Thursday, June 11, 2009

ಮಳೆ ಮತ್ತು ನಮ್ಮೂರು

ಬೆಂಗಳೂರಿನ ನಿನ್ನೆಯ ಮಳೆಯ ಬಗ್ಗೆ ಖಾಸಗಿ ಚಾನೆಲ್ಲುಗಳು ಅನೇಕವು "ತೋರಿಸಿದ" ರೀತಿಯನ್ನು ನೋಡಿದರೆ ಬೆಂಗಳೂರು ಇಷ್ಟು ಹೊತ್ತಿಗಾಗಲೇ ಜಲಸಮಾಧಿಯಾಗಿರಬೇಕಿತ್ತು.

ಆದರೂ ಮಳೆ ಬಹಳ ಚೆನ್ನಾಗಿತ್ತು.

ನಾನು ಚೆನ್ನಾಗಿತ್ತು ಎನ್ನುತ್ತೇನೆ, ಬಿ.ಟಿ.ಎಮ್ ಲೇಔಟಿನ ಕಖಗ ಅವರು "ದರಿದ್ರ ಮಳೆ" ಎನ್ನುತ್ತಾರೆ, ಕೋರಮಂಗಲದ ಚಛಜ ಅವರು "ಸುಡುಗಾಡು ಬೆಂಗಳೂರು" ಎನ್ನುತ್ತಾರೆ.

ವಿಧಿವಶಾತ್, ಬೆಂಗಳೂರು ಹೇಗೆ ’ಬೆಳೆದು’ಬಿಟ್ಟಿದೆಯೆಂದರೆ ನಾವುಗಳು ಒಂದು ಮಳೆಯನ್ನು ಸಹ ಸಂತಸದಿಂದ ಅನುಭವಿಸಲು ಸಾಧ್ಯವಾಗದಷ್ಟು! ಇಲ್ಲಿನ ಕೆರೆಗಳು, ಗುಡ್ಡಗಳು, ಕುರುಚಲು ಕಾಡುಗಳು, ಹೊಲ ಗದ್ದೆಗಳು - ಎಲ್ಲವೂ ಸಹ ಲೇಔಟುಗಳಾಗಿಯೋ, ವಿದೇಶೀ ಕಂಪೆನಿಗಳಾಗಿಯೋ ಕಟ್ಟಡಗಳಾಗಿಯೋ ಬದಲಾಗಿ ’ಅಭಿವೃದ್ಧಿ’ಗೊಂಡು ಕೆಲ ಕಾಲ ಸಂದಿದೆ. ಮರಗಳು ನಾಪತ್ತೆಯಾಗುತ್ತಲೇ ಇದೆ. ಲಾಲ್‍ಬಾಗಿನಲ್ಲಿ ಮರ ಕಡಿಯುವ ವಿಷಯ ಬಹಿರಂಗವಾಯಿತು, ಗಲಾಟೆ ಮಾಡಿ ಅದನ್ನು ತಡೆ ಹಾಕಲೂ ಆಯಿತು. ಆದರೆ ನಮ್ಮ ಆ ಬೆಂಗಳೂರು ಈ ಬೆಂಗಳೂರಾಗಲು ಈಗಾಗಲೇ ಲಾಲಬಾಗಿನ ಹತ್ತರಷ್ಟು ಮರಗಳನ್ನು ಬಲಿ ಕೊಟ್ಟಾಗಿದೆ.

ಯೆಡಿಯೂರು ಕೆರೆಯನ್ನು ನಾನು ಬಾಲ್ಯದಿಂದಲೂ ನೋಡುತ್ತಿದ್ದೇನೆ. ಇಂದು ದಿನದಿನಕ್ಕೂ ಕ್ಷೀಣಿಸುತ್ತ ಸಣ್ಣ ಈಜುಕೊಳದಂತಾಗಿಬಿಟ್ಟಿದೆ. ಬನಶಂಕರಿ ಬಿ.ಡಿ.ಎ. ಕಾಂಪ್ಲೆಕ್ಸಿನಿಂದ ಕತ್ತರಿಗುಪ್ಪೆಯವರೆಗೂ ಆವರಿಸಿದ್ದ ಅತಿ ದೊಡ್ಡ ಕೆರೆಯಾಗಿದ್ದ ಚೆನ್ನಮ್ಮನಕೆರೆಯು ಕಸದ ಪಾಲಾಗಿ ಹತ್ತಾರು ವರ್ಷಗಳು ಕಳೆದಿವೆ. ಅದರ ಪಕ್ಕದಲ್ಲೇ ಇದ್ದ ಹೊಸಕೆರೆಹಳ್ಳಿಯಲ್ಲಿ ಯಾವ ಕೆರೆಯಿತ್ತೆಂಬುದೇ ಮರೆತುಹೋಗಿದೆ. ಕೆಂಪಾಂಬುಧಿ ಕೆರೆಯು ರಾಜ್‍ಕುಮಾರ್ ಪಾರ್ಕಾಗಿದೆ, ಧರ್ಮಾಂಬುಧಿ ಕೆರೆಯು ಮೆಜೆಸ್ಟಿಕ್ ಬಸ್ ನಿಲ್ದಾಣವಾಗಿದೆ. ತಾವರೆಕೆರೆಯಲ್ಲಿ ತಾವರೆಯು ಕಾಣಿಸುವಷ್ಟು ಜಾಗವಿಲ್ಲದಂತಾಗಿದೆ. ಅಲಸೂರು ಕೆರೆಯು overflow ಆಗಿರುವ ಟ್ಯಾಂಕಿನಂತಾಗಿದೆ. ಬಸವನಗುಡಿಯಲ್ಲಿ ಜನ್ಮ ತಾಳಿ ಬೆಂಗಳೂರೆಲ್ಲ ಪಯಣಿಸಿ ಕೆಂಗೇರಿ ಮುಖಾಂತರ ಹಾದು ಅರ್ಕಾವತಿಯನ್ನು ಸೇರುತ್ತಿದ್ದ ವೃಷಭಾವತಿಯ ಪಾಡು ಈಗ ಏನಾಗಿದೆಯೆಂಬುದನ್ನು ಹೇಳಬೇಕಿಲ್ಲ. ನಮ್ಮೂರು ಕೇವಲ ’ಉದ್ಯಾನ’ನಗರಿಯಲ್ಲ. ಇಲ್ಲಿ ಉದ್ಯಾನಗಳಿಗಿಂತ ಹೆಚ್ಚು ಸ್ಮಾರಕಗಳಿವೆ (ಈಗಲೂ ಇವೆ), ಮತ್ತು ಅದಕ್ಕಿಂತಲೂ ಹೆಚ್ಚು ಕೆರೆಗಳಿದ್ದವು! City of lakes ಎಂದೂ ಸಹ ಕರೆಯುತ್ತಿದ್ದರು ಎಂದು ಹಿರಿಯರಿಂದ ನಾನು ಅದೆಷ್ಟು ಸಲ ಕೇಳಿದ್ದೇನೋ!! ನನಗಂತೂ ಲಾಲ್‍ಬಾಗ್ ಕೆರೆ ಮತ್ತು ಹೆಬ್ಬಾಳ ಕೆರೆಯೆರಡನ್ನು ಬಿಟ್ಟರೆ ಇನ್ಯಾವುದನ್ನೂ ’ಕೆರೆ’ ಎಂದು ಕರೆಯಲೇ ಬೇಸರವಾಗುತ್ತೆ. ಹೊಸಕೋಟೆಯ ಆರುನೂರು ಎಕರೆಯ ಕೆರೆಯು ಬಟ್ಟಾಬಯಲಾಗಿರುವುದು ದುರಂತವಷ್ಟೆ?

ಬೆಂಗಳೂರಿಗೆ ಬಿದ್ದ ಮಳೆ ನೀರೆಲ್ಲ ಎಲ್ಲಿ ಹೋಗಬೇಕು? ಪ್ರಕೃತಿಯು ಇಲ್ಲಿದ್ದ ಕೆರೆಗಳು, ನದಿಗಳು(ಯು), ಕಾಡುಗಳು - ಅಲ್ಲಿಗೇ ನೀರು ತುಂಬಿಸುತ್ತೆ. ಈಗ ಆ ಜಾಗದಲ್ಲೆಲ್ಲ ಮನೆಗಳೋ ಅಪಾರ್ಟ್ಮೆಂಟುಗಳು ಕಟ್ಟಡಗಳು ಬಂದಿರುವುದರಿಂದ ಅವನ್ನೇ ತುಂಬಿಸುತ್ತೆ.

ಮಾಧ್ಯಮದ ಚಾನೆಲ್ಲೊಂದು ಬಿ.ಬಿ.ಎಂ.ಪಿ.ಯನ್ನು ವಿಪರೀತವಾಗಿ ಟೀಕಿಸುತ್ತಿತ್ತು. "ಸರಿಯಾಗಿ ಕೆಲಸ ಮಾಡೊಲ್ಲ, ಮಳೆ ನೀರು ಮನೆಗೆಲ್ಲ ಬರುತ್ತಿದೆ, ಡ್ರೈನೇಜು ಸೋರುತ್ತಿದೆ..." ಇತ್ಯಾದಿಗಳೊಂದಿಗೆ. ಇವೆಲ್ಲದರ ಹೊಣೆ ನಮ್ಮ ಮೇಲೂ ಸಾಕಷ್ಟು ಇದೆ. ಬೀದಿಯಲ್ಲಿ, ಮೋರಿಗಳಲ್ಲಿ, ಕಸ ಬಿಸಾಡುವಾಗ ಬಿ.ಬಿ.ಎಂ.ಪಿ. ನೆನಪಾಗುವುದಿಲ್ಲವೇ ನಮಗೆ? Of course, ಇಲ್ಲಿ ಪಾಲಿಕೆಯವರ ಕರ್ತವ್ಯವೇನಿದೆಯೋ ಅದನ್ನು ಅವರು ಮಾಡದೇ ಇದ್ದುದಕ್ಕೆ ಕ್ಷಮೆಯೇನು ಕೊಡಬೇಕಿಲ್ಲ. ಆದರೆ ನಮ್ಮ ಕರ್ತವ್ಯವನ್ನೂ ನಾವು ಅರಿತಿದ್ದರೆ ಒಳಿತು. ದೂರುವುದು ನಂತರದ ಕೆಲಸವಾಗಿರಲಿ.

ಬೆಂಗಳೂರಿಗೆ ಮಳೆಯ ಅಗತ್ಯವಿದೆ!

-ಅ
11.06.2009
2.30PM

5 comments:

 1. idu repeat post thara ide?? bardidde alwa munche noo?
  btw ... ivattina paper nalli arkavati bagge kottidru... sumne ... nenpaaytu :-)

  ReplyDelete
 2. ಬೆಂಗಳೂರಿಗೆ ಬಿದ್ದ ಮಳೆ ನೀರೆಲ್ಲ ಎಲ್ಲಿ ಹೋಗಬೇಕು? ಪ್ರಕೃತಿಯು ಇಲ್ಲಿದ್ದ ಕೆರೆಗಳು, ನದಿಗಳು(ಯು), ಕಾಡುಗಳು - ಅಲ್ಲಿಗೇ ನೀರು ತುಂಬಿಸುತ್ತೆ. ಈಗ ಆ ಜಾಗದಲ್ಲೆಲ್ಲ ಮನೆಗಳೋ ಅಪಾರ್ಟ್ಮೆಂಟುಗಳು ಕಟ್ಟಡಗಳು ಬಂದಿರುವುದರಿಂದ ಅವನ್ನೇ ತುಂಬಿಸುತ್ತೆ.-----> ತುಂಬಲಿ. :-) :-)

  ಸಮಯೋಚಿತ ಲೇಖನ ಗುರುಗಳೇ.

  ReplyDelete
 3. ಧಾರವಾಡದ್ದೂ ಇದೇ ಪರಿಸ್ಥಿತಿ!

  ReplyDelete
 4. [ಸುನಾಥ್] ಓಹ್, ಅಲ್ಲೂ ಡ್ರೈನೇಜು ಸಮಸ್ಯೆಯೇ?

  [ಲಕುಮಿ] ಧಿಕ್!

  [ವಿಜಯಾ] ಒಳ್ಳೇ ’ಮುಕ್ತ ಮುಕ್ತ’ ರಿಪೀಟ್ ಟೆಲಿಕಾಸ್ಟ್ ಥರ.

  [ಅನಾಮಿಕ] ಧನ್ಯವಾದಗಳು.

  ReplyDelete

ಒಂದಷ್ಟು ಚಿತ್ರಗಳು..