Thursday, April 02, 2009

ಮೇಘಸಂದೇಶ

ನನ್ನ ಕೊಡಚಾದ್ರಿ ಚಾರಣದ ಮೊದಲ ಅನುಭವವು ಮರೆಯಲು ಸಾಧ್ಯವೇ ಇಲ್ಲ. ನಾವು ಬೆಟ್ಟದ ತುದಿಯಲ್ಲಿ ನಿಂತಿರುವಾಗ ಮಳೆಯ ಮೋಡದ ಗುಂಪು ತೆವಳುತ್ತ ನಮ್ಮೆಡೆಗೆ ಬಂದು ನಮ್ಮ ಪ್ಯಾಂಟುಗಳನ್ನು ಒದ್ದೆ ಮಾಡಿದವು. ಸಾಮಾನ್ಯವಾಗಿ ಮಳೆಯು ನಮ್ಮ ಮೇಲೆ ಬೀಳುವುದು ಅನುಭವವಾಗಿದ್ದ ನನಗೆ ಮೊದಲ ಸಲ ಮಳೆಯ ಆರಂಭವು ನನಗಿಂತ ಕೆಳಗೆ ಆಗಿದ್ದನ್ನು ನೋಡಿ ಸಂತೋಷ ತಡೆಯಲಾಗಲೇ ಇಲ್ಲ.

ಆ ಮೋಡಗಳಿಗೆ ಸ್ಟ್ರಾಟಸ್ ಮೋಡಗಳು ಎನ್ನುತ್ತೇವೆ. ದೂರದಿಂದ ಅಟ್ಟಿಸಿಕೊಂಡು ಬಂದು ಮೋಡಗಳ ಹೊದಿಕೆಯನ್ನು ಹೊದಿಸುವುದೇ ಈ ಸ್ಟ್ರಾಟಸ್ ಮೋಡಗಳು. ಈ ಮೋಡಗಳು ಬೆಟ್ಟಗಳನ್ನು ಸುತ್ತುವರಿದಾಗ ಬೆಟ್ಟವು ಕಾಣಿಸುವುದಿಲ್ಲ. ಅನೇಕ ಸಲ ಈ ಮೋಡಗಳು ಚಾರಣಿಗನ ದಾರಿ ತಪ್ಪಿಸುತ್ತವೆ. ಹಿಂದೊಮ್ಮೆ ಮುಳ್ಳಯ್ಯನಗಿರಿಯಲ್ಲೇ ನಾನು ಮತ್ತು ಶ್ರೀಕಾಂತ ಈ ಮೋಡಗಳ ದೆಸೆಯಿಂದ ಎಲ್ಲೋ ಇಳಿಯಲು ಇನ್ನೆಲ್ಲೋ ಇಳಿದಿದ್ದೆವು. ದಕ್ಷಿಣ ಕನ್ನಡದ ಕಾಡುಗಳ ಜನರು ಈ ಮೋಡಗಳಿಗೆ "ಹೊಗೆ"ಯೆಂದೂ ಕರೆಯುವುದುಂಟು. "ಹೊಗೆ ಇರುವುದರಿಂದ ಆನೆ ಇದ್ದರೆ ಗೊತ್ತಾಗುವುದಿಲ್ಲ, ಈಗ ಹೋಗೋದು ಬೇಡ" ಎನ್ನುತ್ತಾರೆ.ಮಳೆಗಾಲದಲ್ಲಿ ಸಾಮಾನ್ಯವಾಗಿ ಚಾರಣಿಗರು ಶಿಖರದ ಮೇಲೆ ಕ್ಯಾಂಪ್ ಮಾಡಲು ಹಿಂಜರಿಯುತ್ತಾರೆ. ಸಿಡಿಲಿನ ಭೀತಿ. ಈ ಗುಡುಗು ಸಿಡಿಲುಗಳಿಗೆ ಕಾರಣವಾಗಲು "ಕ್ಯುಮುಲೋನಿಂಬಸ್" - ಎಂಬ ಮೋಡವೇ ಕಾರಣ. ಆಕಾಶವೆಲ್ಲ ಕಪ್ಪಡರಿ ಮಿಂಚು ಗುಡುಗುಗಳನ್ನು ಹೊರಹೊಮ್ಮಿಸಿಕೊಂದು ಭೀಕರ ಮಳೆಗರೆವಂತೆ ಹೆದರಿಸುವ ಮೋಡವೇ ಇದು. ಇದು "ಹೊಗೆ"ಯಂತೆ ನಮ್ಮನ್ನು ಹಾದು ಹೋಗುವುದಿಲ್ಲ. ಇದರ ವಾಸ್ತವವು ಬಹಳ ಎತ್ತರದಲ್ಲಿರುತ್ತೆ. ಸುಮಾರು ಹತ್ತು ಹನ್ನೆರಡು ಸಾವಿರ ಅಡಿ ಎತ್ತರದಲ್ಲಿ.ಆದರೆ ಸಾಮಾನ್ಯವಾಗಿ ಈ "ಕ್ಯುಮುಲೋನಿಂಬಸ್" ಮೋಡಕ್ಕೂ "ನಿಂಬೋ-ಸ್ಟ್ರಾಟಸ್" ಎಂಬ ಮೋಡಕ್ಕೂ ವ್ಯತ್ಯಾಸ ಹೆಚ್ಚಾಗಿ ಗೊತ್ತಾಗದೆ ತಪ್ಪುತಿಳಿವಳಿಕೆಗಳಾಗುತ್ತವೆ. ಈ ನಿಂಬೋ-ಸ್ಟ್ರಾಟಸ್ ಮೋಡಗಳೂ ಕೂಡ ಮಳೆಯ ಮೋಡಗಳೇ. ನಾವು ಸಾಮಾನ್ಯವಾಗಿ ಕರೆಯುತ್ತೇವಲ್ಲ, "ಕಾರ್ಮೋಡ" ಎಂದು. ಅದೇ.ಮೋಡಗಳಲ್ಲಿ ನೀರು ಮಾತ್ರವಿರುತ್ತೆ ಎನ್ನುವುದು ತಪ್ಪು ನಂಬಿಕೆ. ಬೆಂಕಿಯೂ ಇರುತ್ತೆ! ಸಮುದ್ರದ ಒಳಗೇ ಬೆಂಕಿಯಿರುವುದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೆ? ಇದಕ್ಕೆ ಬಡಬಾನಲ ಎನ್ನುತ್ತೇವೆ. ಅದೇ ರೀತಿ ಮೋಡದಲ್ಲೂ ಬೆಂಕಿಯಿರುತ್ತೆ. ಜ್ವಾಲಾಮುಖಿಯೋ ಕಾಳ್ಗಿಚ್ಚೋ ಇಂತಹ ನೈಸರ್ಗಿಕ "ವಿಕೋಪ"ದ ಮೂಲ ಈ ಮೋಡದಲ್ಲೇ. ಇದಕ್ಕೆ "ಪೈರೋ-ಕ್ಯುಮುಲಸ್" ಎನ್ನುತ್ತಾರೆ. ಅಪರೂಪದ ಮೋಡಗಳು. ವಾಯು ಮಾಲಿನ್ಯದಿಂದಲೂ ಈ ಮೋಡಗಳ ಉತ್ಪತ್ತಿಯಾಗುತ್ತೆ. ಅಣುಬಾಂಬ್ ಪರೀಕ್ಷೆಯ ವಿಡಿಯೋ ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೇವೆ. ಅದರ ಪರಿಣಾಮವಾಗಿ ಉತ್ಪತ್ತಿಯಾಗುವ ಮೋಡಗಳೂ ಸಹ ಇದೇ ಜಾತಿಯದು. (ನಾನು ಈ ಮೋಡಗಳನ್ನು ಪ್ರತ್ಯಕ್ಷ ಕಂಡಿಲ್ಲ.)ಗೆಳೆಯ ಶ್ರೀಕಾಂತನಿಗೂ ಮೋಡಗಳಿಗೂ ಏನೋ ಬಾಂಧವ್ಯ. ಅವನ ಫೋಟೋಗಳಲ್ಲಿ ಮೋಡಗಳು ಪೋಸ್ ಕೊಡುತ್ತಲೇ ಇರುತ್ತವೆ. ಜಮಲಾಬಾದ್ ಮೇಲೆ ಅಲ್ಲಲ್ಲಿ ಗುಂಪು ಗುಂಪಾಗಿದ್ದ ಮಳೆಯ ಮೋಡಗಳು "ಸ್ಟ್ರಾಟೋ-ಕ್ಯುಮುಲಸ್". ಮಳೆಯನ್ನು ಸುರಿಸುವುದಿಲ್ಲ, ಆದರೆ ಮಳೆಯ ನೀರನ್ನು ಹೊಂದಿರುತ್ತೆ. ಇವೆಲ್ಲ ಒಟ್ಟಿಗೊಟ್ಟಿಗೆ ಸೇರಿ ಸೇರಿ ನಿಧಾನವಾಗಿ ಕಾರ್ಮೋಡವಾಗುತ್ತವೆ.ಬರಮೋಡಗಳು - ಸಂಪೂರ್ಣ ಬಿಳಿ ಬಣ್ಣವಿರುವ ಮೋಡಗಳು ಆಕಾಶದಲ್ಲಿ ಅನೇಕಾನೇಕ ಚಿತ್ರಗಳನ್ನು ಬರೆಯುತ್ತಿರುತ್ತವೆ. ನಮ್ಮ ಕಲ್ಪನಾಶಕ್ತಿಗೆ ನಿಲುಕುವಷ್ಟು ಬಗೆಬಗೆಯ ಚಿತ್ರಗಳನ್ನು ನಾವೆಲ್ಲರೂ ನೋಡಿದ್ದೇವೆ. ಈ ಕ್ಷಣ ಕುದುರೆಯಾಗಿರುತ್ತೆ, ಆ ಕುದುರೆಯ ಮೇಲೆ ಒಂದು ಮೊಲವು ಕುಳಿತಿರುತ್ತೆ; ಮರುಕ್ಷಣವೇ ಆ ಕುದುರೆ-ಮೊಲಗಳು ಹಾವು ಮುಂಗುಸಿಗಳಾಗಿಬಿಡುತ್ತವೆ. ಇನ್ನೊಂದಷ್ಟು ಸಮಯ ಕಳೆದ ನಂತರ ಹಾವೆಲ್ಲೋ ಮುಂಗುಸಿಯೆಲ್ಲೋ. ಅವೆರಡೂ ಬೇರೆ ಬೇರೆಯಾಗಿ ಇಬ್ಬರು ಮನುಷ್ಯರಾಗಿಬಿಟ್ಟಿರುತ್ತಾರೆ! ಯಾರಿಗಾಗಿಲ್ಲ ಈ ಅನುಭವ!!

ಇವೆಲ್ಲವೂ ಕ್ಯುಮುಲಸ್ ಮೋಡಗಳೇ.

ಹೂಕೋಸಿನ ಆಕೃತಿಯಂತೆ ದೊಡ್ದ ದೊಡ್ಡ ಗುಂಪಿನಲ್ಲಿದ್ದರೆ ಅದನ್ನು "ಕ್ಯುಮುಲಸ್ ಮೀಡಿಯೋಕ್ರಿಸ್" ಎನ್ನುತ್ತಾರೆ.ಇದೇ ರೀತಿಯ ಮೋಡಗಳು ಎತ್ತರೆತ್ತರಕ್ಕೆ ಕಂಡು ಬಂದರೆ ಅದನ್ನು "ಕ್ಯುಮುಲಸ್ ಕಂಜೆಸ್ಟಸ್" ಎನ್ನುತ್ತೇವೆ. ಇಲ್ಲಿ ಎಲ್ಲ ಹೂಕೋಸುಗಳೂ ಒಟ್ಟಿಗೇ ಸೇರಿಕೊಂಡಂತಿರುತ್ತವೆ.ಸಿನಿಮಾದಲ್ಲಿ ನಾರದನು "ಜಗದೀಶನಾಡುವ ಜಗವೇ ನಾಟಕರಂಗ.." ಎಂದು ಹಾಡುತ್ತ ಬರುವುದು "ಕ್ಯುಮುಲಸ್ ಹುಮಿಲಿಸ್" ಎಂಬ ಮೋಡದಿಂದಲೇ. ಘನವಸ್ತುವಂತೆಯೇ ಕಾಣಿಸುವ ಈ ಮೋಡವು ದೇವಲೋಕದಲ್ಲಿ ಮೋಡದ ಮೇಲೆ ನಡೆಯುವಂತೆ ಕಲ್ಪನೆಯನ್ನು ತರಿಸಲು ಆಶ್ಚರ್ಯವೇನಿಲ್ಲ. ಆಕಾಶದಲ್ಲಿ ಈ ಮೋಡಗಳೇ ಕಂಡು ಬಂದರೆ ಅಂದಿನ ಹವಾಮಾನವು ಚೆನ್ನಾಗಿದೆಯೆಂದು ಹೇಳುತ್ತಾರೆ.ಶ್ರೀಕಾಂತನೇ ತೆಗೆದ ಈ ಫೋಟೋದಲ್ಲಿರುವ ಮೋಡಗಳನ್ನು "ಆಲ್ಟೋ-ಕ್ಯುಮುಲಸ್" ಎನ್ನುತ್ತಾರೆ. ಬೆಣ್ಣೆಯ ಮುದ್ದೆಯಂತೆ ಗುಂಪು ಗುಂಪಾಗಿ ಕಾಣಿಸುವ ಈ ಮೋಡಗಳನ್ನು ನೋಡುವುದೇ ಸೊಗಸು. ಬೇಸಿಗೆಯಲ್ಲಿ ಈ ಮೋಡ ಕಂಡು ಬಂದಲ್ಲಿ ಆ ದಿನ ಸಂಜೆ ಈ ಮೋಡಗಳು ಬೆಳೆದು ಅಲ್ಪ ಸ್ವಲ್ಪ ಮಳೆಯಾಗಬಹುದು. ಮೇಲಿದ್ದಷ್ಟೂ ಈ ಮೋಡಗಳು ಮಳೆಯನ್ನು ತರುವ ಸಾಧ್ಯತೆ ಹೆಚ್ಚು.ಇದೇ ಮೋಡವನ್ನು ಎಲ್ಲೆಡೆ ಹರಡಿಬಿಟ್ಟರೆ, ಅಥವಾ ಬೆಣ್ಣೆಯನ್ನು ಎಲ್ಲ ಕಡೆ ಮೆತ್ತಿದರೆ ಹೇಗೆ ಕಾಣಬಹುದೋ ಹಾಗೆ ಕಾಣುವ ಮೋಡದ ಸಮೂಹಕ್ಕೆ "ಸಿರೋ ಕ್ಯುಮುಲಸ್" ಮೋಡ ಎನ್ನುತ್ತಾರೆ. ಸೂರ್ಯಾಸ್ತದ ವೇಳೆ ಈ ಮೋಡಗಳನ್ನು ನೋಡುವ ಮಜವೇ ಬೇರೆ!ಇದೇ ಮೋಡವು ತೆಳುವಾಗಿ ಪಟ್ಟಿ ಪಟ್ಟಿಯಾಗಿ ಕಂಡು ಬಂದರೆ ಅದನ್ನು "ಸಿರಸ್" ಮೋಡಗಳೆನ್ನುತ್ತೇವೆ.ಮೋಡಗಳ ಬಗ್ಗೆ ಅಧ್ಯಯನ ಮಾಡಲು ಬಹಳ ಆಸೆಯಿದೆ. ಮಕ್ಕಳನ್ನು ಕರೆದುಕೊಂಡು ಹೊರಟುಬಿಡುವ ಕಾಲವು ಮುಂದಿಲ್ಲವೆನ್ನಿಸುತ್ತಿದೆ. ನೋಡಬೇಕು, ಏನಾಗುತ್ತೋ ಎಂದು. ಆಗ ಇನ್ನಷ್ಟು, ಮತ್ತಷ್ಟು ವಿಷಯ ಸಂಗ್ರಹವು ಸಾಧ್ಯವಾಗುವುದಷ್ಟೆ?

-ಅ
02.04.2009
10PM

7 comments:

 1. exam ge atmospheric science na ondu dodda pustaka odo kashta tapptu nange ...thanks for the much needed info gurugaLe !

  ReplyDelete
 2. very nice article. nange nan BSc classes nenpaadvu. Alto cumulus clouds na sheep back clouds antha noo kareetaare. ondu kuri mande na hinde inda nodida haage irutte ivu antha.

  ReplyDelete
 3. ಅರುಣ,
  ಮೋಡಗಳ ಬಗೆಗೆ ತುಂಬ ವಿಶೇಷ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು.

  ReplyDelete
 4. ಇನ್ನೂ ಮದ್ವೆ ಆಗ್ತಾ ಇದೀಯ.. ಆಗ್ಲೇ ಮಕ್ಳುನ್ನ ಕರಕೊಂಡ್ ಹೋಗೋ ಪ್ಲಾನಾ? ಕಷ್ಟ ಕಷ್ಟ..!

  ReplyDelete
 5. >>ದಕ್ಷಿಣ ಕನ್ನಡದ ಕಾಡುಗಳ ಜನರು ಈ ಮೋಡಗಳಿಗೆ "ಹೊಗೆ"ಯೆಂದೂ ಕರೆಯುವುದುಂಟು.
  ಹಳೇಯ ದ.ಕ.ದವ್ನು, ಕಾಡವ್ನಲ್ಲ, ಹೊಗೆ ಪದ ಪ್ರಯೋಗ ಗೊತ್ತಿರ್ಲಿಲ್ಲ. ಕಳಸದ ಕಡೆ ಇದಕ್ಕೆ "ಕರಡಿ ಮುಗಿಲು" ಅಂತ ಕರೀತಾರೆ.

  ಇಷ್ಟೊಂದ್ ಥರದ್ ಮೋಡ ಇದ್ಯ, ನಂಗೆ ಬಿಳಿ ಮೋಡ ಕರಿ ಮೋಡ ಎರ್ಡೇ ಗೊತ್ತಿದ್ದಿದ್ದು. ಹೆಸ್ರೆಲ್ಲಾ ತುಂಬಾ ಕಷ್ಟ ನೆನಪಿಟ್ಕೊಳ್ಳೋಕೆ!

  ಸಿರೋ ಕ್ಯುಮುಲಸ್ - ಮೆಟ್ಟಿಲು ಥರ ಇರೋದು ಇದೇನಾ, ಈ ದಿನ ಸತ್ರೆ ನೇರ ಸ್ವರ್ಗಕ್ಕಂತೆ

  >>ಮೋಡಗಳ ಬಗ್ಗೆ ಅಧ್ಯಯನ ಮಾಡಲು ಬಹಳ ಆಸೆಯಿದೆ. ಮಕ್ಕಳನ್ನು ಕರೆದುಕೊಂಡು ಹೊರಟುಬಿಡುವ ಕಾಲವು ಮುಂದಿಲ್ಲವೆನ್ನಿಸುತ್ತಿದೆ.
  ಆಲ್ ದಿ ಬೆಸ್ಟ್, ನಾನೂ ಚಿಕ್ಕವನೇ :)

  ReplyDelete
 6. ಅರುಣ್,
  ಮೋಡಗಳಲ್ಲಿ ಇಷ್ಟು ಬಗೆಯೆಂಬುದು ತಿಳಿಸಿದ್ದಕ್ಕೆ ವಂದನೆಗಳು :)

  ReplyDelete
 7. [ಅಂತರ್ವಾಣಿ] ಧನ್ಯವಾದಗಳು. ಆಕಾಶವನ್ನು ನೋಡುವ ಬಗೆ ಬದಲಾಗಲಿ.

  [ಪಾಲ] ಹೆ ಹ್ಹೆ, ನೀವೂ ಚಿಕ್ಕವರೇ. ಆದರೆ ಮಗು ಆಗಿಲ್ಲವಲ್ಲ.... ;-) ಮತ್ತೆ, ಈ "ಹೊಗೆ" ಬಗ್ಗೆ ನನಗೂ ಗೊತ್ತಿರಲಿಲ್ಲ. ಕೆಲವು ಟ್ರೆಕ್ಕುಗಳಲ್ಲಿ ಅಲ್ಲಿನ ಸ್ಥಳೀಯರು ಈ ಪದ ಬಳಸಿರುವುದು ನನ್ನ ಅನುಭವಕ್ಕೆ ಬಂದಿದೆ.

  [ಸುಶ್ರುತ] ನನಗೆ ಈಗಾಗಲೇ ಐನೂರು ಮಕ್ಕಳಿದ್ದಾರೆ ಕಣಪ್ಪ.

  [ಸುನಾಥ್] ಧನ್ಯವಾದಗಳು.

  [ವಿಜಯಾ] ಇನ್ನೂ ನಿನ್ನ "ನಾಯ್ಸ್ ಪಲ್ಯೂಷನ್" ಪ್ರಾಜೆಕ್ಟ್ ರಿಪೋರ್ಟು ನನ್ನ ಹತ್ತಿರಾನೇ ಇದೆ. ಅದರ ಬಗ್ಗೆಯೂ ಅಧ್ಯಯನ ಮಾಡಬೇಕು. ಸಮಯ ಬೇಕು.

  [ಲಕುಮಿ] ಸೋಮಾರಿ ನಂ.೧.

  ReplyDelete

ಒಂದಷ್ಟು ಚಿತ್ರಗಳು..