Tuesday, November 23, 2010

ಬುದ್ಧಿವಂತರಿಗೆ ಪ್ರಶಸ್ತಿ ಪ್ರದಾನ - ೧

ಈ ಲೋಕದ ಹಲವು ಬುದ್ಧಿವಂತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಗಳನ್ನು ಸ್ವೀಕರಿಸಿದ ಬುದ್ಧಿವಂತರು ತಮ್ಮ ತಮ್ಮ ಪರಿಚಯವನ್ನು ಮಾಡಿಕೊಳ್ಳಲು ಬಯಸಿದ್ದಾರೆ. ಕೆಲವರ ಪರಿಚಯ ನಮಗಿದ್ದೀತು. ಆದರೆ ತಮ್ಮ ಬಗ್ಗೆ, ತಮ್ಮ ಬುದ್ಧಿವಂತಿಕೆಯ ಬಗ್ಗೆ ತಾವೇ ಏನು ಹೇಳುತ್ತಾರೋ ಕೇಳೋಣ.

೧. "ಕುರಿಗಳು ಸಾರ್ ಕುರಿಗಳು... ನಾವ್ ಕುರಿಗಳು... " - ಕವಿಯಂತೂ ನಮ್ಮನ್ನು ಮನುಷ್ಯರಿಗೆ ಹೋಲಿಸಿಬಿಟ್ಟಿದ್ದಾರೆ. ಕವಿಗಳಿಗೇನು ಗೊತ್ತು ನಮ್ಮಲ್ಲಿನ ಬುದ್ಧಿಶಕ್ತಿ! ಅವರೇನಿದ್ದರೂ ಸ್ವಾರ್ಥ ಕೋಗಿಲೆಗಳನ್ನು, ಪೆದ್ದ ನವಿಲುಗಳನ್ನು ಹೊಗಳುವವರೇ. ನಮ್ಮಲ್ಲಿರುವ ಒಗ್ಗಟ್ಟನ್ನು ಜನರು ಹಳ್ಳಕ್ಕೆ ಬೀಳುವ ಕುರಿಗಳು ಎಂದು ತಪ್ಪಾಗಿ ವ್ಯಾಖ್ಯಾನ ಮಾಡುತ್ತಾರೆ. ನಾವು ಮನುಷ್ಯರ ಮುಖವನ್ನೂ, ಬೇರೆ ಪ್ರಾಣಿಗಳ ಮುಖಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಶಕ್ತರೆಂದು ಇವರಿಗೆ ಗೊತ್ತಿಲ್ಲವೇನೋ ಅನ್ನಿಸುತ್ತೆ. ಏನು ನಾಯಿಗಳು ಮಾತ್ರವೇ ಗುರುತಿಸುವ ಶಕ್ತಿ ಹೊಂದಿರುವುದು? ನಮಗೂ ಇದೆ! ಜೊತೆಗೆ ನಮಗೆ ಒಗ್ಗಟ್ಟಿದೆ. ನಾಯಿಗಳ ಹಾಗೆ ಕಿತ್ತಾಡುವುದಿಲ್ಲ. ನಾವು ಒಗ್ಗಟ್ಟಿನಲ್ಲಿರುವುದೇ ಬೇಟೆಗಾರ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲೆಂದು. ನಮಗೆ ಈ ಪ್ರಶಸ್ತಿ ಬಂದಿರುವುದು ಬಹಳ ಸಂತೋಷ ತಂದಿದೆ. ಈಗಲಾದರೂ ನಮ್ಮನ್ನು ಗುರುತಿಸಿದರಲ್ಲಾ!೨. ಟಾಮ್ ಎಂಡ್ ಜೆರ್ರಿ ಎಲ್ಲಾ ನಂಬಿಕೊಳ್ಳಬೇಡಿ ಮಕ್ಳೇ. ಅವೆಲ್ಲಾ ಸುಳ್ಳು. ನನ್ನ ಕೈಗೇನಾದರೂ ಫ್ರೆಡ್ ಕ್ವಿಂಬಿಯೋ ಹ್ಯಾನಾ ಬಾರ್ಬೆರಾನೋ ಸಿಕ್ಕರೆ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ. ಇಲಿಗಳಿಗೇನು ಗೊತ್ತು ಒಡೆಯನನ್ನು ಒಲಿಸಿಕೊಳ್ಳುವ ರೀತಿ. ನಾನು ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿದ್ದರೂ ಹೆಜ್ಜೆಯಿಟ್ಟುಕೊಂಡು ಬರುತ್ತಿರುವುದು ನನ್ನ ಸಾಕಿದವನೋ ಅಥವಾ ಯಾರೋ ಬೇರೆಯವರೋ ಎಂದು ಪತ್ತೆ ಹಚ್ಚಬಲ್ಲ ಶಕ್ತಿ ಇಲಿಗೆಲ್ಲಿಂದ ಬರಬೇಕು! ದುರ್ಬಲರು ಗೆಲ್ಲಬೇಕೆಂಬ ಕೆಟ್ಟ, ಅನೈಸರ್ಗಿಕ ಹಂಬಲದಿಂದಲೇ ಟಾಮ್ ಎಂಡ್ ಜೆರ್ರಿಯಲ್ಲಿ ನಮ್ಮನ್ನು ದಡ್ಡರೆಂದು ತೋರಿಸುವುದು! ಇಲಿಗಳನ್ನು ಬುದ್ಧಿವಂತರೆಂದು ಪ್ರಕ್ಷೇಪ ಮಾಡುವುದು!೩. ಬೆಕ್ಕುಗಳಿಗೆ ಇಲಿಗಳ ಮೇಲೆ ದ್ವೇಷ ಸ್ವಾಭಾವಿಕವೇ. ನಮಗೋ ಭೀತಿ. ಆದರೆ ಬುದ್ಧಿವಂತಿಕೆಗೇನು ಕೊರತೆಯೇ? ಮನುಷ್ಯರು ನಮ್ಮನ್ನು ಹಿಡಿಯಲು ಪಡುವ ಹರಸಾಹಸವೇ ಸೂಚಿಸುವುದಿಲ್ಲವೇ ನಾವೆಷ್ಟು ಬುದ್ಧಿವಂತರು ಎಂದು? ಬೋನು ಇಡುತ್ತಾರಲ್ಲಾ, ಅದೂ ಮೋಸದಿಂದ. ಆ ಮೋಸದ ಬೋನಿನೊಳಕ್ಕೆ ಸಿಕ್ಕಿಕೊಂಡೆವು ಎಂದಿಟ್ಟುಕೊಳ್ಳಿ. ಒಂದು ಪಕ್ಷ ಬಿಡಿಸಿಕೊಂಡುಬಿಟ್ಟರೆ, ಮತ್ತೆಂದಿಗೂ ಅದೇ ಬೋನಿನೊಳಗೆ ಸಿಲುಕುವ ಸಾಧ್ಯತೆಯೇ ಇಲ್ಲ. ಬುದ್ಧಿ ಮಾತ್ರವಲ್ಲ, ಭಾವನೆಗಳೂ ಮುಖ್ಯ ಎಂಬುದು ನಾಯಿಗಳಿಂದ ನಾವೂ ಒಂದಿಷ್ಟು ಕಲಿತುಕೊಂಡಿದ್ದೇವೆ. ಬೆಕ್ಕುಗಳಂತೆ ಕದಿಯುವುದನ್ನಲ್ಲ. ನಮ್ಮ ಜೊತೆಗಾರರು ಅನೇಕರು ತಮ್ಮ ಬಾಳ ಸಂಗಾತಿಗಳನ್ನು ಕಳೆದುಕೊಂಡು ನೊಂದುಕೊಂಡಿದ್ದಾರೆ. ಒಂದಷ್ಟು ಜನ ಊಟ ಬಿಟ್ಟು ಸತ್ತೂ ಇದ್ದಾರೆ. ಈ ಬೆಕ್ಕುಗಳು ಎಂಥ ಸ್ವಾರ್ಥಿಗಳೆಂದರೆ, ನಮ್ಮ ಕಣ್ಣೆದುರೇ ತಾವೇ ಹೆತ್ತ ಮರಿಗಳ ಕೈಯಿಂದಲೇ ಬೇಟೆಗಳನ್ನು ಕಸಿದುಕೊಳ್ಳುತ್ತಾರೆ! ನಮ್ಮನ್ನು ಅರ್ಥ ಮಾಡಿಕೊಂಡು "ಮೌಸ್ ಹಂಟ್" ಎಂಬ ಅದ್ಭುತ ಚಿತ್ರ ಮಾಡಿದ್ದಾರೆ. ನೀವೂ ನೋಡಿ. ನಮಗೆ ಸಂದಿರುವ ಈ ಪ್ರಶಸ್ತಿಯನ್ನು ಎಲ್ಲ ಇಲಿಗಳಿಗೂ ಡೆಡಿಕೇಟ್ ಮಾಡುತ್ತಿದ್ದೇನೆ.೪. ಶ್ರೀರಾಮನಿಗೆ "ಸೇವೆ" ಮಾಡಿದವರು ನಾವು. ನಮ್ಮ ಬುದ್ಧಿ ಸಾಮರ್ಥ್ಯ ಶ್ರೀರಾಮನಿಗೇ ಗೊತ್ತು! ನಮಗೆ ನಮ್ಮದೇ ಆದ ಮನೆಗಳಿವೆ. ಎಷ್ಟೇ ಮರಗಳನ್ನು ಪರ್ಯಟನೆ ಮಾಡಿಕೊಂಡು ಬಂದರೂ ನಾವು ನಮ್ಮ ಮನೆಗಳನ್ನು ಮರೆಯುವುದಿಲ್ಲ. ನಮ್ಮ ದೈನಂದಿನ ಕೆಲಸವೇನು ಗೊತ್ತೇ? ಸಾವಿರಾರು ಕಾಯಿಗಳನ್ನು (ಗೋಡಂಬಿಯೋ, ಕಡಲೆಯೋ, ಬಾದಾಮಿಯೋ, ಇನ್ಯಾವುದೋ...) ಸಾವಿರಾರು ಜಾಗಗಳಲ್ಲಿ ಹೂತಿಟ್ಟು ಅವನ್ನು ರಕ್ಷಿಸುತ್ತೇವೆ. ಎಲ್ಲಿ ಹೂಳಿದ್ದೇವೆಂದು ಯಾರೂ ಮರೆಯುವುದಿಲ್ಲ. ಈಗಲೇ ತೋರಿಸಬಲ್ಲೆ ನಾನು ನೆನ್ನೆಯಷ್ಟೇ ಹೂಳಿಟ್ಟ ಏಳುನೂರು ಕಾಯಿಗಳನ್ನೂ!
ಈ ಪ್ರಶಸ್ತಿಯು ನಮಗೆ ಲಭಿಸಿದ್ದಕ್ಕೆ ನಾವು ಇದನ್ನು ಶ್ರೀರಾಮನಿಗೆ ಅರ್ಪಿಸುತ್ತೇವೆ.೫. ಬೆಕ್ಕು ಇಲಿಗಳಿಗೇ ಪ್ರಶಸ್ತಿ ಕೊಟ್ಟಿರಬೇಕಾದರೆ ಇನ್ನು ನಮಗೆ ಇರುವುದಿಲ್ಲವೇ? ನಾವುಗಳು ಮನುಷ್ಯರ ಬೆಸ್ಟ್ ಫ್ರೆಂಡ್ಸು! ನಮ್ಮ ಬಗ್ಗೆ ನಾವೇ ಏನು ಹೇಳಿಕೊಳ್ಳೋದು. ಎಲ್ಲರಿಗೂ ಗೊತ್ತು ನಮ್ಮ ಬಗ್ಗೆ. ಥ್ಯಾಂಕ್ಸ್ ಫಾರ್ ದಿ ಅವಾರ್ಡ್!..................................................................

ಮುಂದಿನ ಸಲ ಇನ್ನಷ್ಟು ಬುದ್ಧಿವಂತರನ್ನು ಕರೆದುಕೊಂಡು ಬರುತ್ತೇನೆ... ಇವತ್ತಿಗೆ ಇಷ್ಟು ಸಾಕು.

-ಅ
23.11.2010
10PM

ಒಂದಷ್ಟು ಚಿತ್ರಗಳು..