Saturday, January 03, 2009

ದುರಭ್ಯಾಸಗಳು

ಅಯ್ಯೋ, ನಮ್ಮ ದೈನಂದಿನ ದುರಭ್ಯಾಸಗಳನ್ನು ಇಲ್ಲಿ ಪಟ್ಟಿ ಮಾಡುತ್ತಾ ಕುಳಿತುಕೊಳ್ಳಲು ನಾನೇನು ಮೂರ್ಖನೇ? ಪ್ರತಿಯೊಬ್ಬರಿಗೂ ಒಂದೊಂದು ದುರಭ್ಯಾಸವಾದರೂ ಇದ್ದೇ ಇರುತ್ತೆ.

ಇಲ್ಲಿ ನಾನು ಹೇಳ ಹೊರಟಿರುವುದು ಪ್ರಯಾಣ/ ಚಾರಣ ಮಾಡುವಾಗ ಪರಿಸರಕ್ಕೆ ಹಾನಿಯುಂಟು ಮಾಡಬಲ್ಲ ಕೆಲವು ದುರಭ್ಯಾಸಗಳು, ನಮಗೆ ಗೊತ್ತಿಲ್ಲದೇನೇ ನಾವು ಬೆಳೆಸಿಕೊಂಡು ಬಿಟ್ಟಿರುತ್ತೇವೆ. ಸಾಧ್ಯವಾದಷ್ಟು ಮಟ್ಟಿಗೆ ಇದರಿಂದ ದೂರ ಉಳಿಯಲು ಪ್ರಯತ್ನಿಸೋಣ ಎಂಬ ಕರೆಯನ್ನು ಕೊಡಲಿಚ್ಛಿಸುತ್ತೇನೆ.

ಹೋದ ಕಡೆಯೆಲ್ಲಾ ತಿಂಡಿಪೋತರಾದ ನಾವು ಕುರುಕು ಮುರುಕುಗಳನ್ನು ಪೊಟ್ಟಣ ಕಟ್ಟಿಕೊಂಡು ಹೋಗುವುದು ಅಭ್ಯಾಸವಷ್ಟೆ? ಬಹುಪಾಲು ಪೊಟ್ಟಣಗಳು ಪ್ಲ್ಯಾಸ್ಟಿಕ್ಕಿನದಾಗಿರುತ್ತೆ. ಮತ್ತೆ ಈ ಪ್ಲ್ಯಾಸ್ಟಿಕ್ ಬಿಸಾಡುವುದು ಹಾನಿಕರ ಎಂಬುದನ್ನು ನಾವು ಎಲ್ಲೆಡೆ ಓದಿ ಓದಿ, ನೋಡಿ ನೋಡಿ, ಕೇಳಿ ಕೇಳಿ ಆಗಿದೆ. ಮತ್ತೆ ಅದೇ ಪುರಾಣ ಬೇಡ. ಈಗಾಗಲೇ 'ತಿಳಿದವರು' ಈ ಕೃತ್ಯವೆಸಗದಂತೆ ಎಚ್ಚರ ವಹಿಸುತ್ತಿರುವುದು ಒಳ್ಳೆಯ ಸಂಗತಿ. ಇದನ್ನು ಅರಣ್ಯ ಇಲಾಖೆಯ ಕಾರ್ಯಕರ್ತರಿಗೆ, ಬೆಟ್ಟದ ಮೇಲಿರುವ ದೇವಸ್ಥಾನದ ಭಕ್ತರಿಗೆ, ಮನರಂಜನೆಗೆಂದು ಮೃಗಾಲಯಗಳಿಗೆ ಮತ್ತು ವನ್ಯಧಾಮಗಳಿಗೆ ಹೋಗುವವರಿಗೆ, ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಟ್ಟರೆ ಈ ಪ್ಲ್ಯಾಸ್ಟಿಕ್ ದೈತ್ಯನಿಂದ ಸ್ವಲ್ಪ ಪಾರಾಗಬಹುದು.ಸರಿ, ಪ್ಲ್ಯಾಸ್ಟಿಕ್ ಪೊಟ್ಟಣಗಳನ್ನು ತ್ಯಜಿಸಿದೆವು ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ತಿಂಡಿಗಳನ್ನು ಹೇಗೆ ತೆಗೆದುಕೊಂಡು ಹೋಗುವುದು? ಸಮಸ್ಯೆಗಳನ್ನು ಗುರುತಿಸುವುದು ಸುಲಭ. ನಮ್ಮ ಸಮಸ್ಯೆಗಳಿಗೆ ನಾವೇ ಅಲ್ಲವೇ ಕಾರಣ? ಸಮಸ್ಯೆಗಳಿಗೆ ಉತ್ತರಗಳನ್ನೂ ನಾವೇ ಕಂಡುಕೊಳ್ಳಬೇಕಲ್ಲವೆ? ಹಿಂದಿನ ಕಾಲದವರ ಥರ ಎಲೆಗಳಲ್ಲಂತೂ ತಿಂಡಿಗಳನ್ನು ಕಟ್ಟಿಕೊಂಡು ಹೋಗಲು ಸಾಧ್ಯವಿಲ್ಲ. ಕಂಪೆನಿಯವರಂತೂ ಹಾಗೆ ಕಟ್ಟಿಕೊಡುವುದಿಲ್ಲ.

ಒಂದು ಉಪಾಯವೆಂದರೆ, ಆ ಪ್ಲ್ಯಾಸ್ಟಿಕ್ ಬಳಸುವುದನ್ನು ತ್ಯಜಿಸದೇ, ಕವರುಗಳನ್ನು ಎಲ್ಲೂ ಬಿಸಾಡದೆ ಹಾಗೇ ನಮ್ಮ ಬ್ಯಾಗಿನಲ್ಲೇ ಹಾಕಿಕೊಂಡು ಹಿಂದಕ್ಕೆ ತರುವುದು.
ಆಮೇಲೆ?
ಇಲ್ಲಿ ತೊಟ್ಟಿಯಲ್ಲಿ ಬಿಸಾಡುವುದು.
ಆಮೇಲೆ? ಆ ತೊಟ್ಟಿಯಲ್ಲಿ ಬಿಸಾಡಿದ ಕಸವನ್ನು "ಕಸ ಬಿಸಾಡುವ ಇಲಾಖೆಯವರು" ಏನು ಮಾಡುತ್ತಾರೆ? ಪುನಃ ನಗರದಿಂದ ದೂರಕ್ಕೆ ತೆಗೆದುಕೊಂಡು ಹೋಗಿ ಬಿಸಾಡಿ ಬರುತ್ತಾರೆ. ಕನಕಪುರ ಮುಖ್ಯರಸ್ತೆಯು ಇದಕ್ಕೆ ಬಹುದೊಡ್ಡ ನಿದರ್ಶನ. ಮೈಸೂರು ಮೃಗಾಲಯದವರು, ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದವರು ಪ್ಲ್ಯಾಸ್ಟಿಕ್ ನಿಷೇಧಿಸಿ ನಾವು ಕೊಂಡೊಯ್ವ ತಿಂಡಿಯೇನಾದರೂ ಪ್ಲ್ಯಾಸ್ಟಿಕ್ ಕವರುಗಳಲ್ಲಿ ಇದ್ದ ಪಕ್ಷದಲ್ಲಿ ಅದನ್ನು ಪೇಪರ್ ಕವರಿಗೆ ವರ್ಗಾಯಿಸಿಕೊಡುತ್ತಾರೆಂಬ ಕೆಲಸವು ಪ್ರಶಂಸನೀಯ.

ಸರಿ, ಪ್ಲ್ಯಾಸ್ಟಿಕ್ ಬಳಸದೆಯೇ ಇರುತ್ತೇವೆಂದುಕೊಂಡರೆ? ಪೇಪರಿನಲ್ಲಿ ಕಟ್ಟಿಕೊಂಡು ಹೋಗೋದೇ ತಿಂಡಿಯನ್ನು? ಪೇಪರ್ biodegradable ಅಲ್ಲವೇ? ಎಂಬುದು ಹಲವರ ಪ್ರಶ್ನೆ. ಹೌದು. ಆದರೆ ಈಗ ಬರುತ್ತಿರುವ ಬಹುತೇಕ ಪೇಪರುಗಳು ವಿಭಜನೀಯವಲ್ಲ. ಪ್ಲ್ಯಾಸ್ಟಿಕ್ ಪದರವೊಂದು ಇದ್ದೇ ಇರುತ್ತೆ. ಸಸ್ಯಮೂಲವೇ ಆದರೂ ಪೇಪರ್ರು ಸಂಪೂರ್ಣ ವಿಭಜನೆ ಹೊಂದಲು ಬಹಳ ಕಾಲ ಬೇಕಾದೀತು. ಜೊತೆಗೆ ತಿಳಿಯದೆ ಈ ಬಿಸಾಡಿದ ಪೇಪರ್ರನ್ನು ತಿನ್ನುವ ಪ್ರಾಣಿಗೆ ಇದು ಗಂಟಲಿನಲ್ಲಿ ಸಿಕ್ಕು ಹಾಕಿಕೊಂಡು ಪ್ರಾಣವನ್ನೂ ಬಿಡಬಹುದು. ಅನೇಕ ಪೇಪರ್ರುಗಳು ವರ್ಷಾನುಗಟ್ಟಲೆ ಕೊಳೆಯದೇ ಹಾಗೇ ಇರುತ್ತೆ. ಹಾಗಾಗಿ ಪೇಪರ್ರನ್ನೂ ಬಿಸಾಡುವುದು ತರವಲ್ಲ.
ಇದು ಪೇಪರ್ ಬಿಸಾಡುವ ದುರಭ್ಯಾಸವಿರುವವರಿಗೆ ಒಂದು ಸಣ್ಣ ಪಾಠವಾಯಿತಷ್ಟೆ?

ಇನ್ನು ಕೆರೆ-ನದಿ-ಝರಿ-ತೊರೆಗಳಲ್ಲಿ ಸ್ನಾನ ಮಾಡುವವರು. ನೆನಪಿರಲಿ, ನಾವು ಅಲ್ಲಿ ಕೆಲವೇ ಸಮಯ ಇದ್ದು ಸ್ನಾನ ಮಾಡುವ ನೀರು ನೂರಾರು ವನ್ಯ ಮೃಗಗಳಿಗೆ, ಹುಳು ಹುಪ್ಪಟೆಗಳಿಗೆ, ಗಿಡ ಮರಗಳಿಗೆ ಜೀವಸತ್ತ್ವವಾಗಿರುತ್ತೆ. ಈ ಸ್ನಾನಕ್ಕೆ ಸೋಪು, ಹಲ್ಲುಜ್ಜಲು ಪೇಸ್ಟು - ಬಳಸುವವರು ಸರ್ವನಾಶ ಮಾಡುವವರೇ ಸರಿ. ಅರೆಘಳಿಗೆ ನಮ್ಮ ಬಾಯಿಗೆ ಕಾಲು ಗ್ರಾಂ ಸೋಪನ್ನು ಹಾಕಿಕೊಂಡರೆ ನಮಗೆ ಹೇಗಾಗುತ್ತೆ? ಒಂದು ಗ್ರಾಂ ಕೋಲ್‍ಗೇಟನ್ನು ತಿಂದರೆ ನಮಗೇನಾಗುತ್ತೆ? ಇನ್ನು ನೀರೆಲ್ಲಾ ಕೆಮಿಕಲ್ ಮಯವಾದರೆ ವನ್ಯಜೀವಿಗಳ ಗತಿಯೇನಾಗಬೇಕು? ಸ್ನಾನ ಮಾಡುವುದು ಕೇವಲ ನಾವು ಶುಚಿಯಾಗಿರಲು ಅಲ್ಲ, ನಮ್ಮ ಪರಿಸರವನ್ನೂ ಶುಚಿಯಾಗಿಡಲು. ಅರಣ್ಯದಲ್ಲಿ ಸೋಪು ಪೇಸ್ಟು ಬಳಸಿದರೆ ಶುಚಿಯ ನಾಶವಾಗುವೆಂದು ಅರಿತುಕೊಂಡವನು ಜಾಣ.ಸರಿ, ಮುಖತೊಳೆದೋ ಸ್ನಾನ ಮಾಡೋ ಆಯಿತು. ಸೋಪನ್ನು ಬಳಸದೇ ಇದ್ದರೂ ಇನ್ನು ಕೆಲವರಿಗೆ ಡಿಯೋಡರೆಂಟ್ ಬಳಸುವ ಚಟ. ನಾನು ಒಪ್ಪಿಕೊಳ್ಳುತ್ತೇನೆ. ಈ ದುರಭ್ಯಾಸ ನನಗೂ ಇತ್ತು. ಇದರ ಬಗ್ಗೆ ನನಗೆ ಬೇಸರವಾಗುತ್ತೆ ಈಗ. ಆದರೆ ನಾನು ಈಗ ಇದು ತಪ್ಪೆಂದು ಕಲಿತಿದ್ದೇನೆ. ಶಾಲೆಯಲ್ಲಿ ಓದಿದ್ದೇವೆ ಎಲ್ಲರೂ. CFC-ಇಂದ ಓಜೋನು ಪದರದಲ್ಲಿ ರಂಧ್ರಗಳು ಉಂಟಾಗುತ್ತವೆ ಎಂದು. ಆದರೆ ಈಗ ಬರುತ್ತಿರುವ ಡಿಯೋಡರೆಂಟುಗಳು CFC-ಯಿಂದ ಮುಕ್ತವಾಗಿರುವುದು ಒಳ್ಳೆಯ ವಿಚಾರ. ಆದರೆ ಅರಣ್ಯದಲ್ಲಿ ಇದರ ಬಳಕೆ ಸಮಂಜಸವಲ್ಲ. ಮೊದಲ ಕಾರಣ, ಇದು ಬೆಂಕಿಯ ಉತ್ತೇಜಕ (inflammable). ಎರಡನೆಯದು, ಇದರ ಘಮದಿಂದ ವನ್ಯಮೃಗಗಳು "ಡಿಸ್ಟರ್ಬ್" ಆಗುವ ಸಕಲ ಸಾಧ್ಯತೆಗಳೂ ಇವೆ. ಮೂರನೆಯದು, ಸಣ್ಣ ಪುಟ್ಟ ಹುಳು ಹುಪ್ಪಟೆಗಳು ಇದರ ಸೋಂಕಿಗೆ ಜೀವ ತೆರಬೇಕಾಗುತ್ತೆ. ಚಾರಣಿಗನಾಗಿ, ಎಂಟು ವರ್ಷಕ್ಕೆ ನನ್ ಮಗ ದಂಟು ಎಂಬಂತೆ, Better late than never ಎಂಬಂತೆ ಇದನ್ನು ನಾನು ಕಲಿತಿದ್ದೇನೆ. ನನ್ನೊಡನೆ ಕಲಿಯುವವರ ಬಗ್ಗೆ ಸಂತೋಷಿಸುತ್ತೇನೆ.

ಇನ್ನು ಒಂದು ಮುಖ್ಯ ವಿಷಯಕ್ಕೆ ಬರುತ್ತೇನೆ. ಪಯಣದಲ್ಲಿ, ಅರಣ್ಯದಲ್ಲಿ ಕುಡಿಯುವವರು, ಸೇದುವವರು - ಇವರ ಬಗ್ಗೆ ನಾನು ಇಲ್ಲಿ ಬರೆಯುವುದಿಲ್ಲ. ಅದು ತಮಗಾಗಲೀ, ಪರಿಸರಕ್ಕಾಗಲೀ ಕಿಂಚಿತ್ತೂ ಒಳಿತಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಂಥವರಿಗೆ ನನ್ನ ಹೃತ್ಪೂರ್ವಕ ಧಿಕ್ಕಾರ. ಆದರೆ ಅನೇಕರು ಅರಿಯದ ಸಂಗತಿಯೊಂದಿದೆ. ಅದು ಜಗಿಯುವ ಗೋಂದು! (ಕೆಟ್ಟ ತರ್ಜುಮೆಯೆನ್ನಿಸುತ್ತೆ, ಆದರೂ ಪರವಾಗಿಲ್ಲ). Chewing Gum.ಈಗೀಗಿನ್ನೂ biodegradable chewing gum-ನ ತಯಾರಿಸುವ ಪೇಟೆಂಟುಗಳು ಹೊರಬಂದಿವೆಯಷ್ಟೆ. ನಮ್ಮಲ್ಲಿ ಸಿಗುವ ಯಾವುದೇ ಚ್ಯೂಯಿಂಗ್ ಗಮ್ಮೂ ಸಹ ಬಿಸಾಡಿದ ನಂತರ ಕೊಳೆಯುವಂಥದ್ದಲ್ಲ. ಪ್ಲ್ಯಾಸ್ಟಿಕ್ ಎಷ್ಟು ಕೆಟ್ಟದ್ದೋ ಅದರಷ್ಟೇ ಇದೂ ಕ್ರೂರಿ. ಲೊಚ ಲೊಚ ಎಂದು ಗಂಟೆಗಟ್ಟಲೆ ಜಗಿಯುತ್ತಲೇ ಇರುವುದು ದೇಹಕ್ಕೂ ಒಳ್ಳೆಯದಲ್ಲ. ಇದರಲ್ಲಿರುವ ಎಲಾಸ್ಟೋಮರುಗಳು ಮತ್ತಿತರ ಪಾಲಿಮರುಗಳು ಏನೇನು ತೊಂದರೆ ಮಾಡಬೇಕೋ ಎಲ್ಲ ತೊಂದರೆಗಳನ್ನೂ ಮಾಡಿಯೇ ತೀರುತ್ತೆ. ತೀರಿಸುತ್ತೆ! ಈ ದುರಭ್ಯಾಸವನ್ನು ನನ್ನ ಪುಣ್ಯಕ್ಕೆ ನಾನು ಬಿಟ್ಟಿದ್ದು ಹೈಸ್ಕೂಲಿನಲ್ಲಿದ್ದಾಗ. ನನ್ನ ಪರಿಚಿತರೆಲ್ಲರಿಗೂ ಇದರ ಬಗ್ಗೆ ಹೇಳುತ್ತಿರುತ್ತೇನೆ. ಈಗ ಇಲ್ಲೂ ಹೇಳಬೇಕೆನಿಸಿತು. ಸುಮ್ಮನೆ ಬಾಯಾಡಿಸಲು ಹಣ್ಣು ತಿನ್ನಬಹುದು, ಮೊಳಕೆ ಕಾಳುಗಳು ತಿನ್ನಬಹುದು, ಕ್ಯಾರೆಟ್ ತಿನ್ನಬಹುದು, ಬೇವಿನ ಸೊಪ್ಪು ತಿನ್ನಬಹುದು, ತಾಂಬೂಲವನ್ನಾದರೂ ಮೆಲ್ಲಬಹುದು! ಈ ಹಾಳು ಚ್ಯೂಯಿಂಗ್ ಗಮ್ಮು ಸಿಗರೇಟಿನೊಂದಿಗೆ ತೊಲಗಲಿ ಎಂದು ಹಾರೈಸುತ್ತೇನೆ.

-ಅ
03.01.2009
11.30PM

13 comments:

 1. ಡಿಯೋಡರೆಂಟ್ ಬಿಟ್ಬಿಟ್ಯಾ??? :-)

  ಒಳ್ಳೆಯ ಲೇಖನ. ಪ್ರಕೃತಿಯ ಮಧ್ಯೆ ದುಷ್ಕೃತ್ಯಗಳನ್ನು ಮಾಡುವವರಿಗೆ ನನ್ನದೂ ಹೃತ್ಪೂರ್ವಕ ಧಿಕ್ಕಾರ!

  ನೀನು ಬಿಟ್ಟ ಒಂದು ಮುಖ್ಯವಾದ ವಿಷಯ -

  ಕಾಡಿಗೆ ಹೋದ ತಕ್ಷಣ ಕಾಡು ಪ್ರಾಣಿಗಳಿಗೂ ಕಡಿಮೆಯಿಲ್ಲ ಎನ್ನುವಂತೆ ಕಿರುಚಿಕೊಳ್ಳುತ್ತಾರಲ್ಲ (ಮನುಷ್ಯ ಜನಾಂಗದ ಸಂಸ್ಕಾರಗಳನ್ನೆಲಾ ಬಿಟ್ಟು!)... ಯಾವ್ದೋ ವ್ಯೂ ಪಾಯಿಂಟಲ್ಲಿ ನಿಂತು ಖುಷಿ ಆಯ್ತು ಅಂತ ಗಂಟಲು ಕಿತ್ತೋಗೋ ಹಂಗೆ ಕಿರುಚಿಕೊಳ್ಳೋದು, ಅಲ್ಲಿಂದ ಯಾರೋ ಬಿದ್ದು ಸತ್ತೋದ್ರೇನೋ ಅನ್ನೋ ಹಾಗೆ... ಅದೂ ಬಹಳ ಕೆಟ್ಟ ಅಭ್ಯಾಸವೇ. ಇಡಿಯ ವಾತಾವರಣವನ್ನೇ ಬದಲಾಯಿಸಿಬಿಡುತ್ತೆ; ಪ್ರಾಣಿಗಳಿಗೆ ಗಾಬರಿಗೊಳಿಸಿ ಅವರಿಗೂ ಕೆಡುಕು ತಂದುಕೊಳ್ಳಲು ಸಾಧ್ಯ. ಜನಕ್ಕೆ ಶಬ್ದವಿಲ್ಲದ ಪ್ರಪಂಚದಲ್ಲೂ ಆನಂದ ಇದೆ ಅಂತ ಗೊತ್ತಿಲ್ಲ ನೋಡು.

  ReplyDelete
 2. ಸರಿಯಾಗಿ ಹೇಳಿದೆ ನೋಡು. ಅಲ್ಲಾ, ಮೌನದಿಂದ "ಆನಂದ" ಮಾತ್ರವಲ್ಲ, ಬೇರೆ ಜೀವಿಗಳಿಗೆ ಹಾನಿಯೂ ಇಲ್ಲ. ಹಾಗೆ ಕಿರುಚುವವರನ್ನು ಆನೆ ಹಿಂಡು ಅಟ್ಟಿಕೊಂಡು ಬಂದರೆ, ಅಥವಾ ಕರಡಿಯ ಗುಂಪು ಎದುರಾದರೆ ಆಗ ಬುದ್ಧಿ ಬರಬಹುದು.

  ReplyDelete
 3. ಸಾಕಷ್ಟು ಒಳ್ಳೇ ವಿಷಯ ತಿಳಿಸಿದಿರಿ, ಅರುಣ.
  ಪೇಪರುಗಳು degradable ಅನ್ಕೊಂಡಿದ್ದೆ.ಅಲ್ಲ ಎಂದು ಓದಿ ಅಚ್ಚರಿಯಾಗುತ್ತದೆ.Thanks.
  ಹಾಗೆಯೇ ಶ್ರೀಕಾಂತರೂ ಸಹ ಒದರುಜೀವಿಗಳಿಗೆ ಕೊಟ್ಟ ಎಚ್ಚರಿಕೆ ಸರಿಯಾಗಿದೆ.

  ReplyDelete
 4. yes.. naanoo "chewing the gum" na tumba hinde ne tinnod nilsbiTTe.. actually eega eshTo changes aaghogide nan aahaara paddhati alli :D

  deodorant upyogsbaardu annodu nanage nam chikkappa devasthanakke hodaaga heLidru.. adare nam bhaava adakke "ashtond religious aagirbaardu.. modern world allidmele idakke saryaagi adapt aagbeku" anta heLidru.. aadre eega ninna lekhanadalli deo use maaDe irodakku ondu scientific reason ide anta noDi khushi aaytu.. nam hiriyaru ondashTu kelsagaLna maaDbeDa anta kaaraNa ilde heLilla annodoo saabeetaaytu :)

  oLLeya informative lekhana.. nangoo kooDa paper esibaardu annodu gottirlilla.. tiLkonDe.. thank you!

  ReplyDelete
 5. hey ... olle article :-)
  School nalli iddaaga(4th std ansutte) Big Fun noru school ge bandu ellrigoo ondond big fun kotru, avru aa kade hogtiddhaage Shyamala miss nammannella saalagi horage hogi aa chewing gum yesedu barokke heLdru ... chewing gum is carcinogenic antha heLdru. Ade kone ... amele chewing gum tindilla :-)

  Nammalli waste management hopeless ... monne paper nalli haakidru ... illinda waste thogond hogi ooraache yesyo badlu, adanna process maadokke shuru maadbeku nam bmp noru antha. Maneli naavu segregate maaddru, aa kasa thongond hogokke baroru elladannu onde drum ge surkondu hogtaare ... karma!!!

  ReplyDelete
 6. [ವಿಜಯಾ] ಹೌದು. ಆದರೆ ಇದು ಕಾರ್ಸಿನೋಜೆನಿಕ್ಕೋ ಅಲ್ಲವೋ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಕಸ ಬಿಸಾಡುವುದರ ಬಗ್ಗೆ ಒಂದು ವರ್ಕ್-ಶಾಪ್ ಮಾಡ್ಸ್ಬೇಕು ಮಕ್ಕಳಿಗೆ. ನೋಡೋಣ. ನೆಕ್ಸ್ಟ್ ಇಯರ್.

  [ಗಂಭೇ] ಆಹಾರ ಪದ್ಧತಿ ನನ್ನಲ್ಲೂ ಸಾಕಷ್ಟು ಬದಲಾಗಿದೆಪ್ಪಾ.. ಡಿಯೋಡರೆಂಟ್ ಬಗ್ಗೆ ಓದಿ ನನಗೆ ಸಂತೋಷ ಆಯಿತು. ಇಂಥದ್ದೊಂದು ಆಚರಣೆಯಿದೆಯೆಂದು ನನಗೆ ಗೊತ್ತಿರಲಿಲ್ಲ.

  [ಸುನಾಥ್] My pleasure, sir.

  ReplyDelete
 7. ತಾಂಬೂಲವನ್ನಾದರೂ ಮೆಲ್ಲಬಹುದು.. houdoudu :)

  ReplyDelete
 8. ಒಳ್ಳೆಯ ತಿಳಿವನ್ನು ಹರಡುವ ಬರಹ.....

  ನನ್ನಿ
  ಸ್ವಾಮಿ

  ReplyDelete
 9. deoderant bagge gottirlilla. Thanks for the info. inmelinda chaaraNakke kaaDige hogbekaadre deo togonDe hogolla!

  ReplyDelete
 10. [ರಮೇಶ್] ನೀವು ತಾಂಬೂಲ ಪ್ರಿಯರೇ?

  [ಕುಕೂಊ] ಧನ್ಯವಾದಗಳು, ಇವ್ರೇ...

  [ಆನಾ-ನಿಮಸ್] ನಂಗೂ ಗೊತ್ತಿರಲಿಲ್ಲ. ರೀಸೆಂಟಾಗಿ ಗೊತ್ತಾಯಿತು. ನಿಮ್ಮೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದೆ.

  ReplyDelete
 11. naMge gottittu adke thagondu hogolla :)

  ReplyDelete
 12. :( nangoo chewing gum tinno durabhyaasa ittu, adrallu centrefresh!!! sadhya eega adnella bitbitideeni... :)
  good article...

  ReplyDelete
 13. ಕೆಲವು ತಿಳಿದಿರದ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

  ReplyDelete

ಒಂದಷ್ಟು ಚಿತ್ರಗಳು..