Thursday, October 30, 2008

ಬಣ್ಣ ಬದಲಿಸುವ..."ಗೋಸುಂಬೆಯಂತೆ ಹಿನ್ನೆಲೆಗೆ ತಕ್ಕಂತೆ ಬಣ್ಣ ಬದಲಿಸುವವನು" ಎಂದು ನಾವು ಹೇಳುತ್ತೇವಲ್ಲವೇ?

ಗೋಸುಂಬೆ ನಿಜವಾಗಲೂ ತನ್ನ ಹಿನ್ನೆಲೆಯ ಬಣ್ಣಕ್ಕೆ ತಕ್ಕ ಹಾಗೆ ಬಣ್ಣ ಬದಲಿಸುವ ಸಾಮರ್ಥ್ಯ ಉಳ್ಳದ್ದೇ? ಹೌದಾದರೆ, ಅದಕ್ಕೆ ಹೇಗೆ ಗೊತ್ತಾಗುತ್ತೆ ಯಾವ ಬಣ್ಣದ ಎಲೆಯ ಮೇಲೋ, ಹೂ ಮೇಲೋ, ಬಂಡೆಯ ಮೇಲೋ ತಾನು ಇರುವುದು? ಅದು ಹೇಗೋ ಗೊತ್ತಾದರೂ ಮೈ ಬಣ್ಣವನ್ನೇ ಬದಲಿಸುವುದಾದರೂ ಹೇಗೆ? ಮತ್ತು ಯಾಕೆ?ಎಷ್ಟೊಂದು ಪ್ರಶ್ನೆಗಳು ಕೇವಲ ಒಂದು ಸರಿಸೃಪ (reptile) ನಮ್ಮಲ್ಲಿ ಸೃಷ್ಟಿಸಿದೆ!ಉತ್ತರಗಳನ್ನು ಕಂಡುಕೊಳ್ಳೋಣ. Reverse orderನಲ್ಲಿ.

೧. ಗೋಸುಂಬೆಗಳು ಬಹಳ ನಿಧಾನವಾಗಿ ಚಲಿಸುವ ಸರೀಸೃಪಗಳು. ಬೇರೆ ಹಲ್ಲಿಯಂತೆ ವೇಗವಾಗಿ ಬಂಡೆಯೊಳಕ್ಕೆ ನುಸುಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾವುಗಳು, ಹದ್ದುಗಳು, ನವಿಲುಗಳು, ದೊಡ್ಡ ಬೆಕ್ಕುಗಳು, ಗೂಬೆಗಳು ಸದಾ ಹೊಂಚು ಹಾಕುತ್ತಲೇ ಇರುತ್ತವೆ. ಇವುಗಳ ಕೈಗೆ ಸಲೀಸಾಗಿ ಸಿಲುಕಿ ಆಹಾರವಾಗಬಲ್ಲುದು ಗೋಸುಂಬೆಗಳು - ಬಣ್ಣ ಬದಲಿಸದಿದ್ದರೆ! ಎಲೆಯ ಮರೆಯಲ್ಲಿ ಹಸಿರು ಬಣ್ಣ, ಒಣಗಿದ ಎಲೆಗಳ ನಡುವೆ ಕಂದು ಬಣ್ಣ, ಹೂಗಳ ಮಧ್ಯೆ ನೀಲಿ ಹೀಗೆ ವಿವಿಧ ವರ್ಣಗಳನ್ನು ಬಟ್ಟೆ ಧರಿಸಿದ ಹಾಗೆ ಧರಿಸುವುದರಿಂದ ಮರೆಮಾಚಬಹುದು. ಇದಕ್ಕೆ ಇಂಗ್ಲಿಷಿನಲ್ಲಿ camouflage ಎಂದು ಕರೆಯುತ್ತೇವೆ. ಗೋಸುಂಬೆಗಳು ಈ ಮರೆಮಾಚುವ ವಿದ್ಯಾಪಾರಂಗತವಾದರೂ ಇವುಗಳ ಸಂಖ್ಯೆ ತೀರ ಕಡಿಮೆಯಾಗುತ್ತಿದೆ.೨. ನಮಗೂ ಇರುವಂತೆ, ಚರ್ಮದ ಬಣ್ಣಕ್ಕೆ ಒಂದು ಪಿಗ್ಮೆಂಟು (ಕನ್ನಡದಲ್ಲಿ pigmentಗೆ ಏನೆನ್ನುತ್ತಾರೆಂದು ಗೊತ್ತಿಲ್ಲ), ಗೋಸುಂಬೆಗೂ ಇರುತ್ತೆ. ಕಪ್ಪು ಬಣ್ಣದ ಪಿಗ್ಮೆಂಟಿಗೆ ಮೆಲನಿನ್ ಎನ್ನುತ್ತೇವೆ. ನಮ್ಮಲ್ಲಿ ಈ ಮೆಲನಿನ್ ಪ್ರಮಾಣ ಕಡಿಮೆಯಾದಂತೆ ನಾವು "ಬೆಳ್ಳಗಾಗುತ್ತೇವೆ". ಆದರೆ ಗೋಸುಂಬೆಗಳಿಗೆ ಇನ್ನೊಂದು ಪಿಗ್ಮೆಂಟ್ ಇರುತ್ತೆ, ಬೇರೆ ಬಣ್ಣಗಳಿಗೋಸ್ಕರ. ಇದಕ್ಕೆ ಕ್ರೊಮ್ಯಾಟೋಫೋರ್ (chromatophores) ಎನ್ನುತ್ತೇವೆ. ಬಣ್ಣ ಬದಲಿಕೆಗೆ ಕಾರಣ ಈ ಕ್ರೊಮ್ಯಾಟೋಫೋರುಗಳೇ. ಅದು ಹೇಗೆ??
ಎಲ್ಲಾ ಪ್ರಾಣಿಗಳಂತೆ, ಚಲನವಲನಗಳ ಹಿಡಿತವಿರುವುದು ನರಗಳ ಕೈಯ್ಯಲ್ಲಿ. ಮತ್ತು ಮೂತ್ರಪಿಂಡದಲ್ಲಿ ಉತ್ಪತ್ತಿಯಾಗುವ ಅಡ್ರಿನಲಿನ್ ಎಂಬ ಹಾರ್ಮೋನುಗಳೂ ಸಹ ಚಲನೆಯನ್ನು ನಿಯಂತ್ರಿಸುತ್ತೆ. ಈ ಅಡ್ರಿನಲಿನ್ ಹಾರ್ಮೋನು ಹೊರಗಿನ ಜಗತ್ತಿನ ಕ್ರಿಯೆಗಳಿಗೆ ದೇಹ ಸ್ಪಂದಿಸಲು ಸಹಾಯ ಮಾಡುತ್ತೆ. ಸಂದೇಶವು ಮಿದುಳಿಗೆ ತಲುಪುವ ಮೊದಲೇ ಅಡ್ರಿನಲಿನ್ ಸಹಾಯದಿಂದ ಪ್ರತಿಸ್ಪಂದನೆ ನಡೆದು ಹೋಗಿರುತ್ತೆ. ನಮ್ಮದೇ ಉದಾಹರಣೆ ಕೊಡಬೇಕೆಂದರೆ, ಇದ್ದಕ್ಕಿದ್ದ ಹಾಗೆ ಮೇಜಿನ ಕೆಳಗೆ ಹಾವೊಂದನ್ನು ಕಂಡರೆ ನಮಗೇ ಅರಿವಿಲ್ಲದೇ ಸೂರು ಹಾರಿ ಹೋಗುವ ಹಾಗೆ ಕಿರುಚಬಹುದು, ಅಥವಾ ಸುಸ್ತಾಗಿ ನಡೆದು ಹೋಗುತ್ತಿದ್ದಾಗ ನಾಯಿಯೊಂದು ಬೊಗಳಿಕೊಂಡು ಅಟ್ಟಿಸಿಕೊಂಡು ಬಂದರೆ ಪಿ.ಟಿ.ಉಷಾಳಂತೆ ನಾವೂ ಓಡಬಹುದು. ಇದಕ್ಕೆ ಕಾರಣ ಅಡ್ರಿನಲಿನ್. ಅಂತೆಯೇ ಗೋಸುಂಬೆಯ ಸ್ಥಿತಿಗಳಿಗೆ (ಅದು ನಿಂತಿರುವ ಜಾಗದ ಬಣ್ಣಗಳಿಗಲ್ಲ) ಪ್ರತಿಸ್ಪಂದಿಸಲು ಸಹಾಯ ಮಾಡುವುದು ಅಡ್ರಿನಲಿನ್ನೇ.

ಕಪ್ಪು, ಕಂದು, ಬೂದಿ, ಹಸಿರು, ನೀಲಿ, ನೇರಳೆ, ಹಳದಿ ಮತ್ತು ಬಿಳಿ - ಇಷ್ಟು ವರ್ಣಗಳನ್ನು ಒಂದು ಗೋಸುಂಬೆ ತಾಳಬಹುದು.೩. ಗೋಸುಂಬೆಗಳು ಯಾವ ಬಣ್ಣದ ಹಿನ್ನೆಲೆಯಲ್ಲಿರುತ್ತೋ ಆ ಬಣ್ಣಕ್ಕೆ ತನ್ನ ಮೈ ಬಣ್ಣ ಬದಲಿಸಿಕೊಳ್ಳಬಲ್ಲುದು ಎಂಬ ನಂಬಿಕೆ ತಪ್ಪು. ಹಾಗೆ ಮಾಡಲು ಸಾಧ್ಯವಿಲ್ಲ. ಮೇಲೆ ಹೇಳಿದ ಬಣ್ಣಗಳಷ್ಟನ್ನೇ ಗೋಸುಂಬೆಗಳು ಸದಾ ಕಾಲ ಬದಲಿಸುತ್ತಲೇ ಇರುತ್ತೆ. ಆರಂಭದಿಂದ ಮುಕ್ತಾಯವೆಂಬಂತೆ, ಒಂದು ವರ್ಣ ಚಕ್ರವನ್ನೇ ನಿರ್ಮಿಸುತ್ತೆ! ತಾನು ಆ ಕ್ಷಣದಲ್ಲಿರುವ ಪರಿಸರಕ್ಕೆ ತಕ್ಕ ಬಣ್ಣವನ್ನು ಧರಿಸಬಹುದೇ ವಿನಃ ಹಿನ್ನೆಲೆಯ ಬಣ್ಣ ಧರಿಸಲು ಅಸಾಧ್ಯ.
ಒಂದು ಆಸಕ್ತಿದಾಯಕ ಮಾಹಿತಿಪೂರ್ಣ ತಾಣ ಇಲ್ಲಿದೆ, ಗೋಸುಂಬೆಯ ಬಗ್ಗೆ. http://www.medicalnewstoday.com/articles/94886.php

-ಅ
30.10.2008
11AM

Saturday, October 25, 2008

ಬೆಳಗಲಿ

ಮನುಷ್ಯನ ಮಿದುಳಿನಷ್ಟು ಬಲಿಷ್ಠವಾಗಲೀ, ಸಮರ್ಥವಾಗಲೀ ಯಾವುದೇ ಪ್ರಾಣಿಗಳ ಪಕ್ಷಿಗಳ ಮಿದುಳುಗಳಿಲ್ಲ. ಅವುಗಳ ಮೇಲೆ ಒತ್ತಡ ಹೇರುವುದು ಬಹಳ ಸುಲಭ.

ಪಕ್ಷಿಗಳಂತೂ ಬಲುಬೇಗ ಒತ್ತಡಕ್ಕೊಳಗಾಗಿಬಿಡುತ್ತವೆ. ಎಲ್ಲೋ ದೂರದಲ್ಲಿ ನಾವು ನಡೆದುಕೊಂಡು ಹೋಗುತ್ತಿದ್ದರೆ ಸಾಕು ತನ್ನನ್ನೆಲ್ಲಿ ಕೊಂದುಬಿಡುವರೋ ಎಂಬ ಭೀತಿಯಿಂದ ಹಾರಿ ಹೋಗುವ ಗುಬ್ಬಿ ಮೈನಾಗಳನ್ನು ನಾವು ನೋಡೇ ಇದ್ದೇವೆ. ಪಕ್ಷಿಗಳ ಕಣ್ಣಿನಲ್ಲಿ ಸಾವಿನ ಭೀತಿ ನೃತ್ಯವಾಡುವುದೂ ಸಹ ಗೋಚರ. ಹದ್ದುಗಳೂ ಸಹ ಒತ್ತಡಕ್ಕೆ ಬಲುಬೇಗ ಸಿಲುಕುವ ಪಕ್ಷಿಗಳೇ.

ಮಿದುಳಿಗೆ ಒತ್ತಡ ಬೀಳಲು ಬೇಕಾದಷ್ಟು ಕಾರಣಗಳಿವೆ. ಒಂಟಿತನ, ಹಗೆತನ, ಸಾವಿನ ದವಡೆಯಲ್ಲೇ ಬದುಕುವ ರೀತಿ, ಆವಾಸ ಕೊರತೆ, ಅತಿಯಾದ ಶಬ್ದ, ಮಾಲಿನ್ಯ, ಆಹಾರದ ಕೊರತೆ, ಅತಿವೃಷ್ಟಿ, ಅನಾವೃಷ್ಟಿ, ಚಳಿ, ಶೆಖೆ, ಎಲ್ಲವೂ ಒತ್ತಡವನ್ನು ಹೇರುತ್ತವೆ. ಪ್ರಾಣಿಪಕ್ಷಿಗಳಂತೂ ಬಹಳ ಸೂಕ್ಷ್ಮ. ಯಾವ ಜೀವಿಯು ಒತ್ತಡವನ್ನು ಸಹಿಸಿಕೊಳ್ಳಬಲ್ಲದೋ ಅವು ಹೆಚ್ಚು ಹೆಚ್ಚು ಉಳಿಯುತ್ತವೆ. ಜಿರಲೆಗಳು ಅತ್ಯಂತ ಸಮರ್ಥ ಜೀವಿ.

ಗಣಿಗಾರಿಕೆಯ ಪ್ರದೇಶಗಳಲ್ಲಿ ಅನೇಕ ಪ್ರಾಣಿಗಳು ಅರಣ್ಯನಾಶದ ಪರಿಣಾಮವಾಗಿ ಸತ್ತು ಹೋಗುತ್ತಿವೆ. ಆ ಪ್ರಾಣಿಗಳು ಅರಣ್ಯವನ್ನು ಹೊರೆತು ಬೇರೆಲ್ಲೂ ಬದುಕಲು ಸಾಧ್ಯವಾಗದಿರುವುದೇ ಒತ್ತಡ. ರೈಲ್ವೇ ಇಲಾಖೆಯವರು ಮಾಡಿರುವ ಗುಹೆಗಳಲ್ಲಿ ಓಡಾಡುವ ಮಜ ನಮಗಿದ್ದರೆ, ಆ ಗುಹೆಗಳ ರಚನೆಯಾಗುವ ಸಮಯದಲ್ಲಿ ಹುಲಿಗಳೂ ಆನೆಗಳೂ ಕರಡಿಗಳೂ ಸಹಸ್ರಾರು ಪಕ್ಷಿಗಳೂ ಪ್ರಾಣ ಕಳೆದುಕೊಂಡಿರುವುದು ಸತ್ಯವಷ್ಟೆ. ಕಾರಣ, ಗುಹೆಯನ್ನು ಕೊರೆಯುವಾಗ ಉಂಟಾದ ಸದ್ದು!

ಸಮುದ್ರದ ಆಳದಲ್ಲಿ ಸೋನಾರ್ ಸಿಗ್ನಲ್ಲುಗಳಿಂದ ಉಂಟಾಗುವ ಸದ್ದಿನಿಂದ ತಿಮಿಂಗಿಲಗಳೂ ಸಾಯುತ್ತವೆ.

ಶಬ್ದ ಮಾಲಿನ್ಯವು ಅತಿ ಹೆಚ್ಚು ಉಂಟಾಗುವುದು ರೈಲ್ವೇ ಇಂಜಿನ್ನುಗಳಿಂದ. ಅದರ ಸದ್ದು ಯಾವ ಪ್ರಾಣಿಯನ್ನು ಬೇಕಾದರೂ ಕೊಲ್ಲಬಹುದು. ಇಂಜಿನ್ನಿನ ಸದ್ದು ರೈಲಿನ ವೇಗಕ್ಕಿಂತ ಅಪಾಯ.

ಪಟಾಕಿ ಸದ್ದು ಯಾವ ಪ್ರಾಣಿಗಳೂ ಇಷ್ಟ ಪಡುವುದಿಲ್ಲವೆಂಬುದು ಅವುಗಳ ವರ್ತನೆಯಿಂದಲೇ ಗೊತ್ತಾಗುತ್ತೆ. ಮನುಷ್ಯನ ಜೊತೆಯಲ್ಲಿ ಎಷ್ಟೊಂದು ವರ್ಷಗಳಿಂದಲೂ ಬಾಳಿ ಬದುಕುತ್ತಿರುವ ನಾಯಿ ಬೆಕ್ಕು ಕಾಗೆ ಗುಬ್ಬಿಗಳೂ ಕೂಡ ಪಟಾಕಿಗೆ ಹೊಂದುಕೊಂಡಿಲ್ಲ. ಹೊಂದುಕೊಳ್ಳಲು ಸಾಧ್ಯವೂ ಇಲ್ಲ. ಒಂದೊಂದು ಪಟಾಕಿ ಸಿಡಿದಾಗಲೂ ಒಂದು ಪಕ್ಷಿಯು ಹತವಾಗುತ್ತೆಂದರೆ ಅದು ಅತಿಶಯೋಕ್ತಿಯಲ್ಲ. ಆಟಂ ಬಾಂಬ್ ಸಿಡಿದರೆ ಅಸರ ಶಬ್ದದಿಂದ ನಮಗಾಗುವ ಪ್ರಯೋಜನವಾದರೂ ಏನು? ನಮ್ಮ ಮಿದುಳಿನ ಮೇಲೆ ಒಂದಷ್ಟು ಒತ್ತಡ!! ಕ್ಷಣಿಕ "ಮಜ"!!!

ಯಾವ ಯಾವ ಕಾರಣದಿಂದ ಎಷ್ಟು ಎಷ್ಟು ಶಬ್ದ ಉತ್ಪತ್ತಿಯಾಗುತ್ತೆಂಬುದನ್ನು ಈ ಪುಣ್ಯಾತ್ಮರು ಬಹಳ ಸ್ಪಷ್ಟವಾಗಿ ಕೊಟ್ಟಿದ್ದಾರೆ. ನಾವು ಎಲ್ಲಿ ಬದುಕುತ್ತಿದ್ದೇವೆಂದು ಸೂಕ್ಷ್ಮವಾಗಿ ಗಮನಿಸಿದರೆ ಭೀತಿಯಾಗುವುದು ಆಶ್ಚರ್ಯವೇನಲ್ಲ.

ಮೊದಲೆರಡು ನಿದರ್ಶನಗಳೂ ಮನುಷ್ಯನ "ಬದುಕಿಗೆ" ಸಹಾಯಕವಾಗಿದೆ. ಒಂದು ಜೀವಿ ಬದುಕಲು ಇನ್ನೊಂದು ಜೀವಿ ಸಾಯುವುದು ಪ್ರಕೃತಿನಿಯಮ. ಆದರೆ ಪಟಾಕಿಗಳಿಂದ ಗಿಡಗಳೂ ಸೇರಿದಂತೆ ಎಲ್ಲವೂ ನಾಶವೆಂಬುದು ಅರಿವಾಗಲಿ. ಮಜಕ್ಕಾಗಿ ಅನ್ಯಜೀವಿಯ ನಾಶಕ್ಕೆ ಕಾರಣರಾಗದೇ ದೀಪಾವಳಿಯು ಎಲ್ಲರ, ಎಲ್ಲ ಜೀವಿಗಳ ಬದುಕನ್ನು ಬೆಳಗಲಿ.

ದೀಪಾವಳಿಯ ಶುಭಾಶಯಗಳು.

-ಅ
26.10.2008
12.30PM

Wednesday, October 15, 2008

ಕಡಲು - ಒಡಲುಇದು ಉಪ್ಪುನೀರ ಕಡಲಲ್ಲೊ
ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೆ
ತಿಳಿದದ ಇದರ ಬೆಲೆಯು.
-ವರಕವಿ ಬೇಂದ್ರೆ

ಇದನ್ನು ಕಂಡುಕೊಳ್ಳಲು ಇಷ್ಟು ದಿನ ಬೇಕಾಯಿತು!

--> ಸಮುದ್ರದ ನೀರಿನಲ್ಲಿರುವ ಲವಣಾಂಶಗಳೂ, ಮನುಷ್ಯನ ದೇಹದಲ್ಲಿರುವ ದ್ರವಗಳ ಲವಣಾಂಶಗಳೂ ಎರಡೂ ಬಹುಪಾಲು ಸಾಮ್ಯವನ್ನು ಹೊಂದಿರುವುದೇ.

--> ಸಮುದ್ರದ ಲವಣಾಂಶದ ಪ್ರಮಾಣವೂ, ದೇಹದಲ್ಲಿರುವ ದ್ರವಗಳ ಲವಣಾಂಶದ ಪ್ರಮಾಣವೂ ಒಂದೇ.

--> ಚಂದಿರ, ಸೂರ್ಯ ಮತ್ತು ಭೂಮಿ ಒಂದೇ ಅಕ್ಷದಲ್ಲಿ ಬಂದಾಗ ಗುರುತ್ವಾಕರ್ಷಣೆಯ ಪರಿಣಾಮ ಸಮುದ್ರದಲ್ಲಿ ಎತ್ತರದ ಅಲೆಗಳು ಉಂಟಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆ - ಇಂಥಾ ಸ್ಥಿತಿಗೆ ಉದಾಹರಣೆ. ಇದೇ ದಿನಗಳಲ್ಲಿ ದೇಹದ ದ್ರವಗಳೂ ಸಹ ಉದ್ರೇಕಗೊಳ್ಳುತ್ತವೆ. ಹಾಗಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಸಮಯದಲ್ಲಿ ಮನುಷ್ಯನ ಪರಿಸ್ಥಿತಿಯೂ ಸಹ ಎಂದಿನಂತಿರುವುದಿಲ್ಲ. ಮನಸ್‍ಶಾಸ್ತ್ರಜ್ಞರು ಹೇಳುವ ಪ್ರಕಾರ ದುರಂತಗಳಾಗಲೀ, ಜಗಳ ಕದನಗಳಾಗಲೀ, ಹೊಡೆದಾಟಗಳಾಗಲೀ, ತಪ್ಪು ನಡವಳಿಕೆಗಳಾಗಲೀ ಅಥವಾ ಎಂಥದ್ದೋ ಒಂದು ಕೆಟ್ಟದ್ದಾಗುವುದು ಅಮಾವಾಸ್ಯೆ ಹುಣ್ಣಿಮೆಗಳ ಸಮಯದಲ್ಲಿ ಹೆಚ್ಚು. ಹಿರಿಯರು ಹೇಳುತ್ತಾರಲ್ಲಾ "ಇವತ್ತು ಅಮಾವಾಸ್ಯೆ, 'ಸಾಹಸ' ಮಾಡಲು ಹೋಗಬೇಡ" ಅಂತ - ಇದನ್ನು ಮೂಢನಂಬಿಕೆಯೆಂದು ತಳ್ಳಿಹಾಕುವುದು ಉಚಿತವಲ್ಲ.

--> ಮತ್ತೊಂದು ಕುತೂಹಲಕಾರ ವಿಷಯವೆಂದರೆ ಜಗತ್ತು ಶೇ.70 ರಷ್ಟು ಕಡಲ ನೀರಿನಿಂದಾವರಿಸಿದೆ. ಮನುಷ್ಯ ದೇಹದ ದ್ರವಗಳೂ ದೇಹದ ಶೇ. 70 ರಷ್ಟು ಆವರಿಸಿದೆ.

-ಅ
15.10.2008
1PM

Sunday, October 12, 2008

ಇದೊಂದು ಪ್ರಕಟಣೆ

ಕೆನೆತ್ ಆಂಡರ್ಸನ್ ಹೆಸರು ಕೇಳಿದರೇನೇ ಮನಸ್ಸಿನಲ್ಲಿ ಹುಮ್ಮಸ್ಸು. ಪರಿಸರ, ಪ್ರಕೃತಿ, ಚಾರಣ, ಅರಣ್ಯ, ಓದುವಿಕೆ - ಇವುಗಳ ಬಗ್ಗೆ ಆಸಕ್ತಿ ಮೂಡಿಸಿದ್ದು ಕನ್ನಡದ ತೇಜಸ್ವಿಯಾದರೆ, ಇಂಗ್ಲಿಷಿನ ಬರಹಗಳಲ್ಲಿ ಕೆನೆತ್ ಮತ್ತು ಜಿಮ್ ಕಾರ್ಬೆಟ್. ಕೆನೆತ್ ಬಗ್ಗೆ ಮತ್ತೆಂದಾದರೂ ಓದಿಕೊಳ್ಳೋಣ, ತಿಳಿದುಕೊಳ್ಳೋಣ. ಈಗ ಪ್ರಕಟಣೆ ವಿಷಯ ಇಂತಿದೆ.

ಕಾಡಿನ ಮಧ್ಯೆ ವಾಹನ ಚಲಾಯಿಸುವವರು ಅನುಸರಿಸಬೇಕಾದ ನೀತಿ ನಿಯಮಗಳು, ಅವರಿಗಿರಬೇಕಾದ ತಿಳಿವಳಿಕೆ ಮತ್ತು ಪ್ರಜ್ಞೆ - ಇವುಗಳ ಅರಿವು ಮೂಡಿಸಲು ಒಂದು ಕಾರ್ಯಕ್ರಮವನ್ನು ಕೆನೆತ್ ಸಂಸ್ಥೆ ಹಮ್ಮಿಕೊಂಡಿದೆ. ಬಂಡಿಪುರ ಚೆಕ್ ಪೋಸ್ಟ್‍ನ ಎದುರು ಕರಪತ್ರಗಳೊಡನೆ ನಿಂತು, ಆ ದಾರಿಯಲ್ಲಿ ಓಡಾಡುವ ಚಾಲಕರುಗಳಿಗೆ ವನ್ಯಜೀವಿಗಳ ಬಗ್ಗೆ, ವಾಹನವನ್ನು ಅರಣ್ಯದಲ್ಲಿ ಹೇಗೆ ಚಲಾಯಿಸಬೇಕು, ಏನೇನು ಮಾಡಬೇಕು, ಏನೇನು ಮಾಡಬಾರದು - ಹೀಗೆ ಎಲ್ಲ ವಿಷಯಗಳನ್ನೂ ತಿಳಿಸಿಕೊಡುವ ಸ್ವಯಂಸೇವಕರನ್ನು ಆಹ್ವಾನಿಸುತ್ತಿದೆ.

ಕಾರ್ಯಕ್ರಮವು ನವೆಂಬರ್ ಒಂದು ಮತ್ತು ಎರಡರಂದು ನಡೆಯುತ್ತಿದೆ.

ಇದೇ ಪ್ರಕಟಣೆಯನ್ನು ಇಂಗ್ಲಿಷಿನಲ್ಲೂ ಓದಿಕೊಳ್ಳಬಹುದು.

ಕಾರ್ಯಕ್ರಮದ ಹೆಸರು - ರೋಡ್ ಕಿಲ್ಸ್!

ಆಸಕ್ತರು ಗೆಳೆಯ ಜಯರಾಮನ್‍ರವರೊಡನೆ ಮಾತನಾಡಬಹುದು. ಅವರ ಈಮೇಲ್ ವಿಳಾಸ jaykakarla@yahoo.co.in

ಮತ್ತು KANS (Kenneth Anderson Nature Society) ಸಂಸ್ಥೆಯ ನಿರ್ದೇಶಕರ ವಿವರ ಹೀಗಿದೆ:
ಹರಿ. ಎ.ಎಸ್. - 9886623950 hari.omniscient@ gmail.com

ನನಗಂತೂ ಆಸಕ್ತಿಯಿದೆ. ಸಮಯ ಸಂದರ್ಭದ ಚರ್ಚೆ ನಡೆಸಿ ಇಲ್ಲಿಗೊಂದು ಪಯಣ ಬೆಳೆಸುವ ಯೋಜನೆಯೂ ಇದೆ. ಶಾಲೆಯ ಮೇಲೆ ಅವಲಂಬಿತವಾಗಿದೆ ಕೂಡ.

ನನ್ನಂತೆ ಇನ್ಯಾರಿಗಾದರೂ ಆಸಕ್ತಿಯಿದ್ದರೆ ಅರಣ್ಯಕ್ಕಾಗಿ, ಪರಿಸರಕ್ಕಾಗಿ, ವನ್ಯಜೀವಕ್ಕಾಗಿ, ನಮ್ಮೆಲ್ಲರಿಗಾಗಿ, ಪ್ರಕೃತಿಗಾಗಿ - ಈ ಸತ್ಕಾರ್ಯವನ್ನು ಮಾಡಬಹುದು.

-ಅ
12.10.2008
1.30PM

Thursday, October 09, 2008

ಯಾಕೆ?

ಪ್ರ.೧. ಗಂಡು ನಾಯಿಗಳು ಆಗಾಗ್ಗೆ ಸಿಕ್ಕ ಸಿಕ್ಕ ಕಡೆ ಮೂತ್ರ ವಿಸರ್ಜನೆ ಮಾಡುವುದು ಏಕೆ?

ಗಂಡು ನಾಯಿಗಳು ತಮ್ಮ 'ಸಾಮ್ರಾಜ್ಯ'ವನ್ನು ನಿರ್ಮಿಸಿಕೊಂಡಿರುತ್ತೆ. ಅದರ ಪರಿಧಿಯನ್ನು ಮೂತ್ರದಿಂದ ಗುರುತು ಮಾಡುತ್ತೆ. ವಾಸನೆಯು ಬೇಗ ಹೊರಟು ಹೋಗುವುದರಿಂದ ಮತ್ತೆ ಮತ್ತೆ ಮೂತ್ರ ವಿಸರ್ಜನೆ ಮಾಡುತ್ತೆ. ಸರಹದ್ದನ್ನು ದಾಟಿ ಬೇರೆ ಗಂಡು ನಾಯಿಗಳು ಬಂದರೆ ಸಾಮ್ರಾಜ್ಯದೊಳಗಿನ ನಾಯಿಗಳು ಗುಂಪಾಗಿ ಆಕ್ರಮಿಸಿ ಓಡಿಸಿಬಿಡುತ್ತೆ.

* ಇದೇ ಪದ್ಧತಿಯನ್ನು ಬೆಕ್ಕುಗಳೂ, ಹುಲಿಗಳೂ, ಸಿಂಹಗಳೂ, ತೋಳಗಳೂ, ನರಿಗಳೂ, ಚಿರತೆಗಳೂ, ಕಿರುಬಗಳೂ ಅನುಸರಿಸುತ್ತವೆ......................................................................................

ಪ್ರ. ೨. ಹಾವುಗಳು ಪೊರೆ ಬಿಡುವುದು ಏಕೆ?

ಹಾವಿನ ದೇಹ ವಿನ್ಯಾಸ ನಮ್ಮಂತೆ ಇಲ್ಲ. ಚರ್ಮದ ಒಳಗಿರುವ ದೇಹವು ಬೆಳೆಯುತ್ತೆ, ಆದರೆ ಚರ್ಮವು ಬೆಳೆಯುವುದಿಲ್ಲ. ಹಾಗಾಗಿ ಕಾಲಕಾಲಕ್ಕೆ ಬಟ್ಟೆ ಚಿಕ್ಕದಾದ ಹಾಗೆ ಬಟ್ಟೆ ಬದಲಿಸುವಂತೆ ಹಳೆ ಚರ್ಮವನ್ನು ತೊರೆಯುತ್ತೆ. ಇದಕ್ಕೆ Ecdysis ಎಂದು ಹೆಸರು.

* ಹಾವುಗಳು ಮಾತ್ರವಲ್ಲ, ಹಾವುಗಳಂತೆ exoskeleton ಉಳ್ಳ ಎಲ್ಲಾ ಸರೀಸೃಪಗಳೂ, ಕೀಟಗಳೂ ಪೊರೆ ಬಿಡುತ್ತವೆ......................................................................................

ಪ್ರ. ೩. ಸೊಳ್ಳೆಗಳು ಗುಯ್ಗುಟ್ಟುವುದು ಏಕೆ?

ಸೊಳ್ಳೆಗಳು ಕಂಠದಿಂದ ಶಬ್ದ ಮಾಡುವುದಿಲ್ಲ. ಗುಯ್ಗುಟ್ಟುವ ಶಬ್ದ ಬರುವುದು ರೆಕ್ಕೆಗಳಿಂದ. ಸೊಳ್ಳೆಗಳ ರೆಕ್ಕೆಗಳು ಒಂದು ಕ್ಷಣಕ್ಕೆ ಆರು ನೂರು ಸಲ ಬಡಿದುಕೊಳ್ಳುತ್ತೆ. ಇದರ ಪರಿಣಾಮವೇ ಗುಯ್‍ಯ್....

* ದುಂಬಿ, ಜೇನು, ನೊಣ - ಎಲ್ಲವೂ ರೆಕ್ಕೆ ಬಡಿದು ಸದ್ದು ಮಾಡುವ ಹುಳುಗಳೇ......................................................................................

ಪ್ರ. ೪. 'ಮುಟ್ಟಿದರೆ ಮುನಿ'ಯು ಮುನಿಯುವುದೇಕೆ?

ಮುಟ್ಟಿದರೆ ಮುನಿ - Mimosa pudica ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿದ್ದು, ಕಿಂಚಿತ್ ಒತ್ತಡ ವ್ಯತ್ಯಾಸವಾದರೂ ಮಡಚಿಕೊಂಡು ಬಿಡುತ್ತೆ. ಸಸ್ಯಶಾಸ್ತ್ರಜ್ಞರು ಇದನ್ನು defence mechanism ಎಂದೂ ಶಂಕಿಸುತ್ತಾರೆ. ಹುಳು ಹುಪ್ಪಟೆಗಳಿಂದ, ಮೇಯಲು ಬಂದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎಲೆಗಳನ್ನು ಮಡಚಿಕೊಂಡರೆ ತನ್ನಲ್ಲಿರುವ ಮುಳ್ಳು ಆ ಪ್ರಾಣಿಗೆ ಚುಚ್ಚಿ ಪಾರಾಗಬಹುದು. ಇದೊಂದು ಸಸ್ಯಲೋಕದ ವಿಸ್ಮಯ ಜೀವಿ.......................................................................................

ಪ್ರ. ೫. ಆನೆಗಳು ವಿಪರೀತ ಲದ್ದಿ ಹಾಕುವುದು ಯಾಕೆ?

ಆನೆಗಳ ಜೀರ್ಣಶಕ್ತಿ ತೀರ ಕಡಿಮೆ. ಅದೇ ಕಾರಣಕ್ಕಾಗಿ ವಿಪರೀತ ತಿನ್ನುತ್ತೆ. ದಕ್ಕುವುದು ವಿಪರೀತ ಕಮ್ಮಿ.

* ಆನೆಯ ಜೀರ್ಣಶಕ್ತಿ ಕಡಿಮೆಯೆನ್ನುವುದಕ್ಕೆ ಸಾಕ್ಷಿ, ಅದರ ಲದ್ದಿಯಲ್ಲಿ ಹುಲ್ಲುಕಡ್ಡಿಗಳು, ಎಲೆ ಚೂರುಗಳು ಹಾಗ್‍ಹಾಗೇ ಇರುತ್ತೆ.......................................................................................

ಪ್ರ. ೬. ಅರಣ್ಯದಲ್ಲಿ ಪ್ಲಾಸ್ಟಿಕ್ ಯಾಕೆ ಬಿಸಾಡಬಾರದು?

ಗಿಡಗಳಿಗೆ ಸಾರಜನಕ ದೊರಕುವುದು ಮಣ್ಣಿನಿಂದ, ಪ್ಲಾಸ್ಟಿಕ್ ಅದನ್ನು ತಡೆಹಿಡಿದು ಬಿಡುತ್ತೆ. ಯಾವುದೇ ಪ್ರಾಣಿಯೂ, ಮನುಷ್ಯನನ್ನೂ ಸೇರಿಸಿ, ಪ್ಲಾಸ್ಟಿಕ್‍ಅನ್ನು ಜೀರ್ಣಿಸಿಕೊಳ್ಳಲು ಅಸಮರ್ಥ. ಪ್ಲಾಸ್ಟಿಕ್ ವಸ್ತುವು ಕರುಳುಗಳನ್ನು ಬ್ಲಾಕ್ ಮಾಡಿಬಿಡುತ್ತೆ. ಇಂದು ಅರಣ್ಯದಲ್ಲಿ ಬಹುತೇಕ ಪ್ರಾಣಿಗಳ ಸಾವಿಗೆ ಪ್ಲಾಸ್ಟಿಕ್ ಕಾರಣ.

* ಎಂಥಾ ಗಟ್ಟಿಯಾದ ಮರವನ್ನೇ ತಿಂದು ಮುಗಿಸುವ ಗೆದ್ದಲು ಹುಳು ಕೂಡ ಪ್ಲಾಸ್ಟಿಕ್ ಅನ್ನು ತಿನ್ನಲಾಗುವುದಿಲ್ಲ.......................................................................................

ಪ್ರ. ೭. ನದಿ ನೀರು ಸಿಹಿ, ಮಳೆ ನೀರು ಸಿಹಿ, ಅಂತರ್ಜಲ ಸಿಹಿ - ಮುನ್ನೀರು (ಈ ಮೂರೂ ಸೇರಿ ಆಗುವುದು = ಸಮುದ್ರ) ಮಾತ್ರ ಉಪ್ಪು. ಯಾಕೆ?

ಭೂಮಿ ಸೃಷ್ಟಿಯಾದಾಗ ವರ್ಷಾನುಗಟ್ಟಲೆ ಮಳೆಗರೆದಾಗ ಸಾಗರಗಳು ಸೃಷ್ಟಿಯಾದವು. ಉಲ್ಕಾಪಾತಗಳಿಂದಾದ ಬೃಹದ್ಬಾವಿಗಳಲ್ಲಿ ಅಡಗಿದ್ದ ಉಪ್ಪಿನಂಶವು (ಎಲ್ಲಾ ಬಗೆಯ ಉಪ್ಪು) ಸಾಗರದ ನೀರಿನಲ್ಲಿ ಕರಗಿ ಹೋದವು. ಹಾಗೆ ಕರಗಿ ಹೋಗಿ, ಸೂರ್ಯನ ತಾಪಕ್ಕೆ ತಳಹೊಕ್ಕವು. ಅದೇ ತಾಪಕ್ಕೆ ನೀರು ಮಾತ್ರ ಆವಿಯಾಗಿ ಮತ್ತೆ ಮೋಡವಾಗಿ ಮಳೆಗರೆಯುವುದು. ಹಾಗೆ ಮಳೆಯಾಗಿ ಸುರಿಯುವ ನೀರು, ಈ ಬೃಹದ್ಬಾವಿಗಳಲ್ಲದ ಸ್ಥಳಗಳಲ್ಲಿ ಬಿದ್ದಾಗ ಅವು ಹರಿದು ಹೋಗುವ ಝರಿ ತೊರೆ ನದಿ ಕೆರೆಗಳಾದವು. ಅಲ್ಲಿ ಉಪ್ಪಿನಂಶವಿಲ್ಲ. ಭೂಮಿಯ ಸೃಷ್ಟಿಯ ಸಮಯದಲ್ಲಿ ಉಂಟಾದ ಬಾವಿಗಳಲ್ಲಿ ಉಪ್ಪಿನಂಶವಿರುವುದು ಸುಮಾರು ಐವತ್ತು ಮಿಲಿಯನ್ ಬಿಲಿಯನ್ ಟನ್‍ಗಳು ಎನ್ನಲಾಗಿದೆ.

* ಸಮುದ್ರದ ನೀರು ಮೊದಲ ಮಳೆಯಿಂದಲೂ ಉಪ್ಪಾಗಿಯೇ ಇದೆ.......................................................................................

ಪ್ರ. ೮. ಮರಕುಟುಕ ಹಕ್ಕಿ ಯಾಕೆ ಮರವನ್ನು ಕುಟುಕುತ್ತೆ?

ಅನೇಕರು ಮರಕುಟುಕ ಪಕ್ಷಿಯು ಮರದ ಚೂರನ್ನು ತಿನ್ನುತ್ತೆ ಎಂದು ನಂಬಿದ್ದಾರೆ. ಆದರೆ, ಮರಕುಟುಕವು ಹುಳುಗಳನ್ನು ತಿನ್ನುವ ಹಕ್ಕಿ. ಸತ್ತು ಹೋದ ಮರವನ್ನು ಹೆಚ್ಚು ಬಯಸುತ್ತೆ. ಯಾಕೆಂದರೆ ಸತ್ತ ಮರದ ಮೇಲೆ ಹುಳುಗಳು ಹೆಚ್ಚಿರುತ್ತೆ. ಅಂಥಾ ಮರದಲ್ಲಿ ಗೂಡನ್ನು, ಅದರಲ್ಲೂ ಸಣ್ಣ ಸಣ್ಣ ಪೊಟರೆಗಳನ್ನು ಮಾಡುವ ಸಲುವಾಗಿ ಮರವನ್ನು ಕುಟುಕುತ್ತೆ. ಜೊತೆಗೆ, ಮರವನ್ನು ಕುಟುಕುವ ಸದ್ದು ಇವುಗಳಲ್ಲಿ ಸಂಭಾಷಣೆಯ ರೀತಿಯೂ ಕೂಡ!!......................................................................................

ಪ್ರ. ೯. ಹಲ್ಲಿಗಳು ಬಾಲಗಳನ್ನು ಕಳಚುವುದೇಕೆ?

ಇದಕ್ಕೆ ಆಟೋಟಮಿ ಎಂದು ಹೆಸರು. ಅಂದರೆ ತನ್ನ ಒಂದು ಅಂಗವನ್ನು ಸ್ವೇಚ್ಛೆಯಿಂದ ಕಳಚಿಬಿಡುವುದು. ಹಾಗೆ ಕಳಚಿಕೊಂಡ ಅಂಗವು ಮತ್ತೆ ಬೆಳೆಯುವುದು. ಇದಕ್ಕೆ regeneration ಎಂದು ಹೆಸರು. ಶತ್ರು ಪ್ರಾಣಿಯಿಂದ ತಪ್ಪಿಸಿಕೊಳ್ಳಲು, ಶತ್ರುವನ್ನು ಮೂರ್ಖಗೊಳಿಸಲು ಹಲ್ಲಿಯು ಹೂಡುವ ತಂತ್ರವು ಈ ಆಟೋಟಮಿ.

* ಹಲ್ಲಿಯು ಬಾಲ ಕಳಚುವಂತೆ ಸ್ಯಾಲಮಾಂಡರ್ ಕೂಡ ಕಳಚುತ್ತೆ. ಅನೇಕ ಏಡಿಗಳು, ಜೇಡಗಳು ತಮ್ಮ ಕಾಲನ್ನೇ ಕಳಚಿಬಿಡುತ್ತವೆ.......................................................................................

ಪ್ರ. ೧೦. ಮುಂಗುಸಿಗೆ ಹಾವಿನ ವಿಷವೇಕೆ ತಗುಲುವುದಿಲ್ಲ?

ಇದು ತಪ್ಪು ನಂಬಿಕೆ. ಹಾವಿಗಿಂತ ಮುಂಗುಸಿಯು ವೇಗವಾಗಿರುತ್ತೆ, ಮತ್ತು ಚುರುಕಾಗಿರುತ್ತೆ. ಮುಂಗುಸಿಯು ಹಾವನ್ನು ಬೇಟೆಯಾಡಲೆಂದೇ ಹುಟ್ಟಿರುವ ಪ್ರಾಣಿ. ನೇರವಾಗಿ ಹಾವಿನ ತಲೆಯ ಮೇಲೆಯೇ ಎರಗಿ, ಹಾವಿನ ತಲೆಬುರುಡೆಯನ್ನು ಮುರಿಯುವಂತೆ ಕಚ್ಚುತ್ತೆ. ಮುಂಗುಸಿಯ ಹಲ್ಲುಗಳು ಗರಗಸದಂತೆ ಹರಿತವಾಗಿದ್ದು, ಹಾವಿನ ಪ್ರಾಕೃತ ಶತ್ರುವಾಗಿರುವುದರಿಂದ ಈ ಕೆಲಸದಲ್ಲಿ ಯಶಸ್ವಿಯಾಗುತ್ತೆ. ಕೆಲವು ಸಲ ಹಾವೂ ಗೆಲ್ಲುತ್ತೆ!

* ಮುಂಗುಸಿಯದೇ ಜಾತಿಯ (Herpestes) ಎಲ್ಲಾ ಪ್ರಾಣಿಗಳೂ ಹಾವುಗಳಂತಹ ಸರೀಸೃಪಗಳನ್ನೇ ಅವಲಂಬಿಸಿ ಬದುಕುವುದು ಆಹಾರಕ್ಕೆ.......................................................................................

ಈ ಬಾರಿ "ಯಾಕೆ"ಯಾಯಿತು. ಮುಂದಿನ ಸಲ, "ಹೇಗೆ"ಗಳನ್ನು ನೋಡೋಣ.

-ಅ
09.10.2008
4AM

Friday, October 03, 2008

ಭಾರತ ಮತ್ತು ವನ್ಯಜೀವ - ೧

ನಮ್ಮ ದೇಶದಲ್ಲಿ ಹೇಗೆ ನೂರೆಂಟು ಜಾತಿ, ಧರ್ಮ, ಮತ, ಭಾಷೆ ಎಲ್ಲವೂ ವಿವಿಧ ಕಡೆ ಹಂಚಿಹೋಗಿದೆಯೋ ಹಾಗೆಯೇ ವನ್ಯಜೀವ ಕೂಡ ಬಹಳ ಸೊಗಸಾಗಿ ವಿಂಗಡಣೆಯಾಗಿದೆ. ದೇಶ ಸುತ್ತು - ಕೋಶ ಓದು ಎಂದು ಹಿರಿಯರು ಹೇಳಿದ್ದಾರೆ. ಸಧ್ಯಕ್ಕೆ ಕೋಶ ಓದಿರುವಷ್ಟು ದೇಶ ಸುತ್ತಿಲ್ಲ, ಸುತ್ತುವಂತಾಗಲಿ. ಮೊದಲು ಕೋಶದಲ್ಲಿ ದೇಶವನ್ನು ಸುತ್ತಿ ಬರೋಣ. ಯಾವ ರಾಜ್ಯದಲ್ಲಿ ಯಾವ "ಜಾಗ" ನೋಡಬೇಕು ಎಂಬುದನ್ನು ನಾನು ಪಟ್ಟಿ ಮಾಡಲಿಚ್ಛಿಸುವುದಿಲ್ಲ. ಅದಕ್ಕಾಗಿ ಸಹಸ್ರಾರು ತಾಣಗಳಿವೆ. ಆದರೆ, ಯಾವ ಯಾವ ರಾಜ್ಯಕ್ಕೆ ಹೋದರೆ ಯಾವ ಪ್ರಾಣಿ/ಗಿಡ/ಹೂವು - ನೋಡಲೇ ಬೇಕೋ ಅದೆಲ್ಲಾ ಒಂದು ಕಡೆ ಪಟ್ಟಿ ಮಾಡಿಕೊಳ್ಳೋಣ. ಅಲ್ಲಿಗೆ ಹೋಗುವಾಗ ಸುಲಭವಾದೀತು. ಹೋಮ್‍ವರ್ಕ್ ಸರಿಯಾಗಿ ಮಾಡಿದರೆ ತಾನೆ ಪ್ರಯಾಣವು ಯಶಸ್ವಿಯಾಗುವುದು?ಕರ್ನಾಟಕದಿಂದಲೇ ಆರಂಭಿಸೋಣ.

ಕರ್ನಾಟಕದ ವಿಶೇಷ ಪ್ರಾಣಿಯೆಂದರೆ ನನ್ನ ಪ್ರಕಾರ ಮೊದಲ ಸ್ಥಾನ ಪಡೆದುಕೊಳ್ಳುವುದು ಕಾಳಿಂಗ ಸರ್ಪ - Ophiophagus hannah. ಇಡೀ ಪಶ್ಚಿಮ ಘಟ್ಟದುದ್ದಕ್ಕೂ ಕಾಣಸಿಗುವ ಈ ಸರ್ಪವು ಈ ರಾಜ್ಯದಲ್ಲಿ ಅತ್ಯಧಿಕವಾಗಿದೆ. ಆಗುಂಬೆ ಮತ್ತು ಬಿಸಿಲೆ - ಕಾಳಿಂಗದ ಆರಾಮ. ಭಾರ್ಗವಿ ನದಿ ತೀರದಲ್ಲಿರುವ, ಜಮದಗ್ನಿಯ ಪತ್ನಿ ರೇಣುಕಾಳ ಅವತರಣವೆಂದೇ ನಂಬಲ್ಪಟ್ಟಿರುವ ದೊಡ್ಡ ಸಂಪಿಗೆಯನ್ನು ನೋಡದೆ ಕರ್ನಾಟಕದಿಂದ ಹೊರಗೆ ಹೋಗಲೇ ಬಾರದು. ಬೃಹತ್ ಮರದ ಪೊಟರೆಯೊಳಕ್ಕೇ ಪ್ರದಕ್ಷಿಣೆ ಹಾಕಿ ಬರಲು ಸೋಲಿಗರು ಅವಕಾಶ ಮಾಡಿಕೊಟ್ಟಿದ್ದಾರೆ. ಬಂಡೀಪುರದ ಹುಲಿ, ಸಿಂಗಳೀಕ, ನಾಗರಹೊಳೆಯ ಆನೆ, ಬೆಂಗಳೂರಿನ ಇನ್ನೂರಕ್ಕೂ ಹೆಚ್ಚಿನ ಪಕ್ಷಿಸಂಕುಲ - ಇವೆಲ್ಲವೂ ಕರ್ನಾಟಕದ ವೈಶಿಷ್ಟ್ಯ. ಗಂಧದ ಗುಡಿ ಎಂದೂ ಕರ್ನಾಟಕವನ್ನು ಕರೆಯುತ್ತೇವಾದ್ದರಿಂದ ಹೆಚ್ಚಾಗಿ ಗಂಧದ ಮರಗಳು ಕಾಣುವ ಬಂಡೀಪುರ ಅರಣ್ಯವನ್ನು ನೋಡಲೇ ಬೇಕು.
ಕೇರಳ

ಹನ್ನೆರಡು ವರ್ಷಕ್ಕೊಮ್ಮೆ ಅರಳುವ ನೀಲಕುರಿಂಜಿ ಹೂವು ಕೇರಳದ ಮುನ್ನಾರ್, ಕರ್ನಾಟಕದ ಬಾಬಾಬುಡನಗಿರಿ, ತಮಿಳುನಾಡಿನ ಕೊಡೈಕೆನಾಲ್‍ ಶ್ರೇಣಿಗಳಲ್ಲಿ ಮಾತ್ರ ಕಾಣಸಿಗುವುದು. ಇದನ್ನು ನೋಡುವ ಭಾಗ್ಯ ಎಲ್ಲಾ ವನ್ಯಜೀವಿ ಆಸಕ್ತರಿಗೂ ದೊರಕಲಿ. ಇಡೀ ಬೆಟ್ಟ ಶ್ರೇಣಿಯೇ ಹೂಗಳ ಪ್ರಭಾವದಿಂದ ನೀಲಿಯಾಗಿ ಕಾಣುತ್ತೆ. ಅದ್ಭುತವಾದ ದೃಶ್ಯ!ಕೇರಳದ ಕಾಡುಗಳನ್ನಲೆಯುವವರು ಲಯನ್ ಟೇಯ್ಲ್ಶ್ ಮೆಕಾಕ್ - Macaca silenus ನೋಡಲು ಹವಣಿಸುತ್ತಿರುತ್ತಾರೆ. ಕಣ್ಣು ಚುರುಕಾಗಿರಲಿ.ಪಕ್ಷಿ ವೀಕ್ಷಣಾಕಾರರು Rufous Babbler Turdoides subrufaಗಾಗಿ ತಮ್ಮ ಬೈನಾಕ್ಯುಲರುಗಳನ್ನು ತಿರುಗಿಸುತ್ತಿರುತ್ತಾರೆ. ದರ್ಶನ ಪ್ರಾಪ್ತಿರಸ್ತು.ತಮಿಳುನಾಡು

ಮೇಲೆ ಹೇಳಿದಂತೆ ತಮಿಳುನಾಡಿನ ಕೊಡೈಕೆನಾಲ್‍ನಲ್ಲೂ ನೀಲಕುರಿಂಜಿ ನೋಡಬಹುದು - ಹನ್ನೆರಡು ವರ್ಷಕ್ಕೊಮ್ಮೆ - ಮಳೆಗಾಲದಲ್ಲಿ. ಇಲ್ಲಿನ ನೀಲಗಿರಿಗೆ ಹೋದರೆಂದರೆ ಮುಗಿಯಿತು, ವನ್ಯಲೋಕವು ನಾಕವಾದಂತೆ. ನೀಲ್‍ಗಿರಿ ತಾಹ್ರ್, ನೀಲ್‍ಗಿರಿ ಪಿಪಿಟ್, ನೀಲ್‍ಗಿರಿ ಲಾಫಿಂಗ್ ಥ್ರಷ್ - ಹೀಗೆ ಹತ್ತು ಹಲವಾರು ಕೇವಲ ಇಲ್ಲಿ ಮಾತ್ರ ಕಾಣಸಿಗುವ ಪ್ರಾಣಿಪಕ್ಷಿಗಳು ವಾಸಿಸುತ್ತವೆ. ಪಯಣಿಗರು ಸುಮಾರು ಒಂದು ತಿಂಗಳು ಇಲ್ಲಿ ಬಿಡಾರ ಹೂಡಬಹುದು. ಊಟಿಯ ಜನಸಂದಣಿಯಿಂದ ಹೊರಬಂದು ಅರಣ್ಯದೊಳಕ್ಕೆ ನುಗ್ಗಿ ಮದುಮಲೈ ಶ್ರೇಣಿಯೊಡನೆ ಇವೆಲ್ಲವನ್ನೂ ನೋಡಲೇ ಬೇಕು. ಜೊತೆಗೆ ಬಂಡೀಪುರ - ಮದುಮಲೈ ಆನೆಗಳು ಅಲ್ಲಲ್ಲಿ ಕಾಣಿಸುತ್ತಲೇ ಇರುತ್ತೆ.ಮಹಾರಾಷ್ಟ್ರ

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿಲ್ಲದ್ದು ಮಹಾರಾಷ್ಟ್ರದಲ್ಲಿ ಅಂಥದ್ದೇನೂ ಇಲ್ಲ. ಅಲ್ಪ ಸ್ವಲ್ಪ ಕಾಡು ಉಳಿದುಕೊಂಡಿದೆ. ಆದರೆ, ಮುಂಬಯಿಯ ಬಿ.ಎನ್.ಹೆಚ್.ಎಸ್. ಗೆ ಒಮ್ಮೆ ಭೇಟಿ ಕೊಟ್ಟರೆ ಇಡೀ ದೇಶದ ವನ್ಯಜೀವದ ಬಗ್ಗೆ ಸಾಕಷ್ಟು ವಿಷಯಗಳು ದೊರಕೀತು.

ಆಂಧ್ರಪ್ರದೇಶ

ಹಿಂದಿ ಚಿತ್ರನಟನೊಬ್ಬನು ಕೊಂದು ತಿಂದ black buck ಜಿಂಕೆಯು ಆಂಧ್ರದಲ್ಲಿ ಒಂದು ಕಾಲದಲ್ಲಿ ಬಹಳ ಹೇರಳವಾಗಿತ್ತು. ಈಗ ಈ ಪ್ರಾಣಿ endangered ಆಗಿದೆ.ಇನ್ನೂ ಎರಡು ಆಂಧ್ರಪ್ರದೇಶದ ವಿಶೇಷ ವನ್ಯಜೀವಿಗಳೆಂದರೆ

--> ಈ ಕೆಳಗಿರುವ ಹಕ್ಕಿ ಜರ್ಡನ್ಸ್ ಕೋರ್ಸರ್ - Rhinoptilus bitorquatus (ಈ ಹಕ್ಕಿಯನ್ನು ಮೊದಲು ಸಂಶೋಧಿಸಿದ ವಿಜ್ಞಾನಿಯ ಹೆಸರಿನ ಆಧಾರ). ಪ್ರಪಂಚದ ಐವತ್ತು ಅತಿ ಅಪರೂಪದ ಹಕ್ಕಿಗಳಲ್ಲೊಂದು ಎಂದು World Wide Fund For Nature (WWF) ಘೋಷಿಸಿದೆ.--> ಪಿಳಪಿಳನೆ ಕಣ್ಣು ಬಿಡುತ್ತಾ ಇರುವ ಈ ಅಪರೂಪದ ಪ್ರಾಣಿ - ಸ್ಲೆಂಡರ್ ಲೋರಿಸ್ Loris lydekkerianus lydekkerianus - ದಕ್ಷಿಣ ಭಾರತದಲ್ಲಿರುವ ವಿಶೇಷ ಪ್ರಾಣಿಗಳಲ್ಲೊಂದು. ವಾಸ್ತವವಾಗಿ ಇದರ ಸಾಮಾನ್ಯ ಹೆಸರು, ಮೈಸೂರ್ ಸ್ಲೆಂಡರ್ ಲೋರಿಸ್ ಅಂತ. ಆದರೆ ಇಡೀ ಕರ್ನಾಟಕ ರಾಜ್ಯದಲ್ಲಿ ಇದು ಅಳಿದು ಹೋಗಿದೆ. ಉಳಿದಿರುವುದು ಆಂಧ್ರದಲ್ಲಿ ಮಾತ್ರ.ಒರಿಸ್ಸಾದಿಂದ ಮೇಲಿನ ರಾಜ್ಯಗಳಿಗೆ ಮುಂದಿನ ವಾರದಲ್ಲಿ ಪಯಣ ಮಾಡೋಣ. ಒಟ್ಟಿಗೇ ಆಲ್ ಇಂಡಿಯಾ ಟೂರ್ ಮಾಡಿಬಿಟ್ಟರೆ ಒಳ್ಳೇ ಐ.ಟಿ.ಡಿ.ಸಿ. ಪ್ಯಾಕೇಜ್ ಟೂರ್ ಥರ ಆಗಿಬಿಡುತ್ತೆ. ಸುಸ್ತಾಗಿಬಿಡುತ್ತೆ.

ಮೇಲೆ ಹೆಸರಿಸಿದ ಪ್ರಾಣಿ-ಪಕ್ಷಿಗಳೆಲ್ಲವೂ ಮನುಷ್ಯನಿಂದ ತೊಂದರೆಗೊಳಪಟ್ಟಿದೆ. ನಾಶದ ಅಂಚಿನಲ್ಲಿದೆ. ಲೋರಿಸ್‍ನಂಥಾ ಪ್ರಾಣಿಗಳು ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಮನುಷ್ಯ ಇದನ್ನು ರಕ್ಷಿಸಿದರೆ ಸಾಲದು. ಇವುಗಳಿಗೆ ಉನ್ನತ ಜೀವಿಗಳಾದ ಮನುಷ್ಯರಿಂದ ಪ್ರೀತಿಯ ಅವಶ್ಯವಿದೆ. ವನ್ಯಜೀವಿಗಳನ್ನು ರಕ್ಷಿಸುವುದು ಮಾತ್ರ ನಮ್ಮ ಕರ್ತವ್ಯವಲ್ಲ, ಅದಕ್ಕಿಂತ ದೊಡ್ಡದು ಅವನ್ನು ಪ್ರೀತಿಸುವುದು. ಪ್ರೀತಿಯು ಕರ್ತವ್ಯವಲ್ಲ, ಅದು ಹೃದಯಕ್ಕೆ ತಿಳಿಯಬೇಕಷ್ಟೆ. ಪ್ರೀತಿಸಿದರೆ, ನಂತರ ಕರ್ತವ್ಯವು ತಾನಾಗಿ ತಾನೇ ನಡೆದುಕೊಂಡು ಹೋಗುತ್ತೆ. ವನ್ಯಜೀವಿಗಳನ್ನು ಪ್ರೀತಿಸೋಣ!-ಅ
03.10.2008
11.30PM

Wednesday, October 01, 2008

ಮಹಾತ್ಮ ಉವಾಚ...
ಭೂಮಿಯು ಪ್ರತಿಯೊಬ್ಬನ ಅವಶ್ಯಕತೆಯನ್ನು ಪೂರೈಸಲು ಬೇಕಾದ್ದೆಲ್ಲವನ್ನೂ ಕೊಡುತ್ತೆ, ಆದರೆ ಪ್ರತಿಯೊಬ್ಬನ ಆಸೆಗಳನ್ನು ಪೂರೈಸುವುದಕ್ಕಲ್ಲ.. -ಮಹಾತ್ಮ ಗಾಂಧಿEarth provides enough to satisfy every man's need, but not every man's greed."
- Mahatma Gandhi.

ಗಾಂಧಿ ಜಯಂತಿಯಂದು ಆ ಮಹಾತ್ಮನಿಗೊಂದು ಪ್ರಣಾಮ.

-ಅ
01.10.2008

ಒಂದಷ್ಟು ಚಿತ್ರಗಳು..