Tuesday, March 02, 2010

ಜಿರಲೆ

ಕಾಲೇಜಿನಲ್ಲಿದ್ದಾಗ ಜಿರಲೆಯನ್ನು ಡಿಸೆಕ್ಟ್ ಮಾಡುವುದು ನಮ್ಮ ಪಠ್ಯದ ವಿಷಯವಾಗಿತ್ತು. ಜೀವಶಾಸ್ತ್ರದ ಮೇಷ್ಟ್ರು ಜಿರಲೆಯನ್ನು ಬಹಳ ಹೊಗಳುತ್ತಿದ್ದರು. "ಜಿರಲೆ ಎಂಥ ಸುಂದರ ಜೀವಿ ಅನ್ನೋದು ನಿಮಗೆ ಸದ್ಯದಲ್ಲೇ ಗೊತ್ತಾಗುವುದರಲ್ಲಿದೆ" ಎಂದು ಹೇಳಿ ಪಾಠ ಶುರು ಮಾಡಿದ್ದರು. ಫಾರ್ಮಾಲಿನ್ನಿನೊಳಗಿಟ್ಟಿದ್ದ ಜಿರಲೆಗಳ ಹೆಣದ ರಾಶಿಯಿಂದ ಒಬ್ಬೊಬ್ಬರಿಗೊಂದೊಂದು ಜಿರಲೆಯನ್ನು ಕೊಟ್ಟು ಕತ್ತರಿಸಿ ಅದರ ಜೀರ್ಣಾಂಗವನ್ನು ಹೊರತೆಗೆದಿಡುವುದು ನಮ್ಮ ಕೆಲಸವಾಗಿತ್ತು. ಜಿರಲೆ ಕಂಡರೆ ಮೈಲಿ ದೂರ ಓಡುವ ಹೆಣ್ಣು ಮಕ್ಕಳೂ ಸಹ ನಮ್ಮೊಡನೆ ಇದ್ದುದು ಲ್ಯಾಬಿನಲ್ಲೆಲ್ಲ ಹಾಸ್ಯಾಸ್ಪದವಾಗಿತ್ತು. ಇನ್ನು ಕೆಲವು ಮಡಿವಂತರು ಡಿಸೆಕ್ಷನ್ ಕೆಲಸವನ್ನು ತಪ್ಪಿಸಿಕೊಳ್ಳಲು ಕೈ ವಾಸನೆಯಾದೀತು ಎನ್ನುವುದರಿಂದ ಹಿಡಿದು, ತಾವೇ ಮೈಲಿಗೆಯಾಗುತ್ತಿದ್ದೇವೆಯೆನ್ನುವವರೆಗೂ ನೂರೆಂಟು ಕಾರಣಗಳನ್ನು ಕೊಡುತ್ತಿದ್ದರು. ಏನೇ ಹೇಳಿದರೂ ಮೇಷ್ಟ್ರು ಮಾತ್ರ ಕೇಳುತ್ತಿರಲಿಲ್ಲ, "ಪ್ರಯೋಗಶಾಲೆಯ ಪರೀಕ್ಷೆಯಲ್ಲಿ ಅಂಕಗಳು ಬೇಕೋ ಬೇಡವೋ" ಎಂದು ನೇರ ಪ್ರಶ್ನೆ ಕೇಳಿದುದಲ್ಲದೆ, "ಕಳೆದ ವರ್ಷದವರೆಗೂ ಕಪ್ಪೆಯ ಡಿಸೆಕ್ಷನ್ನು ಇತ್ತು, ಈ ವರ್ಷದಿಂದ ಅದು ಇಲ್ಲ. ನೀವು ಪುಣ್ಯವಂತರು" ಎಂದು ಸಮಾಧಾನ ಸಹ ಹೇಳುತ್ತಿದ್ದರು. ಒಟ್ಟಿನಲ್ಲಿ ನಾವು ಪ್ರಾಣಿಶಾಸ್ತ್ರದಲ್ಲಿ ಅಂಕಗಳನ್ನು ಗಳಿಸುವ ಒಂದೇ ಉದ್ದೇಶದಿಂದ ಸತ್ತ ಜಿರಲೆಯನ್ನು ಕತ್ತರಿಸಲು ಸಿದ್ಧರಾಗಿದ್ದೆವು.ಆದರೆ ಎಂದು ಜಿರಲೆಯ ಜೀರ್ಣಾಂಗವನ್ನು ಹೊರತೆಗೆದು, ಸ್ಲೈಡಿನ ಮೇಲೆ ಜೋಡಿಸಿ, ಮೈಕ್ರೋಸ್ಕೋಪಿನಲ್ಲಿ ನೋಡಿದೆನೋ, ಅಂದೇ ಜಿರಲೆಯ ಬಗ್ಗೆ ಎಲ್ಲಿಲ್ಲದ ಉತ್ಸಾಹ, ಪ್ರೀತಿ ಎರಡೂ ನನಗೆ ಮತ್ತು ನನ್ನ ಸಹಪಾಠಿಗರಿಗೆ ಬಂದಿತೆಂಬುದು ಸತ್ಯ. "I told you, no? After this chapter, you start loving this beautiful animal!" ಎಂದು ಮತ್ತೆ ಹುರಿದುಂಬಿಸಿದರು ಮೇಷ್ಟ್ರು. ಜಿರಲೆಯ ಬಗ್ಗೆ ಹೆಚ್ಚು ಮಾಹಿತಿಯನ್ನು ಕೊಡುವ ಪಾಠವೇನೂ ನಮ್ಮ ಪುಸ್ತಕದಲ್ಲಿರಲಿಲ್ಲ. ಆಗ ಹುಡುಕಲು ಇಂಟರ್ನೆಟ್ಟೂ ನಮ್ಮ ಕೈಗೆಟುಕುವಂತಿರಲಿಲ್ಲ. ಆದರೆ ನಮ್ಮ ಪುಣ್ಯವೋ ಎಂಬಂತೆ ಗ್ರಂಥಾಲಯಗಳಲ್ಲಿ ಉತ್ತಮೋತ್ತಮ ಪುಸ್ತಕಗಳು ಲಭ್ಯವಾಗಿದ್ದುದೂ ಅಲ್ಲದೆ, ಪ್ರೊಫೆಸರುಗಳು ನಮ್ಮ ಅತಿ ಸಣ್ಣ ಸಂದೇಹವನ್ನೂ ಸಹ ಗಂಭೀರವಾಗಿ ಪರಿಗಣಿಸಿ ಪಾಠ ಹೇಳಿಕೊಡುತ್ತಿದ್ದರು.

ಮನೆಯಲ್ಲಿ ಕಗ್ಗತ್ತಲಿನಲ್ಲೂ ಸಂಚರಿಸಿ, ಕರ ಕರ ಸದ್ದು ಮಾಡುತ್ತ, ಪುಸ್ತಕಗಳ ಹಾಳೆಗಳನ್ನೆಲ್ಲ ಕಡಿದು ಕಡಿದು ತುಂಡು ಮಾಡುವ, ಪುಸ್ತಕಗಳ ಮಧ್ಯದ ಪುಟಗಳಲ್ಲಿ ಮೊಟ್ಟೆಯನ್ನು ಅಂಟಿಸಿ ಮಾಯವಾಗುವ, ತಟ್ಟೆಯಲ್ಲಿ ಮುಚ್ಚಿಟ್ಟಿರುವ ಆಹಾರದ ಮೇಲೆಲ್ಲ ಓಡಾಡಿ ಅದನ್ನೂ ಎಂಜಲು ಮಾಡುವ, ರಾತ್ರಿ ಎದ್ದು ಬಾತ್ರೂಮಿಗೆ ಹೋಗಲೆಂದು ದೀಪ ಹಾಕಿದ ತಕ್ಷಣ ಹಾರಿಕೊಂಡು ಮುಖದ ಮೇಲೇ ದಾಳಿ ಮಾಡುವ, ಎಲ್ಲೆಂದರೆ ಅಲ್ಲಿ ನುಸುಳಿ ಏನೆಂದರೆ ಅದನ್ನು ತಿಂದು ಸದಾ ತೊಂದರೆಯನ್ನೇ ಮಾಡುತ್ತಲಿರುವ ಕ್ಷುದ್ರ ನಿಶಾಚರಿ ಜೀವಿಯಾದ ಜಿರಲೆಯನ್ನು ಪ್ರೀತಿಯಿಂದ ಕಾಣುವುದಾದರೂ ಹೇಗೆ? ಜಿರಲೆಯ ಬಗ್ಗೆ ಒಂದಿಷ್ಟು ತಿಳಿದುಕೊಂಡರೆ ಕ್ಷುದ್ರ ಜೀವಿಗಳ ತಾಕತ್ತಿನ ಬಗ್ಗೆ ಅರಿವಾದೀತು.

ಜೀವಶಾಸ್ತ್ರಜ್ಞರ ಪ್ರಕಾರ, ಪ್ರಪಂಚವು ಪ್ರಳಯದಲ್ಲಿ ಮುಳುಗಿ ಹೋಗಿ, ಎಲ್ಲ ಜೀವಸಂಕುಲಗಳೂ ಸರ್ವನಾಶವಾಗಿ, ಮತ್ತೆ ಭೂಮಿಯ ಮೇಲೆ ಜೀವ ಸ್ಥಾಪನೆಯಾಗಬೇಕಿದ್ದರೆ ಅದಕ್ಕೆ ಜಿರಲೆಯೇ ಮೂಲ! ಈ ಉತ್ಪ್ರೇಕ್ಷೆಯ ಉದ್ದೇಶವೇನೆಂದರೆ, ಜಿರಲೆಗಿರುವ ಹೊಂದಾಣಿಕೆಯ (Adaptation) ಶಕ್ತಿಯ ಬಗ್ಗೆ ನಮಗೆ ಗೊತ್ತಾಗಬೇಕು. ಸುಮಾರು ಐದು ಸಾವಿರ ಬಗೆಯ ಜಿರಲೆಗಳು ಪ್ರಪಂಚದ ಎಲ್ಲೆಡೆ ಹಂಚಿ ಹೋಗಿವೆ. "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ..." ಎಲ್ಲೆಡೆಯೂ ಜಿರಲೆಯ ಅಸ್ತಿತ್ವ ಇದ್ದೇ ಇದೆ. ನೀರನ್ನು ಕುಡಿಯದೇ ಒಂದು ವಾರ ಬದುಕಿದ್ದು, ತಿನ್ನಲು ಏನೂ ಇಲ್ಲದೆ ಒಂದು ತಿಂಗಳು ಉಳಿಯಬಲ್ಲುದು. ಒಂದು ವೇಳೆ ತಿನ್ನಲು ಏನೂ ಸಿಗದಿದ್ದರೆ ತನ್ನ ರೆಕ್ಕೆಗಳನ್ನೇ ತಿನ್ನುವ ಸಾಹಸವನ್ನೂ ಸಹ ಮಾಡಬಲ್ಲುದು! ಇನ್ನೂ ವಿಶೇಷವೆಂದರೆ ಜಿರಲೆಯು ತನ್ನ ತಲೆಯನ್ನು ಕಳೆದುಕೊಂಡು ಒಂದು ವಾರ ಬದುಕಿರಬಲ್ಲುದು! ಆಗ ಅದು ಸಾಯುವುದು ಒಂದೇ ಕಾರಣಕ್ಕೆ - ತನ್ನ ಬಾಯಿಯಿಲ್ಲದೇ ಇರುವುದರಿಂದ - ನೀರು ಕುಡಿಯಲು ಸಾಧ್ಯವಾಗುವುದಿಲ್ಲವಲ್ಲ!ಜಿರಲೆಗಳಿಗೆ ತಮ್ಮ ಮೀಸೆಗಳೇ ಮೂಗುಗಳು. ಆಹಾರವನ್ನು ಹುಡುಕುವುದಕ್ಕಾಗಲೀ, ತನ್ನ ಸಂಗಾತಿಯನ್ನು ಹುಡುಕುವುದಕ್ಕಾಗಲೀ ಈ ಮೀಸೆಗಳೇ ಸಹಾಯ ಮಾಡುವುದು. ಇರುವ ಎರಡು ಕಣ್ಣುಗಳಲ್ಲಿ ಒಂದೊಂದರಲ್ಲೂ ಎರಡು ಸಾವಿರ ಮಸೂರಗಳು (lens) ಇದ್ದರೂ ಜಿರಲೆಗಳ ಕಣ್ಣುಗಳು ಅಷ್ಟು ತೀಕ್ಷ್ಣವಾಗಿಲ್ಲ. ವಿಚಿತ್ರವೆಂದರೆ ಹಸಿರು ದೀಪದಲ್ಲಿ ಜಿರಲೆಗಳ ದೃಷ್ಟಿಯು ಬಹು ಚುರುಕಾಗಿದ್ದೂ, ಕೆಂಪು ದೀಪದಲ್ಲಿ ಕುರುಡಾಗಿರುತ್ತವೆ! ಹೆಣ್ಣು ಜಿರಲೆಗಳು ಫ಼ೀರೋಮೋನ್ ಎಂಬ ರಾಸಾಯನಿಕವನ್ನು ಉತ್ಪಾದಿಸಿ ಗಂಡನ್ನು ಸೆಳೆಯುತ್ತೆ. ಮೀಸೆಗಳ ಸಹಾಯದಿಂದ ಗಂಡು-ಹೆಣ್ಣು ಒಂದನ್ನೊಂದು ಪರಿಚಯಿಸಿಕೊಳ್ಳುತ್ತವೆ. ಒಮ್ಮೆ ಸಂಭೋಗವಾಯಿತೆಂದರೆ ಮುಗಿಯಿತು, ಗಂಡು ಜಿರಲೆಯ ವೀರ‍್ಯಾಣುಗಳ ಪರಿಮಾಣ ಎಷ್ಟಿರುತ್ತೆಂದರೆ ಹೆಣ್ಣು ಜಿರಲೆಗಳು ಬದುಕಿರುವವರೆಗೂ ಗರ್ಭಧಾರಣೆ ಮಾಡುತ್ತಲೇ ಇರುತ್ತವೆ!

ಮೈಮೇಲೆ ಜಿರಲೆಯು ಹರಿದರೆ ಮುಲು ಮುಲು ಆಗುತ್ತದಷ್ಟೆ? ಇದಕ್ಕೆ ಕಾರಣ ಜಿರಲೆಯ ಕಾಲುಗಳ ಮೇಲಿರುವ ಕೂದಲುಗಳು. ಜಿರಲೆಗೆ ಇದು ವಿಶೇಷವಾಗಿ ಸಹಾಯ ಮಾಡುತ್ತೆ - ಸ್ಪರ್ಶೇಂದ್ರಿಯವಾಗಿ. ಮುಂಭಾಗದಲ್ಲಿ ಚಾವುಟಿಗಳಂತಿರುವ ಎರಡು ಮೀಸೆಗಳಂತೆಯೇ ಹಿಂಭಾಗದಲ್ಲೂ ಚಿಕ್ಕ ಮೀಸೆಗಳೆರಡು ಇರುತ್ತವೆ. ಇವಕ್ಕೆ ಇಂಗ್ಲೀಷಿನಲ್ಲಿ ಸರ್ಕಿ (Cerci) ಎಂದು ಹೆಸರು. ಇದರ ಪ್ರಯೋಜನವು ಜಿರಲೆಯನ್ನು ಹಿಂಭಾಗದಿಂದ ಯಾವುದಾದರೂ ಪ್ರಾಣಿಯು ಆಕ್ರಮಣ ಮಾಡಿದಾಗ ಅದನ್ನು ಗ್ರಹಿಸಲೆಂದು. ಏನಾದರೂ ಚಲನೆಯನ್ನು ಗ್ರಹಿಸಿದ ತಕ್ಷಣವೇ ಈ ಸರ್ಕಿ ಅಂಗವು ಜಿರಲೆಗೆ ಸಂದೇಶ ಕೊಡುತ್ತೆ - ವಿರುದ್ಧ ದಿಕ್ಕಿನಲ್ಲಿ ಓಡಿ ಪರಾರಿಯಾಗಲು!

ಜಿರಲೆಯ ಹೊಂದಾಣಿಕೆಯ ಶಕ್ತಿಯ ಬಗ್ಗೆ ಆಗಲೇ ಸ್ವಲ್ಪ ಹೇಳಿದೆನಷ್ಟೆ? ಜಿರಲೆಯನ್ನು ಕೊಲ್ಲಲು ನಾವು ಏನೆಲ್ಲಾ ಪಾಷಾಣಗಳನ್ನು ಬಳಸುತ್ತೇವೆ. ’ಲಕ್ಷ್ಮಣರೇಖೆ’ ಎಂಬುದೊಂದು ಬಹಳ ಪ್ರಸಿದ್ಧ ಜಿರಲೆ ಪಾಷಾಣ. ಈ ಪಾಷಾಣವು ಮಾರುಕಟ್ಟೆಗೆ ಬಂದ ಆರಂಭದಲ್ಲಿ ಜಿರಲೆಯು ಸಾಯುತ್ತಿತ್ತು. ಕ್ರಮೇಣ ಲಕ್ಷ್ಮಣರೇಖೆಯೇ ಜಿರಲೆಗೆ ಆಹಾರವಾಗಿಬಿಟ್ಟಿತು! ಜಿರಲೆಯನ್ನು ಕೊಲ್ಲಲು ಮನುಷ್ಯನ ಕೈಯಲ್ಲಿ ಸಾಧ್ಯವೇ ಇಲ್ಲ. ಶ್ರೀ ವಿಷ್ಣುವು ಬಹುಶಃ ಧರ್ಮ ಸಂಸ್ಥಾಪಿಸಲು ಕಲ್ಕಿಯವತಾರ ಎತ್ತುವುದು ಈ ಜಿರಲೆಗಳನ್ನು ಸಂಹರಿಸಲೇ ಇರಬಹುದು.ನಮ್ಮಲ್ಲಿ ಕಾಣಸಿಗುವ ಸಾಮಾನ್ಯ ಜಿರಲೆಗಳು ಅಮೇರಿಕ ಮೂಲದವು. Periplaneta americana ಎಂಬ ವೈಜ್ಞಾನಿಕ ಹೆಸರುಳ್ಳ ಈ ಜಿರಲೆಯು ಡೈನಾಸರ್ ಕಾಲದಿಂದಲೂ ಭೂಮಿಯ ಮೇಲೆ ರಾಜ್ಯಭಾರ ಮಾಡುತ್ತಲಿದೆ. ಆಗಲೇ ಹೇಳಿದ ಹಾಗೆ ಸುಮಾರು ಐದು ಸಾವಿರ ತರಹೇವಾರಿ ಜಿರಲೆ ಸಂಕುಲಗಳಿವೆ. ಎಲ್ಲವೂ ಸಹ ಪುರಾತನ ಕಾಲದಿಂದಲೂ ಭೂಮಿಯ ಮೇಲೆ ಜೀವಿಸಿದೆ. ಬಹುಶಃ ನಾವು ಅಳಿದ ಮೇಲೂ ಜೀವಿಸಿರುತ್ತೆ!

--> ಬಿಳಿ ಜಿರಲೆಗಳು ಬೇರೆ ಬಗೆಯ ಜಿರಲೆಗಳಲ್ಲ - ಜಿರಲೆಯು ತನ್ನ ಚರ್ಮವನ್ನು ತೊರೆದರೆ ಬೆಳ್ಳಗಿರುತ್ತೆ.

--> ಚೈನೀಗಳು ಜಿರಲೆಯನ್ನು ಬೆಳ್ಳುಳ್ಳಿಯೊಂದಿಗೆ ಬೆರೆಸಿ ಅಜೀರ್ಣಕ್ಕೆ ಔಷಧವಾಗಿ ಬಳಸುತ್ತಾರೆ.

--> ಕೆಲವರಿಗೆ ಜಿರಲೆಗಳಿಂದ ಅಲರ್ಜಿಯೂ ಆಗುತ್ತೆ - ಚರ್ಮ ರೋಗ, ಅಸ್ಥಮಾದಂತಹ ಉಸಿರಾಟದ ಕಾಯಿಲೆಗಳು ಬರುವ ಸಾಧ್ಯತೆಯೂ ಉಂಟು.

--> ಜಿರಲೆಯು ಹಾವು ಹಲ್ಲಿಗಳಂತೆ ಚರ್ಮವನ್ನು ಕಳಚುತ್ತೆ - ಅದರ ಅಸ್ಥಿಪಂಜರವು ದೇಹದ ಹೊರಗಿರುವುದು. (Exoskeleton)

--> ಜಿರಲೆಯ ಕಂಡರೆ ಭಯ/ಅಸಹ್ಯ ಆಗುವ ಕಾಯಿಲೆಗೆ ಕ್ಯಾಟ್ಸರಿಡಾಫೋಬಿಯಾ ಎನ್ನುತ್ತಾರೆ.

-ಅ
10.02.2010
2.30PM

10 comments:

 1. Arun back in action! :-)

  ಮತ್ತೆ, BBC Planet Earth Series ಒಂದ್ರಲ್ಲಿ, ಅದ್ಯಾವ್ದೋ ಕಾಡಲ್ಲಿ, ಲಕ್ಷಾನುಗಟ್ಟಲೆ ಜಿರಲೆಗಳು ಇರೋದನ್ನ ತೋರ್ಸಿದಾರೆ.. ಒಂದ್ರ ಮೇಲೆ ಒಂದು ಹತ್ಕೊಂಡು ಹಾರಾಡ್ಕೊಂಡು ಮರ ಹತ್‌ತಾ ...ಅಯ್ಯಯ್ಯಪ್ಪಾ! ಅದನ್ನ ನೋಡಿ ನಂಗೆ ಅವತ್ ರಾತ್ರಿಯಿಡೀ ನಿದ್ರೆ ಇಲ್ಲ! ಮಧ್ಯೆ ಒಂದ್ಸಲ ಬಚ್ಲುಮನೆಗೆ ಹೋದ್ರೆ, ಒಳಗೆ ನೆಲದ್ ಮೇಲೆ ಬರೀ ಜಿರಲೇನೇ ಇರೋ ಹಾಗೆ ಕಂಡು ಬೆಚ್ಚಿ ಕಾಲು ಹಿಂದಕ್ಕೆ ತಗೊಂಡಿದ್ದೆ!

  ReplyDelete
 2. ಜಿರಲೆ ಪುರಾಣ ಚೆನ್ನಾಗಿದೆ.

  ಪಿಯುಸಿಯಲ್ಲಿದ್ದಾಗ ಡಿಸೆಕ್ಟ್ ಮಾಡುವುದಕ್ಕೆ ಜಿರಲೆಗಳನ್ನು ನಾವೇ ಹಿಡಿದು ಒಯ್ಯಬೇಕಿತ್ತು. ಹಾಸ್ಟೆಲಿನ ಅಡುಗೆ ಭಟ್ಟರ ಕೈಲಿ ಗೋಡೌನಿನಿಂದ ಹಿಡಿಸಿ , ಹಿಡಿಸಿ ಅವೆಲ್ಲ ಖಾಲಿಯಾದ ಮೇಲೆ ಕೈಗೆ ಪ್ಲಾಸ್ಟಿಕ್ ಕವರ್ ಹಾಕಿಕೊಂಡು ಹಾಸ್ಟೆಲ್ ಮೋರಿಗಳ ಮೇಲಿನ ಕಲ್ಲು ಸರಕ್ಕೆಂದು ಜರುಗಿಸಿ ದಿಕ್ಕಾಪಾಲಾಗಿ ಓಡುವ ಜಿರಲೆಗಳನ್ನು ಹಿಡಿಯುತ್ತಿದ್ದೆವು.

  ಹೀಗೆ ನಾವು ಹಿಡಿದೊಯ್ದ ಜಿರಲೆಗಳನ್ನು ಫಾರ್ಮಾಲಿನ್ನಲ್ಲಿ ಅದ್ದಿ ಸಾಯಿಸಿ ಸೀಳಲು ಕೊಡುತ್ತಿದ್ದರು. ಒಮ್ಮೆ ಹೀಗೆ ಫಾರ್ಮಾಲಿನ್ನಲ್ಲಿ ಅದ್ದಲ್ಪಟ್ಟಿದ್ದ ಜಿರಲೆ ಡಿಸೆಕ್ಷನ್ ಟೇಬಲ್ ಮೇಲೆ ಮಲಗಿಸಿಕೊಳ್ಳುವವರೆಗೆ ತೆಪ್ಪಗಿದ್ದು, ಅಲ್ಲಾಡದಿರಲೆಂದು ಪಿನ್ನು ಚುಚ್ಚುವ ಹೊತ್ತಿಗೆ ಪುರ್ರೆಂದು ಹಾರಿ ಅಡ್ಡಾದಿಡ್ಡಿ ಓಡಿತ್ತು. ಹೀಗೆ ಜಿರಲೆಯಿಂದ ದಾಳಿಗೀಡಾದ ನನ್ನ ಗೆಳೆಯ ಮತ್ತೊಂದು ಜಿರಲೆ ಡಿಸೆಕ್ಟ್ ಮಾಡುವುದಕ್ಕೆ ಮುನ್ನ ಹತ್ತು ನಿಮಿಷ ಸುಧಾರಿಸಿಕೊಳ್ಳಬೇಕಾಯ್ತು.

  ಅಂದಹಾಗೆ ನಾವು ಮೋರಿಯಲ್ಲಿ ಹಿಡಿಯುತ್ತಿದ್ದ ಜಿರಲೆಗಳು ಕಪ್ಪಗಿರುತ್ತಿದ್ದವು. ರೆಕ್ಕೆಗಳಿರುತ್ತಿರಲಿಲ್ಲ. ಗೋಡೌನಿನ ಜಿರಲೆಗಳು ರೆಕ್ಕೆ ಹೊಂದಿರುತ್ತಿದ್ದವು.

  ReplyDelete
 3. channag bardidira :)
  nange jirlegalu tumba ishta :-P

  ReplyDelete
 4. ಜಿರಲೆಗಳು ನಿಜಕ್ಕೂ ಅದ್ಭುತ ಜೀವಿಗಳು. ಎಂತಹ ಪರಿಸರಕ್ಕೂ ಹೊಂದಿಕೊಂಡು ಬದುಕಬಲ್ಲ , ಸಿಕ್ಕಿದ್ದು ತಿಂದು ಜೀರ್ಣಿಸಿಕೊಳ್ಳಬಲ್ಲ ಜೀವಿಗಳು . ಮೀಸೆ ತೂರುವಷ್ಟು ಜಾಗ ದೊರಕಿದರೆ ಎಲ್ಲಿ ಬೇಕಾದರೂ ನುಸುಳಬಲ್ಲವು .
  ಜಿರಲೆ ಡಿಸೆಕ್ಟ್ ಮಾಡುವಾಗ ಹೆಚ್ಚು ಕಷ್ಟವಿಲ್ಲ . ಆದರೆ ಕಪ್ಪೆ... ಅಬ್ಬ ಕೆಲವೊಮ್ಮೆ ಇನ್ನೂ ಪೂರ್ತಿಯಾಗಿ ಸಾಯದಿರುವ ಕಪ್ಪೆ ಕೊಟ್ಟುಬಿಡುತ್ತಿದ್ದರು .ಟ್ರೇಯಿಂದಲೇ ಹಾರಿಬಿಡುವ ಅದನ್ನು ಹಿಡಿದು , ಅದರ ಕಾಲುಗಳನ್ನು ಎಳೆದು ಪಿನ್ನು ಹೊಡೆಯುವುದೇ ಸಾಹಸವೆನ್ನಿಸುತ್ತಿತ್ತು .ಕೆಲವೊಮ್ಮೆ ಇನ್ನೂ ಮಿಡಿಯುವ ಅದರ ಹೃದಯವನ್ನು ನೋಡಿದಾಗ ನಾವೆಷ್ಟು ಕ್ರೂರಿಗಳೆನ್ನಿಸಿಬಿಡುತ್ತಿತ್ತು.

  ReplyDelete
 5. cock'ರೋಚಕ' ವಾಗಿದೆ write up.
  i thouroughly enjoyed my dissection classes, so much so that i used to catch hold of any cockroach that i came across and used to enjoy dissecting it.
  In mumbai we used to have lots of guests at home and usually i was relegated to the kitchen to study, during nights. i used to intently study the cockroaches that came in swarm through the kitchen drain.
  wow!! one exciting passtime to say the least. thanks for reminding.
  :-)
  malathi S

  ReplyDelete
 6. ರಾಜೇಶ್ ನಾಯ್ಕFriday, March 5, 2010 at 1:22:00 PM GMT+5:30

  ವ್ಹಾ! ಮಾಹಿತಿ ಕಣಜ. ನಾನು ಕಪ್ಪೆ ಕುಯ್ದಿದ್ದೆ. ಜಿರಲೆ ಕುಯ್ದದ್ದು ನೆನಪಿಲ್ಲ.

  ReplyDelete
 7. jirle sari illa...i hate jirles.....nan kaili adeShTu jirle sattidyo?? Paapa..

  ReplyDelete
 8. [ಶಂಭುಲಿಂಗ] ಹೆ ಹ್ಹೆ, ಜಿರಲೆ ಅಂದ್ರೆ ಹಾಗೇನೇ.. :-)

  [ಶ್ರೀಧರ] ನೀನು ಎಷ್ಟೇ ಜಿರಲೆ ಸಾಯ್ಸೋ, ಅದನ್ನ ನಾಮಾವಶೇಷ ಅಂತೂ ಮಾಡೋಕೆ ಸಾಧ್ಯ ಇಲ್ಲ. ಮನುಷ್ಯ ಬೇಕಾದ್ರೆ ಹೋಗ್ಬೋದು, ಜಿರಲೆ ಹೋಗಲ್ಲ.

  [ರಾಜೇಶ್ ನಾಯ್ಕ] ಜಿರಲೆ ಕುಯ್ಯದೇ ಕಪ್ಪೆ ಕುಯ್ದಿದ್ರಾ? ಜಿರಲೆ ಅದಕ್ಕೆ ಮೊದಲ ಸ್ಟೆಪ್ಪು ಅಂದ್ಕೊಂಡಿದ್ದೆ.

  [ಮಾಲತಿ] ನಿಮ್ಮದು ಒಳ್ಳೇ ಅಡ್ವೆಂಚರ್ರು.. :-)

  [ಸುಮ] ಹೌದು, ಪಾಪ ಕಪ್ಪೆಯನ್ನು ಕ್ರೂಸಿಫೈ ಮಾಡ್ತಾರೆ!!

  [ಅನುಷಾ] ಹೆ ಹ್ಹೆ, ಜಾಸ್ತಿ ಇಷ್ಟ ಪಡ್ಬೇಡಿ ಮತ್ತೆ!

  [ಸುಪ್ರೀತ್] ಅಯ್ಯೋ, ನಮಗೆ ಅವರೇ ಕೊಡೋರು, ಮೋರಿಯಲ್ಲೆಲ್ಲ ಹುಡುಕುವ ಗೋಜಿರಲಿಲ್ಲ ನೋಡಿ. ಹಾಗಾಗಿ ಕಪ್ಪು-ಬಿಳುಪಿನ ತಾರತಮ್ಯ ನಮಗೆ ಗೊತ್ತಾಗುತ್ತಿರಲಿಲ್ಲ.

  [ಸುಶ್ರುತ] ಒಳ್ಳೇ action-ಉ.. ಇಮ್ಯಾಜಿನ್ ಮಾಡ್ಕೊ, ಕಣ್ ಬಿಟ್ ತಕ್ಷಣ ಮೈಮೇಲೆಲ್ಲಾ ಜಿರಲೆಗಳಿದ್ದರೆ!!!

  ReplyDelete
 9. ನಂಗಂತೂ ಜಿರ್ಲೆ ಕೊಯ್ದು ಚಿತ್ರ ಬಿಡಿಸಿದ್ದಕ್ಕೆ full marks ಬಿದ್ದತ್ತು. ಹಾಗಾಗಿ ಜಿರಲೆ ಅಂದ್ರೆ ಈಗಲೂ ಏನೋ ಮಮಕಾರ. ಹಾಗೆ ಒಂದು remarkable cocroaches ಅಂತ Englishನಲ್ಲಿ ಒಂದು ಪಾಠನೂ ಇತ್ತು.

  ReplyDelete

ಒಂದಷ್ಟು ಚಿತ್ರಗಳು..