Sunday, February 08, 2009

ಕಾಕರಾಯರ ಕಥೆ ೧ - ಜೋಡಿ ಹಕ್ಕಿ

ಫೆಬ್ರುವರಿ ತಿಂಗಳೆಂದರೆ ಪ್ರೇಮಿಗಳಿಗೆ ಹಬ್ಬ. ಅಂತೆಯೇ ಗ್ರೀಟಿಂಗ್ ಕಾರ್ಡ್ ಮಾರುವವರಿಗೂ ಹಬ್ಬ. ಇನ್ಯಾರೋ ಇವೆಲ್ಲ ಭಾರತೀಯ ಸಂಸ್ಕೃತಿಯಲ್ಲವೆಂದು ರಸ್ತೆಯಲ್ಲಿ ಜೋಡಿಯಾಗಿ ಓಡಾಡಿದರೆಂದರೆ ಜಬರದಸ್ತಿ ಮದುವೆ ಮಾಡಿಸುತ್ತಾರೆಂದರೆ, ಅದೂ ಅವರಿಗೂ ಒಂದು ಹಬ್ಬವೇ.

ಗಂಡು - ಹೆಣ್ಣು ಜೋಡಿಯಾಗಿ ಬದುಕುವುದು ಪ್ರಕೃತಿನಿಯಮ. ಮನುಷ್ಯರ ವಿಷಯ ಈಗ ಇಲ್ಲಿ ಬೇಡ. ಪ್ರಕೃತಿದತ್ತ ಬದುಕಿಗೆ ನಾವು ಸಂಸ್ಕೃತಿಯ ಉಡುಗೆ ತೊಡಿಸಿಕೊಂಡಿದ್ದೇವೆ. ಉಳಿದ ಪ್ರಾಣಿಗಳು ಯಾವುವೂ ಈ ಕೆಲಸ ಮಾಡಿಕೊಂಡಿಲ್ಲ.

ಮನುಷ್ಯನ ಬುದ್ಧಿವಂತಿಕೆಗೆ ಬಲಿಯಾಗಿರುವ ಈ ಪ್ರೇಮಿಗಳ ಬಗ್ಗೆ ಕಾಕರಾಯರು ಹೇಳುವ ಈ ನೈಜ ಕಥೆಯನ್ನು ಕೇಳೋಣ. ಓವರ್ ಟು ಮಿ.ಕೆ.ರಾವ್. (ಕಾಕರಾಯರು)......................................................................................

ಈ ಕಥೆ ನಡೆದದ್ದು ಹಲವಾರು ವರ್ಷಗಳ ಕೆಳಗೆ. ನನ್ನಷ್ಟು ಅದೃಷ್ಟವಂತ, ಸ್ವತಂತ್ರ ಜೀವಿ ಇನ್ಯಾರು ತಾನೇ ಇರಲು ಸಾಧ್ಯ? ಮನುಷ್ಯ ಕೂಡ ಇಲ್ಲ! ಎಂದು ಹಾಡಿಕೊಂಡು ಶಿವಾಜಿನಗರದಲ್ಲಿ ಷಡ್ರಸೋಪೇತ ಮೃಷ್ಟಾನ್ನ ಭೋಜನವಾದ ನಂತರ ವಿರಮಿಸುತ್ತಿದ್ದೆ. ಪಂಜರದೊಳಗಿದ್ದರೂ ಸಂತೋಷವಾಗಿಯೇ ಇದ್ದವೆಂದು ತೋರಿತು, ಈ ಜೋಡಿ. "ಅರೆ! ಇದೇನ್ರಪ್ಪಾ, ಇಷ್ಟೊಂದು ಖುಷಿಯಾಗಿದ್ದೀರ? ಈ ಪಾಟಿ ಗಲಾಟೆ ಮಾಡ್ತಾ ಇದ್ದೀರ? ನಿಮಗೆ ನನ್ನ ಹಾಗೆ ಸ್ವತಂತ್ರವಾಗಿ ಹಾರಾಡಿಕೊಂಡು ಇರಲು ಇಷ್ಟ ಇಲ್ಲವೆ?" ಎಂದು ಹತ್ತಿರ ಹೋಗಿ ಕೇಳಿದೆ. ಹೊರಗೆ ಹಾರುವ ಪ್ರಪಂಚವೂ ಇದೆಯಾ? ಎಂದು ನನ್ನನ್ನು ಅಚ್ಚರಿಯಿಂದ ನೋಡಿದರು ಅವರಿಬ್ಬರು. "ಅಲ್ಲ, ಹಾರೋದೇನಿದ್ರೂ ನಿಮಗಷ್ಟೆ, ನಾವು ಮನೆಗಳಲ್ಲಿರುವವರು. ಈ ಅಂಗಡಿಗೆ ಬರುವ ಭಾಗ್ಯವಂತನೊಬ್ಬನು ನಮ್ಮನ್ನು ಕರೆದೊಯ್ಯುತ್ತಾನೆ. ಅವರ ಮನೆಯಲ್ಲಿಯೇ ನಮ್ಮ ಊಟ." ಎಂದನು.

"ಮತ್ತೆ, ಹೊರಗಿನ ಜಗತ್ತು?"

"ನನಗೆ ಇವಳು, ಇವಳಿಗೆ ನಾನು - ನಮಗೆ ಇಷ್ಟೆ ಜಗತ್ತು!"

ಭಾರತ ದೇಶದಲ್ಲೆಲ್ಲೂ ಇಂಥದ್ದನ್ನು ನೋಡೇ ಇಲ್ಲವಲ್ಲ ನಾನು? ಹಿಮಾಲಯದ ತುತ್ತತುದಿಯಿಂದ ಹಿಡಿದು, ಕನ್ಯಾಕುಮಾರಿಯ ಬಂಡೆಯವರೆಗೂ ಸುತ್ತಾಡಿದ್ದೇನೆ. ಎಲ್ಲ ಬಗೆಯ ಸಸ್ಯಾಹಾರ, ಮಾಂಸಾಹಾರ ಊಟವನ್ನು ಸವಿದಿದ್ದೇನೆ. ನನಗಿಂತ ಚೆಲುವಾದ ಪಕ್ಷಿಗಳೆಲ್ಲವೂ ಬೇಟೆಯಾಗುತ್ತಿರುವುದನ್ನು ನೋಡಿ ಮರುಕ ಪಟ್ಟುಕೊಂಡಿದ್ದೇನೆ. ಆದರೆ, ಈ ರೀತಿ ಜೋಡಿಹಕ್ಕಿಯನ್ನು ನೋಡೇ ಇಲ್ಲವಲ್ಲ! ಅದೂ ಪಂಜರದೊಳಗೆಯೇ ಸಂತಸವಾಗಿದೆಯಲ್ಲಾ? ನನಗೂ ಆಶ್ಚರ್ಯ ಆಯಿತು. ನನ್ನ ನಾಲೆಡ್ಜ್ ಬ್ಯಾಂಕ್ ಎಲ್ಲವನ್ನೂ ತೆಗೆದುಹಾಕಿದೆ. ಏನೂ ದೊರೆಯಲಿಲ್ಲ.

"ಸರಿ, ನೀವು ಎಲ್ಲಿಂದ ಬಂದಿರಿ ಶಿವಾಜಿನಗರಕ್ಕೆ?"

"ನಾವು ಹುಟ್ಟಿದ್ದೇ ಇಲ್ಲಿ".

"ಸಾಧ್ಯವೇ ಇಲ್ಲ! ನನಗೆ ಈ ದೇಶದಲ್ಲಿರುವವರ ಬಗ್ಗೆ ಆಮೂಲಾಗ್ರವಾಗಿ ಗೊತ್ತು! ಸುಳ್ಳು ಹೇಳ್ಬೇಡ!!"

"ನಾವು ಹುಟ್ಟಿದ್ದು ಇಲ್ಲೇ, ಆದರೆ ನಮ್ಮ ಪೂರ್ವಜರು ಆಫ್ರಿಕಾದವರು. ನಮ್ಮದು ಗಿಣಿಯ ಜಾತಿ. ಎಂಟು ಉಪಜಾತಿಯವರೂ ಕೂಡ ಸೌಹಾರ್ದತೆಯಿಂದ ಆಫ್ರಿಕಾದ ದಟ್ಟ ಕಾಡುಗಳಲ್ಲಿ ವಿಲಾಸ ಮಾಡುತ್ತಿದ್ದರು ನಮ್ಮ ಪೂರ್ವಜರು. ನಿಮ್ಮ ಹಾಗೆ ಹೊಟ್ಟೆ ತುಂಬಿತೆಂದರೆ ಮುಗಿಯಿತು ಮಿಕ್ಕಿದ್ದೆಲ್ಲ ನಂತರ ಎಂಬ ಯೋಚನೆ ನಮ್ಮ ಜಾತಿಯವರಿಗಿಲ್ಲ. ನಾವು ಜೋಡಿಹಕ್ಕಿಗಳು. ಆಫ್ರಿಕಾದವರು ನಮ್ಮನ್ನು ಪ್ರೀತಿಸುತ್ತಿದ್ದರು. ನಂತರ ಆಫ್ರಿಕಾದವರ ಹಣದ ಆಸೆಗೆ ಜೋಡಿಗಳು ಇಂಗ್ಲೆಂಡಿಗೆ ಹೋದವು. ಆಫ್ರಿಕಾದಲ್ಲಿ ನಮ್ಮ ಪೂರ್ವಜರು ಎಪ್ಪತ್ತು ವರ್ಷ ಬದುಕುತ್ತಿದ್ದರಂತೆ, ಇಂಗ್ಲೆಂಡಿಗೆ ಬಂದವರ ಆಯುಷ್ಯ ಮೂವತ್ತಕ್ಕೆ ಇಳಿದುಬಿಟ್ಟಿತು. ಜಗತ್ತಿನ ಎಲ್ಲ ಶ್ರೀಮಂತ ದೇಶಗಳನ್ನೂ ಸುತ್ತಿದ್ದಾರೆ ನಮ್ಮವರು."

ನನಗೆ ಈ ಪಕ್ಷಿಯನ್ನು ನೋಡಿ ಗಿಣಿಯ ಜಾತಿಯೆಂದು ನಂಬಲು ಕಷ್ಟಸಾಧ್ಯವಾಯಿತು. ಗಿಣಿಗಳು ಸಾಮಾನ್ಯವಾಗಿ ನನ್ನಷ್ಟೇ ದೊಡ್ಡದಾಗಿರುತ್ತೆ. ಆದರೆ ಇದು ತುಂಬ ಚಿಕ್ಕದಾಗಿದೆಯೆನ್ನಿಸಿದರೂ, ಕೊಕ್ಕು, ಮುಖಚರ್ಯೆ ಎಲ್ಲ ಗಿಣಿಯ ಜಾತಿಯವನಂತೆಯೇ ತೋರುತ್ತಿತ್ತು. ಪಂಜರದೊಳಕ್ಕಿರುವವರು ಸಾಮಾನ್ಯವಾಗಿ ಖಿನ್ನರಾಗಿರುತ್ತಾರೆ, ಆದರೆ ತಮ್ಮ ಸಂತಸಕ್ಕೆ ಕಾರಣಗಳೇನೆಂದು ಪ್ರಶ್ನಿಸಿದೆ. ಸಮಂಜಸ ಉತ್ತರವೇನೋ ಸಿಕ್ಕಿತು. ಆದರೆ ಬಹಳ ಬೇಸರವಾಯಿತು."ನಾವು ಒಬ್ಬರನ್ನೊಬ್ಬರು ಬಿಟ್ಟು ಬದುಕಲಾಗುವುದಿಲ್ಲ. ಅವಳ ವಿನಾ ನಾನು, ನನ್ನ ವಿನಾ ಅವಳು ಹೆಚ್ಚು ದಿನ ಉಳಿಯಲಾಗದು. ಮನುಷ್ಯರು ಇದನ್ನು ಅರ್ಥ ಮಾಡಿಕೊಂಡಿದ್ದಾರಲ್ಲ ಎಂದು ಒಂದು ಸಮಾಧಾನವಷ್ಟೆ? ನಮಗಿರುವ ನೋವನ್ನು ಒಬ್ಬರೊಂದಿಗೊಬ್ಬರು ಇರುವುದರಿಂದ ಮರೆಯುತ್ತಿದ್ದೇವೆ. ಬೇರೆ ಕಡೆ ಗಮನ ಹರಿಸಿ ಖಿನ್ನರಾಗಿ ಸಾಯುವುದಕ್ಕಿಂತ ಜೋಡಿಯಾಗಿಯೇ ಬದುಕೋಣ, ಜೋಡಿಯಾಗಿಯೇ ಸಾಯೋಣ ಎಂದು ಪಣ ತೊಟ್ಟ ಹಾಗೆ. ನಮ್ಮನ್ನು ಫ್ರೆಂಚಿನವರು les inséparables ಎಂದೇ ಕರೆದರು. ಜರ್ಮನರು die Unzertrennlichen ಎಂದರು. ಬೇರೆಯಾಗಲು ಅಸಾಧ್ಯವಾದವರು ಎಂದರ್ಥ ಆಂಗ್ಲರು Love Birds ಎಂದು ಕರೆದರು.. ಯಾರು ಏನು ಕರೆದರೇನಂತೆ, ನಾವು ಇರುವುದೇ ಹೀಗೆ!"

ನಮ್ಮವರ ಹಾಗೆ ಗಂಡು ಹೆಣ್ಣು ವ್ಯತ್ಯಾಸ ಗೊತ್ತಾಗದಂತಿಲ್ಲ ಈ ಜೋಡಿಹಕ್ಕಿಗಳು. ಗಂಡು ಮತ್ತು ಹೆಣ್ಣುಗಳ ನಡುವೆ ಪ್ರಮುಖವಾದ ವ್ಯತ್ಯಾಸ ಗೊತ್ತಾಗುವಂತಿತ್ತು. ಸುಲಭವಾಗಿ ಜೋಡಿಯನ್ನು ಹಿಡಿದು ಬುಟ್ಟಿಯೊಳಗೆ ಹಾಕಿಕೊಳ್ಳಬಹುದು ಎಂದು ಮನುಷ್ಯನು ಆಲೋಚಿಸದೇ ಇರನು. ಹಾಗಂತ ಎಲ್ಲ ಜಾತಿಯ ಜೋಡಿಹಕ್ಕಿಗಳೂ ಹೀಗಿರುವುದಿಲ್ಲವಂತೆ, ಕೆಲವರಲ್ಲಿ ಮಾತ್ರವಂತೆ.

ಆಫ್ರಿಕಾದ ಬೃಹದಾರಣ್ಯವೆಲ್ಲಿ, ಶಿವಾಜಿನಗರದ ಕಿಷ್ಕಿಂಧವೆಲ್ಲಿ! ಅಮರಪ್ರೇಮಿಗಳಿಗೆ ಈ ಸ್ಥಿತಿಯೊದಗಿದೆಯಲ್ಲ, ಎಂದು ನೋವಾಯಿತು.

ಯಾರೋ "ಪುಣ್ಯಾತ್ಮರು" ಬಂದು ಅಂಗಡಿಯವನನ್ನು ವಿಚಾರಿಸುತ್ತಿದ್ದರು. ಅಂಗಡಿಯವನು ನನ್ನೆಡೆಗೆ ಸಿಡುಕು ಮುಖ ಮಾಡಿಕೊಂಡು ನೋಡಿದ. ಪಕ್ಕದಲ್ಲಿದ್ದ ಕೋಲನ್ನೆತ್ತಿ ನನ್ನೆಡೆಗೆ ಬೀಸಿದ. ತಗುಲಿದರೆಲ್ಲಿ ನಾನು ಅನಾಥ ಶವವಾಗಿ "ಕಾಗೆಗೋ ನಾಯಿಗೋ" ಆಹಾರವಾಗಬೇಕೆಂಬ ಭಯದಿಂದ "ಸರಿ, ನಾನು ಹೊರಡ್ತೀನಿ" ಎಂದು ಹಾರಿ ಗೂಡು ಸೇರಿಕೊಂಡೆ.

.....................................................................................

ಜೋಡಿಹಕ್ಕಿ - Love Birds ಎಂಬ ಆಫ್ರಿಕಾ ದೇಶದ ಹಕ್ಕಿಯನ್ನು ನಮ್ಮಲ್ಲಿ ಎಷ್ಟೋ ಜನರ ಮನೆಯೊಳಗೆ ಪಂಜರದಲ್ಲಿಟ್ಟಿಕೊಂಡಿರುವುದನ್ನು ನೋಡಿರಬಹುದು ನಾವು. ಗಂಡು-ಹೆಣ್ಣು ಒಟ್ಟಿಗೇ ಇರುತ್ತೆ, ಒಂದು ಸತ್ತರೂ ಇನ್ನೊಂದು ಪ್ರಾಣ ಬಿಡುವುದು ಎಂದು ಜನ ನಂಬಿಯೂ ಇದ್ದಾರೆ, ಆದರೆ, ಬೇರೆ ಇನ್ನೊಂದು ಬಂದರೆ ಅದರೊಂದಿಗೆ ಹೊಂದಿಕೊಳ್ಳುತ್ತೆ. ಒಟ್ಟು ಎಂಟು ಬಗೆಯ ಜೋಡಿ ಹಕ್ಕಿಗಳಿದ್ದು, ಎಂಟೂ ಆಫ್ರಿಕಾಕ್ಕೆ ಸೇರಿದ್ದವು. ಕೆಲವು ಬಗೆಯ ಜೋಡಿಹಕ್ಕಿಗಳಲ್ಲಿ Sexual Dimorphism ತೋರಿಕೆಯಾಗಿರುತ್ತೆ - ಎಂದರೆ, ಗಂಡು ಮತ್ತು ಹೆಣ್ಣು ನಡುವೆ ರೂಪದಲ್ಲಿ ಭಿನ್ನತೆಯಿರುವುದು - ನವಿಲುಗಳು, ಬಾತು ಕೋಳಿಗಳಲ್ಲಿರುವಂತೆ.ಆ ಎಂಟು ಬಗೆಯ ಜೋಡಿಹಕ್ಕಿಗಳ ಬಗ್ಗೆ ಒಂದಿಷ್ಟು ಮಾಹಿತಿ: http://docs.google.com/Doc?id=dhkg9gr2_84dnkzqpcg

......................................................................................

ಕಾಕರಾಯರು ಮುಂದಿನ ಸಲ ಇನ್ಯಾವ ಕಥೆಯನ್ನು ಹೇಳುತ್ತಾರೋ ನೋಡೋಣ.

-ಅ
08.02.2009
7PM

9 comments:

 1. ಮಿ. ಕಾss ಕಾss ರಾಯ ಅವ್ರನ್ನ ಪರಿಸರ ಶಾಲೆಗೆ ಕರೆತಂದು ಪಾಠ ಹೇಳಿಕೊಡ್ಸ್ತಾ ಇರೋದು ನಮಗಂತೂ ಬೋ ಇಷ್ಟ ಆಗೋಯ್ತು ಅರುಣ್ :)
  ಲವ್ ಬರ್ಡ್ಸ್ ಅಂತ ನಿಜವಾಗಿಯೂ ಬರ್ಡ್ಸ್ ಇದಾವೆ ಅಂತ ನನಗೆ ಈ ಮೊದಲು ಗೊತ್ತಿರಲಿಲ್ಲ.. thanx to Mr. ಕಾಕರಾಯ!! :)

  ReplyDelete
 2. ಕಾಕ ರಾಯರ ಕಥೆ ಇಷ್ಟ ಆಯ್ತು :-)

  ReplyDelete
 3. ಅರುಣ,
  ಕತೆ ಹೇಳುವ ರೀತಿಯಲ್ಲೆ ಮಾಹಿತಿಯನ್ನು ತೆರೆದಿಟ್ಟಿರಿ. ಕತೆ ಹಾಗೂ ಚಿತ್ರಗಳು ಇಷ್ಟವಾದವು. ಈ ಹಕ್ಕಿಗಳನ್ನು ಹಿಡಿದು ಹಾಕುವ ಮಾನವದೌರ್ಜನ್ಯದ ಬಗೆಗೆ ಬೇಸರವೂ ಆಯಿತು.

  ReplyDelete
 4. chennagide artice..interersting.pictures innu chenngide,,,cute... :-)

  ReplyDelete
 5. [ಡಾ. ಗುರುಮೂರ್ತಿ ಹೆಗ್ಡೆ] ಧನ್ಯವಾದಗಳು ಡಾಕ್ಟ್ರೇ.

  [ಭವ್ಯಾ] ಥ್ಯಾಂಕ್ಸ್.. :-)

  [ವಿಜಯಾ] ಹೌದು. ನನ್ನ ಕಥೆಗಾರ ಕಾಲಿಯಾ ದಿ ಕ್ರೋ. ಕನ್ನಡದಲ್ಲಿ ಕಾಕರಾಯ.

  [ಸುನಾಥ್] ನಿಜ, ನೋಡಿ. ಹೇಗೆ ಸ್ವಾರ್ಥಿಗಳಾಗಿದ್ದೇವೆ ನಾವು!

  [ಅನಾನಿಮಸ್] ಧನ್ಯವಾದಗಳು.

  [ರಮೇಶ್] ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಲವ್ ಬರ್ಡ್ಸ್ ಬಗ್ಗೆ ತಿಳ್ಕೊಂಡ್ವಿ, ನೋಡಿ. ನಿಮಗೆ ಇಷ್ಟ ಆಗೋಯ್ತಲ್ಲ, ನನಗೂ ಖುಷಿಯಾಗೋಯ್ತು.

  ReplyDelete
 6. ಚೆನ್ನಾಗಿ ಬರ್ದಿದೀರ, ಉಪಯುಕ್ತ ಮಾಹಿತಿ

  ReplyDelete

ಒಂದಷ್ಟು ಚಿತ್ರಗಳು..