Wednesday, August 19, 2009

ಪರಾವಲಂಬಿ ಟಾಪ್ ೮

ಜಿಗಣೆ

ಜಿಗಣೆಯೆಂದ ತತ್‍ಕ್ಷಣ ನನಗೆ ನೆನಪಾಗುವುದು ಬ್ರಹ್ಮಗಿರಿ. ಶ್ರೀಕಾಂತನಂತೂ ಬ್ರಹ್ಮಗಿರಿಯ ಜಿಗಣೆಗಳ ಬಗ್ಗೆ ಹಾಡನ್ನೇ ಬರೆದುಬಿಟ್ಟಿದ್ದಾನೆ.

ಜಿಗಣೆಯೆಂದೊಡನೆಯೇ ರಕ್ತ ಹೀರುವ ಕ್ಷುದ್ರ ಜೀವಿಯ ಚಿತ್ರವು ಕಣ್ಮುಂದೆ ಬರುವಷ್ಟರ ಮಟ್ಟಿಗೆ ಜಿಗಣೆಯ ಹೆಸರನ್ನು ಬಳಸುತ್ತೇವೆ. ಯಾರಾದರೂ ಪೀಡಿಸುತ್ತಿದ್ದರೆ ಆ ವ್ಯಕ್ತಿಯನ್ನು ನಕ್ಷತ್ರಿಕನಿಗೆ ಬಿಟ್ಟರೆ ಜಿಗಣೆಗೇ ಹೋಲಿಸುವುದು. ಆದರೆ ಇಲ್ಲಿ ಗಮನಿಸಬೇಕಾದ್ದು ಒಂದು ಅಂಶವಿದೆ. ಎಲ್ಲ ಜಿಗಣೆಗಳೂ ರಕ್ತ ಹೀರುವುದಿಲ್ಲ. ರಕ್ತವನ್ನುಂಡು ಬದುಕುವ ಜಿಗಣೆಗಳು ಒಂದು ಬಗೆಯವಷ್ಟೆ. ಕೆಲವು ಜಿಗಣೆಗಳು ಸಣ್ಣ ಸಣ್ಣ ಹುಳುಗಳನ್ನು ತಿಂದು ಬದುಕುತ್ತವೆ! ನಮ್ಮ ಮಣ್ಣು ಹುಳುಗಳಿಗೆ ಹತ್ತಿರದ ಸಂಬಂಧಿ ಈ ಜಿಗಣೆ.
ಜಿಗಣೆಗಳನ್ನು ನೆನೆಸಿಕೊಂಡಾಗ ಬೀಚಿಯವರ ಈ ’ಅಂದನಾ ತಿಂಮ’ವೊಂದು ಕೂಡ ನೆನಪಾಗುತ್ತೆ - ಬ್ರಹ್ಮಗಿರಿಯ ಚಾರಣದ ಜೊತೆಗೆ.

ಹೆಂಣು ಕಂಡೊಡನೆ ಹಲ್ಲ ಕಿರಿಯುವಿ ಏಕೆ?
ಹೆಂಣೊಂದು ಹುಂಣು, ಗಂಡು ಗಂಡಾಂತರ |
ಕಂಣ ತೆರೆ ಎಲೆ ಮೂರ್ಖ! ಲಿಂಗಾತೀತವು ಆತ್ಮ
ಬಂಣ ಬಗೆಬಗೆ ಉಂಟು, ಬಿಳಿ ಒಂದೆ ತಿಂಮ ||

ಆತ್ಮ - ಲಿಂಗ - ಮಣ್ಣು ಮಸಿಯ ಬಗ್ಗೆ ಇಲ್ಲಿ ತಲೆ ಕೆಡಿಸಿಕೊಳ್ಳುವುದು ಬೇಡ. ಆದರೆ ಈ ಜಿಗಣೆಗಳು ತತ್ತ್ವಶಾಸ್ತ್ರಜ್ಞರ ಆತ್ಮದಂತೆ ಲಿಂಗಾತೀತವಲ್ಲದಿದ್ದರೂ ದೇಹದ ಪರಿಧಿಯೊಳಗೇ ಲಿಂಗಾತೀತವು. ಜಿಗಣೆಗಳು ಗಂಡೂ ಹೌದು, ಹೆಣ್ಣೂ ಹೌದು. ಕೆಲ ಕಾಲ ಗಂಡಾಗಿರುತ್ತವೆ, ಮತ್ತೆ ಕೆಲ ಕಾಲ ಹೆಣ್ಣಾಗಿರುತ್ತವೆ! ಇಂಥ ಜೀವಿಗಳಿಗೆ ಹರ್ಮಾಫ್ರೊಡೈಟ್ ಎನ್ನುತ್ತಾರೆ.

ಗಂಡಾಗಲೀ ಹೆಣ್ಣಾಗಲೀ - ಇಲ್ಲಿ ನಾವು ನೋಡುತ್ತಿರುವ ಜಿಗಣೆಗೆ ರಕ್ತ ಹೀರುವುದು ಕರ್ಮ. ಹಾಗೆ ರಕ್ತ ಹಿರಲು ಇದರ ದೇಹದ ಎರಡು ಕೊನೆಯಲ್ಲೂ ಒಂದೊಂದು ಹೀರುಕೊಳವೆ (sucker) ಇರುತ್ತೆ. ಎರಡು ಹೀರುಕೊಳವೆಗಳನ್ನೂ ಆತಿಥೇಯ ಪ್ರಾಣಿಯ ಚರ್ಮದ ಮೇಲೆ ಊರಿ, ಗೋಂದು ಹಾಕಿ ಅಂಟಿಸಿದಂತೆ ಅಂಟಿಸುತ್ತೆ. ಯಾವುದರಿಂದ ಬೇಕಾದರೂ ಹೀರಬಲ್ಲ ಸಾಮರ್ಥ್ಯ ಇದೆ. ಅಂಟಿಕೊಂಡ ನಂತರ ರಕ್ತಸ್ರಾವವು ನಿಲ್ಲದಂತೆ ಹಿಸ್ಟಮೀನ್‍ಗಳನ್ನು, ಹಿರುಡಿನ್‍ಗಳನ್ನು ಮತ್ತು Anti-coagulant ಗಳನ್ನೂ ತನ್ನ ಬಾಯಿಯಿಂದ ಹೊರಹಾಕುತ್ತೆ. ಹಾಗಾಗಿಯೇ ಜಿಗಣೆ ಕಚ್ಚಿ ಬಿಟ್ಟ ನಂತರ ಬಹಳ ಹೊತ್ತು ರಕ್ತ ಸ್ರಾವವಾಗುತ್ತಲೇ ಇರುತ್ತೆ. ರಕ್ತ ಹೀರುತ್ತ ಹೀರುತ್ತ ಜಿಗಣೆಯ ದೇಹವು ಊದುವುದನ್ನು ಕಂಡಿದ್ದೇವಷ್ಟೆ? ಚೆನ್ನಾಗಿ ಹೊಟ್ಟೆ ತುಂಬ ಹೀರಿ ಧರಮ್ ಸಿಂಗ್‍ನಂತಾಗಿ ತಾನಾಗಿ ತಾನೇ ಬಿಟ್ಟುಬಿಡುತ್ತೆ. ವಾಸ್ತವವಾಗಿ ಜಿಗಣೆ ಕಚ್ಚಿದ ನಂತರ ಎಷ್ಟೊಂದು ರಕ್ತ ಹೋದಂತೆ ಅನ್ನಿಸುತ್ತೆ, ಆದರೆ ಅದು ತಪ್ಪು. ಬಹಳ ಕಡಿಮೆ ರಕ್ತ ಹೋಗುವುದು. ಜೊತೆಗೆ, ಯಾವುದೇ ರೀತಿಯ ಕಾಯಿಲೆಗಳು ಜಿಗಣೆಯಿಂದ ಹರಡುವುದಿಲ್ಲವಾದ್ದರಿಂದ ಜಿಗಣೆಯ ಈ ರಕ್ತಹೀರುವಿಕೆಯು ಪ್ರಾಚೀನ ಔಷಧಕ್ರಮದಲ್ಲಿಯೂ ಬಳಸುತ್ತಿದ್ದರು, ಈಗಲೂ ಬಳಸುತ್ತಾರೆ.ಕೆಲವೊಮ್ಮೆ ಅಲರ್ಜಿಯಾಗಬಹುದು - ನವೆಯುಂಟಾಗುವಂತೆ. ಅದಕ್ಕೆ ಕಾರಣ ಜಿಗಣೆಯು ಸ್ರವಿಸುವ ಹಿರುಡಿನ್. ನನಗೆ ಈ ಅಲರ್ಜಿಯಿದೆ. ಜಿಗಣೆಯ ಕಡಿತಕ್ಕೆ ಸಿಲುಕಿಕೊಂಡರೆ ಚಾರಣ ಮುಗಿಸಿಕೊಂಡು ಬಂದ ನಂತರ ಒಂದು ತಿಂಗಳು ಕೈಕಾಲು ತುರಿಸಿಕೊಳ್ಳುವುದು ನನ್ನ ಹವ್ಯಾಸ.

ಅತಿಯಾಗಿ ಮಳೆಯುಂಟಾಗುವ ಪ್ರದೇಶದಲ್ಲಿ ಮಾತ್ರ ಕಾಣಸಿಗುವುದರಿಂದ ಬೆಂಗಳೂರಿಗರು ಜಿಗಣೆಗಳನ್ನು ನೋಡಲು ಸಾಕಷ್ಟು ಪ್ರಯಾಣ ಮಾಡಬೇಕಾದೀತು. ಉಪ್ಪಿಲ್ಲದ ನೀರಿನಲ್ಲಿ, ಕೆಸರು ಪ್ರದೇಶಗಳಲ್ಲಿ - ಕಾಣಿಸುವ ಜಿಗಣೆಗಳನ್ನು ಮಾಲಿನ್ಯ ಸೂಚಕವಾಗಿಯೂ ಪರಿಗಣಿಸುತ್ತಾರೆ ಪರಿಸರತಜ್ಞರು. ಯಾವ ಕಾಡಿನಲ್ಲಿ ಜಿಗಣೆಗಳು ಹೆಚ್ಚು ಕಂಡುಬರುತ್ತದೆಯೋ ಆ ಕಾಡು ಅತ್ಯಂತ ಕಡಿಮೆ ಮಾಲಿನ್ಯಕ್ಕೊಳಗಾಗಿದೆಯೆಂದು.
ಮಳೆಯಾಗದ ಕಾಲದಲ್ಲಿ, ಬರಗಾಲದಲ್ಲಿ, ಬೇಸಿಗೆಯಲ್ಲಿ, ಜಿಗಣೆಗಳು ಅಜ್ಞಾತವಾಸಕ್ಕೆ (hibernation) ಹೊರಟು ಹೋಗುತ್ತವೆ - ಮಣ್ಣೊಳಗೆ. ತನ್ನ ದೇಹದ ತೂಕವು ಶೇ. ತೊಂಭತ್ತರಷ್ಟು ಇಳಿದರೂ ಜೀವಂತವಾಗಿರಬಲ್ಲದು. ನಂತರ, ಮತ್ತೆ ಮಳೆಯಾದಾಗ, ಮೇಲೆ ಬರುತ್ತೆ - ಯಾವುದಾದರೂ ಪ್ರಾಣಿಯು ನಡೆದಾಡುತ್ತಿದ್ದರೆ ಅದರ ಮೇಲೆ ಹತ್ತುಬಿಟ್ಟು ಹಬ್ಬದೂಟ ಮಾಡಲು. ಸೊಳ್ಳೆಗಳಂತೆಯೇ ಇವೂ ಸಹ ಉಷ್ಣವನ್ನು ಗ್ರಹಿಸಿ ಯಾವುದಾದರೂ ಪ್ರಾಣಿಯನ್ನು ಹತ್ತುವುದು. ಅಂದರೆ ನನ್ನಿಂದ ಹೊರಹೊಮ್ಮುವ ಉಷ್ಣವನ್ನು (ಇಂಗಾಲದ ಡೈ ಆಕ್ಸೈಡ್ ಸಹ ಕಾರಣ ಇದಕ್ಕೆ) ಕಂಡು ಹಿಡಿದುಕೊಂಡು ಆ ದಿಕ್ಕಿನಲ್ಲಿ ಚಲಿಸುತ್ತ ಬಂದು ನನ್ನನ್ನು ಏರುತ್ತೆ. ಹಾಗಾಗಿಯೇ ಒಂದು ವೇಳೆ ಇಬ್ಬರು ತಮ್ಮ ಕಾಲನ್ನು ಜಿಗಣೆಗೆ ತೋರಿಸಿದರೆ, ಯಾರದಾದರೂ ಒಬ್ಬರ ಮೇಲೆ ಹತ್ತುತ್ತೆ ಅಷ್ಟೆ - ಯಾರಿಂದ ಹೆಚ್ಚು ಉಷ್ಣವು ಹೊರಹೊಮ್ಮುತ್ತಿರುತ್ತೋ ಅವರ ಮೇಲೆ!

-ಅ
06.09.2009
9.30PM

7 comments:

 1. idarinda bachavago upaya hELi saar. idu kala mEle hattadE iruva hAge enAdru ..... ?

  ReplyDelete
 2. thanks for more info on "imbLa", especially information about hermaphrodite..

  ReplyDelete
 3. ree meshtre, keliddakke utra hELi modalu... kaytha idini

  ReplyDelete
 4. [ವಿ.ರಾ.ಹೆ.] 15 dina beLagginda raatri haakikonDa socks haakkonDu jigaNe iro jaagakke hogi. jigaNe ondu maili doora idroo prajne tappi beeLatte. sumne meshTranna keLbeDi. naan koTTirodikkinta oLLe idea aa baDa meshTru elli koDtaare paapa?

  ReplyDelete
 5. ಶ್ರೀಕಾಂತ್, ಒಳ್ಳೇ ಐಡಿಯಾನೇ ಕೊಟ್ಟಿದ್ದೀರಾ. ಆದ್ರೆ ಅದಕ್ಕೂ ಮುಂಚೆ ಸುತ್ತಮುತ್ತ ಇರೋ ಮನುಷ್ಯರೇ ತಲೆತಿರುಗಿ ಬೀಳ್ತಾರೆನೋ ಅಂತ ಭಯ ! :)

  ಮೇಸ್ಟ್ರು ಎಲ್ಲೋದ್ರು? ನಮ್ ಡೌಟಿಗೆ ಉತ್ತರನೇ ಕೊಡ್ತಿಲ್ವಲ್ಲ ! :(

  ReplyDelete
  Replies
  1. ಕಾಫಿ ತೋಟಗಳಲ್ಲಿ ಜಿಗಣೆಗಳು ಜಾಸ್ತಿ.. ಅಲ್ಲಿ ಕೆಲಸ ಮಾಡುವವ್ರು ಏನ್ ಮಾಡ್ತಾರೆ ಗೊತ್ತ...?
   ಹುಳಿ + ಉಪ್ಪು ಅಸ್ಟೆ..
   ಕಾಲಿಗೆ ತಿಕ್ಕಿಕೊಂಡ್ರೆ ಆಯ್ತು ನೀವು ಸೇಫ್

   ವಂದನೆಗಳೊಂದಿಗೆ.
   ಕಂಡಷ್ಟೂ ಖಗೋಳ

   Delete

ಒಂದಷ್ಟು ಚಿತ್ರಗಳು..