Monday, December 29, 2008

ಈಗ ಸರದಿ ಕೊಡಚಾದ್ರಿಯದು
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯವರ ಕೈಯಿಗೆ, ಮತ್ತು ಇದರ ಬೆನ್ನೆಲುಬಿನಂತೆ ಕನ್ನಡ ಚಿತ್ರೋದ್ಯಮದವರ ಕೈಯಿಗೆ ಸಿಕ್ಕ ಯಾವ ಸ್ಥಳವು ಶುಚಿಯಾಗಿ, ಮಾಲಿನ್ಯರಹಿತವಾಗಿ, ಸಭ್ಯವಾಗಿದೆ ಎಂದು ಯೋಚಿಸುತ್ತಾ ಕುಳಿತಾಗ ಒಂದು ಜಾಗದ ಹೆಸರೂ ಗೊತ್ತಾಗುವುದಿಲ್ಲ.

೧. ಸಾತೊಡ್ಡಿ ಜಲಧಾರೆ - ಈಗ ಯಾರು ಬೇಕಾದರೂ ತಮ್ಮ ಕಾರಿನಲ್ಲೋ ಜೀಪಿನಲ್ಲೋ ಹೋಗಿ ಈ ನೀರಿಗೆ ಹೆಂಡ ಸುರಿದು, ಬಂಡೆಗಳ ಮೇಲೆ ಬಾಟಲಿಗಳನ್ನು ಒಡೆದು ಬರಬಹುದು.

೨. ಯಾಣ - 'ನಮ್ಮೂರ ಮಂದಾರ ಹೂವೆ' ಚಿತ್ರ ಬಿಡುಗಡೆಯಾಗುವವರೆಗೂ ಇಲ್ಲಿ ವನ್ಯಮೃಗಗಳಿದ್ದವು, ದಟ್ಟ ಅರಣ್ಯವಿತ್ತು, ಕಾಡಿನ ಹಾದಿಯು ದುರ್ಗಮವಾಗಿತ್ತು, ಪ್ಲಾಸ್ಟಿಕ್ ಎಂದರೇನೆಂದೇ ಈ ಕಾಡಿಗೆ ಗೊತ್ತಿರಲಿಲ್ಲ. (ಹೆಬ್ಳೀಕರರ ಆಗಂತುಕ ಚಿತ್ರದಲ್ಲಿ ಯಾಣ ತೋರಿಸಿದ್ದರಾದರೂ ಆ ಚಿತ್ರವನ್ನು ಹೆಚ್ಚು ಜನ ನೋಡಿರಲಿಕ್ಕಿಲ್ಲ.). ಈಗ ಯಾಣಕ್ಕೆ ಹೋಗಲು ಮನಸ್ಸಾಗುವುದು ಕೇವಲ "ಮಜಾ" ಮಾಡುವವರಿಗೆ ಮಾತ್ರ. ಉತ್ತರ ಕನ್ನಡ ಜಿಲ್ಲೆಯವರಲ್ಲಿ ಒಂದು ಮಾತಿದೆ. "ಸೊಕ್ಕಿದ್ದರೆ ಯಾಣಕ್ಕೆ ಹೋಗು, ರೊಕ್ಕಿದ್ದರೆ ಬನವಾಸಿಗೆ ಹೋಗು" ಅಂತ. ಇಲ್ಲಿ 'ಸೊಕ್ಕು' ಎಂದರೆ ಶಕ್ತಿ ಎಂದರ್ಥ. ಆದರೆ ಈಗ ಇದನ್ನು 'ಕೊಬ್ಬು, ದರ್ಪ' ಎಂದು ಅರ್ಥೈಸಿಕೊಳ್ಳಬಹುದು.

೩. ಮುಳ್ಳಯ್ಯನಗಿರಿ - ಕರ್ನಾಟಕದ ಅತ್ಯಂತ ಎತ್ತರದ ಶಿಖರವನ್ನು ತಲುಪಲು ಕಾರಿನಲ್ಲಿ ಕೇವಲ ಅರ್ಧ ಗಂಟೆ ಸಾಕು. ಹೀಗಾದಾಗ ಏನಾಗುತ್ತೆ? ಅನೇಕ ಅಪ್ರಯೋಜಕರ ದಾಳಿಗೆ ಗುರಿಯಾಗುತ್ತೆ ಸ್ವಚ್ಛಂದ ಪರಿಸರ.

ನನಗೆ ಇನ್ನು ಹೆಚ್ಚು ಜಾಗಗಳನ್ನು ಇಲ್ಲಿ ಹೆಸರಿಸಲು ಮನಸ್ಸಾಗುತ್ತಿಲ್ಲ. ದುಗುಡವೇನೆಂದರೆ ಇವೆಲ್ಲವನ್ನೂ ಮೀರಿ ಈಗ ಕೊಡಚಾದ್ರಿ ನಿಂತಿದೆ. ಚಾರಣದ ಹಾದಿಯಲ್ಲಿ ಅಂಗಡಿ ಸಾಲುಗಳು, ಸರ್ವನಾಶಕ್ಕೂ ಆಸ್ಪದ ಕೊಡುತ್ತಿರುವ ಅರಣ್ಯ ಇಲಾಖೆಯ ಐಬಿ, ಯಾವ ಲಾಡ್ಜಿಗೆ ಏನು ಕಮ್ಮಿ ಎನ್ನುವಂತಹ "ರೂಮುಗಳು", ಎಲ್ಲಿ ಬೇಕೆಂದರಲ್ಲಿ ಏನು ಬೇಕೆಂದರೆ ಅದನ್ನು ಬಿಸಾಡಬಹುದಾದ ಸ್ವಾತಂತ್ರ್ಯ - ಎಲ್ಲವೂ ಮೆರೆಯುತ್ತಿದೆ!! ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಬಂದವರೆಲ್ಲರೂ ಕೊಡಚಾದ್ರಿಯ ಶಿಖರದ ಮೇಲೆ ಉಳಿಯುತ್ತಾರೇನೋ ಎಂಬಷ್ಟು ಜನ ಅಲ್ಲಿ ನೆರೆದಿರುತ್ತಾರೆ. ಗಲಾಟೆ, ಕಿರುಚಾಟಕ್ಕೆ ಮಿತಿಯಿಲ್ಲ. ಇಷ್ಟರ ಮಧ್ಯೆಯೂ ಹಸಿರು ಕಾಣಿಸುತ್ತಲ್ಲಾ ಎಂಬುದು ಒಂದು ತೃಪ್ತಿಯೆಂದುಕೊಳ್ಳುವಷ್ಟರಲ್ಲೇ, ಆ ಹಸಿರಿಗೆ ಇನ್ನೆಷ್ಟು ದಿನ ಆಯುಷ್ಯವಿದೆಯೋ ಎಂಬ ಭೀತಿ ಹುಟ್ಟುತ್ತೆ.

(ವಾಹನಗಳ ರಾಶಿ)

ಒಂದು ಸುಂದರ ತಾಣವು ಹಾಳಾಗಲು ಮೊದಲ ಕಾರಣ - ಅಲ್ಲಿಗೆ ರಸ್ತೆ ಸೌಲಭ್ಯ ದೊರಕುವುದು. ಇದು ಪ್ರವಾಸೋದ್ಯಮ ಇಲಾಖೆಯವರಿಗೂ ಗೊತ್ತು, ಅರಣ್ಯ ಇಲಾಖೆಯವರಿಗೂ ಗೊತ್ತು, ಪರಿಸರ ಸಂರಕ್ಷಣೆ ಇಲಾಖೆಗೂ ಗೊತ್ತು. ನನಗೂ ಗೊತ್ತು. ನನ್ನ ಮಕ್ಕಳಿಗೂ ಗೊತ್ತು! ಆದರೂ ಹೀಗೆ ಆಗುವುದು ಏಕೆ? ಜನ ಹೆಚ್ಚು ಬಂದರೆ ದುಡ್ಡು ಹೆಚ್ಚು ಬರುತ್ತೆ ಅಲ್ಲವೆ? ಬಂದ ಜನ ಪ್ಲಾಸ್ಟಿಕ್ ಬಿಸಾಡಿದರೇನು, ಬಾಟಲಿ ಎಸೆದರೇನು? ಇದರಿಂದ ತಮಗೇನು ಆಗಬೇಕಿದೆ? ಪ್ರಾಣಿಗಳ ಹಾವಳಿಯೂ ಕಮ್ಮಿಯಾಗುತ್ತೆ! ಜನರು ಬರುವುದು ಹೆಚ್ಚಾದರೆ ಪ್ರಾಣಿಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ, ಇಲ್ಲಾ ಅಂದರೆ ಸಾಯುತ್ತವೆ. ಇದರಿಂದ ಒಳ್ಳೆಯದೇ ಆಯಿತಲ್ಲಾ... ಬಂದವರು ಕಸ ಕಡ್ಡಿಯ ನಡುವೆಯೇ ಕಾಣಸಿಗುವ ದೂರದ ಬೆಟ್ಟದ ದೃಶ್ಯವನ್ನು ನೋಡಿ ಕರ್ನಾಟಕ ಬಹಳ ಸುಂದರವಾಗಿದೆ ಎನ್ನುತ್ತಾರಲ್ಲಾ!! ಇನ್ನೂ ಹೆಚ್ಚು ಹೆಚ್ಚು ಜನರನ್ನು ಕರೆತರುತ್ತಾರಲ್ಲಾ... ಇನ್ನೂ ಹೆಚ್ಚು ಹೆಚ್ಚು ಹಣ ಹರಿದು ಬರುತ್ತಲ್ಲಾ.....

ಹೊಸ ವರ್ಷಕ್ಕೆ ಒಂದು ಸುಂದರ ಜಾಗವು ಬಲಿಯಾಗಿರುವುದನ್ನು ನೋಡಿಕೊಂಡು ಬಂದು ಮನ ನೊಂದಿದೆ. ಇನ್ನು ಎಷ್ಟು ಸ್ಥಳಗಳು ಈ ಹಾದಿ ಹಿಡಿಯುವುದೋ ಎಂಬ ಭೀತಿಯೂ ಆಗಿದೆ. ಇದಕ್ಕೆ ನಾವೇನು ಮಾಡಬಹುದು, ಹೇಗೆ ಮಾಡಬಹುದು ಎಂದು ತೋಚದಾಗಿದೆ. ನಮ್ಮ ನಿಸ್ಸಹಾಯಕತೆಯು ಇವರ ಬಂಡವಾಳವಾಗುತ್ತಿದೆಯಲ್ಲಾ ಎಂದೂ ಬೇಸರವಾಗುತ್ತಿದೆ. ಯಾಕೆಂದರೆ, "ಭಕ್ತಾದಿ"ಗಳಿಗೆ ಪರಿಸರಕ್ಕಿಂತ ಕೊಡಚಾದ್ರಿಯ ಮೇಲಿರುವ ದೇವಸ್ಥಾನವೇ ಹೆಚ್ಚು. ಮತ್ತೆ ನಮ್ಮಂಥವರಿಗಿಂತ "ಭಕ್ತಾದಿ"ಗಳ ಸಂಖ್ಯೆಯೇ ಹೆಚ್ಚು. ಭಕ್ತಾದಿಗಳ ಸಂಖ್ಯೆಗಿಂತ 'ಮೇಲಿನವರ' ದುರಾಸೆಯೇ ಹೆಚ್ಚು!!

:-( :-( :-( :-(

ಹೊಸ ವರ್ಷಕ್ಕೆ ಹೊಸ ಕ್ರಾಂತಿಯಾಗಲಿ. ಎಲ್ಲರಿಗೂ ಶುಭಾಶಯಗಳು.

-ಅ
29.12.2008
1PM

20 comments:

 1. ಪ್ರವಾಸಿ ತಾಣಗಳೆಲ್ಲವೂ ಈಗ ಹಾಳು ತಾಣಗಳಾಗಿವೆ. ಜೋಗ ಜಲಪಾತವನ್ನೂ ಇದಕ್ಕೆ ಸೇರಿಸಬೇಕು. ಊಟಿಯಲ್ಲಿ ಪ್ಲ್ಯಾಸ್ಟಿಕ್‌ಗೆ ನಿಷೇಧವಿದೆಯಂತೆ. ಕರ್ನಾಟಕದಲ್ಲೂ ಹಾಗೇ ಮಾಡಬಹುದಲ್ಲ?

  ReplyDelete
 2. ಹೌದು.. ಕರ್ನಾಟಕದಲ್ಲೂ, ಅದರಲ್ಲೂ ಮುಖ್ಯವಾಗಿ ಪ್ರವಾಸೀ ತಾಣಗಳಲ್ಲಿ ನಿಷೇಧಿಸಬೇಕಾಗಿದೆ.

  ReplyDelete
 3. ನನ್ನ ಪ್ರಕಾರ ಸಿನಿಮಾ ಇಂತಹ ತಾಣಗಳ ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ.ರಮ್ಯವಾಗಿ ಚಿತ್ರಿಸುವುದರೊಂದಿಗೆ ಆ ತಾಣಗಳಲ್ಲಿ ನಾಯಕ ನಾಯಕಿಯರ ಮೊಜು-ಆಟ ನಲಿದಾಟಗಳು,ಬೇಟೆಯ ರುಚಿ ತೋರಿಸುವುದು ಇವೆಲ್ಲವೂ ಮೋಜಿಗರಿಗೆ ಸಿನಿಮಾ ಮಾಧ್ಯಮದ ಮೂಲಕ ಬಹುಬೇಗ ತಲುಪುತ್ತದೆ.ಚಿತ್ರಿಕರಣಕ್ಕೆ ಇಲ್ಲಿ ಅವಕಾಶವನ್ನು ನಿರಾಕರಿಸಿದರೆ ಶೇ ಐವತ್ತು ಮಾಲಿನ್ಯ ತಪ್ಪುತ್ತದೆ.ಯಾಣಕ್ಕೆ ಮಂದಾರ ಹೂವೆ ಮಾಲಿನ್ಯ,ಕೊಡಚಾದ್ರಿಗೆ ಗಾಳಿಪಟದ ಗಲೀಜು...ಥೂ ಹೇಳಲು ಬೇಜಾರಾಗುತ್ತೆ.
  ಅಶೋಕ ಉಚ್ಚಂಗಿ.
  http://mysoremallige01.blogspot.com/

  ReplyDelete
 4. raste maadidrindaane ee jaagagalu haalagtive annodu yeshtu nija no gothilla. nanna prakaara namma janagalige viveka idre, raste idroo noo, aa sthalakke accessibility idroo nu, aa jaagagalanna haalu maadolla ... aa viveka, aa tiluvalike illa. Adanna belsokke khandita prayatna padbeku. modlu, namma adhikaarigalige ee viveka tiluvalike beku ... jotege ... ee sthalagalanna ulsbeku, belsbeku anno commitment irbeku ... adu ... banda're' ella sareehogutte!

  ReplyDelete
 5. ರಸ್ತೆ ಮಾಡೋದ್ರಿಂದಲೇ ಹೀಗೆಲ್ಲ ಆಗುತ್ತೆ ಅನ್ನೋದು ತಪ್ಪು. ಸರಿಯಾದ ನಿಯಮಗಳನ್ನು ಮಾಡಿ ಅದನ್ನು ಪ್ರತಿಯೊಬ್ಬರೂ ಪಾಲಿಸುವ ಹಾಗೆ ಮಾಡಬೇಕು. ಅದಕ್ಕಿಂತ ಮುಖ್ಯವಾಗಿ ವಿಜಯಾರವರು ಹೇಳಿರುವಂತೆ ಜನರಿಗೆ ಪರಿಸರದ ಪ್ರಜ್ನೆ ಮೂಡಿಸಬೇಕು. ಇದೆಲ್ಲ ತಿಳುವಳಿಕೆ ಇಲ್ಲದ್ದರಿಂದಲೇ ಆಗುವುದು. ತಿಳುವಳಿಕೆ ಬರೋವರೆಗು ಕಠಿಣವಾದ ನಿಯಮಗಳನ್ನು ಮಾಡಿ ಅದನ್ನ ಎಲ್ಲರೂ ಪಾಲಿಸಿವಂತೆ ಮಾಡಬೇಕು.
  ಅಮೇರಿಕದ ರಾಷ್ಟ್ರೀಯ ಉದ್ಯಾನಗಳಲ್ಲಿ accessibility ತುಂಬಾ ಚೆನ್ನಾಗಿದೆ, ಅಂಗವಿಕಲರಿಗೂ ಸೇರಿ. ಯಾಕೆಂದರೆ ಜನ ಇಂತ ಅದ್ಭುತವಾದ ನಿಸರ್ಗದ ಸೌಂದರ್ಯ ನೋದಿದಾಗಲೆ ಅವರಿಗೆ ಅದರ ಮಹತ್ವ ಗೊತ್ತಾಗುವುದು. ಇಂತ ಜಾಗಗಳು ಟೂರಿಸ್ಟ್‍ಗಳಿಂದ ತುಂಬಿದರೆ ನಮಗೆ ಅಲ್ಲಿ ಸುತ್ತಲಿನ ಚಾರಣ ಹಾದಿಗಳು, backcountry trailಗಳು ಆಪ್ತವಾಗುತ್ತವೆ. ಅಂತಹ ಒಂದು ವ್ಯವಸ್ಥೆ ಇಲ್ಲಿ ಬರದೆ ಇರುವುದಕ್ಕೆ ೨ ಮುಖ್ಯ ಕಾರಣಗಳು
  ೧. ಜನರಿಗೆ ನಿಸರ್ಗದ ಬಗ್ಗೆ ತಿಳುವಳಿಕೆ ಹಾಗು ಅದು ಎಷ್ಟು fragile ಅನ್ನೋದರ ಅರಿವು.
  ೨. Tourism departmentಗೆ ಬೇಕಾಗಿರೋದು ಬರೀ ದುಡ್ಡು. ಜನರಿಗೆ ಒಂದು ಶಿಕ್ಷಣ ಕೊಡುವ ಉದ್ದೇಶ ಅವರಲ್ಲಿಲ್ಲ.

  ReplyDelete
 6. [ಅಶೋಕ್] ಹೌದು, ಗಾಳಿಪಟ ನೋಡ್ಕೊಂಡು ಎಷ್ಟೊಂದು ಜನ ಬಂದು "ಮುಗಿಲ್ ಪೇಟೆಗೆ ಹೋಗೋದ್ ಹೇಗೆ?" ಅಂತ ಕೇಳ್ತಾ ಇರ್ತಾರೆ ಅಂತ ಅಲ್ಲಿಯವರೊಬ್ಬರು ಹೇಳಿದರು.

  ReplyDelete
 7. [ವಿಜಯಾ] ಮೊದಲು ತಿಳಿವಳಿಕೆ ನೀಡಬೇಕು, ಆಮೇಲೆ ರಸ್ತೆ ಮಾಡಬೇಕು ಎಂದರೆ ಒಪ್ಪಿಕೊಳ್ಳುತ್ತೀಯಾ? ಇಂಥಾ ಸ್ಥಳಕ್ಕೆ accessibility ಇರಬೇಕೇ ವಿನಾ ಅದು ಸುಲಭವಾದ accessನ ನೀಡಬಾರದು. ಹಾಗೆ ಮಾಡಿದರೆ ತಿಳಿವಳಿಕೆ ನೀಡುವುದು ಕಷ್ಟಕರ ಸಂಗತಿ. ಅದು impossible ಅಲ್ಲ. ತಿಳಿವಳಿಕೆ, ವಿವೇಕ ಬಂದಿದೆ ಎಂದು ಖಾತ್ರಿಯಾಗುವವರೆಗೂ easily accessible ರಸ್ತೆಗಳನ್ನು ಮಾಡಬಾರದೆಂದು ನನ್ನ ಅನಿಸಿಕೆ. ಬರೀ ರಸ್ತೆಯೊಂದೇ ಅಲ್ಲ, ಉಳಿದುಕೊಳ್ಳಲು ಐಬಿ, ಅಲ್ಲಿ ಬಾಟಲಿಗಳ ಸಪ್ಲೈ, ಬಿಸಾಡಲು ಒಂದು ಕಸದ ತೊಟ್ಟಿಯ ಕೊರತೆ - ಎಲ್ಲವೂ!!

  ReplyDelete
 8. [createam] ರಸ್ತೆಯಿಂದ ಕೊಡಚಾದ್ರಿಯಂಥ ಜಾಗಗಳು ಹೇಗೆ ಹಾಳಾಗುತ್ತೆ ಎನ್ನಲು ನನ್ನ ಬಳಿ ಒಂದಷ್ಟು ಉತ್ತರಗಳಿವೆ. ಇದು ಎಷ್ಟು ಶ್ಲಾಘನೀಯವೋ ನೀವೇ ಹೇಳಬೇಕು.

  ೧. ಕೊಡಚಾದ್ರಿಯು (ಮತ್ತು ಇದರಂಥ ಇನ್ನೂ ಹತ್ತು ಹಲವು ಶಿಖರಗಳು) ಪಶ್ಚಿಮ ಘಟ್ಟದ ಶ್ರೇಣಿಗೆ ಸೇರಿರುವಂಥದ್ದು. ಪಶ್ಚಿಮ ಘಟ್ಟವು ಕೇವಲ ಮನುಷ್ಯರ ಆಸ್ತಿಯಲ್ಲ. ಇಲ್ಲಿ ನಾನಾ ಬಗೆ ಗಿಡ ಮರಗಳಿವೆ (ಇತ್ತು). ಈ ಗಿಡ ಮರಗಳನ್ನು ಅವಲಂಬಿಸಿ ಬದುಕಲು ನೂರಾರು ಮೃಗಾದಿ ಪಕ್ಷಿಗಳಿವೆ (ಇತ್ತು). ನಾವು Endangered Species ಪಟ್ಟಿಯನ್ನು ನೋಡಿದರೆ ಬಹುತೇಕ ಜೀವಿಗಳು ಪಶ್ಚಿಮ ಘಟ್ಟಕ್ಕೆ ಅವಲಂಬಿತವಾಗಿರುವುದು ತಿಳಿದು ಬರುತ್ತೆ. ರಸ್ತೆ ಮಾಡಲು ಬಂಡೆ ಕೊರೆಯುವ, ಸಲಕರಣೆಗಳು ಮಾಡುವ ಸದ್ದು - ಇತ್ಯಾದಿಗಳಿಗೇ ಅನೇಕ ಪಕ್ಷಿಗಳು ಸತ್ತು ಹೋಗಿವೆ.

  ೨. ರಸ್ತೆ ಮಾಡುವಾಗ ಆಗುವ ಸದ್ದು ಒಂದು ತೊಂದರೆಯಾದರೆ, ರಸ್ತೆ ಮಾಡಿದ ಮೇಲೆ ಅಲ್ಲಿ ಓಡಾಡುವ ವಾಹನಗಳು ಮಾಡುವ ಸದ್ದು. ಶಬ್ದಕ್ಕೆ ಹೆದರಿ ಎಷ್ಟೊಂದು ಮೃಗಗಳು ದೂರ ಹೋಗಲು ಯತ್ನಿಸಿ, ಎಲ್ಲೆಲ್ಲೂ ದಿಕ್ಕು ಕಾಣದಂತಾಗಿ, ಕೊನೆಗೆ ಮನುಷ್ಯರು ವಾಸಿಸುವೆಡೆಗೇ ಬರುತ್ತವೆ. ಆಗ ಏನಾಗುತ್ತೆ? ಒಂದು - ಅವುಗಳ ಮನೆಯಾದ ಕಾಡಿನಲ್ಲಿ ಅವು ಖಾಲಿಯಾಗುತ್ತವೆ, ಎರಡು - ಬೀದಿಗೆ ಬಂದದ್ದರಿಂದ ಅದನ್ನು "ಪೀಡೆ" ಅಥವಾ "ಕಾಟ" ಎಂದು ಕರೆದು ಕೊಲ್ಲುತ್ತಾರೆ, ಅಥವಾ ಮೃಗಾಲಯಗಳಿಗೊಪ್ಪಿಸುತ್ತಾರೆ.

  ೩. ಇಷ್ಟಕ್ಕೂ ಕೊಡಚಾದ್ರಿಯಂತಹ ಬೆಟ್ಟಗಳಿಗೆ ರಸ್ತೆಯ ಅವಶ್ಯವಾದರೂ ಏನು? ಎಲ್ಲಿ ಅವಶ್ಯವೋ ಅಲ್ಲಿ ರಸ್ತೆಯೂ ಬೇಕು, ವಿದ್ಯುತ್ತೂ ಬೇಕು. ಒಂದು ಜೀವಿ ಬದುಕಬೇಕಾದರೆ ಮತ್ತೊಂದು ಜೀವಿ ಸಾಯಬೇಕೆಂಬುದು ನಿಯಮ. ಆದರೆ ಇಂಥಾ ಸ್ಥಳಗಳಿಗೆ ರಸ್ತೆ ಮಾಡಿ ಅನೇಕ ಜೀವಿಗಳ ನಾಶಕ್ಕೆ ಕಾರಣವಾಗಿ ಬದುಕಲೇ ಬೇಕಾದ ಅನಿವಾರ್ಯ ಯಾರಿಗೆ? ಈಗ ಸದ್ಯ ಬದುಕಬೇಕಾಗಿರುವುದು ಕೊಡಚಾದ್ರಿ.

  ೪. ಜನರಿಗೆ ನಿಸರ್ಗದ ಅರಿವು ಏಕೆ ಇಲ್ಲ? ಶಾಲೆಯಲ್ಲಿ ಕಲಿಕೆಯು ಸರಿಯಾಗಿಲ್ಲ. ನಾನೊಬ್ಬ ಶಾಲೆಯ ಮೇಷ್ಟ್ರು. ನನಗೆ ಈ environmental education ವಿಷಯವನ್ನು ಶಾಲೆಗಳಲ್ಲಿ ಹೇಗೆ ಬೋಧಿಸುತ್ತಾರೆಂದು ಚೆನ್ನಾಗಿ ತಿಳಿದಿದೆ. ಇದೊಂದು ದುರಂತ. ತಿಳಿದವರು ತಿಳಿಯದೆ ಇರುವವರಿಗೆ ಹೇಳಬಹುದು. ತಕ್ಕ ಮಟ್ಟಿಗೆ ಆ ಕಾರ್ಯವೂ ನಡೆಯುತ್ತಲಿದೆ. ಆದರೆ, ಹರ ಕೊಲ್ಲಲ್ ಪರ ಕಾಯ್ವನೆ? ಎಂಬಂತೆ ಅರಣ್ಯ ಇಲಾಖೆಯವರೇ ಪ್ರವಾಸೋದ್ಯಮ ಇಲಾಖೆಯವರೇ ಸರಕಾರವೇ ಈ ಕೃತ್ಯವೆಸಗಿದರೆ ಯಾರಿಗೆ ತಿಳಿವಳಿಕೆ ಹೇಳೋಣ? ಅವರಿಗೂ ಹೇಳೋಣ. ಪರಿಸರ ಉಳಿಯುತ್ತೆನ್ನುವುದಾದರೆ ಎಲ್ಲರಿಗೂ ಹೇಳೋಣ.. ಏನಂತೀರಿ?

  ೫. ಅಮೇರಿಕದ ವಿಷಯಕ್ಕೆ ಬರೋಣ. ಅಲ್ಲಿ accessibility ಸಂಪೂರ್ಣವಾಗಿ ಇದೆ ಎಂಬುದು ತಪ್ಪು. ಎಲ್ಲೆಲ್ಲಿಗಿದೆ? ಅಮೇಜಾನ್ ದಟ್ಟ ಅರಣ್ಯದೊಳಗೆ, ಎಲ್ಲಾ ವನ್ಯ ಮೃಗಗಳೂ ಇರುವ ಜಾಗಕ್ಕೆ ನೀವು ಹೋಗಿ ಬರಬಹುದೆ? ನಮ್ಮಲ್ಲಿ ಅರಣ್ಯ ಇಲಾಖೆಯ ಸೋ ಕಾಲ್ಡ್ "ಪರ್ಮಿಷನ್" ಇದ್ದರೆ ಎಲ್ಲಿ ಬೇಕೆಂದರೆ ಅಲ್ಲಿಗೆ ಹೋಗಬಹುದು. ಅಮೆರಿಕಾದಲ್ಲಿ ಪ್ರವಾಸೋದ್ಯಮ ಎಷ್ಟು ತಿಳಿವಳಿಕಸ್ಥರೋ ಬಹುಪಾಲು ಜನರೂ ಕೂಡ ಅಷ್ಟೇ ತಿಳಿವಳಿಕೆಯುಳ್ಳವರು. ಏಕೆ? ಒಂದು ಪಕ್ಷಿ extinct ಆಗುತ್ತಿದೆ ಎಂದು ಅಲ್ಲಿ ಪತ್ರಿಕೆಯಲ್ಲಿ ಬಂದರೆ ಪ್ರತಿಯೊಬ್ಬ ನಾಗರಿಕನೂ ಎಚ್ಚೆತ್ತುಕೊಳ್ಳುವಂತೆ, ಇಲ್ಲಿ ಕಣ್ಣೆದುರೇ ಗುಬ್ಬಿಗಳು ಸರ್ವನಾಶವಾದರೆ ಯಾರು ಕೇರ್ ಮಾಡುತ್ತಾರೆ? (ಎಷ್ಟು ಜನ?) ಯಾವ ರೀತಿ ಕೇರ್ ಮಾಡಲು ಅವಕಾಶವಿದೆ??

  ಯಾವ ಯಾವುದೋ ಅನಿವಾರ್ಯತೆಯ ಜೇಡರ ಬಲೆಯೊಳಗೆ ಸಿಲುಕಿಕೊಂಡು ಬಿಟ್ಟಿದ್ದೇವೆ ನಾವು ಎಂದೆನಿಸುವುದಿಲ್ಲವೇ? ನನಗಂತೂ ಅನ್ನಿಸುತ್ತೆ.. :-(

  ನಿಮ್ಮ ಕಮೆಂಟಿಗೆ ಧನ್ಯವಾದಗಳು.. ಚರ್ಚೆ ಮಾಡಿ ಬಹಳ ದಿನಗಳಾಗಿದ್ದವು.. ಇದಕ್ಕೆ ವಿಶೇಷವಾದ ಧನ್ಯವಾದಗಳು.... :-)

  ReplyDelete
 9. ಪರಿಸರ ಪ್ರೇಮಿಗಳೇ,

  ನಿಮ್ಮ ಲೇಖನದಲ್ಲಿರುವುದು ಈಗ ಸತ್ಯವಾಗಿದೆ. ನಾನು ನೀವು ತೋರಿಸಿರುವ ಸ್ಥಳಗಳನ್ನೆಲ್ಲಾ ನೋಡಿದ್ದೇನೆ. ಈಗೆಲ್ಲಾ ಪ್ಲಾಸ್ಟಿಕ್ ಮಯವಾಗಿದೆ. ಊಟಿ, ಮುನ್ನಾರ್ ಕೆಲವು ಪ್ರದೇಶಗಳಲ್ಲಿ[ನಾನು ಅಲ್ಲಿಗೂ ಬೇಟಿ ಕೊಟ್ಟಿದ್ದೇನೆ]ಪ್ಲಾಷ್ಟಿಕ್ ರಹಿತ ಪ್ರದೇಶ ಮಾಡಿದ್ದಾರೆ.. ಇಲ್ಲೂ ಹಾಗೆ ಮಾಡಿದರೆ ಒಳ್ಳೆಯದು ಅಂತ ನನಗನ್ನಿಸುತ್ತೆ. ನೀವೇನಂತೀರಿ....

  ReplyDelete
 10. ಅರುಣ್,
  ಪ್ರವಾಸಿ ತಾಣವಷ್ಟೇ ಅಲ್ಲ.. ನಮ್ಮ ಸುತ್ತ ಮುತ್ತಲಿನ ಪರಿಸರ ಕೂಡ ಹಾಳಾಗುತ್ತಾಯಿದೆ.

  ReplyDelete
 11. ಅರುಣ್ ,

  ಎಚ್ಚರಿಸುವ ಸಮಯೋಚಿತ ಕೊರಗು.

  ಈ ತರಹದ ವಿಶೇಷ ಪ್ರದೇಶಗಳನ್ನು ಗುರ್ತಿಸಿ, ಅವುಗಳನ್ನು ಪ್ರವಾಸೋದ್ಯಮದ ಮುಖ್ಯ ವಾಹಿನಿಯಿಂದ ದೂರವಿರಿಸುವುದು ಸರ್ಕಾರದ ಪ್ರಯತ್ನವಾಗಬೇಕು . ರಸ್ತೆಗಳನ್ನ ಮಾಡೋ ಗೋಜಿಗೆ ಹೋಗಲೇಬಾರದು.
  ಪರಿಸರ ಕಾಳಜಿ ಇರುವ ಸೇವಾ ಸಂಸ್ಥೆಗಳು ಇದನ್ನು ಪ್ರತಿಭಟಿಸಬೇಕಾಗಿದೆ. ಹೀಗೆ ಬಿಟ್ಟರೆ ಭಕ್ತರೂ ಭಂಡರೂ ಗುಡ್ಡೆ ಗುಡ್ಡೆಗಳಲ್ಲಿ ತೆವಳಿ ಹಾಳುಮಾಡಿ ಕುಲಗೆಡಿಸಿ ತಮ್ಮ ಬದುಕಿನ ಸಾರ್ಥಕತೆ ಕಂಡ್ಕೋ ಬಿಡ್ತಾರೆ!

  ಇಲ್ಲಿ ಅಮೇರಿಕಾ ಅಥ್ವಾ ಯೂರೋಪಿಯನ್ ದೇಶಗಳಿಗೆ ನಮ್ಮನ್ನ ಹೊಲಿಸಿಕೊಳ್ಳಬರದು.. ಏಕೆಂದರೆ ನಮ್ಮ ರಸ್ತೆಗಳು... , ನಮ್ಮ ವಾಹನಗಳು... , ಜನ ಜೀವನ... ಬದುಕಿನ ಪ್ರಜ್ಞೆ... ಯಾವುಗಳೂ ಹೊಲಿಸುವಂತುಹುವಲ್ಲ!

  ReplyDelete
 12. ಹೊಲಿಸಿ= ಕೃಪೆಯಿಟ್ಟು "ಹೋಲಿಸಿ" ಎಂದು ಓದಿಕೊಳ್ಳುವುದು :)

  ReplyDelete
 13. optkoteeni ... nammalli edee system e kulagettu hogide. naanu bheemeshawari ge hogiddaga alli forest dept guide ... nan kainalli idda khaali neerin bottle na 'adyak madam kai nalli itkondideera yesiri' and the kithkond yesde bitta ... "Plastic free area" antha board maatra ittu ashte.

  Ivrigella tiluvalike illa antha na? uhu ... kaalaji illa. adanna hege helkondbeko ... paramaatma...

  ivattu full u-turn naanu :-)

  raste maadde idre olledu. aa jaagakke hogokke aa manushyanige saamarthya idre avnu hogli ... aaga aa jagada bele noo gothirutte, kaalaji noo irutte. sumne sulabhavaagi access sikre ne heege .. alwa?

  ReplyDelete
 14. ಕಾಡಿನಲ್ಲಿ ರಸ್ತೆ ನಿರ್ಮಾಣದಿಂದ ಆಗುವ ಅನಾಹುತಕ್ಕೆ ನನ್ನಲ್ಲಿ ಒಂದು ಉದಾಹರಣೆಯಿದೆ.ಅಮೇಜಾನ್ ಮಳೆಕಾಡಿನ ನಡುವೆ ರಸ್ತೆಯಾಗುತ್ತಿದೆಯಂತೆ.ಇನ್ನು ೪೦ ವರ್ಷಗಳಲ್ಲಿ ಈ ಕಾಡು ನಿರ್ನಾಮವಾಗುತ್ತದೆಯೆಂದು ಸಂಶೋಧನೆಯೊಂದು ತಿಳಿಸಿದೆ.
  ನನಗೆ ತಿಳಿದ ಮಟ್ಟಿಗೆ ಕೇರಳದ ಸೈಲೆಂಟ್ ವ್ಯಾಲಿ ಪ್ರವೇಶಿಸಲು ಅನುಮತಿ ಸಿಕ್ಕುವುದು ತೀರಾಕಷ್ಟ.(ಅಸಾಧ್ಯವೇನಲ್ಲ!)
  ಅಶೋಕ ಉಚ್ಚಂಗಿ
  http://mysoremallige01.blogspot.com

  ReplyDelete
 15. [ಶಿವು] ಇಲ್ಲೂ ಬಂಡೀಪುರ, ಬನ್ನೇರುಘಟ್ಟ, ಮೈಸೂರು ಮೃಗಾಲಯ - ಇಲ್ಲಿ ಪ್ಲಾಸ್ಟಿಕ್ ನಿಷೇಧ. ಆದರೆ, ನಿಷೇಧಾಜ್ಞೆ ಹೊರಡಿಸುವುದು ಸುಲಭ. ಅದನ್ನು ಪಾಲಿಸುವುದು ಜನರಿಗೆ ಕಷ್ಟ. ಹಾಗೆ ಪಾಲಿಸದಿದ್ದವರ ವಿರುದ್ಧ ಕ್ರಮ ಕೈಗೊಳ್ಳುವುದು ಇನ್ನೂ ಕಷ್ಟ. ಯಾರಿಗೆ ತಾನೆ ಗೊತ್ತಾಗುತ್ತೆ ನಾನು ಬಿಸಾಡಿದ್ದು ಈ ಪ್ಲಾಸ್ಟಿಕ್ ಕವರ್ರು ಎಂದು - ಎಂಬ ಧೋರಣೆ ನಮ್ಮವರಲ್ಲಿ ಹೋಗಬೇಕು ಮೊದಲು.

  [ಅಂತರ್ವಾಣಿ] ನಮ್ಮ ಸುತ್ತ ಮುತ್ತಲಣ ಪರಿಸರ ಬಿಡಿ, ಕೆಟ್ಟು ಕುಲಗೆಟ್ಟು ಮಠ ಸೇರಿದೆ.

  ReplyDelete
 16. [ರಮೇಶ್] ಅಲ್ಲಾ, ನೀವ್ಯಾಕೋ ನಾಕ್ ನಾಕ್ ಸಲ ಕಮೆಂಟಿಸಿ ಡಿಲೀಟ್ ಮಾಡಿದ್ದೀರ. ಇರಲಿ ಪರವಾಗಿಲ್ಲ.

  ಪ್ರತಿಭಟನೆಯನ್ನು ಕೇವಲ ಸಂಘ ಸಂಸ್ಥೆಗಳು ಮಾಡಬೇಕೇ? ಸಾರ್ವಜನಿಕರು???

  [ವಿಜಯಾ] ನೀನು ಆ ನನ್ಮಗನಿಗೆ ನಾಲ್ಕ್ ಬೀಸ್ಬೇಕಾಗಿತ್ತು!! ಅವನಿಗೆ ಕಾಳಜಿ ಏನ್ ಬಂತು, ಕಾಮನ್ ಸೆನ್ಸೂ ಇಲ್ಲ. ಅವನಿಗೆ ಮೊದ್ಲು access ಕಿತ್ತಾಕ್‍ಬೇಕು.

  [ಅಶೋಕ್] ಹೌದು, ನೀವು ಹೇಳುತ್ತಿರುವುದು ಕಟು ಸತ್ಯ. ಅಂತೆಯೇ ನಮ್ಮ ಎವೆರೆಸ್ಟಿನ ನಾಮ್‍ಚೇ ಬಜಾರ್ ವರೆಗೂ ರಸ್ತೆ ಮಾಡುವ ದುರಾಲೋನೆ ಕೂಡ ಚೈನಾದವರಿಗೆ ಬಂದಿದೆ. ಆ ಕೆಲಸವು ಆರಂಭವಾಗಿಯೂ ಸಹ ಇದೆ.

  ReplyDelete
 17. Twice I had problem in browser cookies and once it was a typo err... :)

  If not somebody is very much influential in society nobody cares his/her plead... “Nari koogu giri muTTuttaa?” Public can make protest but should happen in crowd.. and should be likely to get media attention..
  Organizers are necessary to gather voluntaries... lot of time, work and patience it takes...

  Now tell me, can an ordinary passerby make difference?

  ReplyDelete
 18. china noru everest ge raste maadodu khandaneeya ne ... aadroo chinese food nan favourite :-)

  ReplyDelete
 19. ಹೌದು , ಒಟ್ಟಿನಲ್ಲಿ ಕ್ರಾಂತಿ ಆಗಬೇಕು.. Remembering KP!

  ReplyDelete

ಒಂದಷ್ಟು ಚಿತ್ರಗಳು..