Wednesday, July 15, 2009

ಶಕ್ತಿ

ಹಿರಿಯರೊಬ್ಬರು ಸರ್. ಎಂ. ವಿ.ಯವರನ್ನು ಕೇಳಿದ್ದರಂತೆ "ನಮ್ಮ ಜೋಗದ ಸೊಬಗು ಎಷ್ಟು ಸೊಗಸಾಗಿದೆ ಅಲ್ಲವೆ, ಎಂ.ವಿ.?" ಸರ್. ಎಂ.ವಿ.ಯವರು ಜೋಗದ ಜಲಧಾರೆಯನ್ನು ಅದೇ ಮೊದಲು ನೋಡಿದ್ದು. ಅಲ್ಲಿ ಆಗ ಬೇಲಿಯಿರಲಿಲ್ಲ, ಅಣೆಕಟ್ಟಿರಲಿಲ್ಲ, ಏನೂ ಇರಲಿಲ್ಲ. ಶರಾವತಿಯು ಯಾರ ಅಡಚಣೆಯೂ ಇಲ್ಲದೆ ಬೆಟ್ಟದ ಮೇಲಿನಿಂದ ಧಾರಾಕಾರವಾಗಿ ಧುಮ್ಮಿಕ್ಕುತ್ತಿತ್ತು. ಆ ಪ್ರಶ್ನೆಯನ್ನು ಕೇಳಿಸಿಕೊಂಡ ಸರ್.ಎಂ.ವಿ.ಯವರು ಬಹಳ ಕಾಲ ಮೌನವಾಗಿದ್ದು ನಂತರ ಉತ್ತರಿಸಿದರಂತೆ, "ಎಂಥಾ ದುರಂತ, ಎಷ್ಟೊಂದು ಶಕ್ತಿ ವ್ಯರ್ಥವಾಗುತ್ತಿದೆಯಲ್ಲ!!" ಎಂದರಂತೆ!

ನಮ್ಮ ಹನುಮಂತನಗರದ ವಲಯದಲ್ಲಿ ದಿನಕ್ಕೆ ಎರಡು ಗಂಟೆಗಳ ಕಾಲ ಕರೆಂಟಿರುವುದಿಲ್ಲ. ಆದರೆ ನಮ್ಮ ಶಾಲೆಯ ವಲಯದಲ್ಲಿ ದಿನಕ್ಕೆ ಎರಡು ಗಂಟೆಗಳ ಜೊತೆಗೆ ವಾರಕ್ಕೆ ಎರಡು ದಿನ, ಸಂಪೂರ್ಣ ದಿನವೂ ಕರೆಂಟಿರುವುದಿಲ್ಲ. ಪ್ರತಿ ಬುಧವಾರ ಮತ್ತು ಪ್ರತಿ ಭಾನುವಾರ ಬೆಳಿಗ್ಗೆ ಎಂಟರಿಂದ ಸಂಜೆ ಐದರವರೆಗೆ ಪವರ್ ಕಟ್!

ಹೇಳಿ ಕೇಳಿ ನಾನು ಕಂಪ್ಯೂಟರ್ ಅಧ್ಯಾಪಕ. ಕರೆಂಟಿಲ್ಲದೆ ಏನಪ್ಪ ಗತಿ ಎಂದು ಯೋಚಿಸುತ್ತಿದ್ದಾಗ ನನ್ನ ಮೇಲಧಿಕಾರಿಯ ಸಲಹೆ, "ಅರುಣ್ ಯು,ಪಿ.ಎಸ್. ಇದ್ದರೂ ಲ್ಯಾಬನ್ನು ನೀವು ಉಪಯೋಗಿಸುವುದೇ ಇಲ್ಲವಲ್ಲ ನೀವು? ಅದು ಎರಡು ಗಂಟೆ ಬ್ಯಾಕಪ್ ಕೊಡುತ್ತೆ! ಅದಕ್ಕಾಗಿ ನಾವು ಎಷ್ಟೊಂದು ಖರ್ಚು ಮಾಡಿದ್ದೇವೆ! ಉಪಯೋಗಿಸಿಪ್ಪಾ!" ಎಂದು. ನನ್ನ ಮನಸ್ಸು ತಡೆಯದು. ಹನ್ನೆರಡು ಗಂಟೆಗಳ ಕಾಲ ಛಾರ್ಜ್ ಮಾಡಿದ ಯುಪಿಯೆಸ್ಸು ಬರೀ ಎರಡು ಗಂಟೆ ಅಷ್ಟೇ ಬ್ಯಾಕಪ್ ಕೊಡುವುದಾದರೆ ಅದು ಕೇವಲ ’ತುರ್ತು’ ಪರಿಸ್ಥಿತಿಯಲ್ಲಷ್ಟೇ ಅಲ್ಲವೆ ಬಳಸಬೇಕಾದದ್ದು? ಎಂಬುದು ನನ್ನ ವಾದ. ಅಂತಿಮವಾಗಿ ನಾನೇ ತೀರ್ಮಾನ ತೆಗೆದುಕೊಳ್ಳುವುದಾದ್ದರಿಂದ ಪ್ರತಿ ಬುಧವಾರವೂ ಬರೀ ಥಿಯರಿ ಪಾಠ ಇಟ್ಟುಕೊಳ್ಳುವ ಯೋಜನೆಯನ್ನು ಕೈಗೊಂಡಿದ್ದೇನೆ.ಎಷ್ಟೋ ಮನೆಗಳಲ್ಲಿ ಈ ಯುಪಿಯೆಸ್ಸನ್ನು ಬಳಸಿ ಕರೆಂಟಿಲ್ಲದಿರುವಾಗ ಮನೆಯಲ್ಲಿ ದೀಪವುರಿಸುವ ಸಂಭ್ರಮದಲ್ಲಿರುವವರನ್ನು ನೋಡಿದಾಗ ಬೇಸರವಾಗುವುದಲ್ಲವೆ? ಅನೇಕರ ಮನೆಗಳಲ್ಲಿ ಎಮರ್ಜೆನ್ಸಿ ದೀಪವು ಪೂರ್ತಿ ಒಂದು ಗಂಟೆ ಉರಿಯುತ್ತಿರುತ್ತೆ. ಆ ದೀಪದಲ್ಲಿ ಮಕ್ಕಳೇನು ಓದುತ್ತಿರುವುದಿಲ್ಲ, ಹಿರಿಯರೇನು ಸಾಧನೆ ಮಾಡುತ್ತಿರುವುದಿಲ್ಲ, ಬರೀ ಹರಟೆ ಹೊಡೆಯಲೋ ಅಥವಾ ಕರೆಂಟು ಹೋದಾಗ, ಕತ್ತಲಲ್ಲಿ ಮಾಡಲು ಬೇರೆ ಕೆಲಸವಿಲ್ಲದೆ ಕುರುಕು ಮುರುಕನ್ನು ಮೆಲ್ಲಲೋ ಎಮರ್ಜೆನ್ಸಿ ಲ್ಯಾಂಪು ಬೇಕಾಗಿರುತ್ತೆ ಅನೇಕರಿಗೆ. ಮೇಣದ ಬತ್ತಿ ದೀಪವು ಹರಟೆ ಹೊಡೆಯಲು ಬೆಳಕನ್ನು ಕೊಡುವುದಿಲ್ಲವೇನೋ.

ಚಾರಣಗಳಲ್ಲಿ ಅದೆಷ್ಟು ಜನಕ್ಕೆ ಟಾರ್ಚಿನ ಮಹತ್ವವು ಗೊತ್ತಿರುವುದಿಲ್ಲವೊ! ಗೊತ್ತಿರುವುದಿಲ್ಲವೆಂದು ಹೇಳುವುದು ತಪ್ಪಾಗುತ್ತೆ. ಅದರ ಬಗ್ಗೆ ಯೋಚಿಸಿದೆ ಇರುತ್ತಾರೆ. ವಿದ್ಯಾವಂತರೇ ಪ್ಲಾಸ್ಟಿಕ್ ಕಸ ಬಿಸಾಡುವುದಿಲ್ಲವೆ ಕಾಡಿನಲ್ಲಿ? ಅವರಿಗೆ ಗೊತ್ತಿರುವುದಿಲ್ಲವೆ, ಪ್ಲಾಸ್ಟಿಕ್ಕು ಕೆಟ್ಟದ್ದು ಎಂದು? ಡಾಕ್ಟರುಗಳೇ ಸಿಗರೇಟು ಸೇದುವುದಿಲ್ಲವೆ? ಕತ್ತಲ ಕಾಡಿನಲ್ಲಿ ಟಾರ್ಚು ಎಷ್ಟು ಮುಖ್ಯವೋ ಚಂದ್ರನ ಬೆಳಕೂ ಅಷ್ಟೇ ಮುಖ್ಯ. ಆದಷ್ಟೂ ನಮ್ಮ ಕಣ್ಣುಗಳನ್ನು ಸ್ವಾಭಾವಿಕ ಬೆಳಕಿಗೆ ಒಗ್ಗಿಸಿಕೊಂಡಿರಬೇಕೆಂಬುದನ್ನು ತಿಳಿದಿರಬೇಕು. ಸ್ವಲ್ಪ ಕತ್ತಲಾದರೂ ಟಾರ್ಚನ್ನು ಆನ್ ಮಾಡುವುದು ಒಳಿತಲ್ಲ - ಎರಡು ಕಾರಣಗಳಿಂದ - ನಮ್ಮ ಕಣ್ಣುಗಳು ಟಾರ್ಚಿನ ಬೆಳಕಿಗೆ ಒಗ್ಗಲು, ಸ್ವಾಭಾವಿಕ ಬೆಳಕಿಗೆ ದೂರವಾಗುತ್ತೆ ಮತ್ತು ಟಾರ್ಚಿನ ಶಕ್ತಿಯು ’ತುರ್ತು’ ಪರಿಸ್ಥಿತಿಗೆ ಇಲ್ಲದಂತಾಗುತ್ತೆ. ಇದು ನಮಗೆ ಗೊತ್ತಿಲ್ಲವೆಂದಲ್ಲ, ಆದರೆ ನಾವು ಇದರ ಬಗ್ಗೆ ಯೋಚಿಸಿರುವುದಿಲ್ಲ, ಚಿಂತನೆ ಮಾಡಿರುವುದಿಲ್ಲ. ನನ್ನ ಮೊದಲ ಚಾರಣದಲ್ಲೇ ಶ್ರೀ ಸಿದ್ಧಲಿಂಗ ಸ್ವಾಮಿಯವರು ಮತ್ತು ಕ್ಯಾಪ್ಟನ್ ಶ್ರೀನಿವಾಸ್ ಅವರು ಟಾರ್ಚಿನ ಮಹತ್ವವನ್ನು ನಮ್ಮ ಗುಂಪಿಗೆ ತಿಳಿಸಿಕೊಟ್ಟಿದ್ದ ಸಲುವಾಗಿ ಅವರಿಗೆ ಎಷ್ಟು ನಮನ ಸಲ್ಲಿಸಿದರೂ ಸ್ವಲ್ಪವೇ.

ಸೌರಶಕ್ತಿಯನ್ನು ’ಸರಿಯಾಗಿ’ ಬಳಸುವಂತೆ ಇನ್ನೂ ಆಗಿಲ್ಲವೆಂಬುದು ಇನ್ನೊಂದು ದುರ್ದೈವ. ಸರ್.ಎಂ.ವಿ.ಯವರಿಗೆ ಜೋಗದ ಜಲಧಾರೆಯ ಶಕ್ತಿಯನ್ನು ಕಂಡೇ ಹಾಗೆ ಅನ್ನಿಸಿರುವಾಗ ಇನ್ನು ಸೌರಶಕ್ತಿಯ ಬಗ್ಗೆ ಏನನ್ನಿಸಿರಬೇಡ. ನಾನು ಸರ್.ಎಂ.ವಿ.ಯವರ ಬಗ್ಗೆ ಹೆಚ್ಚು ಓದಿಲ್ಲದ ಕಾರಣ, ಅವರು ಈ ಬಗ್ಗೆ ಏನಾದರೂ ಹೇಳಿದ್ದಾರೆಯೇ ಎಂಬುದನ್ನು ಅರಿಯೆ. ತಿಳಿದುಕೊಳ್ಳಲು ಖಂಡಿತ ಆಸಕ್ತಿಯಿದೆ. ಓದಿದ ನಂತರ ಗೊತ್ತಾಗುತ್ತೆ. ಇರಲಿ. ಅಂದು ಜೋಗದ ಜಲಧಾರೆಯ ರೂಪದಲ್ಲಿ ’ವ್ಯರ್ಥ’ವಾಗುತ್ತಿದ್ದ ಶಕ್ತಿಯು ಇಂದು ವಿದ್ಯುತ್ತಾಗಿ ಪರಿವರ್ತನೆ ಹೊಂದಿ ನಮ್ಮೆಲ್ಲರ ಮನೆಗಳಲ್ಲಿ ವ್ಯರ್ಥವಾಗುತ್ತಿದೆಯಷ್ಟೆ?

ಜೋಗದ ಜಲಧಾರೆಯಲ್ಲಿ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಯೋಜನೆ ಬಂದಾಗ ಆ ಕಾಲದ ಅನೇಕ ಪರಿಸರವಾದಿಗಳು, ಜೋಗಪ್ರೇಮಿಗಳು ಅದನ್ನು ಪ್ರತಿಭಟಿಸಿದರು. ನೊಂದುಕೊಂಡಿದ್ದರು. ಮೂಗೂರು ಮಲ್ಲಪ್ಪನವರಂತೂ ತಮ್ಮ ಪ್ರಖ್ಯಾತ ಕವನದಲ್ಲಿ (ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ) ’ತಾನು ಬಿದ್ರೇನ್ ಆದೀತೇಳು ತಾಯಿಗೆ ಬೆಳಕ!’ ಎಂದು ವ್ಯಂಗ್ಯ ರೂಪದಲ್ಲಿ ಜೋಗವನ್ನು ಹೊಗಳುತ್ತ ನೋವನ್ನು ವ್ಯಕ್ತಪಡಿಸಿದ್ದರು. ಅಂತಹ ಕಷ್ಟ ಪಟ್ಟು ನಮಗಾಗಿ ಪ್ರಕೃತಿಯು ಕೊಡುತ್ತಿರುವ ಬೆಳಕನ್ನು ವೃಥಾ ಹಾಳು ಮಾಡುವುದು ನ್ಯಾಯವಲ್ಲವೆಂಬುದನ್ನು ಕಲಿಯೋಣ. ಮಕ್ಕಳಿಗೆ ಹೇಳಿಕೊಡೋಣ. ಹಾಳು ಮಾಡುತ್ತಿರುವವರಿಗೆ ಪಾಠ ಕಲಿಸೋಣ.

"ನೀನೊಬ್ಬ ದೀಪ ಆರಿಸಿಬಿಟ್ಟರೆ ದೇಶದ ವಿದ್ಯುಚ್ಛಕ್ತಿ ಉಳಿತಾಯ ಆಗಿಬಿಡುತ್ತಾ?" ಎಂದು ಕೇಳುವವರ ಈ ಸಂಕುಚಿತ ಮನೋಭಾವನೆ ನಿರ್ನಾಮವಾಗಲೆಂದು ಹಾರೈಸುತ್ತೇನೆ.

-ಅ
15.07.2009
9.30PM

Wednesday, July 08, 2009

ಆ ಮರ - ಪು.ತಿ.ನ.

ಕೊಚ್ಚೆ ರೊಚ್ಚೆಯನು ಕೆಳಗಡೆ ಕುಡಿವೆ
ಮೇಗಡೆ ಬಾನೊಳು ಹೂ ಬಿಡುವೆ
ಅಡಿಯ ಬುಡದೊಳಗೆ ಮಲವನುಣ್ಣುವೆ
ಮೇಗಡೆ ತನಿವಣ್ಗಳ ಕೊಡುವೆ.

ಚೈತ್ರದಿ ಜಗ ಸುಡುತಿರೆ ನೆಲವೊಣಗಿ
ರಸ ಚಿಮ್ಮುವೆ ಚಿಗುರೆಲೆ ತಳೆದು
ಬೇಸಗೆ ಬಿರುಬಿಸಿಲಿಗೆ ಜಡೆಯೊಡ್ಡಿ
ತಣ್ಣನೆ ನೆಳಲನು ಕೆಳಗೊಗೆವೆ.

ಚಳಿಗಾಲದಿ ಮಂಜಿಗೆ ಮೈ ತೆರೆಯುತ
ಬೆತ್ತಲೆ ನಿಲ್ಲುವೆ ಎಲೆ ಕೊಡವಿ
ಆಷಾಢದ ಬಿರುಗಾಳಿ ಪಿಶಾಚಿಗೊ
ಎಲೆಯನೊಂದನೂ ಕೈಬಿಡೆನು.

ಮಲಿನೆಯಲ್ಲ ನಾ ಅಶುಚಿಯೂ ಅಲ್ಲ
ನನಗೆಂದೇ ನಾ ಬದುಕಿಲ್ಲ
ನನ್ನಿಂದಲಿ ಕೆಡಕಾರಿಗೂ ಇಲ್ಲ
ಯಾರುಪಕಾರವು ನನಗಿಲ್ಲ.

ಬೇಕಾದಗೆ ಬೇಕಾದುದನೀವೆ
ಕೊಡುಕೊಡುತ್ತಲೇ ನಾ ಸಾವೆ
ಸತ್ತರು ನಾರದ ಸುಗಂಧಿ ನಾನು
ಸತ್ತರೆ ನಾರುವ ಹೆಣ ನೀನು.-ಅ
08.07.2009
9PM

ಒಂದಷ್ಟು ಚಿತ್ರಗಳು..