Thursday, April 09, 2009

ತಪ್ಪು ನಂಬಿಕೆಗಳು

ಅದೇನಾಯಿತೋ ಏನೋ, ಏನೋ ಮಾಡೋಕೆ ಹೋಗಿ ನಿನ್ನೆಯ ಪೋಸ್ಟು ಡಿಲೀಟ್ ಆಗೋಯ್ತು! :-(
ಆ ಪೋಸ್ಟಿನ ತಾತ್ಪರ್ಯವಿಷ್ಟೆ. ಅನೇಕ ಗಿಡಗಳೂ ಸಹ ಸಂಗೀತಕ್ಕೆ ಸ್ಪಂದಿಸುತ್ತವೆ ಎನ್ನುವುದು. ಇರಲಿ, ಅದರ ಬಗ್ಗೆ ಮತ್ತೊಮ್ಮೆ ಇನ್ಯಾವಗಲಾದರೂ ನೋಡೋಣ. ಈಗ ಮತ್ತೆ ಅದನ್ನೇ ಟೈಪಿಸುವ ಮನಸ್ಸಿಲ್ಲ.

ಪ್ರಕೃತಿಯ ಬಗ್ಗೆ ನಾವು ಒಂದಷ್ಟು ತಪ್ಪು ತಿಳುವಳಿಕೆಗಳನ್ನು ಬೆಳೆಸಿಕೊಂಡುಬಿಟ್ಟಿದ್ದೇವೆ. ಆಗಾಗ್ಗೆ ನಮ್ಮ ಶಾಲೆಯ ಮಕ್ಕಳಿಗೆ ಹೇಳುತ್ತಿರುತ್ತೇನೆ. ಆ ಮಕ್ಕಳಾದರೋ ಮನೆಯಲ್ಲಿ ಯಾರು ಯಾರೋ ಏನೇನೋ ಹೇಳಿರುವುದನ್ನೆಲ್ಲ ಕೇಳಿಕೊಂಡು ತಮ್ಮ ಕಲ್ಪನೆಗಳನ್ನು ಎಲ್ಲೆಲ್ಲೋ ಹರಿಹಾಯುವಂತೆ ಮಾಡಿಕೊಂಡುಬಿಟ್ಟಿರುತ್ತಾರೆ. "ಹಾವು ಹಾಲು ಕುಡಿದು ಜೀವಿಸುವ ಪ್ರಾಣಿಯಲ್ಲ, ಸಂಪೂರ್ಣ ಮಾಂಸಾಹಾರಿ" ಎಂದರೆ ಮಕ್ಕಳೇ ಏನು, ದೊಡ್ಡವರೂ ಎಷ್ಟೊಂದು ಜನ ಒಪ್ಪುವುದಿಲ್ಲ.

ಒಂದು ಕಗ್ಗ ಈ ರೀತಿಯಿದೆ.

ಕಡೆಗಾಲವನು ತಾನೆ ಮುನ್ನರಿತು ಕಾಡಾನೆ-
ಯಡವಿಯೊಳದೊಂದು ದೂರದ ಗವಿಯನೈದಿ
ಬಿಡುವುದಾಯೆಡೆ ಮೌನದಿಂದಸುವನೆನ್ನುವರು
ಕಡೆಯ ಸಾರಂತು ನೀಂ - ಮಂಕುತಿಮ್ಮ

ಇದರಲ್ಲಿ ಅಡಗಿರುವ ತತ್ತ್ವದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಈ ತತ್ತ್ವವನ್ನು ಗೌರವಿಸುತ್ತೇನೆ. ನನ್ನ "ಕಡೆಯೂ" ಅಂತೆಯೇ ಆಗಲೆಂದು ಹಾರೈಸುತ್ತೇನೆ. ಆದರೆ, ಆನೆಗಳು ಹಾಗೆ ತನ್ನ ಕಡೆಗಾಲವನ್ನು ತಾನೆ ಅರಿತು ಒಂಟಿ ಪಯಣ ಮಾಡಲು ಹೊರಡುವುದಿಲ್ಲ. ಅದೊಂದು ನಂಬಿಕೆಯಷ್ಟೆ.ಆನೆಗಳ ಬಗ್ಗೆ ಹೀಗೆ ಅನೇಕ ನಂಬಿಕೆಗಳಿವೆ. ಆನೆಯ ಕಿವಿಯೊಳಗೆ ಇರುವೆ ಹೋದರೆ ಆನೆ ಸತ್ತು ಹೋಗುತ್ತೆ ಎಂದೂ, ಆನೆಯ ಕನಸ್ಸಿನಲ್ಲಿ ಸಿಂಹ ಬಂದರೆ ಆನೆ ಸತ್ತು ಹೋಗುತ್ತೆ (ಇದನ್ನೂ ಕೇಳಿದ್ದೇನೆ ಕೆಲವರ ಬಾಯಿಂದ) ಎಂದೂ ನಂಬಿರುವವರಿದ್ದಾರೆ. ಇವೆರಡೂ ತಪ್ಪು. ಆನೆಯ ಕಿವಿಯೊಳಗೆ ಇರುವೆ ಹೋದರೆ ಇರುವೆ ಸಾಯಬಹುದು, ಆನೆ ಸಾಯುವುದಿಲ್ಲ. ನಮ್ಮ ಕನಸ್ಸಿನಲ್ಲಿ ಆನೆ ಬಂದರೆ ನಾವು ಹೃದಯಾಘಾತದಿಂದ ಸಾಯಬಹುದು, ಸಾಯದೆಯೂ ಇರಬಹುದು. ಅದೇ ನಿಯಮ ಆನೆಗೂ ಅನ್ವಯಿಸುತ್ತೆ.

ಹಾವಿನ ಬಗ್ಗೆ ಸಾಕಷ್ಟು ತಪ್ಪು ತಿಳಿವಳಿಕೆಗಳನ್ನು ನಾವು ನೋಡುತ್ತಲೇ ಇದ್ದೇವೆ. "ಹಾವಿಗೆ ಹಲ್ಲಲ್ಲಿ ವಿಷ.." - ತಪ್ಪು. ಮೊದಲಿಗೆ, ಎಲ್ಲ ಹಾವೂ ವಿಷವಲ್ಲ. ಎರಡನೆಯದಾಗಿ ಹಾವಿನ ವಿಷವಿರುವುದು ಅದರ "Venom Glands" ನಲ್ಲಿ. ಹಾಗಾಗಿ "ಹಲ್ಲು ಕಿತ್ತ ಹಾವು" ಕೂಡ ವಿಷವನ್ನು ಉತ್ಪತ್ತಿ ಮಾಡಬಲ್ಲುದು.

ರನ್ನ ಈ ಸಾಲುಗಳನ್ನು ನೋಡೋಣ.

ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇಳ್ ಪರೀಕ್ಷಿಪರ್ಗೆಂಟೆರ್ದೆಯೇ..ರನ್ನನ ಕೃತಿಯ ಬಗ್ಗೆ ಮಾತನಾಡುವ ಎಂಟೆದೆ ನನಗಿಲ್ಲ. ಆದರೆ ಇಲ್ಲಿ ಬಂದಿರುವ ಫಣಿಪತಿಯ ಫಣಾ ರತ್ನಮುಮಂ - ಇದು ಇನ್ನೊಂದು ತಪ್ಪು ನಂಬಿಕೆ. "ಕಾಳಿಂಗ ಸರ್ಪವು ಯಾರಿಗೂ ಕಚ್ಚದೇ ಅದೆಷ್ಟೋ ವರ್ಷಗಳಿದ್ದರೆ ಅದರ ವಿಷವು ವಜ್ರವಾಗಿ ಹೆಡೆಯ ಮೇಲೆ ಬಂದು ಫಳ ಫಳ ಹೊಳೆಯುತ್ತಂತೆ. ಅದನ್ನು ಕದಿಯಲಾಗಲೀ, ಅದನ್ನು ಮುಟ್ಟಲಾಗಲೀ, ಪರೀಕ್ಷಿಸವವರಿಗಾಗಲೀ ಎಂಟೆದೆ ಬೇಕೇ ಬೇಕು (ಅದರಂತೆಯೇ ರನ್ನನ ಗದಾಯುದ್ಧಂ ಕೃತಿ ಕೂಡ ಎಂದು ರನ್ನ ಹೇಳುತ್ತಾನೆ)." ಇಲ್ಲಿ ರನ್ನನ ಕೃತಿಯ ವಿಷಯ ಬದಿಗಿಟ್ಟು ಬರೀ ಕಾಳಿಂಗ ಸರ್ಪದ ವಿಷಯಕ್ಕೆ ಬರೋಣ. ಕಾಳಿಂಗ ಸರ್ಪವು ಸ್ವಭಾವತಃ ಹೊಳೆಯುತ್ತೆ. ಬಿಸಿಲು ಅದರ ಹೆಡೆಯ ಮೇಲೆ ಬಿದ್ದರೆ ಫಳ ಫಳನೆ ಹೊಳೆಯುತ್ತೆ. ಇದನ್ನು ನೋಡಿದ ಜನರು ಮರಳುಗಾಡಿನಲ್ಲಿ ಮರೀಚಿಕೆಯನ್ನು ನೋಡಿ ನೀರೆಂದು ಭ್ರಮಿಸುವಂತೆ ವಜ್ರವೆಂದು ಭ್ರಮಿಸುತ್ತಾರಷ್ಟೆ. ಹಾವಿನ ಹೆಡೆಯ ಮೇಲೆ ಯಾವ ಮಣಿಯೂ ಇರುವುದಿಲ್ಲ.

ಹಲ್ಲಿಗಳು (ಭಾರತದ ಹಲ್ಲಿಗಳು) ವಿಷವಲ್ಲವೆಂದು ಅರಿತುಕೊಂಡಿದ್ದೇವಷ್ಟೆ. ಅಡುಗೆಗೆ ಹಲ್ಲಿ ನೆಂಚಿಕೊಂಡು ತಿನ್ನಬೇಕೆಂದರೆ ತಿನ್ನಬಹುದು. ಪ್ರಾಣಹಾನಿಯೇನಲ್ಲ. ಪಾಪ ಹಲ್ಲಿಗೆ ಪ್ರಾಣಹಾನಿಯಷ್ಟೆ. ಇನ್ನೊಂದು ಪ್ರಚಲಿತ ನಂಬಿಕೆಯಿದೆ. "ಹಾವುರಾಣಿ ಕಚ್ಚಿದರೆ ಔಷಧಿಯೇ ಇಲ್ಲ" ಎಂದು. ವಾಸ್ತವವಾಗಿ ಹಾವುರಾಣಿ ಕಚ್ಚಿದರೆ ಔಷಧಿ ಬೇಕಾಗುವುದಿಲ್ಲ. ಅದೂ ಹಲ್ಲಿಯ ಜಾತಿಗೇ ಸೇರಿದ್ದು. ವಿಷವಿಲ್ಲ.ತೇಜಸ್ವಿಯವರ "ಪರಿಸರದ ಕತೆ"ಯಲ್ಲಿ ಬರುವ "ಮಾನೀಟರ್" ಹಲ್ಲಿಯ ಬಗ್ಗೆ ಸಾಕಷ್ಟು ನಂಬಿಕೆಗಳಿವೆ. ಈ ಮಾನೀಟರ್ Varanus bengalensis ಹಿಡಿತಕ್ಕೆ ಪ್ರಸಿದ್ಧಿ. ಕರ್ನಾಟಕದವರನ್ನು ಕೇಳಿದರೆ "ಟಿಪ್ಪು ಸುಲ್ತಾನನು ಕೋಟೆಯ ಎತ್ತರದ ಗೋಡೆಗಳನ್ನು ಏರಲು ಇದನ್ನು ಬಳಸುತ್ತಿದ್ದನಂತೆ, ಅದನ್ನು ಹಗ್ಗದ ಒಂದು ತುದಿಗೆ ಕಟ್ಟಿ ಮೇಲಕ್ಕೆಸೆದರೆ ಅದು ಗೋಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡು, ನಂತರ ಹಗ್ಗವನ್ನು ಹಿಡಿದುಕೊಂಡು ಸೈನ್ಯದವರು ಹತ್ತುತ್ತಿದ್ದರು" ಎನ್ನುತ್ತಾರೆ. ಮಹಾರಾಷ್ಟ್ರದವರನ್ನು ಕೇಳಿದರೆ ಟಿಪ್ಪು ಜಾಗದಲ್ಲಿ ಶಿವಾಜಿ ಕುಳಿತಿರುತ್ತಾನೆ. ವಾಸ್ತವದಲ್ಲಿ ಮಾನೀಟರ್ ಹಲ್ಲಿಯು ಮರವನ್ನು ಹತ್ತುವುದು ಬಹಳ ಕಡಿಮೆ. ಸಾಮಾನ್ಯವಾಗಿ ಅದು ನೆಲದ ಮೇಲೆಯೇ ಕಂಡುಬರುತ್ತೆ. ಮತ್ತು ಬಿಲವನ್ನು ಬಯಸುತ್ತೆ.

ಮನುಷ್ಯ ಸ್ಪರ್ಶವಾಗಿಬಿಟ್ಟರೆ ಮರಿಗಳನ್ನು ತಾಯಿ ಹಕ್ಕಿ ಕೊಂದು ಬಿಡುತ್ತೆ! ಇದನ್ನು ನಾನೂ ಚಿಕ್ಕಂದಿನಲ್ಲಿ ನಂಬಿದ್ದೆ. ಇದನ್ನು ನೋಡೂ ಇದ್ದೇನೆ. ಆದರೆ ಈ ಕೃತ್ಯವನ್ನು ಎಲ್ಲ ಬಾರಿಯೂ ಎಲ್ಲ ಪಕ್ಷಿಗಳೂ ಅನುಸರಿಸುವುದಿಲ್ಲ. ನಾವು ಮುಟ್ಟಿದಾಕ್ಷಣ ಆ ಪಕ್ಷಿಯನ್ನು ಗುಂಪಿನ ಪಕ್ಷಿಗಳೆಲ್ಲ ಕೊಂದೇ ತೀರುತ್ತವೆ ಎನ್ನುವುದು ತಪ್ಪು ಕಲ್ಪನೆ.

ಮತ್ತೊಮ್ಮೆ ಇನ್ನೇನಾದರೂ ಹೊಳೆದರೆ ಇಲ್ಲಿಗೆ ಕರೆದುಕೊಂಡು ಬರುತ್ತೇನೆ.

-ಅ
09.04.2009
4PM

11 comments:

 1. ಸರ್, ಎರಡೂ ಕ್ಲಾಸಿಗೂ ಪ್ರೆಸೆಂಟ್
  ಒಳ್ಳೆ ಮಾಹಿತಿಗಳೇ ಕೊಡುತ್ತೀರ...:)

  ReplyDelete
 2. ಅನೇಕ ಗಿಡಗಳೂ ಸಹ ಸಂಗೀತಕ್ಕೆ ಸ್ಪಂದಿಸುತ್ತವೆ.. hey idna tirga bari miss maadbeda plz.. tumba interesting ansatte..
  chennagide article. naanu nambidde pakshi na manushya muttidre adra gumpige sersalla annodna...

  ReplyDelete
 3. ಉತ್ತಮ ಮಾಹಿತಿ,ಅರುಣ.

  ReplyDelete
 4. Literature class-o, science class-o gothilla ... aadre vishya maatra .... :-)

  ReplyDelete
 5. ನಮ್ಮ ಕನಸ್ಸಿನಲ್ಲಿ ಆನೆ ಬಂದರೆ ನಾವು ಹೃದಯಾಘಾತದಿಂದ ಸಾಯಬಹುದು, ಸಾಯದೆಯೂ ಇರಬಹುದು. ಅದೇ ನಿಯಮ ಆನೆಗೂ ಅನ್ವಯಿಸುತ್ತೆ.

  whistle ಇದಕ್ಕೆ !

  ಕ್ಲಾಸ್ ಲೇಖನ.

  ReplyDelete
 6. >>ಅದೇನಾಯಿತೋ ಏನೋ, ಏನೋ ಮಾಡೋಕೆ ಹೋಗಿ ನಿನ್ನೆಯ ಪೋಸ್ಟು ಡಿಲೀಟ್ ಆಗೋಯ್ತು! :-(
  ರಾತ್ರಿ ಕೂತೋದಿ ಕಷ್ಟ ಪಟ್ಟು ಕಾಮೆಂಟ್ ಹಾಕಿದವ್ರಿಗೆ ಒಂದು ವಂದನೆನೂ ಹೇಳಿಲ್ಲ.. ಇರ್ಲಿ

  ನಿಮ್ಮ ಬರಹಕ್ಕೆ ಪೂರಕವಾಗಿ ಮಾಯ್ಸನ ಒಂದು ಕವ್ನ: http://maaysa.wordpress.com/2009/04/02/%E0%B2%85%E0%B2%AA%E0%B3%8D%E0%B2%B0%E0%B2%95%E0%B3%83%E0%B2%A4%E0%B2%BF/

  ReplyDelete
 7. [ಪಾಲ] ಸೊಗಸಾಗಿದೆ ಆ ಕವನ. ಆದರೆ ಕಿಂಚಿತ್ ಬೇಸರವೂ ಆಯಿತು ಜನರ ಆಚರಣೆ ಬಗ್ಗೆ. ನೀವು ಹಾಕಿದ್ದ ಕಮೆಂಟು ನನಗೆ ಈಮೇಲ್ ಅಲ್ಲಿ ಬಂತು. ಅದರ ಸಲುವಾಗಿಯೇ ನಾನು ನನ್ನ ಬ್ಲಾಗನ್ನು ಓಪನ್ ಮಾಡಲು ಹೋಗಿ ಏನೇನೋ ಆಗಿ ಏನೇನೋ ಮಾಡಿ ಕರ್ಮಕಾಂಡವಾಗಿ ಹೋಯಿತು. ಕರ್ಮಕ್ಕೆ ಈಮೇಲ್ ಕೂಡ ಇಲ್ಲ ಈಗ.. :-( ಆದರೆ ನೆನಪಿದೆ. ನನಗೆ ತಿಳಿದ ಉತ್ತರವನ್ನು ತಿಳಿಸಲು ಯತ್ನಿಸುತ್ತೇನೆ.

  [ಲಕುಮಿ] ಬರ್ತಾ ಬರ್ತಾ ರಾಯರ ಕುದುರೆ ಏನೋ ಆಯ್ತಂತೆ.

  [ವಿಜಯಾ] ಬೊಂಬಾಟ್....

  [ಸುನಾಥ್] ಧನ್ಯವಾದಗಳು.

  [ಭವ್ಯಾ] ಹೆ ಹ್ಹೆ.. ಹ್ಞೂಂ.. ಹಾಗೇನೇ.

  [ಅಂತರ್ವಾಣಿ] ಮೂರನೆಯ ಕ್ಲಾಸು ಮೋಟುಗೋಡೆಯಲ್ಲಿದೆ.

  ReplyDelete
 8. ಅರುಣ್,
  ಪರ್ವಾಗಿಲ್ಲ, ಮುಂದಿನ ಬಾರಿ ಮತ್ತೆ ಸಸ್ಯ, ಸಂಗೀತದ ಬಗ್ಗೆ ಬರೀಬೇಕಾದ್ರೆ ಇನ್ನೂ ಸ್ವಲ್ಪ ಹೆಚ್ಚಿನ ಮಾಹಿತಿ ಒದಗಿಸಿದ್ರೆ ನನಗೆ ಒಳ್ಳೇದಾಗ್ತಿತ್ತು.

  ಬರೀ ಅಷ್ಟೆ ಅಲ್ಲಾ ರೀ, ತೀರ ಇತ್ತೀಚೆಗೆ ಯಾವ್ದೋ ಹಂದಿ ಬುದ್ಧಿ ಭ್ರಮಣೆ ಆಗಿ ದೇವಸ್ಥಾಸ ಸುತ್ತು ಹಾಕ್ತಾ ಇತ್ತಂತೆ. ಜನ ಅದು ವರಹಾವತಾರ ಅಂತೇಳಿ ಮುತ್ತಿಗೆ ಹಾಕಿ ಅದಕ್ಕೆ ಅರಶಿನ ಎಲ್ಲಾ ಹಚ್ಚಿ ಅವತಾರ ಇನ್ನೇನು ಕೊನೆಯುಸಿರು ಎಳೆಯಬೇಕು ಅನ್ನೋವಷ್ಟರಲ್ಲಿ ಪೋಲಿಸರೆಲ್ಲಾ ಬಂದು ಬಿಡಿಸಿದ್ರಂತೆ.

  ನಿಮ್ಮ ಲೇಖನದ ಬಗ್ಗೆ ಇನ್ನೊಂದ್ ವಿಷ್ಯ,, ಆನೆ ಕಿವಿಯೊಳಗೆ ಇರ್ವೆ ಹೋದ್ರಾ ಅಥ್ವಾ ಸೊಂಡಿಲೊಳಗೆ ಹೋದ್ರಾ. ಯಾಕಂದ್ರೆ ಅದ್ಯಾವ್ದೋ ಕಥೆ ಇದ್ಯಲ್ಲ ಆನೆ, ಜೇಡ ಶಿವಲಿಂಗ. ಜೇಡ ಆನೆ ಸೊಂಡಿಲೊಳಗೆ ಹೋಗಿ, ಆನೆ ಸತ್ತೋಗತ್ತೆ. ನಾನು ಇದನ್ನ ಕಥೆ ಅಂತ ಓದಿದ್ನೆ ಹೊರ್ತು ನಂಬಿಲ್ಲ. ಯಾಕಂದ್ರೆ ತೀವ್ರ ವಿಷ ಇರೋ ಜೇಡ ಗೂಡಲ್ಲಿ ವಾಸಿಸೋದು, ಬಲೆ ನೇಯಲ್ಲ.

  >>ಮನುಷ್ಯ ಸ್ಪರ್ಶವಾಗಿಬಿಟ್ಟರೆ ಮರಿಗಳನ್ನು ತಾಯಿ ಹಕ್ಕಿ ಕೊಂದು ಬಿಡುತ್ತೆ
  ಇದು ಚಿಕ್ ಮಕ್ಳು ಹಕ್ಕಿ ಮರೀನೆಲ್ಲಾ ಮುಟ್ಟಿ ಹಾಳ್ಮಾಡ್ಬಾರ್ದು ಅಂತಾ ಹೇಳಿರೋದು :)

  ಕೆಲವುದಕ್ಕೆ ನೀವು ಹಳೆಗನ್ನಡದ ರೆಫೆರೆನೆನ್ಸ್ ಕೊಟ್ಟಿದ್ದೀರಾದರೂ ನೀವು ಮೇಲೆ ತಿಳಿಸಿದ ಹೆಚ್ಚಿನ ನಂಬಿಕೆಗಳನ್ನ ನಾನು ಕೇಳೇ ಇಲ್ಲ! ಹಾವಿಗೆ ಹಾಲೆರೆಯೋದು, ಶಿವಾಜಿ ಮತ್ತೆ ಉಡದ ಬಗ್ಗೆ ಬಿಟ್ಟು. ಯಾವ್ಕಡೆ ಜನ್ರ ನಂಬಿಕೆ ಇವೆಲ್ಲಾ? ನಂ ಕಡೆ ಕಲ್ಲ ನಾಗರಕ್ಕೆ ಹಾಲೆರಿತಾರೆ, ನಿಜವಾದ ಹಾವಿಗೆ ಹಾಲೆರದದ್ದನ್ನ ನೋಡಿಲ್ಲ, ಕೇಳೂ ಇಲ್ಲ. ಅದೂ ಸಿಕ್ಕಾಪಟ್ಟೆ ನಾಗ್ರ ಹಾವು ನಂ ಕಡೆ. ಜನ್ರಿಗೆ ಒಂಥರಾ ಹೆದ್ರಿಕೆ (ಬ್ರಾಮ್ಹಣೇತರರಿಗೆ), ಸೋ ಯಾರೂ ಅದ್ರ ತಂಟೆಗೇ ಹೋಗೋಲ್ಲ ಮತ್ತೆ ಕೊಲ್ಲೋದೂ ಕೂಡ ಇಲ್ಲ. ಮುಂಗುಸಿ ನವಿಲಿನ ಕಾಟ ಬಿಟ್ರೆ ಜನರ ಹೆದ್ರಿಕೆ ಅದಕ್ಕೆ ಅಲ್ಲಿಲ್ಲ.

  ReplyDelete
 9. ಅರುಣ್,
  ನಿಮ್ಮ ಎಲ್ಲಾ ಪೋಸ್ಟ್-ಗಳೂ ಮಾಹಿತಿಭರಿತ. ಎಲ್ಲ ಕಡೆ ’ಒಳ್ಳೆಯದಾಗಿದೆ’ ಎಂದು ಬರೆಯುವುದನ್ನು ಬಿಟ್ಟು ಬೇರೇನು ಟಿಪ್ಪಣಿ ಬರೆಯುವುದು ಎಂದು ತೋಚುತ್ತಿಲ್ಲ. ಆದರೆ ಹಾಗೆ ಬರೆಯದೇ ಇರಲು ಕೂಡಾ ಸಾಧ್ಯವಾಗುತ್ತಿಲ್ಲ! ಕಷ್ಟದಿಂದ ಮಾಹಿತಿ ಒಟ್ಟು ಮಾಡಿ ಓದುಗರಿಗೆ ತಿಳಿಸುತ್ತಿದ್ದೀರಿ. ತುಂಬಾ ಥ್ಯಾಂಕ್ಸ್.

  ReplyDelete
 10. [ಪಾಲ]

  ಆ ಹಂದಿ ಬದುಕ್ಕೊಳ್ತಲ್ಲ ಸಧ್ಯ.

  ಜೇಡದ ಕಥೆ ಗೊತ್ತಿರಲಿಲ್ಲ.

  ಒಳ್ಳೇದು.

  ಏನೇನೋ ನಂಬಿಕೆಗಳು ಎಲ್ಲೆಲ್ಲೋ ಎಲ್ಲೆಲ್ಲಿಂದಲೋ ಹರಡಿಬಿಡುತ್ತವೆ ನೋಡಿ.

  [ರಾಜೇಶ್ ನಾಯ್ಕ] ತುಂಬ ಧನ್ಯವಾದಗಳು ಸರ್... ನೀವೂ ಏನು ಕಮ್ಮಿಯಿಲ್ಲ. ಸ್ವಾನುಭಾವದಿಂದಲೇ ನಮಗೆ ಅದೆಷ್ಟು ಮಾಹಿತಿಗಳನ್ನೊದಗಿಸಿದ್ದೀರ ಗೊತ್ತೇ? ನಾನು, ಮತ್ತು ನನ್ನ "ಅಲೆಮಾರಿ" ಸ್ನೇಹಿತರು ನಿಮಗೆ ಕೃತಜ್ಞರು.

  ReplyDelete

ಒಂದಷ್ಟು ಚಿತ್ರಗಳು..