Wednesday, August 19, 2009

ಪರಾವಲಂಬಿ ಟಾಪ್ ೮

ಜಿಗಣೆ

ಜಿಗಣೆಯೆಂದ ತತ್‍ಕ್ಷಣ ನನಗೆ ನೆನಪಾಗುವುದು ಬ್ರಹ್ಮಗಿರಿ. ಶ್ರೀಕಾಂತನಂತೂ ಬ್ರಹ್ಮಗಿರಿಯ ಜಿಗಣೆಗಳ ಬಗ್ಗೆ ಹಾಡನ್ನೇ ಬರೆದುಬಿಟ್ಟಿದ್ದಾನೆ.

ಜಿಗಣೆಯೆಂದೊಡನೆಯೇ ರಕ್ತ ಹೀರುವ ಕ್ಷುದ್ರ ಜೀವಿಯ ಚಿತ್ರವು ಕಣ್ಮುಂದೆ ಬರುವಷ್ಟರ ಮಟ್ಟಿಗೆ ಜಿಗಣೆಯ ಹೆಸರನ್ನು ಬಳಸುತ್ತೇವೆ. ಯಾರಾದರೂ ಪೀಡಿಸುತ್ತಿದ್ದರೆ ಆ ವ್ಯಕ್ತಿಯನ್ನು ನಕ್ಷತ್ರಿಕನಿಗೆ ಬಿಟ್ಟರೆ ಜಿಗಣೆಗೇ ಹೋಲಿಸುವುದು. ಆದರೆ ಇಲ್ಲಿ ಗಮನಿಸಬೇಕಾದ್ದು ಒಂದು ಅಂಶವಿದೆ. ಎಲ್ಲ ಜಿಗಣೆಗಳೂ ರಕ್ತ ಹೀರುವುದಿಲ್ಲ. ರಕ್ತವನ್ನುಂಡು ಬದುಕುವ ಜಿಗಣೆಗಳು ಒಂದು ಬಗೆಯವಷ್ಟೆ. ಕೆಲವು ಜಿಗಣೆಗಳು ಸಣ್ಣ ಸಣ್ಣ ಹುಳುಗಳನ್ನು ತಿಂದು ಬದುಕುತ್ತವೆ! ನಮ್ಮ ಮಣ್ಣು ಹುಳುಗಳಿಗೆ ಹತ್ತಿರದ ಸಂಬಂಧಿ ಈ ಜಿಗಣೆ.
ಜಿಗಣೆಗಳನ್ನು ನೆನೆಸಿಕೊಂಡಾಗ ಬೀಚಿಯವರ ಈ ’ಅಂದನಾ ತಿಂಮ’ವೊಂದು ಕೂಡ ನೆನಪಾಗುತ್ತೆ - ಬ್ರಹ್ಮಗಿರಿಯ ಚಾರಣದ ಜೊತೆಗೆ.

ಹೆಂಣು ಕಂಡೊಡನೆ ಹಲ್ಲ ಕಿರಿಯುವಿ ಏಕೆ?
ಹೆಂಣೊಂದು ಹುಂಣು, ಗಂಡು ಗಂಡಾಂತರ |
ಕಂಣ ತೆರೆ ಎಲೆ ಮೂರ್ಖ! ಲಿಂಗಾತೀತವು ಆತ್ಮ
ಬಂಣ ಬಗೆಬಗೆ ಉಂಟು, ಬಿಳಿ ಒಂದೆ ತಿಂಮ ||

ಆತ್ಮ - ಲಿಂಗ - ಮಣ್ಣು ಮಸಿಯ ಬಗ್ಗೆ ಇಲ್ಲಿ ತಲೆ ಕೆಡಿಸಿಕೊಳ್ಳುವುದು ಬೇಡ. ಆದರೆ ಈ ಜಿಗಣೆಗಳು ತತ್ತ್ವಶಾಸ್ತ್ರಜ್ಞರ ಆತ್ಮದಂತೆ ಲಿಂಗಾತೀತವಲ್ಲದಿದ್ದರೂ ದೇಹದ ಪರಿಧಿಯೊಳಗೇ ಲಿಂಗಾತೀತವು. ಜಿಗಣೆಗಳು ಗಂಡೂ ಹೌದು, ಹೆಣ್ಣೂ ಹೌದು. ಕೆಲ ಕಾಲ ಗಂಡಾಗಿರುತ್ತವೆ, ಮತ್ತೆ ಕೆಲ ಕಾಲ ಹೆಣ್ಣಾಗಿರುತ್ತವೆ! ಇಂಥ ಜೀವಿಗಳಿಗೆ ಹರ್ಮಾಫ್ರೊಡೈಟ್ ಎನ್ನುತ್ತಾರೆ.

ಗಂಡಾಗಲೀ ಹೆಣ್ಣಾಗಲೀ - ಇಲ್ಲಿ ನಾವು ನೋಡುತ್ತಿರುವ ಜಿಗಣೆಗೆ ರಕ್ತ ಹೀರುವುದು ಕರ್ಮ. ಹಾಗೆ ರಕ್ತ ಹಿರಲು ಇದರ ದೇಹದ ಎರಡು ಕೊನೆಯಲ್ಲೂ ಒಂದೊಂದು ಹೀರುಕೊಳವೆ (sucker) ಇರುತ್ತೆ. ಎರಡು ಹೀರುಕೊಳವೆಗಳನ್ನೂ ಆತಿಥೇಯ ಪ್ರಾಣಿಯ ಚರ್ಮದ ಮೇಲೆ ಊರಿ, ಗೋಂದು ಹಾಕಿ ಅಂಟಿಸಿದಂತೆ ಅಂಟಿಸುತ್ತೆ. ಯಾವುದರಿಂದ ಬೇಕಾದರೂ ಹೀರಬಲ್ಲ ಸಾಮರ್ಥ್ಯ ಇದೆ. ಅಂಟಿಕೊಂಡ ನಂತರ ರಕ್ತಸ್ರಾವವು ನಿಲ್ಲದಂತೆ ಹಿಸ್ಟಮೀನ್‍ಗಳನ್ನು, ಹಿರುಡಿನ್‍ಗಳನ್ನು ಮತ್ತು Anti-coagulant ಗಳನ್ನೂ ತನ್ನ ಬಾಯಿಯಿಂದ ಹೊರಹಾಕುತ್ತೆ. ಹಾಗಾಗಿಯೇ ಜಿಗಣೆ ಕಚ್ಚಿ ಬಿಟ್ಟ ನಂತರ ಬಹಳ ಹೊತ್ತು ರಕ್ತ ಸ್ರಾವವಾಗುತ್ತಲೇ ಇರುತ್ತೆ. ರಕ್ತ ಹೀರುತ್ತ ಹೀರುತ್ತ ಜಿಗಣೆಯ ದೇಹವು ಊದುವುದನ್ನು ಕಂಡಿದ್ದೇವಷ್ಟೆ? ಚೆನ್ನಾಗಿ ಹೊಟ್ಟೆ ತುಂಬ ಹೀರಿ ಧರಮ್ ಸಿಂಗ್‍ನಂತಾಗಿ ತಾನಾಗಿ ತಾನೇ ಬಿಟ್ಟುಬಿಡುತ್ತೆ. ವಾಸ್ತವವಾಗಿ ಜಿಗಣೆ ಕಚ್ಚಿದ ನಂತರ ಎಷ್ಟೊಂದು ರಕ್ತ ಹೋದಂತೆ ಅನ್ನಿಸುತ್ತೆ, ಆದರೆ ಅದು ತಪ್ಪು. ಬಹಳ ಕಡಿಮೆ ರಕ್ತ ಹೋಗುವುದು. ಜೊತೆಗೆ, ಯಾವುದೇ ರೀತಿಯ ಕಾಯಿಲೆಗಳು ಜಿಗಣೆಯಿಂದ ಹರಡುವುದಿಲ್ಲವಾದ್ದರಿಂದ ಜಿಗಣೆಯ ಈ ರಕ್ತಹೀರುವಿಕೆಯು ಪ್ರಾಚೀನ ಔಷಧಕ್ರಮದಲ್ಲಿಯೂ ಬಳಸುತ್ತಿದ್ದರು, ಈಗಲೂ ಬಳಸುತ್ತಾರೆ.ಕೆಲವೊಮ್ಮೆ ಅಲರ್ಜಿಯಾಗಬಹುದು - ನವೆಯುಂಟಾಗುವಂತೆ. ಅದಕ್ಕೆ ಕಾರಣ ಜಿಗಣೆಯು ಸ್ರವಿಸುವ ಹಿರುಡಿನ್. ನನಗೆ ಈ ಅಲರ್ಜಿಯಿದೆ. ಜಿಗಣೆಯ ಕಡಿತಕ್ಕೆ ಸಿಲುಕಿಕೊಂಡರೆ ಚಾರಣ ಮುಗಿಸಿಕೊಂಡು ಬಂದ ನಂತರ ಒಂದು ತಿಂಗಳು ಕೈಕಾಲು ತುರಿಸಿಕೊಳ್ಳುವುದು ನನ್ನ ಹವ್ಯಾಸ.

ಅತಿಯಾಗಿ ಮಳೆಯುಂಟಾಗುವ ಪ್ರದೇಶದಲ್ಲಿ ಮಾತ್ರ ಕಾಣಸಿಗುವುದರಿಂದ ಬೆಂಗಳೂರಿಗರು ಜಿಗಣೆಗಳನ್ನು ನೋಡಲು ಸಾಕಷ್ಟು ಪ್ರಯಾಣ ಮಾಡಬೇಕಾದೀತು. ಉಪ್ಪಿಲ್ಲದ ನೀರಿನಲ್ಲಿ, ಕೆಸರು ಪ್ರದೇಶಗಳಲ್ಲಿ - ಕಾಣಿಸುವ ಜಿಗಣೆಗಳನ್ನು ಮಾಲಿನ್ಯ ಸೂಚಕವಾಗಿಯೂ ಪರಿಗಣಿಸುತ್ತಾರೆ ಪರಿಸರತಜ್ಞರು. ಯಾವ ಕಾಡಿನಲ್ಲಿ ಜಿಗಣೆಗಳು ಹೆಚ್ಚು ಕಂಡುಬರುತ್ತದೆಯೋ ಆ ಕಾಡು ಅತ್ಯಂತ ಕಡಿಮೆ ಮಾಲಿನ್ಯಕ್ಕೊಳಗಾಗಿದೆಯೆಂದು.
ಮಳೆಯಾಗದ ಕಾಲದಲ್ಲಿ, ಬರಗಾಲದಲ್ಲಿ, ಬೇಸಿಗೆಯಲ್ಲಿ, ಜಿಗಣೆಗಳು ಅಜ್ಞಾತವಾಸಕ್ಕೆ (hibernation) ಹೊರಟು ಹೋಗುತ್ತವೆ - ಮಣ್ಣೊಳಗೆ. ತನ್ನ ದೇಹದ ತೂಕವು ಶೇ. ತೊಂಭತ್ತರಷ್ಟು ಇಳಿದರೂ ಜೀವಂತವಾಗಿರಬಲ್ಲದು. ನಂತರ, ಮತ್ತೆ ಮಳೆಯಾದಾಗ, ಮೇಲೆ ಬರುತ್ತೆ - ಯಾವುದಾದರೂ ಪ್ರಾಣಿಯು ನಡೆದಾಡುತ್ತಿದ್ದರೆ ಅದರ ಮೇಲೆ ಹತ್ತುಬಿಟ್ಟು ಹಬ್ಬದೂಟ ಮಾಡಲು. ಸೊಳ್ಳೆಗಳಂತೆಯೇ ಇವೂ ಸಹ ಉಷ್ಣವನ್ನು ಗ್ರಹಿಸಿ ಯಾವುದಾದರೂ ಪ್ರಾಣಿಯನ್ನು ಹತ್ತುವುದು. ಅಂದರೆ ನನ್ನಿಂದ ಹೊರಹೊಮ್ಮುವ ಉಷ್ಣವನ್ನು (ಇಂಗಾಲದ ಡೈ ಆಕ್ಸೈಡ್ ಸಹ ಕಾರಣ ಇದಕ್ಕೆ) ಕಂಡು ಹಿಡಿದುಕೊಂಡು ಆ ದಿಕ್ಕಿನಲ್ಲಿ ಚಲಿಸುತ್ತ ಬಂದು ನನ್ನನ್ನು ಏರುತ್ತೆ. ಹಾಗಾಗಿಯೇ ಒಂದು ವೇಳೆ ಇಬ್ಬರು ತಮ್ಮ ಕಾಲನ್ನು ಜಿಗಣೆಗೆ ತೋರಿಸಿದರೆ, ಯಾರದಾದರೂ ಒಬ್ಬರ ಮೇಲೆ ಹತ್ತುತ್ತೆ ಅಷ್ಟೆ - ಯಾರಿಂದ ಹೆಚ್ಚು ಉಷ್ಣವು ಹೊರಹೊಮ್ಮುತ್ತಿರುತ್ತೋ ಅವರ ಮೇಲೆ!

-ಅ
06.09.2009
9.30PM

Saturday, August 15, 2009

ಪರಾವಲಂಬಿ ಟಾಪ್ ೯

ಹೇನು

"ತಲೆಗೆ ತಾಕಿತೊ ತಲೆ...
ಹೇನುಗಳಿಗೆ ಸಿಕ್ಕಿತು ಹೊಸ ನೆಲೆ..." (ಹೀಗೆಂದು ದೂರದರ್ಶನದಲ್ಲಿ ಒಂದು ಜಾಹೀರಾತು ಬರುತ್ತಿತ್ತು)

ತಲೆಯಲ್ಲಿ ಮಾತ್ರವಲ್ಲ! ಕೂದಲು ಎಲ್ಲಿ ಹೆಚ್ಚು ಬೆಳೆಸಿಕೊಂಡಿರುತ್ತೇವೋ ಅಲ್ಲೆಲ್ಲ ಹೇನುಗಳು ವಾಸಿಸಬಲ್ಲುದು ಎಂಬುದನ್ನು ಅರಿತುಕೊಂಡಿರಬೇಕು. Pubic Louse ಕೂಡ ಇದೆ ಎಂಬುದನ್ನು ಅನೇಕರು ತಿಳಿದಿಲ್ಲ.

ಈಗ ಸದ್ಯಕ್ಕೆ ಮನುಷ್ಯನ ತಲೆ ಕೂದಲಿನಲ್ಲಿ ವಾಸಿಸುವ ಹೇನಿನ ಬಗ್ಗೆ ನೋಡೋಣ.ಅಲ್ಪಾಯುಷಿಯಾದ ಹೇನುಗಳು ಒಂದು ವಾರದೊಳಕ್ಕೆ ’ವಯಸ್ಕ’ ಆಗಿಬಿಡುತ್ತೆ. ಒಂದು ತಿಂಗಳಷ್ಟೇ ಬದುಕ ಬಲ್ಲ ಹೇನು ದಿನಕ್ಕೆ ಹತ್ತರಿಂದ ಹನ್ನೆರಡು ಮೊಟ್ಟೆಯನ್ನಿಡಬಲ್ಲದು. ಸಾಮಾನ್ಯವಾಗಿ ಹೇನುಗಳ ಮೊಟೇಗೆ ಸೀರು ಅಥವಾ ಸೀರುಂಡೆ ಎಂದೂ ಕರೆಯುತ್ತೇವೆ. (ಸಿಕ್ದೋರ‍್ಗೆ ಸೀರುಂಡೆ ಎಂಬ ನುಡಿಗಟ್ಟು ಯಾರಿಗೆ ತಾನೆ ಗೊತ್ತಿಲ್ಲ!). ನಮ್ಮ ದೇಶದ ಹೆಂಗಸರು ತಲೆಯ ಮೇಲೆ ಅಧಿಕವಾಗಿ ಕೂದಲು ಬೆಳೆಸಿಕೊಳ್ಳುವ ಸಲುವಾಗಿ ಗಂಡಸರಿಗಿಂತಲೂ ಹೆಂಗಸರಲ್ಲೇ ಹೆಚ್ಚು ಕಾಣಸಿಗುವುದು. ಹೇನುಗಳಿಗೆ ಸುರಕ್ಷಿತವಾದ ವಾಸಸ್ಥಳವನ್ನು ಒದಗಿಸಿಕೊಡುವುದೇ ಕೂದಲು. ಹಾಗಾಗಿ ಕೂದಲು ಹೆಚ್ಚು ಬೆಳೆಯುವ ಪ್ರಾಣಿಗಳಲ್ಲಿ ಹೇನುಗಳು ಹೆಚ್ಚಾಗಿರುತ್ತವೆ. ಕೋತಿಗಳ ಹೇನು ಹೆಕ್ಕುವಿಕೆಯನ್ನು ನಾವೆಲ್ಲರೂ ನೋಡಿದ್ದೇವಷ್ಟೆ?ಹೇನುಗಳಿಂದ ರೋಗಗಳೇನೂ ಬರುವುದಿಲ್ಲ, ಆದರೆ ತಲೆ ಕೆರೆತವೇ ದೊಡ್ಡ ರೋಗದಂತಿರುತ್ತೆ. ರಕ್ತ ಮಾತ್ರವನ್ನೇ ಅವಲಂಬಿಸಿ ಬದುಕುವ ಹೇನುಗಳು ಚಿಕ್ಕ ಮಕ್ಕಳಿಂದ ಹಿಡಿದು ಮುದುಕಿಯರವರೆಗೂ ತಲೆ ಕೆಡಿಸುವ, ತಲೆ ಕೆರಿಸುವ ಶತ್ರು ಹೇನು. ಸಲೀಸಾಗಿ ಗುರುತಿಸಲು ಸಾಧ್ಯವಾದರೂ ಬೇಟೆಯಾಡಲು ಸ್ವಲ್ಪ ಅಭ್ಯಾಸವು ಇರಲೇ ಬೇಕು. ಕೋತಿಗಳ ಹಾಗೆ ಹೇನನ್ನು ನಾವು ತಿನ್ನುವ ಹಾಗಿಲ್ಲವಾದ್ದರಿಂದ ಉಗುರಿನ ಮೇಲಿಟ್ಟು ಅಪ್ಪಚ್ಚಿ ಮಾಡುವುದನ್ನು ರೂಢಿಸಿಕೊಂಡಿರುತ್ತೇವೆ. ಒಳ್ಳೆಯ ತೈಲದ ಬಳಕೆ, ಸೀಗೆ ಕಾಯಿ ಪುಡಿ ಹಾಕಿಕೊಂಡು ಮಾಡುವ ಸ್ನಾನ, ಕೂದಲನ್ನು ಶುಚಿಯಾಗಿಟ್ಟುಕೊಳ್ಳುವುದು, ಶುಚಿಯಾದ ಬಾಚಣಿಗೆಯ ಬಳಕೆ - ಇವುಗಳಿಂದ ಹೇನುಗಳ ಬರುವಿಕೆಯನ್ನು ತಡೆಯಬಹುದು.

.....................................................................................

ಮುಂದಿನ ಸಲ, ನನ್ನ ಪಟ್ಟಿಯಲ್ಲಿರುವ ಟಾಪ್ ಎಂಟನ್ನು ಭೇಟಿಯಾಗೋಣ.

-ಅ
15.08.2009
11PM

Monday, August 03, 2009

ಪರಾವಲಂಬಿ ಟಾಪ್ ೧೦

'ಪರಾವಲಂಬಿ' ಎನ್ನುವ ಪದದ ವಿಸ್ತಾರವು ಹೆಚ್ಚಾಯಿತೇನೋ. ಇಂಗ್ಲೀಷಿನಲ್ಲಿ ಸುಲಭವಾಗಿ Parasites ಎನ್ನಬಹುದು. ನಮ್ಮ ಶತ್ರುಗಳು! ನಮಗೆ ಅವುಗಳ ಕಂಡರೆ ಎಷ್ಟು ದ್ವೇಷವೋ ನಮ್ಮನ್ನು ಕಂಡರೆ ಅದರ ಹತ್ತರಷ್ಟು ಪ್ರೀತಿ. ಹೇಗಿದೆ ವಿಪರ್ಯಾಸ!

ಒಂದಿಷ್ಟು ಪ್ಯಾರಾಸೈಟುಗಳ ಪರಿಚಯ ಮಾಡಿಕೊಳ್ಳೋಣ. ಹಾಗೇ ನನ್ನ ಪ್ರಕಾರದ "ಕೌಂಟ್ ಡೌನ್" ಇಲ್ಲಿದೆ.

ವಿ.ಸೂ. - ಮನುಷ್ಯನ ಮೇಲೆ ’ಅವಲಂಬಿ’ಯಾಗಿರುವ ಜೀವಿಗಳಿಗೆ ಹೆಚ್ಚು ಪ್ರಾಶಸ್ತ್ಯ ಈ ’ಕೌಂಟ್ ಡೌನ್’ನಲ್ಲಿ!

.....................................................................................

--> ಟಾಪ್ ೧೦ - ತಿಗಣೆ

ನಾನೂ ನನ್ನ ಹೆಂಡತಿಯೂ ಮಡಿಕೇರಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾಗ ರಾತ್ರಿಯಿಡೀ ಬಸ್ಸಿನಲ್ಲಿ ನಮ್ಮ ನಿದ್ದೆ ಕೆಡಿಸಿದ್ದವು. ನನಗೆ ಮಾತ್ರವೇ ಕೈ ಕಾಲು ನವೆಯೆಂದು ಭಾವಿಸಿದ್ದೆ ಮೊದಮೊದಲು. ನಂತರ ಅವಳೂ ಕೆರೆದುಕೊಳ್ಳುತ್ತಿದ್ದುದನ್ನು ನೋಡಿ, "mostly ಇಬ್ಬರಿಗೂ ಆಹಾರ ಏನೋ ಅಲರ್ಜಿ ಆಗಿರಬೇಕು" ಎಂದು ದೊಡ್ಡ ಆಲೋಪತಿ ಡಾಕ್ಟರಂತೆ ಹೇಳಿಕೆ ಕೊಟ್ಟೆ. ಮತ್ತೆ ಸ್ವಲ್ಪ ಹೊತ್ತಾದ ಮೇಲೆ ನವೆ ತಡೆಯಲು ಸಾಧ್ಯವೇ ಆಗದೇ ಇದ್ದಾಗ ಅಕ್ಕ ಪಕ್ಕ ಎಲ್ಲ ತಿರುಗಿದಾಗ ಗೊತ್ತಾಯಿತು ಇರುವವರೆಲ್ಲರೂ ಕೆರೆದುಕೊಂಡು ಆನಂದ ಅನುಭವಿಸುತ್ತಿದ್ದರು. ಅಷ್ಟರಲ್ಲಿ ರಾಜಹಂಸವು ಹುಣಸೂರಿನ ಬಳಿ "ಹತ್ ನಿಮಿಷ ಟೈಮಿದೆ ನೋಡಿ" ಎಂದು ನಿಲ್ಲಿಸಿತು. ಕೆಳಗಿಳಿದು ಬೆಳಕಿನಲ್ಲಿ ನೋಡಿಕೊಂಡರೆ ಮುಖದ ಮೇಲೆ, ಕುತ್ತಿಗೆ ಮೇಲೆ, ಕೈ ಕಾಲುಗಳಲ್ಲಿ ಗಂಧೆಗಳು! ನನ್ನ ಅಂಗಿಯ ಮೇಲೆ ಜಿರಲೆಯ ಮರಿಯಂತೆ ಕಂಡ ತಿಗಣೆಯನ್ನು ಕೈಯಲ್ಲಿ ಹಿಡಿದು ಹೊಸಕಿ ಹಾಕಿದೆ. ರಕ್ತವು ಚಿಮ್ಮಿತು. ಎಳನೀರು ಮಾರುವವನು ತಿಗಣೆಯ ಬಗ್ಗೆ ಆಮೂಲಾಗ್ರ ಮಾಹಿತಿಯನ್ನು ದಯಪಾಲಿಸಿದ. ರೇಖಾಳ ಬಟ್ಟೆಯ ಮೇಲಿದ್ದ ತಿಗಣೆಗಳ ಬೇಟೆಯನ್ನು ನಾನಾಡಿದೆ, ನನ್ನ ಅಂಗಿಯ ಮೇಲಿನ ತಿಗಣೆಗಳ ಬೇಟೆಯನ್ನು ಅವಳು ಆಡಿದಳು. ಸುಮಾರು ಹತ್ತು ತಿಗಣೆಗಳು ನನ್ನ ಅಂಗಿಯ ಮೇಲೆ ಅವಳಿಗೆ ಸಿಕ್ಕಿತು.

ನಿಶಾಚಾರಿ ಜೀವಿಯಾದ ತಿಗಣೆಯು ಸಾಮಾನ್ಯವಾಗಿ ಹಾಸಿಗೆಯನ್ನು ಬಯಸುತ್ತೆ. ರಾಜಹಂಸವನ್ನೂ ಬಯಸುತ್ತೆಂದು ನಮಗೆ ಗೊತ್ತಿರಲಿಲ್ಲ. ಸೀಮೆಯೆಣ್ಣೆಯನ್ನು ತಿಗಣೆ ಬಾರದಂತೆ ಸಿಂಪಡಿಸುತ್ತಾರೆಂದು ಕಂಡಕ್ಟರು ಹೇಳಿದ್ದ. "ದೀಪ ಹಾಕ್ಬಿಡ್ತೀವಿ, ಮೇಲೆ ಬರಲ್ಲ ತಿಗಣೆಗಳು, ಸೀಟಿನ ಒಳಗೆ ಸೇರಿಕೊಂಡು ಬಿಡುತ್ತವೆ" ಎಂದು ಕಂಡಕ್ಟರು ಹೇಳಿದರೂ ನಮಗೆ ನಮ್ಮ ಸೀಟಿಗೆ ಹೋಗಲು ಧೈರ್ಯವಾಗಲಿಲ್ಲ. ಹುಣಸೂರಿನಿಂದ ಬೆಂಗಳೂರಿನವರೆಗೂ ಡ್ರೈವರ್ ಪಕ್ಕದ ಕ್ಯಾಬಿನ್ ಸೀಟಿನಲ್ಲಿ ಕುಳಿತು ಪಯಣಿಸಿದ್ದೆವು. ತಿಗಣೆಗಳು ಕಚ್ಚಿದಾಗ ಆಗುವ ಗಂಧೆಗಳೂ ಹೆಚ್ಚೂಕಮ್ಮಿ ಜೇಡಗಳು ಕಚ್ಚುವಾಗ (ಕೆಲವು ಜೇಡಗಳು ಕಚ್ಚುತ್ತವೆ, ಮತ್ತು ಅದರಿಂದ ಅಲರ್ಜಿಯಾಗುತ್ತವೆ) ಆಗುವಂತೆಯೇ ಆಗುತ್ತೆ. ಆದರೆ ತಿಗಣೆಗಳಿಂದ ರೋಗ ಹರಡುವ ಪುರಾವೆ ಸಿಕ್ಕಿಲ್ಲ. ತಿಗಣೆ ತನ್ನ ಪಾಡಿಗೆ ಒಂದಷ್ಟು ರಕ್ತ ಕುಡಿದು ಹೋಗುತ್ತೆ. Of course, ನವೆಯುಂಟು ಮಾಡುವುದು. ಇನ್ನೂ ಹೆಚ್ಚು ತೊಂದರೆಯೆಂದರೆ ನಮ್ಮ ಮೈ ಮೇಲೆ ತಿಗಣೆಯೊಂದು ಕಂಡು ಬಂದರೇ ಸಾಕು, ಎಲ್ಲಿಲ್ಲದ ಆತಂಕ ಕಿರಿಕಿರಿ! ಆದರೆ ಬಹು ದೊಡ್ಡ ಸಮಸ್ಯೆಯೆಂದರೆ ಒಂದು ತಿಗಣೆಯು ತನ್ನ ಜೀವಮಾನದಲ್ಲಿ ಐನೂರಕ್ಕೂ ಹೆಚ್ಚು ಮೊಟ್ಟೆಯಿಡಬಲ್ಲುದು.

ಸಾಮಾನ್ಯವಾಗಿ ತಿಗಣೆಗಳು ತೇವಾಂಶವಿರುವ ಹಾಸಿಗೆಯ, ಹೊದಿಕೆಗಳ, ಬಟ್ಟೆಗಳಲ್ಲಲ್ಲದೆ ತನ್ನ ಸುತ್ತಮುತ್ತ ರಕ್ತವುಳ್ಳ ಪ್ರಾಣಿಯಿರುವ ಯಾವುದೇ ಸಂದಿಗೊಂದಿಗಳಲ್ಲಿ ಬೇಕಾದರೂ ವಾಸಿಸಬಹುದು. ಡಿ.ಡಿ.ಟಿ. ಸಿಂಪಡಿಸುವುದರಿಂದ ತಿಗಣೆಗಳು ನಾಶವಾಗುತ್ತವೆ. (ಡಿ.ಡಿ.ಟಿ.ಯು ನಿಧಾನವಾಗಿ ನಮ್ಮ ನಾಶಕ್ಕೂ ಕಾರಣವಾದೀತು).....................................................................................

ಮುಂದಿನ ಸಲ ನನ್ನ ಪ್ರಕಾರದ ಟಾಪ್ ೯ ನ್ನು ನೋಡೋಣ.

-ಅ
03.08.2009
8.30PM

ಒಂದಷ್ಟು ಚಿತ್ರಗಳು..