Thursday, December 18, 2008

ಗೋಡೆಯ ರಾಜವಾರ್ತೆಯ ಮುಖ್ಯಾಂಶ: ಅಡುಗೆಯಲ್ಲಿ ಹಲ್ಲಿಯನ್ನು ಬೆರೆಸಿ ತನ್ನ ಗಂಡನನ್ನು ಕೊಂದ ಹೆಂಡತಿ!

ಇದು ಸಾಧ್ಯವೇ ಎಂದು ಪತ್ರಿಕೆಯವರೂ ಯೋಚಿಸದೆ ಪ್ರಕಟಿಸುತ್ತಾರಲ್ಲಾ ಎಂಬುದು ಬೇಸರದ ಸಂಗತಿ.

ಯಾವುದೇ ಸಂಕುಲದ ಹಲ್ಲಿಯನ್ನು ತಿಂದರೂ ಅದು ವಿಷವಲ್ಲ ಎಂಬುದು ನೆನಪಿರಲಿ. ಹಲ್ಲಿಯೇ ಏನು, ಕಿಂಗ್ ಕೋಬ್ರಾ ಕೂಡ ತಿಂದರೆ ಅದು ವಿಷವಲ್ಲ. ಹಾವಿನ ವಿಷವನ್ನೆಲ್ಲಾ ಒಂದು ಲೋಟದಲ್ಲಿ ಬಗ್ಗಿಸಿಕೊಂಡು ಶ್ರೀಧರನು ಕಾಫಿ ಹೀರುವಂತೆ ಗಟಗಟನೆ ಹೀರಿದರೂ ಏನೂ ಆಗುವುದಿಲ್ಲವೆಂಬುದು ತಿಳಿದಿರಲಿ.

ಹಲ್ಲಿಯ ಬಗ್ಗೆ ಹೀಗೇಕೆ ಮೂಢನಂಬಿಕೆ ಬಂದಿತು?

ಚೀನಾ ಥಾಯ್ಲೆಂಡ್ ದೇಶದವರು ಹಲ್ಲಿಯ ರುಚಿರುಚಿಯಾದ ತಿನಿಸುಗಳನ್ನು ಮಾಡುವುದು ನಮಗೆ ಗೊತ್ತಿಲ್ಲವೆ? ಅಷ್ಟು ದೂರ ಯಾಕೆ, ನೆಲದ ಮೇಲೆ ಥಪುಕ್ಕನೆ ಬಿದ್ದ ಹಲ್ಲಿಯನ್ನು ಅಟ್ಟಿಸಿಕೊಂಡು ಹೋಗಿ ಬೇಟೆ ಆಡಿ ಗುಳುಂ ಸ್ವಾಹ ಮಾಡುವ ಬೆಕ್ಕುಗಳನ್ನು ನಾವು ನೋಡಿಲ್ಲವೆ? ಬೆಕ್ಕುಗಳಿಗೆ ತಗುಲದ ವಿಷ ನಮಗೆ ತಗುಲೀತೇ? ಅಕಸ್ಮಾತ್ ನಮಗೆ ಗೊತ್ತಿಲ್ಲದ ಹಾಗೆ ಒಂದು ಹಲ್ಲಿಯು ಸಾರಿನ ಪಾತ್ರೆಯಲ್ಲೋ, ಗೊಜ್ಜಿನ ಪಾತ್ರೆಯಲ್ಲೋ ಬಿದ್ದಿದ್ದು, ಅಮ್ಮ ಅದನ್ನು ತಿಳಿಯದೆ ಸೌಟಿನಿಂದ ಚೆನ್ನಾಗಿ ಕಲಿಸಿ, ಬೆರೆಸಿ ಬಡಿಸಿದಾಗ ರುಚಿರುಚಿಯಾಗಿದೆಯೆಂದು ಊಟವನ್ನು ನಾವು ಸವಿದಿಲ್ಲವೆಂದು ಏನು ಗ್ಯಾರೆಂಟಿ?

ಮೂಢನಂಬಿಕೆಗಳಿಗೇನು ಕೊರತೆಯೇ? ಪಟ್ಟಿ ಮಾಡುತ್ತಾ ಹೋದರೆ ಆಂಜನೇಯನ ಬಾಲವೇ ಆದೀತು. ಹರಿಯಿಂದ ಹಲ್ಲಿಯವರೆಗೆ!!

ಏನಾದರೂ ಹೇಳಿಕೆಯನ್ನು ಕೊಟ್ಟಾಗ ಲೊಚಗುಟ್ಟುವ ಹಲ್ಲಿಯು ಶುಭ ಶಕುನದ ಸಂಕೇತ. ಈ ಒಂದು ನಂಬಿಕೆಯನ್ನು ನಾನು ಬಹಳ ಗೌರವಿಸುತ್ತೇನೆ. ಯಾಕೆಂದರೆ ಹಲ್ಲಿಯ ಬಗ್ಗೆ ನಾನು ಜನರ ಬಾಯಲ್ಲಿ ಕೇಳಿರುವ ಒಂದೇ ಒಂದು ಒಳ್ಳೆಯ ಮಾತು ಇದು. "ಅಯ್ಯೋ, ಅಸಹ್ಯ..." ಎಂಬುವವರೇ ಹೆಚ್ಚು.
ಈ ಲೊಚಗುಟ್ಟುವಿಕೆಯ ಬಗ್ಗೆ ಮುಂದುವರೆಸುವುದಕ್ಕಿಂತ ಮುಂಚೆ ಈ ಕೆಳಗಿನ ತಿಳಿವಳಿಕೆ ಅಗತ್ಯ.

ಮನೆಯಲ್ಲಿ ಕಾಣುವ ಹಲ್ಲಿಗಳಿಗೆ ಇಂಗ್ಲಿಷಿನಲ್ಲಿ Gecko ಎನ್ನುತ್ತಾರೆ. ನಮ್ಮಲ್ಲಿರುವುದು Hemidactylus frenatus ಎಂಬ ಗೆಕೋ. Lizard ಎನ್ನುವುದು ಇಡೀ ಸಂಕುಲಕ್ಕೆ ಅಥವಾ ಜಾತಿಗೆ.

ಈಗ ಮತ್ತೆ ವಿಷಯಕ್ಕೆ ಬರೋಣ.

ಗೆಕೋ ಒಂದನ್ನು ಹೊರೆತು ಉಳಿದ ಐದು ಸಾವಿರ ಬಗೆಯ ಹಲ್ಲಿಗಳೂ ಸಹ ಬುಸುಗುಟ್ಟುತ್ತವೆ. ಇದೊಂದು ಮಾತ್ರ ಲೊಚಗುಟ್ಟುವುದು. ಇವು ಆಹಾರ ತಮ್ಮ 'ರಾಜ್ಯ'ವನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತೆ. ತೀರಾ ನಾಟಕೀಯವಾಗಿ ಗಂಡು ಹಲ್ಲಿಗಳ ಯುದ್ಧ ನಡೆಯುತ್ತೆ. ಬಾಲವನ್ನು ಕಿತ್ತು ಹಾಕುವುದರಿಂದ ಹಿಡಿದು, ಕಚ್ಚಿ ಕೊಂದು ಸಾಯಿಸುವುದರವರೆಗೂ. ಬೇರೆ ಗೆಕೋಗಳ ಜೊತೆ ಆಹಾರದ ಸ್ಪರ್ಧೆಗಾಗಿ, ಮತ್ತೆ ಸಂಗಾತಿಯ ಸ್ಪರ್ಧೆಗಾಗಿ ಹೋರಾಡುತ್ತವೆ. ದಷ್ಟಪುಷ್ಟವಾಗಿರುವ ಧೈರ್ಯಶಾಲಿ ಹಲ್ಲಿಯು ಲೊಚಗುಟ್ಟಿದರೆ ಅದರರ್ಥ "ನನ್ನ ರಾಜ್ಯದಲ್ಲಿ ಆಹಾರಕ್ಕೇನೂ ಕೊರತೆಯಿಲ್ಲ, ನಾನು ಸಂಗಾತಿಯನ್ನು ಅರಸುತ್ತಿದ್ದೇನೆ. ನನ್ನೊಡನೆ ಸಂಭೋಗಿಸಲು ಇಚ್ಛಿಸುವ ಗೆಕೋ ಸುತ್ತಮುತ್ತ ಇದ್ದರೆ ನಾನು ಸಿದ್ಧ" ಎಂದು.
ಹೆಣ್ಣು ಗೆಕೋಗಳು ಲೊಚಗುಟ್ಟುವುದಿಲ್ಲ!!

ಶುಭಶಕುನದ ಶಬ್ದದ ಒಳ ಅರ್ಥ ಇದೇ.

ಇನ್ನು ಇದ್ದಕ್ಕಿದ್ದ ಹಾಗೆ ಮೈ ಮೇಲೆ ಬೀಳುವ ಹಲ್ಲಿಯು ಅನೇಕ ಶಕುನಗಳನ್ನು ಪ್ರತಿನಿಧಿಸುತ್ತವೆ - ಶುಭ, ಅಶುಭ ಎರಡೂ! ತಲೆಯ ಮೇಲೆ ಬಿದ್ದರೆ ಹಾಗೆ, ತೊಡೆಯ ಮೇಲೆ ಬಿದ್ದರೆ ಹೀಗೆ, ಕಣ್ಣಿನ ರೆಪ್ಪೆಯ ಕೂದಲಿನ ಮೇಲೆ ಬಿದ್ದರೆ ಇನ್ನೊಂದು ಬಗೆ, ಬೆನ್ನಿನ ಕೆಳಭಾಗದ ಮೇಲೆ ಬಿದ್ದರೆ ಮತ್ತೊಂದು ಬಗೆಯಾದ ಘಟನೆಗಳು ಸಂಭವಿಸುತ್ತವಂತೆ! ಅದಕ್ಕೆ ಪರಿಹಾರ ಶಾಂತಿ ಕ್ರಾಂತಿಗಳು ಬೇರೆ!! ಯಾವುದೇ ಪಾಕೆಟ್ ಕ್ಯಾಲೆಂಡರ್ ತೆಗೆದು ನೋಡಿದರೂ ಹಲ್ಲಿಗೊಂದು ಕಾಲಂ ಮೀಸಲಿರದೇ ಇರುವುದಿಲ್ಲ.ನಾವೆಲ್ಲರೂ ನೋಡಿಯೇ ಇರುತ್ತೇವೆ, ಗೋಡೆಯ ಮೇಲೆ, ಛಾವಣಿಯ ಮೇಲೆ ಸಲೀಸಾಗಿ ಓಡುತ್ತಿರುವ ಹಲ್ಲಿಗಳನ್ನು. ಹಲ್ಲಿಯ ಕಾಲುಗಳಲ್ಲಿ ವಿಶೇಷವಾದ ಪದರಗಳಿರುತ್ತವೆ. ಎಂಥಾದ್ದೇ ನೆಲವಿರಲಿ ಜಾರದೇ ನಡೆಯುವ ಸಾಮರ್ಥ್ಯ ಹಲ್ಲಿಗಳಿಗಿರುತ್ತವೆ. ಆದರೆ ಒಮ್ಮೊಮ್ಮೆ ಈ ಪದರವನ್ನೂ ಮೀರಿ ನೈಸಾಗಿರುವ ಗೋಡೆಯಿಂದಲೋ ಛಾವಣಿಯಿಂದಲೋ ಜಾರಿ ಕೆಳಗೆ ಬಿದ್ದು ಜೀವ ಉಳಿಸಿಕೊಳ್ಳಲು ತನ್ನ ಶತ್ರುಗಳ ಗಮನವನ್ನು ಬೇರೆ ಕಡೆ ಸೆಳೆಯಲು ತನ್ನ ಬಾಲವನ್ನು ಕಳಚಿ ಕಾಲಿಗೆ ಬುದ್ಧಿ ಹೇಳುತ್ತವೆ. ಬಾಲವನ್ನು ಕಳಚಿದ ಹಲ್ಲಿಗೆ ಕೆಲವು ದಿನಗಳ ನಂತರ ಹೊಸ ಬಾಲವು ಬೆಳೆದುಕೊಳ್ಳುತ್ತೆ.

ಹಲ್ಲಿಯ ಕಣ್ಣುಗಳು ಮತ್ತು ಕಿವಿಗಳು ಬಹಳ ಚುರುಕಾಗಿರುವುದರಿಂದ ಉತ್ತಮ ಬೇಟೆಗಾರ ಪ್ರಾಣಿಗಳಲ್ಲಿ ಇದೂ ಒಂದು ಎಂಬ ಖ್ಯಾತಿಗೊಳಪಟ್ಟಿದೆ.ಈ ಗೋಡೆಯ ರಾಜನ ಕಂಡರೆ ನಾವು ಅಸಹ್ಯ ಪಡಬರಾದು. ಅದರ ಮೇಲೆ ಅಪಶಕುನದ ಆರೋಪ ಹೊರೆಸ ಬಾರದು. ಅದು ವಿಷವೆಂಬ ಸುಳ್ಳು ಆಪದನೆ ಮಾಡಬಾರದು. ನಾವು ಹಲ್ಲಿಗಳಿಗೆ ಕೃತಜ್ಞರಾಗಿರಬೇಕು. ಮನೆಯಲ್ಲಿರುವ ಹುಳು ಹುಪ್ಪಟೆಗಳನ್ನು ಕೆಮಿಕಲ್ಲುಗಳಿಲ್ಲದೇ ಶುಚಿಗೊಳಿಸುವುದು ಹಲ್ಲಿಗಳು ಮಾತ್ರ.

-ಅ
18.12.2008
10.30PM

16 comments:

 1. ಪ್ರೆಸೆಂಟ್ ಸಾರ್!
  ಇಷ್ಟು ಬೇಗ ಕ್ಲಾಸ್ ಮುಗಿಸಿದರೆ ಹೇಗೆ? ಇನ್ನಷ್ಟು ಮಾಹಿತಿ ಕೊಡಿ ಮುಂದಿನ ಕ್ಲಾಸಿನಲ್ಲಿ :)

  ReplyDelete
 2. thanx sir.

  ಯಾರು ಏನಾದ್ರೂ ತಿಳಕೊಳ್ಲಿ, ಹಲ್ಲಿ ಅಂದ್ರೆ ನಂಗಿಷ್ಟ. ಎಷ್ಟೋ ಸಲ ಅದನ್ನೇ ನೋಡ್ತಾ ಸುಮಾರು ಹೊತ್ತು ಕೂತ್ಕೊಂಡಿರ್ತಿದ್ದೆ ಮೊದ್ಲು. ನಿಜವಾಗ್ಲೂ ಇಂತಹ ನಿಜ ಮಾಹಿತಿಗಳು ಜನರನ್ನ ತಲುಪಬೇಕು. ಸಿನೆಮಾಗಳಲ್ಲಂತೂ ಸುಮ್ ಸುಮ್ನೆ ಏನೇನೋ ತೋರ್ಸಿ ಪಾಪದ ಹಲ್ಲಿಗಳನ್ನ ವಿಲನ್ ಮಾಡಿಹಾಕಿದಾರೆ.

  ಅದಿರ್ಲಿ, ಬರೀ ಫಾರಿನ್ ಹಲ್ಲಿಗಳ ಚಿತ್ರನೇ ಹಾಕಿದೀರಲ್ಲ ಸಾರ್. ಮನೆ ತಮ್ಮನ ತರ ಇರುವ ಒಂದು ಸೀದಾ ಸಾದಾ ಲೋಕಲ್ ಹಲ್ಲಿ ಚಿತ್ರ ಒಂದು ಹಾಕೋದಲ್ವಾ?

  ReplyDelete
 3. ನನಗೆ ಗೊತ್ತಿದ್ದಿದ್ದು ಬೆಂಕಿ ನರಿ ಉಪಯೋಗಿಸುವ Gecko ಬಗ್ಗೆ ಮಾತ್ರ! ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.. ಇನ್ನಷ್ಟು ವಿಷಯಗಳು ಬರಲಿ...

  ReplyDelete
 4. [ಹರೀಶ] ಧನ್ಯವಾದಗಳು. ಬೆಂಕಿ ನರಿಯ ಬಗ್ಗೆ ಸ್ವಲ್ಪ ಹೇಳ್ಬಾರ್ದೇ?

  [ವಿಕಾಸ್] ಅಯ್ಯೋ, ಇಲ್ಲಾ ರೀ, ಮೊದಲ ಫೋಟೋ ಕಾರ್ಟೂನು. ಎರಡನೆಯದು ಸ್ವತಃ ನನ್ನ ಅಕ್ಕ ಅವರ ಕತ್ತರಿಗುಪ್ಪೆಯ ಮನೆಯಲ್ಲಿ ತೆಗೆದದ್ದು. ಫಾರಿನ್ ಹಲ್ಲಿಯು ಅವರ ಮನೆಗೆ ಬಂದಿತ್ತೋ ಏನೋ ಗೊತ್ತಿಲ್ಲ. ಮುಂದಿನದು, ಹಲ್ಲಿಯ ಕಾಲು. ಗೂಗಲ್ ಕೃಪೆ ಅದು. ಆದ್ರೆ ಯಾವ ದೇಶದ್ದೋ ಗೊತ್ತಿಲ್ಲ. ಕೊನೆಯ ಹಲ್ಲಿ, ಬೇಟೆ ಆಡುತ್ತಿರುವುದು, ಮತ್ತೆ ಗೂಗಲ್ ಕೃಪೆ. ಒಪ್ಪಿಕೊಳ್ಳುತ್ತೇನೆ ನಿಮ್ಮ ಮಾತನ್ನು ಕೊನೆಯ ಚಿತ್ರದ ವಿಷದಲ್ಲಿ ಮಾತ್ರ!! :-)

  ಹಲ್ಲಿಯ ಬಗೆಗಿನ ಒಳ್ಳೆಯ ಮಾತುಗಳನ್ನು ಓದಿ ಬಹಳ ಸಂತಸವಾಯಿತು, ವಿಕಾಸ್.. ಜೊತೆಗೂಡಿರುವುದಕ್ಕೆ ಧನ್ಯ.

  ಸಿನಿಮಾದವರು ಬಿಡಿ, ಪ್ರಳಯಾಂತಕರು!

  [ಅಂತರ್ವಾಣಿ] ಕ್ಲಾಸ್ ಶುರು ಆಗೋಕೆ ಮುಂಚೆಯೇ ಅಟೆಂಡೆನ್ಸ್ ಹಾಕ್ತೀರಾಪ್ಪಾ ನೀವು.

  ReplyDelete
 5. ಪರಿಸರ ಪ್ರೇಮಿ ಸಾರ್,
  ಆಹಾ ! ಹಲ್ಲಿಯ ಬಗ್ಗೆ ಎಂಥಾ ಒಳ್ಳೆಯ ಮಾಹಿತಿ... ಇದನ್ನು ನನ್ನಾಕೆಗೆ ತೋರಿಸಿದರೆ ಆಕೆ ಅದನ್ನು ಒಪ್ಪಲೇ ಇಲ್ಲವಲ್ಲ. ಏನೇ ಆಗಲಿ ನನಗೆ ಹೊಸ ವಿಚಾರ ತಿಳಿದಂತಾಯಿತು.

  ReplyDelete
 6. ಗುರುಗಳೇ, ನಾನೂ ಈ ಹಲ್ಲಿ ಲೊಚಗುಟ್ಟುವ ಶಕುನವನ್ನ ಗೌರವಿಸುತ್ತೇನೆ. :)
  ನನ್ನ ತಂಗಿಗೆ ಹಲ್ಲಿ ಅಂದರೆ ಸಖತ್ ಭಯ (ನಂಗೂನೂ...ಆದ್ರೆ ಅವಳಷ್ಟಿಲ್ಲ..) ಅದಕ್ಕೆ ನಾನು ರೇಗಿಸುತ್ತಿರುತ್ತೇನೆ...ನೀನು ಬಯಾಲಿಜಿ ತಗೊಂಡಿದ್ಯಾ...cbz ತಗೊಂಡು ಬಿ ಎಸ್ಸಿ ಮಾಡಿ, ಎಮ್ಮೆಸ್ಸಿ ನೂ ಮಾಡಿ, ಹಲ್ಲಿ ಮೇಲೆ ph.D thesis submit ಮಾಡು ಅಂತ !

  ReplyDelete
 7. hey..good article, aadre one doubt..ee halli, jirale idnella haage (raw) tindre aarogyakara alla, adoo visha aagutte anta keLid nenapu, nijaana??

  ReplyDelete
 8. [ಭವ್ಯಾ] ಇಲ್ಲ. ಆದರೆ, ಅದು ಅಲರ್ಜಿ ಇರುವವರಿಗೆ ಫುಡ್ ಪಾಯ್ಸನ್ ಆಗ್ಬೋದು ಅಷ್ಟೆ.. ನಮಗೆ ನಮ್ಮ ತಟ್ಟೆಯಲ್ಲಿ ಹಲ್ಲಿ ಬಿದ್ದಿದೆ ಎಂದು ಗೊತ್ತಾದ ಮೇಲೆ ವಾಂತಿ ಬಂದರೆ ಅದು ವಿಷದಿಂದಲ್ಲ, ಮಾನಸಿಕ ತೊಂದರೆಯಿಂದ.

  [ಲಕುಮಿ] ಒಳ್ಳೇ ಟಾಪಿಕ್ಕು. ಮಾಡೋಕೆ ಹೇಳು. ನಾನು ಹೆಲ್ಪ್ ಮಾಡ್ತೀನಿ.

  [ಶಿವು] ಹಲ್ಲಿಯ ಬಗ್ಗೆ ಪ್ರೇಮವನ್ನೂ ಬೆಳೆಸಿಕೊಳ್ಳುವಂತೆ ನಿಮ್ಮಾಕೆಗೆ ಸ್ವಲ್ಪ ಹೇಳೀಪ್ಪಾ...

  ReplyDelete
 9. ಹಲ್ಲಿ ಲೊಚಗುಡೋದು ಯಾಕೆ ಎಂದು ತಿಳಿಸಿಕೊಟ್ಟ ಅರುಣ್ ಅವರಿಗೆ ಧನ್ಯವಾದಗಳು..  [ಸೃಷ್ಟಿಸಲಹುವ ಸತ್ಯವೇ.. ಏನೇ ಆದ್ರೂ ಟಾಪಿಕ್ಕು ಇಲ್ಲೇ ಬಂದು ನಿಲ್ಲುತ್ತಲ್ಲಾ.. ಛೇ ಚೇ ಚಿಚ್ ಚಿಚ್ ಚಿಚ್!! :) ]

  ReplyDelete
 10. [ರಮೇಶ್] ಅಲ್ಲಾ, ಎಲ್ಲಿಗೆ ಬಂದು ನಿಂತಿದೆ ಎಂದು ಅರ್ಥವಾಗಲಿಲ್ಲ.. ವಿವರಿಸಿ, ಪ್ಲೀಸ್.

  ReplyDelete
 11. ಹಲ್ಲಿಯ ಬಗೆಗೆ ಒಳ್ಳೆಯ ಮಾತು ಹೇಳಿದ ನಿಮಗೆ ಧನ್ಯವಾದಗಳು.

  ReplyDelete
 12. kanchi ge hogi halli mutti bandre amele yaav halli elli bidroo dosha iralvalnthe!!!

  ReplyDelete
 13. amele ... ee sentence artha enu? ಇವು ಆಹಾರ ತಮ್ಮ 'ರಾಜ್ಯ'ವನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತೆ.?

  ReplyDelete
 14. [ವಿಜಯಾ] ಒಳ್ಳೇ ಕಂಚಿ! ಅಲ್ಲಿಗೆ ಹೋಗಿ ಚಿನ್ನದ ಹಲ್ಲಿಯನ್ನು ಮುಟ್ಟಿ ಬರಬೇಕೆಂದೇನು? ಇಲ್ಲವಾದರೂ ಎಲ್ಲಿ ಹಲ್ಲಿ ಬಿದ್ದರೂ ಹಲ್ಲಿಗೆ ತೊಂದರೆಯೇ ವಿನಾ ನಮಗೇನೂ ತೊಂದರೆಯಾಗದು. "ರಾಜ್ಯ" ಎಂದು ನಾನು ಇಲ್ಲಿ ಹೇಳಿರುವುದು ಇಂಗ್ಲೀಷಿನ territory.

  ReplyDelete
 15. ಹಾಯ್,
  ನಿಮ್ಮ ಬ್ಲಾಗ್ ತು೦ಬಾ ಇಂಟರೆಸ್ಟಿಂಗ್ ಆಗಿದೆ. ಮತ್ತೆ ಬರುವೆ..
  ನನ್ನ 'ಕನಸು'ಗಳ ಬ್ಲಾಗುಗಳಿಗೊಮ್ಮೆ ಆದಾಗ ಭೇಟಿ ಕೊಡಿ :)
  ~ಸುಷ್ಮ

  ReplyDelete

ಒಂದಷ್ಟು ಚಿತ್ರಗಳು..