Sunday, March 29, 2009

ಬೇರೆಯದೇ ಕಣ್ಣು

ಚಾರಣಗಳಲ್ಲಿ ಶಿಖರವನ್ನು ತಲುಪಿದ ನಂತರ ಶ್ರೀನಿವಾಸ ಏಕಾಂತದ ಸ್ಥಳ ಹುಡುಕಿ ಕಣ್ಮುಚ್ಚಿ ಧ್ಯಾನಮಗ್ನನಾಗುತ್ತಾನೆ. ನಾನು ಒಂದು ಕ್ಷಣವೂ ಕಣ್ಮುಚ್ಚಲು ಇಷ್ಟ ಪಡುವುದಿಲ್ಲ. ಕಣ್ಮುಚ್ಚಿದರೆ ಯಾವ ಅದ್ಭುತ ದೃಶ್ಯ ತಪ್ಪಿ ಹೋಗುವುದೋ ಎನ್ನುವ ಭಯ. ಗೆಳೆಯ ಶರತ್ ಯಾವುದೇ ಒಳ್ಳೆಯ ಸ್ಥಳಕ್ಕೆ ಹೋದರೂ ಬಹುಶಃ ತನ್ನ ಕಣ್ಣಿಗಿಂತಲೂ ಹೆಚ್ಚಾಗಿ ತನ್ನ ಕ್ಯಾಮೆರಾ ಕಣ್ಣಿನಿಂದಲೇ ನೋಡುತ್ತಾನೆನ್ನಿಸುತ್ತೆ. ಒಂದಷ್ಟು ಜನ ಅವಿವೇಕಿಗಳು ಚಾರಣಕ್ಕೆ ಬರುತ್ತಾರೆ, ಯಾವುದೇ ಶಿಖರ ತಲುಪಿದರೂ "ಇಲ್ಲಿ ರೆಸಾರ್ಟ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಹೇಳುತ್ತ "ಅಯ್ಯೋ ಕಾಲು ನೋವು, ಕೀಲು ನೋವು.." ಎಂದು ಸಂಕಟ ಪಡುತ್ತಿರುತ್ತಾರೆ.

ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದಿರ ಹೆಂಡತಿಯ ಮೋರೆ.
ಅಂಗಳದ ಕಂದನಿಗೆ ಶಶಿ ಬಾಂದಳದ ಚೆಂಡು
ವಿಜ್ಞಾನಿಗೆ ಅದು ಕೇವಲ ಕಲ್ಲು ಗುಂಡು
(ದಿನಕರ ದೇಸಾಯಿ)

ಹಿಂದೆ ನಾನೂ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಿದ್ದೆ ಚಾರಣಗಳಿಗೆ. ಈಗ ಮೊಬೈಲಿನಲ್ಲಿ ಕ್ಯಾಮೆರಾ ಇರುವುದರಿಂದ ಬೇಕಾದಾಗ ಮಾತ್ರ ಬಳಸಬಹುದೆಂದು ಕ್ಯಾಮೆರಾ ತೆಗೆದುಕೊಂಡು ಹೋಗುವುದಿಲ್ಲ. ನನಗೇನೂ ಛಾಯಾಗ್ರಹಣದಲ್ಲಿ ಆಸಕ್ತಿಯಿಲ್ಲ. ನೋಡಿದ ದೃಶ್ಯವನ್ನು ಕಣ್ಣಿನ ಕ್ಯಾಮೆರಾದಲ್ಲಿ ತುಂಬಿಕೊಳ್ಳುವುದು, ಮನಸ್ಸಿನ ಸ್ಟುಡಿಯೋದಲ್ಲಿ ಡೆವೆಲಪ್ ಮಾಡಿಕೊಳ್ಳುವುದು ನನ್ನ ಹವ್ಯಾಸ. ಕಣ್ಣಿಗಿರುವ ಶಕ್ತಿ ಯಾವ ಮಸೂರಕ್ಕೂ ಇಲ್ಲವೆಂಬುದು ನನ್ನ ದೃಢ ನಂಬಿಕೆ.

ಮತ್ತೆ ಸಾಮಾನ್ಯವಾಗಿ ಸೂರ್ಯಾಸ್ತವಾಗಲೀ, ಸೂರ್ಯೋದಯವಾಗಲೀ, ಸಮುದ್ರದ ಅಲೆಗಳಾಗಲೀ, ಜಲಧಾರೆಗಳಾಗಲೀ, ಬೆಟ್ಟವಾಗಲೀ, ಬೆಟ್ಟದ ಮೇಲೆ ತೇಲಿ ಬರುವ ಮೋಡವಾಗಲೀ - ಅದರ ಮುಂದೆ ನಿಂತು ಪೋಸು ಕೊಟ್ಟು ಫೋಟೋ ತೆಗೆಸಿಕೊಳ್ಳುವ ಆಸಕ್ತಿಯೂ ಅಷ್ಟೇನೂ ಇಲ್ಲವಾದರೂ ಈ ಆರ್ಕುಟ್‍ನಂತಹ ತಾಣಗಳಲ್ಲಿ ಫೋಟೋ ಹಾಕಿಸಿಕೊಂಡು ಮೆರೆಯಲು ಒಮ್ಮೊಮ್ಮೆ ಅಂತಹ ಫೋಟೋ ತೆಗೆಸಿಕೊಳ್ಳ ಬೇಕೆನಿಸುತ್ತೆ. ಆದರೆ ಸೂರ್ಯನನ್ನು ಕೈಯಲ್ಲಿ ಹಿಡಿಯುವಂತೆ, ಬಾಯಲ್ಲಿ ನುಂಗುವಂತೆ, ಬೆಟ್ಟವನ್ನು ಆಶೀರ್ವದಿಸುವಂತೆ ಫೋಟೋ ಕ್ಲಿಕ್ಕಿಸಿಕೊಳ್ಳುವವರನ್ನು ನೋಡಿದಾಗ ಮುಗುಳ್ನಗು ಮೂಡುತ್ತೆ.

ಕೆಲವರು "ಮುನ್ನಾರ್‍ಗೆ ಹೋಗಿದ್ವಿ, ಕೊಡೈಕೆನಾಲ್‍ಗೆ ಹೋಗಿದ್ವಿ, ಕಬಿನಿಗೆ ಹೋಗಿದ್ವಿ, ಕುಮಾರಪರ್ವತಕ್ಕೆ ಹೋಗಿದ್ವಿ.." ಎಂದು ಹತ್ತು ಬೇರೆ ಬೇರೆ ಜಾಗಗಳ ಫೋಟೋಗಳನ್ನು ತೋರಿಸಿದಾಗಲೂ ಒಂದೇ ರೀತಿಯಿರುತ್ತೆ. ಅವರು ಎಲ್ಲ ಕಡೆ ಗುಂಪಾಗಿ ನಿಂತು ಫೋಟೋ ತೆಗೆಸಿಕೊಂಡು ಎಲ್ಲ ಫೋಟೋಗಳೂ ಒಂದೇ ಕಡೆ ತೆಗೆದಿರುವ ಹಾಗಿರುತ್ತೆ. ಮನೆಯಲ್ಲೇ ತೆಗೆದು ಬೇರೆ ಬೇರೆ ಹಿನ್ನೆಲೆಗೆ ಅಂಟಿಸುವುದು ಒಳ್ಳೆಯ ಪ್ಲ್ಯಾನು ಎಂದು ನಾನು ಟೀಕಿಸುತ್ತಿರುತ್ತೇನೆ ಇಂಥವರನ್ನು.

ನನ್ನ ಕೈಗೆ ಕ್ಯಾಮೆರಾ ಬಂದರೆ ಕೇವಲ ಅಲ್ಲಿ ಇಲ್ಲಿ ನೇತು ಹಾಕಿರುವ ಫಲಕಗಳು, ಅಲ್ಲಿರುವ ಕಾಗುಣಿತ ತಪ್ಪುಗಳು, ಅದರಿಂದಾಗುವ ಆಭಾಸಗಳು, ಕೇವಲ ಇಂಥದ್ದೇ ಕಣ್ಣಿಗೆ ಬೀಳುವುದು. ಹಕ್ಕಿಗಳ ಫೋಟೋಗಳನ್ನು ನಾನು ಇದುವರೆಗೂ ಸರಿಯಾಗಿ ತೆಗೆಯಲು ಬಂದಿಲ್ಲ ನನಗೆ. ಯಾವುದೋ ಒಂದು ಸಲ ಕಾಡೆಮ್ಮೆಯ ಗುಂಪೊಂದು ಎದುರಾದಾಗ ಅವು ಇನ್ನೇನು ಕಣ್ತಪ್ಪಿಸಿ ಹೋಗುವುದೇನೋ ಅನ್ನುವ ಹೊತ್ತಿಗೆ ಆ ಗುಂಪಿನ ಚಿತ್ರ ತೆಗೆದಿದ್ದುದುಂಟು. ಅದು ಬಿಟ್ಟರೆ ಬರೀ ನಾಯಿ, ಹಸು, ಕರು, ಬೆಟ್ಟ, ಮೋಡ - ಇವೇ. ಯಾಕೆಂದರೆ ಬೆಟ್ಟಗಳೂ ಅಚಲಗಳು. ಅವು ಕೂಡ ಯಾವ ಕೋನದಲ್ಲಿ ತೆಗೆಯಬೇಕು, ಬೆಳಕಿನ ವಿನ್ಯಾಸ ಹೇಗಿರಬೇಕು ಇವೆಲ್ಲ ತಲೆಗೆ ಹೋಗುವುದಿಲ್ಲ. ಸುಮ್ಮನೆ "view finder"ನಲ್ಲಿ ನೋಡುವುದು, ಕ್ಲಿಕ್ಕಿಸುವುದು.ನನ್ನ ಕೆಲವರು ಗೆಳೆಯರಿದ್ದಾರೆ. ಅವರು ನೋಡುವುದು ಕ್ಯಾಮೆರಾದಿಂದಲೇ ಎಂದು ನನ್ನ ನಂಬಿಕೆ. ಗೆಳತಿ ಅದಿತಿ ಎಂಬಾಕೆಯ ಬಹುಕಾಲದ ಅಭಿಮಾನಿ ನಾನು. ಎಷ್ಟೊಂದು ಕವನಗಳಿಗೂ ಸ್ಫೂರ್ತಿ ಸಿಕ್ಕಿದೆ ಈಕೆಯ ಚಿತ್ರಗಳಿಂದ. ಪ್ರಕೃತಿಯ ಸೌಂದರ್ಯವನ್ನು ಸೆರೆಹಿಡಿಯುವುದಕ್ಕಿಂತಲೂ ಈಕೆಯ ಆಸಕ್ತಿಯು ಸುತ್ತಮುತ್ತಲ ಪರಿಸರದ ಸೌಂದರ್ಯವನ್ನು ಸೆರೆಹಿಡಿಯುವುದು.

ಚಿತ್ರಗಳಲ್ಲೇ ನವರಸವನ್ನೂ ಕಂಡು ಬೆರೆಗಾಗಿದ್ದೇನೆ. "ಸೂಪರ್" ಎಂದು ಕಮೆಂಟಿಸಲು ಬೇಸರವಾಗುತ್ತೆ, ಯಾಕೆಂದರೆ ಅದು ತೀರ ಕಡಿಮೆಯ ಹೊಗಳಿಕೆ.ಗೆಳೆಯ ಶರತ್ ನನ್ನ ಕಾಲೇಜಿನ ಮಿತ್ರ. ಆಗ ಅವನು ಹೀಗಿರಲಿಲ್ಲ. ಕಂಪ್ಯೂಟರ್‍ನಲ್ಲಿ ಆಟವಾಡುವುದು ಇವನ ಸರ್ವಾಸಕ್ತಿಯಾಗಿತ್ತು. ಈಗ ಕ್ಯಾಮೆರಾ ಹಿಡಿದು ಕಾಡಿನೊಳಕ್ಕೆ ಹೊರಟುಬಿಡುತ್ತಾನೆ. ನನಗೆ ಯಾವುದೋ ಕಾಡಿನಲ್ಲಿ ಮರದ ಗರಿಯ ಅಂಚಿನೊಳಗೆ ಸಣ್ಣದಾಗಿ ಕಂಡ ಹಾರುವ ಅಳಿಲು, ಎದುರಾಳಿಯಂತೆ ಬಂದ ಆನೆ, ನೂರಾರು ಬಗೆಯ ಹಕ್ಕಿಗಳು, ಇಂದು ಶರತ್ ದೆಸೆಯಿಂದ ನನ್ನ ಪರದೆಯ ಮೇಲಿದೆ.

ಇವನಿಗೆ ನಾನು ಕೃತಜ್ಞ. ಈಗ ತನ್ನದೇ ವೆಬ್‍ಸೈಟನ್ನೂ ಕೂಡ ಮಾಡಿಕೊಂಡಿದ್ದಾನೆ.


ಇಬ್ಬರೂ ಹೀಗೇ ಕ್ಲಿಕ್ಕಿಸುತ್ತಿರಿಪ್ಪಾ.. ಚಿತ್ರಗಳನ್ನು ನೋಡುವ ಸೌಭಾಗ್ಯವನ್ನು ನಮಗೆ ಇನ್ನೂ ಹೆಚ್ಚು ಹೆಚ್ಚು ಒದಗಿಸಿಕೊಡಿ. ಇಬ್ಬರಿಗೂ ಆಲ್ ದಿ ಬೆಸ್ಟ್.... :-)

-ಅ
29.03.2009
11.30PM

Wednesday, March 25, 2009

ಕಾಶಿ

ಕಾಶಿಯ ಪರಿಸರದ ಬಗ್ಗೆ ಕೆಲ ದಿನಗಳ ಕೆಳಗೆ ನನಗೊಂದು ಈಮೇಲ್ ಬಂತು. ಅನೇಕರಿಗೆ ಈಗಾಗಲೇ ಇದು ಹಳೆಯ ಈಮೇಲ್ ಆಗಿರಬೇಕು. ಇಲ್ಲಿರುವುದು ತುಂಬ ಹಳೆಯ ಆಚರಣೆ. ಈಗ ಸುಪ್ರೀಮ್ ಕೋರ್ಟು ಈ ಆಚರಣೆಗಳಿಗೆಲ್ಲ ತಡೆ ಹಾಕಿದೆ. ಗಂಗೆಯ ಉಳಿವಿಗಾಗಿ. ಇನ್ನಾದರೂ ಗಂಗೆ ಉಳಿಯಲಿ ಎಂದು.

ಆ ಹಳೆಯ ಚಿತ್ರಗಳು ಇಲ್ಲಿವೆ.-ಅ
25.03.2009
11.30PM

Sunday, March 22, 2009

ಶ್ವಾಸವದು ಬೊಮ್ಮನದು

ಮೊನ್ನೆ ನಮ್ಮ ಕಾಫಿ ಚರ್ಚೆಯೊಂದರಲ್ಲಿ ಶ್ರೀನಿಧಿ ಹೇಳುತ್ತಿದ್ದ. "ನಾವು ಇನ್ನೂರು ಕಿಲೋಮೀಟರಿಗೊಂದು ಅಭಯಾರಣ್ಯ ಅಂತ ಬೌಂಡರಿ ಹಾಕ್ಕೋತೀವಿ. ಆನೆ ತನ್ನ ಜೀವಮಾನದಲ್ಲಿ ಸಾವಿರಾರು ಕಿಲೋಮೀಟರು ನಡೆಯುತ್ತೆ. ನಮ್ಮ ಹಾಗೆ ಅದಕ್ಕೆ ಯಾವ ಬೌಂಡರಿಗಳಿರೋದಿಲ್ಲ..." ಎಷ್ಟು ಸೊಗಸಾದ ಮಾತು!!

ಕೇರಳದಲ್ಲಿ ಜನಿಸಿದ ಆನೆಯೊಂದು ಮಹಾರಾಷ್ಟ್ರದಲ್ಲಿ ತನ್ನ ಬದುಕನ್ನು ರೂಪಿಸಿಕೊಳ್ಳಬಹುದು. 2007ರಲ್ಲಿ ಒರಿಸ್ಸಾದ ಆನೆಯೊಂದು ಆಂಧ್ರಪ್ರದೇಶಕ್ಕೆ ವಲಸೆ ಬಂದಿದ್ದ ವರದಿಯಾಗಿತ್ತು. ಅದನ್ನು ಅವಿವೇಕಿಗಳು "ಅಸ್ವಾಭಾವಿಕ" ಎಂದೂ ಕರೆದರು, ಮತ್ತು ಶತಪ್ರಯತ್ನ ಮಾಡಿ ವಾಪಸ್ಸು ಕಳಿಸಿಬಿಟ್ಟರು. ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಆಗಾಗ್ಗೆ ಆನೆಗಳು ಬರುತ್ತಲೇ ಇರುತ್ತವೆ. ಪಾಸ್‍ಪೋರ್ಟು ವೀಸಾ ಅಗತ್ಯವಿಲ್ಲ ಇವಕ್ಕೆ.ರಂಗನತಿಟ್ಟುವಿನಲ್ಲಿ "ವಲಸೆ ಹಕ್ಕಿ"ಗಳಿಗೆಂದೇ ಜಾಗ ಮೀಸಲಿಟ್ಟಿರುವುದನ್ನು ನಾವು ಬಲ್ಲೆವು. ಹಿಮಾಲಯದ ಪ್ರದೇಶಗಳಿಂದೆಲ್ಲ ಮೈಸೂರಿಗೆ ವಲಸೆ ಬರಲು ಸಿದ್ಧವಿರುವ ಹಕ್ಕಿಗಳಿವೆ! ಡ್ರಾಂಗೋ Dicrurus leucophaeus ಎಂಬ ಹಕ್ಕಿಯು ಇಲ್ಲಿಗೆ ಆಫಗಾನಿಸ್ಥಾನದಿಂದ ಬರುತ್ತೆ. ಆಫಗಾನಿಸ್ಥಾನದ ಭಯೋತ್ಪಾದಕರು ಕೇವಲ ಮನುಷ್ಯರು. ವಿಶೇಷವೆಂದರೆ ಈ ಹಕ್ಕಿಯು ಶ್ರೀಲಂಕೆಗೂ ವಲಸೆ ಹೋಗುತ್ತೆ.

ಅಮೆರಿಕಾದ ಕೆನಡಾ ಮತ್ತು ಮೆಕ್ಸಿಕೋ ಹಾದಿಯು ಎರಡು ತಿಂಗಳು ಬ್ಲಾಕ್ ಆಗಿರುತ್ತೆ. ಏಕೆಂದರೆ ಕೋಟ್ಯಂತರ ಮೊನಾರ್ಕ್ ಚಿಟ್ಟೆಗಳು Danaus plexippus ವಲಸೆ ಹೂಡುವ ಸಮಯ ಅದು. ವನ್ಯಜೀವಿಗಳ ಬಗ್ಗೆ ಆ ಜನಕ್ಕಿರುವ ತಿಳುವಳಿಕೆ ಮೆಚ್ಚಬೇಕಾದ್ದು.ಮನುಷ್ಯನ ಹೊರೆತ ಪ್ರಾಣಿಗಳಿಗೆ ನಿಗದಿತ ಸ್ಥಳವಿಲ್ಲವೆಂದಲ್ಲ. ಬಹುತೇಕ ಪ್ರಾಣಿಗಳು ಬೌಂಡರಿಗಳನ್ನು ಹಾಕಿಕೊಂಡಿರುತ್ತವೆ. ಇದಕ್ಕೆ ಇಂಗ್ಲೀಷಿನಲ್ಲಿ Territory ಎನ್ನುತ್ತಾರೆ. ಸಸ್ತನಿಗಳು ಸಾಮಾನ್ಯವಾಗಿ ಮೂತ್ರವಿಸರ್ಜನೆಯಿಂದ ತಮ್ಮ ಟೆರಿಟರಿಯನ್ನು ಗುರುತು ಮಾಡಿಕೊಳ್ಳುತ್ತವೆ. ಕೆಳವರ್ಗದ ಪ್ರಾಣಿಗಳಿಗೆ ತಾವಿರುವ ಗೂಡೇ ತಮ್ಮ ಟೆರಿಟರಿಯೆನ್ನಬಹುದು. ಆದರೆ ತಮಗೆ ದೊರಕಬೇಕಾದ ಆಹಾರವು ಸರಿಯಾಗಿ ಸಿಗದಿದ್ದಲ್ಲಿ ಗುಂಪುಗುಂಪಾಗಿ ವಲಸೆ ಹೋಗುತ್ತವೆ. ಎಲ್ಲಿ ಆಹಾರ ಸಿಗುತ್ತೋ ಅಲ್ಲಿ. ಕೇವಲ ಆಹಾರ ಮಾತ್ರವಲ್ಲದೆ ಸೂಕ್ತ ಹವಾಮಾನ, breeding place, ಇವನ್ನೆಲ್ಲ ಅರಸುತ್ತ ವಲಸೆ ಹೂಡುತ್ತವೆ.

ಸಾಲ್ಮನ್ ಎಂಬ ಮೀನು ಸಮುದ್ರದಿಂದ ನದಿಗೆ ವಲಸೆ ಹೋಗಿ ಮೊಟ್ಟೆಯಿಟ್ಟು ಬರುತ್ತೆ. ಇಂಥಾ ವಲಸೆಗೆ Anadromous migration ಎನ್ನುತ್ತಾರೆ. ಈಲ್‍ಗಳು ಇದರ ತದ್ವಿರುದ್ಧ. ನದಿಯಿಂದ ಸಮುದ್ರಕ್ಕೆ ವಲಸೆ ಹೋಗಿ ಮೊಟ್ಟೆಯಿಡುತ್ತೆ. ಇಂಥಾ ವಲಸೆಗೆ Catadromous migration ಎನ್ನುತ್ತಾರೆ.

ಇನ್ನೊಬ್ಬ ಚಾಂಪಿಯನ್ನನ್ನು ಪರಿಚಯ ಮಾಡಿಕೊಳ್ಳೋಣ. ಆರ್ಕ್ಟಿಕ್ ಟರ್ನ್ Sterna paradisaea ಎಂಬ ಈ ಹಕ್ಕಿಯು ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ವರೆಗೂ ವಲಸೆ ಮಾಡಿ ಮೊಟ್ಟೆಯಿಟ್ಟು ಮರಿ ಮಾಡಿ ಮತ್ತೆ ಉತ್ತರ ಧ್ರುವಕ್ಕೆ ಹಾರುತ್ತೆ. ಇದರ ಜೀವಮಾನ ಪರಿಯಂತ ವಲಸೆ ಮಾಡುತ್ತಲೇ ಇರುತ್ತೆ!ಯಾವ ಬೌಂಡರಿಯೂ ಇಲ್ಲ. ನಕ್ಷೆಗಳಿಲ್ಲ. ರಾಜಕೀಯವಿಲ್ಲ.

ಕೊಡಗಿನಲ್ಲಿ ಹುಟ್ಟಿ, ಮೈಸೂರನ್ನು ಹಾದು, ಕನಕಪುರವನ್ನೂ ಸಮೀಪಿಸಿ, ತಮಿಳು ನಾಡ ದಿಕ್ಕಿಗೆ ಹರಿದು, ಬಂಗಾಳ ಕೊಲ್ಲಿಯನ್ನು ಹೊಗುವ ಕಾವೇರಿಗೆ ನಾವು ಕನ್ನಡಿಗರು ಅವರು ತಮಿಳರು ಎಂಬ ಅರಿವಿಲ್ಲದೆ ನಿರಂತರವಾಗಿ ಹರಿಯುತ್ತಿದೆ.. ತಾನು ಚೈನಾ ದೇಶದ್ದೋ, ಟಿಬೆಟ್ಟಿನದೋ, ಭಾರತದ್ದೋ ಎಂಬ ಚಿಂತೆ ಎಳ್ಳಷ್ಟೂ ಎವರೆಸ್ಟಿಗೆ ಇಲ್ಲದೆ ಅಚಲವಾಗಿ ಎತ್ತರವಾಗಿ ನಿಂತಿದೆ.. ಕೇರಳದ ಕರಾವಳಿಯಲ್ಲಿ ಜನಿಸಿ ಮಹಾರಾಷ್ಟ್ರದ ತುದಿಯವರೆಗೂ ಪ್ರಯಾಣ ಮಾಡುವ ಮುಂಗಾರಿಗೆ ಭೂಗೋಳ ಗೊತ್ತೇ ಹೊರೆತು ರಾಜಕೀಯ ಗೊತ್ತಿಲ್ಲ.. ನಮಗೆ?

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸ್ವರ್ಡಿನವರು |
ದೇಶ ಕಾಲ ವಿಭಾಗ ಮನದ ರಾಜ್ಯದೊಳಿರದು
ಶ್ವಾಸವದು ಬೊಮ್ಮನದು - ಮಂಕುತಿಮ್ಮ ||

-ಅ
23.03.2009
12AM

Tuesday, March 17, 2009

ಬಿಸಿಲೆಯ ನೆನಪು

ಮಳೆಗಾಲ ಆರಂಭವಾಗಿತ್ತು. ದಕ್ಷಿಣ ಕನ್ನಡದ ಮಳೆಯೆಂದರೆ ಸಾಮಾನ್ಯವೇ? ಹಾಸನ ಜಿಲ್ಲೆಗೆ ಸೇರಿದೆಯಾದರೂ ದ.ಕ. ಗೆ ಅತ್ಯಂತ ಸಮೀಪದಲ್ಲಿರುವ ಘಟ್ಟದ ಮೊದಲ ಮಳೆಯನ್ನು ಅನುಭವಿಸುವ ಮಜವೇ ಬೇರೆ!

ಎಂದೋ ಯಾವುದೋ ಜೋರು ಮಳೆಗೆ ಸಿಲುಕಿ ನೆಲಕ್ಕುರುಳಿದ ಸೇತುವೆಯು ಇಂದೂ ತುಕ್ಕು ಹಿಡಿಯುತ್ತ ಹಾಗೇ ಬಿದ್ದಿದೆ ಬಿಸಿಲೆಯ ನೇಚರ್ ಕ್ಯಾಂಪ್ ಬಳಿ. ರಾಜೇಶ್ ಇಲ್ಲಿ ಮಕ್ಕಳ ಕ್ಯಾಂಪ್ ಮಾಡುತ್ತಿದ್ದರಂತೆ. "ನೀವೂ ಮಾಡ್ರೀ, ಮಕ್ಕಳಿಗೆ ಬಹಳ ಸಂತೋಷ ಆಗುವ ಜಾಗ ಅದು. ಜೊತೆಗೆ ಬಯೋಡೈವರ್ಸಿಟಿ ಕೂಡ ಚೆನ್ನಾಗಿ ವಿವರಿಸಬಹುದು.." ಎಂದು ಎಷ್ಟೋ ಬಾರಿ ಹೇಳಿದ್ದಾರೆ ನನಗೆ. ಮಾನ್ಯ ಅರಣ್ಯ ಇಲಾಖೆಯು ಮನಸ್ಸು ಮಾಡಬೇಕಷ್ಟೆ. ನಮ್ಮ ಶಾಲೆಯ ಮಕ್ಕಳನ್ನೇ ಕರೆದೊಯ್ಯಲು ಕಾಯುತ್ತಿದ್ದೇನೆ. ಆ ಸೇತುವೆಯನ್ನು ದಾಟಿದ ಅನತಿ ದೂರದಲ್ಲೇ ಬೇಸ್ ಕ್ಯಾಂಪು.

ನಾಲ್ಕು ವರ್ಷಗಳ ಕೆಳಗೆ ನಮ್ಮ ತಂಡವು ಇಲ್ಲಿ ಅಡ್ವೆಂಚರ್ ಮಾಡಿಕೊಂಡು ಬಂದಿದ್ದನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ.

ಅಡ್ವೆಂಚರ್ ಒಂದು:

ಹಿರಿಯ ಮಿತ್ರ ಗೋವಿಂದ್ ರಾಜ್ ಅವರು ನಮ್ಮ ಚಾರಣದ ಮುಖ್ಯ ಸದಸ್ಯರು. ಮೊದಲ ಮಳೆಯ ತುಂತುರು ನಮ್ಮೆಲ್ಲರನ್ನೂ ಹುಮ್ಮಸ್ಸಿನಿಂದ ಕೂಡಿಸಿತ್ತಾದರೂ ದುರಾದೃಷ್ಟವಶಾತ್ ಗೋವಿಂದ್ ರಾಜ್‍ಗೆ ಎಂದೂ ಆಗದ ಸಮಸ್ಯೆಯೊಂದಾಗಿಬಿಟ್ಟಿತು. ಕ್ಯಾಂಪ್ ಸೈಟಿನಿಂದ ಎಡಕ್ಕೆ ಚಾರಣ ಮಾಡಿದ ನಾವು ಗುಡ್ಡವೊಂದನ್ನು ಏರುತ್ತಿದ್ದಾಗ ದೇಹದ ಯಾವುದೋ ಮೂಲೆಯೊಂದರಲ್ಲಿ ಸ್ಟ್ರೋಕ್ ಹೊಡೆದಂತಾಗಿ ಬಿದ್ದುಬಿಟ್ಟರು ಗೋವಿಂದ್ ರಾಜ್. ಪಶ್ಚಿಮಘಟ್ಟದ "ಕೋರ್" ಕಾಡಾಗಿರುವ ಬಿಸಿಲೆಯ ಸುತ್ತಮುತ್ತ ಯಾವ ಆಸ್ಪತ್ರೆಯಿರಲಿ, ಒಬ್ಬ ನರಪಿಳ್ಳೆಯನ್ನು ಹುಡುಕಲೂ ಅಸಾಧ್ಯ. ಐದಾರು ನಿಮಿಷಗಳ ನಂತರ ಚೇತರಿಸಿಕೊಂಡರು. ಮತ್ತೆ ಚಾರಣಕ್ಕೆ ಸಿದ್ಧರಾಗಿದ್ದು ಎಲ್ಲರಿಗೂ ಅಚ್ಚರಿಯನ್ನು ತಂದರೂ ಆತಂಕವೇನೂ ಕಡಿಮೆಯಾಗಲಿಲ್ಲ.

ಅಡ್ವೆಂಚರ್ ಎರಡು:

ಕ್ಯಾಂಪ್ ಸೈಟಿನಿಂದ ಪೂರ್ವದಿಕ್ಕಿಗೆ ನದಿಯ ಪಕ್ಕದಲ್ಲೇ ಒಂದು ಸುದೀರ್ಘ ಚಾರಣ. ದಾರಿಯು ಸ್ವಲ್ಪ ಎಡಕ್ಕೆ ಸರಿದು ನಂತರ ನೀರಿಗಿಳಿಯುತ್ತೆ. ನದಿ ದಾಟಿ ಇನ್ನೊಂದು ದಡಕ್ಕೆ ಹೋಗಿ ಚಾರಣವನ್ನು ಮುಂದುವರಿಸಬೇಕು. ನಮ್ಮ ಹನ್ನೆರಡು ಜನರ ಗುಂಪು ಎರಡು ಗುಂಪಾಗಿಬಿಟ್ಟಿತ್ತು. ನಾನು ಹಿಂದಿನ ಗುಂಪಿನಲ್ಲಿದ್ದೆ. ಮುಂದಿನ ಗುಂಪು ಬಹಳ ವೇಗವಾಗಿ ನಡೆಯುವವರಾಗಿದ್ದೂ ನಮ್ಮ ಕರೆಗಳಿಗಾಗಲೀ, ಕಣ್ಣೋಟಕ್ಕಾಗಲೀ ನಿಲುಕುವಂತಿರಲಿಲ್ಲ. ದಾರಿಯುದ್ದಕ್ಕೂ ಆನೆ ಲದ್ದಿಯು ತಿರುಪತಿಯ ಪ್ರಸಾದದಂತೆ ಹೇರಳವಾಗಿತ್ತು. ಬಿಸಿಲೆಯ ಅರಣ್ಯದಲ್ಲಿ ಆನೆಗಳು ಸಾಮಾನ್ಯವೆಂದು ಅರಿತಿದ್ದೆವಾದರೂ ನಮ್ಮ ಕ್ಯಾಂಪ್ ಸೈಟಿನಲ್ಲೇ ಇರಬಹುದೆಂಬ ಕಲ್ಪನೆ ಆ ಮುಂದಿನ ಗುಂಪಿಗಿರಲಿಲ್ಲ. ಲದ್ದಿಯು ಬಹಳ ಫ್ರೆಶ್ ಆಗಿತ್ತು. ಕಂಪು ಮೂಗಿಗೆ ರಾಚುತ್ತಿತ್ತು. ನಮ್ಮ ಗುಂಪು ಹೆಚ್ಚು ದೂರ ಹೋಗಲಿಲ್ಲ. ಮುಂದಿನ ಗುಂಪಿನವರು ಇದ್ದಕ್ಕಿದ್ದಂತೆ ನಮ್ಮೆಡೆಗೆ ಧಾವಿಸಿ ಬಂದು "ಆನೆ.. ಆನೆ..." ಎನ್ನತೊಡಗಿದರು.

ಅಡ್ವೆಂಚರ್ ಮೂರರ ನಂತರ ಮುಂದುವರೆಯುವುದು...

ಅಡ್ವೆಂಚರ್ ಮೂರು:

ಅವರು "ಆನೆ ಆನೆ.." ಎನ್ನುತ್ತಿದ್ದಂತೆಯೇ ನಮ್ಮ ಚಾರಣವನ್ನು ಅಲ್ಲೇ ನಿಲ್ಲಿಸಿ, ಹಿಂದೆ ತಿರುಗಿ ಕ್ಯಾಂಪ್ ಸೈಟಿನತ್ತ ಹೆಜ್ಜೆ ಹಾಕ ತೊಡಗಿದೆವು. ಅವರನ್ನು ಆನೆ ಕಥೆ ಕೇಳಲು ಎಲ್ಲರಿಗೂ ಆಸಕ್ತಿಯಿದ್ದರೂ ಸದ್ದು ಮಾಡಬಾರದೆಂಬ ಅರಿವು ಇದ್ದುದರಿಂದ ಎಲ್ಲರೂ ತಮ್ಮ ತಮ್ಮ ತುಟಿಗಳನ್ನು ಹೊಲೆದುಕೊಂಡಿದ್ದರು. ಒಂದು ಘೀಳು ಕೇಳಿಸಿದೊಡನೆ ಎಲ್ಲರ ಎದೆಯು ಒಮ್ಮೆ ಝಲ್ಲೆಂದರೂ ಏನೋ ಸಂತೋಷದ ಭಾವನೆ. ಆನೆಯನ್ನು ನೋಡಿದ ಗುಂಪಿಗಿರುವ ಅದೃಷ್ಟ ನಮಗಿಲ್ಲವಲ್ಲ ಎಂಬ ಕೊರಗು ಕೂಡ ಎರಡನೆಯ ಗುಂಪಿನವರ ಮುಖಗಳಲ್ಲಿ ಎದ್ದು ಕಾಣುತ್ತಿತ್ತು. ಸುರಕ್ಷಿತ ದೂರಕ್ಕೆ ಬಂದ ನಂತರ ನಮ್ಮ ಧ್ವನಿಗಳು ಹೊರಬರತೊಡಗಿದವು. "ಎಷ್ಟು ಆನೆ? ಎಲ್ಲಿತ್ತು? ಮರಿ ಇತ್ತಾ? ಅಟ್ಟಿಸಿಕೊಂಡು ಬಂತಾ?" ಎಂದೆಲ್ಲಾ ಕೇಳುವ ಹೊತ್ತಿಗೆ ಗೆಳೆಯ ಬಾಲ್‍ರಾಜ್ ತಮ್ಮ ಕೈಗೆ ಸಿಕ್ಕ ಹಾವಿನ ಮರಿಯೊಂದನ್ನು ಹಿಡಿದುಕೊಂಡು, "ಅರುಣ್ ಇದ್ಯಾವ್ದೋ ಹಾವಿದೆ ನೋಡು???" ಎಂದರು. ನಾನು ಮೊದಲೇ ಸರ್ಪಪ್ರಿಯ. ಆನೆಯ ಪ್ರಶ್ನೆಗಳನ್ನು ಪೋಸ್ಟ್ ಪೋನ್ ಮಾಡಿ ಬಾಲ್‍ರಾಜ್‍ರತ್ತ ಓಡಿಹೋದೆ. ಆದರೆ ನನಗಾದ ಗಾಬರಿ ಅಷ್ಟಿಷ್ಟಲ್ಲ. "ಬಿಸಾಕ್ರೀ ಮೊದ್ಲು, ಅದು ಕಿಂಗ್ ಕೋಬ್ರಾ...." ಎಂದೆ... ಬಾಲ್‍ರಾಜ್ ಯಾವುದೋ ಹುಮ್ಮಸ್ಸಿನಲಿ ಕಾಳಿಂಗಸರ್ಪದ ಮರಿಯೆಂದೂ ಅರಿವಿಲ್ಲದೆ ಬಾಲವನ್ನು ಹಿಡಿದು ಕೈಗೆತ್ತಿಕೊಂಡುಬಿಟ್ಟಿದ್ದರು. ಇನ್ನೂ ಮಜವೆಂದರೆ, ಬಿಸಾಡಿದ ನಂತರ "ಕಿಂಗ್ ಕೋಬ್ರಾ ಅಂದ್ರೆ?" ಎಂದು ನನ್ನ ಕೇಳಿದರು. ಅವರಿಗೆ ಕಿಂಗ್ ಕೋಬ್ರದ ವೈಶಿಷ್ಟ್ಯವನ್ನು ವಿವರಿಸಿದ ಬಳಿಕ ಸುರಿಯುತ್ತಿದ್ದ ಮುಂಗಾರು ಮಳೆಯಲ್ಲಿಯೂ ಎಲ್ಲರೂ ಬೆವೆತು ಹೋಗಿದ್ದೆವು. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಮಳೆಗಾಲದಲ್ಲಿ ಸಿಗುವ ಜಿಗಣೆಗಳಂತೆ ನಮ್ಮ ಕಾಲುಗಳ ಬಳಿ ಸುಮಾರು ಇಪ್ಪತ್ತು ಇಪ್ಪತ್ತೈದು ಇದೇ ಸರ್ಪದ ಮರಿಗಳು ಕಂಡವು. "ರೀ.. ಮೊದ್ಲು ಜಾಗ ಖಾಲಿ ಮಾಡ್ಬೇಕು..." ಎಂದು ಗೋವಿಂದ್ ರಾಜ್ ಕೂಗು ಹಾಕಿದರು.

ಈಗ ಅಡ್ವೆಂಚರ್ ಎರಡಕ್ಕೆ ಮತ್ತೆ ಬಂದೆ.

ಮುಂದಿನ ಗುಂಪು ಕಾಡುದಾರಿಯಲ್ಲಿ ವೇಗವಾಗಿ ನಡೆಯುತ್ತ ನದಿಗೆ ಇಳಿಯಲು ಹೊರಟಿದ್ದಾರೆ. ಆನೆಗಳು ನದಿ ನೀರಿನಲ್ಲಿ ಆಟವಾಡುತ್ತಿದ್ದುದು ಅವರ ಕಣ್ಣಿಗೆ ಕಂಡಿಲ್ಲ. ಆನೆಯ ಲದ್ದಿಯ ವಾಸನೆಯೂ ಸಹ ಅವರ ಗಮನಕ್ಕೆ ಬಂದಿಲ್ಲ. ಇನ್ನೇನು ನೀರಿಗಿಳಿಯಬೇಕು, ಅಷ್ಟರಲ್ಲಿ ಆರು ಆನೆಗಳಿದ್ದ ಗುಂಪಿನ ಒಂದು ಸದಸ್ಯ "ವಾರ್ನಿಂಗ್" ಕೊಟ್ಟಿದೆ. ಆ ಘೀಳನ್ನು ಹಠಾತ್ತನೆ ಕೇಳಿ ಬೆಚ್ಚಿಬಿದ್ದ ಸಂದೀಪ್ ಕೆಳಗೆ ಜಾರಿ ಬಿದ್ದಿದ್ದಾರೆ. ನೀರೊಳಕ್ಕೇ ಬಿದ್ದು ಬಟ್ಟೆಯೆಲ್ಲ ಒದ್ದೆ ಮಾಡಿಕೊಂಡಿದ್ದಾರೆ. ನಂತರ ಆನೆಗಳು ಅಟ್ಟಿಕೊಂಡು ಬರುವ ಮುನ್ನ ಜಾಗ ಖಾಲಿ ಮಾಡಿದ್ದಾರೆ. ಆನೆಗಳು ಇವರನ್ನು ಹೆದರಿಸಿತ್ತೇ ವಿನಾ ಅಟ್ಟಿಸಿಕೊಂಡು ಬರಲಿಲ್ಲ. ಅವುಗಳಿಗೆ ಜಲಕ್ರೀಡೆ ಮುಖ್ಯವಾಗಿತ್ತು.

ಅಡ್ವೆಂಚರ್ ನಾಲ್ಕು

ಅರ್ಧಕ್ಕೇ ನಿಂತ ಚಾರಣದಿಂದ ಬೇಸತ್ತ ನಮ್ಮ ತಂಡ ಮೇಯ್ನ್ ರೋಡಿಗೆ ನಡೆದು ಬಂದಿತು. ಹಿಂದಿನ ದಿನ ನಮ್ಮನ್ನು ಅಲ್ಲಿಗೆ ಬಿಟ್ಟು ಹೋದ ಜೀಪಿನವನಿಗೆ ಬರಹೇಳಿದ್ದೆವು. ಅವನನ್ನೇ ಎದುರು ನೋಡುತ್ತಿರುವಾಗ ಬೈಕಿನಲ್ಲಿ ಇಬ್ಬರು ಖಾಕಿಧಾರಿಗಳು ಬಂದರು. ಪೋಲೀಸಿನವರೋ ಫಾರೆಸ್ಟಿವರೋ ಇರಬೇಕೆನ್ನಿಸಿತು.

"ಎಲ್ಲಿ ಹೋಗಿದ್ರಿ?" ಕೇಳಿದರು ಅವರು.

ಸುತ್ತ ಎಲ್ಲೆಡೆಯೂ ನೂರಾರು ಅಡಿಗಳೆತ್ತರದ ಮರಗಳುಳ್ಳ ದಟ್ಟ ಅರಣ್ಯ. ಮಧ್ಯೆ ಮಾತ್ರ ಟಾರ್ ರಸ್ತೆ. ಮೌನ. ಅವರು ಮೆತ್ತಗೆ ಕೇಳಿದ್ದೂ ಸಹ ನಮಗೆ ಜೋರಾಗಿ ಕೇಳಿಸಿತು.

"ಎಲ್ಲಿಗೆ ಹೋಗಿದ್ರಿ?" ಮತ್ತೊಮ್ಮೆ ಕೇಳಿದರು.

ನಾನು "ಟ್ರೆಕ್ಕಿಂಗ್‍ಗೆ ಹೋಗಿದ್ದೆವು." ಎಂದು ಸಹಜವಾಗಿಯೇ ನಿರ್ಭಯವಾಗಿ ಉತ್ತರಿಸಿದೆ.

"ರಾತ್ರಿ?" ಎಂದು ಮರುಪ್ರಶ್ನಿಸಿದರು. ಸಾಮಾನ್ಯವಾಗಿ ಹೀಗೆ ಪೋಲೀಸಿನವರೋ, ಫಾರೆಸ್ಟಿನವರೋ ಕೇಳುವ ಪ್ರಶ್ನೆಗಳಿಗೆ ಬಹಳ ಹುಷಾರಾಗಿ ಉತ್ತರ ಕೊಡಬೇಕಾಗುತ್ತೆ. ಅದರಲ್ಲೂ ಕಾನೂನು ಗೊತ್ತಿರದ ಜನಕ್ಕಂತೂ ಏಮಾರಿಸುವುದು ಇವರುಗಳ ಜಾಯಮಾನವೇ ಸರಿ. ಹಣ ಕೀಳುವುದು ಇವರ ಹವ್ಯಾಸವೆನ್ನುವುದು ನನ್ನನುಭವ. ನಾನು ಉತ್ತರಿಸುವ ಮುನ್ನವೇ ಬಾಲರಾಜರ ಸ್ನೇಹಿತರೊಬ್ಬರು ಮಧ್ಯಪ್ರವೇಶಿಸಿ, "ರಾತ್ರಿ ಅಲ್ಲೇ ಉಳಿದುಕೊಂಡಿದ್ದೆವು.." ಎಂದು ಬಿಟ್ಟರು.

ಶುರುವಾಯಿತಿನ್ನು ತಕರಾರು ಎಂದು ಬಗೆದೆ. "ಪರ್ಮಿಷನ್ ಇದೆಯಾ?" ಎಂದು ಕೇಳಿದರು. ನಮ್ಮ ಗುಂಪಿನಲ್ಲಿದ್ದ ಆಪ್ತ ಗೆಳತಿ ಅನ್ನಪೂರ್ಣ ಮಾತನಾಡುವುದು ಯಾವಾಗಲೂ ನೇರವಾಗಿ ಮತ್ತು ದಿಟ್ಟವಾಗಿ. "ಪರ್ಮಿಷನ್ ಇಲ್ಲ. ಆದರೆ, ನಮಗೆ ಅದರ ಅರಿವಿರಲಿಲ್ಲ. ಕ್ಷಮಿಸಿ. ಈಗ ಹೊರಟಿದ್ದೇವೆ.." ಎಂದು ಹೇಳಿದರು. ಆ ಗಾರ್ಡುಗಳು ಇನ್ನೇನು ಹೆಚ್ಚು ಹೇಳಲಿಲ್ಲ. "ಆರು ಗಂಟೆಗೆ ಇಲ್ಲೇ ಬಸ್ಸು ಬರುತ್ತೆ. ಕುಕ್ಕೆಗೆ ಹೋಗಿ. ಇಲ್ಲಿ ಹುಷಾರು. ಮೂರು ದಿನಗಳ ಕೆಳಗೆ ಈ ಕಾಡೊಳಗೆ, ಕ್ಯಾಂಪ್ ಸೈಟಿನಲ್ಲೇ ಆರು ಆನೆಗಳು ಇಬ್ಬರನ್ನು ತುಳಿದು ಸಾಯಿಸಿತ್ತು. ಇಲ್ಲಿಗೆ ಬರುವ ಮುನ್ನ ಪರ್ಮಿಷನ್ ತೆಗೆದುಕೊಂಡು ಬನ್ನಿ" ಎಂದು ಹೇಳಿ, ಒಂದು ಮುಗುಳ್ನಗೆಯನ್ನು ನಮ್ಮತ್ತ ಎಸೆದು ಹೊರಟುಬಿಟ್ಟರು.

ಅವರು ಹಾಗೆ ಹೇಳಿದಾಗ ನಮ್ಮೆಲ್ಲರ ಮನಸ್ಸಿನಲ್ಲಾದದ್ದು ಅಡ್ವೆಂಚರ್ ಐದು.

ಈ ಐದು ಅಡ್ವೆಂಚರುಗಳೂ ನೆನಪಾಗುತ್ತಿದೆ. ಟ್ರೆಕ್ಕಿಂಗ್ ಮಾಡಿ ಬಹಳ ದಿನಗಳಾಗಿವೆ. ಮತ್ತೆ ಬಿಸಿಲೆಗೆ ಹೋಗೇ ಇಲ್ಲ. ನಾಲ್ಕು ವರ್ಷಗಳಾಗಿವೆ. ಕೈ ಬೀಸಿ ಕರೆಯುತ್ತಿದೆ. ಹೋಣಾ???? ಎಂದು ನನ್ನಾಪ್ತರನ್ನು ಕೇಳಬೇಕೆನ್ನಿಸುತ್ತಿದೆ. ಅವರುಗಳು ಇದನ್ನು ಆಲಿಸಿದ್ದಾರೆಂದು ಭಾವಿಸುತ್ತೇನೆ....

-ಅ
17.03.2009
11.30PM

Sunday, March 08, 2009

ವಿಚಿತ್ರ ಸತ್ಯಗಳು

ಸತ್ಯ - ೧

ಕಾಲಿನ ಮೇಲೆ ಕಲ್ಲು ಬಿದ್ದರೆ, ಯಾರಾದರೂ ಹೊಡೆದರೆ, ಬಾಗಿಲಿಗೆ ಕೈ ಸಿಕ್ಕಿಕೊಂಡರೆ, ನೋವಾಗುತ್ತಲ್ಲವೇ? ಆಗದೆ ಇದ್ದರೆ ಕುಷ್ಠರೋಗದ ಪರೀಕ್ಷೆ ಮಾಡಿಸಿಕೊಳ್ಳುವುದೊಳಿತು. ಈ ರೀತಿಯ ನೋವುಗಳು ನರಗಳನ್ನಾಧರಿಸಿದ್ದು. ನೋಕಿಸೆಪ್ಟಾರ್ಸ್ ಎಂಬ ಜೀವಕೋಶಗಳಿರುವುದರಿಂದಲೇ ನಮಗೆ ನೋವಾಗುವುದು. ಈ ಜೀವಕೋಶಗಳನ್ನು ಇಲ್ಲವಾಗಿಸಿಬಿಟ್ಟರೆ ನೋವೇ ಇರುವುದಿಲ್ಲ. ಕುಷ್ಠರೋಗದಲ್ಲೂ ಹೆಚ್ಚು ಕಮ್ಮಿ ಹೀಗೇ ಆಗುವುದು. ಆದರೆ ಸ್ಪರ್ಶದ ಅರಿವಾಗುತ್ತೆ. ಎಷ್ಟು ಒತ್ತಡ ಹೇರಲ್ಪಟ್ಟಿದೆಯೆಂಬುದೂ ಅರಿವಾಗುತ್ತೆ. ನೋವು ಮಾತ್ರವಾಗುವುದೇ ಇಲ್ಲ. ಹುಳುಗಳು ಮತ್ತು ಆರ್ಥ್ರೋಪೋಡ್‍ಗಳಿಗೆ ನೋಕಿಸೆಪ್ಟಾರುಗಳು ಇರುವುದೇ ಇಲ್ಲ. ಅವುಗಳು ನೋವುಗಳಿಂದ ಸದಾ ಮುಕ್ತವಾಗಿರುತ್ತವೆ. ಒಂದು ಹುಳುವಿನ ಕಾಲು ಹಿಡಿದುಕೊಂಡರೆ ಅದು ಬಲವಂತವಾಗಿ ಬಿಡಿಸಿಕೊಳ್ಳಲು ಯತ್ನಿಸುತ್ತೆ. ಬಿಟ್ಟ ತತ್‍ಕ್ಷಣವೇ ಆರಾಮಾಗಿ ಮುನ್ನಡೆದು ಹೋಗುತ್ತೆ. ನೋವಾದರೆ ಹೀಗಾಗಲು ಸಾಧ್ಯವಿಲ್ಲ.

ಸತ್ಯ - ೨

ಹುಳುಹುಪ್ಪಟೆಗಳಿಗೆ ನೋವು ಹೇಗೆ ಇರುವುದಿಲ್ಲವೋ ಹಾಗೆಯೇ ಭಾವನೆಗಳೂ ಇರುವುದಿಲ್ಲ. ಹಸಿವು, ಬಾಯಾರಿಕೆ, ಆಯಾಸ, ಲೈಂಗಿಕ ಕಾಮ ಮಾತ್ರ ಇರುತ್ತೆ. ಇವು ಯಾವುವೂ ಭಾವನೆಗಳಲ್ಲ.

ಸತ್ಯ - ೩

ಪ್ರಾಣಿಗಳೂ ನಮ್ಮಂತೆ ಕನಸು ಕಾಣುತ್ತವೆ. ಕನಸುಗಳಿಗೆ ಅನೇಕರು ಪೂರ್ವಜನ್ಮದ, ಪುನರ್ಜನ್ಮದ ಕಥೆಯ ಲೇಪನವನ್ನು ಬಳಿಯುವುದುಂಟು. ವಿಜ್ಞಾನವು ಕನಸುಗಳ ಬಗ್ಗೆ ಇನ್ನೂ ಖಚಿತವಾದ ನಿಖರವಾದ ಉತ್ತರವನ್ನು ಕಂಡುಕೊಂಡಿಲ್ಲ. ನಮ್ಮ ಮನೆಯಲ್ಲೇ ನನ್ನ ಮುದ್ದಿನ ಬೆಕ್ಕು ನನ್ನ ತೋಳಿನ ಮೇಲೆ ಮಲಗಿಕೊಳ್ಳುವುದನ್ನು ರೂಢಿಸಿಕೊಂಡಿತ್ತು. ನನ್ನ ತೋಳಿರದಿದ್ದರೆ ಅದಕ್ಕೆ ನಿದ್ರೆಯಿಲ್ಲ, ಬೆಕ್ಕಿರದಿದ್ದರೆ ನನಗೆ ನಿದ್ರೆಯಿಲ್ಲಯೆನ್ನುವಷ್ಟರಮಟ್ಟಿಗೆ. ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಗಾಢನಿದ್ರೆಯಲ್ಲಿರುತ್ತಿದ್ದ ಅದು ಗಬಕ್ಕನೆ ನನ್ನ ಕೈಗೆ ಬಾಯಿ ಹಾಕುವುದೋ, ತನ್ನೆರಡು ಕಾಲುಗಳಿಂದಲೂ ನನ್ನ ಕೈಯನ್ನು ಬಲವಾಗಿ ಹಿಡಿದುಕೊಳ್ಳುವುದೋ ಮಾಡುತ್ತಿತ್ತು. ಆಮೇಲೆ "ಏಯ್ ಯಾಕೇ? ನಾನೇ ಕಣೇ.." ಎಂದು ಗದರಿದ ಮೇಲೆ ಕಣ್ಬಿಟ್ಟು ನನ್ನನ್ನು ನೋಡಿ, ಕಣ್ಣು ಮೀಟಿ, ಮಿಯಾವ್ ಎನ್ನುತ್ತ ಸಾರಿ ಕೇಳಿ ಮತ್ತೆ ಮಲಗುತ್ತಿತ್ತು.


The Dreaming Dog - Funny bloopers are a click away

ಸತ್ಯ - ೪

ಪ್ರಾಣಿಗಳೂ ನಿದ್ರಿಸುತ್ತವೆ. ನಾವು ಗಮನಿಸಿರುತ್ತೇವೆ, ನಾಯಿಗಳು ನಿದ್ರಿಸುತ್ತಿರುತ್ತವೆ ಆದರೆ ಎಲ್ಲೋ ದೂರದಲ್ಲಿ ಗೇಟು ಶಬ್ದವಾದ ಒಡನೆಯೇ ಬೊಗಳುತ್ತವೆ. ಸಾಮಾನ್ಯವಾಗಿ ಪ್ರಾಣಿಗಳ ನಿದ್ರೆ ತಾಮಸಿಕವಾಗಿರುವುದಿಲ್ಲ ನಮ್ಮ ಹಾಗೆ. ಎಷ್ಟೋ ಕಡೆ ಮನೆಯವರು ನಿದ್ರಿಸುತ್ತಿರುವಾಗ ಕಳ್ಳ ಬಂದು ಮನೆಯೆಲ್ಲಾ ದೋಚಿಕೊಂಡು ಹೋಗಿರುವ ಸನ್ನಿವೇಶಗಳೂ ಇವೆ. ಪ್ರಾಣಿಗಳು ಹಾಗಲ್ಲ. ಡಿಸ್ಟರ್ಬ್ ಆದ ಕೂಡಲೆ ಎದ್ದುಬಿಡುತ್ತವೆ. ಯಾವ ಯಾವ ಪ್ರಾಣಿ ಎಷ್ಟೆಷ್ಟು ನಿದ್ರಿಸುತ್ತೆ ಎಂಬ ಪಟ್ಟಿ ಇಲ್ಲಿದೆ.

ಸತ್ಯ - ೫

ನಾಯಿಗಳಿಗೆ, ಬೆಕ್ಕುಗಳಿಗೆ, ಹುಲಿ ಸಿಂಹ ಚಿರತೆಗಳಿಗೆ, ನಮಗೆ ರೆಪ್ಪೆಗಳಿವೆ. ಕಣ್ಮುಚ್ಚಿ ನೆಮ್ಮದಿಯಿಂದ ಮಲಗುತ್ತೇವೆ. ಮೀನುಗಳು, ಹಾವುಗಳು ಏನು ಮಾಡುತ್ತವೆ? ಅವೂ ನಿದ್ರಿಸುತ್ತವೆಯೇ? ಹೌದು. ಹಾವುಗಳು ನಿದ್ರಿಸುವಾಗ ಅವು ಸತ್ತು ಹೋಗಿವೆಯೆಂದೂ ತಪ್ಪು ತಿಳಿದುಕೊಳ್ಳುವಂತಿರುತ್ತೆ. ಮೀನುಗಳೂ ಸಹ ನಿದ್ರಿಸುತ್ತವೆ. ಮೀನಿನ ನಿದ್ರೆಯನ್ನು ವಿಶ್ರಾಂತಿಯೆನ್ನಬಹುದಷ್ಟೆ. ರೆಪ್ಪೆಗಳಿಲ್ಲದ ಇವು ಬಂಡೆ ಸಂದಿಯಲ್ಲೋ, ಮರದ ದಿಮ್ಮಿಯಡಿಯೋ ಒರಗಿಕೊಂಡು ಕಣ್ಣು ಬಿಟ್ಟುಕೊಂಡೇ ನಿದ್ರಿಸುತ್ತವೆ.

ಸತ್ಯ - ೬

ಹುಳುಗಳೂ ನಿದ್ರಿಸುತ್ತವೆ!! ಬಹುಪಾಲು ಹುಳುಗಳು ನಿಶಾಚರಿ ಜೀವಿಗಳಾದ್ದರಿಂದ ಹಗಲಿನಲ್ಲಿ ಸಂದಿಗಳಲ್ಲಿ ನಿದ್ರಿಸುತ್ತವೆ. ಇವುಗಳಿಗೂ ಎವೆಯಿರದ ಕಾರಣ ಇವು ನಿದ್ರಿಸುವುದು ನಮಗೆ ಗೊತ್ತಾಗುವುದಿಲ್ಲ.

ಸತ್ಯ - ೭

ನಿದ್ರೆಯ ಬಗ್ಗೆ ಹೇಳೋದು ಇನ್ನೂ ಇದೆ. ಗಿಡಗಳೂ ಸಹ ನಿದ್ರಿಸುತ್ತವೆ ಎಂದರೆ ಅತಿಶಯೋಕ್ತಯಲ್ಲ. ಹಸಿರು ಗಿಡಗಳು ರಾತ್ರಿಯ ವೇಳೆ ತಟಸ್ಥವಾಗಿರುತ್ತವೆ. ದ್ಯುತಿಸಂಶ್ಲೇಷಣ ಕ್ರಿಯೆಯನ್ನು (Photosynthesis) ನಿಲ್ಲಿಸುತ್ತವೆ. ಹಗಲಿನಲ್ಲಿ ಇಂಗಾಲದ ಡೈ ಆಕ್ಸೈಡ್ ತೆಗೆದುಕೊಂಡು ಆಮ್ಲಜನಕವನ್ನು ಹೊರಹಾಕುವ ಗಿಡಮರಗಳು ರಾತ್ರಿಯ ಹೊತ್ತು ನಮ್ಮಂತೆಯೇ ಉಸಿರಾಡುತ್ತವೆ. ಬೇರಾವ ಚಟುವಟಿಕೆಯನ್ನೂ ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ರಾತ್ರಿಯ ಹೊತ್ತು ಈ ಹಸಿರು ಗಿಡಗಳು ನಿದ್ರಿಸುತ್ತವೆ ಎಂದು ಹೇಳುತ್ತೇವೆ. ಇನ್ನು ಪರಾವಲಂಬಿ ಗಿಡಗಳ ವಿಷಯಕ್ಕೆ ಬರೋಣ. ಅಣಬೆಯಂತಹ ಗಿಡ. ರಾತ್ರಿಯ ವೇಳೆ ಆಹಾರಕ್ಕಾಗಿ ಈ ಗಿಡಗಳೂ ಸಹ ಯಾವುದೇ ಕೆಲಸ ಮಾಡದೇ ಇರುವುದರಿಂದ ಇವೂ ಸಹ ಮಲಗುತ್ತವೆಯೆಂದೇ ಹೇಳಬೇಕು.

ಸತ್ಯ - ೮

ನಾವು ಹಾಸ್ಯ ಮಾಡಿಕೊಂಡು ನಗುತ್ತೇವೆ. ದುಃಖ ತೋಡಿಕೊಂಡು ಅಳುತ್ತೇವೆ. ಹುಳುಗಳಿಗಾದರೋ ಭಾವನೆಗಳಿಲ್ಲವೆಂದು ತಿಳಿದುಕೊಂಡಾಯಿತಷ್ಟೆ. ಗಿಡಗಳಿಗೂ ನೋವನ್ನುಂಟು ಮಾಡುವ ಜೀವಕೋಶಗಳಾಗಲೀ ಭಾವನೆಗಳಾಗಲೀ ಇರುವುದಿಲ್ಲ. ಇನ್ನು ಉಳಿದ "ಉನ್ನತ" ಪ್ರಾಣಿಗಳೂ ನಗು - ಅಳುಗಳನ್ನು ಅನುಭವಿಸುತ್ತವೆಯೇ? ಹಸುಗಳ, ಆನೆಗಳ ಕಣ್ಣುಗಳಿಂದ ನೀರು ಹರಿದುಬರುವುದನ್ನು ನಾವು ನೋಡಿದ್ದೇವಲ್ಲವೆ? ಆದರೆ ಈ ನೀರಿಗೂ ಅಳುವಿಗೂ ಯಾವುದೇ ಸಂಬಂಧವಿಲ್ಲ. ದುಃಖದಿಂದ ಅತ್ತಾಗ ಬರುವ ಕಣ್ಣೀರಲ್ಲ ಅದು. ಪ್ರಾಣಿಗಳು ನೋವಿನಿಂದ ನರಳುತ್ತವೆ, ಕಿರುಚುತ್ತವೆ, "ಅಳುತ್ತವೆ". ಆದರೆ ಕಂಬನಿಗರೆಯುವುದಿಲ್ಲ.ಪ್ರಾಣಿಗಳು ಸಂಭಾಷಣೆಯನ್ನು ಮಾಡುತ್ತವೆನ್ನುವುದು ಗೊತ್ತಿದೆ. ಅಂತೆಯೇ ಎರಡು ಪ್ರಾಣಿಗಳು ಸಂಭಾಷಿಸಿಕೊಂಡು ಮುದಗೊಂಡೋ, ತಮಾಷೆಯಾಗೋ, ವಿನೋದಮಯವಾಗೋ ನಗುತ್ತವೆ. ನಾವು ನಕ್ಕಂತಿರುವುದಿಲ್ಲ ಪ್ರಾಣಿಗಳ ನಗು. ಹೈನಾ (ಕಿರುಬ) ಕೂಗುವುದು ನಗುವಲ್ಲ. ಬರೀ ಕೂಗು. ಆದರೆ ಸಸ್ತನಿಗಳೆಲ್ಲವೂ ನೋವನ್ನು ಹೇಗೆ ಅನುಭವಿಸುತ್ತವೋ ಹಾಗೆಯೇ ನಲಿವನ್ನೂ ಅನುಭವಿಸುತ್ತವೆ.

ಸತ್ಯ - ೯

ಕೆಲವು ಪ್ರಾಣಿಗಳು ತಮ್ಮ ಅಂಗಾಂಗಗಳನ್ನು ತಾವೇ ತಿಂದುಕೊಂಡು "ಸ್ವಯಂ-ಭಕ್ಷಕ" ಆಗಿಬಿಡುತ್ತವೆ. ಇದನ್ನು ಜೀವಶಾಸ್ತ್ರದಲ್ಲಿ "Autophagy" ಎನ್ನುತ್ತೇವೆ. ಜಿರಲೆಗಳು ಆಹಾರ ಸಿಗದಿದ್ದರೆ ತಮ್ಮ ರೆಕ್ಕೆಗಳನ್ನೂ ಕಾಲುಗಳನ್ನೂ ತಾವೇ ಗುಳುಂ ಮಾಡಿಕೊಂಡುಬಿಡುತ್ತವೆ. ಆಕ್ಟೋಪಸ್ ಪ್ರಾಣಿಯೂ ತಮ್ಮ ಕಾಲುಗಳನ್ನು ತಾವೇ ತಿಂದುಕೊಳ್ಳುತ್ತವೆ. ಇದರ ಬಗ್ಗೆ ಇನ್ನೂ ಹೆಚ್ಚು ವಿವರವಾಗಿ ಮತ್ತೆ ಯಾವಾಗಲಾದರೂ ನೋಡೋಣ.ಸತ್ಯಮ್ ಭ್ರೂಯಾತ್ ಪ್ರಿಯಮ್ ಭ್ರೂಯಾತ್
ನ ಭ್ರೂಯಾತ್ ಸತ್ಯಮಪ್ರಿಯಮ್...

-ಅ
09.03.2009
12.45

ಒಂದಷ್ಟು ಚಿತ್ರಗಳು..