Thursday, January 22, 2009

ಈ ಸಂಭಾಷಣೆ..

ಮನುಷ್ಯ ಪ್ರಾಣಿಯೊಂದೇ "ಮಾತನಾಡುವ" ವರವನ್ನು ಪ್ರಕೃತಿಯಿಂದ ಪಡೆದಿರುವುದು. ಆದರೆ, ಬೇರೆ ಪ್ರಾಣಿಗಳು ಸಂಭಾಷಣೆ ಮಾಡುವುದಿಲ್ಲವೆಂದಲ್ಲ. ಮಾತನಾಡಿಕೊಂಡು ಸಂಭಾಷಿಸದೇ ಇದ್ದರೂ ಅನೇಕ ಪ್ರಾಣಿಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ, ವಿಶಿಷ್ಟ ಭಾಷೆಯಲ್ಲಿ ಸಂಭಾಷಣೆಯನ್ನು ಮಾಡುತ್ತವೆ - ಕೆಲವು ವಿಷಯಗಳಿಗಾಗಿ ಮಾತ್ರ!

ಮಾಂಡ್ರೇಕ್ ಕಾಮಿಕ್ಕಿನಿಂದ ನನಗೆ ಬಹಳ ಹಿಂದೆಯೇ ತಿಳಿದ ವಿಷಯ, ಜೇನು ನೊಣಗಳು ನೃತ್ಯ ಮಾಡಿಕೊಂಡು ತನ್ನ ಸಂದೇಶವನ್ನು ಇನ್ನೊಂದು ನೊಣಕ್ಕೆ ಸಾರುತ್ತೆ೦ದು. ಆಹಾರವನ್ನು ಹುಡುಕಿದ ನೊಣವು "ಇಂಥಾ ಸ್ಥಳದಲ್ಲಿದೆ, ಬನ್ನಿ" ಎಂದು ಹೇಳಲು ಒಂದು ಬಗೆಯ ನೃತ್ಯವನ್ನಾಡುತ್ತೆಂಬುದು ವಿಜ್ಞಾನಿಗಳ ನಂಬಿಕೆ.ಇರುವೆಗಳು ಶಿಸ್ತಿನಿಂದ ಸಾಲು ಸಾಲಾಗಿ ಹರಿಯುತ್ತಿರುವುದನ್ನು ಗಮನಿಸದೇ ಇರುವವರು ಯಾರು? ಎದುರು ಬರುವ ಇರುವೆ ಜೊತೆ ಏನೋ ಗುಟ್ಟು ಗುಟ್ಟಾಗಿ ಮಾತನಾಡಿದಂತೆ ಕಾಣುತ್ತೆ ಅಲ್ಲವೆ? ಹೌದು. ವಾಸ್ತವವಾಗಿ, ಇದು ಇರುವೆಯ ಸಂಭಾಷಣೆ. ಇರುವೆಗಳು ಸಂಘಜೀವಿಗಳು. ತನ್ನ ಕುಟುಂಬದವರೇ ಅಲ್ಲವೇ ಎಂಬ ಪರೀಕ್ಷೆಯನ್ನು ಎದುರು ಬರುವ ಇರುವೆಯ ಜೊತೆ ಮಾಡಿಕೊಳ್ಳುತ್ತೆ. ಎದುರಿನ ಇರುವೆಯ ಮೀಸೆಯನ್ನು (antennae) ಸೋಕಿಸಿ ತಿಳಿದುಕೊಳ್ಳುತ್ತೆ, ತಮ್ಮ ಕುಟುಂಬದವರೋ ಅಲ್ಲವೋ ಎಂದು. ಮತ್ತು ತನ್ನ ಹಿಂದೆ ಬರುವ ಸಾಲು ಸೈನ್ಯವು ಹಾದಿ ತಪ್ಪದೇ ಇರುವಂತೆಯೂ ನೋಡಿಕೊಳ್ಳುವುದು ಪ್ರತಿಯೊಂದು ಇರುವೆಯ ಜವಾಬ್ದಾರಿ. ಈ ಎರಡು ಬಗೆಯ ಸಂಭಾಷಣೆಗೂ ಇರುವೆಯು ಬಳಸುವುದು "ಫೀರೋಮೋನ್" ಎಂಬ ರಾಸಾಯನಿಕ ದ್ರವವನ್ನು. ಇರುವೆಗಷ್ಟೆ ನಿಲುಕುವ ಘಮವನ್ನು ಈ ಫೀರೋಮೋನ್‍ ಒದಗಿಸುತ್ತೆ. ಇರುವೆಗಳು ನಡೆದು ಹೋಗುತ್ತಿರುವಾಗ ಮಧ್ಯದಲ್ಲಿ ನೀರು ಚೆಲ್ಲಿದರೆ, ಅವು ದಾರಿ ತಪ್ಪುವುದನ್ನು ನಾವೆಲ್ಲರೂ ಗಮನಿಸಿದ್ದೇವಷ್ಟೆ?ಆನೆಗಳು ಕಡಿಮೆ ಆವೃತ್ತಿಯ ಇನ್‍ಫ್ರಾ ಸೌಂಡ್ ಬಳಸಿಕೊಂಡು ಸಂಭಾಷಣೆ ಮಾಡುತ್ತವೆ. ನಮ್ಮ ಕಿವಿಗೆ ಅವುಗಳ ಸಂಭಾಷಣೆ ಕೇಳುವುದಿಲ್ಲ. ನಮಗೆ ಕೇಳುವುದೇನಿದ್ದರೂ ಇಪ್ಪತ್ತರಿಂದ ಇಪ್ಪತ್ತು ಸಾವಿರ ಹರ್ಟ್ಜ್ ಒಳಗಿದ್ದರೆ ಮಾತ್ರ. ಆದರೆ, ಆನೆಗಳ ಸಂಭಾಷಣಾ ಧ್ವನಿಯು ಹದಿನಾಲ್ಕರಿಂದ ಹದಿನೆಂಟು ಹರ್ಟ್ಜ್ ಆವೃತ್ತಿಯಲ್ಲಿರುತ್ತೆ. ಈ ಆವೃತ್ತಿ ಅಥವಾ frequency-ಗೆ ಇನ್ಫ್ರಾಸೌಂಡ್ ಎನ್ನುತ್ತಾರೆ. ಇದನ್ನು ಬಳಸಿಕೊಂಡು ಹತ್ತು ಕಿಲೋಮೀಟರು ದೂರದವರೆಗೂ ಸಂಭಾಷಣೆಯನ್ನು ಮಾಡಬಲ್ಲವು ಆನೆಗಳು. ಇದರ ವಿರುದ್ಧದಂತೆ ಬಾವುಲಿಗಳು ಅಲ್ಟ್ರಾಸೌಂಡ್ ಬಳಸಿ ಸಂಭಾಷಿಸುತ್ತವೆ. ಎಂದರೆ, ಇಪ್ಪತ್ತು ಸಾವಿರ ಹರ್ಟ್ಜ್-ಅನ್ನೂ ಮೀರಿದ ಆವೃತ್ತಿಯ ಶಬ್ದ. ಇದನ್ನೂ ಕೂಡ ಮನುಷ್ಯನ ಕಿವಿಗಳು ಗ್ರಹಿಸುವುದಿಲ್ಲ. ಬಾವುಲಿಗಳು ಅಲ್ಟ್ರಾಸಾನಿಕ್ ಶಬ್ದವನ್ನು ಹೊರಹೊಮ್ಮಿಸಿದಾಗ ಅದು ಎದುರಿರುವ ವಸ್ತುಗೆ ಹೊಡೆದು ಪ್ರತಿಧ್ವನಿಸುವುದನ್ನು ಅವಲಂಬಿಸಿ ಸಂಭಾಷಣೆಯನ್ನು ಮಾಡುತ್ತವೆ!

ಬಾವುಲಿಗಳಂತೆಯೇ ಅಧಿಕ ಆವೃತ್ತಿ ಶಬ್ದವನ್ನು ಬಳಸಿಕೊಂಡು ತಿಮಿಂಗಿಲಗಳೂ ಸಹ ಸಂಭಾಷಿಸುತ್ತವೆ. ತಿಮಿಂಗಿಲಗಳು ನೂರಾರು ಕಿಲೋಮೀಟರುಗಳು ದೂರವಿರುವ ತನ್ನ ಸ್ನೇಹಿತನ ಜೊತೆಯೂ ಮಾತನಾಡಬಲ್ಲದು!ಊಟವನ್ನು ನೋಡಿದ ತಕ್ಷಣ ತನ್ನ ಗೆಳೆಯರನ್ನೆಲ್ಲಾ ಕರೆದುಕೊಂಡು ಬಂದು ಹಂಚಿಕೊಂಡು ತಿನ್ನುವುದೆಂದು ಒಳ್ಳೆಯ ಹೆಸರನ್ನು ಪಡೆದಿರುವ ಕಾಗೆಯು ಇಪ್ಪತ್ಮೂರು ಬಗೆಯ ಕರೆಗಳನ್ನು ಮಾಡಲು ಸಮರ್ಥ! ಬೇರೆ ಬೇರೆ ಹಕ್ಕಿಗಳನ್ನೂ ಸಹ ಅಣಕ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಕಾಗೆಯ ಯಾವ ಧ್ವನಿಯು ಯಾವ ಅರ್ಥವನ್ನು ನೀಡುತ್ತೆಂಬುದು ಇನ್ನೂ ಪತ್ತೆಯಾಗಬೇಕಿದೆ. ಪ್ರತಿಯೊಂದು ಹಕ್ಕಿಯೂ ಸಹ ಸಂಭೋಗ ಕಾಲದಲ್ಲಿ ವಿಶಿಷ್ಟವಾದ ಕರೆಯನ್ನು ಮಾಡುತ್ತೆ. ಇದಕ್ಕೆ mating call ಎಂದೇ ಕರೆಯುತ್ತಾರೆ. ಛಂದೋಬದ್ಧವಾಗಿ ಒಂದಾದ ಮೇಲೊಂದು ದನಿಗೂಡಿಸಿ ಕೂಗುವ ಕಾಪರ್ ಸ್ಮಿತ್ ಬಾರ್ಬೆಟ್ ಇದಕ್ಕೆ ಒಳ್ಳೆಯ ಉದಾಹರಣೆ. ಗಂಡು ಹಕ್ಕಿ ಒಂದು ಲಯ ಮತ್ತು ಶ್ರುತಿಯಲ್ಲಿ ಕೂಗಿದರೆ, ಅದೇ ಲಯ ಮತ್ತು ಶ್ರುತಿಯನ್ನು ಹೆಣ್ಣೊಂದು ಅನುಸರಿಸಿ "ಮದುವೆ"ಗೆ ತನ್ನ ಒಪ್ಪಿಗೆಯನ್ನು ಸಲ್ಲಿಸುತ್ತೆ.ಕಾಡಿನ ಒಂದು ಪ್ರದೇಶದಲ್ಲಿ ಹುಲಿಯ ಅಥವಾ ಚಿರತೆಯ ಪ್ರವೇಶವಾದರೆ ಕೋತಿಗಳು ಎಚ್ಚರಿಕೆ ಕರೆಗಳನ್ನು ಇಡೀ ಕಾಡಿಗೇ ನೀಡುತ್ತವೆ, ಇದರಿಂದ ಹಕ್ಕಿಗಳು, ಜಿಂಕೆಗಳು, ಇತರ ಕೋತಿಗಳು ಜೀವ ಉಳಿಸಿಕೊಳ್ಳಲು ಸಹಾಯವಾಗುತ್ತೆ. ಇದರ ಬಗ್ಗೆ ಕೆನೆತ್ ಆಂಡರ್ಸನ್ ಅನೇಕ ಕಡೆ ಉಲ್ಲೇಖಿಸುತ್ತಾರೆ. ಎಚ್ಚರಿಕೆ ಕರೆಯನ್ನು ಹುಲಿಗಳು ಗರ್ಜಿಸುವುದರ ಮೂಲಕ ನೀಡುತ್ತೆ. ತನ್ನ ಸಾಮ್ರಾಜ್ಯದ (territory) ಒಳಗೆ ಕಾಲಿಟ್ಟ ಪ್ರಾಣಿಯು ಹೊರ ಹೋಗಬೇಕೆಂಬುದೇ ಈ ಸಂದೇಶದ ಅರ್ಥ. ಇದು ಸಾಮಾನ್ಯವಾಗಿ ಎಲ್ಲ ಬೆಕ್ಕುಗಳೂ, ನಾಯಿಗಳೂ ಅನುಸರಿಸುವ ಕ್ರಮ.

ನಾಯಿಗಳು ಬೆಕ್ಕುಗಳಂತೂ ನಮಗೆ ಎಷ್ಟು ಹತ್ತಿರವಾಗಿದೆಯೆಂದರೆ, ನಾವು ಅದರ ಪ್ರತಿಯೊಂದು ಚಲನವಲನದಲ್ಲಿ ಅಡಗಿರುವ ಸಂಭಾಷಣೆಯನ್ನೂ ಬಲ್ಲೆವು. ನಾಯಿ ಬಾಲ ಅಲ್ಲಾಡಿಸಿದರೇನು, ಬಾಲ ಮುದುರಿದರೇನು, ಹಲ್ಲುಗಳ ಪ್ರದರ್ಶನ ಮಾಡಿದರೇನು, ಗೊರ್ ಎಂದರೇನು? ಬೆಕ್ಕು ಕಣ್ಮುಚ್ಚಿದರೇನು, ಉಶ್‍ಶ್ ಎಂದರೇನು, ಕೂದಲನ್ನು ನಿಮಿರಿಸಿದರೇನು? ಇವೆಲ್ಲವನ್ನೂ ಇಲ್ಲಿ ವಿವರಿಸುವ ಅಗತ್ಯವಿಲ್ಲ.

ಇಲ್ಲಿರುವುದು ಕೇವಲ ಕೆಲವು ಉದಾಹರಣೆಗಳಷ್ಟೆ. ವಿಶೇಷ ಸಂಭಾಷಣೆ ಮಾಡುವ ಪ್ರಾಣಿಗಳು ಇವು. ನಮ್ಮಂತೆ ಮಾತು ಬಾರದಿದ್ದರೂ ಸಂದೇಶವನ್ನು ರವಾನಿಸುವುದರಲ್ಲಿ ಯಶಸ್ವಿಯಾಗಿವೆ. ಯಾಕೆಂದರೆ ಪ್ರಾಣಿಗಳ ಒಂದು ಶಬ್ದಕ್ಕೆ ಒಂದೇ ಅರ್ಥ. ಮನುಷ್ಯರ ಕಥೆ ಹಾಗಲ್ಲ!

-ಅ
22.01.2009
11PM

Friday, January 16, 2009

ಸಸ್ಯಾಹಾರ - ೨

ಯಾವ ಯಾವ ಪ್ರಾಣಿಗಳು ಸಸ್ಯಾಹಾರಿಗಳೆಂಬ ಸತ್ಯವನ್ನು ನೆನೆಸಿಕೊಂಡೆವಷ್ಟೆ. ಈಗ ಇನ್ನೊಂದಷ್ಟು ಸಸ್ಯಾಹಾರದ ಬಗ್ಗೆ ಒಳಹೊಕ್ಕು ಪರಿಶೀಲಿಸಿ ನೋಡೋಣ.

೧. ಒಂದು ಹೆಕ್ಟೇರು ಜಮೀನಿನಲ್ಲಿ ಇಪ್ಪತ್ತೆರಡು ಸಾವಿರ ಕೆ.ಜಿ. ಆಲೂಗೆಡ್ಡೆ ಬೆಳೆಯಬಹುದಾದರೆ ಕೇವಲ ನೂರ ಎಪ್ಪತ್ತೈದು ಕೆ.ಜಿ. ಮಾಂಸವನ್ನು "ಬೆಳೆಸ"ಬಹುದು.

೨. ದೇಹ ಮತ್ತು ಮನಸ್ಸು ಆರೋಗ್ಯವಾಗಿರಬೇಕೆಂದರೆ ಆರೋಗ್ಯ ತಜ್ಞರು ತಿನ್ನಲು ಹೇಳುವುದು ಕಾರ್ಬೋಹೈಡ್ರೇಟನ್ನು. ದೇಹಕ್ಕೆ ಇಂಧನದಂತೆ ಕೆಲಸ ಮಾಡುವುದೂ ಈ ಕಾರ್ಬೋಹೈಡ್ರೇಟುಗಳೇ. ಇಂಥಾ ಕಾರ್ಬೋಹೈಡ್ರೇಟು ದೊರೆಯುವುದು ಅಧಿಕವಾಗಿ ಹಣ್ಣು, ತರಕಾರಿ, ಮತ್ತು ಧಾನ್ಯಗಳಲ್ಲಿ.

೩. ಮಾಂಸಾಹಾರ ಸೇವನೆಯಿಂದ ಆಸ್ಟಿಯೋಪೋರೋಸಿಸ್, ಮೂತ್ರಪಿಂಡ ಕಾಯಿಲೆಗಳು, ಮತ್ತು ಕೆಲವು ಬಗೆಯ ಅರ್ಬುದಗಳು ಬರುವ ಸಾಧ್ಯತೆಗಳು ಅತಿ ಹೆಚ್ಚೆಂಬುದು ಗೊತ್ತಿರುವ ಸಂಗತಿಯೇ.

೪. ಶಕ್ತಿ ಕೊಡುವ ಪ್ರೋಟೀನುಗಳು ಅಧಿಕವಾಗಿರುವುದು ಮೀನಿನಲ್ಲಾಗಲೀ, ಕೋಳಿಯಲ್ಲಾಗಲೀ ಅಲ್ಲ, ಬದಲಿಗೆ ಕಾಳುಗಳಲ್ಲಿ, ಧಾನ್ಯಗಳಲ್ಲಿ, ಹಣ್ಣುಗಳಲ್ಲಿ!

೫. ಹೃದ್ರೋಗಗಳಿಗೆ ಮುಖ್ಯಕಾರಣವು ನಮ್ಮ ಆಹಾರ ಪದ್ಧತಿ (diet). ಯಾವ ಆಹಾರದಲ್ಲಿ ಕೊಬ್ಬು ಮತ್ತು ಕೊಲೆಸ್ಟಿರಾಲ್ ಅಧಿಕವಾಗಿರುತ್ತೋ ಆ ಆಹಾರವು ಹೃದ್ರೋಗ ಪ್ರಚೋದಕವಾಗಿರುತ್ತೆ. ಮತ್ತು ಕೊಬ್ಬು ಮತ್ತು ಕೊಲೆಸ್ಟಿರಾಲ್ ಅಧಿಕವಾಗಿರುವುದು ಮಾಂಸ, ಮೊಟ್ಟೆ, ಹಾಲು ಮತ್ತು ಹಾಲಿನಿಂದ ಮಾಡಿರುವ ತಿಂಡಿಗಳಲ್ಲಿ. ಕಾಳುಗಳಲ್ಲಿ, ಧಾನ್ಯಗಳಲ್ಲಿ, ಹಣ್ಣುಗಳಲ್ಲಿ, ತರಕಾರಿಗಳಲ್ಲಿ ಕೊಲೆಸ್ಟಿರಾಲ್ ಅಂಶ ಎಳ್ಳಷ್ಟೂ ಇಲ್ಲ. ಹೃದ್ರೋಗವನ್ನು ತಡೆಗಟ್ಟಲು ಸಸ್ಯಾಹಾರ ಶ್ರೇಷ್ಠ.

೬. ಕ್ಯಾನ್ಸರ್ ರೋಗಕ್ಕೆ ಆಹಾರವೂ ಒಂದು ಕಾರಣವೆಂದು WHO ಸಂಶೋಧಿಸಿ ವರ್ಷಗಳೇ ಆದುವು. ನಾರು, ಬೀಟಾ ಕೆರೋಟೀನ್, ಜೀವಸತ್ತ್ವ (ವಿಟಮಿನ್) ಸಿ, ಜೀವಸತ್ತ್ವ ಈ - ಈ ಅಂಶಗಳುಳ್ಳ ಆಹಾರವು ಕ್ಯಾನ್ಸರ್ ವಿರೋಧಿಗಳು. ಮಾಂಸ, ಮೊಟ್ಟೆ, ಹಾಲುಗಳಲ್ಲಿ ಇವಿಷ್ಟೂ ನಾಪತ್ತೆಯಾಗಿರುವುದನ್ನು ಗಮನಿಸಬೇಕು. ಗೋಧಿ, ಅಕ್ಕಿ, ಕಾಳುಗಳು, ಹಣ್ಣುಗಳು, ಹಸಿರು ಮತ್ತು ಹಳದಿ ತರಕಾರಿಗಳಲ್ಲಿ ಈ ಅಂಶಗಳು ಅಧಿಕವಾಗಿರುತ್ತೆ.

೭. ಅಂತರ್ಜಲವನ್ನು ಉತ್ಪತ್ತಿಯಾಗುವುದಕ್ಕಿಂತ ವೇಗವಾಗಿ ಹೊರತೆಗೆಯುತ್ತಿದ್ದೇವೆ. ಪೆಟ್ರೋಲಿನಂತೆ ನೀರೂ ಕೂಡ ಖಾಲಿಯಾಗುವ ಸಂಭವವೂ ಇದೆ. ಒಂದು ಕೆ.ಜಿ. ಗೋಧಿಯನ್ನು ಬೆಳೆಯಲು ಇನ್ನೂರು ಲೀಟರು ನೀರು ಅಗತ್ಯವಿದೆ. ಆದರೆ ಒಂದು ಕೆ.ಜಿ. ಯಾವುದೇ ಬಗೆಯ ಮಾಂಸವನ್ನು "ಬೆಳೆಯಲು" ಇಪ್ಪತ್ತು ಸಾವಿರ ಲೀಟರು ನೀರಿನ ಅಗತ್ಯವಿದೆಯಷ್ಟೆ. ಒಬ್ಬ ಮಾಂಸಾಹಾರಿಯು ಸಸ್ಯಾಹಾರಿಯ ಹದಿನಾರರಷ್ಟು ಹೆಚ್ಚು ನೀರನ್ನು ಬಳಸುತ್ತಾನೆ. ಮಾಂಸವನ್ನು ಉತ್ಪತ್ತಿ ಮಾಡಲು ಸಸ್ಯಕ್ಕಿಂತ ಇಪ್ಪತ್ತರಷ್ಟು ಹೆಚ್ಚು ಜಾಗದ ಅವಶ್ಯವಿದೆ.

೮. ಮಾಂಸಾಹಾರಕ್ಕೆ ಬಳಸುವ ಪ್ರಾಣಿಗಳನ್ನು ಬೆಳೆಸುವ ಸ್ಥಳಗಳು ಕಗ್ಗತ್ತಲಾಗಿದ್ದೂ, ಕಟ್ಟಡಗಳ ಒಳಗಿದ್ದೂ, ಆ ಪ್ರಾಣಿಗಳು ಸೂರ್ಯನನ್ನು ನೋಡದೆಯೂ ಮತ್ತು ಶುಭ್ರ ಗಾಳಿಯನ್ನು ಸೇವಿಸದೇಯೂ ಇರುತ್ತವೆ.

೯. ಪ್ರಾಣಿಗಳನ್ನು ಪಂಜರದೊಳಗೆ ಹಾಕಿರುವುದೂ ಅಲ್ಲದೆ, ಆ ಪಂಜರಗಳು ಎಷ್ಟು ಚಿಕ್ಕದಾಗಿರುತ್ತವೆಂದರೆ ಯಾವ ಪ್ರಾಣಿಯೂ ಒಂದು ಹೆಜ್ಜೆ ಸಹ ಇಡಲಾಗುವುದಿಲ್ಲ. ಒಂದು ಪುಸ್ತಕವಿಡುವಷ್ಟು ಜಾಗದಲ್ಲಿ ನಾಲ್ಕು ಕೋಳಿಗಳನ್ನಿಟ್ಟಿರುವುದನ್ನು ನಾನು ಬೇಕಾದಷ್ಟು ಕಡೆ ನೋಡಿದ್ದೇನೆ.

೧೦. ವಾಹನಗಳಲ್ಲಿ ಸಾಗಿಸುವ ಪ್ರಾಣಿಗಳನ್ನು ಎಷ್ಟರ ಮಟ್ಟಿಗೆ ತುಂಬಿರುತ್ತಾರೆಂದರೆ (ಕುರಿ ದೊಂಬಿ) ಚಲಿಸುವಾಗ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಎಷ್ಟೋ ಬಾರಿ ಕೊಂಬುಗಳನ್ನು ಮುರಿದುಕೊಳ್ಳುತ್ತವೆ, ರಸ್ತೆಗಳ ದೆಸೆಯಿಂದ ಬೆನ್ನು ಮೂಳೆಗಳು ಮುರಿದು ಹೋಗಿರುತ್ತವೆ.

೧೧. ಇನ್ನು ಪ್ರಾಣಿಗಳನ್ನು ಮಾಂಸವನ್ನಾಗಿಸುವ ಮುನ್ನ ಹೇಗೆ ಕತ್ತರಿಸುತ್ತಾರೆಂಬುದನ್ನು ವಿವರಿಸಬೇಕಾದ್ದಿಲ್ಲ.

೧೨. ಡೇವ್ ಸ್ಕಾಟ್, ಮಾರ್ಟೀನಾ ನವ್ರಾಟಿಲೋವಾ, ಸ್ಟಾಂಟನ್ ಪ್ರೈಸ್, ಅನಿಲ್ ಕುಂಬ್ಳೆ - ಇವರೆಲ್ಲರೂ ಸಸ್ಯಾಹಾರಿಗಳೇ!!!

೧೩. ಸಸ್ಯಾಹಾರಿಗಳ ಆಯುಷ್ಯ ಸರಾಸರಿ ಮಾಂಸಾಹಾರಿಗಳಿಗಿಂತ ಹತ್ತು ವರ್ಷ ಹೆಚ್ಚು!

ನಾನು ಸಸ್ಯಾಹಾರಿಯೆಂದು ಹೆಮ್ಮೆ ಪಡಲು ಮತ್ತಷ್ಟು ಕಾರಣಗಳು ಸಿಕ್ಕಿತು!!

-ಅ
16.01.2009
10.30PM

Friday, January 09, 2009

ಸಸ್ಯಾಹಾರ

ನನ್ನನ್ನು ಮೇಲಿಂದ ಕೆಳಗೆ ನೋಡಿದ ಒಬ್ಬ ಹಿರಿಯರು ಹೇಳಿದರು. "ಟ್ರೆಕ್ಕಿಂಗು ಅದು ಇದು ಎಲ್ಲಾ ಮಾಡ್ಬೇಕು ಅಂದ್ರೆ ಶಕ್ತಿ ಬೇಕು, ಇದಕ್ಕೆ ನೀನು ನಾನ್-ವೆಜ್ ತಿನ್ನಬೇಕು" ಎಂದು. ಅವರ ಸ್ನೇಹಿತರು "ಉಪ್ಪು-ಹುಳಿ-ಖಾರ ತಿನ್ನದೇ ಬರೀ ಸಪ್ಪೆ ತಿಂದ್ಕೊಂಡ್ ಇದ್ರೆ ಹೇಗೆ ಶಕ್ತಿ ಬರುತ್ತೆ?" ಎಂದು ನಾನು ಮೊಸರನ್ನ ತಿನ್ನುತ್ತಿದ್ದನ್ನು ನೋಡಿ ಹಿರಿಯರ ಮಾತಿನ ತಿಂಡೆಗೆ ಒಗ್ಗರಣೆ ಹಾಕಿದರು. ನಾನು ಸುಮ್ಮನೆ ನಗುವುದಲ್ಲದೆ ಬೇರೇನೂ ಮಾಡಲಿಲ್ಲ. ಇವರುಗಳ ಬುದ್ಧಿವಾದವು ಇಲ್ಲೊಂದು ಪಟ್ಟಿಯನ್ನು ಮಾಡಲು ಪ್ರಚೋದಿಸಿತು.

--> ಭೂಗ್ರಹದ ಅತ್ಯಂತ ದೊಡ್ಡ ಗಾತ್ರದ ಪ್ರಾಣಿ - ನೀಲ ತಿಮಿಂಗಿಲ - ತಿನ್ನುವುದು ಫೈಟೋಪ್ಲಾಂಕ್ಟಾನ್ ಎಂಬ ಸಸ್ಯವನ್ನು. ಮಾಂಸಾಹಾರವು ತಿಮಿಂಗಿಲಕ್ಕೆ ದೂರ!

--> ಭೂಮಿಯ ಮೇಲೆ (ನೆಲದ ಮೇಲೆ) ಅತ್ಯಂತ ದೊಡ್ಡದಾಗಿರುವ ಪ್ರಾಣಿ - ಆನೆ - ಅಪ್ಪಟ ಸಸ್ಯಾಹಾರಿ! ಎಲ್ಲಿಂದ ಬರುತ್ತೆ ಆನೆಗೆ ಶಕ್ತಿ?

--> ಅತ್ಯಂತ ಎತ್ತರದ ಪ್ರಾಣಿ - ಜಿರಾಫೆ - ಮಾಂಸ ತಿನ್ನುವುದನ್ನು ನೋಡಲು ಸಾಧ್ಯವೇ?

--> ದೈತ್ಯ ಜೀವಿಗಳಾದ ಹಿಪ್ಪೋಪೊಟಮಸ್ ಮತ್ತು ಗೇಂಡಾಮೃಗಗಳು ಸ್ವಚ್ಛಂದವಾದ ಗಿಡಮೂಲಿಕೆಗಳನ್ನು ತಿನ್ನುವುದು.

--> ಎಲ್ಲಾ ದೇವತೆಗಳೂ ನೆಲೆಸಿರುವುವೆಂದು ಭಾರತೀಯರು ನಂಬಿರುವ ದಿವ್ಯ ಜೀವಿ ಆಕಳು ಎಂದಾದರೂ ಮಾಂಸ ತಿಂದೀತೇ? ಇದರ ಶಕ್ತಿ ಕುಂದೀತೇ?

--> ಇದುವರೆಗೂ ಈ ಗ್ರಹದಲ್ಲಿ ಜೀವಿಸಿದ್ದ ಅತ್ಯಂತ ದೊಡ್ಡ ಜೀವಿ - ಬ್ರ್ಯಾಕಿಯಾಸಾರಸ್ ಎಂಬ ಡೈನೋಸಾರ್ ಕೂಡ ಸಸ್ಯಾಹಾರಿ ಜೀವಿಯಾಗಿತ್ತು.

--> ವಿಕಾಸ ಹೊಂದಿರುವ ಮನುಷ್ಯನ ದೇಹರಚನೆಯು ಸಸ್ಯಾಹಾರಕ್ಕೆ ಸರಿಹೊಂದುವಷ್ಟು ಮಾಂಸಾಹಾರಕ್ಕೆ ಹೊಂದುವುದಿಲ್ಲವೆಂಬುದನ್ನು ಅನೇಕರು ಅರಿತಿಲ್ಲ. ಪ್ರಾಕೃತಿಕವಾಗಿ ಮನುಷ್ಯನ ಜೀರ್ಣಾಂಗಗಳು ಸಸ್ಯಾಹಾರವನ್ನು ಸುಲಭವಾಗಿ ಅರಗಿಸಿದರೆ, ಜೀವಕೋಶಗಳು ಸುಲಭವಾಗಿ ಮತ್ತು ಯಶಸ್ವಿಯಾಗಿ ಹೀರಿಕೊಳ್ಳುತ್ತವೆ. ಶಕ್ತಿ ಮತ್ತು ಸತ್ತ್ವವು ಸಸ್ಯಾಹಾರದಲ್ಲಿ ಸಿಗುವ ಹಾಗೆ ಮಾಂಸಾಹಾರದಲ್ಲಿ ಸಿಗಲು ಸಾಧ್ಯವೇ ಇಲ್ಲ.

ನಾನು ಮೇಲೆ ಹೆಸರಿಸಿದ ಪ್ರಾಣಿಗಳಂತೆ ಸಸ್ಯಾಹಾರಿಯೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ!!

-ಅ
09.01.2009
5AM

Saturday, January 03, 2009

ದುರಭ್ಯಾಸಗಳು

ಅಯ್ಯೋ, ನಮ್ಮ ದೈನಂದಿನ ದುರಭ್ಯಾಸಗಳನ್ನು ಇಲ್ಲಿ ಪಟ್ಟಿ ಮಾಡುತ್ತಾ ಕುಳಿತುಕೊಳ್ಳಲು ನಾನೇನು ಮೂರ್ಖನೇ? ಪ್ರತಿಯೊಬ್ಬರಿಗೂ ಒಂದೊಂದು ದುರಭ್ಯಾಸವಾದರೂ ಇದ್ದೇ ಇರುತ್ತೆ.

ಇಲ್ಲಿ ನಾನು ಹೇಳ ಹೊರಟಿರುವುದು ಪ್ರಯಾಣ/ ಚಾರಣ ಮಾಡುವಾಗ ಪರಿಸರಕ್ಕೆ ಹಾನಿಯುಂಟು ಮಾಡಬಲ್ಲ ಕೆಲವು ದುರಭ್ಯಾಸಗಳು, ನಮಗೆ ಗೊತ್ತಿಲ್ಲದೇನೇ ನಾವು ಬೆಳೆಸಿಕೊಂಡು ಬಿಟ್ಟಿರುತ್ತೇವೆ. ಸಾಧ್ಯವಾದಷ್ಟು ಮಟ್ಟಿಗೆ ಇದರಿಂದ ದೂರ ಉಳಿಯಲು ಪ್ರಯತ್ನಿಸೋಣ ಎಂಬ ಕರೆಯನ್ನು ಕೊಡಲಿಚ್ಛಿಸುತ್ತೇನೆ.

ಹೋದ ಕಡೆಯೆಲ್ಲಾ ತಿಂಡಿಪೋತರಾದ ನಾವು ಕುರುಕು ಮುರುಕುಗಳನ್ನು ಪೊಟ್ಟಣ ಕಟ್ಟಿಕೊಂಡು ಹೋಗುವುದು ಅಭ್ಯಾಸವಷ್ಟೆ? ಬಹುಪಾಲು ಪೊಟ್ಟಣಗಳು ಪ್ಲ್ಯಾಸ್ಟಿಕ್ಕಿನದಾಗಿರುತ್ತೆ. ಮತ್ತೆ ಈ ಪ್ಲ್ಯಾಸ್ಟಿಕ್ ಬಿಸಾಡುವುದು ಹಾನಿಕರ ಎಂಬುದನ್ನು ನಾವು ಎಲ್ಲೆಡೆ ಓದಿ ಓದಿ, ನೋಡಿ ನೋಡಿ, ಕೇಳಿ ಕೇಳಿ ಆಗಿದೆ. ಮತ್ತೆ ಅದೇ ಪುರಾಣ ಬೇಡ. ಈಗಾಗಲೇ 'ತಿಳಿದವರು' ಈ ಕೃತ್ಯವೆಸಗದಂತೆ ಎಚ್ಚರ ವಹಿಸುತ್ತಿರುವುದು ಒಳ್ಳೆಯ ಸಂಗತಿ. ಇದನ್ನು ಅರಣ್ಯ ಇಲಾಖೆಯ ಕಾರ್ಯಕರ್ತರಿಗೆ, ಬೆಟ್ಟದ ಮೇಲಿರುವ ದೇವಸ್ಥಾನದ ಭಕ್ತರಿಗೆ, ಮನರಂಜನೆಗೆಂದು ಮೃಗಾಲಯಗಳಿಗೆ ಮತ್ತು ವನ್ಯಧಾಮಗಳಿಗೆ ಹೋಗುವವರಿಗೆ, ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಟ್ಟರೆ ಈ ಪ್ಲ್ಯಾಸ್ಟಿಕ್ ದೈತ್ಯನಿಂದ ಸ್ವಲ್ಪ ಪಾರಾಗಬಹುದು.ಸರಿ, ಪ್ಲ್ಯಾಸ್ಟಿಕ್ ಪೊಟ್ಟಣಗಳನ್ನು ತ್ಯಜಿಸಿದೆವು ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ತಿಂಡಿಗಳನ್ನು ಹೇಗೆ ತೆಗೆದುಕೊಂಡು ಹೋಗುವುದು? ಸಮಸ್ಯೆಗಳನ್ನು ಗುರುತಿಸುವುದು ಸುಲಭ. ನಮ್ಮ ಸಮಸ್ಯೆಗಳಿಗೆ ನಾವೇ ಅಲ್ಲವೇ ಕಾರಣ? ಸಮಸ್ಯೆಗಳಿಗೆ ಉತ್ತರಗಳನ್ನೂ ನಾವೇ ಕಂಡುಕೊಳ್ಳಬೇಕಲ್ಲವೆ? ಹಿಂದಿನ ಕಾಲದವರ ಥರ ಎಲೆಗಳಲ್ಲಂತೂ ತಿಂಡಿಗಳನ್ನು ಕಟ್ಟಿಕೊಂಡು ಹೋಗಲು ಸಾಧ್ಯವಿಲ್ಲ. ಕಂಪೆನಿಯವರಂತೂ ಹಾಗೆ ಕಟ್ಟಿಕೊಡುವುದಿಲ್ಲ.

ಒಂದು ಉಪಾಯವೆಂದರೆ, ಆ ಪ್ಲ್ಯಾಸ್ಟಿಕ್ ಬಳಸುವುದನ್ನು ತ್ಯಜಿಸದೇ, ಕವರುಗಳನ್ನು ಎಲ್ಲೂ ಬಿಸಾಡದೆ ಹಾಗೇ ನಮ್ಮ ಬ್ಯಾಗಿನಲ್ಲೇ ಹಾಕಿಕೊಂಡು ಹಿಂದಕ್ಕೆ ತರುವುದು.
ಆಮೇಲೆ?
ಇಲ್ಲಿ ತೊಟ್ಟಿಯಲ್ಲಿ ಬಿಸಾಡುವುದು.
ಆಮೇಲೆ? ಆ ತೊಟ್ಟಿಯಲ್ಲಿ ಬಿಸಾಡಿದ ಕಸವನ್ನು "ಕಸ ಬಿಸಾಡುವ ಇಲಾಖೆಯವರು" ಏನು ಮಾಡುತ್ತಾರೆ? ಪುನಃ ನಗರದಿಂದ ದೂರಕ್ಕೆ ತೆಗೆದುಕೊಂಡು ಹೋಗಿ ಬಿಸಾಡಿ ಬರುತ್ತಾರೆ. ಕನಕಪುರ ಮುಖ್ಯರಸ್ತೆಯು ಇದಕ್ಕೆ ಬಹುದೊಡ್ಡ ನಿದರ್ಶನ. ಮೈಸೂರು ಮೃಗಾಲಯದವರು, ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದವರು ಪ್ಲ್ಯಾಸ್ಟಿಕ್ ನಿಷೇಧಿಸಿ ನಾವು ಕೊಂಡೊಯ್ವ ತಿಂಡಿಯೇನಾದರೂ ಪ್ಲ್ಯಾಸ್ಟಿಕ್ ಕವರುಗಳಲ್ಲಿ ಇದ್ದ ಪಕ್ಷದಲ್ಲಿ ಅದನ್ನು ಪೇಪರ್ ಕವರಿಗೆ ವರ್ಗಾಯಿಸಿಕೊಡುತ್ತಾರೆಂಬ ಕೆಲಸವು ಪ್ರಶಂಸನೀಯ.

ಸರಿ, ಪ್ಲ್ಯಾಸ್ಟಿಕ್ ಬಳಸದೆಯೇ ಇರುತ್ತೇವೆಂದುಕೊಂಡರೆ? ಪೇಪರಿನಲ್ಲಿ ಕಟ್ಟಿಕೊಂಡು ಹೋಗೋದೇ ತಿಂಡಿಯನ್ನು? ಪೇಪರ್ biodegradable ಅಲ್ಲವೇ? ಎಂಬುದು ಹಲವರ ಪ್ರಶ್ನೆ. ಹೌದು. ಆದರೆ ಈಗ ಬರುತ್ತಿರುವ ಬಹುತೇಕ ಪೇಪರುಗಳು ವಿಭಜನೀಯವಲ್ಲ. ಪ್ಲ್ಯಾಸ್ಟಿಕ್ ಪದರವೊಂದು ಇದ್ದೇ ಇರುತ್ತೆ. ಸಸ್ಯಮೂಲವೇ ಆದರೂ ಪೇಪರ್ರು ಸಂಪೂರ್ಣ ವಿಭಜನೆ ಹೊಂದಲು ಬಹಳ ಕಾಲ ಬೇಕಾದೀತು. ಜೊತೆಗೆ ತಿಳಿಯದೆ ಈ ಬಿಸಾಡಿದ ಪೇಪರ್ರನ್ನು ತಿನ್ನುವ ಪ್ರಾಣಿಗೆ ಇದು ಗಂಟಲಿನಲ್ಲಿ ಸಿಕ್ಕು ಹಾಕಿಕೊಂಡು ಪ್ರಾಣವನ್ನೂ ಬಿಡಬಹುದು. ಅನೇಕ ಪೇಪರ್ರುಗಳು ವರ್ಷಾನುಗಟ್ಟಲೆ ಕೊಳೆಯದೇ ಹಾಗೇ ಇರುತ್ತೆ. ಹಾಗಾಗಿ ಪೇಪರ್ರನ್ನೂ ಬಿಸಾಡುವುದು ತರವಲ್ಲ.
ಇದು ಪೇಪರ್ ಬಿಸಾಡುವ ದುರಭ್ಯಾಸವಿರುವವರಿಗೆ ಒಂದು ಸಣ್ಣ ಪಾಠವಾಯಿತಷ್ಟೆ?

ಇನ್ನು ಕೆರೆ-ನದಿ-ಝರಿ-ತೊರೆಗಳಲ್ಲಿ ಸ್ನಾನ ಮಾಡುವವರು. ನೆನಪಿರಲಿ, ನಾವು ಅಲ್ಲಿ ಕೆಲವೇ ಸಮಯ ಇದ್ದು ಸ್ನಾನ ಮಾಡುವ ನೀರು ನೂರಾರು ವನ್ಯ ಮೃಗಗಳಿಗೆ, ಹುಳು ಹುಪ್ಪಟೆಗಳಿಗೆ, ಗಿಡ ಮರಗಳಿಗೆ ಜೀವಸತ್ತ್ವವಾಗಿರುತ್ತೆ. ಈ ಸ್ನಾನಕ್ಕೆ ಸೋಪು, ಹಲ್ಲುಜ್ಜಲು ಪೇಸ್ಟು - ಬಳಸುವವರು ಸರ್ವನಾಶ ಮಾಡುವವರೇ ಸರಿ. ಅರೆಘಳಿಗೆ ನಮ್ಮ ಬಾಯಿಗೆ ಕಾಲು ಗ್ರಾಂ ಸೋಪನ್ನು ಹಾಕಿಕೊಂಡರೆ ನಮಗೆ ಹೇಗಾಗುತ್ತೆ? ಒಂದು ಗ್ರಾಂ ಕೋಲ್‍ಗೇಟನ್ನು ತಿಂದರೆ ನಮಗೇನಾಗುತ್ತೆ? ಇನ್ನು ನೀರೆಲ್ಲಾ ಕೆಮಿಕಲ್ ಮಯವಾದರೆ ವನ್ಯಜೀವಿಗಳ ಗತಿಯೇನಾಗಬೇಕು? ಸ್ನಾನ ಮಾಡುವುದು ಕೇವಲ ನಾವು ಶುಚಿಯಾಗಿರಲು ಅಲ್ಲ, ನಮ್ಮ ಪರಿಸರವನ್ನೂ ಶುಚಿಯಾಗಿಡಲು. ಅರಣ್ಯದಲ್ಲಿ ಸೋಪು ಪೇಸ್ಟು ಬಳಸಿದರೆ ಶುಚಿಯ ನಾಶವಾಗುವೆಂದು ಅರಿತುಕೊಂಡವನು ಜಾಣ.ಸರಿ, ಮುಖತೊಳೆದೋ ಸ್ನಾನ ಮಾಡೋ ಆಯಿತು. ಸೋಪನ್ನು ಬಳಸದೇ ಇದ್ದರೂ ಇನ್ನು ಕೆಲವರಿಗೆ ಡಿಯೋಡರೆಂಟ್ ಬಳಸುವ ಚಟ. ನಾನು ಒಪ್ಪಿಕೊಳ್ಳುತ್ತೇನೆ. ಈ ದುರಭ್ಯಾಸ ನನಗೂ ಇತ್ತು. ಇದರ ಬಗ್ಗೆ ನನಗೆ ಬೇಸರವಾಗುತ್ತೆ ಈಗ. ಆದರೆ ನಾನು ಈಗ ಇದು ತಪ್ಪೆಂದು ಕಲಿತಿದ್ದೇನೆ. ಶಾಲೆಯಲ್ಲಿ ಓದಿದ್ದೇವೆ ಎಲ್ಲರೂ. CFC-ಇಂದ ಓಜೋನು ಪದರದಲ್ಲಿ ರಂಧ್ರಗಳು ಉಂಟಾಗುತ್ತವೆ ಎಂದು. ಆದರೆ ಈಗ ಬರುತ್ತಿರುವ ಡಿಯೋಡರೆಂಟುಗಳು CFC-ಯಿಂದ ಮುಕ್ತವಾಗಿರುವುದು ಒಳ್ಳೆಯ ವಿಚಾರ. ಆದರೆ ಅರಣ್ಯದಲ್ಲಿ ಇದರ ಬಳಕೆ ಸಮಂಜಸವಲ್ಲ. ಮೊದಲ ಕಾರಣ, ಇದು ಬೆಂಕಿಯ ಉತ್ತೇಜಕ (inflammable). ಎರಡನೆಯದು, ಇದರ ಘಮದಿಂದ ವನ್ಯಮೃಗಗಳು "ಡಿಸ್ಟರ್ಬ್" ಆಗುವ ಸಕಲ ಸಾಧ್ಯತೆಗಳೂ ಇವೆ. ಮೂರನೆಯದು, ಸಣ್ಣ ಪುಟ್ಟ ಹುಳು ಹುಪ್ಪಟೆಗಳು ಇದರ ಸೋಂಕಿಗೆ ಜೀವ ತೆರಬೇಕಾಗುತ್ತೆ. ಚಾರಣಿಗನಾಗಿ, ಎಂಟು ವರ್ಷಕ್ಕೆ ನನ್ ಮಗ ದಂಟು ಎಂಬಂತೆ, Better late than never ಎಂಬಂತೆ ಇದನ್ನು ನಾನು ಕಲಿತಿದ್ದೇನೆ. ನನ್ನೊಡನೆ ಕಲಿಯುವವರ ಬಗ್ಗೆ ಸಂತೋಷಿಸುತ್ತೇನೆ.

ಇನ್ನು ಒಂದು ಮುಖ್ಯ ವಿಷಯಕ್ಕೆ ಬರುತ್ತೇನೆ. ಪಯಣದಲ್ಲಿ, ಅರಣ್ಯದಲ್ಲಿ ಕುಡಿಯುವವರು, ಸೇದುವವರು - ಇವರ ಬಗ್ಗೆ ನಾನು ಇಲ್ಲಿ ಬರೆಯುವುದಿಲ್ಲ. ಅದು ತಮಗಾಗಲೀ, ಪರಿಸರಕ್ಕಾಗಲೀ ಕಿಂಚಿತ್ತೂ ಒಳಿತಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಂಥವರಿಗೆ ನನ್ನ ಹೃತ್ಪೂರ್ವಕ ಧಿಕ್ಕಾರ. ಆದರೆ ಅನೇಕರು ಅರಿಯದ ಸಂಗತಿಯೊಂದಿದೆ. ಅದು ಜಗಿಯುವ ಗೋಂದು! (ಕೆಟ್ಟ ತರ್ಜುಮೆಯೆನ್ನಿಸುತ್ತೆ, ಆದರೂ ಪರವಾಗಿಲ್ಲ). Chewing Gum.ಈಗೀಗಿನ್ನೂ biodegradable chewing gum-ನ ತಯಾರಿಸುವ ಪೇಟೆಂಟುಗಳು ಹೊರಬಂದಿವೆಯಷ್ಟೆ. ನಮ್ಮಲ್ಲಿ ಸಿಗುವ ಯಾವುದೇ ಚ್ಯೂಯಿಂಗ್ ಗಮ್ಮೂ ಸಹ ಬಿಸಾಡಿದ ನಂತರ ಕೊಳೆಯುವಂಥದ್ದಲ್ಲ. ಪ್ಲ್ಯಾಸ್ಟಿಕ್ ಎಷ್ಟು ಕೆಟ್ಟದ್ದೋ ಅದರಷ್ಟೇ ಇದೂ ಕ್ರೂರಿ. ಲೊಚ ಲೊಚ ಎಂದು ಗಂಟೆಗಟ್ಟಲೆ ಜಗಿಯುತ್ತಲೇ ಇರುವುದು ದೇಹಕ್ಕೂ ಒಳ್ಳೆಯದಲ್ಲ. ಇದರಲ್ಲಿರುವ ಎಲಾಸ್ಟೋಮರುಗಳು ಮತ್ತಿತರ ಪಾಲಿಮರುಗಳು ಏನೇನು ತೊಂದರೆ ಮಾಡಬೇಕೋ ಎಲ್ಲ ತೊಂದರೆಗಳನ್ನೂ ಮಾಡಿಯೇ ತೀರುತ್ತೆ. ತೀರಿಸುತ್ತೆ! ಈ ದುರಭ್ಯಾಸವನ್ನು ನನ್ನ ಪುಣ್ಯಕ್ಕೆ ನಾನು ಬಿಟ್ಟಿದ್ದು ಹೈಸ್ಕೂಲಿನಲ್ಲಿದ್ದಾಗ. ನನ್ನ ಪರಿಚಿತರೆಲ್ಲರಿಗೂ ಇದರ ಬಗ್ಗೆ ಹೇಳುತ್ತಿರುತ್ತೇನೆ. ಈಗ ಇಲ್ಲೂ ಹೇಳಬೇಕೆನಿಸಿತು. ಸುಮ್ಮನೆ ಬಾಯಾಡಿಸಲು ಹಣ್ಣು ತಿನ್ನಬಹುದು, ಮೊಳಕೆ ಕಾಳುಗಳು ತಿನ್ನಬಹುದು, ಕ್ಯಾರೆಟ್ ತಿನ್ನಬಹುದು, ಬೇವಿನ ಸೊಪ್ಪು ತಿನ್ನಬಹುದು, ತಾಂಬೂಲವನ್ನಾದರೂ ಮೆಲ್ಲಬಹುದು! ಈ ಹಾಳು ಚ್ಯೂಯಿಂಗ್ ಗಮ್ಮು ಸಿಗರೇಟಿನೊಂದಿಗೆ ತೊಲಗಲಿ ಎಂದು ಹಾರೈಸುತ್ತೇನೆ.

-ಅ
03.01.2009
11.30PM

ಒಂದಷ್ಟು ಚಿತ್ರಗಳು..