Sunday, March 22, 2009

ಶ್ವಾಸವದು ಬೊಮ್ಮನದು

ಮೊನ್ನೆ ನಮ್ಮ ಕಾಫಿ ಚರ್ಚೆಯೊಂದರಲ್ಲಿ ಶ್ರೀನಿಧಿ ಹೇಳುತ್ತಿದ್ದ. "ನಾವು ಇನ್ನೂರು ಕಿಲೋಮೀಟರಿಗೊಂದು ಅಭಯಾರಣ್ಯ ಅಂತ ಬೌಂಡರಿ ಹಾಕ್ಕೋತೀವಿ. ಆನೆ ತನ್ನ ಜೀವಮಾನದಲ್ಲಿ ಸಾವಿರಾರು ಕಿಲೋಮೀಟರು ನಡೆಯುತ್ತೆ. ನಮ್ಮ ಹಾಗೆ ಅದಕ್ಕೆ ಯಾವ ಬೌಂಡರಿಗಳಿರೋದಿಲ್ಲ..." ಎಷ್ಟು ಸೊಗಸಾದ ಮಾತು!!

ಕೇರಳದಲ್ಲಿ ಜನಿಸಿದ ಆನೆಯೊಂದು ಮಹಾರಾಷ್ಟ್ರದಲ್ಲಿ ತನ್ನ ಬದುಕನ್ನು ರೂಪಿಸಿಕೊಳ್ಳಬಹುದು. 2007ರಲ್ಲಿ ಒರಿಸ್ಸಾದ ಆನೆಯೊಂದು ಆಂಧ್ರಪ್ರದೇಶಕ್ಕೆ ವಲಸೆ ಬಂದಿದ್ದ ವರದಿಯಾಗಿತ್ತು. ಅದನ್ನು ಅವಿವೇಕಿಗಳು "ಅಸ್ವಾಭಾವಿಕ" ಎಂದೂ ಕರೆದರು, ಮತ್ತು ಶತಪ್ರಯತ್ನ ಮಾಡಿ ವಾಪಸ್ಸು ಕಳಿಸಿಬಿಟ್ಟರು. ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಆಗಾಗ್ಗೆ ಆನೆಗಳು ಬರುತ್ತಲೇ ಇರುತ್ತವೆ. ಪಾಸ್‍ಪೋರ್ಟು ವೀಸಾ ಅಗತ್ಯವಿಲ್ಲ ಇವಕ್ಕೆ.ರಂಗನತಿಟ್ಟುವಿನಲ್ಲಿ "ವಲಸೆ ಹಕ್ಕಿ"ಗಳಿಗೆಂದೇ ಜಾಗ ಮೀಸಲಿಟ್ಟಿರುವುದನ್ನು ನಾವು ಬಲ್ಲೆವು. ಹಿಮಾಲಯದ ಪ್ರದೇಶಗಳಿಂದೆಲ್ಲ ಮೈಸೂರಿಗೆ ವಲಸೆ ಬರಲು ಸಿದ್ಧವಿರುವ ಹಕ್ಕಿಗಳಿವೆ! ಡ್ರಾಂಗೋ Dicrurus leucophaeus ಎಂಬ ಹಕ್ಕಿಯು ಇಲ್ಲಿಗೆ ಆಫಗಾನಿಸ್ಥಾನದಿಂದ ಬರುತ್ತೆ. ಆಫಗಾನಿಸ್ಥಾನದ ಭಯೋತ್ಪಾದಕರು ಕೇವಲ ಮನುಷ್ಯರು. ವಿಶೇಷವೆಂದರೆ ಈ ಹಕ್ಕಿಯು ಶ್ರೀಲಂಕೆಗೂ ವಲಸೆ ಹೋಗುತ್ತೆ.

ಅಮೆರಿಕಾದ ಕೆನಡಾ ಮತ್ತು ಮೆಕ್ಸಿಕೋ ಹಾದಿಯು ಎರಡು ತಿಂಗಳು ಬ್ಲಾಕ್ ಆಗಿರುತ್ತೆ. ಏಕೆಂದರೆ ಕೋಟ್ಯಂತರ ಮೊನಾರ್ಕ್ ಚಿಟ್ಟೆಗಳು Danaus plexippus ವಲಸೆ ಹೂಡುವ ಸಮಯ ಅದು. ವನ್ಯಜೀವಿಗಳ ಬಗ್ಗೆ ಆ ಜನಕ್ಕಿರುವ ತಿಳುವಳಿಕೆ ಮೆಚ್ಚಬೇಕಾದ್ದು.ಮನುಷ್ಯನ ಹೊರೆತ ಪ್ರಾಣಿಗಳಿಗೆ ನಿಗದಿತ ಸ್ಥಳವಿಲ್ಲವೆಂದಲ್ಲ. ಬಹುತೇಕ ಪ್ರಾಣಿಗಳು ಬೌಂಡರಿಗಳನ್ನು ಹಾಕಿಕೊಂಡಿರುತ್ತವೆ. ಇದಕ್ಕೆ ಇಂಗ್ಲೀಷಿನಲ್ಲಿ Territory ಎನ್ನುತ್ತಾರೆ. ಸಸ್ತನಿಗಳು ಸಾಮಾನ್ಯವಾಗಿ ಮೂತ್ರವಿಸರ್ಜನೆಯಿಂದ ತಮ್ಮ ಟೆರಿಟರಿಯನ್ನು ಗುರುತು ಮಾಡಿಕೊಳ್ಳುತ್ತವೆ. ಕೆಳವರ್ಗದ ಪ್ರಾಣಿಗಳಿಗೆ ತಾವಿರುವ ಗೂಡೇ ತಮ್ಮ ಟೆರಿಟರಿಯೆನ್ನಬಹುದು. ಆದರೆ ತಮಗೆ ದೊರಕಬೇಕಾದ ಆಹಾರವು ಸರಿಯಾಗಿ ಸಿಗದಿದ್ದಲ್ಲಿ ಗುಂಪುಗುಂಪಾಗಿ ವಲಸೆ ಹೋಗುತ್ತವೆ. ಎಲ್ಲಿ ಆಹಾರ ಸಿಗುತ್ತೋ ಅಲ್ಲಿ. ಕೇವಲ ಆಹಾರ ಮಾತ್ರವಲ್ಲದೆ ಸೂಕ್ತ ಹವಾಮಾನ, breeding place, ಇವನ್ನೆಲ್ಲ ಅರಸುತ್ತ ವಲಸೆ ಹೂಡುತ್ತವೆ.

ಸಾಲ್ಮನ್ ಎಂಬ ಮೀನು ಸಮುದ್ರದಿಂದ ನದಿಗೆ ವಲಸೆ ಹೋಗಿ ಮೊಟ್ಟೆಯಿಟ್ಟು ಬರುತ್ತೆ. ಇಂಥಾ ವಲಸೆಗೆ Anadromous migration ಎನ್ನುತ್ತಾರೆ. ಈಲ್‍ಗಳು ಇದರ ತದ್ವಿರುದ್ಧ. ನದಿಯಿಂದ ಸಮುದ್ರಕ್ಕೆ ವಲಸೆ ಹೋಗಿ ಮೊಟ್ಟೆಯಿಡುತ್ತೆ. ಇಂಥಾ ವಲಸೆಗೆ Catadromous migration ಎನ್ನುತ್ತಾರೆ.

ಇನ್ನೊಬ್ಬ ಚಾಂಪಿಯನ್ನನ್ನು ಪರಿಚಯ ಮಾಡಿಕೊಳ್ಳೋಣ. ಆರ್ಕ್ಟಿಕ್ ಟರ್ನ್ Sterna paradisaea ಎಂಬ ಈ ಹಕ್ಕಿಯು ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ವರೆಗೂ ವಲಸೆ ಮಾಡಿ ಮೊಟ್ಟೆಯಿಟ್ಟು ಮರಿ ಮಾಡಿ ಮತ್ತೆ ಉತ್ತರ ಧ್ರುವಕ್ಕೆ ಹಾರುತ್ತೆ. ಇದರ ಜೀವಮಾನ ಪರಿಯಂತ ವಲಸೆ ಮಾಡುತ್ತಲೇ ಇರುತ್ತೆ!ಯಾವ ಬೌಂಡರಿಯೂ ಇಲ್ಲ. ನಕ್ಷೆಗಳಿಲ್ಲ. ರಾಜಕೀಯವಿಲ್ಲ.

ಕೊಡಗಿನಲ್ಲಿ ಹುಟ್ಟಿ, ಮೈಸೂರನ್ನು ಹಾದು, ಕನಕಪುರವನ್ನೂ ಸಮೀಪಿಸಿ, ತಮಿಳು ನಾಡ ದಿಕ್ಕಿಗೆ ಹರಿದು, ಬಂಗಾಳ ಕೊಲ್ಲಿಯನ್ನು ಹೊಗುವ ಕಾವೇರಿಗೆ ನಾವು ಕನ್ನಡಿಗರು ಅವರು ತಮಿಳರು ಎಂಬ ಅರಿವಿಲ್ಲದೆ ನಿರಂತರವಾಗಿ ಹರಿಯುತ್ತಿದೆ.. ತಾನು ಚೈನಾ ದೇಶದ್ದೋ, ಟಿಬೆಟ್ಟಿನದೋ, ಭಾರತದ್ದೋ ಎಂಬ ಚಿಂತೆ ಎಳ್ಳಷ್ಟೂ ಎವರೆಸ್ಟಿಗೆ ಇಲ್ಲದೆ ಅಚಲವಾಗಿ ಎತ್ತರವಾಗಿ ನಿಂತಿದೆ.. ಕೇರಳದ ಕರಾವಳಿಯಲ್ಲಿ ಜನಿಸಿ ಮಹಾರಾಷ್ಟ್ರದ ತುದಿಯವರೆಗೂ ಪ್ರಯಾಣ ಮಾಡುವ ಮುಂಗಾರಿಗೆ ಭೂಗೋಳ ಗೊತ್ತೇ ಹೊರೆತು ರಾಜಕೀಯ ಗೊತ್ತಿಲ್ಲ.. ನಮಗೆ?

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸ್ವರ್ಡಿನವರು |
ದೇಶ ಕಾಲ ವಿಭಾಗ ಮನದ ರಾಜ್ಯದೊಳಿರದು
ಶ್ವಾಸವದು ಬೊಮ್ಮನದು - ಮಂಕುತಿಮ್ಮ ||

-ಅ
23.03.2009
12AM

8 comments:

 1. ಮೊದಲನೇ ಎರಡು ಪ್ಯಾರ ಓದಿದ ತಕ್ಷಣ refugee ಚಿತ್ರದ 'ಪಂಚೀ ನದಿಯಾ ಪವನ್‍ಕೆ ಝೋಂಕೆ..’ ನೆನಪಿಗೆ ಬಂತು... ಆದರೆ ಕಗ್ಗ ಇನ್ನೂ ಚೆನ್ನಾಗಿದೆ...

  ReplyDelete
 2. ಬರಹ ಚೆನ್ನಾಗಿದೆ.

  "ಬಹುತೇಕ ಪ್ರಾಣಿಗಳು ಬೌಂಡರಿಗಳನ್ನು ಹಾಕಿಕೊಂಡಿರುತ್ತವೆ. ಇದಕ್ಕೆ ಇಂಗ್ಲೀಷಿನಲ್ಲಿ Territory ಎನ್ನುತ್ತಾರೆ." "ಬೌಂಡರಿ" ಕನ್ನಡ "ಟೆರಿಟೆರಿ" ಇಂಗ್ಲಿಷ್ ಅಂತ ಗೊತ್ತಿರಲಿಲ್ಲ :-)

  - ಕೇಶವ

  ReplyDelete
 3. ಬಹಳ.. ಸುಂದರ ಬರಹ...

  ಮೂಕ ಪ್ರಾಣಿ, ಪಕ್ಷಿಗಳಿಂದ ಕಲಿಯೋದು..

  ಬಹಳ ಇವೆ...

  ಧನ್ಯವಾದಗಳು..

  ReplyDelete
 4. Keshava - ha ha ha ha, oLLe observationnu... naanu eDabiDangi nann maga.. ee kade kannada nu nettage baralla, aa kade englishu neTTage baralla..

  adanna "sarahaddu" antha tidgondbidtini.... thanks for the correction, sir.

  Cement - hoon, howdu...

  Prashanth - oh, super. naanu aa movie nOdilla. aa haadu keLilla. keLtini. hoon, kagga yaavaaglu super aage irutte.. as you pointed out, better than the write-up-u.. :-)

  ReplyDelete
 5. nange office nalli hosa neighbour, nan desk avala desk ge antikondide. avlige territory bagge gothilla ansutte. thandu thandu avala books, papers nella nan desk mele hertaale ... che!!

  ReplyDelete
 6. Arctic tern bagge yeshtu sala odidru khushi aagutte... nam thara ne adoo porki!!! international porki!!

  ReplyDelete
 7. [ವಿಜಯಾ] ಆ ನಿನ್ನ "ನೆರೆ ಕಮ್ ಹೊರೆ"ಗೆ ಈ ಕಗ್ಗ ಚೆನ್ನಾಗಿ ಗೊತ್ತಿದೆ ಅನ್ನಿಸುತ್ತೆ.

  ಹೌದು, ಆರ್ಕ್ಟಿಕ್ ಟರ್ನ್ ಬಗ್ಗೆ ನಮಗೆ ಶ್ಯಾಮಲಾ ಮಿಸ್ ವಿವರಿಸಿದ್ದರು.

  ReplyDelete

ಒಂದಷ್ಟು ಚಿತ್ರಗಳು..