Sunday, March 08, 2009

ವಿಚಿತ್ರ ಸತ್ಯಗಳು

ಸತ್ಯ - ೧

ಕಾಲಿನ ಮೇಲೆ ಕಲ್ಲು ಬಿದ್ದರೆ, ಯಾರಾದರೂ ಹೊಡೆದರೆ, ಬಾಗಿಲಿಗೆ ಕೈ ಸಿಕ್ಕಿಕೊಂಡರೆ, ನೋವಾಗುತ್ತಲ್ಲವೇ? ಆಗದೆ ಇದ್ದರೆ ಕುಷ್ಠರೋಗದ ಪರೀಕ್ಷೆ ಮಾಡಿಸಿಕೊಳ್ಳುವುದೊಳಿತು. ಈ ರೀತಿಯ ನೋವುಗಳು ನರಗಳನ್ನಾಧರಿಸಿದ್ದು. ನೋಕಿಸೆಪ್ಟಾರ್ಸ್ ಎಂಬ ಜೀವಕೋಶಗಳಿರುವುದರಿಂದಲೇ ನಮಗೆ ನೋವಾಗುವುದು. ಈ ಜೀವಕೋಶಗಳನ್ನು ಇಲ್ಲವಾಗಿಸಿಬಿಟ್ಟರೆ ನೋವೇ ಇರುವುದಿಲ್ಲ. ಕುಷ್ಠರೋಗದಲ್ಲೂ ಹೆಚ್ಚು ಕಮ್ಮಿ ಹೀಗೇ ಆಗುವುದು. ಆದರೆ ಸ್ಪರ್ಶದ ಅರಿವಾಗುತ್ತೆ. ಎಷ್ಟು ಒತ್ತಡ ಹೇರಲ್ಪಟ್ಟಿದೆಯೆಂಬುದೂ ಅರಿವಾಗುತ್ತೆ. ನೋವು ಮಾತ್ರವಾಗುವುದೇ ಇಲ್ಲ. ಹುಳುಗಳು ಮತ್ತು ಆರ್ಥ್ರೋಪೋಡ್‍ಗಳಿಗೆ ನೋಕಿಸೆಪ್ಟಾರುಗಳು ಇರುವುದೇ ಇಲ್ಲ. ಅವುಗಳು ನೋವುಗಳಿಂದ ಸದಾ ಮುಕ್ತವಾಗಿರುತ್ತವೆ. ಒಂದು ಹುಳುವಿನ ಕಾಲು ಹಿಡಿದುಕೊಂಡರೆ ಅದು ಬಲವಂತವಾಗಿ ಬಿಡಿಸಿಕೊಳ್ಳಲು ಯತ್ನಿಸುತ್ತೆ. ಬಿಟ್ಟ ತತ್‍ಕ್ಷಣವೇ ಆರಾಮಾಗಿ ಮುನ್ನಡೆದು ಹೋಗುತ್ತೆ. ನೋವಾದರೆ ಹೀಗಾಗಲು ಸಾಧ್ಯವಿಲ್ಲ.

ಸತ್ಯ - ೨

ಹುಳುಹುಪ್ಪಟೆಗಳಿಗೆ ನೋವು ಹೇಗೆ ಇರುವುದಿಲ್ಲವೋ ಹಾಗೆಯೇ ಭಾವನೆಗಳೂ ಇರುವುದಿಲ್ಲ. ಹಸಿವು, ಬಾಯಾರಿಕೆ, ಆಯಾಸ, ಲೈಂಗಿಕ ಕಾಮ ಮಾತ್ರ ಇರುತ್ತೆ. ಇವು ಯಾವುವೂ ಭಾವನೆಗಳಲ್ಲ.

ಸತ್ಯ - ೩

ಪ್ರಾಣಿಗಳೂ ನಮ್ಮಂತೆ ಕನಸು ಕಾಣುತ್ತವೆ. ಕನಸುಗಳಿಗೆ ಅನೇಕರು ಪೂರ್ವಜನ್ಮದ, ಪುನರ್ಜನ್ಮದ ಕಥೆಯ ಲೇಪನವನ್ನು ಬಳಿಯುವುದುಂಟು. ವಿಜ್ಞಾನವು ಕನಸುಗಳ ಬಗ್ಗೆ ಇನ್ನೂ ಖಚಿತವಾದ ನಿಖರವಾದ ಉತ್ತರವನ್ನು ಕಂಡುಕೊಂಡಿಲ್ಲ. ನಮ್ಮ ಮನೆಯಲ್ಲೇ ನನ್ನ ಮುದ್ದಿನ ಬೆಕ್ಕು ನನ್ನ ತೋಳಿನ ಮೇಲೆ ಮಲಗಿಕೊಳ್ಳುವುದನ್ನು ರೂಢಿಸಿಕೊಂಡಿತ್ತು. ನನ್ನ ತೋಳಿರದಿದ್ದರೆ ಅದಕ್ಕೆ ನಿದ್ರೆಯಿಲ್ಲ, ಬೆಕ್ಕಿರದಿದ್ದರೆ ನನಗೆ ನಿದ್ರೆಯಿಲ್ಲಯೆನ್ನುವಷ್ಟರಮಟ್ಟಿಗೆ. ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಗಾಢನಿದ್ರೆಯಲ್ಲಿರುತ್ತಿದ್ದ ಅದು ಗಬಕ್ಕನೆ ನನ್ನ ಕೈಗೆ ಬಾಯಿ ಹಾಕುವುದೋ, ತನ್ನೆರಡು ಕಾಲುಗಳಿಂದಲೂ ನನ್ನ ಕೈಯನ್ನು ಬಲವಾಗಿ ಹಿಡಿದುಕೊಳ್ಳುವುದೋ ಮಾಡುತ್ತಿತ್ತು. ಆಮೇಲೆ "ಏಯ್ ಯಾಕೇ? ನಾನೇ ಕಣೇ.." ಎಂದು ಗದರಿದ ಮೇಲೆ ಕಣ್ಬಿಟ್ಟು ನನ್ನನ್ನು ನೋಡಿ, ಕಣ್ಣು ಮೀಟಿ, ಮಿಯಾವ್ ಎನ್ನುತ್ತ ಸಾರಿ ಕೇಳಿ ಮತ್ತೆ ಮಲಗುತ್ತಿತ್ತು.


The Dreaming Dog - Funny bloopers are a click away

ಸತ್ಯ - ೪

ಪ್ರಾಣಿಗಳೂ ನಿದ್ರಿಸುತ್ತವೆ. ನಾವು ಗಮನಿಸಿರುತ್ತೇವೆ, ನಾಯಿಗಳು ನಿದ್ರಿಸುತ್ತಿರುತ್ತವೆ ಆದರೆ ಎಲ್ಲೋ ದೂರದಲ್ಲಿ ಗೇಟು ಶಬ್ದವಾದ ಒಡನೆಯೇ ಬೊಗಳುತ್ತವೆ. ಸಾಮಾನ್ಯವಾಗಿ ಪ್ರಾಣಿಗಳ ನಿದ್ರೆ ತಾಮಸಿಕವಾಗಿರುವುದಿಲ್ಲ ನಮ್ಮ ಹಾಗೆ. ಎಷ್ಟೋ ಕಡೆ ಮನೆಯವರು ನಿದ್ರಿಸುತ್ತಿರುವಾಗ ಕಳ್ಳ ಬಂದು ಮನೆಯೆಲ್ಲಾ ದೋಚಿಕೊಂಡು ಹೋಗಿರುವ ಸನ್ನಿವೇಶಗಳೂ ಇವೆ. ಪ್ರಾಣಿಗಳು ಹಾಗಲ್ಲ. ಡಿಸ್ಟರ್ಬ್ ಆದ ಕೂಡಲೆ ಎದ್ದುಬಿಡುತ್ತವೆ. ಯಾವ ಯಾವ ಪ್ರಾಣಿ ಎಷ್ಟೆಷ್ಟು ನಿದ್ರಿಸುತ್ತೆ ಎಂಬ ಪಟ್ಟಿ ಇಲ್ಲಿದೆ.

ಸತ್ಯ - ೫

ನಾಯಿಗಳಿಗೆ, ಬೆಕ್ಕುಗಳಿಗೆ, ಹುಲಿ ಸಿಂಹ ಚಿರತೆಗಳಿಗೆ, ನಮಗೆ ರೆಪ್ಪೆಗಳಿವೆ. ಕಣ್ಮುಚ್ಚಿ ನೆಮ್ಮದಿಯಿಂದ ಮಲಗುತ್ತೇವೆ. ಮೀನುಗಳು, ಹಾವುಗಳು ಏನು ಮಾಡುತ್ತವೆ? ಅವೂ ನಿದ್ರಿಸುತ್ತವೆಯೇ? ಹೌದು. ಹಾವುಗಳು ನಿದ್ರಿಸುವಾಗ ಅವು ಸತ್ತು ಹೋಗಿವೆಯೆಂದೂ ತಪ್ಪು ತಿಳಿದುಕೊಳ್ಳುವಂತಿರುತ್ತೆ. ಮೀನುಗಳೂ ಸಹ ನಿದ್ರಿಸುತ್ತವೆ. ಮೀನಿನ ನಿದ್ರೆಯನ್ನು ವಿಶ್ರಾಂತಿಯೆನ್ನಬಹುದಷ್ಟೆ. ರೆಪ್ಪೆಗಳಿಲ್ಲದ ಇವು ಬಂಡೆ ಸಂದಿಯಲ್ಲೋ, ಮರದ ದಿಮ್ಮಿಯಡಿಯೋ ಒರಗಿಕೊಂಡು ಕಣ್ಣು ಬಿಟ್ಟುಕೊಂಡೇ ನಿದ್ರಿಸುತ್ತವೆ.

ಸತ್ಯ - ೬

ಹುಳುಗಳೂ ನಿದ್ರಿಸುತ್ತವೆ!! ಬಹುಪಾಲು ಹುಳುಗಳು ನಿಶಾಚರಿ ಜೀವಿಗಳಾದ್ದರಿಂದ ಹಗಲಿನಲ್ಲಿ ಸಂದಿಗಳಲ್ಲಿ ನಿದ್ರಿಸುತ್ತವೆ. ಇವುಗಳಿಗೂ ಎವೆಯಿರದ ಕಾರಣ ಇವು ನಿದ್ರಿಸುವುದು ನಮಗೆ ಗೊತ್ತಾಗುವುದಿಲ್ಲ.

ಸತ್ಯ - ೭

ನಿದ್ರೆಯ ಬಗ್ಗೆ ಹೇಳೋದು ಇನ್ನೂ ಇದೆ. ಗಿಡಗಳೂ ಸಹ ನಿದ್ರಿಸುತ್ತವೆ ಎಂದರೆ ಅತಿಶಯೋಕ್ತಯಲ್ಲ. ಹಸಿರು ಗಿಡಗಳು ರಾತ್ರಿಯ ವೇಳೆ ತಟಸ್ಥವಾಗಿರುತ್ತವೆ. ದ್ಯುತಿಸಂಶ್ಲೇಷಣ ಕ್ರಿಯೆಯನ್ನು (Photosynthesis) ನಿಲ್ಲಿಸುತ್ತವೆ. ಹಗಲಿನಲ್ಲಿ ಇಂಗಾಲದ ಡೈ ಆಕ್ಸೈಡ್ ತೆಗೆದುಕೊಂಡು ಆಮ್ಲಜನಕವನ್ನು ಹೊರಹಾಕುವ ಗಿಡಮರಗಳು ರಾತ್ರಿಯ ಹೊತ್ತು ನಮ್ಮಂತೆಯೇ ಉಸಿರಾಡುತ್ತವೆ. ಬೇರಾವ ಚಟುವಟಿಕೆಯನ್ನೂ ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ರಾತ್ರಿಯ ಹೊತ್ತು ಈ ಹಸಿರು ಗಿಡಗಳು ನಿದ್ರಿಸುತ್ತವೆ ಎಂದು ಹೇಳುತ್ತೇವೆ. ಇನ್ನು ಪರಾವಲಂಬಿ ಗಿಡಗಳ ವಿಷಯಕ್ಕೆ ಬರೋಣ. ಅಣಬೆಯಂತಹ ಗಿಡ. ರಾತ್ರಿಯ ವೇಳೆ ಆಹಾರಕ್ಕಾಗಿ ಈ ಗಿಡಗಳೂ ಸಹ ಯಾವುದೇ ಕೆಲಸ ಮಾಡದೇ ಇರುವುದರಿಂದ ಇವೂ ಸಹ ಮಲಗುತ್ತವೆಯೆಂದೇ ಹೇಳಬೇಕು.

ಸತ್ಯ - ೮

ನಾವು ಹಾಸ್ಯ ಮಾಡಿಕೊಂಡು ನಗುತ್ತೇವೆ. ದುಃಖ ತೋಡಿಕೊಂಡು ಅಳುತ್ತೇವೆ. ಹುಳುಗಳಿಗಾದರೋ ಭಾವನೆಗಳಿಲ್ಲವೆಂದು ತಿಳಿದುಕೊಂಡಾಯಿತಷ್ಟೆ. ಗಿಡಗಳಿಗೂ ನೋವನ್ನುಂಟು ಮಾಡುವ ಜೀವಕೋಶಗಳಾಗಲೀ ಭಾವನೆಗಳಾಗಲೀ ಇರುವುದಿಲ್ಲ. ಇನ್ನು ಉಳಿದ "ಉನ್ನತ" ಪ್ರಾಣಿಗಳೂ ನಗು - ಅಳುಗಳನ್ನು ಅನುಭವಿಸುತ್ತವೆಯೇ? ಹಸುಗಳ, ಆನೆಗಳ ಕಣ್ಣುಗಳಿಂದ ನೀರು ಹರಿದುಬರುವುದನ್ನು ನಾವು ನೋಡಿದ್ದೇವಲ್ಲವೆ? ಆದರೆ ಈ ನೀರಿಗೂ ಅಳುವಿಗೂ ಯಾವುದೇ ಸಂಬಂಧವಿಲ್ಲ. ದುಃಖದಿಂದ ಅತ್ತಾಗ ಬರುವ ಕಣ್ಣೀರಲ್ಲ ಅದು. ಪ್ರಾಣಿಗಳು ನೋವಿನಿಂದ ನರಳುತ್ತವೆ, ಕಿರುಚುತ್ತವೆ, "ಅಳುತ್ತವೆ". ಆದರೆ ಕಂಬನಿಗರೆಯುವುದಿಲ್ಲ.ಪ್ರಾಣಿಗಳು ಸಂಭಾಷಣೆಯನ್ನು ಮಾಡುತ್ತವೆನ್ನುವುದು ಗೊತ್ತಿದೆ. ಅಂತೆಯೇ ಎರಡು ಪ್ರಾಣಿಗಳು ಸಂಭಾಷಿಸಿಕೊಂಡು ಮುದಗೊಂಡೋ, ತಮಾಷೆಯಾಗೋ, ವಿನೋದಮಯವಾಗೋ ನಗುತ್ತವೆ. ನಾವು ನಕ್ಕಂತಿರುವುದಿಲ್ಲ ಪ್ರಾಣಿಗಳ ನಗು. ಹೈನಾ (ಕಿರುಬ) ಕೂಗುವುದು ನಗುವಲ್ಲ. ಬರೀ ಕೂಗು. ಆದರೆ ಸಸ್ತನಿಗಳೆಲ್ಲವೂ ನೋವನ್ನು ಹೇಗೆ ಅನುಭವಿಸುತ್ತವೋ ಹಾಗೆಯೇ ನಲಿವನ್ನೂ ಅನುಭವಿಸುತ್ತವೆ.

ಸತ್ಯ - ೯

ಕೆಲವು ಪ್ರಾಣಿಗಳು ತಮ್ಮ ಅಂಗಾಂಗಗಳನ್ನು ತಾವೇ ತಿಂದುಕೊಂಡು "ಸ್ವಯಂ-ಭಕ್ಷಕ" ಆಗಿಬಿಡುತ್ತವೆ. ಇದನ್ನು ಜೀವಶಾಸ್ತ್ರದಲ್ಲಿ "Autophagy" ಎನ್ನುತ್ತೇವೆ. ಜಿರಲೆಗಳು ಆಹಾರ ಸಿಗದಿದ್ದರೆ ತಮ್ಮ ರೆಕ್ಕೆಗಳನ್ನೂ ಕಾಲುಗಳನ್ನೂ ತಾವೇ ಗುಳುಂ ಮಾಡಿಕೊಂಡುಬಿಡುತ್ತವೆ. ಆಕ್ಟೋಪಸ್ ಪ್ರಾಣಿಯೂ ತಮ್ಮ ಕಾಲುಗಳನ್ನು ತಾವೇ ತಿಂದುಕೊಳ್ಳುತ್ತವೆ. ಇದರ ಬಗ್ಗೆ ಇನ್ನೂ ಹೆಚ್ಚು ವಿವರವಾಗಿ ಮತ್ತೆ ಯಾವಾಗಲಾದರೂ ನೋಡೋಣ.ಸತ್ಯಮ್ ಭ್ರೂಯಾತ್ ಪ್ರಿಯಮ್ ಭ್ರೂಯಾತ್
ನ ಭ್ರೂಯಾತ್ ಸತ್ಯಮಪ್ರಿಯಮ್...

-ಅ
09.03.2009
12.45

15 comments:

 1. >>ಸತ್ಯ - ೧
  ಶಸ್ತ್ರ ಚಿಕಿತ್ಸೆಯಲ್ಲಿ ಈ ಜೀವ ಕೋಶಗಳನ್ನೇ (ನೋಕಿಸೆಪ್ಟಾರ್ಸ್ ) ನಿಯಂತ್ರಿಸೋದಾ

  >>ಸತ್ಯ - ೨
  ಏನಕ್ಕೆ ಇರೋಲ್ಲ ಅಂತಾನೂ ಹೇಳ್ತೀರ,, ಇಲ್ಲಿ ಹುಳು ಹುಪ್ಪಟೆ ಅಂದ್ರೆ ಕೀಟಗಳನ್ನೂ ಒಳಗೊಂಡಾ..

  >>ಸತ್ಯ - ೪
  ಒಂದು ವರ್ಷದ ಹಿಂದೆ ನಮ್ಮನೇಗೆ ಕಳ್ಳ ಬಂದು ನನ್ನ ತಲೆದಿಂಬಡಿ ಇದ್ದ ಮೊಬೈಲು ದೋಚ್ಕೊಂಡು ಹೋಗಿದ್ದ
  82.9%! ಬಾವಲಿಯಾಗಿ ಹುಟ್ಬೇಕು

  >>ಸತ್ಯ - ೫
  ಮೀನು ನಿದ್ರೆ ಮಾಡೋದೆ ಇಲ್ಲ ಅಂದುಕೊಂಡು ಸ್ನೇಹಿತರ ಜೊತೆ ವಾದ ಕೂಡ ಮಾಡಿದ್ದೆ :(

  >>ಸತ್ಯ - ೯
  ಈ ಪ್ರಾಣಿ ಜಾತೀಲಿ ನನ್ನನ್ನೂ ಸೇರಿಸ್ಬಹುದೇನೂ.. ನನಗೆ ಉಗುರು ತಿನ್ನೋ ಅಭ್ಯಾಸ ಇಲ್ಲ, ಉಗುರು ಸುತ್ತಾ ಇರೋ ಚರ್ಮ ತಿನ್ನೋ ಕೆಟ್ಟ ಅಭ್ಯಾಸ!

  ಸೂಪರ್ರಾಗಿದೆ ನಿಮ್ಮ ಬ್ಲಾಗು.

  --
  ಪಾಲ

  ReplyDelete
 2. ಸರ್, ಹುಳುಹುಪ್ಪಟೆಗಳಿಗೆ ನೋವು ಇರುವುದಿಲ್ವಾ?! ಇದರ ಬಗ್ಗೆ ಇನ್ನೊಂದಿಷ್ಟು ವಿವರಗಳನ್ನ ಕೊಡಿ ಪ್ಲೀಸ್..

  (ಹಂಗೆ ನಿಮಗೆ ಕಾಮೆಂಟ್ ಹಾಕೋದಕ್ಕೆ ಎರಡೆರಡು ಸಲ word verification ಮಾಡುವುದನ್ನು ತೆಗೆದುಹಾಕಿ ಪ್ಲೀಸ್...)

  ReplyDelete
 3. ಎಷ್ಟೊಂದ್ ಇನ್ಫೋ ಮಾರಾಯಾ.. ಥ್ಯಾಂಕ್ಯೂ. :-)

  ReplyDelete
 4. ಅರುಣ,
  (೧)ಇಷ್ಟೆಲ್ಲಾ ಮಾಹಿತಿ ಕೊಟ್ಟದ್ದಕ್ಕಾಗಿ ತುಂಬಾ ಧನ್ಯವಾದಗಳು.
  ಆದರೆ, ಉಳಿದ ಜೀವಿಗಳಿಗೆ ಮಾನವನಂತೆ ಭಾವನೆಗಳು ಇರೋದಿಲ್ಲ ಎಂದರೆ ಯಾಕೊ ಸರಿ ಕಾಣ್ತಾ ಇಲ್ಲ.
  (೨)ಕತ್ತೆಗೆ ಯಾಕೆ ಕತ್ತೆ ಅಂತಾರೆ ಅನ್ನೋದು ಗೊತ್ತಾಯ್ತು!

  ReplyDelete
 5. ಎಂಥಾ ಸತ್ಯದರ್ಶನ ಗುರುಗಳೇ !

  ReplyDelete
 6. [ಲಕುಮಿ] ಪಾವಗಡ ಪ್ರಕಾಶರಾವ್ ಟೈಟ್ಲು.

  [ಸುನಾಥ್] ಹುಳುಗಳು ಮತ್ತು ಕೀಟಗಳಿಗೆ ಮಾತ್ರ ಅನ್ವಯಿಸುತ್ತೆ.. ಕತ್ತೆಗೆ ಯಾಕೆ ಕತ್ತೆ ಅಂತಾರೆ?

  [ಶ್ರೀನಿಧಿ] ಯಾವುದು ಭಯಂಕರ?

  [ಸುಶ್ರುತ] :-)

  [ವಿಕಾಸ್] ಹುಳು ಹುಪ್ಪಟೆಗಳಲ್ಲಿ ನೋಕಿಸೆಪ್ಟಾರ್ಸ್ ಇಲ್ಲದೇ ಇರುವುದರಿಂದ ನೋವಾಗುವುದಿಲ್ಲ. ನಮಗೆ ಜಿಗುಟಿದರೆ, ಹೊಡೆದರೆ, ಸೂಜಿಯಲ್ಲಿ ಚುಚ್ಚಿದರೆ, ನೋವಾಗುತ್ತಲ್ಲ, ಹಾಗೆ ಹುಳು ಹುಪ್ಪಟೆಗಳಿಗೆ ನೋವಾಗುವುದಿಲ್ಲ. ಹೊಡೆದು ಸಾಯಿಸಿದರೆ ಸಾಯುತ್ತೆ ಅಷ್ಟೆ, ನೋವಾಗುವುದಿಲ್ಲ.

  [ಪಾಲ] ಹೌದು, ಕೀಟಗಳನ್ನೂ ಒಳಗೊಂಡು. ಆರ್ಥ್ರೋಪೋಡಾಗಳನ್ನೂ ಸೇರಿಸಿಕೊಳ್ಳಿ ಈ ಪಟ್ಟಿಗೆ. ಮಣ್ಣು ಹುಳು, ಎರೆ ಹುಳು, ಸಾವಿರ ಕಾಲು, ಝರಿ, ಇತ್ಯಾದಿ. ಉಗುರು ಮತ್ತು ಕೂದಲು ಎರಡೂ ಸತ್ತು ಹೋಗಿರುವ ಜೀವಕೋಶಗಳಷ್ಟೆ. ಹಾಗಾಗಿ ಅವರೆಡೂ ನಮ್ಮ ಅಂಗಗಳೆಂದು ಪರಿಗಣಿಸಲಾಗದು. ನೀವು ನಿಮ್ಮ ಈ ಅಂಗಗಳನ್ನು ತಿಂದರೆ ಸ್ವಯಂ-ಭಕ್ಷಕ ಎನ್ನಲಾಗದು ನೋಡಿ. ಧನ್ಯವಾದಗಳು... :-)

  ReplyDelete
 7. ಅರುಣ್,
  ನೀವು ಹೇಳಿದಂತೆ ಹುಳು ಹುಪ್ಪಟೆಗಳಲ್ಲಿ ನೋಕಿಸೆಪ್ಟಾರ್ಸ್ ಇಲ್ಲದೇ ಇರುವುದರಿಂದ ನೋವಾಗುವುದಿಲ್ಲವೆಂದಾದರೆ
  ಮೀನು ಕಣ್ಣು ಮುಚ್ಚೊಲ್ಲಾ ಅದಿಕ್ಕೆ ಅದು ನಿದ್ರೆ ಮಾಡೊಲ್ಲ
  ಇರುವೆ ಮಾತು ನನಗೆ ಕೇಳಿಸೊಲ್ಲ, ಅದಿಕ್ಕೆ ಅದು ಕಮ್ಯುನಿಕೇಟ್ ಮಾಡೊಲ್ಲ ಅಂತಾನೂ ಯಾಕೆ ಅಂದುಕೋಬಾರ್ದು.

  ತೋಟದಲ್ಲಿ ಹಾರೆ ಹಿಡ್ಕೊಂಡು ಕೆಲ್ಸ ಮಾಡ್ತಾ ಇರ್ಬೇಕಾದ್ರೆ ಅಕಸ್ಮಾತ್ ಎರೆ ಹುಳ ಏನಾದ್ರು ಸಿಕ್ಕಿ ಅದು ತುಂಡಾದ್ರೆ, ವಿಲ ವಿಲ ಅಂತ ಒದ್ದಾಡತ್ತಲ್ವ ಅದು ನೋವಲ್ಲ ಅಂತ ಹೇಗೆ ಹೇಳ್ತೀರ. ಒಂದು ವೇಳೆ ಇವಕ್ಕೆಲ್ಲಾ ನೋವೇ ಇಲ್ಲಾಂತಂದ್ರೆ ಇವು ಹೇಗೆ ಸರ್ವೈವ್ ಆಗುತ್ತೆ..
  --
  ಪಾಲ

  ReplyDelete
 8. [ಪಾಲ] ನಿದ್ರೆಯೆಂದರೆ ಮಿದುಳಿಗೆ ವಿಶ್ರಾಂತಿ ಕೊಡುವುದೆಂದಷ್ಟೆ. involuntary functions ಬಿಟ್ಟು ಮಿಕ್ಕ ಯಾವ ಕೆಲಸವೂ ನಡೆಯದೇ ಇದ್ದರೆ ಅದನ್ನು ನಿದ್ರೆಯೆನ್ನಬಹುದು. ಹಾಗಾಗಿ ರೆಪ್ಪೆಗೂ ನಿದ್ರೆಗೂ ಯಾವುದೇ ಸಂಬಂಧವಿಲ್ಲ. ಇರುವೆಯ ಮಾತು ನಮಗೆ ಕೇಳಿಸುವುದಿಲ್ಲವಾದ ಮಾತ್ರಕ್ಕೆ ಇನ್ನೊಂದು ಇರುವೆಯ ಜೊತೆ ಕಮ್ಯೂನಿಕೇಟ್ ಮಾಡುವುದಿಲ್ಲವೆಂದಲ್ಲ. ಕಮ್ಯೂನಿಕೇಷನ್‍ಗೂ ಮಾತಿಗೂ ಸಂಬಂಧವಿಲ್ಲ!

  ಚರ್ಮದ ಬಣ್ಣಕ್ಕೆ ಮೆಲನಿನ್ ಎಂಬ ಪಿಗ್ಮೆಂಟು ಕಾರಣವೆಂಬುದು ನಮಗೆ ತಿಳಿದಿದೆಯಷ್ಟೆ. ಇದು ಎಲ್ಲ ಸಸ್ತನಿಗಳಿಗೂ ಅನ್ವಯಿಸುತ್ತೆ. ಖಾರವೆಂಬುದು ರುಚಿಯಲ್ಲ, ಅದು ನಾಲಗೆಯ ಕೋಶಗಳ ಮೇಲೆ ಉಂಟಾಗುವ irritation. ಹಾಗಾಗಿ ನನಗೆ ಖಾರವಾದ ತಿನಿಸು ನಿಮಗೆ ಖಾರವಾಗದೇ ಇರಬಹುದು. ಅಂತೆಯೇ ನೋವನ್ನುಂಟು ಮಾಡುವುದೂ ಸಹ ಒಂದು ಪಿಗ್ಮೆಂಟು. ಆ ಪಿಗ್ಮೆಂಟು ಯಾವುದೇ ಕೀಟಗಳಲ್ಲಾಗಲೀ ಹುಳುಗಳಲ್ಲಾಗಲೀ ಕಂಡುಬರುವುದಿಲ್ಲ. ಹಾಗಾಗಿ ಅದಕ್ಕೆ ನೋವಾಗುವುದಿಲ್ಲ.

  ಇನ್ನು ವಿಲವಿಲನೆ ಒದ್ದಾಡುವ ವಿಷಯಕ್ಕೆ ಬರೋಣ. ಒಂದು ಜಿರಲೆಯ ಕಾಲನ್ನು ಕತ್ತರಿಸಿದರೆ ಅದು ತನ್ನ ಉಳಿದ ಕಾಲುಗಳನ್ನೇ ಎಳೆದುಕೊಂಡು ನಡೆಯಬಲ್ಲುದು. ನೀವು ಹೇಳಿದಂತೆ ಯಾವುದಾದರೂ ಹುಳುವಿನ ಮೇಲೆ ಹೊಡೆದರೆ ಅದು 'ವಿಲ ವಿಲ' ಎಂದು ಒದ್ದಾಡ್ದುವುದು! ಒದ್ದಾಡುವುದು ಅನೇಕ ಹುಳುಗಳಲ್ಲಿ ಡಿಫೆನ್ಸ್ ಮೆಕಾನಿಸಮ್. ಇನ್ನು ಎರೆ ಹುಳು ವಿಷಯಕ್ಕೆ ಬರೋಣ. ನೀವು ಹೇಳಿದಂತೆ ತೋಟದಲ್ಲಿ ಎರೆ ಹುಳು "ತುಂಡಾದರೆ" ಖಂಡಿತ ಒದ್ದಾಡುತ್ತೆ. ಅದು ನೋವಿನಿಂದಲ್ಲ, ಬದಲಿಗೆ ತುಂಡು ದೇಹವನ್ನು ಹೊತ್ತುಕೊಂಡು ಮುಂದೆ ಹೋಗಲಾಗದೇ ಇರುವುದರಿಂದ. ಒದ್ದಾಡಿದ ಮಾತ್ರಕ್ಕೆ ಅಲ್ಲಿ ನೋವಿದೆಯೆಂದಲ್ಲ. ಹಲ್ಲಿಯು ತನ್ನ ಬಾಲವನ್ನು ಕಳಚಿದಾಗ ಆ ಬಾಲವೂ ಸಹ ಒದ್ದಾಡುತ್ತೆ. ಅದರರ್ಥ, ಆ ಬಾಲವು ಹಲ್ಲಿಯ ಉಳಿದ ದೇಹವಿಲ್ಲದೆ ಮುಂದಕ್ಕೆ ಸಾಗಲಾಗದು. ನಮ್ಮ ಕೈಯನ್ನು ಕತ್ತರಿಸಿದರೆ ದೇಹಕ್ಕೆ ನೋವಾಗುತ್ತೆ, ಕತ್ತರಿಸಿದ ನಂತರ ಕೆಳಗುರುಳಿದ ಕೈಗೆ ನೋವಾಗುತ್ತಿರುವುದಿಲ್ಲ. ಆದರೂ ಆ ಕೆಳಗುರುಳಿದ ಕೈಯ್ಯೂ ಸಹ ಒದ್ದಾಡುತ್ತೆ.

  ReplyDelete
 9. ಅರುಣ್,

  ರೆಪ್ಪೆಗೂ ನಿದ್ರೆಗೂ, ಕಣ್ಮುಚ್ಚೋದಕ್ಕೂ ನಿದ್ರೆಗೂ ಯಾವುದೇ ಸಂಬಂಧವಿಲ್ಲ, ಸರಿ.

  ಕಮ್ಯೂನಿಕೇಷನ್‍ಗೂ ಮಾತಿಗೂ ಸಂಬಂಧವಿಲ್ಲ! ಯಾಕೆ ಸಂಬಂಧ ಇಲ್ಲ? ಮಾತಾಡೋದು ಕಮ್ಯುನಿಕೇಷನ್ನಿನ ಒಂದು ರೀತಿ ಅಲ್ವಾ. ಮಾತಾಡ್ದೆ ಇದ್ರೆ ಏನು ಮಾಡ್ತೀರ, ನಗ್ತೀರ, ಅಳ್ತೀರ, ಕೋಪ ಮಾಡ್ಕೋತೀರ, ಬೇಜಾರು ಆದ್ರೆ ನಿಮ್ಮ ಮುಖದಲ್ಲಿ ಅದನ್ನ ವ್ಯಕ್ತ ಪಡಿಸ್ತೀರ, ಬರೀತೀರ, ಕೈಸನ್ನೆ, ಕಣ್ಣುಗಳಲ್ಲಿ ನಿಮ್ಮ ಸಂದೇಶ ಇನ್ನೊಬ್ರಿಗೆ ತಲುಪುವಂತೆ ಮಾಡ್ತೀರ. ಅಂದ ಮೇಲೆ ಕೇವಲ ಮಾತು ಮಾತ್ರ ಕಮ್ಯುನಿಕೇಶನ್ನಿಗೆ ಸಾಧನ ಅಲ್ಲಾ ಅಂತ ಆಯ್ತು.

  ಇರುವೆಗಳು ಈ ರೀತಿ ಮಾತಾಡೊಲ್ಲ, ಬರಿಯೊಲ್ಲ ಆದ್ರೆ ರಾಸಾಯನಿಕಗಳ ಮೂಲಕ ಒಂದು ಇನ್ನೊಂದಕ್ಕೆ ಸಂದೇಶ ಕಳಿಸ್ತಾವೆ. ಅಂದ ಮೇಲೆ ಇರುವೆ ಕಮ್ಯುನಿಕೇಟ್ ಮಾಡೋದು ನಮಗಿಂತ ಭಿನ್ನ ಅಂತಾಯ್ತು.

  ಇನ್ನು ಚರ್ಮದ ಬಣ್ಣಕ್ಕೆ ಮೆಲನಿನ್ ಎಂಬ ಪಿಗ್ಮೆಂಟು ಕಾರಣ ಮತ್ತು ಇದು ಎಲ್ಲಾ ಸಸ್ತನಿಗಳಿಗೂ ಅನ್ವಯಿಸುತ್ತೆ ಅಂದಿದೀರ. ಹಾಗಾದರೆ ಹುಳು ಹುಪ್ಪಟೆ, ಕೀಟಗಳ ಚರ್ಮಾನೋ ,ಎಕ್ಸೋ ಸ್ಕೆಲಿಟನ್ ಮೇಲೆ ಮೆಲನಿನ್ ಇಲ್ಲ ಆದ್ದರಿಂದ ಅದಕ್ಕೆ ಬಣ್ಣಾನೇ ಇಲ್ಲ ಅಂತ ಹೇಳೋಕೆ ಆಗುತ್ತಾ. ಮೆಲನಿನ್ ಇಲ್ಲಾಂದ್ರೆ ಬೇರೆ ಯಾವ್ದೋ ಪಿಗ್ಮೆಂಟು ಇರಬಹುದು.

  ನನ್ನ ಕಾಮೆಂಟಿನಲ್ಲಿ ನೀವು ಒದ್ದಾಟನ ಮಾತ್ರ ತಗೊಂಡು ಸರ್ವೈವನ್ನ ಬಿಟ್ಟೇ ಹಾಕಿದ್ರಿ. ನಮ್ಮ ಕೈಯನ್ನು ಕತ್ತರಿಸಿದರೆ ದೇಹಕ್ಕೆ ನೋವಾಗುತ್ತೆ, ಕತ್ತರಿಸಿದ ನಂತರ ಕೆಳಗುರುಳಿದ ಕೈಗೆ ನೋವಾಗುತ್ತಿರುವುದಿಲ್ಲ, ಸರಿ (ತೆಲುಗು ಫಿಲ್ಮ್ ನೆನಪಿಗೆ ಬರ್ತಾ ಇದೆ :)). ಹಾಗೆಯೇ ಎರೆ ಹುಳಾನ ತುಂಡು ಮಾಡಿದ್ರೆ ಅದರ ದೇಹಕ್ಕೆ ನೋವಾಗತ್ತೆ, ತುಂಡಾದ ಭಾಗಕ್ಕೆ ನೋವಾಗುವುದಿಲ್ಲ. ಇನ್ನು ಹಲ್ಲಿದು ಬೇರೆ ಕೇಸು ಬಿಡಿ. ನಾನೊಂದು ಸಲ ಅಳಿಲನ್ನ ಹಿಡ್ಯೋಕೆ ಹೋಗಿ ಅದರ ಬಾಲ ಮಾತ್ರ ನನ್ನ ಕೈಗೆ ಕೊಟ್ಟು ಓಡೋಗಿತ್ತು. ಇದು ನೀವು ಹೇಳಿದಂತೆ ಆತ್ಮರಕ್ಷಣೆಗೆ ಒಂದು ಉಪಾಯ.

  ಮತ್ತೆ ಎರೆ ಹುಳಕ್ಕೆ ಬರೋಣ. ಎರೆ ಹುಳ ಬಿಸಿಲು ಬೀಳ್ದೇ ಇರುವ ತೇವಾಂಶ ಇರೋ ಮಣ್ಣಿನಲ್ಲಿ ಹುದುಗಿರುತ್ತೆ. ಅದಕ್ಕೆ ಬೇಕಾಗೋ ವಾತಾವರಣ ಆಹಾರ ಅದಕ್ಕೆ ಅನುಕೂಲ ಆಗೋದ್ರಿಂದ. ಅದು ಹೊಯಿಗೆ ಇರುವಂತಹ ಶುಷ್ಕ ಪ್ರದೇಶದಲ್ಲಿ ಯಾಕೆ ಕಂಡು ಬರೋದಿಲ್ಲ. ಯಾಕಂದ್ರೆ ಅಲ್ಲಿ ಅದಕ್ಕೆ ಬದುಕೋ ಸಾಮರ್ಥ್ಯ ಇಲ್ಲ. ಒಂದು ವೇಳೆ ಯಾವ್ದಾದ್ರೂ ಎರೆ ಹುಳ ಅಲ್ಲಿ ಮೊಟ್ಟೆ ಇಟ್ಟು ಬಂತೆನ್ನಿ, ಆ ಮೊಟ್ಟೆ ಒಡೆದು ಹೊರ ಬರೋ ಮರೀ ಅಲ್ಲಿ ಬಾಳೊಲ್ಲ. ಇವಿಷ್ಟು ಸಾವು ಬದುಕಿನ, ಹಸಿವಿನ ಮಾತಾಯ್ತು. ಈಗ ಈ ತೇವಾಂಶ ಇರೋ ಮಣ್ಣಿನೊಳಗೆ ಊಟ ಮಾಡಿರೋ ಎರೆ ಹುಳಾನ ಹಿಡಿದು ಮಣ್ಣಿನ ಮೇಲೆ, ಬಿಸಿಲು ಬೀಳೋ ಜಾಗಕ್ಕೆ ತಂದಿಡೋಣ. ಸ್ವಲ್ಪ ಸಮಯದಲ್ಲೇ ಬಿಸಿಲು ಸಹಿಸಲಾರದೇ ಮತ್ತೆ ಮಣ್ಣಿನೊಳಗೆ ಹುದುಗಿಕೊಳ್ಳಲು ಪ್ರಯತ್ನಿಸುತ್ತೆ. ಈ ಸಹಿಸಲಾರದ ಗುಣ ನೋವಲ್ವ. ಒಂದು ವೇಳೆ ಈ ಗುಣ ಇಲ್ದೇ ಇದ್ರೆ ಅದು ಬಿದ್ದಲ್ಲೇ ಬಿದ್ಕೊಂಡಿದ್ದು ಸತ್ತು ಹೋಗಲ್ವ. ಮತ್ತೆ ಎರೆಹುಳದಂತೆ ಇನ್ನಿತರ ಹುಳಗಳು ಒದ್ದಾಡೋದು ಆತ್ಮರಕ್ಷಣೆಯ ಒಂದು ಉಪಾಯ ಅಂತ ಹೇಳಿದ್ರಿ. ಆತ್ಮರಕ್ಷಣೆ ಅದು ಯಾವಾಗ ಮಾಡ್ಕೋಬೇಕು, ಯಾವುದಾದ್ರೂ ಪ್ರಿಡೇಟರ್ ಇದರ ಮೇಲೆರಗಿದಾಗ ಅಥವಾ ಏನನ್ನೋ ಸಹಿಸಲಸಾಧ್ಯವಾದಾಗ. ನೋವೇ ಇಲ್ದೆ ಇದ್ರೆ ಇದಕ್ಕೆ ಯಾವ್ದೋ ಜೀವಿ ತನ್ನನ್ನ ತಿಂತಾ ಇದೆ ಅಂತ ಹೇಗೆ ಗೊತ್ತಾಗುತ್ತೆ. ಗೊತ್ತಾಗಿ ಒದ್ದಾಡಿ ಹೇಗೆ ಡಿಫೆನ್ಸ ಮಾಡಿಕೊಳ್ಳುತ್ತೆ ಅನ್ನೋ ಪ್ರಶ್ನೆ ಉಳಿಯುತ್ತಲ್ವ.

  ನಿನ್ನೆ ಏನಾಯ್ತು ಗೊತ್ತ, ರಾತ್ರಿ ವೆದರ್ರು ಸೂಪರ್ರಾಗಿತ್ತು. ಅನ್ನ ಮಾಡ್ಕೊಂಡು ಊಟ ಮಾಡೋ ಬದ್ಲು, ರವೆ ದೋಸೆ ಮಾಡೋಣ ಅಂತ ಇದ್ದೆ. ಮನೆಗೆ ಬಂದ್ರೆ ಪವರ್ ಕಟ್. ಹೆಂಗೋ ರವೆನೆಲ್ಲಾ ಹುಡ್ಕಾಡಿ ಹಿಟ್ಟು ತಯಾರ್ಸಿ, ಕಾವ್ಲಿನಾ ಒಲೆ ಮೇಲಿಟ್ಟೆ. Phylum Arthropodaಕ್ಕೆ ಸೇರಿದ್ದ ಇರುವೆ ಒಂದಿಷ್ಟು ಕಾವ್ಲಿ ಮೇಲಿಂದ ಹೊರ್ಗಡೆ ಬರೋಕೆ ಪ್ರಯತ್ನಿಸ್ತಾ ಇದ್ವು. ಕರೆಂಟ್ ಹೋಗಿತ್ತಲ್ವ ನೋಡಿರ್ಲಿಲ್ಲ, ಹಿಂದಿನ ದಿನ ಅಕ್ಕಿ ರೊಟ್ಟಿ ಮಾಡಿ ಕಾವ್ಲಿ ತೊಳ್ದಿಟ್ಟಿರ್ಲಿಲ್ಲ. ದೋಸೆ ಚೆನ್ನಾಗಾಗ್ಲಿಲ್ಲ ಬಿಡಿ ಗೋಧಿ ರವೆ ಬದ್ಲು ಅಕ್ಕಿ ರವೆ ಹಾಕಿದ್ದೆ.

  --
  ಪಾಲ

  ReplyDelete
 10. [ಪಾಲ] ಹೆ ಹ್ಹೆ, ಇರುವೆಗೆ ಬಿಸಿ ಗೊತ್ತಾಗುತ್ತೆ, ನೋವಲ್ಲ. ಈ ಕೀಟಗಳಿಗೆ nervous system ಇದೆ. Response to stimulus ಖಂಡಿತ ಸಾಧ್ಯ. :-)

  ಒಳ್ಳೇ ತೆಲುಗು ಪಿಚ್ಚರ್ರು... ನನಗೆ ರವಿ ಬೆಳಗೆರೆ ಕಥೆ ನೆನಪಾಯಿತು ಕೈ ಕತ್ತಿರಿಸೋ ವಿಷಯ ಬಂದಾಗ.

  ಸೂರ್ಯನ ಪ್ರಖರ ಬಿಸಿಲಿನ ಅಸಹ್ಯವು ನೋವೆಂದು ನೀವು ಡಿಫೈನ್ ಮಾಡಿದರೆ ಅದಕ್ಕೆ ನೋವಾಗುತ್ತೆ. ಆದರೆ ಅದನ್ನು ನೋವೆನ್ನುವುದಿಲ್ಲ. ಅದು ಪ್ರತಿಕ್ರಿಯೆಯಷ್ಟೆ.

  ReplyDelete
 11. ಅರುಣ್,
  ನಾನ್ ಮುಂದಿನ್ ಜನ್ಮದಲ್ಲಿ ಹುಳ ಆಗ್ತೀನಿ, ನಿಮ್ಮನೆಗೆ ಬರ್ತೀನಿ, ಒಂದು ಸೂಜಿ ಚುಚ್ಚಿ ಕೇಳಿ ನೋವಾಯ್ತಾ ಇಲ್ವ ಅಂತ ಹೇಳ್ತೀನಿ :)
  ಸೂಜಿ ಚುಚ್ಚಿದ್ರೆ ಅದಿಕ್ಕೆ ನನಗೆ ನೋವಾದಂತೆ ಆಗುತ್ತೋ ಇಲ್ವೊ, ಆಗ ಅದು ಪ್ರತಿಕ್ರಿಯಿಸುವುದನ್ನ ನೀವು stimuli ಅಂತೀರೋ ಏನೋ. ಆದರೆ ಆ ಪ್ರತಿಕ್ರಿಯಿಸುವುದಕ್ಕೆ ಕಾರಣವಾದ stimuliಗೆ ನಾನು pain, ನೋವು ಅಂತೀನಿ.
  ನಿಮ್ಮ ಪೋಸ್ಟಿಗೆ ಪೂರಕವಾಗಿ ಇನ್ನೊಂದು ಬ್ಲಾಗ್ ಪೋಸ್ಟ್ ಇದೆ: http://brianoconnor.typepad.com/animal_crackers/2005/02/lobster_pain_or.html
  ಆ ಪೋಸ್ಟಿನ ಜೊತೆಗೆ Plant Pain, Plant Rights ಬಗ್ಗೆ ಇನ್ನೊಂದ್ ಲೇಖನ ಇದೆ. ಬಿಡುವಿದ್ದಾಗ ಓದಿ, ಓದಿಯಾಗಿದ್ರೆ ಸರಿ :)

  ಗೋಧಿ ರವೆ ದೋಸೆ ಮಾಡ್ಬೇಕು ಇವತ್ತು :)
  --
  ಪಾಲ

  ReplyDelete
 12. [ಪಾಲ] ಬಹಳ ಸೊಗಸಾಗಿದೆ ಆ ಎರಡೂ ಪೋಸ್ಟುಗಳು. ಸಮಂಜಸವಾಗೂ ಇದೆ. ಬೌದ್ಧಿಕ ದೃಷ್ಟಿಯಿಂದ ನೋಡಿದಾಗ ನಿಮ್ಮ (ಮತ್ತು ಆ ಬ್ಲಾಗ್ ಪೋಸ್ಟಿನ ವಿಷಯದ) ಪ್ರತಿಯೊಂದು ಮಾತನ್ನೂ ನಾನು ಅಂಗೀಕರಿಸುತ್ತೇನೆ. ಸೊಗಸಾದ ಚರ್ಚೆ.

  ಒಳ್ಳೇ ಮುಂದಿನ ಜನ್ಮ. ಹಾಗೇನಾದರೂ ಇನ್ನೊಂದು ಜನ್ಮ ಎಂಬುವುದಿರುವುದು ನಿಜವೇ ಆದರೆ, ನಾನೇನು ಆಗಿರುತ್ತೇನೋ ಗೊತ್ತಿಲ್ಲ. ನಾನೂ ನಿಮ್ಮಂತೆಯೇ ನಿಮ್ಮ ಗುಂಪಿನಲ್ಲೇ ಇನ್ನೊಂದು ಹುಳುವಾಗಿದ್ದು, ನಿಮಗೆ ಫೀರೋಮೋನ್ಸ್ ಮುಖಾಂತರ "ನೋಡು ಹೇಗೆ ನೋವಾಗ್ತಾ ಇದೆ, ಆ ಬಡ್ಡಿ ಮಗ ನಮಗೆಲ್ಲ ನೋವಾಗಲ್ಲ ಅಂತ ಬರ್ದಿದಾನೆ.." ಎಂದು ಶಾಪ ಹಾಕಬಹುದೇನೋ. (ನನಗೆ ಈ ಪುನರ್ಜನ್ಮದ ಬಗ್ಗೆಯೆಲ್ಲ ನಂಬಿಕೆಯಿಲ್ಲವಷ್ಟೆ).

  ReplyDelete
 13. ಹ್ಹೆ ಹೆ, ಮತ್ತೆ ಮುಂದಿನ ಜನ್ಮ ಇದ್ದು, ನಾನು ಹುಳ ಆದ್ರೂ ಹಿಂದಿನ ಜನ್ಮದಲ್ಲಿ ನಾನು ಪಾಲ ಆಗಿದ್ದೆ, ಅರುಣ್ ಮನೆಗೆ ಒಂದಿನ ಸೂಜಿ ಚುಚ್ಚಿಸಿಕೊಳ್ಲಿಕ್ಕೆ ಹೋಗ್ಬೇಕು ಅಂತ ನೆನಪಿರುತ್ತೋ ಇಲ್ವೋ.

  ReplyDelete

ಒಂದಷ್ಟು ಚಿತ್ರಗಳು..