Sunday, February 22, 2009

ಧರ್ಮಸಂಕಟಬಹುಶಃ ನನ್ನಂತೆಯೇ ಈ ಧರ್ಮಸಂಕಟದಲ್ಲಿ ಅನೇಕರು ಸಿಲುಕಿರುತ್ತಾರೆ. ದಾರಿಯಲ್ಲಿ ಯಾವುದಾದರೊಂದು ಪ್ರಾಣಿಯು ಅಸಹಾಯಕವಾಗಿ ಗಾಯಗೊಂಡು ಒದ್ದಾಡುತ್ತಿದ್ದರೆ, ಸಾಯುತ್ತ ಬಿದ್ದಿದ್ದರೆ, ರಕ್ಷಿಸಬೇಕೆಂಬ ಮನಸ್ಸಿದ್ದರೂ ಅದನ್ನು ಹೇಗೆ ರಕ್ಷಿಸಬೇಕೆಂಬ ಅರಿವಿಲ್ಲದೆ ಒದ್ದಾಡುವಂತಾಗುತ್ತೆ.

ಮೊನ್ನೆ ಶ್ರೀಕಾಂತ ಹೇಳುತ್ತಿದ್ದ, ತನ್ನ ಗಾಡಿಗೆ ಒಂದು ಹಾವು ಸಿಕ್ಕಿಹಾಕಿಕೊಂಡಿಬಿಟ್ಟಿತು ಎಂದು. ನನಗೂ ಇಂತಹ ಅನುಭವಗಳಾಗಿವೆ. ತೀರ ಕೆಳಗೆ ಹಾರುತ್ತಿದ್ದ ಕಾಗೆಯೊಂದು ನನ್ನ ಬೈಕಿಗೇ ಡಿಕ್ಕಿ ಹೊಡೆದು, ಗೇರ್ ಲಿವರ್‍ಗೆ ಸಿಲುಕಿ, ಇಂಜಿನ್ನಿನ ಶಾಖಕ್ಕೆ ಸತ್ತು ಹೋದ ನಂತರ ಅದನ್ನು ಕಾಲಡಿಯಿಂದ ತೆಗೆಯುವುದು ಕಷ್ಟಕರವಾಗಿತ್ತು - ಮನಸ್ಸಿಗೆ. ರಸ್ತೆಯನ್ನು ಗಮನಿಸುತ್ತ ಬೈಕನ್ನೋಡಿಸುತ್ತಿದ್ದಾಗ ಒಮ್ಮೆ ಮರದ ಮೇಲಿಂದ ಅಳಿಲೊಂದು ಸರ್ರನೆ ಇಳಿದು ಬಂದು ಆತ್ಮಹತ್ಯೆ ಮಾಡಿಕೊಳ್ಳುವಂತೆ ನನ್ನ ಗಾಡಿಯ ಚಕ್ರಕ್ಕೆ ಸಿಕ್ಕಿಕೊಂಡುಬಿಟ್ಟಾಗ ನನಗೆ ಆದ ಚತ್ರಹಿಂಸೆ ಅಷ್ಟಿಷ್ಟಲ್ಲ. ನಗರದಲ್ಲಿ ವಾಸಿಸುವಾಗ ಇಂಥ ಅವಘಡಗಳನ್ನು ತಡೆಗಟ್ಟಲು ಕಷ್ಟಸಾಧ್ಯ. ಆದರೆ, ಧರ್ಮಸಂಕಟವೇನೆಂದರೆ ಗಾಯಗೊಂಡಿರುವ ಪ್ರಾಣಿಯೊಂದು ಕಣ್ಣೆದುರು ಸಿಕ್ಕರೆ ಅದಕ್ಕೆ ಹೇಗೆ ಶುಶ್ರೂಷೆ ಮಾಡಬೇಕು? ಮನುಷ್ಯರಾದರೆ ಹತ್ತಿರದ ಆಸ್ಪತ್ರೆಗೆ ಸೇರಿಸಬಹುದು. ಪೋಲೀಸ್ ಕೇಸೋ, ಕೋರ್ಟೋ ಕಚೇರಿಯೋ ಆಮೇಲೆ ನೋಡಿಕೊಳ್ಳಬಹುದು. ಆದರೆ ಪ್ರಾಣಿಗಳನ್ನು?ನಾಯಿಗೆ ಅಪಘಾತದಲ್ಲಿ ಗಾಯವಾಯಿತೆಂದಿಟ್ಟುಕೊಳ್ಳೋಣ. ಪ್ರಾಣಿಯ ಆಸ್ಪತ್ರೆಯೂ ಇದೆ. ಆದರೆ ನಾಯಿಯನ್ನು ಹೊತ್ತುಕೊಳ್ಳುವುದಾದರೂ ಹೇಗೆ? ನೋವಿನಿಂದ ನರಳುತ್ತಿರುವ ನಾಯಿಯನ್ನು ಹೊತ್ತುಕೊಂಡರೆ ನೋವು ಜಾಸ್ತಿಯಾಗಿ ಕಚ್ಚಿಬಿಟ್ಟರೆ? ಗಾಯಗೊಂಡ ಪ್ರಾಣಿಗಳು ಆರೋಗ್ಯವಂತ ಪ್ರಾಣಿಗಳಿಗಿಂತ ಅಪಾಯಕಾರಿ ಎಂಬುದು ತಿಳಿದುಕೊಂಡಿರಬೇಕು. ಸಾರ್ವಜನಿಕರು ಈ ಸ್ಥಿತಿಯಲ್ಲಿ ಎಷ್ಟು ನಿಸ್ಸಹಾಯಕರಲ್ಲವೆ? ರಕ್ಷಿಸಬೇಕೆಂಬ ಮನಸ್ಸಿದೆ, ಆದರೆ ಧೈರ್ಯವಿಲ್ಲ.

ಪಾರಿವಾಳವನ್ನು ಹಿಡಿದು ಮಾರುವವರ ಕುಕೃತ್ಯವೆಂದರೆ ಅದರ ರೆಕ್ಕೆಗಳನ್ನು ಕತ್ತರಿಸಿಬಿಡುವುದು. ಇಂಥದ್ದೊಂದು ಪಾರಿವಾಳವು ಮನೆಯ ಬಳಿ ಬಂದುಬಿಟ್ಟಿತೆಂದುಕೊಳ್ಳೋಣ. ಏನು ಮಾಡೋದು? ನಮ್ಮ ಕಂಡರೆ ಅದಕ್ಕೆ ಎಲ್ಲಿಲ್ಲದ ಭೀತಿ. ಹತ್ತಿರವೂ ಬರುವುದಿಲ್ಲ. ನಾವೇ ಅದರ ಬಳಿ ಕೈ ತೆಗೆದುಕೊಂಡು ಹೋದರೆ ಎಲ್ಲಿ ಕುಕ್ಕಿಬಿಡುತ್ತೋ ಎಂಬ ಭಯ! ಆದರೆ ಅದನ್ನು ಹಾಗೇ ಬಿಟ್ಟರೆ ಹಸಿವಿನಿಂದಲೋ ಬೆಕ್ಕಿನ ಆಹಾರವಾಗಿಯೋ ಪ್ರಾಣ ಬಿಡುತ್ತೆ ಪಾರಿವಾಳ. ಏನಾದರೂ ಮಾಡಿ ರಕ್ಷಿಸಲೇ ಬೇಕು! ಆದರೆ ಹೇಗೆ?

ಪಾರಿವಾಳದಂತೆಯೇ ಮನಸ್ಸನ್ನು ಕಾಡುವುದು ಅಳಿಲು. ಮನೆಯ ಸುತ್ತಮುತ್ತಲಿನ ಮರಗಳಿಂದ ಮನೆಯೊಳಗೆ ಅಳಿಲು ಬಂದು ಮರಿ ಹಾಕಿ ಸತ್ತುಹೋಯಿತೆಂದರೆ? ಎಳೇ ಮರಿಗಳು. ಅನಾಥ ಮರಿಗಳು. ಬೆಕ್ಕಿನ ಮರಿಗಳು, ನಾಯಿಯ ಮರಿಗಳಾದರೆ ಹೇಗೋ ಕಷ್ಟ ಪಟ್ಟು ಉಳಿಸಬಹುದು, ವೈದ್ಯರ ಬಳಿ ತೆಗೆದುಕೊಂಡು ಹೋಗಬಹುದು, ಕೊಟ್ಟುಬಿಡಬಹುದು. ಆದರೆ ಅಳಿಲು? ಹೇಗ ಉಳಿಸುವುದು?ಈಗ ಸಂತತಿಯು ಕ್ಷೀಣಿಸಿ ಹೋಗಿರುವ ಗುಬ್ಬಚ್ಚಿಯ ಪಾಡು ಅಷ್ಟಿಷ್ಟಲ್ಲ. ಕಾಗೆಯೋ ಹದ್ದೋ ಅಟ್ಟಿಕೊಂಡು ಹೋಗಿ ಗುಬ್ಬಿಯೊಂದನ್ನು ಗಾಯಗೊಳಿಸಿ ಕೆಳಗೆ ಬೀಳಿಸಿಬಿಟ್ಟಿದೆ. ಅಥವಾ, ಮನೆಯ ಸೂರಿನಲ್ಲಿರುವ ಗೂಡಿನಲ್ಲಿ ಮರಿಗಳನ್ನು ಬಿಟ್ಟು ಹೋದ ತಾಯಿ ಗುಬ್ಬಿಯು ಮರಳಿ ಬರಲೇ ಇಲ್ಲ. ಈಗ ಮರಿಗುಬ್ಬಿಗಳ ಗತಿ? ನಮ್ಮ ಕಣ್ಣೆದುರೇ ನಮ್ಮ ಮನೆಯಲ್ಲೇ ಇದೆ. ಆರ್ತನಾದದಂತೆ ಕೂಗುತ್ತಿದೆ. ನಾನೂ ಗುಬ್ಬಚ್ಚಿಯಾಗಿರಬೇಕಿತ್ತು ಆಗ ಉಳಿಸಬಹುದಿತ್ತು ಎಂಬುವಷ್ಟರ ಮಟ್ಟಿಗೆ ನೋವಾಗುತ್ತೆ!! ಗುಬ್ಬಚ್ಚಿಯನ್ನು ಮನುಷ್ಯರು ಮುಟ್ಟಿದರೆ ಬೇರೆ ಗುಬ್ಬಚ್ಚಿಗಳು ಅವನ್ನು ಕೊಂದು ಸಾಯಿಸಿಬಿಡುತ್ತಂತೆ, ನಾನು ರಕ್ಷಿಸಿಯೂ ಏನು ಪ್ರಯೋಜನ? ಅವುಗಳ ಸಾವನ್ನು ಕಣ್ಣೆದುರೇ ನೋಡಬೇಕೇ?

ಮನೆಯೊಳಗೆ ಹಾವು ಬಂದರೆ ಅದನ್ನು ಮೊದಲು ದೊಣ್ಣೆ ತೆಗೆದುಕೊಂಡು ಬಡಿದು ಕೊಲ್ಲುವ ಜನರ ಗುಂಪು ಒಂದಾದರೆ, ಹಾವಾಡಿಗನನ್ನು ಕರೆಸಿ ಹಿಡಿಸಿಬಿಡುವುದು ಇನ್ನೊಂದು ಗುಂಪು. ಮತ್ತೆ ಕೆಲವರು ಆ ಬೀದಿಯ ಧೀರರನ್ನು ಕರೆಸಿ ಹಾವನ್ನು ಕೊಲ್ಲಿಸಿ ನಂತರ ಸುಬ್ರಹ್ಮಣ್ಯನಿಗೆ ಹಾಲೆರೆದು ಪಾಪ ಪರಿಹಾರ ಮಾಡಿಕೊಳ್ಳುತ್ತಾರೆ. ಆದರೆ ಸುತ್ತ ಮುತ್ತ ಹಾವಾಡಿಗರೇ ಇಲ್ಲದೇ ಇದ್ದರೆ? ತೀರ ಮನೆಯೊಳಗೇ ಹಾವು ಬಂದುಬಿಟ್ಟಿದೆ, ಪ್ರಾಣಿಹತ್ಯೆ ಮಾಡುವುದಾದರೂ ಸಾಧ್ಯವೇ? ರಕ್ಷಣೆ ಮಾಡುವ ಮನಸ್ಸು. ಆದರೆ ಹೇಳಿ ಕೇಳಿ ಅದು ಹಾವು. ಯಾವ ಹಾವೆಂದೂ ಗೊತ್ತಿಲ್ಲ. ಹೆಡೆ ಎತ್ತುತ್ತಿಲ್ಲ, ನಾಗರ ಹಾವಂತೂ ಅಲ್ಲ, ಆದರೆ ಬೇರೆ ವಿಷದ ಹಾವಾದರೆ?

ಎಷ್ಟೊಂದು ಪ್ರಶ್ನೆ! ಎಷ್ಟೊಂದು ಸಮಸ್ಯೆ!! ಎಷ್ಟೊಂದು ಸಂಕಟ!! ಧರ್ಮಸಂಕಟ!!! ಪರಿಸರಪ್ರೇಮಿಯಾಗಿದ್ದಕ್ಕೆ ಈ ಸಂಕಟದ ಕರ್ಮವೇ??

ಉತ್ತರ ಹುಡುಕಲು ಪ್ರಯತ್ನಿಸೋಣ. ಅನುಭವದಿಂದ ಉತ್ತರ ಹುಡುಕಿದರೆ ಒಳ್ಳೆಯದು.

ಮೊದಲಿಗೆ ಪ್ರಾಣಿಗಳ ಚಲನವಲನಗಳನ್ನು - Body Language - ಅನ್ನು ಗಮನಿಸಬೇಕು. ಉದಾಹರಣೆಗೆ ಗಾಯಗೊಂಡಿರುವ ನಾಯಿಯು ವಿಪರೀತ ನರಳುತ್ತಿದ್ದರೆ ಅದರ ಬಳಿ ಹೋಗಿ ತಲೆ ಸವರಲು ಯತ್ನಿಸಿದರೆ ಅದು ಕಚ್ಚುವ ಸಾಧ್ಯತೆ ಹೆಚ್ಚು. ಯಾಕೆಂದರೆ ನಾವು ಅದಕ್ಕೆ ಶುಶ್ರೂಷೆ ಮಾಡಲು ಹೋಗುತ್ತಿದ್ದೇವೆಂದು ಅದಕ್ಕೆ ಗೊತ್ತಿರುವುದಿಲ್ಲ. ನಾಯಿಯ ಕಾಲಿಗೆ ಮುಳ್ಳು ಚುಚ್ಚಿದಾಗ ಅದನ್ನು ನಾವೇ ತೆಗೆಯಲು ಹೋಗುವುದು ಅಷ್ಟು ಉತ್ತಮ ಸಲಹೆಯಲ್ಲ. ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಸಾಕಿದ ನಾಯಿಯಾದರೆ ಸರಿ, ಬೀದಿ ನಾಯಿಗಳನ್ನು ಹೇಗೆ ಕರೆದುಕೊಂಡು ಹೋಗುವುದು? ಆ ಪ್ರಾಣಿಯನ್ನು ಮೊದಲು "ಬಂಧಿಸ"ಬೇಕು. ನಂತರ ಪ್ರಾಣಿವೈದ್ಯರ ಬಳಿ ಕರೆದೊಯ್ಯಬೇಕು.

ವೈದ್ಯರಿಂದ ಬಗೆಹರಿಯದ ಸಮಸ್ಯೆ ಎದುರಿದ್ದರೆ, ಉದಾಹರಣೆಗೆ ಪಾರಿವಾಳ, ಅಳಿಲು, ಗುಬ್ಬಚ್ಚಿಯ ಮರಿಯ ಕೇಸು, ಆಗ ನಾವು ಪ್ರಾಣಿಗಳ ಆಹಾರ ಪದ್ಧತಿಯನ್ನು ತಿಳಿದುಕೊಂಡಿರಬೇಕು. ಸಸ್ತನಿಗಳೆಲ್ಲವೂ ಹಾಲನ್ನು ಕುಡಿಯುತ್ತವೆ. ಪಕ್ಷಿಗಳೆಲ್ಲವೂ ಧಾನ್ಯಗಳನ್ನು ತಿನ್ನುತ್ತವೆ. ಆದರೆ ಮರಿ ಪಕ್ಷಿಗಳಿಗೆ ಅರ್ಧ ಜೀರ್ಣವಾದ ಆಹರ ಅಗತ್ಯ. ಸ್ವಲ್ಪ ರುಬ್ಬಿದ, ಜಜ್ಜಿದ ಆಹಾರವನ್ನು ತಿನ್ನಿಸಬಹುದು. ಗಾಳಿ, ಧೂಳು ಇವುಗಳಿಂದ ರಕ್ಷಿಸಬೇಕು. ಹಾಗಂತ ಮಗುವನ್ನು ಬಟ್ಟೆಯಲ್ಲಿ ಸುತ್ತಿಬಿಡುವಂತೆ ಬಂಧಿಸಬಾರದು. ಬೆಚ್ಚನೆಯ ವಾತಾವರಣ ಸೃಷ್ಟಿ ಮಾಡುವುದೊಳಿತು. ಏನೇ ಆಗಲೀ ನಾವು ತಾಯಿಯಾಗಲು ಸಾಧ್ಯವಿಲ್ಲ. ಆದರೆ ಸಾಕುತಾಯಿಯಾಗಬಹುದು. ರೆಕ್ಕೆ ಬಲಿಯುವ ತನಕ. ನಂತರ ತಮ್ಮ ಬದುಕು ತಮ್ಮದು! ಮೂಢನಂಬಿಕೆಗಳನ್ನು ಬಿಡಬೇಕು. ಮನುಷ್ಯಸ್ಪರ್ಶವಾದ ಬಳಿಕ ಬೇರೆ ಹಕ್ಕಿಗಳು ಕೊಂದುಬಿಡುತ್ತವೆ ಎನ್ನುವುದು ತಪ್ಪು ನಂಬಿಕೆ. ಗುಂಪಿನಲ್ಲಿ ಯಾವುದಾದರೂ ಒಂದು ಪಕ್ಷಿ ತೀರ ದುರ್ಬಲವಾಗಿದ್ದರೆ ಅದನ್ನು ಉಳಿದ ಪಕ್ಷಿಗಳು ಕೊಂದುಬಿಡುತ್ತವೆ. ಕರುಣೆಯೆಂಬುದು ಪ್ರಕೃತಿಯ ಡಿಕ್ಷನರಿಯಲ್ಲಿಲ್ಲ.ಇನ್ನು ಹಾವಿನ ವಿಷಯಕ್ಕೆ ಬರೋಣ. ಮನೆಗೆ ಹಾವು ಬಂದರೆ ರಕ್ಷಣೆ ಬೇಕಾಗಿರುವುದು ಮನೆಯವರಿಗಿಂತ ಹೆಚ್ಚಾಗಿ ಹಾವಿಗೆ. ಯಾಕೆಂದರೆ ಆಗ ತೊಂದರೆಯಿರುವುದು ಹಾವಿಗೇ ಹೊರೆತು ಮನೆಯವರಿಗಲ್ಲ. ಮನೆಯವರಿಗೇನಾದರೂ ತೊಂದರೆಯಾದರೆ ಅದು ಅವರ ದಡ್ಡತನದಿಂದಲೇ. ಯಾವುದೇ ಹಾವಾಗಲೀ, ವಿಷದ ಹಾವೋ ಅಲ್ಲವೋ ಅದು ಮುಖ್ಯವಲ್ಲ, ನಮಗಿಂತ ಹತ್ತರ ಪಟ್ಟು ಹೆಚ್ಚು ಹೆದರಿರುತ್ತವೆ. ತಪ್ಪಿಸಿಕೊಂಡು ಹೋದರೆ ಸಾಕೆಂದು ಕಾಯುತ್ತಿರುತ್ತೆ. ನಮ್ಮನ್ನು ಕೊಲ್ಲುವ ಉದ್ದೇಶ ಇರುವುದಿಲ್ಲ. ತನ್ನನ್ನು ತಾನು ರಕ್ಷಿಸಿಕೊಳ್ಳುವುದಷ್ಟೇ ಗುರಿ. ಅದಕ್ಕೆ ಸಹಾಯ ಮಾಡಿಬಿಟ್ಟರೆ ಸಾಕು. ದೊಡ್ಡದೊಂದು ಕೋಲನ್ನು ತೆಗೆದುಕಂಡು ಹಾವಿನ ಹೊಟ್ಟೆಯ ಬಳಿ ಇಟ್ಟು ಹಗ್ಗವನ್ನು ತಳ್ಳುವಂತೆ ತಳ್ಳುತ್ತ ಮನೆಯಿಂದ ಹೊರಗೆ ಬಂದು ಯಾವುದಾದರೂ ದೊಡ್ಡ ರಂಧ್ರದ ಬಳಿಯೋ ಚರಂಡಿಯ ಬಳಿಯೋ ದೂಡಿದೆವೆಂದರೆ ಮುಗಿಯಿತು, ಅದರ ಪಾಡಿಗೆ ಅದು ಹೋಗುತ್ತೆ. ನಾಗರ ಹಾವಾದರೆ ಹೆಡೆಯೆತ್ತುತ್ತೆ, ಹೆದರಬೇಕಾಗಿಲ್ಲ. ಅದರ ಪಾಡಿಗೆ ಅದು ಹೆಡೆಯೆತ್ತಲಿ. ದೂರದಿಂದ ಕೋಲಿನ ಸಹಾಯದಿಂದ ಅದನ್ನು ತಳ್ಳುತ್ತ ಹೋದರೆ ಸಾಕು. ಗಾಬರಿಗೊಳ್ಳದೆ, ಶಬ್ದ ಮಾಡಿ ಕುಣಿದಾಡದೆ, ಹಾವಿನ ಮುಖಕ್ಕೆ ನೀರೆರಚದೆ, ಬರಿಗೈಯಲ್ಲಿ ಧೈರ್ಯ ಶೌರ್ಯ ಪ್ರದರ್ಶನಕ್ಕಾಗಿ ಹಿಡಿದುಕೊಳ್ಳಲು ಹೋಗದೆ ಇದ್ದರೆ ಅಷ್ಟೆ ಸಾಕು. ಹಾವೂ ಉಳಿಯುತ್ತೆ, ನಾವೂ ಉಳಿಯುತ್ತೇವೆ. Live and let live!

ನಾನು ಹೈಸ್ಕೂಲಿನಲ್ಲಿದ್ದಾಗ ಒಮ್ಮೆ ಬೆನ್ನು ಕೆರೆತವಾದ ಹಸುವೊಂದು ಒಂದು ಟ್ರಾನ್‍ಸ್ಫಾರ್ಮರ್‍ಗೆ ಉಜ್ಜಿಕೊಳ್ಳಲು ಹೋಗಿ ಶಾಕ್ ಹೊಡೆಸಿಕೊಂಡು ನನ್ನ ಕಣ್ಣೆದುರೇ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿತ್ತು. ಜೊಲ್ಲು ಸುರಿಸಿ ಮೈಯೆಲ್ಲಾ ನಡುಗಿಸಿಕೊಂಡು ಕಂಬಕ್ಕೇ ಅಂಟಿಕೊಂಡು ಒದ್ದಾಡುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣು ಮುಂದಿದೆ. ನಾವು ಎಷ್ಟು ನಿಸ್ಸಹಾಯಕರಲ್ಲವೇ?

-ಅ
22.02.2009
12.15AM

Thursday, February 12, 2009

ಡಾರ್ವಿನ್ ನೆನಪುಇಂದಿಗೆ (ಫೆ. ೧೨) ಸರಿಯಾಗಿ ಇನ್ನೂರು ವರ್ಷದ ಕೆಳಗೆ ಹುಟ್ಟಿದ ಡಾರ್ವಿನ್ ಜಗತ್ತಿನ ಚಿಂತನಾ ಹಾದಿಯನ್ನೇ ಬದಲಿಸಿದರು. ಕಾಕತಾಳೀಯವೆಂಬಂತೆ ಆತ ರಚಿಸಿದ ಆರಿಜಿನ್ ಆಫ್ ಸ್ಪೀಷೀಸ್ ಪುಸ್ತಕಕ್ಕೆ ನೂರೈವತ್ತು ವರ್ಷ ಇಂದಿಗೆ.

ಡಾರ್ವಿನ್ನಿನ ವಿಕಾಸವಾದದ ಬಗ್ಗೆ ಅಸಮಾಧಾನ ವ್ಯಕ್ತ ಪಡಸಿದ್ದವರು ಆ ಕಾಲದಲ್ಲಿ ಬಹಳ ಮಂದಿಯಿದ್ದರು. ಈಗ ಆ ಜನರ ಸಂಖ್ಯೆ ಕಡಿಮೆಯಾಗಿದೆಯಾದರೂ ವಿಕಾಸವಾದ ಸರಿಯಾಗಿ ತಿಳಿಯದೇ ವಾದಿಸುವವರೇ ಹೆಚ್ಚು.

ವಿಕಾಸವಾದದ ವಿರೋಧಿಗಳು, "ಸೃಷ್ಟಿ"ವಾದಿಗಳು, ವಿಕಾಸವಾದವನ್ನು ಬೋಧಿಸುವುದೇ ತಪ್ಪೆಂದು ಹೇಳುತ್ತಾರೆ. ಸಿದ್ಧಾಂತಗಳನ್ನು ಸತ್ಯವೆಂದು ಬೋಧಿಸುವುದು ಅಪರಾಧವೆಂದು ಅವರ ವಾದ. ಹಾಗೆ ನೋಡೋಕೆ ಹೋದರೆ, ಅಣುಶಾಸ್ತ್ರವೇ ಒಂದು ಸಿದ್ಧಾಂತ, ಅದೇ ರೀತಿ ಗುರುತ್ವಾಕರ್ಷಣೆಯೂ ಒಂದು ಸಿದ್ಧಾಂತವಷ್ಟೆ.

ಮಹಾ ಸ್ಫೋಟಕ್ಕೂ (Big Bang) ವಿಕಾಸವಾದಕ್ಕೂ ಯಾವ ಸಂಬಂಧವೂ ಇಲ್ಲ. ಅಂತೆಯೇ ಜಗತ್ ಸೃಷ್ಟಿಯ ಬಗ್ಗೆಯೂ ವಿಕಾಸವಾದ ಹೇಳುವುದಿಲ್ಲ. ಜೀವವು ಹೇಗೆ ವಿಕಸಿತವಾಗುವುದೆಂದು ಹೇಳುತ್ತೆ ಈ ವಾದ. ಒಂದು ಜೀವಿಯು ಇನ್ನೊಂದು ಜೀವಿಯಾಗಿ ವಿಕಸಿತವಾಗುವುದೆಂಬುದು ಸತ್ಯವಷ್ಟೆ?

ಪಳೆಯುಳಿಕೆಯ ಅಧ್ಯಯನವು ಆರ್‍ಡಿಪಿತಿಕಸ್ ಇಂದ ಹಿಡಿದು ಹೋಮೋ ಸ್ಯಾಪಿಯನ್ಸ್ ವರೆಗೂ ಹಂತ ಹಂತವಾಗಿ ಸಾಕ್ಷ್ಯಗಳನ್ನು ದೊರಕಿಸಿಕೊಟ್ಟಿವೆ. ಅಂತೆಯೇ ಜಲಚರದ ವಿಷಯಕ್ಕೆ ಬಂದರೆ ಯೂಸ್ಥೆನೋಪ್ಟಿರೋನ್ ಇಂದ ಹಿಡಿದು ತಿಮಿಂಗಿಲದವರೆಗೂ ಸಾಕ್ಷ್ಯಗಳನ್ನು ಒದಗಿಸಿಕೊಟ್ಟಿವೆ.

ಅದು ಹೇಗೆ ಅಷ್ಟು ಬೇಗ ಬದಲಾಗುತ್ತೆ? ಎಂದು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ, ಈ ಬದಲಾವಣೆಯು ಅತಿ ನಿಧಾನಗತಿಯಲ್ಲಿ ಸಾಗುತ್ತೆಂಬುದು ವಾಸ್ತವದ ಸಂಗತಿ. ಪ್ರಕೃತಿಯು ಒಳಿತನ್ನು (ಬಲಶಾಲಿಯನ್ನು) ಉಳಿಸಿಕೊಂಡು ಕೆಟ್ಟದ್ದನ್ನು (ಅಬಲ ಜೀವಿಗಳನ್ನು) ಅಳಿಸಿಹಾಕಿಬಿಡುತ್ತೆ. ಜೀನ್‍ಗಳಲ್ಲಿ ಆಗುವ ಮ್ಯುಟೇಷನ್ನುಗಳಂತೆ ಇದ್ದಕ್ಕಿದ್ದ ಹಾಗೆ ಬದಲಾವಣೆಯು ವಿಕಾಸದಲ್ಲಿ ಆಗುವುದಿಲ್ಲ.

ದೇಹ ರಚನೆಗಳನ್ನು ನೋಡಿದರೆ, ಎಷ್ಟು ಆಶ್ಚರ್ಯವಾಗುತ್ತಲ್ಲವೆ? ಎಷ್ಟೊಂದು ಕ್ಲಿಷ್ಟ ರಚನೆ! ಇದು ವಿಕಾಸದಿಂದ ಆಗಲು ಸಾಧ್ಯವೇ ಇಲ್ಲವೆಂದು ಮೂಢನಂಬಿಕಸ್ಥರು ಹೇಳುತ್ತಾರೆ. ಕ್ಲಿಷ್ಟ ದೇಹ ವ್ಯವಸ್ಥೆಯನ್ನು ಅರಿತುಕೊಳ್ಳಬೇಕಾದರೆ ಆ ಜೀವಿಯು ಯಾವುದರಿಂದ ವಿಕಾಸವಾಗಿದೆಯೋ ಅದರ ದೇಹ ವ್ಯವಸ್ಥೆಯನ್ನು ಅಧ್ಯಯನ ಮಾಡಬೇಕು. ಕ್ಲಿಷ್ಟ ವ್ಯವಸ್ಥೆಯ ಕಾರಣ ಹಿಂದಿನ ಜೀವಿಯಲ್ಲಿರುವ ಕೊರತೆ.

ಇನ್ನು ವಿಕಾಸಕ್ಕೆ ಯಾವ ಪರೀಕ್ಷೆಯೂ ಇಲ್ಲವೆಂದೂ ನಂಬಿರುವವರಿದ್ದಾರೆ. ಜೀವಿಗಳು ಯಾವುದೋ ಅತಿಪ್ರಾಕೃತ ಶಕ್ತಿಯಿಂದ "ಸೃಷ್ಟಿ"ಯಾಗಿದೆಯೆಂದು ಮೌಢ್ಯವಾಗಿ ನಂಬುವುದು ಸುಲಭದ ಕೆಲಸ. ಪ್ರತಿಯೊಂದು ಹೊಸ ಪಳೆಯುಳಿಕೆಯು ದೊರಕಿದಾಗಲೂ ಪ್ರತಿಯೊಂದು ಹೊಸ ಜೀನೋಮು ದೊರಕಿದಾಗಲೂ, ಪ್ರತಿಯೊಂದು ಹೊಸ ಸಂಕುಲವು ಆವಿಷ್ಕಾರವಾದಗಲೂ ಪರೀಕ್ಷೆ ನಡೆಯುತ್ತೆ. ವಿಜ್ಞಾನವು ಕೇವಲ ನಂಬಿಕೆ ಮತ್ತು ಹೇಳಿಕೆಗಳನ್ನೊಳಗೊಂಡಿಲ್ಲ. ಪ್ರಯೋಗಗಳು, ಸಾಕ್ಷ್ಯಗಳನ್ನವಲಂಬಿಸಿದೆ.

ವಿಕಾಸವಾದದ ವಿರುದ್ಧ ಒಂದು ಸಾಕ್ಷಿಯೂ ದೊರಕಿಲ್ಲ.

ಇಂತಹ ಸಿದ್ಧಾಂತವನ್ನು ಪ್ರತಿಪಾದಿಸಿದ ಡಾರ್ವಿನ್ನಿನ ಇನ್ನೂರನೆಯ ಹುಟ್ಟುಹಬ್ಬದ ದಿನದಂದು ಆತನನ್ನು ನೆನೆಸಿಕೊಳ್ಳಲು ನಾನು ಸಂತೋಷಿಸುತ್ತೇನೆ.

ಹಿರಿಯ ಮಿತ್ರ ಮೋಹನ್ ಪೈ ಅವರು ಚಾರ್ಲ್ಸ್ ಡಾರ್ವಿನ್ ಬಗ್ಗೆ ಬರೆದಿರುವ ಒಂದು ಸೊಗಸಾದ ಲೇಖನವು ಇಲ್ಲಿದೆ.

-ಅ
12.02.2009
11.45PM

Sunday, February 08, 2009

ಕಾಕರಾಯರ ಕಥೆ ೧ - ಜೋಡಿ ಹಕ್ಕಿ

ಫೆಬ್ರುವರಿ ತಿಂಗಳೆಂದರೆ ಪ್ರೇಮಿಗಳಿಗೆ ಹಬ್ಬ. ಅಂತೆಯೇ ಗ್ರೀಟಿಂಗ್ ಕಾರ್ಡ್ ಮಾರುವವರಿಗೂ ಹಬ್ಬ. ಇನ್ಯಾರೋ ಇವೆಲ್ಲ ಭಾರತೀಯ ಸಂಸ್ಕೃತಿಯಲ್ಲವೆಂದು ರಸ್ತೆಯಲ್ಲಿ ಜೋಡಿಯಾಗಿ ಓಡಾಡಿದರೆಂದರೆ ಜಬರದಸ್ತಿ ಮದುವೆ ಮಾಡಿಸುತ್ತಾರೆಂದರೆ, ಅದೂ ಅವರಿಗೂ ಒಂದು ಹಬ್ಬವೇ.

ಗಂಡು - ಹೆಣ್ಣು ಜೋಡಿಯಾಗಿ ಬದುಕುವುದು ಪ್ರಕೃತಿನಿಯಮ. ಮನುಷ್ಯರ ವಿಷಯ ಈಗ ಇಲ್ಲಿ ಬೇಡ. ಪ್ರಕೃತಿದತ್ತ ಬದುಕಿಗೆ ನಾವು ಸಂಸ್ಕೃತಿಯ ಉಡುಗೆ ತೊಡಿಸಿಕೊಂಡಿದ್ದೇವೆ. ಉಳಿದ ಪ್ರಾಣಿಗಳು ಯಾವುವೂ ಈ ಕೆಲಸ ಮಾಡಿಕೊಂಡಿಲ್ಲ.

ಮನುಷ್ಯನ ಬುದ್ಧಿವಂತಿಕೆಗೆ ಬಲಿಯಾಗಿರುವ ಈ ಪ್ರೇಮಿಗಳ ಬಗ್ಗೆ ಕಾಕರಾಯರು ಹೇಳುವ ಈ ನೈಜ ಕಥೆಯನ್ನು ಕೇಳೋಣ. ಓವರ್ ಟು ಮಿ.ಕೆ.ರಾವ್. (ಕಾಕರಾಯರು)......................................................................................

ಈ ಕಥೆ ನಡೆದದ್ದು ಹಲವಾರು ವರ್ಷಗಳ ಕೆಳಗೆ. ನನ್ನಷ್ಟು ಅದೃಷ್ಟವಂತ, ಸ್ವತಂತ್ರ ಜೀವಿ ಇನ್ಯಾರು ತಾನೇ ಇರಲು ಸಾಧ್ಯ? ಮನುಷ್ಯ ಕೂಡ ಇಲ್ಲ! ಎಂದು ಹಾಡಿಕೊಂಡು ಶಿವಾಜಿನಗರದಲ್ಲಿ ಷಡ್ರಸೋಪೇತ ಮೃಷ್ಟಾನ್ನ ಭೋಜನವಾದ ನಂತರ ವಿರಮಿಸುತ್ತಿದ್ದೆ. ಪಂಜರದೊಳಗಿದ್ದರೂ ಸಂತೋಷವಾಗಿಯೇ ಇದ್ದವೆಂದು ತೋರಿತು, ಈ ಜೋಡಿ. "ಅರೆ! ಇದೇನ್ರಪ್ಪಾ, ಇಷ್ಟೊಂದು ಖುಷಿಯಾಗಿದ್ದೀರ? ಈ ಪಾಟಿ ಗಲಾಟೆ ಮಾಡ್ತಾ ಇದ್ದೀರ? ನಿಮಗೆ ನನ್ನ ಹಾಗೆ ಸ್ವತಂತ್ರವಾಗಿ ಹಾರಾಡಿಕೊಂಡು ಇರಲು ಇಷ್ಟ ಇಲ್ಲವೆ?" ಎಂದು ಹತ್ತಿರ ಹೋಗಿ ಕೇಳಿದೆ. ಹೊರಗೆ ಹಾರುವ ಪ್ರಪಂಚವೂ ಇದೆಯಾ? ಎಂದು ನನ್ನನ್ನು ಅಚ್ಚರಿಯಿಂದ ನೋಡಿದರು ಅವರಿಬ್ಬರು. "ಅಲ್ಲ, ಹಾರೋದೇನಿದ್ರೂ ನಿಮಗಷ್ಟೆ, ನಾವು ಮನೆಗಳಲ್ಲಿರುವವರು. ಈ ಅಂಗಡಿಗೆ ಬರುವ ಭಾಗ್ಯವಂತನೊಬ್ಬನು ನಮ್ಮನ್ನು ಕರೆದೊಯ್ಯುತ್ತಾನೆ. ಅವರ ಮನೆಯಲ್ಲಿಯೇ ನಮ್ಮ ಊಟ." ಎಂದನು.

"ಮತ್ತೆ, ಹೊರಗಿನ ಜಗತ್ತು?"

"ನನಗೆ ಇವಳು, ಇವಳಿಗೆ ನಾನು - ನಮಗೆ ಇಷ್ಟೆ ಜಗತ್ತು!"

ಭಾರತ ದೇಶದಲ್ಲೆಲ್ಲೂ ಇಂಥದ್ದನ್ನು ನೋಡೇ ಇಲ್ಲವಲ್ಲ ನಾನು? ಹಿಮಾಲಯದ ತುತ್ತತುದಿಯಿಂದ ಹಿಡಿದು, ಕನ್ಯಾಕುಮಾರಿಯ ಬಂಡೆಯವರೆಗೂ ಸುತ್ತಾಡಿದ್ದೇನೆ. ಎಲ್ಲ ಬಗೆಯ ಸಸ್ಯಾಹಾರ, ಮಾಂಸಾಹಾರ ಊಟವನ್ನು ಸವಿದಿದ್ದೇನೆ. ನನಗಿಂತ ಚೆಲುವಾದ ಪಕ್ಷಿಗಳೆಲ್ಲವೂ ಬೇಟೆಯಾಗುತ್ತಿರುವುದನ್ನು ನೋಡಿ ಮರುಕ ಪಟ್ಟುಕೊಂಡಿದ್ದೇನೆ. ಆದರೆ, ಈ ರೀತಿ ಜೋಡಿಹಕ್ಕಿಯನ್ನು ನೋಡೇ ಇಲ್ಲವಲ್ಲ! ಅದೂ ಪಂಜರದೊಳಗೆಯೇ ಸಂತಸವಾಗಿದೆಯಲ್ಲಾ? ನನಗೂ ಆಶ್ಚರ್ಯ ಆಯಿತು. ನನ್ನ ನಾಲೆಡ್ಜ್ ಬ್ಯಾಂಕ್ ಎಲ್ಲವನ್ನೂ ತೆಗೆದುಹಾಕಿದೆ. ಏನೂ ದೊರೆಯಲಿಲ್ಲ.

"ಸರಿ, ನೀವು ಎಲ್ಲಿಂದ ಬಂದಿರಿ ಶಿವಾಜಿನಗರಕ್ಕೆ?"

"ನಾವು ಹುಟ್ಟಿದ್ದೇ ಇಲ್ಲಿ".

"ಸಾಧ್ಯವೇ ಇಲ್ಲ! ನನಗೆ ಈ ದೇಶದಲ್ಲಿರುವವರ ಬಗ್ಗೆ ಆಮೂಲಾಗ್ರವಾಗಿ ಗೊತ್ತು! ಸುಳ್ಳು ಹೇಳ್ಬೇಡ!!"

"ನಾವು ಹುಟ್ಟಿದ್ದು ಇಲ್ಲೇ, ಆದರೆ ನಮ್ಮ ಪೂರ್ವಜರು ಆಫ್ರಿಕಾದವರು. ನಮ್ಮದು ಗಿಣಿಯ ಜಾತಿ. ಎಂಟು ಉಪಜಾತಿಯವರೂ ಕೂಡ ಸೌಹಾರ್ದತೆಯಿಂದ ಆಫ್ರಿಕಾದ ದಟ್ಟ ಕಾಡುಗಳಲ್ಲಿ ವಿಲಾಸ ಮಾಡುತ್ತಿದ್ದರು ನಮ್ಮ ಪೂರ್ವಜರು. ನಿಮ್ಮ ಹಾಗೆ ಹೊಟ್ಟೆ ತುಂಬಿತೆಂದರೆ ಮುಗಿಯಿತು ಮಿಕ್ಕಿದ್ದೆಲ್ಲ ನಂತರ ಎಂಬ ಯೋಚನೆ ನಮ್ಮ ಜಾತಿಯವರಿಗಿಲ್ಲ. ನಾವು ಜೋಡಿಹಕ್ಕಿಗಳು. ಆಫ್ರಿಕಾದವರು ನಮ್ಮನ್ನು ಪ್ರೀತಿಸುತ್ತಿದ್ದರು. ನಂತರ ಆಫ್ರಿಕಾದವರ ಹಣದ ಆಸೆಗೆ ಜೋಡಿಗಳು ಇಂಗ್ಲೆಂಡಿಗೆ ಹೋದವು. ಆಫ್ರಿಕಾದಲ್ಲಿ ನಮ್ಮ ಪೂರ್ವಜರು ಎಪ್ಪತ್ತು ವರ್ಷ ಬದುಕುತ್ತಿದ್ದರಂತೆ, ಇಂಗ್ಲೆಂಡಿಗೆ ಬಂದವರ ಆಯುಷ್ಯ ಮೂವತ್ತಕ್ಕೆ ಇಳಿದುಬಿಟ್ಟಿತು. ಜಗತ್ತಿನ ಎಲ್ಲ ಶ್ರೀಮಂತ ದೇಶಗಳನ್ನೂ ಸುತ್ತಿದ್ದಾರೆ ನಮ್ಮವರು."

ನನಗೆ ಈ ಪಕ್ಷಿಯನ್ನು ನೋಡಿ ಗಿಣಿಯ ಜಾತಿಯೆಂದು ನಂಬಲು ಕಷ್ಟಸಾಧ್ಯವಾಯಿತು. ಗಿಣಿಗಳು ಸಾಮಾನ್ಯವಾಗಿ ನನ್ನಷ್ಟೇ ದೊಡ್ಡದಾಗಿರುತ್ತೆ. ಆದರೆ ಇದು ತುಂಬ ಚಿಕ್ಕದಾಗಿದೆಯೆನ್ನಿಸಿದರೂ, ಕೊಕ್ಕು, ಮುಖಚರ್ಯೆ ಎಲ್ಲ ಗಿಣಿಯ ಜಾತಿಯವನಂತೆಯೇ ತೋರುತ್ತಿತ್ತು. ಪಂಜರದೊಳಕ್ಕಿರುವವರು ಸಾಮಾನ್ಯವಾಗಿ ಖಿನ್ನರಾಗಿರುತ್ತಾರೆ, ಆದರೆ ತಮ್ಮ ಸಂತಸಕ್ಕೆ ಕಾರಣಗಳೇನೆಂದು ಪ್ರಶ್ನಿಸಿದೆ. ಸಮಂಜಸ ಉತ್ತರವೇನೋ ಸಿಕ್ಕಿತು. ಆದರೆ ಬಹಳ ಬೇಸರವಾಯಿತು."ನಾವು ಒಬ್ಬರನ್ನೊಬ್ಬರು ಬಿಟ್ಟು ಬದುಕಲಾಗುವುದಿಲ್ಲ. ಅವಳ ವಿನಾ ನಾನು, ನನ್ನ ವಿನಾ ಅವಳು ಹೆಚ್ಚು ದಿನ ಉಳಿಯಲಾಗದು. ಮನುಷ್ಯರು ಇದನ್ನು ಅರ್ಥ ಮಾಡಿಕೊಂಡಿದ್ದಾರಲ್ಲ ಎಂದು ಒಂದು ಸಮಾಧಾನವಷ್ಟೆ? ನಮಗಿರುವ ನೋವನ್ನು ಒಬ್ಬರೊಂದಿಗೊಬ್ಬರು ಇರುವುದರಿಂದ ಮರೆಯುತ್ತಿದ್ದೇವೆ. ಬೇರೆ ಕಡೆ ಗಮನ ಹರಿಸಿ ಖಿನ್ನರಾಗಿ ಸಾಯುವುದಕ್ಕಿಂತ ಜೋಡಿಯಾಗಿಯೇ ಬದುಕೋಣ, ಜೋಡಿಯಾಗಿಯೇ ಸಾಯೋಣ ಎಂದು ಪಣ ತೊಟ್ಟ ಹಾಗೆ. ನಮ್ಮನ್ನು ಫ್ರೆಂಚಿನವರು les inséparables ಎಂದೇ ಕರೆದರು. ಜರ್ಮನರು die Unzertrennlichen ಎಂದರು. ಬೇರೆಯಾಗಲು ಅಸಾಧ್ಯವಾದವರು ಎಂದರ್ಥ ಆಂಗ್ಲರು Love Birds ಎಂದು ಕರೆದರು.. ಯಾರು ಏನು ಕರೆದರೇನಂತೆ, ನಾವು ಇರುವುದೇ ಹೀಗೆ!"

ನಮ್ಮವರ ಹಾಗೆ ಗಂಡು ಹೆಣ್ಣು ವ್ಯತ್ಯಾಸ ಗೊತ್ತಾಗದಂತಿಲ್ಲ ಈ ಜೋಡಿಹಕ್ಕಿಗಳು. ಗಂಡು ಮತ್ತು ಹೆಣ್ಣುಗಳ ನಡುವೆ ಪ್ರಮುಖವಾದ ವ್ಯತ್ಯಾಸ ಗೊತ್ತಾಗುವಂತಿತ್ತು. ಸುಲಭವಾಗಿ ಜೋಡಿಯನ್ನು ಹಿಡಿದು ಬುಟ್ಟಿಯೊಳಗೆ ಹಾಕಿಕೊಳ್ಳಬಹುದು ಎಂದು ಮನುಷ್ಯನು ಆಲೋಚಿಸದೇ ಇರನು. ಹಾಗಂತ ಎಲ್ಲ ಜಾತಿಯ ಜೋಡಿಹಕ್ಕಿಗಳೂ ಹೀಗಿರುವುದಿಲ್ಲವಂತೆ, ಕೆಲವರಲ್ಲಿ ಮಾತ್ರವಂತೆ.

ಆಫ್ರಿಕಾದ ಬೃಹದಾರಣ್ಯವೆಲ್ಲಿ, ಶಿವಾಜಿನಗರದ ಕಿಷ್ಕಿಂಧವೆಲ್ಲಿ! ಅಮರಪ್ರೇಮಿಗಳಿಗೆ ಈ ಸ್ಥಿತಿಯೊದಗಿದೆಯಲ್ಲ, ಎಂದು ನೋವಾಯಿತು.

ಯಾರೋ "ಪುಣ್ಯಾತ್ಮರು" ಬಂದು ಅಂಗಡಿಯವನನ್ನು ವಿಚಾರಿಸುತ್ತಿದ್ದರು. ಅಂಗಡಿಯವನು ನನ್ನೆಡೆಗೆ ಸಿಡುಕು ಮುಖ ಮಾಡಿಕೊಂಡು ನೋಡಿದ. ಪಕ್ಕದಲ್ಲಿದ್ದ ಕೋಲನ್ನೆತ್ತಿ ನನ್ನೆಡೆಗೆ ಬೀಸಿದ. ತಗುಲಿದರೆಲ್ಲಿ ನಾನು ಅನಾಥ ಶವವಾಗಿ "ಕಾಗೆಗೋ ನಾಯಿಗೋ" ಆಹಾರವಾಗಬೇಕೆಂಬ ಭಯದಿಂದ "ಸರಿ, ನಾನು ಹೊರಡ್ತೀನಿ" ಎಂದು ಹಾರಿ ಗೂಡು ಸೇರಿಕೊಂಡೆ.

.....................................................................................

ಜೋಡಿಹಕ್ಕಿ - Love Birds ಎಂಬ ಆಫ್ರಿಕಾ ದೇಶದ ಹಕ್ಕಿಯನ್ನು ನಮ್ಮಲ್ಲಿ ಎಷ್ಟೋ ಜನರ ಮನೆಯೊಳಗೆ ಪಂಜರದಲ್ಲಿಟ್ಟಿಕೊಂಡಿರುವುದನ್ನು ನೋಡಿರಬಹುದು ನಾವು. ಗಂಡು-ಹೆಣ್ಣು ಒಟ್ಟಿಗೇ ಇರುತ್ತೆ, ಒಂದು ಸತ್ತರೂ ಇನ್ನೊಂದು ಪ್ರಾಣ ಬಿಡುವುದು ಎಂದು ಜನ ನಂಬಿಯೂ ಇದ್ದಾರೆ, ಆದರೆ, ಬೇರೆ ಇನ್ನೊಂದು ಬಂದರೆ ಅದರೊಂದಿಗೆ ಹೊಂದಿಕೊಳ್ಳುತ್ತೆ. ಒಟ್ಟು ಎಂಟು ಬಗೆಯ ಜೋಡಿ ಹಕ್ಕಿಗಳಿದ್ದು, ಎಂಟೂ ಆಫ್ರಿಕಾಕ್ಕೆ ಸೇರಿದ್ದವು. ಕೆಲವು ಬಗೆಯ ಜೋಡಿಹಕ್ಕಿಗಳಲ್ಲಿ Sexual Dimorphism ತೋರಿಕೆಯಾಗಿರುತ್ತೆ - ಎಂದರೆ, ಗಂಡು ಮತ್ತು ಹೆಣ್ಣು ನಡುವೆ ರೂಪದಲ್ಲಿ ಭಿನ್ನತೆಯಿರುವುದು - ನವಿಲುಗಳು, ಬಾತು ಕೋಳಿಗಳಲ್ಲಿರುವಂತೆ.ಆ ಎಂಟು ಬಗೆಯ ಜೋಡಿಹಕ್ಕಿಗಳ ಬಗ್ಗೆ ಒಂದಿಷ್ಟು ಮಾಹಿತಿ: http://docs.google.com/Doc?id=dhkg9gr2_84dnkzqpcg

......................................................................................

ಕಾಕರಾಯರು ಮುಂದಿನ ಸಲ ಇನ್ಯಾವ ಕಥೆಯನ್ನು ಹೇಳುತ್ತಾರೋ ನೋಡೋಣ.

-ಅ
08.02.2009
7PM

ಒಂದಷ್ಟು ಚಿತ್ರಗಳು..