Thursday, January 22, 2009

ಈ ಸಂಭಾಷಣೆ..

ಮನುಷ್ಯ ಪ್ರಾಣಿಯೊಂದೇ "ಮಾತನಾಡುವ" ವರವನ್ನು ಪ್ರಕೃತಿಯಿಂದ ಪಡೆದಿರುವುದು. ಆದರೆ, ಬೇರೆ ಪ್ರಾಣಿಗಳು ಸಂಭಾಷಣೆ ಮಾಡುವುದಿಲ್ಲವೆಂದಲ್ಲ. ಮಾತನಾಡಿಕೊಂಡು ಸಂಭಾಷಿಸದೇ ಇದ್ದರೂ ಅನೇಕ ಪ್ರಾಣಿಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ, ವಿಶಿಷ್ಟ ಭಾಷೆಯಲ್ಲಿ ಸಂಭಾಷಣೆಯನ್ನು ಮಾಡುತ್ತವೆ - ಕೆಲವು ವಿಷಯಗಳಿಗಾಗಿ ಮಾತ್ರ!

ಮಾಂಡ್ರೇಕ್ ಕಾಮಿಕ್ಕಿನಿಂದ ನನಗೆ ಬಹಳ ಹಿಂದೆಯೇ ತಿಳಿದ ವಿಷಯ, ಜೇನು ನೊಣಗಳು ನೃತ್ಯ ಮಾಡಿಕೊಂಡು ತನ್ನ ಸಂದೇಶವನ್ನು ಇನ್ನೊಂದು ನೊಣಕ್ಕೆ ಸಾರುತ್ತೆ೦ದು. ಆಹಾರವನ್ನು ಹುಡುಕಿದ ನೊಣವು "ಇಂಥಾ ಸ್ಥಳದಲ್ಲಿದೆ, ಬನ್ನಿ" ಎಂದು ಹೇಳಲು ಒಂದು ಬಗೆಯ ನೃತ್ಯವನ್ನಾಡುತ್ತೆಂಬುದು ವಿಜ್ಞಾನಿಗಳ ನಂಬಿಕೆ.ಇರುವೆಗಳು ಶಿಸ್ತಿನಿಂದ ಸಾಲು ಸಾಲಾಗಿ ಹರಿಯುತ್ತಿರುವುದನ್ನು ಗಮನಿಸದೇ ಇರುವವರು ಯಾರು? ಎದುರು ಬರುವ ಇರುವೆ ಜೊತೆ ಏನೋ ಗುಟ್ಟು ಗುಟ್ಟಾಗಿ ಮಾತನಾಡಿದಂತೆ ಕಾಣುತ್ತೆ ಅಲ್ಲವೆ? ಹೌದು. ವಾಸ್ತವವಾಗಿ, ಇದು ಇರುವೆಯ ಸಂಭಾಷಣೆ. ಇರುವೆಗಳು ಸಂಘಜೀವಿಗಳು. ತನ್ನ ಕುಟುಂಬದವರೇ ಅಲ್ಲವೇ ಎಂಬ ಪರೀಕ್ಷೆಯನ್ನು ಎದುರು ಬರುವ ಇರುವೆಯ ಜೊತೆ ಮಾಡಿಕೊಳ್ಳುತ್ತೆ. ಎದುರಿನ ಇರುವೆಯ ಮೀಸೆಯನ್ನು (antennae) ಸೋಕಿಸಿ ತಿಳಿದುಕೊಳ್ಳುತ್ತೆ, ತಮ್ಮ ಕುಟುಂಬದವರೋ ಅಲ್ಲವೋ ಎಂದು. ಮತ್ತು ತನ್ನ ಹಿಂದೆ ಬರುವ ಸಾಲು ಸೈನ್ಯವು ಹಾದಿ ತಪ್ಪದೇ ಇರುವಂತೆಯೂ ನೋಡಿಕೊಳ್ಳುವುದು ಪ್ರತಿಯೊಂದು ಇರುವೆಯ ಜವಾಬ್ದಾರಿ. ಈ ಎರಡು ಬಗೆಯ ಸಂಭಾಷಣೆಗೂ ಇರುವೆಯು ಬಳಸುವುದು "ಫೀರೋಮೋನ್" ಎಂಬ ರಾಸಾಯನಿಕ ದ್ರವವನ್ನು. ಇರುವೆಗಷ್ಟೆ ನಿಲುಕುವ ಘಮವನ್ನು ಈ ಫೀರೋಮೋನ್‍ ಒದಗಿಸುತ್ತೆ. ಇರುವೆಗಳು ನಡೆದು ಹೋಗುತ್ತಿರುವಾಗ ಮಧ್ಯದಲ್ಲಿ ನೀರು ಚೆಲ್ಲಿದರೆ, ಅವು ದಾರಿ ತಪ್ಪುವುದನ್ನು ನಾವೆಲ್ಲರೂ ಗಮನಿಸಿದ್ದೇವಷ್ಟೆ?ಆನೆಗಳು ಕಡಿಮೆ ಆವೃತ್ತಿಯ ಇನ್‍ಫ್ರಾ ಸೌಂಡ್ ಬಳಸಿಕೊಂಡು ಸಂಭಾಷಣೆ ಮಾಡುತ್ತವೆ. ನಮ್ಮ ಕಿವಿಗೆ ಅವುಗಳ ಸಂಭಾಷಣೆ ಕೇಳುವುದಿಲ್ಲ. ನಮಗೆ ಕೇಳುವುದೇನಿದ್ದರೂ ಇಪ್ಪತ್ತರಿಂದ ಇಪ್ಪತ್ತು ಸಾವಿರ ಹರ್ಟ್ಜ್ ಒಳಗಿದ್ದರೆ ಮಾತ್ರ. ಆದರೆ, ಆನೆಗಳ ಸಂಭಾಷಣಾ ಧ್ವನಿಯು ಹದಿನಾಲ್ಕರಿಂದ ಹದಿನೆಂಟು ಹರ್ಟ್ಜ್ ಆವೃತ್ತಿಯಲ್ಲಿರುತ್ತೆ. ಈ ಆವೃತ್ತಿ ಅಥವಾ frequency-ಗೆ ಇನ್ಫ್ರಾಸೌಂಡ್ ಎನ್ನುತ್ತಾರೆ. ಇದನ್ನು ಬಳಸಿಕೊಂಡು ಹತ್ತು ಕಿಲೋಮೀಟರು ದೂರದವರೆಗೂ ಸಂಭಾಷಣೆಯನ್ನು ಮಾಡಬಲ್ಲವು ಆನೆಗಳು. ಇದರ ವಿರುದ್ಧದಂತೆ ಬಾವುಲಿಗಳು ಅಲ್ಟ್ರಾಸೌಂಡ್ ಬಳಸಿ ಸಂಭಾಷಿಸುತ್ತವೆ. ಎಂದರೆ, ಇಪ್ಪತ್ತು ಸಾವಿರ ಹರ್ಟ್ಜ್-ಅನ್ನೂ ಮೀರಿದ ಆವೃತ್ತಿಯ ಶಬ್ದ. ಇದನ್ನೂ ಕೂಡ ಮನುಷ್ಯನ ಕಿವಿಗಳು ಗ್ರಹಿಸುವುದಿಲ್ಲ. ಬಾವುಲಿಗಳು ಅಲ್ಟ್ರಾಸಾನಿಕ್ ಶಬ್ದವನ್ನು ಹೊರಹೊಮ್ಮಿಸಿದಾಗ ಅದು ಎದುರಿರುವ ವಸ್ತುಗೆ ಹೊಡೆದು ಪ್ರತಿಧ್ವನಿಸುವುದನ್ನು ಅವಲಂಬಿಸಿ ಸಂಭಾಷಣೆಯನ್ನು ಮಾಡುತ್ತವೆ!

ಬಾವುಲಿಗಳಂತೆಯೇ ಅಧಿಕ ಆವೃತ್ತಿ ಶಬ್ದವನ್ನು ಬಳಸಿಕೊಂಡು ತಿಮಿಂಗಿಲಗಳೂ ಸಹ ಸಂಭಾಷಿಸುತ್ತವೆ. ತಿಮಿಂಗಿಲಗಳು ನೂರಾರು ಕಿಲೋಮೀಟರುಗಳು ದೂರವಿರುವ ತನ್ನ ಸ್ನೇಹಿತನ ಜೊತೆಯೂ ಮಾತನಾಡಬಲ್ಲದು!ಊಟವನ್ನು ನೋಡಿದ ತಕ್ಷಣ ತನ್ನ ಗೆಳೆಯರನ್ನೆಲ್ಲಾ ಕರೆದುಕೊಂಡು ಬಂದು ಹಂಚಿಕೊಂಡು ತಿನ್ನುವುದೆಂದು ಒಳ್ಳೆಯ ಹೆಸರನ್ನು ಪಡೆದಿರುವ ಕಾಗೆಯು ಇಪ್ಪತ್ಮೂರು ಬಗೆಯ ಕರೆಗಳನ್ನು ಮಾಡಲು ಸಮರ್ಥ! ಬೇರೆ ಬೇರೆ ಹಕ್ಕಿಗಳನ್ನೂ ಸಹ ಅಣಕ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಕಾಗೆಯ ಯಾವ ಧ್ವನಿಯು ಯಾವ ಅರ್ಥವನ್ನು ನೀಡುತ್ತೆಂಬುದು ಇನ್ನೂ ಪತ್ತೆಯಾಗಬೇಕಿದೆ. ಪ್ರತಿಯೊಂದು ಹಕ್ಕಿಯೂ ಸಹ ಸಂಭೋಗ ಕಾಲದಲ್ಲಿ ವಿಶಿಷ್ಟವಾದ ಕರೆಯನ್ನು ಮಾಡುತ್ತೆ. ಇದಕ್ಕೆ mating call ಎಂದೇ ಕರೆಯುತ್ತಾರೆ. ಛಂದೋಬದ್ಧವಾಗಿ ಒಂದಾದ ಮೇಲೊಂದು ದನಿಗೂಡಿಸಿ ಕೂಗುವ ಕಾಪರ್ ಸ್ಮಿತ್ ಬಾರ್ಬೆಟ್ ಇದಕ್ಕೆ ಒಳ್ಳೆಯ ಉದಾಹರಣೆ. ಗಂಡು ಹಕ್ಕಿ ಒಂದು ಲಯ ಮತ್ತು ಶ್ರುತಿಯಲ್ಲಿ ಕೂಗಿದರೆ, ಅದೇ ಲಯ ಮತ್ತು ಶ್ರುತಿಯನ್ನು ಹೆಣ್ಣೊಂದು ಅನುಸರಿಸಿ "ಮದುವೆ"ಗೆ ತನ್ನ ಒಪ್ಪಿಗೆಯನ್ನು ಸಲ್ಲಿಸುತ್ತೆ.ಕಾಡಿನ ಒಂದು ಪ್ರದೇಶದಲ್ಲಿ ಹುಲಿಯ ಅಥವಾ ಚಿರತೆಯ ಪ್ರವೇಶವಾದರೆ ಕೋತಿಗಳು ಎಚ್ಚರಿಕೆ ಕರೆಗಳನ್ನು ಇಡೀ ಕಾಡಿಗೇ ನೀಡುತ್ತವೆ, ಇದರಿಂದ ಹಕ್ಕಿಗಳು, ಜಿಂಕೆಗಳು, ಇತರ ಕೋತಿಗಳು ಜೀವ ಉಳಿಸಿಕೊಳ್ಳಲು ಸಹಾಯವಾಗುತ್ತೆ. ಇದರ ಬಗ್ಗೆ ಕೆನೆತ್ ಆಂಡರ್ಸನ್ ಅನೇಕ ಕಡೆ ಉಲ್ಲೇಖಿಸುತ್ತಾರೆ. ಎಚ್ಚರಿಕೆ ಕರೆಯನ್ನು ಹುಲಿಗಳು ಗರ್ಜಿಸುವುದರ ಮೂಲಕ ನೀಡುತ್ತೆ. ತನ್ನ ಸಾಮ್ರಾಜ್ಯದ (territory) ಒಳಗೆ ಕಾಲಿಟ್ಟ ಪ್ರಾಣಿಯು ಹೊರ ಹೋಗಬೇಕೆಂಬುದೇ ಈ ಸಂದೇಶದ ಅರ್ಥ. ಇದು ಸಾಮಾನ್ಯವಾಗಿ ಎಲ್ಲ ಬೆಕ್ಕುಗಳೂ, ನಾಯಿಗಳೂ ಅನುಸರಿಸುವ ಕ್ರಮ.

ನಾಯಿಗಳು ಬೆಕ್ಕುಗಳಂತೂ ನಮಗೆ ಎಷ್ಟು ಹತ್ತಿರವಾಗಿದೆಯೆಂದರೆ, ನಾವು ಅದರ ಪ್ರತಿಯೊಂದು ಚಲನವಲನದಲ್ಲಿ ಅಡಗಿರುವ ಸಂಭಾಷಣೆಯನ್ನೂ ಬಲ್ಲೆವು. ನಾಯಿ ಬಾಲ ಅಲ್ಲಾಡಿಸಿದರೇನು, ಬಾಲ ಮುದುರಿದರೇನು, ಹಲ್ಲುಗಳ ಪ್ರದರ್ಶನ ಮಾಡಿದರೇನು, ಗೊರ್ ಎಂದರೇನು? ಬೆಕ್ಕು ಕಣ್ಮುಚ್ಚಿದರೇನು, ಉಶ್‍ಶ್ ಎಂದರೇನು, ಕೂದಲನ್ನು ನಿಮಿರಿಸಿದರೇನು? ಇವೆಲ್ಲವನ್ನೂ ಇಲ್ಲಿ ವಿವರಿಸುವ ಅಗತ್ಯವಿಲ್ಲ.

ಇಲ್ಲಿರುವುದು ಕೇವಲ ಕೆಲವು ಉದಾಹರಣೆಗಳಷ್ಟೆ. ವಿಶೇಷ ಸಂಭಾಷಣೆ ಮಾಡುವ ಪ್ರಾಣಿಗಳು ಇವು. ನಮ್ಮಂತೆ ಮಾತು ಬಾರದಿದ್ದರೂ ಸಂದೇಶವನ್ನು ರವಾನಿಸುವುದರಲ್ಲಿ ಯಶಸ್ವಿಯಾಗಿವೆ. ಯಾಕೆಂದರೆ ಪ್ರಾಣಿಗಳ ಒಂದು ಶಬ್ದಕ್ಕೆ ಒಂದೇ ಅರ್ಥ. ಮನುಷ್ಯರ ಕಥೆ ಹಾಗಲ್ಲ!

-ಅ
22.01.2009
11PM

7 comments:

 1. hmmm.... nange iruve, baavuli bagge maatra gottittu....aane, whales, bees bagge gotte irlilla...good article... :-)videos chennagide....:-)

  ReplyDelete
 2. ಅರುಣ್ ಸರ್,

  ಪ್ರಾಣಿಗಳು ಇರುವೆಗಳು ಇತ್ಯಾದಿ ಸಂಭಾಷಣೆಯ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ.....ಥ್ಯಾಂಕ್ಸ್....

  ReplyDelete
 3. aane bagge gothirlilla. ond jaati meenu, hesru gothilla ... gandu meenu kattiro mane hennu meenige ishta aadre adara hotte kempage maadkolluttante ... nange ishta aaytu, samsaara maadona antha ... super alwa? idannoo naanu yaavdo indrajal comics nalle odidde ansutte.

  ReplyDelete
 4. ಅರುಣ,
  ಅದ್ಭುತವಾದ ಸಂಭಾಷಣೆ! ವಿಡಿಯೋಗಳೂ ಸಹ ಸುಂದರವಾಗಿವೆ. ಜೇನ್ನೊಣದ ನೃತ್ಯ ಬಹಳ ಸ್ವಾರಸ್ಯಕರವಾಗಿತ್ತು.

  ReplyDelete
 5. present sir,
  theory haagu practicals sooooper.. :)

  next yaara saMbhaaShane...

  ReplyDelete
 6. ಇನ್ನೊಂದು ಮಾಹಿತಿ (ಸುಮ್ಮನೆ ಇರಲಿ ಎಂದು):

  ರಾಮಾಯಣದ ಪ್ರಕಾರ ಕೈಕೇಯಿಯ ಅಪ್ಪನಾದ ಅಶ್ವಪತಿಗೆ ಹಂಸಗಳ ಸಂಭಾಷಣೆ ಅರ್ಥ ಮಾಡಿಕೊಳ್ಳುವಂತಹ ವರವಿತ್ತಂತೆ. (ಅದೇ ಮುಂದೆ ಅವನ ಸಾವಿಗೆ ಕಾರಣವಾಯಿತು)

  ReplyDelete

ಒಂದಷ್ಟು ಚಿತ್ರಗಳು..