಿದ್ದರೆ ನಾನು ಮನೆಯಲ್ಲೆಲ್ಲಿರುತ್ತಿದ್ದೆ? ಜಿಂಕೆಗಳ ನಡುವೆಯೋ ಕಡವೆಗಳ ಗುಂಪಿನಲ್ಲೋ ಹುಡುಕಬೇಕಿತ್ತು. ಹುಡುಕುತ್ತಿದ್ದರೇನೋ, ಚರ್ಮ ಸಿಗುತ್ತೆ ಅಂತ!

ಚಳಿಗಾಲ ಮುಗಿದಾಗಿನಿಂದ ನನ್ನ ಕೆಲಸ ಶುರು! ನನ್ನ ಶಕ್ತಿಯ ಬಗ್ಗೆ ಅರಿವು ಮೂಡಬೇಕಾದರೆ, ನನ್ನ ಹೆಂಡತಿಯರನ್ನು ಕೇಳಿ. ಬೇರೆ ಯಾವ ಪಕ್ಷಿಸಂಕುಲದವರಿಗೂ ನನ್ನಷ್ಟು ಶಕ್ತಿ ಇರಲು ಸಾಧ್ಯವೇ ಇಲ್ಲ. ಹೇಗೆ ಅಂತೀರಾ? ಪ್ರತಿ ನಾಲ್ಕು ತಿಂಗಳಿಗೆ ನನ್ನ ಹೆಂಡತಿಯರು ಮೊಟ್ಟೆಯನ್ನಿಡುತ್ತಾರೆ. ನಲವತ್ತೈದು ಐವತ್ತು ರಿಯಾಸ್ತ್ರೀಗಳು! ಈ ಐವತ್ತೂ ರಿಯಾಸ್ತ್ರೀಗಳೂ ನಾನು ನಿರ್ಮಿಸಿರುವ ಈ ಒಂದೇ ಗೂಡಿನಲ್ಲಿಯೇ ಮೊಟ್ಟೆಯನ್ನಿಡುತ್ತಾರೆ! ಆ ಐವತ್ತು ಮೊಟ್ಟೆಗಳ ಹೊಣೆಯೂ ನನ್ನದೇ. ಐವತ್ತು ಹೆಂಡತಿಯರ ಹೊಣೆಯೂ ಸಹ! ನಾನು ಶಕ್ತಿವಂತನಲ್ಲದೇ ಇನ್ನೇನು?

..............................................................................................................................


ರಿಯಾ - Rhea americana ಎಂಬ ಅಮೇರಿಕಾದ ಪಕ್ಷಿಯು ಹಾರಲು ಬಾರದಿದ್ದರೂ ಬಹಳ ಶಕ್ತಿಯನ್ನು ಹೊಂದಿರುವಂಥದ್ದು. ನಾಲ್ಕು ಅಡಿ ಎತ್ತರದ ಈ ಪಕ್ಷಿ ಉಷ್ಟ್ರಪಕ್ಷಿಯ ಜಾತಿಗೆ ಸೇರಿದ್ದು. ಹಾಗಾಗಿ ಬಲವಾದ ಕಾಲುಗಳನ್ನುಳ್ಳ ಇದು ಬಹಳ ವೇಗವಾಗಿ ಓಡಬಲ್ಲದು. ಇದರ ಚರ್ಮಕ್ಕಾಗಿ, ಮೊಟ್ಟೆಗಳಿಗಾಗಿ ಬೇಟೆಯನ್ನೂ ಸಹ ಆಡುತ್ತಾರಾದ್ದರಿಂದ ಈ ಪಕ್ಷಿಯು ಅಳಿವಿನ ಅಂಚಿನಲ್ಲಿದೆಯೆಂಬುದು ದುರಂತದ ಸಂಗತಿ.
-ಅ
07.11.2011
9.30PM

Friday, June 24, 2011

ಮಾತೃ ದೇವೋ ಭವ - ಅನಾಥ ರಕ್ಷಕಿ

ನಮ್ಮಲ್ಲಿ ಸಾವಿರಾರು ಪ್ರಭೇದಗಳಿರಬಹುದು. ಎಲ್ಲರಿಗಿಂತಲೂ ನಾವು ಮಿಗಿಲು! ನಾವು “ರಾಜ” ವಂಶಕ್ಕೆ ಸೇರಿರುವವರು! ಇಂಗ್ಲೀಷಿನಲ್ಲಿ “ಕಿಂಗ್” ಎಂದೇ ನಮ್ಮನ್ನು ಕರೆಯುತ್ತಾರೆ.

ಸರಿಸೃಪಗಳಲ್ಲೆಲ್ಲ ಜನರು ಬಹಳವಾಗಿ ಹೆದರುವುದು ನಮ್ಮನ್ನು ಕಂಡೇ. ವಿಷವಿರಲಿ, ಬಿಡಲಿ - ಜನರಿಗೆ ನಾವೆಂದರೆ ಭಯ. “ಜನ್ಮ ಕೊಟ್ಟ ತಾಯಿ ವಿಷ ಕೊಡುವಳೇ?” ಎಂದು ಏನೇನೋ ಭಾವನಾತ್ಮಕ ಮಾತುಗಳನ್ನು ನೀವು ಕೇಳಿರಬಹುದು. ಆದರೆ ನಮ್ಮ ತಾಯಿಯ ದೆಸೆಯಿಂದಲೇ ನಮ್ಮಲ್ಲಿ ವಿಷವೂ ನೆಲೆಯೂರಿರುವುದು. ಸರ್ಪಗಳೆಂದರೆ ಏನು ಸಾಮಾನ್ಯವೇ? ಹೇಗೂ ಇರಲಿ, ನಮ್ಮ ಅಮ್ಮನ ಮಹದ್ವಿಷಯವನ್ನು ಹೇಳುವ ಮುನ್ನ, ನಮ್ಮ ಸಂಬಂಧಿಕರ ಬಗ್ಗೆ ಒಂದಿಷ್ಟು ತಿಳಿಸುತ್ತೇವೆ.

ನಮ್ಮ ಅಮ್ಮನಿಗೆ ಇರುವ ಹಾಗೆ ನಮ್ಮ ಯಾವುದೇ ಸಂಬಂಧಿಕರುಗಳ ತಾಯಂದಿರಿಗೂ ಮಕ್ಕಳ ಬಗೆಗೆ ಪ್ರೇಮವಿರುವುದನ್ನು ಕಾಣೆವು. ಹಾಗಂತ ದ್ವೇಷವೇನೂ ಇಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸಿ ನಾಣ್ನುಡಿಯನ್ನೂ ಮಾಡಿದ್ದಾರೆ - ಹಾವುಗಳು ತಮ್ಮ ಮೊಟ್ಟೆಗಳನ್ನು ತಾವೇ ತಿನ್ನುತ್ತವೆ ಎಂದು. ಎಲ್ಲಾದರೂ ಉಂಟೇ? ಮೊಟ್ಟೆಯಿಡುವುದು ಮರಿಯಾಗಲೆಂದು, ಸಂತತಿ ಬೆಳೆಯಲೆಂದು. ತನ್ನ ಕರುಳಿನ ಕುಡಿಯನ್ನೇ ತಾಯಿಯೆಂದಾದರೂ ತಿಂದಾಳೇ? ಈ ಮಹದುಪಕಾರವನ್ನು ನಮ್ಮ ಸಂಬಂಧಿಕರುಗಳ ತಾಯಂದಿರು ಮಾಡುವುದರಿಂದ ಮೊಟ್ಟೆಯೊಡೆದು ಹೊರಗೆ ಬರುವ ವೇಳೆಗೆ ಅವರು ಅನಾಥರೇ ಸರಿ. ಪಕ್ಷಿಗಳ ಹಾಗೆ ಸರ್ಪಗಳ ಮೊಟ್ಟೆಗಳಿಗೆ ಕಾವು ಕೊಡುವ ಅಗತ್ಯವೇನಿದೆ?

ಕಾವು ಕೊಡುವ ಅಗತ್ಯ ನಮ್ಮ ಹತ್ತಿರದ ಸಂಬಂಧಿ ಹೆಬ್ಬಾವುಗಳ ಮೊಟ್ಟೆಗಳಿಗಿವೆ. ಅದೂ ಕೂಡ ಹೆಚ್ಚಿಗೆ ದಿನಗಳೇನಿಲ್ಲ. ಸ್ವಲ್ಪ ಕಾಲವಾದ ಮೇಲೆ ಹೆಬ್ಬಾವು ಮರಿಗಳೂ ಕೂಡ ಅನಾಥರೇ.

ನಾವು ಕಾಳಿಂಗ ಸರ್ಪಗಳು! ನಮ್ಮನ್ನೂ ಅನಾಥರನ್ನಾಗಿಸಿ ಎಲ್ಲೋ ಹೋಗಿ, ಮುಂದಿನ ವರ್ಷ ಮತ್ತೆ ಮೊಟ್ಟೆಯಿಡುವ ನಮ್ಮಮ್ಮ ನಮ್ಮ ಪಾಲಿಗೆ ದೇವರಂತೆ ಹೇಗೆ ಎಂದು ಯೋಚಿಸುತ್ತೀರಾ? ಅಥವಾ, ನಮ್ಮೆಲ್ಲ ಸಂಬಂಧಿಕರಿಗಿಂತ ನಮ್ಮ ತಾಯಿಯು ಹೇಗೆ ವಿಶೇಷ ಎಂದು ಕೇಳುತ್ತೀರಾ?ಸರ್ಪಗಳಲ್ಲೇ ಯಾರೂ ಕೈಹಾಕದ ಸಾಹಸ ಒಂದನ್ನು ನಮ್ಮಮ್ಮ ಮಾಡಿದ್ದಾಳೆ - ನಾವು, ಮೂವತ್ತು ಒಡಹುಟ್ಟಿದವರೂ, ಮೊಟ್ಟೆಯೊಳಗಿರುವಾಗ ನಮಗೊಂದು ಮನೆ, ಅರ್ಥಾತ್ ಗೂಡು ನಿರ್ಮಿಸಿದ್ದಾಳೆ! “ಈ ಪರಿಯ ಸಾಮರ್ಥ್ಯ ಬೇರಾವ ಅಮ್ಮನಲು ಕಾಣೆವು ನಮ್ಮಮ್ಮನಿಗಲ್ಲದೆ!”

ನಮ್ಮೆಲ್ಲರನ್ನೂ - ಅಂದರೆ ಮೊಟ್ಟೆಗಳನ್ನು - ಗೂಡಿನಲ್ಲಿ ಭದ್ರವಾಗಿರಿಸಿ, ಅತಿ ತೇವಾಂಶವುಳ್ಳ ಪ್ರದೇಶವಾಗಿರುವುದರಿಂದ ನಮ್ಮನ್ನು ಬೆಚ್ಚಗೆ ತಬ್ಬಿಕೊಂಡು ಎರಡುವರೆ ತಿಂಗಳು ಕಾದಿದ್ದಾಳೆ, ರಕ್ಷಿಸಿದ್ದಾಳೆ! ಇದಕ್ಕಿಂತಲೂ ಅವಳು ಮಾಡಿರುವ ಅತ್ಯದ್ಭುತ ಕೆಲಸವೆಂದರೆ ನಾವು ಹುಟ್ಟುವ ಕೆಲವೇ ಸಮಯಗಳ ಮುಂಚೆ ನಮ್ಮನ್ನು ತೊರೆದು ಹೋಗಿರುವುದು.

ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಇದ್ದಳೇನೋ ಅನ್ನಿಸುತ್ತೆ ಅಮ್ಮ, ನಮಗೆ ಯಾರಿಗೂ ಗೊತ್ತಿಲ್ಲ. ನಾವು ಅವಳನ್ನು ಕಂಡಿದ್ದರೆ ತಾನೆ? ಹೇಳೆದೆವಲ್ಲ, ನಾವು ಹುಟ್ಟುವ ಕೆಲವೇ ಸಮಯದ ಮುಂಚೆ ನಮ್ಮನ್ನೆಲ್ಲಾ ಬಿಟ್ಟು ಹೊರಟುಹೋಗಿದ್ದಾಳೆಂದು. ಅವಳಲ್ಲಿರುವಷ್ಟು ವಿಷ ನಮ್ಮಲ್ಲಿಲ್ಲದಿರಬಹುದು. ಆದರೆ ಮನುಷ್ಯರನ್ನು ಸಲೀಸಾಗಿ ಕೊಲ್ಲಬಲ್ಲಷ್ಟು ವಿಷ ಅಗತ್ಯವಾಗಿ ಇದೆ.

ವಿಷಯಕ್ಕೆ ಬರೋಣ. ಅಮ್ಮ ನಮ್ಮನ್ನು ಬಿಟ್ಟು ಹೋಗಿರುವುದು ಏಕೆ? ಮತ್ತು ಅದು ಮಹತ್ತಿನ ಕೃತ್ಯ ಎಂದು ನಾವು ಕರೆದು, ಅಮ್ಮನನ್ನು ಪೂಜ್ಯವಾಗಿಸಲು ಕೊಡುತ್ತಿರುವ ಕಾರಣವೂ ಸಹ ಅದೇ, ಏಕೆ?

ನಾವು ಹುಟ್ಟಿದ್ದೇವಲ್ಲ, ಮೂವತ್ತು ಸೋದರ ಸೋದರಿಯರು, ಒಟ್ಟಿಗೆ ಬಾಳುವವರಲ್ಲ. ಅಮ್ಮ ಹೋದ ಹಾಗೆಯೇ ನಾವೂ ಹೋಗಬೇಕು. ಒಟ್ಟಿಗೆ ಇರಲು ಸಾಧ್ಯವೇ ಇಲ್ಲ. ನಮ್ಮ ಹೆಸರು “ಕಿಂಗ್” ಎಂದು ಆಗಲೇ ಹೇಳಿದೆವಷ್ಟೆ? “ಕಿಂಗ್” ಯಾವತ್ತಿದ್ದರೂ ಏಕಾಂಗಿಯೇ. ಇದಕ್ಕೆಲ್ಲ ಮೂಲಭೂತವಾದ ಕಾರಣ ನಮ್ಮ ಆಹಾರ.

ನಾವು ಸರ್ಪಭಕ್ಷಕರು!

ನಾವು ಹುಟ್ಟುವ ವೇಳೆಗೆ ಅಮ್ಮ ಇದ್ದಿದ್ದರೆ ಬಲವಂತವಾಗಿ ತನ್ನ ಮಕ್ಕಳನ್ನೇ ತಿನ್ನಬೇಕಾಗಿರುತ್ತಿತ್ತು - ನಿಯಮಾನುಸಾರ. ಆದರೆ, ನಿಯಮ ಬೇರೆ ರೀತಿಯದೇ ಆಗಿದೆ. ನಾವು ಹುಟ್ಟುವ ಸಮಯಕ್ಕೆ ಅವಳು ನಮ್ಮೊಡನೆ ಇರಲು ಸಾಧ್ಯವೇ ಇಲ್ಲ! ಹಾಗೇ ನಾವೂ ಸಹ ಜೊತೆಗೆ ಇರಲು ಸಾಧ್ಯವೇ ಇಲ್ಲ. ಇದ್ದರೆ ಯಾರು ಬಲಿಷ್ಠರೋ ಅವರು ದುರ್ಬಲರನ್ನು ತಿಂದುಬಿಡುತ್ತಾರೆ! ಸ್ವಜಾತಿಭಕ್ಷಣೆಯು ಅಪರಾಧವಷ್ಟೆ.

ವಿಕಾಸವಾದಿಗಳು ನಮ್ಮನ್ನು ಈ ಕಾರಣಕ್ಕೆ ಬಹಳ ಗೌರವಿಸುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲವು ದೂರವಿರದೆ ಇರಲಿ.

-ಅ
07.05.2011
2AM

೧. http://www.hinduonnet.com/2001/06/20/stories/0420402s.htm

೨. http://www.stanford.edu/group/stanfordbirds/text/essays/Parental_Care.html

Thursday, June 02, 2011

ಮಾತೃ ದೇವೋ ಭವ - ರಾಕ್ಷಸ ಮಾತೆ

ನಮ್ಮನ್ನು ರಾಕ್ಷಸರಿಗೆ ಹೋಲಿಸಿದ್ದಾರೆ ಹಿಂದಿನ ಮನುಷ್ಯರು. ನೋಡೋದಕ್ಕೂ ಹಾಗೆಯೇ ಇದ್ದೇವೆಂದಿಟ್ಟುಕೊಳ್ಳಿ. ಯಾರೋ ನನ್ನ ಪೂರ್ವಜರು ಆನೆಯನ್ನೇ ಕೆಳಗುರುಳಿಸಿರಬೇಕು, ಅದನ್ನು ನೋಡಿದ ಕವಿಯು ತಮ್ಮ ಕಣ್ಣಿಗೆ ಚೆನ್ನಾಗಿ ಕಾಣದ ನನ್ನ ಪೂರ್ವಜನನ್ನು ರಾಕ್ಷಸನಿಗೂ, ಆನೆಯು ತಮಗೆ ಸಹಾಯ ಮಾಡುವ ಸಲುವಾಗಿ ಅದನ್ನು ಸಾಧುವನ್ನಾಗಿಯೂ ಹೋಲಿಸಿರುವ ಕಥೆ ನಿಮಗೆ ಗೊತ್ತೇ ಇದೆ. ಆ ಕಥೆಯೆಲ್ಲಾ ಈಗ ಕಟ್ಟುಕೊಂಡು ಏನಾಗಬೇಕಿದೆ! ಈ ಕವಿಯ ಜಾತಿಯವರು ಹುಟ್ಟುವ ಎಷ್ಟೋ ಲಕ್ಷ ವರ್ಷಗಳ ಕೆಳಗೆಯೇ ನನ್ನ ಜಾತಿಯವರು ಈ ಗ್ರಹದ ಮೇಲೆ ಹುಟ್ಟಿರುವಾಗ, ಕೇವಲ ಎರಡು ಲಕ್ಷ ವರ್ಷದ ಕೆಳಗೆ ಹುಟ್ಟಿದ ಮನುಷ್ಯನ ವಿರುದ್ಧ ಹಠ ಸಾಧಿಸಲು ನಾನೇನು ಮನುಷ್ಯನೇ?

ನಮ್ಮನ್ನು ರಾಕ್ಷಸರೆಂದು ಕರೆದಿರಬಹುದು. ನಮ್ಮವರೇ ನಮ್ಮನ್ನು ಕೊಂದು ತಿನ್ನುವ ಅಭ್ಯಾಸವೂ ನಮ್ಮವರಿಗಿರಬಹುದು. ಅದರಲ್ಲೂ ಚಿಕ್ಕ ಮಕ್ಕಳನ್ನು! ಅದಕ್ಕಾಗಿಯೇ ಅಲ್ಲವೇ, ಅಮ್ಮ ನಮ್ಮನ್ನೆಲ್ಲಾ - ಇಪ್ಪತ್ತು ಜನ ಒಡಹುಟ್ಟಿದವರೆಲ್ಲರನ್ನೂ - ತನ್ನ ಬಾಯೊಳಗೆ ಬಚ್ಚಿಟ್ಟುಕೊಂಡು ಕಾಪಾಡಿದ್ದು!

ಆ ಕೋರೆಹಲ್ಲುಗಳು, ಖಡ್ಗದಂತೆ ಹರಿತವಾಗಿರುವ ಹಲ್ಲುಗಳು, ಸ್ವಲ್ಪವೂ ಸೌಮ್ಯವಾಗಿರದ ಕಣ್ಣುಗಳು, ಮೈಯೆಲ್ಲಾ ಮುಳ್ಳು ಮುಳ್ಳಾಗಿರುವ ನಮ್ಮಮ್ಮ ಅಲ್ಲಲ್ಲಿ ಓಡಿ ಹೋಗುತ್ತಿದ್ದ ನಮ್ಮನ್ನೆಲ್ಲಾ ತಿನ್ನುತ್ತಿರುವ ಹಾಗೆಯೇ ಕಂಡೀತು ಬುದ್ಧಿಹೀನರಿಗೆ. ಅಮ್ಮ ಎಲ್ಲಾದರೂ ಮಕ್ಕಳನ್ನು ತಿನ್ನಲು ಸಾಧ್ಯವೇ? ಹಾಗಿದ್ದರೆ, ಅಮ್ಮನನ್ನು ದೇವರೆಂದು ಕರೆಯುತ್ತಿದ್ದರೇ?

ಬೇರೆಯವರು ಸ್ವಜಾತಿಭಕ್ಷಕರಾಗಬಹುದು. ಅದರಲ್ಲೂ ಬೇರೆ ಗಂಡಸರೂ. ಅಪ್ಪನನ್ನೂ ಸೇರಿಸಿ! ಆದರೆ ಅಮ್ಮ ಹಾಗಾಗೋಕೆ ಸಾಧ್ಯವೇ ಇಲ್ಲ. ನಾವು ಇಪ್ಪತ್ತು ಜನ ಒಡಹುಟ್ಟಿದವರು ಮಾತ್ರವಲ್ಲ. ಕಳೆದ ವರ್ಷ ಒಂದಿಪ್ಪತ್ತು, ಮತ್ತೆ, ಅದಕ್ಕೆ ಮುಂಚಿನ ವರ್ಷ ಇನ್ನೊಂದಿಪ್ಪತ್ತು, ಹೀಗೆ ವರ್ಷಾನುಗಟ್ಟಲೆಯಿಂದಲೂ ಇಪ್ಪತ್ತಿಪ್ಪತ್ತು ಮಕ್ಕಳನ್ನು ಹಡೆಯಲು ಅದೇ ಜಾಗವನ್ನು ನೆನಪಿನಲ್ಲಿಟ್ಟುಕೊಂಡು, ಪ್ರತೀ ಸಾರಿಯೂ ಕಾಲಿನಲ್ಲೇ ಗೂಡನ್ನು ನಿರ್ಮಿಸಿ, ಶ್ರಮ ಪಡುತ್ತಿದ್ದಳೇ? ಅದೂ ಅಲ್ಲದೆ, ನಾವುಗಳು ಮೊಟ್ಟೆಯೊಳಗಿರುವಾಗ - ಅಂದರೆ - ಸುಮಾರು ಎರಡು ತಿಂಗಳುಗಳ ಕಾಲ ನಮ್ಮನ್ನು ಕಾವಲಾಗಿಯೇ ಇರುತ್ತಿದ್ದಳೇ? ಜೊತೆಗೆ, ಎರಡು ತಿಂಗಳೂ ಸಹ, ಮೊಟ್ಟೆಗಳಲ್ಲಿದ್ದ ನಮಗೆ ತೊಂಭತ್ತು ಡಿಗ್ರೀ ಸೆಲ್ಷಿಯಸ್ ಉಷ್ಣಾಂಶ ಬೇಕಿದ್ದಾಗ, ಅದನ್ನು ಒದಗಿಸುವುದು ಅವಳ ಕರ್ತವ್ಯವಾಗಿತ್ತು, ಮತ್ತು ಆ ಕರ್ತವ್ಯವನ್ನು ಅವಳು ಸ್ವಲ್ಪವೂ ದೋಷವಿಲ್ಲದೇ ನಿರ್ವಹಿಸಿದಳು. ಮುಂದೆಯೂ ನಿರ್ವಹಿಸುತ್ತಾಳೆ.

ಚಿಕ್ಕ ಮಕ್ಕಳನ್ನು ಬರೀ ನಮ್ಮ ಜಾತಿಯವರೇ ತಿನ್ನುವವರು ಎಂದು ಭಾವಿಸದಿರಿ. ಚಿಕ್ಕಂದಿನಲ್ಲಿರುವವರು ಯಾವಾಗಲೂ ದುರ್ಬಲರೇ. ನಮ್ಮನ್ನು ಮುಗಿಸಲು ನಮ್ಮಮ್ಮ ಒಬ್ಬಳನ್ನು ಬಿಟ್ಟು, ಬೇರೆಲ್ಲರೂ ಕಾದಿರುತ್ತಾರೆ - ಎಲ್ಲ ಜಾತಿಯವರೂ! ಅದಕ್ಕೇನೇ ನಮ್ಮನ್ನು ನಾವು ಶಕ್ತಿಗೊಳಿಸಿಕೊಳ್ಳಬೇಕು. ನಮ್ಮ ಶಕ್ತಿ ಏನಿದ್ದರೂ ನೀರಿನಲ್ಲಿ ತಾನೆ? ನೆಲದ ಮೇಲೆ ನಾವು ನಿಷ್ಪ್ರಯೋಜಕರಂತೆ. ಅಮ್ಮನೇ ಹೇಳಿದ್ದು ಇದನ್ನು. ನೀರಿನಲ್ಲಿ ಈಜಲು ಕಲಿಸಿದ್ದೂ ಸಹ ಅಮ್ಮನೇ. ಮೊಟ್ಟೆಯಿಂದ ಹೊರಗೆ ಬಂದು ಇನ್ನೂ ಒಂದು ಘಂಟೆಯೂ ಆಗಿಲ್ಲ, ಆಗಲೇ ಬಂದು ನಮ್ಮನ್ನೆಲ್ಲಾ ತಿಂದುಬಿಡುತ್ತಾಳೋ ಎಂಬಂತೆ ಬಾಯಲ್ಲಿ ಕಚ್ಚಿಕೊಂಡಳು. ಹಲ್ಲುಗಳು ನಮಗೆ ಯಾರಿಗೂ ಸೋಕಲಿಲ್ಲ. ನಾವೋ, ಒಬ್ಬರೂ ನಿಂತಲ್ಲಿ ನಿಲ್ಲುವವರಲ್ಲ. ಕಪ್ಪೆತಕ್ಕಡಿ ಸಹವಾಸ. ಅಮ್ಮ ಬೇಸರಗೊಳ್ಳದೇ ಎಲ್ಲರನ್ನೂ ತನ್ನ ವಿಶಾಲ ಬಾಯಿಯ ವಾಹನದಲ್ಲಿ ನಮ್ಮನ್ನೆಲ್ಲ ಕರೆದೊಯ್ದು ನೀರೊಳಗೆ ಮುಳುಗಿಸಿಬಿಟ್ಟಳು. ಈಜು ಕಲಿಯಿರಿ ಎಂದು. ಐದು ನಿಮಿಷದಲ್ಲಿ ಕಲಿತುಕೊಂಡೆವು!

ಭಯವಾದರೆ ಸಾಕು, ನಮಗೆಲ್ಲ ಅಮ್ಮನ ಬಾಯಿಯೇ ರಕ್ಷೆಗೂಡು. ಅಲ್ಲೇ ನಮಗೆ ಬೇಟೆಯ ಪಾಠ ಕೂಡ. ಅಲ್ಲೇ ನಮಗೆ ತಾಳ್ಮೆಯ ಪಾಠ ಕೂಡ. ನಾವುಗಳೆಲ್ಲ ಬಾಯಲ್ಲಿ ಇರುವಾಗ ಅಮ್ಮ ಎಂದೂ ಬಂಡೆಯ ಮೇಲೆ ಬಂಡೆಯ ಹಾಗೆ ಬಿದ್ದುಕೊಂಡಿಲ್ಲ. ಹಾಗೆ ಬಿದ್ದುಕೊಂಡಿರುವವರನ್ನು ತೋರಿಸಿದ್ದಾಳೆ. ಮತ್ತೆ ಹಾಗೆ ಬಿದ್ದುಕೊಂಡಿರುವವರ ಹತ್ತಿರ ಹೋಗಬಾರದೆಂದೂ ಎಚ್ಚರಿಕೆ ಕೊಟ್ಟಿದ್ದಾಳೆ. ಆ ಎಚ್ಚರಿಕೆಯನ್ನು ಗಮನವಿಟ್ಟು ಕೇಳಿಸಿಕೊಂಡಿದ್ದು ನಾನು ಮತ್ತು ನನ್ನ ಅಣ್ಣ ಅಷ್ಟೆ ಅನ್ನಿಸುತ್ತೆ, ಅದಕ್ಕೆ ಜೊತೆ ಹುಟ್ಟಿದವರಲ್ಲಿ ನಾವಿಬ್ಬರೇ ಬದುಕಿರುವುದು. ಒಂದು ರೀತಿಯಲ್ಲಿ ಒಳ್ಳೆಯದೇ ಬಿಡಿ, ಇಪ್ಪತ್ತು ಜನರೂ ಬದುಕಿಬಿಟ್ಟಿದ್ದರೆ, ಆಮೇಲೆ ನಮ್ಮ ಜನಸಂಖ್ಯೆ ಹೆಚ್ಚಾಗುತ್ತಿತ್ತಷ್ಟೆ? ನಮ್ಮ ಅಮ್ಮ ನಮಗೆ ಹೇಳಿಕೊಟ್ಟ ಪಾಠ ಇದಾದರೆ, ಪ್ರಕೃತಿಯೆಂಬ ಅಮ್ಮ ಬೇರೆಯದೇ ಪಾಠವನ್ನು ಬೇರೆಯವರಿಗೆ ಹೇಳಿಕೊಟ್ಟಿದ್ದಾಳೆ.
ಈಗ ನನಗೆ ಶತ್ರುವೇ ಇಲ್ಲ - ಒಬ್ಬ ಮನುಷ್ಯ ಪ್ರಾಣಿಯನ್ನು ಹೊರೆತು. ಅವನ ದೃಷ್ಟಿಯಲ್ಲಿ ನಾನು ರಾಕ್ಷಸ ವಂಶದವನು. ಸೃಷ್ಟಿಯ ನಿಯಮದಲ್ಲಿ ನಾನು ಡೈನೊಸಾರ್ ವಂಶದವನು. ಒಟ್ಟಿನಲ್ಲಿ ನಾವು ಹುಟ್ಟಿದ ನಂತರ ದೊಡ್ಡವರಾಗುವವರೆಗೂ ಬದುಕುವುದು ಬಹಳ ಕಷ್ಟ. ಹೆಜ್ಜೆ ಹೆಜ್ಜೆಗೂ ಅಪಾಯ. ದೊಡ್ಡವರಾದರೆಂದರೆ ಸಾಯುವುದು ಬಹಳ ಕಷ್ಟ.

ಮೊಸಳೆಗಳಾಗಿ ಬದುಕುವುದೂ ಸಹ ಅಷ್ಟು ಸುಲಭ ಎಂದುಕೊಂಡೀರಾ?-ಅ
20.04.2011
12.25AM

http://animal.discovery.com/convergence/safari/crocs/expert/expert8.html

Saturday, May 07, 2011

ಒಂಟಿ ಸಲಗ

ಟಿ.ವಿ. ಚಾನೆಲ್ಲು ಬದಲಾಯಿಸುತ್ತಿರುವಾಗ ರೆಬೆಲ್ ಸ್ಟಾರಿನ ಚಿತ್ರವೊಂದು ಪ್ರಸಾರವಾಗುತ್ತಿತ್ತು - "ಒಂಟಿ ಸಲಗ" ಎಂಬ ಹೆಸರಿನದ್ದು. ಆ ಪ್ರೇರಣೆಯಿಂದಲೇ ಈ ಚಿಕ್ಕದಾದ ಒಂದು ಅಧ್ಯಯನ - ನಿಜವಾದ ಒಂಟಿ ಸಲಗದ ಬಗ್ಗೆ.

ನಾವು ಸೋಲಿಗೆರೆ ಚಾರಣಕ್ಕೆ ಹೋದಾಗ ಕ್ಯಾಂಪಿನಲ್ಲಿ ಅಲ್ಲಿನ ಸೋಲಿಗನೊಬ್ಬ ಹೇಳಿದ್ದ. "ಬೆಟ್ಟ ಇಳಿಯುವಾಗ ಹುಷಾರು, ಒಂಟಿ ಸಲಗ ಇದೆ" ಎಂದು. ಇಳಿಯುವಾಗ ಆ ಸಲಗ ನಮಗೆ ದರ್ಶನ ಕೂಡ ಕೊಟ್ಟಿದ್ದು ನಮ್ಮ ಭಾಗ್ಯವೇ ಸರಿ. ಅಕ್ಕಪಕ್ಕ ಅದರ ಜೊತೆ ಬೇರಾವ ಆನೆ ಇರದೇ ಇದ್ದುದರಿಂದ, ಮತ್ತು ಅದರ ಸೊಂಡಿಲ ಆಚೀಚೆಗೆ ಚೂಪಾದ ದಂತಗಳಿದ್ದುದರಿಂದ ಅದನ್ನು ಒಂಟಿ ಸಲಗ ಎಂದು ತೀರ್ಮಾನಿಸಲು ಹೆಚ್ಚು ಸಮಯ ಬೇಕಾಗಲಿಲ್ಲ.

ಸಲಗಗಳು ಒಂಟಿಯಾಗಲು ಅನೇಕ ಕಾರಣಗಳಿರಬಹುದು. ಆನೆಗಳ ಕುಟುಂಬದಿಂದ ಹೊರಹಾಕಲ್ಪಟ್ಟವು, ಗಾಯಗೊಂಡವು, ಅನಾರೋಗ್ಯವಂತ ಆನೆಗಳು, ಹೀಗೆ. ಆದರೆ ಬಹಳ ಮುಖ್ಯವಾದ ಕಾರಣವೆಂದರೆ, ಮತ್ತು ಬಹಳ "ಡೇಂಜರಸ್" ಕಾರಣವೆಂದರೆ ಮದಿಸಿದ ಆನೆ."ಕದಳಿಯೊಳ್ ಮದದಾನೆ ಪೊಕ್ಕಂತೆ" ಎಂದು ಕವಿ ರನ್ನ ಅಭಿಮನ್ಯುವಿನ ವಿಷಯದಲ್ಲಿ ಬರೆದಿದ್ದಾನಷ್ಟೆ? ಇಷ್ಟಕ್ಕೂ ಮದದಾನೆ ಎಂದರೇನು?

"ವಯಸ್ಸಿಗೆ" ಬಂದ ಗಂಡು ಆನೆಯನ್ನು ಮದಿಸಿದ ಆನೆ ಎಂದು ಕರೆಯುತ್ತಾರೆ. ಆನೆಯ ಈ ಮದಕ್ಕೆ "ಮಸ್ತ್" ಎಂದೂ ಕರೆಯುತ್ತಾರೆ. ಮಸ್ತಿನ ಹಂತದಲ್ಲಿರುವ ಆನೆಗಳಲ್ಲಿ ಟೆಸ್ಟೋಸ್ಟೀರಾನ್ ಎಂಬ ಹಾರ್ಮೋನು ಅಧಿಕ ಮಟ್ಟದಲ್ಲಿ ಉತ್ಪತ್ತಿಯಾಗಿ ಹೆಣ್ಣಾನೆಗಳ ಬಗ್ಗೆ ಬಹಳ ಕೆರಳುವಂತಾಗಿರುತ್ತವೆ. ಹೀಗಿರುವಾಗ ಆನೆಗಳ ಗುಂಪಿನಲ್ಲಿರುವ ಉಳಿದ ಗಂಡಾನೆಗಳ ಜೊತೆ ಘರ್ಷಣೆಗಳೂ ಆಗುತ್ತವೆ. ಗುಂಪುಗಾರಿಕೆಯ ದೆಸೆಯಿಂದ ಮದದಾನೆಯು ಒಮ್ಮೊಮ್ಮೆ ಹೊರಹಾಕಿಸಿಕೊಳ್ಳಲ್ಪಡುತ್ತದೆ. ಆಗ ಸಲಗವು ಒಂಟಿಯಾಗುತ್ತದೆ.

ಮಸ್ತಿನಲ್ಲಿರುವ ಆನೆಗಳಿಗೆ ಶಕ್ತಿಯು ಅಪಾರವಾಗಿದ್ದೂ, ಅತ್ಯಂತ ಉದ್ರೇಕಗೊಂಡಿರುವ ಮನಸ್ಥಿತಿಯಿರುತ್ತೆ. ಹಾಗಾಗಿ ಅವುಗಳು ಹತೋಟಿಗೆ ಬರುವುದು ಬಹಳ ಕಷ್ಟ. ಗುಂಪಿನಲ್ಲಿದ್ದರೆ ಬೇರೆ ಆನೆಗಳು ತಮ್ಮ ಗುಂಪಿನ ಸಭ್ಯತೆಯನ್ನು ಕಾಪಾಡಿಕೊಳ್ಳಲು ಈ ಮದದಾನೆಯನ್ನು ಹತೋಟೆಗೆ ತರುತ್ತವೆ. ಒಂಟಿ ಸಲಗಕ್ಕೆ ಹೇಳೋರು ಯಾರು, ಕೇಳೋರು ಯಾರು!


ಕೇಳೋರು ಇದ್ದಾರೆ - ಹೆಣ್ಣಾನೆ! ಯಾವ ಸಲಗವು ಬಹಳ "ಮಸ್ತ್" ಆಗಿರುತ್ತೋ ಆ ಸಲಗವನ್ನು ಹೆಣ್ಣಾನೆಯು ಒಪ್ಪುತ್ತೆ! ಹೊಸ ಸಂಸಾರ ಅಲ್ಲಿಂದ ಶುರುವಾಗುತ್ತೆ.

ಹೀಗಿದೆ ಆನೆಯ "ಮಸ್ತ್" ಪ್ರೇಮ ಕಥೆ!

-ಅ
07.05.2011
3AM

Tuesday, April 19, 2011

ನೀರು ಅತ್ಯಮೂಲ್ಯವೇಕೆ?


ಭೂಪಟವನ್ನೋ, ಭೂಗೋಲವನ್ನೋ ನೋಡಿದಾಗ ಕಾಣುವ ನೀಲಿ ಬಣ್ಣದ್ದೆಲ್ಲವೂ ನೀರು ಎಂಬುದು ಗೊತ್ತಿರುವ ಸಂಗತಿಯಷ್ಟೆ. ಭೂಗ್ರಹದ ಮುಕ್ಕಾಲು ಭಾಗ ನೀರಿದ್ದೂ, ಕೇವಲ ಕಾಲು ಭಾಗವಷ್ಟೇ ನೆಲವೆಂಬ ವಿಷಯವನ್ನು ಪ್ರಾಥಮಿಕ ಶಾಲೆಯಾಲ್ಲೇ ಕಲಿತಿರುತ್ತೇವೆ. ಅಷ್ಟೊಂದು ನೀರಿದ್ದೂ ನಾವು "ಕೊರತೆ"ಯ ಬಗ್ಗೆ ಮಾತನಾಡುತ್ತಿರುತ್ತೇವೆ. ಏಕೆ?

ವಿಶ್ವಸಂಸ್ಥೆಯ ವರದಿಯ ಪ್ರಕಾರ ಭೂಗ್ರಹದಲ್ಲಿ ಸುಮಾರು ಒಂದುವರೆ ಸಾವಿರ ಮಿಲಿಯನ್ ಕ್ಯುಬಿಕ್ ಕಿಲೋಮೀಟರು ನೀರಿದೆಯಂತೆ.

ಇದನ್ನು ಹೇಗೆ ಕಲ್ಪಿಸಿಕೊಳ್ಳುವುದು? ಒಂದು ಕಿಲೋಮೀಟರು ಉದ್ದದ, ಒಂದು ಕಿಲೋಮೀಟರು ಅಗಲದ, ಒಂದು ಕಿಲೋಮೀಟರು ಆಳದ ಘನವಸ್ತುವನ್ನು ನೀರಿನಿಂದ ತುಂಬಿಸಿದರೆ ಅದು ಒಂದು ಕ್ಯುಬಿಕ್ ಕಿಲೋಮೀಟರ್. ಇದನ್ನು ಸಾವಿರದೈನೂರರಿಂದ ಗುಣಿಸಿದರೆ ನೀರಿನ ಪ್ರಮಾಣವು ಕಲ್ಪನೆಗೆ ಸಿಕ್ಕೀತು.

ಇಷ್ಟೊಂದು ನೀರಿನಲ್ಲಿ ಶೇ. 98ರಷ್ಟು ಸಮುದ್ರವೇ ಆಗಿದೆ. ಅಂದರೆ, ಒಟ್ಟು ನೀರಿನಲ್ಲಿ ಕೇವಲ ಶೇ. ಎರಡರಷ್ಟು ಮಾತ್ರ ಶುದ್ಧ ಜಲ ಇರುವುದೆಂದಾಯಿತಷ್ಟೆ?

ಈ ಶೇ. ಎರಡರಷ್ಟು ಶುದ್ಧಜಲದಲ್ಲಿ ಮುಕ್ಕಾಲು ಭಾಗ ಧ್ರುವಪ್ರದೇಶಗಳಲ್ಲಿ ಮಂಜುಗೆಡ್ದೆಗಳ ರೂಪದಲ್ಲಿದೆ. ಇನ್ನು ಶೇ 22.5ರಷ್ಟು ನೀರು ಅಂತರ್ಜಲದ ರೂಪದಲ್ಲಿ ಅತಲ, ವಿತಲ, ರಸಾತಲ, ಪಾತಾಲವನ್ನು ಸೇರಿಕೊಂಡಿದೆ.

ಅಂದರೆ, ಒಟ್ಟು ಇರುವ ಶುದ್ಧಜಲದಲ್ಲಿ (ಶೇ. ಎರಡರಲ್ಲಿ) ಶೇ. 97.5ರಷ್ಟು ಪ್ರಮಾಣವು ನಮಗೆ ದೊರಕದ ರೂಪದಲ್ಲಿದೆ. ಇನ್ನು ಉಳಿದಿರುವುದು ಶೇ. ಎರಡೂವರೆಯಷ್ಟು ಶುದ್ಧಜಲ ಮಾತ್ರವೇ ಇಡೀ ಭೂಮಿಯಲ್ಲೆಲ್ಲಾ ಹಂಚಿಹೋಗಿರುವುದು. ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ, ಭೂಗ್ರಹದ ಮುಕ್ಕಾಲು ಭಾಗ ನೀರೇ ಆಗಿದ್ದು, ಅದರಲ್ಲಿ ನಮಗೆ ದೊರಕುವ ರೂಪದಲ್ಲಿರುವ ಶುದ್ಧ ನೀರು ಕೇವಲ ಶೇ. 0.06 ಆಗಿದೆ!

ನೀರು ಅತ್ಯಮೂಲ್ಯವಲ್ಲದೆ ಇನ್ನೇನು ಮತ್ತೆ!(ಈ ಪೋಸ್ಟಿಗೆ ಮಾಹಿತಿ ದೊರಕಿಸಿಕೊಟ್ಟದ್ದು ಶ್ರೀ ಅಬ್ದುಲ್ ಕಲಾಮರ ದಿ ಸೈಂಟಿಫಿಕ್ ಇಂಡಿಯನ್ ಎಂಬ ಪುಸ್ತಕ. ಮಾಹಿತಿಯೇನು ಬಂತು, ಪೂರ್ತಿಯಾಗಿ ಇದು ತರ್ಜುಮೆಯೆಂದರೂ ತಪ್ಪಿಲ್ಲ.)

-ಅ
19.04.20117.45PM

Saturday, March 26, 2011

ಶೆರ್ಪಾಗಳು - ೧

ಬಹುಶಃ ಶೆರ್ಪಾಗಳ ಸೃಷ್ಟಿಯಾಗದಿದ್ದರೆ ಎವೆರೆಸ್ಟ್ ಶಿಖರವನ್ನು ಯಾರೂ ಸಹ ಏರಲು ಸಾಧ್ಯವೇ ಇರುತ್ತಿರಲಿಲ್ಲವೆನಿಸುತ್ತೆ. ಹಿಮಾಲಯದ ಪರ್ವತಾರೋಹಣದ ಬಗ್ಗೆ ಶೆರ್ಪಾಗಳನ್ನು ಬದಿಗಿಟ್ಟು ಯೋಚಿಸುವುದೂ ಸಹ ಅಸಾಧ್ಯ! ಹಿಮಾಲಯ ಪರ್ವತ ಶ್ರೇಣಿಗೆ ಸೇರಿದ ಈ ಶೆರ್ಪಾಗಳ ತವರು ಪೂರ್ವ ನೇಪಾಳದ ಸೋಲು - ಖುಂಬು ಜಿಲ್ಲೆ. ನೇಪಾಳದ ಈ ಭಾಗ ಲ್ಹೋತ್ಸೆ, ನುಪ್ಸೆ, ಪುಮೊರಿ, ಚೊ ಒಯು ಎಂಬ ಹಿಮಭರಿತ ಸ್ಥಳಗಳಿಂದ ಆವೃತವಾಗಿದೆ. ನಾಮ್‍ಚೆ ಬಜಾರ್ ಎಂಬ ಪ್ರಮುಖ ಹಳ್ಳಿಯು ಎವೆರೆಸ್ಟಿನ ಬುಡದಲ್ಲೇ ಇದೆ.


ಸುಮಾರು ಆರು ನೂರು ವರ್ಷಗಳ ಕೆಳಗೆ ಪೂರ್ವದ ಟಿಬೆಟ್ಟಿನಿಂದ ನೇಪಾಳಕ್ಕೆ ವಲಸೆ ಬಂದು ಬಿಡಾರ ಹೂಡಿದವರು ಈ ಶೆರ್ಪಾಗಳು. ಶೆರ್ಪಾ ಎಂದರೆ - ಪೂರ್ವ ದಿಕ್ಕಿನ ಜನ ಎಂದರ್ಥ. ಟಿಬೆಟ್ಟಿನ ಸಮಸ್ಯೆಯಿಂದಲೋ, ಹೊಸ ಆವಾಸ ಸ್ಥಾನಕ್ಕಾಗಿಯೋ, ಆರು ನೂರು ವರ್ಷಗಳಿಂದಲೂ ನೇಪಾಳಕ್ಕೆ ವಲಸೆ ಬರುತ್ತಲೇ ಇದ್ದಾರೆ. ಅಲ್ಲಿನ ಬೌದ್ಧ ಧರ್ಮದ ಅನುಯಾಯಿಗಳಾಗಿದ್ದರೂ, ಇಲ್ಲಿಗೆ ಬಂದು ಚೊಮೊಲುಂಗ್ಮಾ (ಮೌಂಟ್ ಎವೆರೆಸ್ಟ್)ನ ಪೂಜೆ ಮಾಡುತ್ತಾರೆ. ಗದ್ದಲದ ಪ್ರಪಂಚದಿಂದ ದೂರವಿರುವ ಇವರು ಜೋಳ ಮತ್ತು ಆಲುಗೆಡ್ಡೆಯನ್ನು ಬೆಟ್ಟಗಳ ಬದಿಯಲ್ಲಿಯೇ ಬೆಳೆದುಕೊಂಡು ಶಾಂತಿಯುತ ಜೀವನವನ್ನಾಚರಿಸುತ್ತಿರುತ್ತಾರೆ. ಇವರದು ಕಠಿಣ ಬದುಕು, ಆದರೆ ಈ ಜನ ತಮ್ಮ ಬದುಕಿಗಿಂತ ಕಠಿಣರು. ಹಿಮಾಲಯದ ದನ (ಯಾಕ್)ವನ್ನು ಮೇಯಿಸುತ್ತಾ ಮತ್ತು ಅವುಗಳ ಕೂದಲಿನಿಂದ ಬೆಚ್ಚನೆಯ ಬಟ್ಟೆಯನ್ನು ನೇಯುತ್ತಾ ತಮ್ಮ ಬೇಸಿಗೆಯನ್ನು ಕಳೆಯುತ್ತಾರೆ. ಚಳಿಗಾಲದಲ್ಲಿ ಹೊರಗೆ ಬರುವುದಿಲ್ಲ. ಪ್ರಯಾಣಿಕರನ್ನು ನಗು ನಗುತ್ತಾ ತಮ್ಮ ಮನೆಗಳೊಳಗೆ ಸ್ವಾಗತಿಸಿ ಬಿಸಿ ಬಿಸಿ ಚಹವನ್ನು ನೀಡಿ ಊಟ ಉಪಚಾರಗಳನ್ನು ಮಾಡಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ ಶೆರ್ಪಾಗಳು.


ಈಚೆಗೆ ಶೆರ್ಪಾಗಳು ಡಾರ್ಜಿಲಿಂಗ್‍ವರೆಗೂ ವಲಸೆ ಬಂದು ವ್ಯವಹಾರಿಕ ಬದುಕನ್ನು ನಡೆಸಲಾರಂಭಿಸಿದ್ದಾರೆ. ಆದರೆ ಈಗಲೂ ಅನೇಕರು ಸೋಲೊ-ಖುಂಬುವಿನಲ್ಲೇ ಉಳಿದಿದ್ದಾರೆ. ಡಾರ್ಜಿಲಿಂಗಿನಲ್ಲೇ ಇವರನ್ನು ಮೊದಲು ಗುರುತಿಸಿದ್ದು! ಡಾರ್ಜಿಲಿಂಗಿನವರ ಭಾಷೆಯೇ ಬೇರೆ, ಶೆರ್ಪಾಗಳ ಭಾಷೆಯೇ ಬೇರೆ. ಇವರ ಭಾಷೆ ಟಿಬೆಟ್ಟಿನಿಂದ ಕವಲೊಡೆದು ಅದಕ್ಕೆ ತೀರಾ ಸಮೀಪವಾಗಿದೆ. ಆದರೆ ಟಿಬೆಟ್ ಭಾಷೆಗೂ ಶೆರ್ಪಾಗಳ ಭಾಷೆಗೂ ಸಾಕಷ್ಟು ಭೇದವಿದೆ.

ಇವರ ನಾಮಕರಣ ಶೈಲಿಯು ಬಹಳ ವಿನೋದವೆನಿಸುತ್ತೆ ನಮಗೆ; ಕಾರಣ, ಅನೇಕರ ಹೆಸರು ಒಂದೇ ಆಗಿರುತ್ತೆ. ಒಬ್ಬರಿಗೊಬ್ಬರು ಗುರುತಿಸಿಕೊಳ್ಳುವುದು ಸಂಖ್ಯೆಗಳಿಂದ! ಆಂಗ್ ಶೆರಿಂಗ್ ೧, ಆಂಗ್ ಶೆರಿಂಗ್ ೨ ಹೀಗೆ!! ಬಹುತೇಕ ಜನರ ಹೆಸರುಗಳು ವಾರಗಳ ಹೆಸರುಗಳಾಗಿರುತ್ತೆಂದರೆ ಆಶ್ಚರ್ಯ ಪಡಬೇಕಿಲ್ಲ. ದವಾ (ಸೋಮ), ಮಿಂಗ್ಮಾ (ಮಂಗಳ), ಲ್ಹಾಕ್ಪಾ (ಬುಧ), ಫುರ್ಬಾ (ಗುರು), ಪಸಂಗ್ (ಶುಕ್ರ), ಪೆಂಬಾ (ಶನಿ) ಮತ್ತು ನಿಮ (ಭಾನು).

ಶೆರ್ಪಾಗಳು ಬೌದ್ಧ ಧರ್ಮಾನುಯಾಯಿಗಳೆಂದು ಆಗಲೇ ಹೇಳಿದೆನಷ್ಟೆ. ಆದರೂ ಉಳಿದ ಸಾಮಾನ್ಯ ಬುಡಕಟ್ಟಿನ ಜನಾಂಗದವರಂತೆ ಇವರಲ್ಲೂ ಮೂಢನಂಬಿಕೆಗಳು ಮನೆಮಾಡಿಕೊಂಡಿವೆ. ಐವತ್ತರ ದಶಕದಲ್ಲಿ ನಂದಾ ಕೋಟ್ ಪರ್ವತಾರೋಹಣ ಕಾರ್ಯಕ್ರಮದಲ್ಲಿ ಮುಂದಾಳತ್ವ ವಹಿಸಿದ್ದ ಆಂಗ್ ಶೆರಿಂಗ್ ಎಂಬಾ ಶೆರ್ಪಾ ಶಿಖರದ ಕೊನೆಯ ಭಾಗವನ್ನೇರಲು ನಿರಾಕರಿಸಿಬಿಟ್ಟ. ಯಾಕೆಂದರೆ ಹಿಂದಿನ ರಾತ್ರಿ ಅವನ ಕನಸಿನಲ್ಲಿ ನಂದಾ ದೇವಿಯು ಬಂದು ಈ ಪರ್ವತವನ್ನು ಏರಕೂಡದೆಂದು ಅಪ್ಪಣೆ ಮಾಡಿದ್ದಳಂತೆ.


ಶೆರ್ಪಾಗಳ ನಂಬಿಕೆಗಳೇ ಹೀಗೆ. ಚೋಮೋಲುಂಗ್ಮಾ ಅಥವಾ ಜೋಮೋಲಂಗ್ಮಾ (ಇಂದಿನ ಮೌಂಟ್ ಎವೆರೆಸ್ಟ್) ಪರ್ವತದಲ್ಲಿ ಜೋಮೋ ಮಿಯೋ ಸಂಗ್ಮಾ ಎಂಬಾಕೆ ಇದ್ದೂ ಆಕೆಯು ಇಡೀ ಪರ್ವತ ಪ್ರದೇಶದ ಜನತೆಗೆಲ್ಲಾ ಊಟವನ್ನು ಕೊಡುತ್ತಾಳೆ. ಅವಳ ತಂಗಿಯರಾದ ಟಾಷಿ ಸೆರಿಂಗ್ಮಾ ಎಂಬಾಕೆಯು ಗೌರಿಶಂಕರದಲ್ಲಿದ್ದು, ಆಯುಷ್ಯವನ್ನು ಕರುಣಿಸುತ್ತಾಳೆ. ಮತ್ತೊಬ್ಬ ತಂಗಿಯಾದ ಟೇಕರ್ ಡೊಸಂಗ್ಮಾ ಎಂಬಾಕೆಯು ಒಳ್ಳೆಯ ಭವಿಷ್ಯವನ್ನು ನೀಡುತ್ತಾಳೆ. ಚೊಪೆನ್ ಡಿನ್ಸಂಗ್ಮಾ ಎಂಬಾಕೆಯು ಐಶ್ವರ‍್ಯವನ್ನು ಕೊಟ್ಟರೆ ಥಿಂಗಿ ಶೆಲ್ಸಂಗ್ಮಾ ನೀಡುವುದು ಮಾನಸಿಕ ಶಕ್ತಿಯನ್ನು. ಗುರು ರಿಂಪೊಚೆ - ಟಿಬೆಟ್ಟಿನ ಬೌದ್ಧ ಧರ್ಮದ ಸ್ಥಾಪಕನು ಈ ಖುಂಬು ಕಣಿವೆಯಲ್ಲಿ ತಪಸ್ಸು ಮಾಡಿದನೆಂಬ ಪ್ರತೀತಿಯೂ ಇದೆ.

ಯೇತಿಗಳ ಬಗ್ಗೆ ಶೆರ್ಪಾಗಳಿಗೆ ಅಪಾರವಾದ ನಂಬಿಕೆ. ಯೇತಿಯೆಂದರೆ ಹಿಮದಲ್ಲಿ ವಾಸಿಸುವ ಮನುಷ್ಯ. ಅವರ ನಂಬಿಕೆಯ ಪ್ರಕಾರ ಹಿಮದಲ್ಲಿ ವಾಸಿಸುವ ರಾಕ್ಷಸನೆಂದೇ ಹೇಳಬಹುದು. ಆದರೆ ಯಾವ ಶೆರ್ಪಾನೂ ಸಹ ಇದುವರೆಗೂ ತಾನು ಯೇತಿಯನ್ನು ನೋಡಿದ್ದೇನೆಂದು ಸಾಕ್ಷ್ಯ ಒದಗಿಸಿಲ್ಲ. ಅವರ ಪ್ರಕಾರ ಯಾರಾದರೂ ಯೇತಿಯನ್ನು ನೋಡಿದರೆ ಅವರು ಕೂಡಲೆಯೇ ಸಾಯುತ್ತಾರೆ! ಎಂ.ಎಸ್ ಕೋಹ್ಲಿಯವರು ತಮ್ಮ ಮೊದಲ ಎವೆರೆಸ್ಟ್ ಪರ್ವತಾರೋಹಣದ, ಅಂದರೆ ಸುಮಾರು ಅರವತ್ತರ ದಶಕದ ಸಮಯದಲ್ಲಿ ತಮ್ಮ ಅನುಭವವೊಂದನ್ನು ದಾಖಲಿಸುತ್ತಾರೆ. ಅವರು ಟೆಂಟಿನೊಳಗೆ ನಿದ್ರಿಸುತ್ತಿರುವಾಗ ಇಬ್ಬರು ಶೆರ್ಪಾಗಳು ಬಂದು ಆಶ್ರಯ ಕೊಡಿಯೆಂದು ಕೇಳಿಕೊಂಡರಂತೆ. ಇಬ್ಬರೂ ಗಾಬರಿಯಾಗಿದ್ದರಿಂದ ಏನಾಯಿತೆಂದು ಕೇಳಿದ್ದಕ್ಕೆ, ಇಲ್ಲಿ ಯೇತಿಯಿದೆಯೆಂಬ ಗುಮಾನಿಯು ಬಂದಿದೆ, ಹಾಗಾಗಿ ಅದನ್ನು ನೋಡದೇ ಇರುವ ಸಲುವಾಗಿ ವಿರುದ್ಧ ದಿಕ್ಕಿನಲ್ಲಿ ಓಡಿಬಂದೆವು ಎಂದು ಹೇಳಿದರಂತೆ.


ಇವರು ಪರ್ವತಗಳ ಆರಾಧಕರೆಂಬುದಕ್ಕೆ ಸಾಕ್ಷಿಯಾಗಿ ಇವರದು ಇನ್ನೊಂದು ನಂಬಿಕೆಯಿದೆ. ಯಾರಾದರೂ ಎಡುವಿ ಬಿದ್ದು ಸತ್ತು ಹೋದರೆ ಅದು ಆಕಸ್ಮಿಕವಲ್ಲ. ಆ ವ್ಯಕ್ತಿಯನ್ನು ಪರ್ವತದೇವನು ಆಹುತಿಯಾಗಿ ಪಡೆದುಕೊಂಡದ್ದು. ಒಂದು ವೇಳೆ ಯಾರಾದರೂ ಹಾಗೆ ಸತ್ತರೆ, ಇನ್ನು ಮುಂದಿನ ವರ್ಷಗಳಲ್ಲಿ ಆ ಜಾಗಕ್ಕೆ ಅದೇ ದಿನ, ಅದೇ ಸಮಯದಲ್ಲಿ ಬೇರೆ ಯಾರಾದರೂ ಬಂದರೆ ಅವರೂ ಸಾಯುತ್ತಾರೆ. ಅದೂ ಕೂಡ ಪರ್ವತ ದೇವನ ಆಹುತಿಯೇ.ತೀರಿಕೊಂಡ ಶೆರ್ಪಾಗಳ ಸಂಸ್ಕಾರವನ್ನು ಮಾಡುವುದಕ್ಕೆ ಒಬ್ಬ ಲಾಮಾ ಬರುತ್ತಾನೆ. ಲಾಮಾ ಎಂದರೆ ನಮ್ಮಲ್ಲಿ ಪುರೋಹಿತರು ಇದ್ದ ಹಾಗೆ. ಶೆರ್ಪಾಗಳ ಸಂಸ್ಕಾರ ಕ್ರಿಯೆಗೆ ಫೋವಾ ಎಂದು ಹೆಸರು. ಪ್ರಾರ್ಥನೆಯನ್ನು ಮಾಡಿದ ನಂತರ ಶವದ ತಲೆಯ ಮೇಲಿನ ಕೂದಲನ್ನು ಲಾಮಾ ಕೀಳುತ್ತಾನೆ. ಆತ್ಮವು ತಲೆಯಿಂದಲೇ ಹೊರಗೆ ಹೋಗಬೇಕು, ಬೇರೆ ರಂಧ್ರಗಳಿಂದ ಹೋದರೆ ಒಳ್ಳೆಯದಾಗುವುದಿಲ್ಲ. ಆತ್ಮತತ್ತ್ವದ ನಂಬಿಕೆಯು ಬೌದ್ಧರಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಹಿಮಾಲಯದ ಶೆರ್ಪಾಗಳೆಂಬ ಬೌದ್ಧರಲ್ಲಂತೂ ಇದೆ.

........

ಶೆರ್ಪಾಗಳ ಬಗ್ಗೆ ಇನ್ನಷ್ಟು ಅಧ್ಯಯನವನ್ನು ಮುಂದೆ ಮಾಡೋಣ..

-ಅ
26.03.2011
11PM

Tuesday, March 15, 2011

ಅಪ್ಪನ ಕಥೆ - ಭಾಗ ೮

ನನಗಿರುವ ಈ ಬಾಲದಿಂದ ನೀವು ನನ್ನನ್ನು ಮೀನೆಂದೋ, ಅಥವಾ ಹಾವೆಂದೋ, ಅಥವಾ ಸ್ಟಿಂಗ್ ರೇ ಎಂದೋ ಭಾವಿಸಬಹುದು. ಆದರೆ ನಾನು ಕಪ್ಪೆಯ ಮರಿ ಎಂಬ ಅರಿವು ನಿಮಗೆ ಬರಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಆದರೂ ನಾನು ನಮ್ಮಪ್ಪನಂತೆ ದೊಡ್ಡ ಕಪ್ಪೆಯಾಗಲು ಇನ್ನೂ ಕಾಲ ಇದೆ.ನಮ್ಮಪ್ಪನಂತಾಗಿ ಮಾಡುವ ಸಾಹಸವಾದರೂ ಏನು? ವಟಗುಟ್ಟುವ ಪ್ರಾಣಿ ಎಂದು ಕವಿಗಳಿಂದ ತೆಗಳಿಸಿಕೊಳ್ಳುವುದೋ? ಇಲ್ಲಾ, ಪ್ರಯೋಗಾಲಯದಲ್ಲಿ ಶಿಲುಬೆಗೇರಿಸಿಕೊಳ್ಳಲ್ಪಡುವುದೋ? ಇಲ್ಲಾ, ಹಾವಿಗೋ ಬೆಕ್ಕಿಗೋ ಉದರನಿಮಿತ್ತವಾಗಬೇಕಾಗುವುದೋ? ಅದೇನಾಗುವೆನೋ ಗೊತ್ತಿಲ್ಲ, ಆದರೆ ನನ್ನಂತೆಯೇ ಇರುವ ಸಾವಿರ ಕಪ್ಪೆಗಳಿಗೆ ಅಪ್ಪನಂತೂ ಆಗಲೇ ಬೇಕು. ಅದೇನು ದೊಡ್ಡ ವಿಷಯ ಎನ್ನುತ್ತೀರೋ?

ಮಕ್ಕಳನ್ನು ಹೆರುವುದೆಂದರೆ ಅಷ್ಟು ಸುಲಭವೇ? ನನಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಹೆಣ್ಣಿನ ಬೆನ್ನ ಮೇಲೆ ಹತ್ತಬೇಕು. ನನ್ನ ಪುಟ್ಟ ಕೈಗಳಿಂದ ಅವಳ ಸೊಂಟವನ್ನು ಬಾಚಿ ತಬ್ಬಿಕೊಳ್ಳಬೇಕು. ಬರೀ ಸೊಂಟವೇ? ಉಹ್ಞೂಂ, ತಲೆಯ ಆಸುಪಾಸು, ಹಿಂಗಾಲಿನ ಆಸುಪಾಸನ್ನು ತಬ್ಬಿಕೊಂಡು ಹಿಡಿದುಕೊಳ್ಳಬೇಕು - ಭದ್ರವಾಗಿ. ಅದೇನು ಮಹಾ ಅನ್ನುತ್ತೀರೋ? ಈ ರೀತಿ ಹತ್ತಾರು ದಿನ ಹಿಡಿದುಕೊಂಡಿರಬೇಕಲ್ಲಾ? ಊಟ ನಿದ್ರೆಗಳಿಲ್ಲ! ಮತ್ತೆ ಇವಿಷ್ಟೂ ನೀರಿನಲ್ಲಿ ಮಾಡಬೇಕಲ್ಲಾ! ಇದೇನು ಕಾಮಕೇಳಿ ಎಂದುಕೊಳ್ಳದಿರಿ. ಜನನೇಂದ್ರಿಯಗಳೇ ಗಂಡುಗಳಿಗೆ ಇಲ್ಲದ ಮೇಲೆ, ಇನ್ನು ಹೆಣ್ಣನ್ನು ಸೇರುವುದಾದರೂ ಹೇಗೆ? ಇವಿಷ್ಟು ಕಾಲವೂ ಒಂದು ಹನಿ ಕೂಡ ವೀರ್ಯಸ್ಖಲನವಾಗಿರುವುದಿಲ್ಲ!ತಬ್ಬಿಕೊಂಡು ದಿನಗಟ್ಟಲೆ ಅವಳ ಬೆನ್ನ ಮೇಲೆ ಕುಳಿತಿದ್ದರೆ ಶುಭ ಮುಹೂರ್ತದಲ್ಲಿ ಸಾವಿರಾರು ಮೊಟ್ಟೆಗಳನ್ನು ಗೊಂಚಲು ಗೊಂಚಲಾಗಿ ಇಡುತ್ತಾಳೆ. ನನ್ನ ಕಾಮಪ್ರಚೋದನೆಯೇನಿದ್ದರೂ ಈ ಮೊಟ್ಟೆಗಳು ಬಂದ ಮೇಲೆಯೇ. ವೀರ್ಯವು ಹೊರಬಂದಿರುವ ಮೊಟ್ಟೆ-ಗೊಂಚಲನ್ನು ನೇರವಾಗಿ ಮುಟ್ಟುತ್ತದೆ. ನಿಷೇಚನೆಯು (Fertilization) ಅವಳ ದೇಹದ ಹೊರಗೆ ಆಗುವುದರಿಂದ ಅವಳೇನೂ ಮಕ್ಕಳನ್ನು ಹೊರುವುದು, ಹೆರುವುದು ಏನೂ ನಡೆಯುವುದಿಲ್ಲ. ಸಾವಿರಾರು ಮೊಟ್ಟೆಗಳಲ್ಲಿ ಎಲ್ಲೋ ಒಂದೋ ಎರಡೋ ಬದುಕಿಕೊಳ್ಳುತ್ತವೆ - ನನ್ನ ಹಾಗೆ - ಮುಂದೆ ಹಾವಿಗೋ ಬೆಕ್ಕಿಗೋ ಉದರನಿಮಿತ್ತವಾಗಲೋ, ಪ್ರಯೋಗಾಲಯದಲ್ಲಿ ಶಿಲುಬೆಗೇರಲೋ - ಏನೋ ಒಂದು ಹಣೆಬರಹವನ್ನನುಭವಿಸಲು.ಹಳೆಯ "ಅಪ್ಪನ ಕಥೆ"ಗಳು ಇಲ್ಲಿವೆ.

-ಅ
15.03.2011
10PM

Wednesday, February 02, 2011

ಕರುಳಿನ ಕೂಗುಅಧ್ಯಾಪಕನಾದ ನಾನು, ನಮ್ಮ ಶಾಲೆಯಲ್ಲಿರುವ ಕೆಲವು ಅವಳಿ-ಜವಳಿ ಮಕ್ಕಳನ್ನು ಸರಿಯಾಗಿ ಗುರುತಿಸಲು ಬಹಳ ಸಮಯ ತೆಗೆದುಕೊಂಡೆ - ಅದೂ ಆ ಅವಳಿ ಮಕ್ಕಳಿರುವ ತರಗತಿಗೆ ನಾನು ಹೋಗಿ ಹೋಗಿ, ಪಾಠ ಮಾಡುತ್ತಿದ್ದುದರಿಂದ! ನನ್ನ ಸಹೋದ್ಯೋಗಿಗಳು ಕೆಲವರು "ಯಾವಾಗಲೂ ನಂಗೆ ಇವರಿಬ್ಬರಲ್ಲಿ ಎ ಯಾರು ಬಿ ಯಾರು ಅಂತ ಗೊಂದಲ ಆಗುತ್ತೆ" ಎಂದು ಹೇಳುತ್ತಲೇ ಇರುತ್ತಾರೆ. ನನಗೂ ಈ ಗೊಂದಲ ಆಗುವುದುಂಟು. ನಮ್ಮ ಸಿನಿಮಾಗಳಲ್ಲಂತೂ, ದಿಲೀಪ್ ಕುಮಾರ್ ಇಂದ ಹಿಡಿದು ಹೃತಿಕ್ ರೋಷನ್ ವರೆಗೂ, ರಾಜ್ ಕುಮಾರ್ ಇಂದ ಹಿಡಿದು ಸುದೀಪ್ ವರೆಗೂ (ಬೇರೆ ಭಾಷೆಗಳಲ್ಲೇನೂ ಕಡಿಮೆಯಿಲ್ಲ) ಎಲ್ಲರೂ ತಮ್ಮ ಹೆತ್ತ ತಾಯಿಯನ್ನೂ ಗೊಂದಲಕ್ಕೀಡು ಮಾಡಿರುವುದನ್ನು ನಾವು ನೋಡಿದ್ದೇವೆ.ಆದರೆ ತಾಯಿ ಮತ್ತು ಮಕ್ಕಳು ಅತ್ಯಂತ ಹತ್ತಿರದ ಬಾಂಧವ್ಯವನ್ನನುಸರಿಸಲು ಪ್ರಕೃತಿಯು ಅದ್ಭುತವಾದ ರೀತಿಯನ್ನು ನೀಡಿದೆ. ಮನುಷ್ಯರ ಕಥೆಯನ್ನು ಸದ್ಯಕ್ಕೆ ಬದಿಗಿಟ್ಟು ಪ್ರಾಣಿಗಳ ಕಡೆ ಗಮನ ಹರಿಸೋಣ. ಬುದ್ಧಿವಂತ ಜೀವಿ ಮನುಷ್ಯನಿಗೇ ಅಷ್ಟು ಕಷ್ಟವಾಗಬೇಕಾದರೆ, ಅದೂ ಕೇವಲ ಎರಡು ಮಕ್ಕಳನ್ನು ನೋಡಿಯೇ, ಇನ್ನು ಪ್ರಾಣಿಗಳು ತಮ್ಮ ಮಕ್ಕಳನ್ನು ಗುರುತಿಸುವುದಾದರೂ ಹೇಗೆ? ಇಷ್ಟಕ್ಕೂ ಯಾವುದಾದರೂ ತಾಯಿ ಪ್ರಾಣಿಗೆ ತನಗಿರುವ ನಾಲ್ಕೋ ಐದೋ ಮರಿಗಳನ್ನು ಬೇರೆ ಬೇರೆಯಾಗಿ ಗುರುತಿಸಲು ಸಾಧ್ಯವೇ? ಹೌದೆನ್ನುತ್ತೆ ವೈಜ್ಞಾನಿಕ ಅಧ್ಯಯನ. ಆದರೆ ಸರಿಸೃಪಗಳು ಕೀಟಗಳು ಕ್ರಿಮಿಗಳು ಈ ಗುಣಕ್ಕೆ ಹೊರತಾಗಿವೆ. ಸಂಬಂಧಗಳನ್ನು ಮರೆತು ವರ್ತಿಸುವವರನ್ನು cold blooded animal ಎಂದು ಹೋಲಿಸುವುದಿದೆಯಷ್ಟೆ?

ಬಹುತೇಕ ಪ್ರಾಣಿಗಳ ಮರಿಗಳು ತಾಯಿಯ ಪೋಷಣೆಯಲ್ಲಿಯೇ ಬೆಳೆಯುತ್ತವೆಯಾದ್ದರಿಂದ ತಾಯಿಯೊಡನೆ ಮರಿಗಳ ನಿಕಟ ಬಾಂಧವ್ಯ ಸ್ವಾಭಾವಿಕವಾಗಿಯೇ ಅಗತ್ಯ. ಸಸ್ತನಿಗಳು ಸಾಮಾನ್ಯವಾಗಿ ತಮ್ಮ ಮರಿಗಳನ್ನು ವಾಸನೆಯಿಂದ ಗುರುತಿಸುತ್ತವೆ. ತಾಯಿಯು ತನ್ನ ಮರಿಗಳನ್ನು ಅವುಗಳು ಹುಟ್ಟಿದ ತಕ್ಷಣವೇ ಮೂಸಿ ತನ್ನ ಸ್ಮೃತಿಯಲ್ಲಿ ದಾಖಲೆ ಮಾಡಿಕೊಂಡುಬಿಡುತ್ತವೆ. ಒಂದು ಕುರಿಯು ಎರಡೋ ಮೂರೋ ಮರಿಗಳನ್ನು ಹಾಕಿತೆಂದಿಟ್ಟುಕೊಳ್ಳೋಣ. ಒಂದೊಂದು ಮರಿಯ ವಾಸನೆಯೂ ಭಿನ್ನವಾಗಿದ್ದು, ಅದರ ಭಿನ್ನತೆಯೇ ತಾಯಿಗೆ ಮರಿಯನ್ನು ಗುರುತಿಸುವ ಮಾನದಂಡ. ಮಂದೆಯಲ್ಲಿರುವ ಸಾವಿರಾರು ಕುರಿಗಳಿಗೆ ತಮ್ಮ ತಮ್ಮ ಮರಿಗಳನ್ನು ಗುರಿತಿಸಲು ವಾಸನೆಯೇ ಸಾಧನ.

ಇನ್ನೂ ಉನ್ನತ ಸಸ್ತನಿಗಳಾದ ಆನೆಗಳು, ಬೆಕ್ಕು - ನಾಯಿ - ಕೋತಿ ಜಾತಿಯ ಪ್ರಾಣಿಗಳು - ಇವೆಲ್ಲವೂ ವಾಸನೆಯ ಜೊತೆ ಸ್ಪರ್ಶವನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತವೆ. ಪ್ರತಿಯೊಂದು ದೇಹದ ಸ್ಪರ್ಶವೂ ಭಿನ್ನವಾದುದರಿಂದ (ವಾಸನೆಯೂ ಕೂಡ) ತನ್ನ ಮರಿ ಯಾವುದು, ಬೇರೆ ಮರಿ ಯಾವುದು ಎಂಬ ವ್ಯತ್ಯಾಸ ಈ ತಾಯಿಗಳಿಗೆ ಗೊತ್ತಾಗುತ್ತೆ. ಮನುಷ್ಯರಲ್ಲಿಯೂ ಈ ವಿಷಯದಲ್ಲಿ ಸ್ಪರ್ಶವು ಕೆಲಸ ಮಾಡುತ್ತೆ. ಬೇರೆಯವರು ಎತ್ತಿಕೊಂಡರೆ ಅತ್ತು ರಂಪ ಮಾಡುವ ಕೇವಲ ಮೂರೇ ತಿಂಗಳಾದ ಮಗುವು ತನ್ನ ತಾಯಿಯು ಎತ್ತಿಕೊಂಡ ತಕ್ಷಣವೇ ಸಮಾಧಾನಗೊಳ್ಳುವುದನ್ನು ನಾವು ಅದೆಷ್ಟು ಸಲ ನೋಡಿಲ್ಲ? ತಾಯಿಗೂ ಈ ಸ್ಪರ್ಶ ವ್ಯತ್ಯಾಸ ತಿಳಿಯುವುದೆಂಬುದೂ ಸತ್ಯ.

ಆಸ್ಟ್ರಿಯಾದ ಪ್ರಕೃತಿ ಶಾಸ್ತ್ರಜ್ಞ ಡಾ. ಲಾರೆಂಜ಼್ ಎಂಬಾತ ಬಾತುಕೋಳಿಗಳ ಮೇಲೆ ಪ್ರಯೋಗವೊಂದನ್ನು ನಡೆಸಿದನಂತೆ. ಇನ್ನೇನು ಮೊಟ್ಟೆಯೊಡೆದು ಮರಿಯಾಗಬೇಕೆಂದಿರುವಾಗ ತಾಯಿ ಪಕ್ಷಿಯನ್ನು ಮರಿಗಳಿಂದ ಬೇರ್ಪಡಿಸಿ, ಮರಿಗಳು ಹೊರ ಬರುವ ವೇಳೆ ಮೊಟ್ಟೆಗಳೆದುರು ತಾನೇ ಕುಳಿತುಕೊಂಡು ತಾಯಿ ಹಕ್ಕಿಯ ಶಬ್ದವನ್ನು ಮಾಡಿದನಂತೆ. ಆ ಬಾತುಕೋಳಿ ಮರಿಗಳು ಈತನನ್ನೇ ತಾಯಿಯೆಂದು ಭಾವಿಸಿ, ಈತ ಹೋದಲ್ಲೆಲ್ಲಾ ಹಿಂಬಾಲಿಸಿ, ಕೂಗಿದಾಗ ತಾವೂ ಕೂಗಿ, ಜೊತೆಗೇ ಇದ್ದವಂತೆ. ಬಹುತೇಕ ಪಕ್ಷಿಗಳು ಧ್ವನಿಯನ್ನಾಧರಿಸಿಯೇ ತಮ್ಮ ಮರಿಗಳನ್ನು ಗುರುತಿಸುವುವು. ಮರಿಯೂ ಸಹ ತಾಯಿಯನ್ನು ಗುರುತಿಸಲು ಧ್ವನಿಯನ್ನೇ ಅವಲಂಬಿಸುವುದು.ವಾನರ ಪ್ರಾಣಿಗಳು ಮನುಷ್ಯರಂತೆಯೇ ಧ್ವನಿ, ಸ್ಪರ್ಶದ ಜೊತೆಗೆ ಮರಿಯ (ಮಗುವಿನ) ಆಕಾರ, ಗಾತ್ರಗಳನ್ನೂ ಗಮನಿಸಿ ಮರಿಗಳನ್ನು ಗುರುತಿಸುತ್ತವೆ. ಮನುಷ್ಯರ ಮಕ್ಕಳೂ ಸಹ ತಾಯಿಯ ಸ್ಪರ್ಶವನ್ನು ಹೇಗೆ ಗುರುತಿಸುವುವೆಂದು ನೋಡಿದೆವು. ಸ್ಪರ್ಶ ಮಾತ್ರವಲ್ಲದೆ, ತಾಯಿಯ ಧ್ವನಿಯನ್ನು ಬೇರೆಯವರ ಧ್ವನಿಗಳಿಂದ ಬೇರ್ಪಡಿಸಿ ಗುರುತಿಸುವ ಗುಣವನ್ನು ಪ್ರಕೃತಿಯು ಕರುಣಿಸಿದೆ. ಈ ಗುಣಕ್ಕೇ ಕರುಳಿನ ಕೂಗು ಎನ್ನಬಹುದು!

- ಅ
02.02.2011
3.30PM

ಒಂದಷ್ಟು ಚಿತ್ರಗಳು..