Wednesday, December 03, 2008

ಉಣಿಸುವುದುಸಾಮಾನ್ಯವಾಗಿ ಮೃಗಾಲಯಗಳಿಗೆ, ಪ್ರಾಣಿ ಸಂಗ್ರಹಾಲಯಗಳಿಗೆ ಭೇಟಿ ನೀಡುವ ಅನೇಕ ವಿಕೃತ ಮನರಂಜನಾರ್ಥಿಗಳು 10 X 10 ಕೂಡ ಇಲ್ಲದ ಪಂಜರದೊಳಗಿನ ಪ್ರಾಣಿಗಳಿಗೆ ಏನಾದರೂ ಆಹಾರ ತಿನಿಸುವ ದುರಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಬನ್ನೇರುಘಟ್ಟದ ನವಿಲುಗಳು ಲೇಸ್, ರಫಲ್ಸ್, ಕುರ್‍ಕುರೇ ರುಚಿಯನ್ನೆಲ್ಲಾ ಬಲ್ಲವು. ಶೃಂಗೇರಿಯ ಮೀನುಗಳು ಈಗ ಕಡಲೆಪುರಿ ತಿನ್ನುವುದಿಲ್ಲ, ಅದಕ್ಕೆ ಮಸಾಲೆ ಬೆರೆತ ಖಾರದ ಪುರಿಯೇ ಆಗಬೇಕು. ಕಾವೇರಿ ನಿಸರ್ಗಧಾಮದ ಜಿಂಕೆಗಳು ಹುಲ್ಲು ಮೇಯುವುದಿಲ್ಲ, ಪ್ರವಾಸಿಗರು ಸೌತೇಕಾಯಿ ತಿನ್ನಿಸುತ್ತಾರೆ. ಬಂಡೀಪುರದ ಹಾದಿಯ ಕಾಡುಜಿಂಕೆಗಳಿಗೆ ಮನುಷ್ಯರೆಂದರೆ ಭಯವಿಲ್ಲ, ಚಿಪ್ಸು, ಬ್ರೆಡ್ಡು, ಹಣ್ಣು ಹಂಪಲು ಇವೆಲ್ಲಾ ಸಲೀಸಾಗಿ ಸಿಗುತ್ತೆ ರಸ್ತೆ ಬದಿಗೆ ಬಂದುಬಿಟ್ಟರೆ. ಇನ್ನೂ ವಿಶೇಷವೆಂದರೆ ಮದುಮಲೈ ವಲಯದ ಕಾಡಾನೆಗಳು ಕೂಡ ಪ್ರವಾಸಿಗರ ತಿಂಡಿ ತೀರ್ಥಗಳೆಂದರೆ ಜೊಲ್ಲು ಸುರಿಸುತ್ತವೆ.

ನಾಯಿಗಳಿಗೆ ಬ್ರೆಡ್, ಬಿಸ್ಕತ್ತು ಹಾಕುವಾಗ ಮೇಲಕ್ಕೆಸೆಯುವುದನ್ನು ನೋಡಿದ್ದೇವೆ, ಹಾಗೆ ಮಾಡಿಯೂ ಇದ್ದೇವೆ. ನಾಯಿಗಳು ಸ್ವಲ್ಪ ಸ್ನೇಹಮಯಿಯಾಗಿದ್ದರೆ ಕೈಯಿಂದ ತಿನ್ನಿಸುವುದೂ ಉಂಟು. "ಒಳ್ಳೇ ನಾಯಿಗೆ ಹಾಕಿದ ಹಾಗೆ ಬಿಸಾಕ್ದ.." ಎಂದೂ ಹೇಳುತ್ತೇವೆ. ಪಾಪ, ನಾಯಿಗೆ ಶಾಶ್ವತ ನಾಯಿಪಾಡು. ನಾಯಿಗಳಿಗೆ ಸಿಹಿ ತಿನಿಸುಗಳನ್ನು ತಿನ್ನಿಸಬಾರದೆಂಬ ಸಣ್ಣ ವಿಷಯವೂ ಅನೇಕರಿಗೆ ಗೊತ್ತಿರುವುದಿಲ್ಲ. ಇನ್ನು ಕೋತಿಗಳದೋ ಗೊತ್ತಿರುವ ವಿಷಯವೇ. ಶಿವಗಂಗೆ ನಂದಿಬೆಟ್ಟದ ಕೋತಿಗಳು ರೌಡಿ ಅಪರಾವತಾರಗಳು. ನಾವು ತಿಂಡಿ ತೆಗೆಯುವ ಮುನ್ನವೇ ನಮ್ಮ ತಿಂಡಿಯ ಚೀಲವೇ ದರೋಡೆಯಾಗುವುದರಲ್ಲಿ ಆಶ್ಚರ್ಯವಿಲ್ಲ.

ಕಾಡುಕೋತಿಗಳು ಹಾಗೆ ರೌಡಿಗಳಾಗಲು ಕಾರಣ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿ ನಿಯಮದ ಪ್ರಕಾರ ನಾಯಿ ಬೆಕ್ಕು ದನಗಳಂತಹ ಸಾಕುಪ್ರಾಣಿಗಳು ಮನುಷ್ಯನಿಗೆ ಹೊಂದುಕೊಂಡಿರುವುದರಿಂದ, ಮತ್ತು ಅವಲಂಬಿತವಾಗಿರುವುದರಿಂದ ಇವುಗಳ ಹೊರೆತು ವನ್ಯಮೃಗಗಳು ಯಾವುವೂ ಮನುಷ್ಯನಿಂದ ಆಹಾರ ಉಣಿಸಿಕೊಳ್ಳುವಂಥದ್ದಲ್ಲ. ಹುಲಿಯು ಬೇಟೆಯಾಡಿಯೇ ಆಹಾರ ಸಂಪಾದಿಸಬೇಕು. ಜಿಂಕೆಯು ಹುಲ್ಲನ್ನು ಮೇಯಬೇಕು. ಹದ್ದುಗಳು, ಕಿರುಬಗಳು "ಅನಾಥ" ಹೆಣಗಳನ್ನು ಮೆಲ್ಲಬೇಕು. ಏನೋ ದೊಡ್ಡ ಉಪಕಾರ ಮಾಡುವಂತೆ ತಪ್ಪು ತಿಳಿದವರು ಪ್ರಾಣಿಗಳಿಗೆ ಆಹಾರ ಕೊಡುವುದನ್ನು ಅಭ್ಯಸಿಸಿಕೊಂಡಿರುತ್ತಾರೆ. ಇದರಿಂದ ಆ ಪ್ರಾಣಿಗಳಿಗೂ ತೊಂದರೆ, ಕೋತಿಯು ಉಗ್ರ(ವಾ)ನರಸಿಂಹವಾಗುವ ಕಾರಣವೂ ಇದೇ.ಹಕ್ಕಿಗಳಿಗೆ ಆಹಾರ ಕೊಡುವುದು ಕೆಲವರಿಗೆ ಬಹಳ ಖುಷಿ. ಮನೆಯಲ್ಲಿ ಪಂಜರದೊಳಗೆ ಸಾಕಿಕೊಂಡಿರುವ ಹಕ್ಕಿಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಅಂಥವರ ಬಗ್ಗೆ ನನಗೆ ಬೇಸರವಿದೆ. ಆದರೆ ಸ್ವತಂತ್ರವಾಗಿ ಹಾರಾಡುತ್ತಿರುವ ಹಕ್ಕಿಗಳಿಗೆ ಆಹಾರ ಕೊಡುವವರನ್ನು ನಾನು ನೋಡಿದ್ದೇನೆ. ತಪ್ಪೇನೂ ಇಲ್ಲ. ಪಾರಿವಾಳಗಳು ಅದೆಷ್ಟೋ ಕಾಲದಿಂದ ಮನುಷ್ಯನ ಸಖ್ಯ ವಹಿಸಿದೆ. ಕಾಗೆಗಳಂತೂ ನಾಯಿಗಳಿಗಿಂತ ಹತ್ತಿರವಾಗಿಬಿಟ್ಟಿದೆ. ಮನುಷ್ಯನ ಹಳೆಯ ಮಿತ್ರ ಗುಬ್ಬಿಯು ನಾಪತ್ತೆಯಾಗಿಬಿಟ್ಟಿದೆ. ಆದರೆ ಪಕ್ಷಿಧಾಮಗಳಿಗೆ ಭೇಟಿ ನೀಡುವವರು ಇದರ ಬಗ್ಗೆ ಗಮನ ಹರಿಸಬೇಕು. ಪಾರಿವಾಳ, ಕಾಗೆಗಳಂತೆ ಬೇರೆ ಪಕ್ಷಿಗಳು ಗಟ್ಟಿಯಾಗಿರುವುದಿಲ್ಲ. ಚಿಪ್ಸು, ಪಾಪ್‍ಕಾರ್ನು ತಿಂದು ಜೀರ್ಣಿಸಿಕೊಳ್ಳಬಲ್ಲ ಶಕ್ತಿ ಅವುಗಳಿಗಿರುವುದಿಲ್ಲ. ಇನ್ನು ಕೆಲವು ದುಷ್ಕರ್ಮಿಗಳು ಪ್ಯಾಕೆಟ್ ಸಮೇತ ಕೊಕ್ಕರೆಗಳಿಗೆ ಚಿಪ್ಸನ್ನು ಹಾಕಿರುವುದನ್ನೂ ನೋಡಿದ್ದೇನೆ, ಅಂಥವರಿಗೆ ಬೈದಿದ್ದೇನೆ.

ಮನೆಯ ಮೇಲೆ ಒಂದು ದೊಡ್ಡ ಹಲಗೆಯ ಮೇಲೆ ಒಂದು ಚಪ್ಪಟ್ಟೆಯ ತಟ್ಟೆಯನ್ನಿಟ್ಟು ಅದರಲ್ಲಿ ಬ್ರೆಡ್ಡು ಚೂರನ್ನು ಉದುರಿಸಿದ್ದು, ಅನತಿ ದೂರದಲ್ಲೇ ಇನ್ನೊಂದು ಬಟ್ಟಲಿನಲ್ಲಿ ನೀರನ್ನಿಟ್ಟಿದ್ದು ಮನೆಯ ಮೇಲೇ ಒಂದು ಸಣ್ಣ ಪಕ್ಷಿಧಾಮವನ್ನು ನಿರ್ಮಿಸಬಹುದು. ಗಮನವಿರಲಿ, ಉಪ್ಪು ಬೆರೆತ ತಿಂಡಿಗಳನ್ನು ಪಕ್ಷಿಗಳ ದೇಹ ಸಹಿಸುವುದಿಲ್ಲ. ಆದರೆ ಪಕ್ಷಿಗಳು ಆಹಾರಕ್ಕೆ ಮನುಷ್ಯನ ಮೇಲೆ ಅವಲಂಬಿತವಾಗುವಂತೆ ಮಾಡುವುದು ತಪ್ಪು.


Feed the Bear - Click here for more blooper videos

-ಅ
03.12.2008
12.30AM

8 comments:

 1. ಏನ್ರಿ ಅದು ಹೆಡ್ಡಿಂಗು :) :)

  ಉಪ್ಪು ಬೆರೆತ ತಿಂಡಿಗಳನ್ನು ಪಕ್ಷಿಗಳ ದೇಹ ಸಹಿಸುವುದಿಲ್ಲ ಅಂತ ಗೊತ್ತಿರಲಿಲ್ಲ.
  thanx

  ವಿಡಿಯೋ ಮಸ್ತಾಗಿದೆ.

  ReplyDelete
 2. hi arun
  nimma blog tumba chennagide
  haage nanna blog saha nodabahudu. http://bidarakote.blogspot.com

  ReplyDelete
 3. :-D. ee karadi narabhakshaka karadi aagbitide!!!! :-)

  ReplyDelete
 4. ಹೌದು ಅರುಣ್,
  ಅವುಗಳನ್ನ ನಮ್ಮ ಮೇಲೆ ಡಿಪೆಂಡೆಂಟ್ ಮಾಡೋದು ಘೋರ ಅಪರಾಧ.. ಅವುಗಳ ಆರೋಗ್ಯಕ್ಕೂ ಒಳ್ಳೇದಲ್ಲ..

  ಬೇಕರಿಗಳ ಬಳಿ ಓಡಾಡೋ (ಅಲ್ಲಲ್ಲಾ.. ಮಲಗಿರೋ) ನಾಯಿಗಳನ್ನ ನೋಡ್ಬೇಕು.., ಒಬೆಸಿಟಿ ಬಂದು ಹಾಳಾಗೋಗಿರ್ತಾವೆ.. ಹಾಗೆಯೆ ಕೋತಿಗಳೂ ಸಹ..

  ReplyDelete
 5. [ವಿಕಾಸ್] ಯಾಕಪ್ಪಾ, ಏನಾಗಿದೆ ಹೆಡ್ಡಿಂಗ್‍ಗೆ?

  [ಪಾಳ್ಳೆಗಾರ] ಥ್ಯಾಂಕ್ಸ್.

  [ಭವ್ಯಾ] ಹೆ ಹ್ಹೆ, ಇರಬಹುದು...

  [ರಮೇಶ್] ಹೌದು ನೋಡಿ.

  ReplyDelete
 6. slang headingu :)
  Unsodu andre bere artha ide saar paDDe huDugaralli :)

  ReplyDelete
 7. ಕರ್ಮ ಕರ್ಮ.. ನೀವು ಕ್ಷಿತಿಜದೆಡೆಯಿಂದ ಮೋಟುಗೋಡೆಯೆಡೆಗೆ ಹೋಗುತ್ತಿದ್ದೀರಿ..

  ReplyDelete
 8. ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ ತಾವೇನೋ ಉತ್ತಮ ಕಾರ್ಯ ಮಾಡುತ್ತೀವೆಂಬ ಭ್ರಮೆಯಲ್ಲಿರುವವರು ನಿಮ್ಮ ಲೇಖನವನ್ನೊಮ್ಮೆ ಓದಲೇ ಬೇಕು.

  ReplyDelete

ಒಂದಷ್ಟು ಚಿತ್ರಗಳು..