Friday, January 09, 2009

ಸಸ್ಯಾಹಾರ

ನನ್ನನ್ನು ಮೇಲಿಂದ ಕೆಳಗೆ ನೋಡಿದ ಒಬ್ಬ ಹಿರಿಯರು ಹೇಳಿದರು. "ಟ್ರೆಕ್ಕಿಂಗು ಅದು ಇದು ಎಲ್ಲಾ ಮಾಡ್ಬೇಕು ಅಂದ್ರೆ ಶಕ್ತಿ ಬೇಕು, ಇದಕ್ಕೆ ನೀನು ನಾನ್-ವೆಜ್ ತಿನ್ನಬೇಕು" ಎಂದು. ಅವರ ಸ್ನೇಹಿತರು "ಉಪ್ಪು-ಹುಳಿ-ಖಾರ ತಿನ್ನದೇ ಬರೀ ಸಪ್ಪೆ ತಿಂದ್ಕೊಂಡ್ ಇದ್ರೆ ಹೇಗೆ ಶಕ್ತಿ ಬರುತ್ತೆ?" ಎಂದು ನಾನು ಮೊಸರನ್ನ ತಿನ್ನುತ್ತಿದ್ದನ್ನು ನೋಡಿ ಹಿರಿಯರ ಮಾತಿನ ತಿಂಡೆಗೆ ಒಗ್ಗರಣೆ ಹಾಕಿದರು. ನಾನು ಸುಮ್ಮನೆ ನಗುವುದಲ್ಲದೆ ಬೇರೇನೂ ಮಾಡಲಿಲ್ಲ. ಇವರುಗಳ ಬುದ್ಧಿವಾದವು ಇಲ್ಲೊಂದು ಪಟ್ಟಿಯನ್ನು ಮಾಡಲು ಪ್ರಚೋದಿಸಿತು.

--> ಭೂಗ್ರಹದ ಅತ್ಯಂತ ದೊಡ್ಡ ಗಾತ್ರದ ಪ್ರಾಣಿ - ನೀಲ ತಿಮಿಂಗಿಲ - ತಿನ್ನುವುದು ಫೈಟೋಪ್ಲಾಂಕ್ಟಾನ್ ಎಂಬ ಸಸ್ಯವನ್ನು. ಮಾಂಸಾಹಾರವು ತಿಮಿಂಗಿಲಕ್ಕೆ ದೂರ!

--> ಭೂಮಿಯ ಮೇಲೆ (ನೆಲದ ಮೇಲೆ) ಅತ್ಯಂತ ದೊಡ್ಡದಾಗಿರುವ ಪ್ರಾಣಿ - ಆನೆ - ಅಪ್ಪಟ ಸಸ್ಯಾಹಾರಿ! ಎಲ್ಲಿಂದ ಬರುತ್ತೆ ಆನೆಗೆ ಶಕ್ತಿ?

--> ಅತ್ಯಂತ ಎತ್ತರದ ಪ್ರಾಣಿ - ಜಿರಾಫೆ - ಮಾಂಸ ತಿನ್ನುವುದನ್ನು ನೋಡಲು ಸಾಧ್ಯವೇ?

--> ದೈತ್ಯ ಜೀವಿಗಳಾದ ಹಿಪ್ಪೋಪೊಟಮಸ್ ಮತ್ತು ಗೇಂಡಾಮೃಗಗಳು ಸ್ವಚ್ಛಂದವಾದ ಗಿಡಮೂಲಿಕೆಗಳನ್ನು ತಿನ್ನುವುದು.

--> ಎಲ್ಲಾ ದೇವತೆಗಳೂ ನೆಲೆಸಿರುವುವೆಂದು ಭಾರತೀಯರು ನಂಬಿರುವ ದಿವ್ಯ ಜೀವಿ ಆಕಳು ಎಂದಾದರೂ ಮಾಂಸ ತಿಂದೀತೇ? ಇದರ ಶಕ್ತಿ ಕುಂದೀತೇ?

--> ಇದುವರೆಗೂ ಈ ಗ್ರಹದಲ್ಲಿ ಜೀವಿಸಿದ್ದ ಅತ್ಯಂತ ದೊಡ್ಡ ಜೀವಿ - ಬ್ರ್ಯಾಕಿಯಾಸಾರಸ್ ಎಂಬ ಡೈನೋಸಾರ್ ಕೂಡ ಸಸ್ಯಾಹಾರಿ ಜೀವಿಯಾಗಿತ್ತು.

--> ವಿಕಾಸ ಹೊಂದಿರುವ ಮನುಷ್ಯನ ದೇಹರಚನೆಯು ಸಸ್ಯಾಹಾರಕ್ಕೆ ಸರಿಹೊಂದುವಷ್ಟು ಮಾಂಸಾಹಾರಕ್ಕೆ ಹೊಂದುವುದಿಲ್ಲವೆಂಬುದನ್ನು ಅನೇಕರು ಅರಿತಿಲ್ಲ. ಪ್ರಾಕೃತಿಕವಾಗಿ ಮನುಷ್ಯನ ಜೀರ್ಣಾಂಗಗಳು ಸಸ್ಯಾಹಾರವನ್ನು ಸುಲಭವಾಗಿ ಅರಗಿಸಿದರೆ, ಜೀವಕೋಶಗಳು ಸುಲಭವಾಗಿ ಮತ್ತು ಯಶಸ್ವಿಯಾಗಿ ಹೀರಿಕೊಳ್ಳುತ್ತವೆ. ಶಕ್ತಿ ಮತ್ತು ಸತ್ತ್ವವು ಸಸ್ಯಾಹಾರದಲ್ಲಿ ಸಿಗುವ ಹಾಗೆ ಮಾಂಸಾಹಾರದಲ್ಲಿ ಸಿಗಲು ಸಾಧ್ಯವೇ ಇಲ್ಲ.

ನಾನು ಮೇಲೆ ಹೆಸರಿಸಿದ ಪ್ರಾಣಿಗಳಂತೆ ಸಸ್ಯಾಹಾರಿಯೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ!!

-ಅ
09.01.2009
5AM

18 comments:

 1. ಪರಿಸರಪ್ರೇಮಿಯವರೆ...
  ಸಸ್ಯಾಹರ ಸೇವಿಸಿಯೂ ಬಲಶಾಲಿಗಳಾಗಿರುವ ಜೀವಿಗಳ ಪಟ್ಟಿ ಕೊಟ್ಟಿದ್ದಕ್ಕೆ ಧನ್ಯವಾದ.
  ನಾನೂ ಸಹ ಸಸ್ಯಾಹಾರಿ ಅಂತ ನಂಗೆ ನನ್ನ ಬಗ್ಗೆ ಯಾವಾಗಲೂ ಹೆಮ್ಮೆಯಿದೆ. ಹಾಗೆಯೇ ನಾನು ಸೇವಿಸುವ ಆಹಾರದ ಬಗ್ಗೆ ತುಂಬ ಗೌರವವೂ ಇದೆ.
  ಒಳ್ಳೆಯ ಲೇಖನ ಕೊಟ್ಟಿದ್ದೀರಿ ಯಾವತ್ತಿನ ಹಾಗೆ.

  ReplyDelete
 2. naanu paayasaanna mattu mosaranna priye. jai sasyaahaara :)

  ReplyDelete
 3. ಪ್ರಿಯರೇ
  ನಿಮ್ಮ ವಾದ ಕೇಳಿ ಮಾಂಸಹಾರಿಗಳು ಸಂಪೂರ್ಣವಾಗಿ ಸಸ್ಯಹಾರ ಸೇವಿಸತೊಡಗಿದರೆ ನಮ್ಮಂತಾ ಸಸ್ಯಹಾರಿಗಳ ಗತಿಯೇನು!?
  ಅಶೋಕ ಉಚ್ಚಂಗಿ.
  http://mysoremallige01.blogspot.com/

  ReplyDelete
 4. navoo nim teamu! :)

  -Vikas Hegde

  ReplyDelete
 5. ಜೈ ಸಸ್ಯಾಹಾರ ಸೈ ಮಾಂಸಾಹಾರ :-)

  ReplyDelete
 6. ನಾನು ಕೂಡಾ ಸಸ್ಯಹಾರಿ ಎಂದು ಹೇಳಿಕೊಳ್ಳಲು ನನಗೂ ಹೆಮ್ಮೆಯೆನಿಸುತ್ತದೆ, ಜೊತೆಗೆ ಸೊಪ್ಪು ತಿನ್ನುವವ ಎಂದು ಛೇಡಿಸುವವರಿಗೆ ಹೇಳಲು ಸಕಾರಣಗಳನ್ನು ಒದಗಿಸಿದ್ದೀರಿ, ಧನ್ಯವಾದಗಳು

  ReplyDelete
 7. ಎಲ್ಲ ನಿಜಾನೆ ಆದ್ರೆ ಕುಂಟಿನಿಯವರು ಹೇಳುವಂತೆ ಅದೇನೋಪಾ ತಿನ್ನುವಾಗ ಒಂದೂ ನೆನಪಿರೋಲ್ಲ. ಕೈಲಿ ಹಿಡ್ಕೊಂಡಿರೋ ಕೋಳಿ ಕಾಲ ಮುಂದೆ ನಿಮ್ ವೆಜಿಟೇರಿಯನ್ ಊಟ ನಿಲ್ಲೋಲ್ಲ ಬಿಡಿ ;)

  ReplyDelete
 8. [ಹೇಮಾ] ಹೆ ಹೆ ಒಳ್ಳೇ ಕುಂಟಿನಿ.. ಒಳ್ಳೇ ಕೋಳಿ ಕಾಲು!! ಆರೋಗ್ಯ ಜೋಪಾನ ಇವ್ರೇ..

  [ಮನಸ್ವಿ] ಸಕಾರಣಗಳು ಇನ್ನಷ್ಟಿವೆ ಮನಸ್ವಿ ಅವರೇ.. ಅಗತ್ಯ ಬಂದಾಗ (ಮುಕ್ಕಾಲು ಪಾಲು ಬರುತ್ತೆ) ಇಲ್ಲೇ ಕಮೆಂಟಿನಲ್ಲೇ ಹಾಕುವೆ. ಒಳ್ಳೇ ಸಸ್ಯಾಹಾರೀ ಕ್ಲಬ್ಬು!!

  [ಶ್ರೀಧರ] ಪೈ ಉಡುಪಿ ಹೋಟೆಲ್ಲು, ಥೈ ಸೆಕೆಂಡ್ ಸ್ಟೇಜ್ ಪಬ್ಬು!

  [ವಿಜಯಾ] ಕಳ್ಳನ ಮನಸ್ಸು ಹುಳ್-ಹುಳ್ಗೆ.. ಅಲ್ಲಾ, ಸುಮ್ನೆ ಒಂದು ಗಾದೆ ಹೇಳ್ದೆ. ನೀನೂ ಒಂದು ಗಾದೆ ಹೇಳ್ಬೋದು.

  [ವಿಕಾಸ್] ಮೆಜಾರಿಟಿ ವಿನ್ಸ್!!

  [ಅಶೋಕ್] ಸಸ್ಯಾಹಾರವನ್ನು ಸೇವಿಸಿದರೆ ತೊಂದರೆಯಿಲ್ಲ, ಸಸ್ಯಾಹಾರಿಗಳನ್ನೇ ಸೇವಿಸಿದರೆ ಕಷ್ಟ ನೋಡಿ!!

  ReplyDelete
 9. [ಲಕುಮಿ] ಎಲ್ಲೆಲ್ಲಿಂದಾನೋ ಎಲ್ಲೆಲ್ಲಿಗೋ ಲಿಂಕ್ ಮಾಡ್ತೀಯ ನೀನು. ಗಂಗೆಯನ್ನು ಕಾವೇರಿಗೆ ಲಿಂಕ್ ಮಾಡೋ ಹಾಗೆ!! ಮೊಸರನ್ನ ಯಾಕ್ ಬಂತು ಇಲ್ಲಿ? ಇಷ್ಟಕ್ಕೂ ಮೊಸರನ್ನದಲ್ಲಿ ಹಲ್ಲಿ ಬಿದ್ದಿದ್ರೆ ಏನ್ ಮಾಡ್ತೀಯ? ಏನಾದ್ರೂ ಮಾಡ್ಕೋ, ನಂಗೇನು!!

  [ಸುನಾಥ್] ಥ್ಯಾಂಕ್ಯೂ ಸರ್.. :-)

  [ಶಾಂತಲಾ ಭಂಡಿ] ಅಲ್ಲಾ, ನೋಡಿ, ಆ ಪ್ರಾಣಿಗಳು ಕೇವಲ ಸಸ್ಯಾಹಾರ ಸೇವನೆಯಿಂದ ಬಲಶಾಲಿಗಳೇ? ಅವು ತಿನ್ನುವ "ಸಸ್ಯಾಹಾರ"ವನ್ನು ನಾವು ತಿನ್ನುವಂತಾಗಲು ಹೇಗ್-ಹೇಗೋ ವಿಕಾಸ ಆಗ್ಬೇಕು ನೋಡಿ.. ;-) ಇರಲಿ, ನನ್ನ ವಾದಕ್ಕೆ ನಾನೇ ಪ್ರತಿವಾದ ಮಾಡ್ಕೊಳೋದ್ ಯಾಕೆ ಸುಮ್ನೆ... ಇನ್ನೂ ರಮೇಶರು ಹೇಳೋದ್ ಬೇರೆ ಇದೆ!! ಆಮೇಲೆ ಚರ್ಚೆ!!! ;-) ;-) ಕಮೆಂಟಿಗೆ ಧನ್ಯವಾದಗಳು.. :-)

  [ನೀಲ್‍ಗಿರಿ] ಸೂಪರ್... ವೆಲ್ಕಮ್ ಟು ದ ಕ್ಲಬ್... :-)

  ReplyDelete
 10. ಒಳ್ಳೆ ಟಾಪಿಕ್ಕು.. ಡಿಬೇಟು ಚಪಲ ಇರೋರ್ಗೆ.. :)

  ಹಲ್ಲುಗಳ ರಚನೆ ನೋಡಿ.. ಹಲ್ಲುಗಳ ರಚನೆ ನಾವು ತಿನ್ನುತ್ತಾ ಬಂದಿರುವ ಆಹಾರಕ್ಕೆ ಸಂಬಂಧ ಪಟ್ಟಿದೆ ಎನ್ನುತ್ತದೆ ಬಯೋಲಜಿ. ಸಸ್ಯಹಾರಿಗಳಿಗೆ ಇರಬೇಕಾದುದು ಕತ್ತರಿಸುವ ಬಾಚಿ(INCISORS) ಹಲ್ಲುಗಳು ಮತ್ತು ಜಗಿದು ಅಗಿಯುವ ದವಡೆ(MOLARS) ಹಲ್ಲುಗಳು. ಮಾಂಸಹಾರಿಗಳಲ್ಲಿ ಇರಬೇಕಾದ ಕೋರೆ (CANINE) ಹಲ್ಲುಗಳು ನಮ್ಮಲ್ಲಿವೆ ಎಂದ ಮೇಲೆ, ನಾವ್ಯಾರೂ ಹುಲ್ಲು ಸೊಪ್ಪು ಮಾತ್ರವೇ ತಿಂದು ಬದುಕಲಿ ಅನ್ನೋ ಇರಾದೆ ಪ್ರಕೃತಿಯದಲ್ಲ ಎಂಬುದು ಸ್ಪಷ್ಟ.
  ನಮಗೆ ಹಸಿಮಾಂಸ ಸುಲಭವಾಗಿ ಜೀರ್ಣವಾಗುವ ವಸ್ತುವಾಗುಳಿದಿಲ್ಲಾ.. ಏಕೆಂದರೆ ನಾವು ಬೆಂಕಿಯ ಉಪಯೋಗ ಅರಿತ ನಂತರ ದೇಹಕ್ಕೆ ಬೇಯಿಸಿದ ಮಾಂಸವನ್ನು ಅಭ್ಯಾಸ ಮಾಡಿಸಿ ಹಸಿಯದನ್ನು ವರ್ಜ್ಯ ಮಾಡಿಸಿದ್ದೇವೆ. ಅಂಗಗಳ ರಚನೆ ಬಲಗೊಳ್ಳೋದು ಅಥ್ವಾ ದುರ್ಬಲಗೊಳ್ಳೋದು ಜೀವಿಯೊಂದು ಅದನ್ನು ಎಷ್ಟರ ಮಟ್ಟಿಗೆ ಉಪಯೋಗಿಯಾಗಿ ಇರಿಸಿಕೊಂಡಿದೆ ಎಂಬುದರ ಮೇಲೆ ಎಂದು ಜೀವವಿಕಾಸ ಶಾಸ್ತ್ರ ಹೇಳುತ್ತದೆ.
  ಇಲ್ಲೋಂದು ಸ್ಪಷ್ಟನೆ, ವ್ಯಕ್ತಿಯೊಬ್ಬ ಮಾಂಸಹಾರಿ ಎಂದರೆ ಅವನು ಮಾಂಸವನ್ನೇ ತಿಂದು ಬದುಕುತ್ತಾನೆ ಎಂದಲ್ಲ, ಮಾಂಸವನ್ನೂ ತಿನ್ನುತ್ತಾನೆ ಎಂದಷ್ಟೇ!
  ನಾವು ದೇಹರಚನೆಯಲ್ಲಿ ಹೆಚ್ಚಾಗಿ ಸಸ್ಯಹಾರಿಗಳನ್ನು ಮತ್ತು ಸ್ವಲ್ಪವೇ ಮಾಂಸಹಾರಿಗಳಿಗೆ ಹೋಲುತ್ತೇವೆ. ಆದ್ದರಿಂದ ಮನುಷ್ಯ ಹೆಚ್ಚು ಸಸ್ಯಹಾರಿಯಾಗಿಯೂ ಕಡಿಮೆ ಮಾಂಸಹಾರಿಯೂ ಆಗಿರಬೇಕಾದವನು ಎಂಬುದು ಪ್ರಕೃತಿಯ ಇಂಗಿತ*.

  ಕೆಲವು points:
  ೧. ಯಾವುದೇ ಮತ ಶ್ರದ್ಧೆಯನ್ನು ಕೆಳಗಿಳಿಸುವ ಅಥವಾ ಮೇಲಿರಿಸುವ ವಿಚಾರ ನನ್ನದಾಗಿರುವುದಿಲ್ಲ.
  ೨. ಏನೇ ಆಗಲಿ ಇಷ್ಟವಾದರೆ ಮಾತ್ರ ತಿನ್ನುವುದು!
  ೩. ಮಾಂಸವೇ ಆಗಲಿ ಸಸ್ಯವೇ ಆಗಲಿ ಹಿತಮಿತವಾಗಿದ್ದರೆ ಮಾತ್ರ ದೇಹ ಮತ್ತು ಮನಸ್ಸಿಗೆ ಅರೋಗ್ಯ.
  ೪. ಮಾಂಸ ಹೆಚ್ಚು ದೇಹ ಪೋಷಕಾಂಶಗಳನ್ನೋಳಗೊಂಡಿದ್ದು, ಮಾಂಸಹಾರಿ*ಗಳ ಅಂಗಗಳು ಸಾಮಾನ್ಯವಾಗಿ ಸ್ವಸ್ಥವಾಗಿರುತ್ತವೆ.
  ೫. ಸಸ್ಯಹಾರಿಗಳು ಸ್ವಸ್ಥರಾಗಿರುವದಕ್ಕೆ ತುಂಬ ಬಗೆಯ ದಾನ್ಯ ಮತ್ತು ತರಕಾರಿಗಳನ್ನು ತಿನ್ನುವ ಅವಶ್ಯಕತೆ ಇರುತ್ತದೆ.. ಇಲ್ಲವಾದರೆ ಕೆಲವು ಅಂಗಗಳು ಪೋಷಕಾಂಶ ಕೊರತೆಗಳಿಂದ ಊನಗೊಳ್ಳುವುದು ಗ್ಯಾರಂಟಿ.
  [ವಿವೇಕಾನಂದ, ಕುವೆಂಪು ಇವರು ಮಾಂಸಹಾರಿ*ಗಳಾಗಿದ್ದವರು.ಇದನ್ನು ಹೇಳೋ ಅವಶ್ಯಕತೆ ಇಲ್ಲಾ.. ಆದ್ರೂ ಹೇಳ್ಬೇಕು ಅನಿಸ್ತು :-)]

  ReplyDelete
 11. ಸರ್ಪಾಃ ಪಿಬಂತಿ ಪವನಂ ನ ಚ ದುರ್ಬಲಾಃ ತೇ
  ಶುಷ್ಕೈಃ ತೃಣೈಃ ವನಗಜಾಃ ಬಲಿನೋ ಭವಂತಿ |
  ಕಂದೈಃ ಫಲೈಃ ಮುನಿವರಾಃ ಕ್ಷಪಯಂತಿ ಕಾಲಂ
  ಸಂತೋಷ ಏವ ಪುರುಷಸ್ಯ ಪರಂ ನಿಧಾನಮ್ ||

  ReplyDelete
 12. sasyahaarigalige vaada maadoke sumaru points kottiddakke dhanyavaada.:) nimma blog tumba ishta aaytu.nanna bloginda nimma blogge link maadiddene. Hope u dont mind.:)

  ReplyDelete
 13. ಸಾಮಾನ್ಯವಾಗಿ ಬ್ಲಾಗ್‌ಗಳನ್ನು ಓದಿ ಅವುಗಳಲ್ಲಿ ಕೆಲವು ಬರಹಗಳು ಚೆನ್ನಾಗಿದ್ದರೂ ಅವುಗಳ ಬಗ್ಗೆ ಕಾಮೆಂಟಿಸಲು ಹೋಗದ ಸೋಮಾರಿ ನಾನು.ಆದರೆ ನಿಮ್ಮ ಈ ಬರಹದ ಕೊನೆಯ ವಾಕ್ಯ ನನಗೆ ತುಂಬಾ ಇಷ್ಟವಾಗಿದ್ದರಿಂದ ಇಲ್ಲಿ ಕಾಮೆಂಟಿಸುತಿದ್ದೇನೆ.
  ನಿಮ್ಮ ಬರಹಗಳನ್ನು ತುಂಬಾ ಕುತೂಹಲದಿಂದ ಗಮನಿಸುತ್ತಿದ್ದೇನೆ. ಬಹುಶಹ ನನಗೆ ತುಂಬಾ ಪ್ರಿಯವಾದ ವಿಷಯಗಳ ಬಗ್ಗೆ ನೀವು ತುಂಬಾ ವಿವರವಾಗಿ ಬರೆಯುವುದರಿಂದ ಇರಬಹುದು.

  ಇನ್ನೂ ಸಸ್ಯಾಹಾರದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವ ವಿಷಯಕ್ಕೆ ಬಂದರೆ, ಭಾರತೀಯ ಸಮಾಜದಲ್ಲಿ ಮಾಂಸಾಹಾರ ತಿನ್ನದ ಒಂದು ವರ್ಗದಲ್ಲಿ ಹುಟ್ಟಿ, ಅನಿವಾರ್ಯವಾಗಿ ಸಸ್ಯಾಹಾರಿಗಳಾಗಿರುವ ನಾನು ಮತ್ತು ನನ್ನಂತಹ ಅನೇಕರು ನಾವು ಸಸ್ಯಾಹಾರಿಗಳು ಎಂದು ಹೆಮ್ಮೆ ಪಟ್ಟುಕೊಳ್ಳುವುದು ಎಷ್ಟು ಸಮಂಜಸ ? ಎನ್ನುವ ಸಂಶಯ ನನ್ನದು. ಆದರೆ ಹುಟ್ಟಿನಿಂದ ಮಾಂಸಾಹಾರಿಗಳಾಗಿ ಪರಿಸರ ಮತ್ತು ಪ್ರಾಣಿಗಳ ಮೇಲಿನ ಕಾಳಜಿಯಿಂದ ಸಸ್ಯಾಹಾರಿಗಳಾಗಿರುವ ಅನೇಕರ ಬಗ್ಗೆ ನನಗೆ ತುಂಬು ಗೌರವ ಮತ್ತು ಒಂದು ಬಗೆಯ ವಿಸ್ಮಯ ಕೂಡಾ. ಪ್ರತಿಕ್ರಿಯೆ ಸ್ವಲ್ಪ ದೀರ್ಘವಾಗಿದಕ್ಕೆ ಕ್ಷಮೆ ಇರಲಿ. ನಿಮ್ಮ ಒಳ್ಳೆಯ ಕೆಲಸ ಮುಂದುವರಿಸಿ.

  ReplyDelete
 14. [ರಮೇಶ್] ಒಳ್ಳೇ ಡಿಬೇಟು. ಇನ್ನೊಂದು ಪೋಸ್ಟು ಸಿದ್ಧಪಡಿಸಿದ್ದೇನೆ ನೋಡಿ.. :-)

  ಹಲ್ಲುಗಳ ವಿನ್ಯಾಸದಂತೆ, ಬೇರೆ ಜೀರ್ಣಾಂಗಗಳು ಇವೆಯೇ?

  ವ್ಯಕ್ತಿಯೊಬ್ಬ ಮಾಂಸವನ್ನು ತಿನ್ನುತ್ತಾನೆಂದರೆ, ಮಾಂಸವನ್ನೇ ತಿನ್ನದೆ, ಜೊತೆಗೆ ಸಸ್ಯಾಹಾರವನ್ನೂ ತಿನ್ನುತ್ತಾನೆ!! ಅಂದರೆ ಮಾಂಸ ಅನವಶ್ಯಕವಾಯಿತೆಂದಲ್ಲವೆ?

  ಇನ್ನು ಸ್ವಸ್ಥತೆಯ ಬಗ್ಗೆ ಮೇಲಿನ ಪೋಸ್ಟಿನಲ್ಲಿದೆ ನೋಡೋಣವಾಗಲಿ.

  ಹೆ ಹ್ಹೆ.. ಕೊನೆಯ ಟ್ರಿವಿಯಾ ಚೆನ್ನಾಗಿದೆ. ರಾಜ್‍ಕುಮಾರ್ ಕೂಡ ಮಾಂಸಾಹಾರಿಯಾಗಿದ್ದರು!!

  [ಶ್ರೀಕಾಂತ್] ಒಳ್ಳೇ ಸುಭಾಷಿತ. ಋಷಿಗಳು ಹಣ್ಣು ಹಂಪಲು ತಿನ್ನುತ್ತಾರೆ, ಓಕೆ. ಗಿಡ ಹುಲ್ಲು ಇತ್ಯಾದಿಗಳನ್ನು ಆನೆಗಳು ತಿನ್ನುತ್ತವೆ ಓಕೆ. ಆದರೆ ಹಾವುಗಳು ಗಾಳಿಯನ್ನು ಕುಡಿಯುವುದಿಲ್ಲವಲ್ಲಾ? ಆ ಕಾಲದವರಿಗೆ ಇನ್ನೂ ಅದರ ಅರಿವಿರಲಿಲ್ಲವೇನೋ. ಇರಲಿ, ಇಲ್ಲಿ ಅದು ಅನವಶ್ಯಕ. ಸುಮ್ನೆ ನನ್ ತಲೆ ಏನೇನೋ ಕೆಲ್ಸ ಮಾಡುತ್ತೆ.

  [ಮಧೂSS] ಧಾರಾಳವಾಗಿ ಕೊಡಿ. ನನ್ನ ಭಾಗ್ಯವಷ್ಟೆ. ಬ್ಲಾಗ್ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.. :-)

  [ಪೆಂಗ್ವಿನ್] ಬಹಳ ಸಂತೋಷವಾಯಿತು ನಿಮ್ಮ ಕಮೆಂಟನ್ನು ನೋಡಿ. ಧನ್ಯವಾದಗಳು..

  ReplyDelete
 15. ನಮ್ಮ ಕಛೇರಿಯಲ್ಲಿ (ಈ ರೀತಿಯ) ಕಮೆಂಟ್ ಫಾರ್ಮ್ ಓಪನ್ ಆಗಲ್ಲ.. ಹಾಗಾಗಿ ನಿಮ್ಮ ಇತ್ತೀಚಿನ ಬಹಳಷ್ಟು ಲೇಖನಗಳನ್ನು ಓದಿದ್ದೇನಾದರೂ ಪ್ರತಿಕ್ರಿಯಿಸಲಾಗಿಲ್ಲ.

  ನಾನೂ ಸಸ್ಯಾಹಾರಿ..

  ಇನ್ನು.. ಮಾಂಸಾಹಾರ ಒಳ್ಳೆಯದು ಎನ್ನುವವರಿಗೆ: ತಿನ್ನುವುದಕ್ಕೆ ಬದುಕುವುದಲ್ಲ.. ಬದುಕಲಿಕ್ಕೆ ತಿನ್ನಬೇಕು ;-)

  ReplyDelete

ಒಂದಷ್ಟು ಚಿತ್ರಗಳು..