Tuesday, March 02, 2010

ಜಿರಲೆ

ಕಾಲೇಜಿನಲ್ಲಿದ್ದಾಗ ಜಿರಲೆಯನ್ನು ಡಿಸೆಕ್ಟ್ ಮಾಡುವುದು ನಮ್ಮ ಪಠ್ಯದ ವಿಷಯವಾಗಿತ್ತು. ಜೀವಶಾಸ್ತ್ರದ ಮೇಷ್ಟ್ರು ಜಿರಲೆಯನ್ನು ಬಹಳ ಹೊಗಳುತ್ತಿದ್ದರು. "ಜಿರಲೆ ಎಂಥ ಸುಂದರ ಜೀವಿ ಅನ್ನೋದು ನಿಮಗೆ ಸದ್ಯದಲ್ಲೇ ಗೊತ್ತಾಗುವುದರಲ್ಲಿದೆ" ಎಂದು ಹೇಳಿ ಪಾಠ ಶುರು ಮಾಡಿದ್ದರು. ಫಾರ್ಮಾಲಿನ್ನಿನೊಳಗಿಟ್ಟಿದ್ದ ಜಿರಲೆಗಳ ಹೆಣದ ರಾಶಿಯಿಂದ ಒಬ್ಬೊಬ್ಬರಿಗೊಂದೊಂದು ಜಿರಲೆಯನ್ನು ಕೊಟ್ಟು ಕತ್ತರಿಸಿ ಅದರ ಜೀರ್ಣಾಂಗವನ್ನು ಹೊರತೆಗೆದಿಡುವುದು ನಮ್ಮ ಕೆಲಸವಾಗಿತ್ತು. ಜಿರಲೆ ಕಂಡರೆ ಮೈಲಿ ದೂರ ಓಡುವ ಹೆಣ್ಣು ಮಕ್ಕಳೂ ಸಹ ನಮ್ಮೊಡನೆ ಇದ್ದುದು ಲ್ಯಾಬಿನಲ್ಲೆಲ್ಲ ಹಾಸ್ಯಾಸ್ಪದವಾಗಿತ್ತು. ಇನ್ನು ಕೆಲವು ಮಡಿವಂತರು ಡಿಸೆಕ್ಷನ್ ಕೆಲಸವನ್ನು ತಪ್ಪಿಸಿಕೊಳ್ಳಲು ಕೈ ವಾಸನೆಯಾದೀತು ಎನ್ನುವುದರಿಂದ ಹಿಡಿದು, ತಾವೇ ಮೈಲಿಗೆಯಾಗುತ್ತಿದ್ದೇವೆಯೆನ್ನುವವರೆಗೂ ನೂರೆಂಟು ಕಾರಣಗಳನ್ನು ಕೊಡುತ್ತಿದ್ದರು. ಏನೇ ಹೇಳಿದರೂ ಮೇಷ್ಟ್ರು ಮಾತ್ರ ಕೇಳುತ್ತಿರಲಿಲ್ಲ, "ಪ್ರಯೋಗಶಾಲೆಯ ಪರೀಕ್ಷೆಯಲ್ಲಿ ಅಂಕಗಳು ಬೇಕೋ ಬೇಡವೋ" ಎಂದು ನೇರ ಪ್ರಶ್ನೆ ಕೇಳಿದುದಲ್ಲದೆ, "ಕಳೆದ ವರ್ಷದವರೆಗೂ ಕಪ್ಪೆಯ ಡಿಸೆಕ್ಷನ್ನು ಇತ್ತು, ಈ ವರ್ಷದಿಂದ ಅದು ಇಲ್ಲ. ನೀವು ಪುಣ್ಯವಂತರು" ಎಂದು ಸಮಾಧಾನ ಸಹ ಹೇಳುತ್ತಿದ್ದರು. ಒಟ್ಟಿನಲ್ಲಿ ನಾವು ಪ್ರಾಣಿಶಾಸ್ತ್ರದಲ್ಲಿ ಅಂಕಗಳನ್ನು ಗಳಿಸುವ ಒಂದೇ ಉದ್ದೇಶದಿಂದ ಸತ್ತ ಜಿರಲೆಯನ್ನು ಕತ್ತರಿಸಲು ಸಿದ್ಧರಾಗಿದ್ದೆವು.ಆದರೆ ಎಂದು ಜಿರಲೆಯ ಜೀರ್ಣಾಂಗವನ್ನು ಹೊರತೆಗೆದು, ಸ್ಲೈಡಿನ ಮೇಲೆ ಜೋಡಿಸಿ, ಮೈಕ್ರೋಸ್ಕೋಪಿನಲ್ಲಿ ನೋಡಿದೆನೋ, ಅಂದೇ ಜಿರಲೆಯ ಬಗ್ಗೆ ಎಲ್ಲಿಲ್ಲದ ಉತ್ಸಾಹ, ಪ್ರೀತಿ ಎರಡೂ ನನಗೆ ಮತ್ತು ನನ್ನ ಸಹಪಾಠಿಗರಿಗೆ ಬಂದಿತೆಂಬುದು ಸತ್ಯ. "I told you, no? After this chapter, you start loving this beautiful animal!" ಎಂದು ಮತ್ತೆ ಹುರಿದುಂಬಿಸಿದರು ಮೇಷ್ಟ್ರು. ಜಿರಲೆಯ ಬಗ್ಗೆ ಹೆಚ್ಚು ಮಾಹಿತಿಯನ್ನು ಕೊಡುವ ಪಾಠವೇನೂ ನಮ್ಮ ಪುಸ್ತಕದಲ್ಲಿರಲಿಲ್ಲ. ಆಗ ಹುಡುಕಲು ಇಂಟರ್ನೆಟ್ಟೂ ನಮ್ಮ ಕೈಗೆಟುಕುವಂತಿರಲಿಲ್ಲ. ಆದರೆ ನಮ್ಮ ಪುಣ್ಯವೋ ಎಂಬಂತೆ ಗ್ರಂಥಾಲಯಗಳಲ್ಲಿ ಉತ್ತಮೋತ್ತಮ ಪುಸ್ತಕಗಳು ಲಭ್ಯವಾಗಿದ್ದುದೂ ಅಲ್ಲದೆ, ಪ್ರೊಫೆಸರುಗಳು ನಮ್ಮ ಅತಿ ಸಣ್ಣ ಸಂದೇಹವನ್ನೂ ಸಹ ಗಂಭೀರವಾಗಿ ಪರಿಗಣಿಸಿ ಪಾಠ ಹೇಳಿಕೊಡುತ್ತಿದ್ದರು.

ಮನೆಯಲ್ಲಿ ಕಗ್ಗತ್ತಲಿನಲ್ಲೂ ಸಂಚರಿಸಿ, ಕರ ಕರ ಸದ್ದು ಮಾಡುತ್ತ, ಪುಸ್ತಕಗಳ ಹಾಳೆಗಳನ್ನೆಲ್ಲ ಕಡಿದು ಕಡಿದು ತುಂಡು ಮಾಡುವ, ಪುಸ್ತಕಗಳ ಮಧ್ಯದ ಪುಟಗಳಲ್ಲಿ ಮೊಟ್ಟೆಯನ್ನು ಅಂಟಿಸಿ ಮಾಯವಾಗುವ, ತಟ್ಟೆಯಲ್ಲಿ ಮುಚ್ಚಿಟ್ಟಿರುವ ಆಹಾರದ ಮೇಲೆಲ್ಲ ಓಡಾಡಿ ಅದನ್ನೂ ಎಂಜಲು ಮಾಡುವ, ರಾತ್ರಿ ಎದ್ದು ಬಾತ್ರೂಮಿಗೆ ಹೋಗಲೆಂದು ದೀಪ ಹಾಕಿದ ತಕ್ಷಣ ಹಾರಿಕೊಂಡು ಮುಖದ ಮೇಲೇ ದಾಳಿ ಮಾಡುವ, ಎಲ್ಲೆಂದರೆ ಅಲ್ಲಿ ನುಸುಳಿ ಏನೆಂದರೆ ಅದನ್ನು ತಿಂದು ಸದಾ ತೊಂದರೆಯನ್ನೇ ಮಾಡುತ್ತಲಿರುವ ಕ್ಷುದ್ರ ನಿಶಾಚರಿ ಜೀವಿಯಾದ ಜಿರಲೆಯನ್ನು ಪ್ರೀತಿಯಿಂದ ಕಾಣುವುದಾದರೂ ಹೇಗೆ? ಜಿರಲೆಯ ಬಗ್ಗೆ ಒಂದಿಷ್ಟು ತಿಳಿದುಕೊಂಡರೆ ಕ್ಷುದ್ರ ಜೀವಿಗಳ ತಾಕತ್ತಿನ ಬಗ್ಗೆ ಅರಿವಾದೀತು.

ಜೀವಶಾಸ್ತ್ರಜ್ಞರ ಪ್ರಕಾರ, ಪ್ರಪಂಚವು ಪ್ರಳಯದಲ್ಲಿ ಮುಳುಗಿ ಹೋಗಿ, ಎಲ್ಲ ಜೀವಸಂಕುಲಗಳೂ ಸರ್ವನಾಶವಾಗಿ, ಮತ್ತೆ ಭೂಮಿಯ ಮೇಲೆ ಜೀವ ಸ್ಥಾಪನೆಯಾಗಬೇಕಿದ್ದರೆ ಅದಕ್ಕೆ ಜಿರಲೆಯೇ ಮೂಲ! ಈ ಉತ್ಪ್ರೇಕ್ಷೆಯ ಉದ್ದೇಶವೇನೆಂದರೆ, ಜಿರಲೆಗಿರುವ ಹೊಂದಾಣಿಕೆಯ (Adaptation) ಶಕ್ತಿಯ ಬಗ್ಗೆ ನಮಗೆ ಗೊತ್ತಾಗಬೇಕು. ಸುಮಾರು ಐದು ಸಾವಿರ ಬಗೆಯ ಜಿರಲೆಗಳು ಪ್ರಪಂಚದ ಎಲ್ಲೆಡೆ ಹಂಚಿ ಹೋಗಿವೆ. "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ..." ಎಲ್ಲೆಡೆಯೂ ಜಿರಲೆಯ ಅಸ್ತಿತ್ವ ಇದ್ದೇ ಇದೆ. ನೀರನ್ನು ಕುಡಿಯದೇ ಒಂದು ವಾರ ಬದುಕಿದ್ದು, ತಿನ್ನಲು ಏನೂ ಇಲ್ಲದೆ ಒಂದು ತಿಂಗಳು ಉಳಿಯಬಲ್ಲುದು. ಒಂದು ವೇಳೆ ತಿನ್ನಲು ಏನೂ ಸಿಗದಿದ್ದರೆ ತನ್ನ ರೆಕ್ಕೆಗಳನ್ನೇ ತಿನ್ನುವ ಸಾಹಸವನ್ನೂ ಸಹ ಮಾಡಬಲ್ಲುದು! ಇನ್ನೂ ವಿಶೇಷವೆಂದರೆ ಜಿರಲೆಯು ತನ್ನ ತಲೆಯನ್ನು ಕಳೆದುಕೊಂಡು ಒಂದು ವಾರ ಬದುಕಿರಬಲ್ಲುದು! ಆಗ ಅದು ಸಾಯುವುದು ಒಂದೇ ಕಾರಣಕ್ಕೆ - ತನ್ನ ಬಾಯಿಯಿಲ್ಲದೇ ಇರುವುದರಿಂದ - ನೀರು ಕುಡಿಯಲು ಸಾಧ್ಯವಾಗುವುದಿಲ್ಲವಲ್ಲ!ಜಿರಲೆಗಳಿಗೆ ತಮ್ಮ ಮೀಸೆಗಳೇ ಮೂಗುಗಳು. ಆಹಾರವನ್ನು ಹುಡುಕುವುದಕ್ಕಾಗಲೀ, ತನ್ನ ಸಂಗಾತಿಯನ್ನು ಹುಡುಕುವುದಕ್ಕಾಗಲೀ ಈ ಮೀಸೆಗಳೇ ಸಹಾಯ ಮಾಡುವುದು. ಇರುವ ಎರಡು ಕಣ್ಣುಗಳಲ್ಲಿ ಒಂದೊಂದರಲ್ಲೂ ಎರಡು ಸಾವಿರ ಮಸೂರಗಳು (lens) ಇದ್ದರೂ ಜಿರಲೆಗಳ ಕಣ್ಣುಗಳು ಅಷ್ಟು ತೀಕ್ಷ್ಣವಾಗಿಲ್ಲ. ವಿಚಿತ್ರವೆಂದರೆ ಹಸಿರು ದೀಪದಲ್ಲಿ ಜಿರಲೆಗಳ ದೃಷ್ಟಿಯು ಬಹು ಚುರುಕಾಗಿದ್ದೂ, ಕೆಂಪು ದೀಪದಲ್ಲಿ ಕುರುಡಾಗಿರುತ್ತವೆ! ಹೆಣ್ಣು ಜಿರಲೆಗಳು ಫ಼ೀರೋಮೋನ್ ಎಂಬ ರಾಸಾಯನಿಕವನ್ನು ಉತ್ಪಾದಿಸಿ ಗಂಡನ್ನು ಸೆಳೆಯುತ್ತೆ. ಮೀಸೆಗಳ ಸಹಾಯದಿಂದ ಗಂಡು-ಹೆಣ್ಣು ಒಂದನ್ನೊಂದು ಪರಿಚಯಿಸಿಕೊಳ್ಳುತ್ತವೆ. ಒಮ್ಮೆ ಸಂಭೋಗವಾಯಿತೆಂದರೆ ಮುಗಿಯಿತು, ಗಂಡು ಜಿರಲೆಯ ವೀರ‍್ಯಾಣುಗಳ ಪರಿಮಾಣ ಎಷ್ಟಿರುತ್ತೆಂದರೆ ಹೆಣ್ಣು ಜಿರಲೆಗಳು ಬದುಕಿರುವವರೆಗೂ ಗರ್ಭಧಾರಣೆ ಮಾಡುತ್ತಲೇ ಇರುತ್ತವೆ!

ಮೈಮೇಲೆ ಜಿರಲೆಯು ಹರಿದರೆ ಮುಲು ಮುಲು ಆಗುತ್ತದಷ್ಟೆ? ಇದಕ್ಕೆ ಕಾರಣ ಜಿರಲೆಯ ಕಾಲುಗಳ ಮೇಲಿರುವ ಕೂದಲುಗಳು. ಜಿರಲೆಗೆ ಇದು ವಿಶೇಷವಾಗಿ ಸಹಾಯ ಮಾಡುತ್ತೆ - ಸ್ಪರ್ಶೇಂದ್ರಿಯವಾಗಿ. ಮುಂಭಾಗದಲ್ಲಿ ಚಾವುಟಿಗಳಂತಿರುವ ಎರಡು ಮೀಸೆಗಳಂತೆಯೇ ಹಿಂಭಾಗದಲ್ಲೂ ಚಿಕ್ಕ ಮೀಸೆಗಳೆರಡು ಇರುತ್ತವೆ. ಇವಕ್ಕೆ ಇಂಗ್ಲೀಷಿನಲ್ಲಿ ಸರ್ಕಿ (Cerci) ಎಂದು ಹೆಸರು. ಇದರ ಪ್ರಯೋಜನವು ಜಿರಲೆಯನ್ನು ಹಿಂಭಾಗದಿಂದ ಯಾವುದಾದರೂ ಪ್ರಾಣಿಯು ಆಕ್ರಮಣ ಮಾಡಿದಾಗ ಅದನ್ನು ಗ್ರಹಿಸಲೆಂದು. ಏನಾದರೂ ಚಲನೆಯನ್ನು ಗ್ರಹಿಸಿದ ತಕ್ಷಣವೇ ಈ ಸರ್ಕಿ ಅಂಗವು ಜಿರಲೆಗೆ ಸಂದೇಶ ಕೊಡುತ್ತೆ - ವಿರುದ್ಧ ದಿಕ್ಕಿನಲ್ಲಿ ಓಡಿ ಪರಾರಿಯಾಗಲು!

ಜಿರಲೆಯ ಹೊಂದಾಣಿಕೆಯ ಶಕ್ತಿಯ ಬಗ್ಗೆ ಆಗಲೇ ಸ್ವಲ್ಪ ಹೇಳಿದೆನಷ್ಟೆ? ಜಿರಲೆಯನ್ನು ಕೊಲ್ಲಲು ನಾವು ಏನೆಲ್ಲಾ ಪಾಷಾಣಗಳನ್ನು ಬಳಸುತ್ತೇವೆ. ’ಲಕ್ಷ್ಮಣರೇಖೆ’ ಎಂಬುದೊಂದು ಬಹಳ ಪ್ರಸಿದ್ಧ ಜಿರಲೆ ಪಾಷಾಣ. ಈ ಪಾಷಾಣವು ಮಾರುಕಟ್ಟೆಗೆ ಬಂದ ಆರಂಭದಲ್ಲಿ ಜಿರಲೆಯು ಸಾಯುತ್ತಿತ್ತು. ಕ್ರಮೇಣ ಲಕ್ಷ್ಮಣರೇಖೆಯೇ ಜಿರಲೆಗೆ ಆಹಾರವಾಗಿಬಿಟ್ಟಿತು! ಜಿರಲೆಯನ್ನು ಕೊಲ್ಲಲು ಮನುಷ್ಯನ ಕೈಯಲ್ಲಿ ಸಾಧ್ಯವೇ ಇಲ್ಲ. ಶ್ರೀ ವಿಷ್ಣುವು ಬಹುಶಃ ಧರ್ಮ ಸಂಸ್ಥಾಪಿಸಲು ಕಲ್ಕಿಯವತಾರ ಎತ್ತುವುದು ಈ ಜಿರಲೆಗಳನ್ನು ಸಂಹರಿಸಲೇ ಇರಬಹುದು.ನಮ್ಮಲ್ಲಿ ಕಾಣಸಿಗುವ ಸಾಮಾನ್ಯ ಜಿರಲೆಗಳು ಅಮೇರಿಕ ಮೂಲದವು. Periplaneta americana ಎಂಬ ವೈಜ್ಞಾನಿಕ ಹೆಸರುಳ್ಳ ಈ ಜಿರಲೆಯು ಡೈನಾಸರ್ ಕಾಲದಿಂದಲೂ ಭೂಮಿಯ ಮೇಲೆ ರಾಜ್ಯಭಾರ ಮಾಡುತ್ತಲಿದೆ. ಆಗಲೇ ಹೇಳಿದ ಹಾಗೆ ಸುಮಾರು ಐದು ಸಾವಿರ ತರಹೇವಾರಿ ಜಿರಲೆ ಸಂಕುಲಗಳಿವೆ. ಎಲ್ಲವೂ ಸಹ ಪುರಾತನ ಕಾಲದಿಂದಲೂ ಭೂಮಿಯ ಮೇಲೆ ಜೀವಿಸಿದೆ. ಬಹುಶಃ ನಾವು ಅಳಿದ ಮೇಲೂ ಜೀವಿಸಿರುತ್ತೆ!

--> ಬಿಳಿ ಜಿರಲೆಗಳು ಬೇರೆ ಬಗೆಯ ಜಿರಲೆಗಳಲ್ಲ - ಜಿರಲೆಯು ತನ್ನ ಚರ್ಮವನ್ನು ತೊರೆದರೆ ಬೆಳ್ಳಗಿರುತ್ತೆ.

--> ಚೈನೀಗಳು ಜಿರಲೆಯನ್ನು ಬೆಳ್ಳುಳ್ಳಿಯೊಂದಿಗೆ ಬೆರೆಸಿ ಅಜೀರ್ಣಕ್ಕೆ ಔಷಧವಾಗಿ ಬಳಸುತ್ತಾರೆ.

--> ಕೆಲವರಿಗೆ ಜಿರಲೆಗಳಿಂದ ಅಲರ್ಜಿಯೂ ಆಗುತ್ತೆ - ಚರ್ಮ ರೋಗ, ಅಸ್ಥಮಾದಂತಹ ಉಸಿರಾಟದ ಕಾಯಿಲೆಗಳು ಬರುವ ಸಾಧ್ಯತೆಯೂ ಉಂಟು.

--> ಜಿರಲೆಯು ಹಾವು ಹಲ್ಲಿಗಳಂತೆ ಚರ್ಮವನ್ನು ಕಳಚುತ್ತೆ - ಅದರ ಅಸ್ಥಿಪಂಜರವು ದೇಹದ ಹೊರಗಿರುವುದು. (Exoskeleton)

--> ಜಿರಲೆಯ ಕಂಡರೆ ಭಯ/ಅಸಹ್ಯ ಆಗುವ ಕಾಯಿಲೆಗೆ ಕ್ಯಾಟ್ಸರಿಡಾಫೋಬಿಯಾ ಎನ್ನುತ್ತಾರೆ.

-ಅ
10.02.2010
2.30PM

ಒಂದಷ್ಟು ಚಿತ್ರಗಳು..