Sunday, February 22, 2009

ಧರ್ಮಸಂಕಟಬಹುಶಃ ನನ್ನಂತೆಯೇ ಈ ಧರ್ಮಸಂಕಟದಲ್ಲಿ ಅನೇಕರು ಸಿಲುಕಿರುತ್ತಾರೆ. ದಾರಿಯಲ್ಲಿ ಯಾವುದಾದರೊಂದು ಪ್ರಾಣಿಯು ಅಸಹಾಯಕವಾಗಿ ಗಾಯಗೊಂಡು ಒದ್ದಾಡುತ್ತಿದ್ದರೆ, ಸಾಯುತ್ತ ಬಿದ್ದಿದ್ದರೆ, ರಕ್ಷಿಸಬೇಕೆಂಬ ಮನಸ್ಸಿದ್ದರೂ ಅದನ್ನು ಹೇಗೆ ರಕ್ಷಿಸಬೇಕೆಂಬ ಅರಿವಿಲ್ಲದೆ ಒದ್ದಾಡುವಂತಾಗುತ್ತೆ.

ಮೊನ್ನೆ ಶ್ರೀಕಾಂತ ಹೇಳುತ್ತಿದ್ದ, ತನ್ನ ಗಾಡಿಗೆ ಒಂದು ಹಾವು ಸಿಕ್ಕಿಹಾಕಿಕೊಂಡಿಬಿಟ್ಟಿತು ಎಂದು. ನನಗೂ ಇಂತಹ ಅನುಭವಗಳಾಗಿವೆ. ತೀರ ಕೆಳಗೆ ಹಾರುತ್ತಿದ್ದ ಕಾಗೆಯೊಂದು ನನ್ನ ಬೈಕಿಗೇ ಡಿಕ್ಕಿ ಹೊಡೆದು, ಗೇರ್ ಲಿವರ್‍ಗೆ ಸಿಲುಕಿ, ಇಂಜಿನ್ನಿನ ಶಾಖಕ್ಕೆ ಸತ್ತು ಹೋದ ನಂತರ ಅದನ್ನು ಕಾಲಡಿಯಿಂದ ತೆಗೆಯುವುದು ಕಷ್ಟಕರವಾಗಿತ್ತು - ಮನಸ್ಸಿಗೆ. ರಸ್ತೆಯನ್ನು ಗಮನಿಸುತ್ತ ಬೈಕನ್ನೋಡಿಸುತ್ತಿದ್ದಾಗ ಒಮ್ಮೆ ಮರದ ಮೇಲಿಂದ ಅಳಿಲೊಂದು ಸರ್ರನೆ ಇಳಿದು ಬಂದು ಆತ್ಮಹತ್ಯೆ ಮಾಡಿಕೊಳ್ಳುವಂತೆ ನನ್ನ ಗಾಡಿಯ ಚಕ್ರಕ್ಕೆ ಸಿಕ್ಕಿಕೊಂಡುಬಿಟ್ಟಾಗ ನನಗೆ ಆದ ಚತ್ರಹಿಂಸೆ ಅಷ್ಟಿಷ್ಟಲ್ಲ. ನಗರದಲ್ಲಿ ವಾಸಿಸುವಾಗ ಇಂಥ ಅವಘಡಗಳನ್ನು ತಡೆಗಟ್ಟಲು ಕಷ್ಟಸಾಧ್ಯ. ಆದರೆ, ಧರ್ಮಸಂಕಟವೇನೆಂದರೆ ಗಾಯಗೊಂಡಿರುವ ಪ್ರಾಣಿಯೊಂದು ಕಣ್ಣೆದುರು ಸಿಕ್ಕರೆ ಅದಕ್ಕೆ ಹೇಗೆ ಶುಶ್ರೂಷೆ ಮಾಡಬೇಕು? ಮನುಷ್ಯರಾದರೆ ಹತ್ತಿರದ ಆಸ್ಪತ್ರೆಗೆ ಸೇರಿಸಬಹುದು. ಪೋಲೀಸ್ ಕೇಸೋ, ಕೋರ್ಟೋ ಕಚೇರಿಯೋ ಆಮೇಲೆ ನೋಡಿಕೊಳ್ಳಬಹುದು. ಆದರೆ ಪ್ರಾಣಿಗಳನ್ನು?ನಾಯಿಗೆ ಅಪಘಾತದಲ್ಲಿ ಗಾಯವಾಯಿತೆಂದಿಟ್ಟುಕೊಳ್ಳೋಣ. ಪ್ರಾಣಿಯ ಆಸ್ಪತ್ರೆಯೂ ಇದೆ. ಆದರೆ ನಾಯಿಯನ್ನು ಹೊತ್ತುಕೊಳ್ಳುವುದಾದರೂ ಹೇಗೆ? ನೋವಿನಿಂದ ನರಳುತ್ತಿರುವ ನಾಯಿಯನ್ನು ಹೊತ್ತುಕೊಂಡರೆ ನೋವು ಜಾಸ್ತಿಯಾಗಿ ಕಚ್ಚಿಬಿಟ್ಟರೆ? ಗಾಯಗೊಂಡ ಪ್ರಾಣಿಗಳು ಆರೋಗ್ಯವಂತ ಪ್ರಾಣಿಗಳಿಗಿಂತ ಅಪಾಯಕಾರಿ ಎಂಬುದು ತಿಳಿದುಕೊಂಡಿರಬೇಕು. ಸಾರ್ವಜನಿಕರು ಈ ಸ್ಥಿತಿಯಲ್ಲಿ ಎಷ್ಟು ನಿಸ್ಸಹಾಯಕರಲ್ಲವೆ? ರಕ್ಷಿಸಬೇಕೆಂಬ ಮನಸ್ಸಿದೆ, ಆದರೆ ಧೈರ್ಯವಿಲ್ಲ.

ಪಾರಿವಾಳವನ್ನು ಹಿಡಿದು ಮಾರುವವರ ಕುಕೃತ್ಯವೆಂದರೆ ಅದರ ರೆಕ್ಕೆಗಳನ್ನು ಕತ್ತರಿಸಿಬಿಡುವುದು. ಇಂಥದ್ದೊಂದು ಪಾರಿವಾಳವು ಮನೆಯ ಬಳಿ ಬಂದುಬಿಟ್ಟಿತೆಂದುಕೊಳ್ಳೋಣ. ಏನು ಮಾಡೋದು? ನಮ್ಮ ಕಂಡರೆ ಅದಕ್ಕೆ ಎಲ್ಲಿಲ್ಲದ ಭೀತಿ. ಹತ್ತಿರವೂ ಬರುವುದಿಲ್ಲ. ನಾವೇ ಅದರ ಬಳಿ ಕೈ ತೆಗೆದುಕೊಂಡು ಹೋದರೆ ಎಲ್ಲಿ ಕುಕ್ಕಿಬಿಡುತ್ತೋ ಎಂಬ ಭಯ! ಆದರೆ ಅದನ್ನು ಹಾಗೇ ಬಿಟ್ಟರೆ ಹಸಿವಿನಿಂದಲೋ ಬೆಕ್ಕಿನ ಆಹಾರವಾಗಿಯೋ ಪ್ರಾಣ ಬಿಡುತ್ತೆ ಪಾರಿವಾಳ. ಏನಾದರೂ ಮಾಡಿ ರಕ್ಷಿಸಲೇ ಬೇಕು! ಆದರೆ ಹೇಗೆ?

ಪಾರಿವಾಳದಂತೆಯೇ ಮನಸ್ಸನ್ನು ಕಾಡುವುದು ಅಳಿಲು. ಮನೆಯ ಸುತ್ತಮುತ್ತಲಿನ ಮರಗಳಿಂದ ಮನೆಯೊಳಗೆ ಅಳಿಲು ಬಂದು ಮರಿ ಹಾಕಿ ಸತ್ತುಹೋಯಿತೆಂದರೆ? ಎಳೇ ಮರಿಗಳು. ಅನಾಥ ಮರಿಗಳು. ಬೆಕ್ಕಿನ ಮರಿಗಳು, ನಾಯಿಯ ಮರಿಗಳಾದರೆ ಹೇಗೋ ಕಷ್ಟ ಪಟ್ಟು ಉಳಿಸಬಹುದು, ವೈದ್ಯರ ಬಳಿ ತೆಗೆದುಕೊಂಡು ಹೋಗಬಹುದು, ಕೊಟ್ಟುಬಿಡಬಹುದು. ಆದರೆ ಅಳಿಲು? ಹೇಗ ಉಳಿಸುವುದು?ಈಗ ಸಂತತಿಯು ಕ್ಷೀಣಿಸಿ ಹೋಗಿರುವ ಗುಬ್ಬಚ್ಚಿಯ ಪಾಡು ಅಷ್ಟಿಷ್ಟಲ್ಲ. ಕಾಗೆಯೋ ಹದ್ದೋ ಅಟ್ಟಿಕೊಂಡು ಹೋಗಿ ಗುಬ್ಬಿಯೊಂದನ್ನು ಗಾಯಗೊಳಿಸಿ ಕೆಳಗೆ ಬೀಳಿಸಿಬಿಟ್ಟಿದೆ. ಅಥವಾ, ಮನೆಯ ಸೂರಿನಲ್ಲಿರುವ ಗೂಡಿನಲ್ಲಿ ಮರಿಗಳನ್ನು ಬಿಟ್ಟು ಹೋದ ತಾಯಿ ಗುಬ್ಬಿಯು ಮರಳಿ ಬರಲೇ ಇಲ್ಲ. ಈಗ ಮರಿಗುಬ್ಬಿಗಳ ಗತಿ? ನಮ್ಮ ಕಣ್ಣೆದುರೇ ನಮ್ಮ ಮನೆಯಲ್ಲೇ ಇದೆ. ಆರ್ತನಾದದಂತೆ ಕೂಗುತ್ತಿದೆ. ನಾನೂ ಗುಬ್ಬಚ್ಚಿಯಾಗಿರಬೇಕಿತ್ತು ಆಗ ಉಳಿಸಬಹುದಿತ್ತು ಎಂಬುವಷ್ಟರ ಮಟ್ಟಿಗೆ ನೋವಾಗುತ್ತೆ!! ಗುಬ್ಬಚ್ಚಿಯನ್ನು ಮನುಷ್ಯರು ಮುಟ್ಟಿದರೆ ಬೇರೆ ಗುಬ್ಬಚ್ಚಿಗಳು ಅವನ್ನು ಕೊಂದು ಸಾಯಿಸಿಬಿಡುತ್ತಂತೆ, ನಾನು ರಕ್ಷಿಸಿಯೂ ಏನು ಪ್ರಯೋಜನ? ಅವುಗಳ ಸಾವನ್ನು ಕಣ್ಣೆದುರೇ ನೋಡಬೇಕೇ?

ಮನೆಯೊಳಗೆ ಹಾವು ಬಂದರೆ ಅದನ್ನು ಮೊದಲು ದೊಣ್ಣೆ ತೆಗೆದುಕೊಂಡು ಬಡಿದು ಕೊಲ್ಲುವ ಜನರ ಗುಂಪು ಒಂದಾದರೆ, ಹಾವಾಡಿಗನನ್ನು ಕರೆಸಿ ಹಿಡಿಸಿಬಿಡುವುದು ಇನ್ನೊಂದು ಗುಂಪು. ಮತ್ತೆ ಕೆಲವರು ಆ ಬೀದಿಯ ಧೀರರನ್ನು ಕರೆಸಿ ಹಾವನ್ನು ಕೊಲ್ಲಿಸಿ ನಂತರ ಸುಬ್ರಹ್ಮಣ್ಯನಿಗೆ ಹಾಲೆರೆದು ಪಾಪ ಪರಿಹಾರ ಮಾಡಿಕೊಳ್ಳುತ್ತಾರೆ. ಆದರೆ ಸುತ್ತ ಮುತ್ತ ಹಾವಾಡಿಗರೇ ಇಲ್ಲದೇ ಇದ್ದರೆ? ತೀರ ಮನೆಯೊಳಗೇ ಹಾವು ಬಂದುಬಿಟ್ಟಿದೆ, ಪ್ರಾಣಿಹತ್ಯೆ ಮಾಡುವುದಾದರೂ ಸಾಧ್ಯವೇ? ರಕ್ಷಣೆ ಮಾಡುವ ಮನಸ್ಸು. ಆದರೆ ಹೇಳಿ ಕೇಳಿ ಅದು ಹಾವು. ಯಾವ ಹಾವೆಂದೂ ಗೊತ್ತಿಲ್ಲ. ಹೆಡೆ ಎತ್ತುತ್ತಿಲ್ಲ, ನಾಗರ ಹಾವಂತೂ ಅಲ್ಲ, ಆದರೆ ಬೇರೆ ವಿಷದ ಹಾವಾದರೆ?

ಎಷ್ಟೊಂದು ಪ್ರಶ್ನೆ! ಎಷ್ಟೊಂದು ಸಮಸ್ಯೆ!! ಎಷ್ಟೊಂದು ಸಂಕಟ!! ಧರ್ಮಸಂಕಟ!!! ಪರಿಸರಪ್ರೇಮಿಯಾಗಿದ್ದಕ್ಕೆ ಈ ಸಂಕಟದ ಕರ್ಮವೇ??

ಉತ್ತರ ಹುಡುಕಲು ಪ್ರಯತ್ನಿಸೋಣ. ಅನುಭವದಿಂದ ಉತ್ತರ ಹುಡುಕಿದರೆ ಒಳ್ಳೆಯದು.

ಮೊದಲಿಗೆ ಪ್ರಾಣಿಗಳ ಚಲನವಲನಗಳನ್ನು - Body Language - ಅನ್ನು ಗಮನಿಸಬೇಕು. ಉದಾಹರಣೆಗೆ ಗಾಯಗೊಂಡಿರುವ ನಾಯಿಯು ವಿಪರೀತ ನರಳುತ್ತಿದ್ದರೆ ಅದರ ಬಳಿ ಹೋಗಿ ತಲೆ ಸವರಲು ಯತ್ನಿಸಿದರೆ ಅದು ಕಚ್ಚುವ ಸಾಧ್ಯತೆ ಹೆಚ್ಚು. ಯಾಕೆಂದರೆ ನಾವು ಅದಕ್ಕೆ ಶುಶ್ರೂಷೆ ಮಾಡಲು ಹೋಗುತ್ತಿದ್ದೇವೆಂದು ಅದಕ್ಕೆ ಗೊತ್ತಿರುವುದಿಲ್ಲ. ನಾಯಿಯ ಕಾಲಿಗೆ ಮುಳ್ಳು ಚುಚ್ಚಿದಾಗ ಅದನ್ನು ನಾವೇ ತೆಗೆಯಲು ಹೋಗುವುದು ಅಷ್ಟು ಉತ್ತಮ ಸಲಹೆಯಲ್ಲ. ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಸಾಕಿದ ನಾಯಿಯಾದರೆ ಸರಿ, ಬೀದಿ ನಾಯಿಗಳನ್ನು ಹೇಗೆ ಕರೆದುಕೊಂಡು ಹೋಗುವುದು? ಆ ಪ್ರಾಣಿಯನ್ನು ಮೊದಲು "ಬಂಧಿಸ"ಬೇಕು. ನಂತರ ಪ್ರಾಣಿವೈದ್ಯರ ಬಳಿ ಕರೆದೊಯ್ಯಬೇಕು.

ವೈದ್ಯರಿಂದ ಬಗೆಹರಿಯದ ಸಮಸ್ಯೆ ಎದುರಿದ್ದರೆ, ಉದಾಹರಣೆಗೆ ಪಾರಿವಾಳ, ಅಳಿಲು, ಗುಬ್ಬಚ್ಚಿಯ ಮರಿಯ ಕೇಸು, ಆಗ ನಾವು ಪ್ರಾಣಿಗಳ ಆಹಾರ ಪದ್ಧತಿಯನ್ನು ತಿಳಿದುಕೊಂಡಿರಬೇಕು. ಸಸ್ತನಿಗಳೆಲ್ಲವೂ ಹಾಲನ್ನು ಕುಡಿಯುತ್ತವೆ. ಪಕ್ಷಿಗಳೆಲ್ಲವೂ ಧಾನ್ಯಗಳನ್ನು ತಿನ್ನುತ್ತವೆ. ಆದರೆ ಮರಿ ಪಕ್ಷಿಗಳಿಗೆ ಅರ್ಧ ಜೀರ್ಣವಾದ ಆಹರ ಅಗತ್ಯ. ಸ್ವಲ್ಪ ರುಬ್ಬಿದ, ಜಜ್ಜಿದ ಆಹಾರವನ್ನು ತಿನ್ನಿಸಬಹುದು. ಗಾಳಿ, ಧೂಳು ಇವುಗಳಿಂದ ರಕ್ಷಿಸಬೇಕು. ಹಾಗಂತ ಮಗುವನ್ನು ಬಟ್ಟೆಯಲ್ಲಿ ಸುತ್ತಿಬಿಡುವಂತೆ ಬಂಧಿಸಬಾರದು. ಬೆಚ್ಚನೆಯ ವಾತಾವರಣ ಸೃಷ್ಟಿ ಮಾಡುವುದೊಳಿತು. ಏನೇ ಆಗಲೀ ನಾವು ತಾಯಿಯಾಗಲು ಸಾಧ್ಯವಿಲ್ಲ. ಆದರೆ ಸಾಕುತಾಯಿಯಾಗಬಹುದು. ರೆಕ್ಕೆ ಬಲಿಯುವ ತನಕ. ನಂತರ ತಮ್ಮ ಬದುಕು ತಮ್ಮದು! ಮೂಢನಂಬಿಕೆಗಳನ್ನು ಬಿಡಬೇಕು. ಮನುಷ್ಯಸ್ಪರ್ಶವಾದ ಬಳಿಕ ಬೇರೆ ಹಕ್ಕಿಗಳು ಕೊಂದುಬಿಡುತ್ತವೆ ಎನ್ನುವುದು ತಪ್ಪು ನಂಬಿಕೆ. ಗುಂಪಿನಲ್ಲಿ ಯಾವುದಾದರೂ ಒಂದು ಪಕ್ಷಿ ತೀರ ದುರ್ಬಲವಾಗಿದ್ದರೆ ಅದನ್ನು ಉಳಿದ ಪಕ್ಷಿಗಳು ಕೊಂದುಬಿಡುತ್ತವೆ. ಕರುಣೆಯೆಂಬುದು ಪ್ರಕೃತಿಯ ಡಿಕ್ಷನರಿಯಲ್ಲಿಲ್ಲ.ಇನ್ನು ಹಾವಿನ ವಿಷಯಕ್ಕೆ ಬರೋಣ. ಮನೆಗೆ ಹಾವು ಬಂದರೆ ರಕ್ಷಣೆ ಬೇಕಾಗಿರುವುದು ಮನೆಯವರಿಗಿಂತ ಹೆಚ್ಚಾಗಿ ಹಾವಿಗೆ. ಯಾಕೆಂದರೆ ಆಗ ತೊಂದರೆಯಿರುವುದು ಹಾವಿಗೇ ಹೊರೆತು ಮನೆಯವರಿಗಲ್ಲ. ಮನೆಯವರಿಗೇನಾದರೂ ತೊಂದರೆಯಾದರೆ ಅದು ಅವರ ದಡ್ಡತನದಿಂದಲೇ. ಯಾವುದೇ ಹಾವಾಗಲೀ, ವಿಷದ ಹಾವೋ ಅಲ್ಲವೋ ಅದು ಮುಖ್ಯವಲ್ಲ, ನಮಗಿಂತ ಹತ್ತರ ಪಟ್ಟು ಹೆಚ್ಚು ಹೆದರಿರುತ್ತವೆ. ತಪ್ಪಿಸಿಕೊಂಡು ಹೋದರೆ ಸಾಕೆಂದು ಕಾಯುತ್ತಿರುತ್ತೆ. ನಮ್ಮನ್ನು ಕೊಲ್ಲುವ ಉದ್ದೇಶ ಇರುವುದಿಲ್ಲ. ತನ್ನನ್ನು ತಾನು ರಕ್ಷಿಸಿಕೊಳ್ಳುವುದಷ್ಟೇ ಗುರಿ. ಅದಕ್ಕೆ ಸಹಾಯ ಮಾಡಿಬಿಟ್ಟರೆ ಸಾಕು. ದೊಡ್ಡದೊಂದು ಕೋಲನ್ನು ತೆಗೆದುಕಂಡು ಹಾವಿನ ಹೊಟ್ಟೆಯ ಬಳಿ ಇಟ್ಟು ಹಗ್ಗವನ್ನು ತಳ್ಳುವಂತೆ ತಳ್ಳುತ್ತ ಮನೆಯಿಂದ ಹೊರಗೆ ಬಂದು ಯಾವುದಾದರೂ ದೊಡ್ಡ ರಂಧ್ರದ ಬಳಿಯೋ ಚರಂಡಿಯ ಬಳಿಯೋ ದೂಡಿದೆವೆಂದರೆ ಮುಗಿಯಿತು, ಅದರ ಪಾಡಿಗೆ ಅದು ಹೋಗುತ್ತೆ. ನಾಗರ ಹಾವಾದರೆ ಹೆಡೆಯೆತ್ತುತ್ತೆ, ಹೆದರಬೇಕಾಗಿಲ್ಲ. ಅದರ ಪಾಡಿಗೆ ಅದು ಹೆಡೆಯೆತ್ತಲಿ. ದೂರದಿಂದ ಕೋಲಿನ ಸಹಾಯದಿಂದ ಅದನ್ನು ತಳ್ಳುತ್ತ ಹೋದರೆ ಸಾಕು. ಗಾಬರಿಗೊಳ್ಳದೆ, ಶಬ್ದ ಮಾಡಿ ಕುಣಿದಾಡದೆ, ಹಾವಿನ ಮುಖಕ್ಕೆ ನೀರೆರಚದೆ, ಬರಿಗೈಯಲ್ಲಿ ಧೈರ್ಯ ಶೌರ್ಯ ಪ್ರದರ್ಶನಕ್ಕಾಗಿ ಹಿಡಿದುಕೊಳ್ಳಲು ಹೋಗದೆ ಇದ್ದರೆ ಅಷ್ಟೆ ಸಾಕು. ಹಾವೂ ಉಳಿಯುತ್ತೆ, ನಾವೂ ಉಳಿಯುತ್ತೇವೆ. Live and let live!

ನಾನು ಹೈಸ್ಕೂಲಿನಲ್ಲಿದ್ದಾಗ ಒಮ್ಮೆ ಬೆನ್ನು ಕೆರೆತವಾದ ಹಸುವೊಂದು ಒಂದು ಟ್ರಾನ್‍ಸ್ಫಾರ್ಮರ್‍ಗೆ ಉಜ್ಜಿಕೊಳ್ಳಲು ಹೋಗಿ ಶಾಕ್ ಹೊಡೆಸಿಕೊಂಡು ನನ್ನ ಕಣ್ಣೆದುರೇ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿತ್ತು. ಜೊಲ್ಲು ಸುರಿಸಿ ಮೈಯೆಲ್ಲಾ ನಡುಗಿಸಿಕೊಂಡು ಕಂಬಕ್ಕೇ ಅಂಟಿಕೊಂಡು ಒದ್ದಾಡುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣು ಮುಂದಿದೆ. ನಾವು ಎಷ್ಟು ನಿಸ್ಸಹಾಯಕರಲ್ಲವೇ?

-ಅ
22.02.2009
12.15AM

7 comments:

 1. ಮೂಕ ಪ್ರಾಣಿಗಳನ್ನು ಹೇಗೆ ರಕ್ಷಿಸಬಹುದು ಎನ್ನುವದನ್ನು ತಿಳಿಸಿದ್ದೀರಿ...

  ವಿಭಿನ್ನವಾದ ಲೇಖನ..

  ಮಾನವೀಯತೆ ಕಡಿಮೆಯಾಗುತ್ತಿದೆ..

  ಬಹಳ ನೋವಾಗುತ್ತದೆ

  ಧನ್ಯವಾದಗಳು..

  ReplyDelete
 2. ಯಾವುದೇ ಪ್ರಾಣಿ ಸಂಕಟದಲ್ಲಿ ಸಿಲುಕಿದಾಗ, ಅದಕ್ಕೆ ಸಹಾಯ ಮಾಡಲು ನನಗೆ
  ಸಂಕೋಚವಾಗುತ್ತದೆ. ಅಂತಹ ಸಮಯದಲ್ಲಿ ಅಬ್ರಾಹಮ್ ಲಿಂಕನ್ ಚರಂಡಿಯಲ್ಲಿ
  ಬಿದ್ದಿದ್ದ ಹಂದಿಯನ್ನು ಮೇಲೆತ್ತಿದ ಘಟನೆ ನೆನಪಾಗಿ ನಾಚಿಕೆಯಾಗುತ್ತಿದೆ.
  ನಿಮ್ಮ ಲೇಖನದಲ್ಲಿ ಅನೇಕ ಉತ್ತಮ ಸಲಹೆಗಳಿವೆ. ವಿಶೇಷತ: ಹಾವನ್ನು ಹೇಗೆ ಹೊರಹಾಕಬೇಕೆಂಬ ಸಲಹೆ.
  ಧನ್ಯವಾದಗಳು.

  ReplyDelete
 3. ನಿಮಗೆ ಎಷ್ಟು thanx ಹೇಳಿದರೂ ಸಾಲದು..

  ReplyDelete
 4. nange parisarada kathe matte chitrachaapa nenpaytu :)

  naavu helpless anta ansalla...antha time nali sensible aagilde senseless aagi aadtivi ansatte.

  ReplyDelete
 5. [ಲಕುಮಿ] ನನಗೆ ರನ್ನನ ಗದಾಯುದ್ಧ ನೆನಪಾಯಿತು.

  [ವಿಕಾಸ್] ಯಾಕೆ ಸರ್? ನಿಮಗೂ ಇಂಥ ಧರ್ಮಸಂಕಟ ಆಗಿದೆಯಾ?

  [ಸುನಾಥ್] ಒಳ್ಳೇ ಲಿಂಕನ್, ಚರಂಡಿಯೆಂದರೆ ಹಂದಿಗಳಿಗೆ ಇಷ್ಟವೆಂಬುದನ್ನು ಮರೆತಿದ್ದನೆನಿಸುತ್ತೆ.... ;-) (ಸುಮ್ಮನೆ ತಮಾಷೆಗೆ ಹೇಳಿದೆ..)

  [ಸಿಮೆಂಟು..] ಧನ್ಯವಾದಗಳು ಸರ್...

  ReplyDelete
 6. ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

  ಶುಭವಾಗಲಿ,
  - ಶಮ, ನಂದಿಬೆಟ್ಟ

  ReplyDelete
 7. ಮೂಕ ಪ್ರಾಣಿಗಳನ್ನು ಹೀಗೂ ಕಾಪಾಡಬಹುದು ಅಂತ ಚೆನ್ನಾಗಿ ತಿಳಿಸಿದ್ದೀರಿ...ಥ್ಯಾಂಕ್ಸ್...

  ReplyDelete

ಒಂದಷ್ಟು ಚಿತ್ರಗಳು..