Thursday, February 12, 2009

ಡಾರ್ವಿನ್ ನೆನಪುಇಂದಿಗೆ (ಫೆ. ೧೨) ಸರಿಯಾಗಿ ಇನ್ನೂರು ವರ್ಷದ ಕೆಳಗೆ ಹುಟ್ಟಿದ ಡಾರ್ವಿನ್ ಜಗತ್ತಿನ ಚಿಂತನಾ ಹಾದಿಯನ್ನೇ ಬದಲಿಸಿದರು. ಕಾಕತಾಳೀಯವೆಂಬಂತೆ ಆತ ರಚಿಸಿದ ಆರಿಜಿನ್ ಆಫ್ ಸ್ಪೀಷೀಸ್ ಪುಸ್ತಕಕ್ಕೆ ನೂರೈವತ್ತು ವರ್ಷ ಇಂದಿಗೆ.

ಡಾರ್ವಿನ್ನಿನ ವಿಕಾಸವಾದದ ಬಗ್ಗೆ ಅಸಮಾಧಾನ ವ್ಯಕ್ತ ಪಡಸಿದ್ದವರು ಆ ಕಾಲದಲ್ಲಿ ಬಹಳ ಮಂದಿಯಿದ್ದರು. ಈಗ ಆ ಜನರ ಸಂಖ್ಯೆ ಕಡಿಮೆಯಾಗಿದೆಯಾದರೂ ವಿಕಾಸವಾದ ಸರಿಯಾಗಿ ತಿಳಿಯದೇ ವಾದಿಸುವವರೇ ಹೆಚ್ಚು.

ವಿಕಾಸವಾದದ ವಿರೋಧಿಗಳು, "ಸೃಷ್ಟಿ"ವಾದಿಗಳು, ವಿಕಾಸವಾದವನ್ನು ಬೋಧಿಸುವುದೇ ತಪ್ಪೆಂದು ಹೇಳುತ್ತಾರೆ. ಸಿದ್ಧಾಂತಗಳನ್ನು ಸತ್ಯವೆಂದು ಬೋಧಿಸುವುದು ಅಪರಾಧವೆಂದು ಅವರ ವಾದ. ಹಾಗೆ ನೋಡೋಕೆ ಹೋದರೆ, ಅಣುಶಾಸ್ತ್ರವೇ ಒಂದು ಸಿದ್ಧಾಂತ, ಅದೇ ರೀತಿ ಗುರುತ್ವಾಕರ್ಷಣೆಯೂ ಒಂದು ಸಿದ್ಧಾಂತವಷ್ಟೆ.

ಮಹಾ ಸ್ಫೋಟಕ್ಕೂ (Big Bang) ವಿಕಾಸವಾದಕ್ಕೂ ಯಾವ ಸಂಬಂಧವೂ ಇಲ್ಲ. ಅಂತೆಯೇ ಜಗತ್ ಸೃಷ್ಟಿಯ ಬಗ್ಗೆಯೂ ವಿಕಾಸವಾದ ಹೇಳುವುದಿಲ್ಲ. ಜೀವವು ಹೇಗೆ ವಿಕಸಿತವಾಗುವುದೆಂದು ಹೇಳುತ್ತೆ ಈ ವಾದ. ಒಂದು ಜೀವಿಯು ಇನ್ನೊಂದು ಜೀವಿಯಾಗಿ ವಿಕಸಿತವಾಗುವುದೆಂಬುದು ಸತ್ಯವಷ್ಟೆ?

ಪಳೆಯುಳಿಕೆಯ ಅಧ್ಯಯನವು ಆರ್‍ಡಿಪಿತಿಕಸ್ ಇಂದ ಹಿಡಿದು ಹೋಮೋ ಸ್ಯಾಪಿಯನ್ಸ್ ವರೆಗೂ ಹಂತ ಹಂತವಾಗಿ ಸಾಕ್ಷ್ಯಗಳನ್ನು ದೊರಕಿಸಿಕೊಟ್ಟಿವೆ. ಅಂತೆಯೇ ಜಲಚರದ ವಿಷಯಕ್ಕೆ ಬಂದರೆ ಯೂಸ್ಥೆನೋಪ್ಟಿರೋನ್ ಇಂದ ಹಿಡಿದು ತಿಮಿಂಗಿಲದವರೆಗೂ ಸಾಕ್ಷ್ಯಗಳನ್ನು ಒದಗಿಸಿಕೊಟ್ಟಿವೆ.

ಅದು ಹೇಗೆ ಅಷ್ಟು ಬೇಗ ಬದಲಾಗುತ್ತೆ? ಎಂದು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ, ಈ ಬದಲಾವಣೆಯು ಅತಿ ನಿಧಾನಗತಿಯಲ್ಲಿ ಸಾಗುತ್ತೆಂಬುದು ವಾಸ್ತವದ ಸಂಗತಿ. ಪ್ರಕೃತಿಯು ಒಳಿತನ್ನು (ಬಲಶಾಲಿಯನ್ನು) ಉಳಿಸಿಕೊಂಡು ಕೆಟ್ಟದ್ದನ್ನು (ಅಬಲ ಜೀವಿಗಳನ್ನು) ಅಳಿಸಿಹಾಕಿಬಿಡುತ್ತೆ. ಜೀನ್‍ಗಳಲ್ಲಿ ಆಗುವ ಮ್ಯುಟೇಷನ್ನುಗಳಂತೆ ಇದ್ದಕ್ಕಿದ್ದ ಹಾಗೆ ಬದಲಾವಣೆಯು ವಿಕಾಸದಲ್ಲಿ ಆಗುವುದಿಲ್ಲ.

ದೇಹ ರಚನೆಗಳನ್ನು ನೋಡಿದರೆ, ಎಷ್ಟು ಆಶ್ಚರ್ಯವಾಗುತ್ತಲ್ಲವೆ? ಎಷ್ಟೊಂದು ಕ್ಲಿಷ್ಟ ರಚನೆ! ಇದು ವಿಕಾಸದಿಂದ ಆಗಲು ಸಾಧ್ಯವೇ ಇಲ್ಲವೆಂದು ಮೂಢನಂಬಿಕಸ್ಥರು ಹೇಳುತ್ತಾರೆ. ಕ್ಲಿಷ್ಟ ದೇಹ ವ್ಯವಸ್ಥೆಯನ್ನು ಅರಿತುಕೊಳ್ಳಬೇಕಾದರೆ ಆ ಜೀವಿಯು ಯಾವುದರಿಂದ ವಿಕಾಸವಾಗಿದೆಯೋ ಅದರ ದೇಹ ವ್ಯವಸ್ಥೆಯನ್ನು ಅಧ್ಯಯನ ಮಾಡಬೇಕು. ಕ್ಲಿಷ್ಟ ವ್ಯವಸ್ಥೆಯ ಕಾರಣ ಹಿಂದಿನ ಜೀವಿಯಲ್ಲಿರುವ ಕೊರತೆ.

ಇನ್ನು ವಿಕಾಸಕ್ಕೆ ಯಾವ ಪರೀಕ್ಷೆಯೂ ಇಲ್ಲವೆಂದೂ ನಂಬಿರುವವರಿದ್ದಾರೆ. ಜೀವಿಗಳು ಯಾವುದೋ ಅತಿಪ್ರಾಕೃತ ಶಕ್ತಿಯಿಂದ "ಸೃಷ್ಟಿ"ಯಾಗಿದೆಯೆಂದು ಮೌಢ್ಯವಾಗಿ ನಂಬುವುದು ಸುಲಭದ ಕೆಲಸ. ಪ್ರತಿಯೊಂದು ಹೊಸ ಪಳೆಯುಳಿಕೆಯು ದೊರಕಿದಾಗಲೂ ಪ್ರತಿಯೊಂದು ಹೊಸ ಜೀನೋಮು ದೊರಕಿದಾಗಲೂ, ಪ್ರತಿಯೊಂದು ಹೊಸ ಸಂಕುಲವು ಆವಿಷ್ಕಾರವಾದಗಲೂ ಪರೀಕ್ಷೆ ನಡೆಯುತ್ತೆ. ವಿಜ್ಞಾನವು ಕೇವಲ ನಂಬಿಕೆ ಮತ್ತು ಹೇಳಿಕೆಗಳನ್ನೊಳಗೊಂಡಿಲ್ಲ. ಪ್ರಯೋಗಗಳು, ಸಾಕ್ಷ್ಯಗಳನ್ನವಲಂಬಿಸಿದೆ.

ವಿಕಾಸವಾದದ ವಿರುದ್ಧ ಒಂದು ಸಾಕ್ಷಿಯೂ ದೊರಕಿಲ್ಲ.

ಇಂತಹ ಸಿದ್ಧಾಂತವನ್ನು ಪ್ರತಿಪಾದಿಸಿದ ಡಾರ್ವಿನ್ನಿನ ಇನ್ನೂರನೆಯ ಹುಟ್ಟುಹಬ್ಬದ ದಿನದಂದು ಆತನನ್ನು ನೆನೆಸಿಕೊಳ್ಳಲು ನಾನು ಸಂತೋಷಿಸುತ್ತೇನೆ.

ಹಿರಿಯ ಮಿತ್ರ ಮೋಹನ್ ಪೈ ಅವರು ಚಾರ್ಲ್ಸ್ ಡಾರ್ವಿನ್ ಬಗ್ಗೆ ಬರೆದಿರುವ ಒಂದು ಸೊಗಸಾದ ಲೇಖನವು ಇಲ್ಲಿದೆ.

-ಅ
12.02.2009
11.45PM

4 comments:

 1. ಹುಟ್ಟುಹಬ್ಬದ ಸಂತೋಷದಲ್ಲಿ ನಾನೂ ಭಾಗಿ, ಅರುಣ.

  ReplyDelete
 2. ಡಾರ್ವಿನ್ ನೆನಪಿಗೆ ವಂದನೆಗಳು
  --
  ಪಾಲ

  ReplyDelete
 3. vikaasa vaada, atipraakruta shakti inda srushti mutually exclusive aagbekaaddilla alwa? nambolla, sullu antha khandisoru iddagle innashtu maahitigalanna hudukkokke prachodane aagodu. So, infact ... avra maudhya bereyorige ollede maadtide :-)

  ReplyDelete
 4. [ವಿಜಯಾ] ಖಂಡಿತ ಆಗ್ಬೇಕಾಗಿಲ್ಲ. ಆದರೆ, ವಿಕಾಸವಾದದ ಪ್ರಕಾರ ಯಾವುದೇ ಜೀವಿಯು, ಅದರಲ್ಲೂ ಮನುಷ್ಯರಾದಂಥ ನಾವು, ರಾತ್ರೋ ರಾತ್ರಿ ಸೃಷ್ಟಿಯಾದವರಲ್ಲ. ನಿಧಾನವಾಗಿ ವಿಕಾಸವಾದವರು.

  ಒಳ್ಳೇ ಪ್ರಚೋದನೆ. ಮೌಢ್ಯಕ್ಕೆ! ಏನು ಒಳ್ಳೇದ್ ಮಾಡ್ತಿದೆ?

  [ಪಾಲಚಂದ್ರ, ಸುನಾಥ್] ಧನ್ಯವಾದಗಳು.

  ReplyDelete

ಒಂದಷ್ಟು ಚಿತ್ರಗಳು..