Wednesday, September 16, 2009

ಮೌಂಟ್ ಎವೆರೆಸ್ಟ್ ಪರ್ವತವನ್ನು ಯಾಕೆ ಹತ್ತಬೇಕು?

ಪರ್ವತಾರೋಹಿಗಳಿಗೆಲ್ಲ ಕನಸಾಗಿ, ಗುರಿಯಾಗಿ, ಪೂಜ್ಯವಾಗಿ - ಸ್ವರ್ಗಾರೋಹಣವೋ ಎಂಬ ಭಾವನೆಯನ್ನುಂಟು ಮಾಡುವ ಮೌಂಟ್ ಎವೆರೆಸ್ಟ್ ನ ಅಸ್ತಿತ್ವವೇ ಸಾಕು ಭೂಮಿಯು ಸುಂದರವೆನ್ನಲು. ಎವೆರೆಸ್ಟ್ ಹತ್ತುವವರ ಬಗ್ಗೆ ದೂರದರ್ಶನದಲ್ಲಿ ಯಾವಾಗ ಯಾವಾಗ ಬಂದರೂ ನೋಡದೆ ಇರಲು ನನ್ನಿಂದ ಆಗುವುದಿಲ್ಲ. ಅವರುಗಳ ಜಾಗದಲ್ಲಿ ನನ್ನನ್ನು ನಾನು ಕಲ್ಪಿಸಿಕೊಂಡು ನೋಡುವುದಷ್ಟೆ ಸಧ್ಯಕ್ಕೆ ನನಗಿರುವ ಸೌಭಾಗ್ಯ. ನನ್ನನ್ನು ಎಂದು ಬರಮಾಡಿಕೊಳ್ಳುತ್ತೋ ಸ್ವರ್ಗ?

ನನ್ನ ಕೆಲ ಗೆಳೆಯರು ಕೇಳಿದ್ದಾರೆ - "ಅಲ್ಲ, ನೀನು ಟ್ರೆಕ್ಕಿಂಗ್ ಎಲ್ಲ ಯಾಕೆ ಮಾಡ್ತೀಯ?" ಅಂತ. ಏನು ಹೇಳಲಿ? "ಏನಾದ್ರೂ ಮಾಡ್ಬೇಕಲ್ಲ, ಕೈಕಾಲು ಸುಮ್ಮನೆ ಇರುವುದಿಲ್ಲವಲ್ಲ, ಅದಕ್ಕೆ!" ಅಂದು ಸುಮ್ಮನಾಗುತ್ತೇನೆ. ಅನೇಕರಿಗೆ ಚಾರಣ ಮಾಡುವುದು ಎಂದರೆ "ಮಜ" ಮಾಡುವುದು ಎಂದು. "ಸುಮ್ನೆ ಟ್ರೆಕ್ಕಿಂಗ್ (ಜೊತೆಗೊಂದು ಜೋಡಿಪದ - ಗಿಕ್ಕಿಂಗ್) ಮಾಡ್ಕೊಂಡು ಟೈಮ್ ವೇಸ್ಟ್ ಮಾಡ್ತೀಯ ನೀನು" ಎಂದೂ ಹೇಳಿದ್ದಾರೆ ನನ್ನ ’ಹಿತೈಷಿ’ಗಳು. ಅವರಿಗೆ ಧನ್ಯವಾದಗಳು. "ಹಬ್ಬ ಇಲ್ಲ ಹರಿದಿನ ಇಲ್ಲ, ಹೋಗ್ಬಿಡ್ತಾನೆ ಟ್ರೆಕ್ಕಿಂಗ್‍ಗೆ, ಸ್ವಲ್ಪಾನೂ ಜವಾಬ್ದಾರಿಯಿಲ್ಲ!" ಎಂದು ’ಹಿರಿಯರು’ ಬಯ್ದಿದ್ದಾರೆ. ಅವರಿಗೂ ಧನ್ಯವಾದಗಳು.

ಇಷ್ಟಕ್ಕೂ ನಾವು ಚಾರಣಿಗರು ಚಾರಣ ಮಾಡುವುದಾದರೂ ಏಕೆ?

ಒಬ್ಬೊಬ್ಬರದೊಂದು ಕಾರಣ ಇರಬಹುದು. ಪ್ರಕೃತಿಪ್ರೇಮವೊಂದು ಮಾತ್ರ ಕಡ್ಡಾಯವಾಗಿ ಇರುವ ಎಲ್ಲ ಚಾರಣಿಗರಿಗೂ ನನ್ನದೊಂದು ನಮನ. :-)

ಮತ್ತೆ ಎವೆರೆಸ್ಟ್ ವಿಷಯಕ್ಕೆ ಬರೋಣ. ಜಾರ್ಜ್ ಮ್ಯಾಲರಿ ಎಂಬಾತ ಆಂಡ್ರ್ಯೂ ಇರ್ವಿನ್ ಎಂಬುವವನ ಜೊತೆಗೆ 1924ರಲ್ಲಿ ಎವೆರೆಸ್ಟ್ ಏರಲು ಹೊರಟು ನಾಪತ್ತೆಯಾಗಿದ್ದುದು, ಮತ್ತೆ ಎಪ್ಪತ್ತೈದು ವರ್ಷಗಳ ಅನಂತರ, ಅಂದರೆ 1999ರಲ್ಲಿ ಶಿಖರದಿಂದ ಅನತಿದೂರದಲ್ಲೇ ಅವರಿಬ್ಬರ ಶವಗಳೂ ಪತ್ತೆಯಾದುದು, ಚಾರಣಿಗರೆಲ್ಲರಿಗೂ ಗೊತ್ತಿರುವ ವಿಷಯವಷ್ಟೆ? ಅವರುಗಳು ಶಿಖರವನ್ನು ಏರಿದ್ದರೋ, ಏರುವ ಮುನ್ನವೇ ಹೋಗಿಬಿಟ್ಟರೋ ಅಥವಾ ಶಿಖರವನ್ನು ಮುಟ್ಟಿ ಕೆಳಗೆ ಇಳಿಯುವಾಗ ಹೋಗಿಬಿಟ್ಟರೋ ಇನ್ನೂ ತಿಳಿಯದ ವಿಷಯ. ಒಟ್ಟಿನಲ್ಲಿ ಎವೆರೆಸ್ಟ್ ಪರ್ವತಾರೋಹಣವನ್ನು ಪ್ರಪ್ರಥಮವಾಗಿ ಕೈಗೊಂಡ ಕೀರ್ತಿ ಇವರಿಬ್ಬರದು.ಆತನನ್ನು ಯಾರೋ ಕೇಳಿದ್ದರಂತೆ - "ನೀವು ಎವೆರೆಸ್ಟ್ ಪರ್ವತವನ್ನು ಏಕೆ ಏರಬೇಕೆಂದಿದ್ದೀರಿ?"

ಅದಕ್ಕವರ ಥಟ್ಟನೆಯ ಉತ್ತರ - "ಯಾಕೆಂದರೆ ಅದು ಇದೆ!"

"Why do you want to climb Mt. Everest?"
"Because it's there!"

ಎವೆರೆಸ್ಟ್ ಬಗೆಗಿನ ಕೆಲವರ ಒಂದಷ್ಟು "ಹೇಳಿಕೆ"ಗಳು ಇಲ್ಲಿವೆ. http://www.mnteverest.net/quote.html.

-ಅ
16.09.2009
3.45PM

4 comments:

  1. sumne bag taglhaakkondu obrhinde obru nadkondu hogteera!!

    ReplyDelete
  2. ಆಗಲೂ ಹೇಳ್ತಿದ್ದೆ, ಈಗಲೂ ಹೇಳ್ತೀನಿ.

    ಸುಮ್ನೆ ಟ್ರೆಕ್ಕಿಂಗ್, ಗಿಕ್ಕಿಂಗ್ ಎಲ್ಲ ಮಾಡ್ಕೊಂಡು ಟೈಮ್ ವೇಸ್ಟ್ ಮಾಡ್ತೀಯ ನೀನು. ಹಬ್ಬ, ಹಾಡಿ ಯಾವ್ದೂ ಲೆಕ್ಕಿಸ್ದೇ ಕಾಡು ಸುತ್ತುತ್ತಾ ಮಜಾ ಮಾಡ್ಕೊಂಡ್ ಇರೋದರ ಬದಲು ನಿಮ್ಮ ಮನೆ ಹತ್ರ ಆ ಶೇಷಮಹಾಗಣಪತಿ ದೇವಸ್ಥಾನದಲ್ಲಿ ಆಗಾಗ ಏನಾದ್ರೂ ಹೋಮ, ಹವನ, ಪೂಜೆ, ಪುನಸ್ಕಾರ, ಅರ್ಚನೆ ಇರುತ್ತಲ್ಲ... ಅಲ್ಲಿಗಾದ್ರೂ ಆಗಾಗ ಹೋಗಿ ಪುಣ್ಯ ಕಟ್ಕೊಳೋ ಅಂದ್ರೆ ಅದಕ್ಕೆ ಮಾತ್ರ ಪುರುಸೊತ್ತಿಲ್ಲವಾ?

    ಎವರೆಸ್ಟ್ ಅನ್ನೋ ಹೆಸರು ಎತ್ತಬೇಡ ನೀನು. ಸಾಗರಮಾತಾ (ಕೆಲವರ ಪ್ರಕಾರ ಸಗರಮಾತಾ; ಎರಡೂ ಅರ್ಥಪೂರ್ಣವೇ) ಎಂಬ ಸುಂದರವಾದ ಪ್ರಾಚೀನ ಹೆಸರಿದ್ದ ಸುಂದರ ಪರ್ವತಕ್ಕೆ ಯಾರೋ ಯಾವುದೋ ಪರದೇಶೀ ಹೆಸರಿಟ್ಟು ಕರೆದರೆಂದು ನೀನೂ ಕರೆದರೆ ಅಧೋಗತಿಗೆ ಹೋಗುತ್ತೀಯ. ಪ್ರಾಚೀನ ಹೆಸರಿನ ಔಚಿತ್ಯವನ್ನೂ, ಅರ್ಥಪೂರ್ಣತೆಯನ್ನೂ ತಿಳಿಯದೇ ಯಾವುದೋ ಅರ್ಥವಿಲ್ಲದ ಹೆಸರನ್ನು ಹೇಳಿಕೊಂಡು ಅಲಿಯುವವರು "ಅದು ಇದೆ, ಅದಕ್ಕೇ ಹತ್ತಬೇಕು" ಎಂದಲ್ಲದೇ ಇನ್ನೇನು ಹೇಳುತ್ತಾರೆ? ಅದನ್ನೆಲ್ಲಾ ಕೇಳಿಕೊಂಡು ಹಾಳಾಗಬೇಡ.

    ReplyDelete

ಒಂದಷ್ಟು ಚಿತ್ರಗಳು..