ಪ್ರಾಚೀನ ಈಜಿಪ್ತರು ಗುವಾಯಕಾಲ್ ಎಂಬ ದ್ರವವನ್ನು ಬಳಸಿ ಶವಗಳನ್ನು ಮಮ್ಮಿಗಳಲ್ಲಿ ಸಹಸ್ರಾರು ವರ್ಷಗಳ ಕಾಲ ಕಾಪಾಡಿದ್ದರು. ಅನೇಕ ಹಳೆಯ ಇಸ್ಲಾಮ್ ಅರಸರುಗಳು ಹೆಣಗಳನ್ನು ಊರಿಂದ ಊರಿಗೆ ಸಾಗಿಸುವಾಗ ಜೇನುತುಪ್ಪವನ್ನೂ ಬಳಸುತ್ತಿದ್ದರಂತೆ.
ಇರಲಿ.
"ಮಲಗಿಸಿದ್ದ" ಹೆಣವನ್ನು - ಕೆಲವರು ಕೂರಿಸುವುದೂ ಉಂಟು (ನನಗೆ ತಿಳಿದ ಮಟ್ಟಿಗೆ ಯಾವ ಮತದವರೂ ಹೆಣವನ್ನು ನಿಲ್ಲಿಸುವುದಿಲ್ಲ ಅನ್ನಿಸುತ್ತೆ) - ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವುದು ಮುಂದಿನ ಕೆಲಸ.
ನಾನು ಹುಟ್ಟಿ ಬೆಳೆದು ಬಂದ ಮನೆಯ "ಜಾತಿ"ಯವರ ಜನಗಳಲ್ಲಿ ಶವಸಂಸ್ಕಾರ, ನಂತರದ ಕರ್ಮಗಳು ಅನೇಕವಿದೆ. ಹೆಣವನ್ನು ಸುಡುತ್ತಾರೆಂಬ ಒಂದು ಅಂಶವನ್ನು ಇಲ್ಲಿ ತೆಗೆದುಕೊಂಡು ಸದ್ಯಕ್ಕೆ ಮಿಕ್ಕ ಆಚರಣೆಗಳನ್ನೆಲ್ಲಾ ಬದಿಗಿಡೋಣ. ಅವರವರ ನಂಬಿಕೆಯದು. ಅದನ್ನು ಆಚರಿಸಲೀ ಬಿಡಲಿ ಏನೂ ನಷ್ಟವಿಲ್ಲ. ಹೆಣವನ್ನು ಸೌದೆಯ ಮೇಲಿಟ್ಟು, ಬೆರಣಿ ಜೋಡಿಸಿ, ದಿನವೆಲ್ಲಾ ಅದರ ಮುಂದೆ ನಿಂತು, ತಲೆ ಬುರುಡೆಯು "ಫಟ್" ಎನ್ನುವವರೆಗೂ ನೋಡುತ್ತಾ ಸುಡುವುದು ಒಂದು ಬಗೆಯ ಸಂಸ್ಕಾರವಾದರೆ ನಗರವಾಸಿಗಳಿಗೆ ಅಷ್ಟೊಂದು ಸಮಯವಿಲ್ಲದೆ ವಿದ್ಯುತ್ ಸ್ಪರ್ಶದಿಂದ ನಿಮಿಷಮಾತ್ರದಲ್ಲೇ ಹೆಣವನ್ನು ಬೂದಿಗೈದು ತಲೆತೊಳೆದುಕೊಂಡುಬಿಡುತ್ತಾರೆ. ಏನೇ ಆಗಲಿ, ನಾವು ಹೋದಮೇಲೆ ಅಗ್ನಿಯ ಸಹಾಯದಿಂದ ನಮ್ಮನ್ನು ಬೂದಿಗೊಳಿಸುವುದು ಈ ಎರಡೂ ಸಂಸ್ಕಾರದ ಕೆಲಸ.

ಕೆಲವು ಜನರು ಶವದ ಪೆಟ್ಟಿಗೆಯಲ್ಲಿ ಹಾಕಿ ಹೂಳುತ್ತಾರೆ, ಇನ್ನು ಕೆಲವರು ಬಟ್ಟೆಯಲ್ಲಿ ಸುತ್ತಿ ಹೂಳುತ್ತಾರೆ, ಮತ್ತೆ ಕೆಲವರು ಬೆತ್ತಲೆ ಹೆಣವನ್ನು ಹಾಗೇ ಹೂಳುತ್ತಾರೆ - ಸಾರಾಂಶವಿಷ್ಟೆ - ಶವವನ್ನು ಮಣ್ಣಿನ ವಶ ಮಾಡುತ್ತಾರೆ. ಮೇಲೆ ಗೋರಿ ಕಲ್ಲು ಕಟ್ಟುವುದು ಒಂದು ಆಚರಣೆ, ಗಿಡ ನೆಡುವುದು ಇನ್ನೊಂದು! ಶವವನ್ನು ಹೂತು ಗಿಡ ನೆಡುವ ಆಚರಣೆ ಬಹಳ ಸಾತ್ವಿಕವೆಂದು ನನ್ನ ಅನಿಸಿಕೆ. ದೇಹದಲ್ಲಿರುವ ಸತ್ತ್ವವು ಅದರಲ್ಲೂ ರಂಜಕ (Phosphorus) ಮತ್ತು ಸಾರಜನಕ (Nitrogen) ಎರಡೂ ಗಿಡಗಳಿಗೆ ಬಹಳ ಮುಖ್ಯ. ನಾವು ಅಳಿದ ಮೇಲೆ ಗಿಡವೊಂದಕ್ಕೆ ಗೊಬ್ಬರವಾಗುವುದಕ್ಕಿಂತ ಭಾಗ್ಯ ಬೇರೇನಿದೆ!?! ಆದರೆ ಈ ಪದ್ಧತಿಯ ಸಮಸ್ಯೆಯೆಂದರೆ ಜಾಗದ ಕೊರತೆ. ಎಲ್ಲರನ್ನೂ (ಸತ್ತ ಮೇಲೆ) ಹೂಳಲು ಜಾಗವೆಲ್ಲಿದೆ? ಜೊತೆಗೆ ಹೂತ ನಂತರ ಗಿಡವನ್ನು ನೆಟ್ಟರೆ ಆ ಶವವು ಸಂಪೂರ್ಣವಾಗಿ decompose ಆಗುವವರೆಗೂ ಆ ಜಾಗದಲ್ಲಿ ಸುರಕ್ಷಿತವೇನಲ್ಲ.

ಕೆಲವು ಜನಾಂಗದವರು ಶವಗಳನ್ನು ಪುಣ್ಯನದಿಗಳಲ್ಲಿ ತೇಲಿಬಿಡುತ್ತಿದ್ದರು. ನದಿಯೆಂದರೆ ಸಾಕು, "ಪುಣ್ಯ" ನದಿಯೆನ್ನುವ ಅವಶ್ಯವಿಲ್ಲ. ಆದರೆ, ಈ ಆಚರಣೆ ಮಾಡುತ್ತಿದ್ದವರು ಕೆಲವು ನದಿಗಳನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದರು. ನಮ್ಮ ದೇಶದಲ್ಲಿ ಬಹುಮುಖ್ಯವಾಗಿ ಗಂಗೆ. ನದಿಯಲ್ಲಿ ಬೂದಿ ಕದಡುವಂತೆ (ಅಸ್ಥಿ ಸಂಚಯನ) ಶವವನ್ನೇ ತೇಲಿಬಿಡುವ ಆಚರಣೆಯನ್ನು ಸರ್ಕಾರವು ಪರಿಸರವಾದಿಗಳ ಅನೇಕ ವರ್ಷಗಳ ಹೋರಾಟದ ನಂತರ ನಿಷೇಧಿಸಿತು. ಗಂಗೆಯ ಮೊಸಲೆಗಳು ಹೆಣಗಳನ್ನು ತಿಂದು ನರಭಕ್ಷಕಗಳಾಗಿದ್ದುದೂ ಅಲ್ಲದೆ ವಿಪರೀತ aggressive ಆಗಿದ್ದವು. ಅಲ್ಲದೆ ಕುಡಿಯಲು ಬಳಸುವ ಗಂಗೆಯ ನೀರನ್ನು ಅತಿ ಸುಲಭವಾಗಿ ಮನುಷ್ಯಶವವು ಕೆಡಿಸಿಬಿಡುತ್ತಿತ್ತು. (ಈಗೇನೂ ಶುಚಿಯಾಗಿಲ್ಲ ಗಂಗಾನದಿಯ ನೀರು. ಆದರೆ something is better than nothing).
"ಝೋರೋಸ್ಟ್ರಿಯಾನರು" ಎಂಬ ಧರ್ಮದವರ (religion) ಶವಸಂಸ್ಕಾರದ ಆಚರಣೆ ಬಹಳ interesting ಆಗಿದೆ.

ನೆನ್ನೆ ಶ್ರೀಕಾಂತ್ ಜೊತೆ ಮಾತನಾಡುತ್ತಿದ್ದಾಗ ಉತ್ತರಾಂಚಲದ ಒಂದು ಅನುಭವವನ್ನು ಹೇಳಿದೆ. ಅಲ್ಲಿ ಒಂದು ಘಟ್ಟ ಪ್ರದೇಶದಲ್ಲಿ ನಾವು ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದುದನ್ನು ನೋಡಿದೆವು. ಟ್ಯಾಕ್ಸಿಯಿಂದ ಇಳಿದು ಎಂಟು ಸಾವಿರ ಅಡಿ ಕೆಳಗೆ ಬೆಂಕಿ ಪೊಟ್ಟಣದಂತೆ ಕಾಣುತ್ತಿದ್ದ ಬಸ್ಸನ್ನು ನೋಡುತ್ತಾ "ಅಯ್ಯೋ, ಛೆ!" ಎಂದುಕೊಳ್ಳುತ್ತಿದ್ದ ನಮ್ಮನ್ನು ಕರೆದ ನಮ್ಮ ಡ್ರೈವರು "ಚಲೋ ಸಾಬ್, ಆಜ್ ಏ, ಔರ್ ಕಲ್ ಹಮ್.." ಎಂದು ಸಲೀಸಾಗಿ ಹೇಳಿಬಿಟ್ಟ. ಶ್ರೀಕಾಂತ "ಇಲ್ಲಿ ಉರುಳಿ ಬೀಳುವ ಗಾಡಿಗಳು, ಹೆಣಗಳನ್ನು ಎಷ್ಟೋ ಸಲ ತೆಗೆಯುವುದೂ ಇಲ್ಲ, ಅನಾಥ ಹೆಣಗಳಾಗುತ್ತವೆ, ಅಲ್ಲವೇ?" ಎಂದು ಕೇಳಿದ. ನನಗೆ ಆ ಕ್ಷಣ ಹೌದೆನಿಸಿದರೂ ಈ ಝೋರೋಸ್ಟ್ರಿಯಾನರ ಬಗ್ಗೆ ನೆನಪಾಗದೇ ಇರಲಿಲ್ಲ. ಈ ಧರ್ಮದವರು ಹೆಣಗಳನ್ನು ಸುಡುವುದಾಗಲೀ, ಹೂಳುವುದಾಗಲೀ ಮಾಡುವುದಿಲ್ಲ. ಅವರ ನಂಬಿಕೆಯೆಂದರೆ ಸಾವು ಎಂಬುದು "ದೆವ್ವಗಳ ಆಟ". ಹಾಗಾಗಿ ಹೆಣವನ್ನು ದೂರದ ಬರಡು ಭೂಮಿಗೆ ತೆಗೆದುಕೊಂಡು ಹೋಗಿ, ಯಾರೂ ಅದರ ಹತ್ತಿರ ಸುಳಿಯದಂತಿರುವ ನಿರ್ಜನ ಜಾಗದಲ್ಲಿ ಬಿಸಾಡಿಬಿಡುತ್ತಾರೆ! ಹೆಣವು ಹದ್ದು ಗಿಡುಗಗಳಿಗೋ ನಾಯಿ ನರಿಗಳಿಗೋ ಆಹಾರವಾಗುತ್ತೆ!! ಒಂದು ಥರಾ ವಿಭಿನ್ನವಾದ ಆಚರಣೆ!!! ವಿಭಿನ್ನವಾದ "ಸಂಸ್ಕಾರ"!!!!

ಹೇಗೋ ಒಂದು, ಒಟ್ಟಿನಲ್ಲಿ ಶವಕ್ಕೊಂದು ಸಂಸ್ಕಾರ ಬೇಕು. ಬದುಕಿರುವವರ ಒಳಿತಿಗಾಗಿ, ಆರೋಗ್ಯಕ್ಕಾಗಿ!
ಆರೋಗ್ಯವೇ ಭಾಗ್ಯ.
-ಅ
26.11.2008
9PM







