Thursday, April 23, 2009

ಸಾಹಸ?

ಕಳೆದ ವಾರ ಒಬ್ಬ ಇಂಜಿನಿಯರು ಬಂಗೀ ಜಂಪಿಂಗ್ ಮಾಡುವಾಗ ತೀರಿಕೊಂಡರೆಂಬ ವಿಷಯವು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯವಷ್ಟೆ?

ನಾವು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದಾದರೂ ಏಕೆ? ಪ್ರಾಣ ಕಳೆದುಕೊಳ್ಳುವ ಬಯಕೆಯಿಂದಂತೂ ಅಲ್ಲ. ಹಾಗೆ ಪ್ರಾಣ ಕಳೆದುಕೊಳ್ಳುವುದೇ ನಮ್ಮ ಉದ್ದಿಶ್ಯವಾದರೆ ಅದಕ್ಕೆ ಬೇಕಾದಷ್ಟು 'ಸೌಲಭ್ಯ'ಗಳಿಲ್ಲವೆ?

ಇಂಜಿನಿಯರ್ ಭಾರ್ಗವ ಅವರು ತೀರಿಕೊಂಡ ನಂತರ ಬಂದ ವಾರ್ತೆಗಳಾಗಲೀ, ಆ ಘಟನೆಯ ವಿಶ್ಲೇಷಣೆಯಾಗಲೀ ನನಗ್ಯಾಕೋ ಅಷ್ಟು ಸಮಂಜಸವೆನ್ನಿಸಲಿಲ್ಲ.

೧. "CARE ಆಗಲೀ Head Rush ಆಗಲೀ ಪೋಲೀಸ್ ಪರವಾನಗಿ ಪಡೆದುಕೊಂಡಿರಲಿಲ್ಲ"

ತಿಂಗಳಿಂದಲೂ ಎಲ್ಲ ಪತ್ರಿಕೆಗಳಲ್ಲೂ ಜಾಹೀರಾತು ಕೊಡುತ್ತಿದ್ದ ಈ ಸಾಹಸ (?) ಸಂಸ್ಥೆಗಳ ಬಗ್ಗೆ ಪೋಲಿಸರಿಗೆ ಅರಿವಿಲ್ಲದೆ ಇರಲು ಸಾಧ್ಯವಿಲ್ಲ. ಹಾಗೆ ಅವರು ಪರವಾನಗಿ ಪಡೆದುಕೊಳ್ಳದೆ ಇದ್ದ ಪಕ್ಷದಲ್ಲಿ ಜಾಹೀರಾತು ಪ್ರಕಟವಾದಾಗಲೇ ತಡೆ ಹಾಕಬಹುದಿತ್ತು. ಪರವಾನಗಿಗೆ ಒತ್ತಾಯಿಸಬಹುದಿತ್ತು, ದುರ್ಘಟನೆ ನಡೆದ ನಂತರ "ಇವರು ಪರ್ಮಿಷನ್ ತೊಗೊಂಡಿರಲಿಲ್ಲ" ಎಂದು ಹೇಳುವ ಬದಲು. ಬಂಗೀ ಜಂಪಿಂಗ್‍ನಂತಹ ಬೃಹತ್ ಕಾರ್ಯಕ್ರಮವೊಂದು ಬೆಂಗಳೂರಿನಂತಹ ಮಹಾನಗರದಲ್ಲಿ ಆಯೋಜಿತವಾಗಿರುವಾಗ ಅದು "ಪರ್ಮಿಷನ್" ಇಲ್ಲದೆ, ಕಣ್ತಪ್ಪಿಸಿ ಆಗಲು ಸಾಧ್ಯವೆ? ಹಾಗೆ ಆಯೋಜಿಸಿರುವುದನ್ನು ತಡೆ ಹಾಕುವುದು ನ್ಯಾಯವಲ್ಲವೆ?

೨. "Ambulance ಆಗಲೀ ಪ್ರಥಮ ಚಿಕಿತ್ಸೆಯಾಗಲೀ ಅಲ್ಲಿ ಸುತ್ತಮುತ್ತ ಇರಲಿಲ್ಲ."

ನಾವೇಕೆ ದುರ್ಘಟನೆ ನಡೆದ ಮೇಲೆ ಇದರ ಬಗ್ಗೆ ಯೋಚಿಸುತ್ತೇವೆ? ಹೊಟ್ಟೆ ನೋವು ಬಂದ ಮೇಲೆ ಔಷಧಿಯೆಲ್ಲಿ ಎಂದು ಹುಡುಕುವುದೋ ಅಥವಾ ಔಷಧಿಯಿಲ್ಲವಲ್ಲ ಎಂದು ಕೊರಗುವುದೋ ಮಾಡುವುದರ ಬದಲು ಹೊಟ್ಟೆನೋವು ಬರದ ಹಾಗೆ ನೋಡಿಕೊಳ್ಳಬೇಕಲ್ಲವೆ? ಎಲ್ಲರಿಗೂ ಗೊತ್ತಿರುವ ವಿಷಯವೇ - Ambulance ಮತ್ತು ಪ್ರಥಮ ಚಿಕಿತ್ಸೆಯು ಇಂಥ ಕಾರ್ಯಕ್ರಮಗಳಿಗೆ ಅತ್ಯವಶ್ಯಕ ಎಂದು. ಅದು ಸುತ್ತಮುತ್ತ ಎಲ್ಲೂ ಕಾಣಿಸದೆ ಇದ್ದಾಗ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾದರೂ ಏಕೆ? ಭಾಗವಹಿಸಿ, ನಂತರ ದುರ್ಘಟನೆ ಸಂಭವಿಸಿದ ನಂತರ ದೂಷಿಸುವುದು ಯಾಕೆ?

ಆಸ್ಟ್ರೇಲಿಯಾದ ಸಾಹಸ ಸಂಸ್ಥೆಯ ಮುಖ್ಯಸ್ಥರನ್ನು ಒಮ್ಮೆ ಬಂಡೀಪುರದಲ್ಲಿ ಭೇಟಿಯಾಗಿದ್ದೆ. ಆತ ಹೇಳಿದ್ದರು, ಅವರಲ್ಲಿ ಸಾಹಸ ಸಂಸ್ಥೆಗಳು ವಿಮೆಯನ್ನೂ ಸಹ ನೀಡಬೇಕಾಗುತ್ತಂತೆ. Insurance ಬಗ್ಗೆ ಮಾಹಿತಿ ದೊರಕದಿದ್ದಲ್ಲಿ ಭಾಗವಹಿಸುವವರೇ ಇರುವುದಿಲ್ಲವಂತೆ! ನಮ್ಮಲ್ಲಿ ಇನ್ನೂ ಅಷ್ಟು ಬೆಳವಣಿಗೆಯಾಗದಿದ್ದರೂ ಮೂಲಭೂತ ಅವಶ್ಯಕತೆಗಳನ್ನು ಪೂರೈಸದ ಹೊರತು ಭಾಗವಹಿಸುವುದಿಲ್ಲವೆಂಬ ಮನೋಭಾವನೆ ಬರಬೇಕು.

೩. "Net ಇರಲಿಲ್ಲ"

ಮೇಲೆ ಹೇಳಿರುವುದೇ ಇದಕ್ಕೂ ಅನ್ವಯಿಸುತ್ತೆ. "ಜಂಪ್" ಮಾಡಿ, ದುರ್ಘಟನೆ ಸಂಭವಿಸಿದ ಮೇಲೆ ಅಲ್ಲ ಇದನ್ನು ಗಮನಿಸುವುದು.

೪. "Indemnity Bond"

ಯಾವುದೇ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕಾದರೂ ಒಂದು "indemnity bond" ಅನ್ನು ಸಹಿ ಹಾಕಿಕೊಡಬೇಕಾಗುತ್ತೆ. ನನಗೆ ಏನಾದರೂ ಆದರೆ ನಾನೇ ಜವಾಬ್ದಾರಿ ಎಂಬ ತಾತ್ಪರ್ಯದ ಪತ್ರವಿದು. ಭಾರ್ಗವರ ಬಳಿ ಇಂಥದ್ದೊಂದು ಬಾಂಡ್‍ಗೆ ಸಹಿ ಹಾಕಿಸಿಕೊಂಡಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, legally, ಬರೀ ಇದೊಂದು ಪತ್ರವು ನಿಲ್ಲುವುದಿಲ್ಲವಷ್ಟೆ. ಅದಕ್ಕೆ ದೊಡ್ಡ ಪ್ರೊಸೀಜರ್ರೇ ಇದೆ. ಅದು ಇಲ್ಲಿ ಅಪ್ರಸ್ತುತ. ಒಂದು indemnity bond ಅನ್ನು ನಾನು ಸಹಿ ಹಾಕಿ ಕೊಟ್ಟಿದ್ದೇನೆಂದರೆ ನಾನು "ಸಿದ್ಧ" ಎಂದರ್ಥವಷ್ಟೆ?

ಇಲ್ಲಿ ಎಲ್ಲೂ ನಾನು ಶೇಷಾದ್ರಿ (CARE ಸಂಸ್ಥೆಯ ಮುಖ್ಯಸ್ಥರು)ಯವರದಾಗಲೀ ಅಥವಾ ಸಚ್ಚಿನ್ (Head Rush ಸಂಸ್ಥೆಯ ಮುಖ್ಯಸ್ಥರು)ರವರದಾಗಲೀ ಸರಿಯೆಂದು ಹೇಳುತ್ತಿಲ್ಲ. ದುರ್ಘಟನೆ ನಡೆದ ಸಮಯದಲ್ಲಿ ಆಯೋಜಕರು ಆ ಸ್ಥಳದಲ್ಲಿರಬೇಕಾಗಿತ್ತು, ವೆಬ್‍ಸೈಟುಗಳು ಡೌನ್ ಆಗಬಾರದಿತ್ತು, ಫೋನುಗಳು ಆಫ್ ಆಗಬಾರದಿತ್ತೆಂಬುದನ್ನು ನಾನು ಒಪ್ಪುತ್ತೇನೆ. ಆದರೂ ಅವರ ತಪ್ಪುಗಳಿಗೆ ಪ್ರತಿಕ್ರಯಿಸಿರುವ ರೀತಿ ಸರಿಯಿಲ್ಲವೆಂದು ನನ್ನ ಅನಿಸಿಕೆ. ದುರ್ಘಟನೆ ನಡೆಯುವ ಹಿಂದಿನ ದಿನವೇ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಶೇಷಾದ್ರಿಯವರ ಸಂದರ್ಶನದೊಂದಿಗೆ ಬಂಗೀ ಜಂಪಿಂಗ್ ಬಗ್ಗೆಯೇ ಒಂದು ಅಂಕಣ ಪ್ರಕಟವಾಗಿತ್ತು. ಆಗ ಪತ್ರಿಕೆಯವರು ಈ ಕಾರ್ಯಕ್ರಮವನ್ನು ಬೆಂಬಲಿಸಿದ್ದರು. ದುರ್ಘಟನೆ ನಡೆದ ದಿನದಿಂದಲೂ ಅದೇ ಪತ್ರಿಕೆಯವರು ವಾಚಾಮಗೋಚರ ಆಡತೊಡಗಿದ್ದಾದರೂ ಏಕೆ? ಪತ್ರಿಕೆಯವರಿಗಾದರೂ ಪರವಾನಗಿಯ ಬಗ್ಗೆಯಾಗಲೀ ಪ್ರಥಮ ಚಿಕಿತ್ಸೆಯ ಬಗ್ಗೆಯಾಗಲೀ ಸುರಕ್ಷಿತೆಯ ಬಗ್ಗೆಯಾಗಲೀ ಗೊತ್ತಿರುವುದಿಲ್ಲವೆ? ಆಯೋಜಕರು ಏನು ಹೇಳುತ್ತಾರೋ ಅದನ್ನೆಲ್ಲ ಕೇಳುತ್ತ, ಪ್ರಕಟಿಸುವುದು ಪತ್ರಿಕಾಧರ್ಮವೇ? ಅವೆಲ್ಲ ಬದಿಗಿಡೋಣ ಈಗ.

ಹಿಂದೆ ಒಂದು ಚಾರಣದ ಕ್ಯಾಂಪಿನಲ್ಲಿ ಒಬ್ಬ ಕ್ಯಾಂಪ್ ಲೀಡರ್ ಕ್ಯಾಂಪ್ ಸೈಟಿನಲ್ಲೇ ಅಸುನೀಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೆ.

"ಸಾಹಸವೆಂದರೆ ಯಾರಿಗೆ ಯಾವಾಗ ಏನು ಬೇಕಾದರೂ ಆಗಬಹುದು. Good Luck ಇದ್ದರೆ enjoy ಮಾಡ್ತೀವಿ, Bad Luck ಇದ್ದರೆ ಏನೂ ಮಾಡೋಕೆ ಆಗಲ್ಲ. Steve Irwin ಗೆ ಏನಾಯಿತು ಹೇಳಿ? Bob Krauker ಗೆ ಏನಾಯಿತು ಗೊತ್ತಲ್ಲವೆ? ಅದಕ್ಕೆ ಸಿದ್ಧವಾಗಿರಬೇಕು. ಇಲ್ಲವಾದರೆ ಸಾಹಸಕ್ಕೆ ಕೈ ಹಾಕಬಾರದು. ಎವೆರೆಸ್ಟ್ ಹತ್ತಿಳಿಯುವ ಸಾಹಸಿಗಳು ಸಾವಿಗೆ ಅಂಜುತ್ತಾರೆಯೇ? ದೇಶ ಕಾಯುವ ಸೈನಿಕನೂ ಸಾಹಸಿಯೇ. ಇವರು ಸಾವಿಗೆ ಚಿಂತಿಸುವುದಿಲ್ಲ " ಎಂದು ಯಶಸ್ವಿಯಾಗಿ ಬಂಗೀ ಜಂಪಿಂಗ್ ಮಾಡಿದವರೊಬ್ಬರು ಹೇಳಿದ್ದರು. ಅವರಿಗೆ, ಅವರ ಕಡೆಯವರಿಗೆ ಏನೂ ಆಗಲಿಲ್ಲ, ಅದಕ್ಕೆ ಈ ಮಾತನ್ನು ಹೇಳುತ್ತಾರೆಂದು ಅವರನ್ನು ಜನ ದೂಷಿಸಿದರು.

ಬೆಂಗಳೂರಿನ ಸಮಸ್ಯೆಯೆಂದರೆ ಇಲ್ಲಿರುವ "ದೊಡ್ಡ ದೊಡ್ಡ" ಕಂಪೆನಿಗಳ ಅನೇಕ "ದೊಡ್ಡ ದೊಡ್ಡ" ಉದ್ಯೋಗಿಗಳು ತಮ್ಮ "ವೀಕೆಂಡ್ ಔಟಿಂಗ್" ಎಂಬ ಸಂಸ್ಕೃತಿಯ ಸಂಪ್ರದಾಯಕ್ಕೋಸ್ಕರವಾಗಿ ಸಾಹಸವನ್ನು ಆರಿಸಿಕೊಂಡಿರುತ್ತಾರೆ. ಚಾರಣವು ಇವರುಗಳಿಗೆ ಸಿನಿಮಾ ಬದಲೋ, ಹೋಟೆಲಿನ ಬದಲೋ ಪಬ್ಬಿನ ಬದಲೋ ಒಂದು alternate ಆಗಿರುತ್ತೆ ಅಷ್ಟೆ. ವಂಡರ್ ಲಾ-ನಲ್ಲಿರುವ ಮೈ ಹಿಂಡುವ ಆಟೋಪಕರಣಗಳು ಥ್ರಿಲ್‍್ಗಿಂತ ಕಡಿಮೆಯಾಗಿರುತ್ತೆ. ಈಜುಕೊಳಗಳಲ್ಲಿ ಅಲೆಯಿಲ್ಲದೆ ದೇಹದೊಳಗೆ adrenaline ಸಂಚಾರವಾಗುವುದಿಲ್ಲ. ಹಕ್ಕಿಯಂತೆ ಹಾರಬೇಕು, ಮೀನಿನಂತೆ ಈಜಬೇಕು! ಕಾಡಿನಲ್ಲಿ ಸಿಗರೇಟು ಸೇದುತ್ತ ಹರಟಬೇಕು, ಬಿಯರ್ ಕುಡಿದು ನೆಮ್ಮದಿಯಿಂದ ಮಲಗಬೇಕು. ಅದಾಗಿಯೂ ಆನೆಯಾಗಲೀ, ಚಿರತೆಯಾಗಲೀ ಇವರುಗಳಿಗೆ ತೊಂದರೆ ಮಾಡಬಾರದು. ಹಾವು ಕಚ್ಚಬಾರದು. ನದಿಯ ನೀರು ಇವರನ್ನು ಮುಳುಗಿಸಬಾರದು. ಇಂಥ ಮನೋವೃತ್ತಿಯವರಿಗೆಂದೇ ಮೀಸಲಾಗಿರುವ ನೂರಾರು ಅಡ್ವೆಂಚರ್(?) ಸಂಸ್ಥೆಗಳನ್ನು ನಾನು ಬಲ್ಲೆ. "ನೀವು ಹೇಳಿದ ಕಡೆ, ಹೇಳಿದ ಹಾಗೆ ಕ್ಯಾಂಪ್ ಆಯೋಜಿಸಿಕೊಡುತ್ತೇವೆ" ಎನ್ನುವವರು ಪಕ್ಕಾ ವ್ಯಾಪಾರಿಗಳಲ್ಲದೆ ಪ್ರಕೃತಿಪ್ರೇಮಿಗಳೂ ಅಲ್ಲ, ಸಾಹಸಿಗಳೂ ಅಲ್ಲ.

ಭಾರ್ಗವ ಅವರ ಸಾಹಸ ಮನೋಧರ್ಮದ ಬಗ್ಗೆ, ಅವರ ಸಾಹಸದ ಅನುಭವದ ಬಗ್ಗ ಪತ್ರಿಕೆಗಳಲ್ಲಿ ಓದಿ ಸಂತಸವಾಯಿತು. ಆತ ಮೇಲೆ ಹೇಳಿದವರ ಪಟ್ಟಿಗೆ ಸೇರಿದ್ದವರಲ್ಲವೆಂದು ಹೆಮ್ಮೆಯಾಯಿತು. ಅವರ ಸಾವಿನ ಸುದ್ದಿಯು ಬೇಸರ ತರಿಸಿತು. ತಾಂತ್ರಿಕವಾಗಿಯೂ ನೈತಿಕವಾಗಿಯೂ ಸಾಹಸಕ್ರೀಡೆ ಕ್ಷೇತ್ರವು ನಮ್ಮಲ್ಲಿ ಇನ್ನೂ ಎಷ್ಟೊಂದು ಮುಂದುವರಿಯಬೇಕಲ್ಲವೆ ಎಂದೆನಿಸಿತು. ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆಯೋ ಇಲ್ಲವೋ, ಆಗುತ್ತೋ ಇಲ್ಲವೋ - ನಮ್ಮ ವ್ಯವಸ್ಥೆಯ ಮೇಲೆ ಯಾರಿಗೆ ತಾನೆ ನಂಬಿಕೆಯಿದೆ? ವ್ಯವಸ್ಥೆಯನ್ನು ಸರಿಪಡಿಸುವುದಲ್ಲವೆ ನಮ್ಮ ಕರ್ತವ್ಯ? ಇಂಥ ತಪ್ಪುಗಳು ಯಾರಿಂದಲೂ ಮತ್ತೆ ಆಗದಿರಲೆಂದು ಆಶಿಸೋಣ. ಸಾಹಸ ಪ್ರವೃತ್ತಿಯನ್ನು ಕೈಬಿಡದೆ ಯಶಸ್ವಿಗಳಾಗೋಣ.

ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ನನ್ನದೊಂದಿಷ್ಟು ಸಲಹೆ ಸೂಚನೆಗಳು:

೧. ಸಾಹಸ ಸಂಸ್ಥೆಯು ನೋಂದಾಯಿತವಾಗಿದೆಯೆ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು. ಸರ್ಕಾರದಿಂದ ಒಂದು ಸರ್ಟಿಫಿಕೇಟು ಕೊಟ್ಟಿರುತ್ತಾರೆ, ಅದನ್ನು ತೋರಿಸಿ ಎಂದು ಕೇಳುವುದು ಒಳ್ಳೆಯದು.

೨. ಪ್ರತಿಯೊಂದು ಸಂಸ್ಥೆಯು ತಮ್ಮ ಪೂರ್ವಾಯೋಜಿತ ಕಾರ್ಯಕ್ರಮಗಳ ದಾಖಲಾತಿಗಳನ್ನು ಇಟ್ಟುಕೊಂಡಿರುತ್ತವೆ. ಫೋಟೋಗಳೋ, ವರದಿಗಳೋ, ವಿಮರ್ಶೆಗಳೋ - ಇವೆಲ್ಲವನ್ನೂ ಪರಿಶೀಲಿಸಬಹುದು.

೩. ಸಾಹಸ ಸಂಸ್ಥೆಯವರು Instructor ಎಂದು ಯಾರನ್ನು ನೇಮಕ ಮಾಡುತ್ತಾರೋ ಅವರ "ಅರ್ಹತೆ"ಯನ್ನು ಪ್ರಶ್ನಿಸಿ, ಆತ/ಆಕೆಯ ಬಗ್ಗೆ ಮಾಹಿತಿ ಸಂಗ್ರಹಿಸುವುದು ಒಳ್ಳೆಯದು. ಆ instructor ಸಾಹಸ ಕ್ರೀಡೆಯನ್ನು ನಡೆಸಲು ಸರ್ಕಾರದಿಂದ ಲೈಸೆನ್ಸ್ ಹೊಂದಿರಬೇಕು. ಅದನ್ನೂ ಕೇಳಬಹುದು. ಬಳಸುವ ಉಪಕರಣಗಳ (equipments) ಬಗ್ಗೆಯೂ ಮಾಹಿತಿಯನ್ನು ಹೊಂದಿರಬೇಕು. ಯಾವ ಯಾವ ಉಪಕರಣವು ಏನೇನು ಕೆಲಸ ಮಾಡುತ್ತೆ, ಮತ್ತೆ ಅವುಗಳ ಸಾಮರ್ಥ್ಯವೇನು ಎಂಬುದನ್ನು ಅರಿತುಕೊಂಡಿರಬೇಕು. ಇಷ್ಟೆಲ್ಲ ಆದ ನಂತರ ಆ instructor ಮಾತನ್ನು ಸರಿಯಾಗಿ ಪಾಲಿಸಬೇಕು. ಅನೇಕ ಅವಘಡಗಳು ಸರಿಯಾಗಿ instructionsನ follow ಮಾಡದೆ ಇರುವುದರಿಂದ ಆಗುತ್ತವೆ. ಬಹುಪಾಲು ಆಗುವುದೇ ಹೀಗೆ.

೪. ಪರ್ವತಾರೋಹಣದಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಾದರೆ instructorನ ಪರ್ವತಾರೋಹಣದ ಸರ್ಟಿಫಿಕೇಟುಗಳನ್ನು ಪರಿಶೀಲಿಸಬಹುದು. ಈ ಸರ್ಟಿಫಿಕೇಟುಗಳು ನೆಹರು ಪರ್ವತಾರೋಹಣ ಸಂಸ್ಥೆಯಿಂದಲೋ (ಉತ್ತರಖಂಡ್), ಹಿಮಾಲಯನ್ ಮೌಂಟನೆಯರಿಂಗ್ ಇನ್ಸ್ಟಿಟ್ಯೂಟ್‍ (ಡಾರ್ಜೀಲಿಂಗ್)ನಿಂದಲೋ ದೊರಕಿದ್ದರೆ ಅದು ವಿಶ್ವದಾದ್ಯಂತ ಅಂಗೀಕೃತವಾದದ್ದು.

೫. ಪ್ರಥಮ ಚಿಕಿತ್ಸೆಯ ಬಗ್ಗೆ ದುರ್ಘಟನೆಯು ಸಂಭವಿಸುವ ಮುನ್ನವೇ ವಿಚಾರಿಸಿಕೊಳ್ಳುವುದು ಬುದ್ಧಿವಂತಿಕೆ. ಸಂಸ್ಥೆಯವರ ಪ್ರಥಮ ಚಿಕಿತ್ಸೆಯ ಸೌಲಭ್ಯದೊಂದಿಗೆ ಒಂದು ಖಾಸಗಿ First Aid Box ಅನ್ನು ನಮ್ಮೊಂದಿಗಿಟ್ಟುಕೊಳ್ಳುವುದು ಇನ್ನೂ ಒಳ್ಳೆಯದು. ನಮಗಲ್ಲದಿದ್ದರೂ ಬೇರೆಯವರಿಗೆ ಉಪಯುಕ್ತವಾದೀತು!

೬. ಇನ್ಷುರೆನ್ಸು ನೀಡುವಷ್ಟು ಇನ್ನೂ ನಮ್ಮ ದೇಶದ ಸಾಹಸ ಸಂಸ್ಥೆಗಳು ಬೆಳೆದಿಲ್ಲ. ಹಾಗೆ ಬೆಳೆಯಲು ಸಾಹಸ ಕ್ರೀಡಾಪಟುಗಳ ಸಹಕಾರವು ಆಯೀಜಕರಿಗೆ ಅಗತ್ಯವಿದೆ. ಸಹಕರಿಸೋಣ. ಸಾಹಸವೆಂದರೆ ಹುಚ್ಚಾಟವಲ್ಲ. ಅಲ್ಲಿ ಸುರಕ್ಷಿತೆ ಮುಖ್ಯ. ಕೆಲವು ದಿನಗಳ ಕೆಳಗೆ ನನ್ನನ್ನು ಒಬ್ಬರು ಪ್ರಶ್ನಿಸಿದರು. "ನೀವು ಇಷ್ಟು ನಿಧಾನವಾಗಿ ಗಾಡಿ ಓಡಿಸುತ್ತೀರಲ್ಲ, ನೀವು ಯಾವ್ ಸೀಮೆ ಅಡ್ವೆಂಚರ್ ಮಾಡ್ತೀರ?" ಎಂದು. ಅಡ್ವೆಂಚರ್ ಎಂದರೆ ಮೈಮೇಲೆ ಜ್ಞಾನವಿಲ್ಲದೆ ಬೇಜವಾಬ್ದಾರಿಯಿಂದ ಗಾಡಿ ಓಡಿಸುವುದಲ್ಲವೆಂದು ಅವರಿಗೆ ತಿಳಿಹೇಳುವುದಕ್ಕೆ ಸ್ವಲ್ಪ ಸಮಯವೇ ಬೇಕಾಯಿತು. ಈಗಿನ ಅನೇಕ ಸಂಸ್ಥೆಗಳು ಮಾಡುತ್ತಿರುವ "ಸಾಹಸ ಕ್ರೀಡೆಗಳು" ಹೀಗೆ ಒಂಟಿ ಚಕ್ರದಲ್ಲಿ ಗಾಡಿ ಓಡಿಸುವ 'ಸಾಹಸ'ಗಳೇ. ವಿಪರ್ಯಾಸ.

೭. ಸಾಹಸ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಇದನ್ನು ಅನೇಕರು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆನೆ ಎದುರು ಬಂದರೆ "ನಾನು ಸಾಹಸಿ" ಎಂದು ಅದರ ಫೋಟೋ ತೆಗೆದುಕೊಂಡು ಬರುವೆನೆಂದೋ ಅದನ್ನು ಮುಟ್ಟಿಬರುವೆನೆಂದೋ ಹೋಗುವುದು ಮೌಢ್ಯವಲ್ಲದೆ ಸಾಹಸವಲ್ಲ. ಆನೆಯು ಕಷ್ಟದಲ್ಲಿದ್ದಾಗ ಅದನ್ನು ಉಳಿಸಲು ಹೋಗಿ 'ದುರ್ಘಟನೆ'ಯಾದರೂ ಅವರನ್ನು ಸಾಹಸಿಯೆನ್ನಬಹುದು. ಆದರೆ ಧೈರ್ಯಪ್ರದರ್ಶನಕ್ಕಾಗಿ ಮಾಡುವ ಕೆಲಸವು ಸಾಹಸವೆನಿಸಿಕೊಳ್ಳದು. ಅದು ಮೂರ್ಖತನವೇ ಸರಿ. ಆದರೆ ಈ ಕಾಡಿನಲ್ಲಿ ಆನೆಯಿದೆ, ಹುಲಿಯಿದೆ, ಚಿರತೆಯಿದೆ ಎಂಬ ಮಾತನ್ನು ಕೇಳಿ ಕಾಡಿಗೇ ಹೋಗದೆಯೋ, ಅಥವಾ ಆ ಕಾಡಿಗೆ ಹೋಗಿ ಭಯದಿಂದಲೇ ವಾಸ ಮಾಡುತ್ತಲಿರುವ ಸಾಹಸಕ್ಕಿಂತಲೂ ಮನೆಯಲ್ಲಿ ಟಿ.ವಿ.ನೋಡಿಕೊಂಡು ಕಾಲ ಕಳೆಯುವುದು ಉತ್ತಮ. ಹಾಗೇನಾದರೂ ಕೆಟ್ಟದ್ದು ಸಂಭವಿಸಿದರೆ ಅದಕ್ಕೆ ನಮ್ಮ ದುರದೃಷ್ಟವು ಕಾರಣವೇ ವಿನಾ ಅಕ್ಕಪಕ್ಕದವರಾಗಲೀ, ಆಯೋಜನಾಸಂಸ್ಥೆಯಾಗಲೀ, ಪ್ರಕೃತಿಯಾಗಲೀ ಕಾರಣವಲ್ಲವೆಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.

(He who lives by the sword, dies by the sword - old jungle saying.. (phantom))

ಕಷ್ಟಮ್ ಕರ್ಮೇತಿ ದುರ್ಮೇಧಾಃ ಕರ್ತವ್ಯಾದ್ವಿನಿವರ್ತತೇ |
ನ ಸಾಹಸಮನಾರಭ್ಯ ಶ್ರೇಯಃ ಸಮುಪಲಭ್ಯತೇ ||

-ಅ
23.04.2009
10.45AM

7 comments:

 1. ನನಗೆ ಎತ್ತರದ ಸ್ಥಳ ಅಂದ್ರೆ ಭಯ ಜಾಸ್ತಿ, ಇಂಥಾ ಆಟಗಳೆಲ್ಲಾ ತುಂಬಾ ಹೆದ್ರಿಕೆ. ನಿಮ್ಮ ಟಿಪ್ಸು ಚೆನ್ನಾಗಿದೆ.

  [ಬೆಂಗಳೂರಿನ ಸಮಸ್ಯೆಯೆಂದರೆ ಇಲ್ಲಿರುವ "ದೊಡ್ಡ ದೊಡ್ಡ" ಕಂಪೆನಿಗಳ ಅನೇಕ "ದೊಡ್ಡ ದೊಡ್ಡ" ಉದ್ಯೋಗಿಗಳು ತಮ್ಮ "ವೀಕೆಂಡ್ ಔಟಿಂಗ್" ಎಂಬ ಸಂಸ್ಕೃತಿಯ ಸಂಪ್ರದಾಯಕ್ಕೋಸ್ಕರವಾಗಿ ಸಾಹಸವನ್ನು ಆರಿಸಿಕೊಂಡಿರುತ್ತಾರೆ. ಚಾರಣವು ...]
  ಕರೆಕ್ಟು, ಬೆಂಗ್ಳೂರಲ್ಲಿ ನಾಯಿಗಳ ಕಾಟ ಜಾಸ್ತಿಯಾಗೋಕೂ "ದೊಡ್ಡ ದೊಡ್ಡ" ಕಂಪೆನಿಗಳ ಅನೇಕ "ದೊಡ್ಡ ದೊಡ್ಡ" ಉದ್ಯೋಗಿಗಳೇ ಕಾರಣ!

  ReplyDelete
 2. ಕಮೆಂಟ್ಸು ಸಿಕ್ಕಾಪಟ್ಟೆ ಇವೆ. ಒಂದು ದೀರ್ಘ ಚರ್ಚೆಗೆ ಸಾಕಾಗದಷ್ಟು. ಯಾವುದಾದರೂ ಕಾಡು ತಿರುಗಕ್ಕೆ ಹೋದಾಗ ಹೇಳ್ತೀನಿ.

  ReplyDelete
 3. ಯಾರದರೂ ಲೇಖನಕ್ಕೆ ಕಾಮೆಂಟ್ ಹಾಕಿದರೆ, ಅದರ ಬಗ್ಗೆ ಪ್ರತಿಕ್ರಿಯಿಸುವ/ವಿಮರ್ಶಿಸುವ ಗುಣವೂ ಬರೆದವರಿಗಿರಬೇಕು. ನಿಮಗೆ ಕಾಮೆಂಟು ಬೇಡವಾಗಿದ್ದಲ್ಲಿ ಅಂತೆಯೇ ಬ್ಲಾಗಿನ ಸೆಟ್ಟಿಂಗ್ ಬದಲಾಯಿಸುವ ಅವಕಾಶವಿದೆ!

  ಶ್ರೀಕಾಂತ,
  ನಿಮ್ಮ ಕಾಮೆಂಟಿನ ಔಚಿತ್ಯ ತಿಳಿಯಲಿಲ್ಲ. ನಿಮ್ಮ ಸಿಕ್ಕಾಪಟ್ಟೆ ಕಮೆಂಟ್ಸ್ ಏನು? ಅದನ್ನ ನಾವು ಏಕೆ ತಿಳಿಯಬಾರದು? ನೀವು ಆಫ್-ಲೈನಿನಲ್ಲಿ ಹೇಳುವುದಾದರೆ ಇಲ್ಲಿ ಈ ಕಾಮೆಂಟಿನ ಉದ್ದೇಶವೇನು?

  ReplyDelete
 4. [ಸಿಂಚನ] ಬ್ಲಾಗ್ ಸೆಟ್ಟಿಂಗ್ ತಂತ್ರಜ್ಞಾನದ ಮಾಹಿತಿ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಅಗತ್ಯ ಬಂದಲ್ಲಿ ಸೆಟ್ಟಿಂಗ್ ಬದಲಿಸುತ್ತೇನೆ.

  ReplyDelete
 5. ಕಿಮಿತಿ ಪೃಷ್ಟಮೇತತ್! ಸಪದಿ ವಿಸ್ಮಿತೋಽಹಂ!
  ಸಕಲವ್ಯಾಪ್ತಚರ್ಚಾ ಭವತಿ ಆವಯೋಽಹೋ
  ಅಮಿತವಾಕ್ಯಗ್ರಸ್ತಾ ನ ಖಲು ಅಸ್ತಿ ಏಷಾ
  ಅಟವಿರೇವ ಸೂಕ್ತಂ ಇತಿ ಮಯೋಕ್ತಮತಃ

  ReplyDelete
 6. ಎಲ್ಲ ಬಲ್ಲವರಿಲ್ಲ
  ಬಲ್ಲವರು ಬಹಳಿಲ್ಲ
  ಬಲ್ಲಿದರು ಇದ್ದೂ ಬಲವಿಲ್ಲ

  ReplyDelete

ಒಂದಷ್ಟು ಚಿತ್ರಗಳು..