ಕರ್ನಾಟಕ ಪ್ರವಾಸೋದ್ಯಮ ಇಲಾಖೆಯವರ ಕೈಯಿಗೆ, ಮತ್ತು ಇದರ ಬೆನ್ನೆಲುಬಿನಂತೆ ಕನ್ನಡ ಚಿತ್ರೋದ್ಯಮದವರ ಕೈಯಿಗೆ ಸಿಕ್ಕ ಯಾವ ಸ್ಥಳವು ಶುಚಿಯಾಗಿ, ಮಾಲಿನ್ಯರಹಿತವಾಗಿ, ಸಭ್ಯವಾಗಿದೆ ಎಂದು ಯೋಚಿಸುತ್ತಾ ಕುಳಿತಾಗ ಒಂದು ಜಾಗದ ಹೆಸರೂ ಗೊತ್ತಾಗುವುದಿಲ್ಲ.
೧. ಸಾತೊಡ್ಡಿ ಜಲಧಾರೆ - ಈಗ ಯಾರು ಬೇಕಾದರೂ ತಮ್ಮ ಕಾರಿನಲ್ಲೋ ಜೀಪಿನಲ್ಲೋ ಹೋಗಿ ಈ ನೀರಿಗೆ ಹೆಂಡ ಸುರಿದು, ಬಂಡೆಗಳ ಮೇಲೆ ಬಾಟಲಿಗಳನ್ನು ಒಡೆದು ಬರಬಹುದು.
೨. ಯಾಣ - 'ನಮ್ಮೂರ ಮಂದಾರ ಹೂವೆ' ಚಿತ್ರ ಬಿಡುಗಡೆಯಾಗುವವರೆಗೂ ಇಲ್ಲಿ ವನ್ಯಮೃಗಗಳಿದ್ದವು, ದಟ್ಟ ಅರಣ್ಯವಿತ್ತು, ಕಾಡಿನ ಹಾದಿಯು ದುರ್ಗಮವಾಗಿತ್ತು, ಪ್ಲಾಸ್ಟಿಕ್ ಎಂದರೇನೆಂದೇ ಈ ಕಾಡಿಗೆ ಗೊತ್ತಿರಲಿಲ್ಲ. (ಹೆಬ್ಳೀಕರರ ಆಗಂತುಕ ಚಿತ್ರದಲ್ಲಿ ಯಾಣ ತೋರಿಸಿದ್ದರಾದರೂ ಆ ಚಿತ್ರವನ್ನು ಹೆಚ್ಚು ಜನ ನೋಡಿರಲಿಕ್ಕಿಲ್ಲ.). ಈಗ ಯಾಣಕ್ಕೆ ಹೋಗಲು ಮನಸ್ಸಾಗುವುದು ಕೇವಲ "ಮಜಾ" ಮಾಡುವವರಿಗೆ ಮಾತ್ರ. ಉತ್ತರ ಕನ್ನಡ ಜಿಲ್ಲೆಯವರಲ್ಲಿ ಒಂದು ಮಾತಿದೆ. "ಸೊಕ್ಕಿದ್ದರೆ ಯಾಣಕ್ಕೆ ಹೋಗು, ರೊಕ್ಕಿದ್ದರೆ ಬನವಾಸಿಗೆ ಹೋಗು" ಅಂತ. ಇಲ್ಲಿ 'ಸೊಕ್ಕು' ಎಂದರೆ ಶಕ್ತಿ ಎಂದರ್ಥ. ಆದರೆ ಈಗ ಇದನ್ನು 'ಕೊಬ್ಬು, ದರ್ಪ' ಎಂದು ಅರ್ಥೈಸಿಕೊಳ್ಳಬಹುದು.
೩. ಮುಳ್ಳಯ್ಯನಗಿರಿ - ಕರ್ನಾಟಕದ ಅತ್ಯಂತ ಎತ್ತರದ ಶಿಖರವನ್ನು ತಲುಪಲು ಕಾರಿನಲ್ಲಿ ಕೇವಲ ಅರ್ಧ ಗಂಟೆ ಸಾಕು. ಹೀಗಾದಾಗ ಏನಾಗುತ್ತೆ? ಅನೇಕ ಅಪ್ರಯೋಜಕರ ದಾಳಿಗೆ ಗುರಿಯಾಗುತ್ತೆ ಸ್ವಚ್ಛಂದ ಪರಿಸರ.
ನನಗೆ ಇನ್ನು ಹೆಚ್ಚು ಜಾಗಗಳನ್ನು ಇಲ್ಲಿ ಹೆಸರಿಸಲು ಮನಸ್ಸಾಗುತ್ತಿಲ್ಲ. ದುಗುಡವೇನೆಂದರೆ ಇವೆಲ್ಲವನ್ನೂ ಮೀರಿ ಈಗ ಕೊಡಚಾದ್ರಿ ನಿಂತಿದೆ. ಚಾರಣದ ಹಾದಿಯಲ್ಲಿ ಅಂಗಡಿ ಸಾಲುಗಳು, ಸರ್ವನಾಶಕ್ಕೂ ಆಸ್ಪದ ಕೊಡುತ್ತಿರುವ ಅರಣ್ಯ ಇಲಾಖೆಯ ಐಬಿ, ಯಾವ ಲಾಡ್ಜಿಗೆ ಏನು ಕಮ್ಮಿ ಎನ್ನುವಂತಹ "ರೂಮುಗಳು", ಎಲ್ಲಿ ಬೇಕೆಂದರಲ್ಲಿ ಏನು ಬೇಕೆಂದರೆ ಅದನ್ನು ಬಿಸಾಡಬಹುದಾದ ಸ್ವಾತಂತ್ರ್ಯ - ಎಲ್ಲವೂ ಮೆರೆಯುತ್ತಿದೆ!! ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಬಂದವರೆಲ್ಲರೂ ಕೊಡಚಾದ್ರಿಯ ಶಿಖರದ ಮೇಲೆ ಉಳಿಯುತ್ತಾರೇನೋ ಎಂಬಷ್ಟು ಜನ ಅಲ್ಲಿ ನೆರೆದಿರುತ್ತಾರೆ. ಗಲಾಟೆ, ಕಿರುಚಾಟಕ್ಕೆ ಮಿತಿಯಿಲ್ಲ. ಇಷ್ಟರ ಮಧ್ಯೆಯೂ ಹಸಿರು ಕಾಣಿಸುತ್ತಲ್ಲಾ ಎಂಬುದು ಒಂದು ತೃಪ್ತಿಯೆಂದುಕೊಳ್ಳುವಷ್ಟರಲ್ಲೇ, ಆ ಹಸಿರಿಗೆ ಇನ್ನೆಷ್ಟು ದಿನ ಆಯುಷ್ಯವಿದೆಯೋ ಎಂಬ ಭೀತಿ ಹುಟ್ಟುತ್ತೆ.
ಒಂದು ಸುಂದರ ತಾಣವು ಹಾಳಾಗಲು ಮೊದಲ ಕಾರಣ - ಅಲ್ಲಿಗೆ ರಸ್ತೆ ಸೌಲಭ್ಯ ದೊರಕುವುದು. ಇದು ಪ್ರವಾಸೋದ್ಯಮ ಇಲಾಖೆಯವರಿಗೂ ಗೊತ್ತು, ಅರಣ್ಯ ಇಲಾಖೆಯವರಿಗೂ ಗೊತ್ತು, ಪರಿಸರ ಸಂರಕ್ಷಣೆ ಇಲಾಖೆಗೂ ಗೊತ್ತು. ನನಗೂ ಗೊತ್ತು. ನನ್ನ ಮಕ್ಕಳಿಗೂ ಗೊತ್ತು! ಆದರೂ ಹೀಗೆ ಆಗುವುದು ಏಕೆ? ಜನ ಹೆಚ್ಚು ಬಂದರೆ ದುಡ್ಡು ಹೆಚ್ಚು ಬರುತ್ತೆ ಅಲ್ಲವೆ? ಬಂದ ಜನ ಪ್ಲಾಸ್ಟಿಕ್ ಬಿಸಾಡಿದರೇನು, ಬಾಟಲಿ ಎಸೆದರೇನು? ಇದರಿಂದ ತಮಗೇನು ಆಗಬೇಕಿದೆ? ಪ್ರಾಣಿಗಳ ಹಾವಳಿಯೂ ಕಮ್ಮಿಯಾಗುತ್ತೆ! ಜನರು ಬರುವುದು ಹೆಚ್ಚಾದರೆ ಪ್ರಾಣಿಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ, ಇಲ್ಲಾ ಅಂದರೆ ಸಾಯುತ್ತವೆ. ಇದರಿಂದ ಒಳ್ಳೆಯದೇ ಆಯಿತಲ್ಲಾ... ಬಂದವರು ಕಸ ಕಡ್ಡಿಯ ನಡುವೆಯೇ ಕಾಣಸಿಗುವ ದೂರದ ಬೆಟ್ಟದ ದೃಶ್ಯವನ್ನು ನೋಡಿ ಕರ್ನಾಟಕ ಬಹಳ ಸುಂದರವಾಗಿದೆ ಎನ್ನುತ್ತಾರಲ್ಲಾ!! ಇನ್ನೂ ಹೆಚ್ಚು ಹೆಚ್ಚು ಜನರನ್ನು ಕರೆತರುತ್ತಾರಲ್ಲಾ... ಇನ್ನೂ ಹೆಚ್ಚು ಹೆಚ್ಚು ಹಣ ಹರಿದು ಬರುತ್ತಲ್ಲಾ.....
ಹೊಸ ವರ್ಷಕ್ಕೆ ಒಂದು ಸುಂದರ ಜಾಗವು ಬಲಿಯಾಗಿರುವುದನ್ನು ನೋಡಿಕೊಂಡು ಬಂದು ಮನ ನೊಂದಿದೆ. ಇನ್ನು ಎಷ್ಟು ಸ್ಥಳಗಳು ಈ ಹಾದಿ ಹಿಡಿಯುವುದೋ ಎಂಬ ಭೀತಿಯೂ ಆಗಿದೆ. ಇದಕ್ಕೆ ನಾವೇನು ಮಾಡಬಹುದು, ಹೇಗೆ ಮಾಡಬಹುದು ಎಂದು ತೋಚದಾಗಿದೆ. ನಮ್ಮ ನಿಸ್ಸಹಾಯಕತೆಯು ಇವರ ಬಂಡವಾಳವಾಗುತ್ತಿದೆಯಲ್ಲಾ ಎಂದೂ ಬೇಸರವಾಗುತ್ತಿದೆ. ಯಾಕೆಂದರೆ, "ಭಕ್ತಾದಿ"ಗಳಿಗೆ ಪರಿಸರಕ್ಕಿಂತ ಕೊಡಚಾದ್ರಿಯ ಮೇಲಿರುವ ದೇವಸ್ಥಾನವೇ ಹೆಚ್ಚು. ಮತ್ತೆ ನಮ್ಮಂಥವರಿಗಿಂತ "ಭಕ್ತಾದಿ"ಗಳ ಸಂಖ್ಯೆಯೇ ಹೆಚ್ಚು. ಭಕ್ತಾದಿಗಳ ಸಂಖ್ಯೆಗಿಂತ 'ಮೇಲಿನವರ' ದುರಾಸೆಯೇ ಹೆಚ್ಚು!!
:-( :-( :-( :-(
ಹೊಸ ವರ್ಷಕ್ಕೆ ಹೊಸ ಕ್ರಾಂತಿಯಾಗಲಿ. ಎಲ್ಲರಿಗೂ ಶುಭಾಶಯಗಳು.
-ಅ
29.12.2008
1PM

















