Tuesday, September 23, 2008

Wednesday, September 17, 2008

ಗಿಡ - ಹುಳು

ಕೀಟಗಳು ಸಸ್ಯಾಹಾರಿಗಳಾಗಿರುವುದು ಸರ್ವೇಸಾಮಾನ್ಯ ಸಂಗತಿ. ಆದರೆ ಕೆಲವು ಸಸ್ಯಗಳು ಕೀಟಾಹಾರಿಯೆಂಬುದು ಬಹಳ ದೊಡ್ಡ ವಿಶೇಷ. ಈ ಕೀಟಾಹಾರಿ ಗಿಡಗಳ ಬಗ್ಗೆ ಒಂದು ಸಣ್ಣ ಪಕ್ಷಿನೋಟವೇ ಈ ಲೇಖನದ ಪ್ರಯತ್ನ.ವಾಸ್ತವದಲ್ಲಿ ಈ ಗಿಡಗಳು ಕೀಟಗಳನ್ನು ತಿನ್ನುವುದಿಲ್ಲ, ಬದಲಿಗೆ ಅವುಗಳ ದೇಹದಲ್ಲಿನ ಸತ್ವಗಳನ್ನು (nutrients) ಹೀರಿಕೊಂಡು ದೇಹವನ್ನು ಹೊರಗೆ ಹಾಕಿ ಗೊಬ್ಬರವನ್ನಾಗಿಸಿಕೊಂಡುಬಿಡುತ್ತವೆ. ಅನೇಕ ಬಗೆಯ ಕೀಟಾಹಾರಿ ಗಿಡಗಳ ಸಂಕುಲಗಳು ಇವೆಯಾದರೂ ಡ್ರೋಸೆರಾ, ಪಿಚರ್ ಪ್ಲಾಂಟ್ ಮತ್ತು ವೀನಸ್ ಫ್ಲೈ ಟ್ರ್ಯಾಪ್ ಬಹಳ ಪ್ರಮುಖವಾದುವು. ಎಲ್ಲಾ ಪಠ್ಯಪುಸ್ತಕಗಳಲ್ಲೂ ಈ ಮೂರು ಗಿಡಗಳ ಬಗ್ಗೆ ಉಲ್ಲೇಖವಿದ್ದೇ ಇರುತ್ತೆ.

ಇವುಗಳ ಕಿರುಪರಿಚಯ ಮಾಡಿಕೊಳ್ಳೋಣ. ನಂತರ ಇನ್ನೊಂದು ವಿಶೇಷ ಕೀಟಾಹಾರಿ ಗಿಡವನ್ನು ಭೇಟಿಯಾಗೋಣ.ಡ್ರಾಸೆರಾ - Drosera rotundifolia - ಬೆಳೆಯುವ ಪ್ರದೇಶಗಳಲ್ಲಿ ಮಣ್ಣಿನ ನೈಟ್ರೇಟ್ ಸತ್ವವು ತೀರಾ ಕಡಿಮೆಯಿರುತ್ತೆ, ಹಾಗಾಗಿ, ಅವು ಹುಳುಗಳನ್ನು ಅವಲಂಬಿಸುತ್ತವೆ. ಹುಳುಗಳಲ್ಲಿನ ನೈಟ್ರೇಟುಗಳನ್ನು ಹೀರಿಕೊಳ್ಳಲು ಅವುಗಳ ಸಂಹಾರ ಮಾಡುತ್ತವೆ. ಡ್ರಾಸೆರಾ ಗಿಡವು ಬಣ್ಣಬಣ್ಣದಿಂದ ಕೂಡಿದ್ದು, ಗಿಡದಿಂದ ಹೊರಹೊಮ್ಮುವ ದ್ರವವು ಬಹಳ ಸಿಹಿಯಾಗಿರುತ್ತೆ. ಹುಳುವೊಂದು ಇದರ ಬಲೆಗೆ ಬೀಳುವುದು ಅಷ್ಟು ಕಷ್ಟದ ವಿಷಯವೇನಲ್ಲ.ಪಿಚರ್ ಪ್ಲಾಂಟ್ - Nepenthes distillatoria - ಅಷ್ಟೇನು ಭಿನ್ನವಲ್ಲ. ಸಾರಜನಕಕ್ಕಾಗಿಯೇ ಇಲ್ಲೂ ಹೋರಾಟ, ಇಲ್ಲೂ ಹುಳುವಧೆ. ಆದರೆ, ಇದು ಡ್ರಾಸೆರಾಗಿಂತ ಸ್ವಲ್ಪ ಬುದ್ಧಿವಂತ. ಇದರ ಎಲೆಗಳು ಬಟ್ಟಲಿನ ಹಾಗಿದ್ದು, ಮಳೆಯ ನೀರನ್ನು ಶೇಖರಿಸಿಕೊಳ್ಳುತ್ತೆ. ನಂತರ ಡ್ರಾಸೆರಾದಂತೆಯೇ ಸಿಹಿದ್ರವವೊಂದನ್ನು ಉತ್ಪತ್ತಿ ಮಾಡುತ್ತೆ. ಇದರ ಘಮವು ಹುಳುಗಳನ್ನು ಆಕರ್ಶಿಸುತ್ತೆ. ಗುಳುಂ ಸ್ವಾಹಾ!!ವೀನಸ್ ಫ್ಲೈ ಟ್ರ್ಯಾಪ್ - Dionaea muscipula - ಇದು ಸ್ವಲ್ಪ ಹೆಚ್ಚು ಹೊಟ್ಟೆಬಾಕ ಗಿಡವೆಂದೇ ಹೇಳಬಹುದು. ಬರೀ ಹುಳುಗಳು ಮಾತ್ರವಲ್ಲ, ಸಣ್ಣ ಸಣ್ಣ ಚೇಳುಗಳನ್ನೂ ನುಂಗಿಬಿಡಬಲ್ಲ ಸಾಮರ್ಥ್ಯ ಹೊಂದಿದೆ. ಕಾರಣವು ಅದೇ ಹಳೆಯದೇ, ಸಾರಜನಕದ ಕೊರತೆ! ಆದರೆ ಇದರ ವಿಶೇಷತೆಯೆಂದರೆ, ಹುಳು ಬಂದು ಕುಳಿತ ತಕ್ಷಣವೇ ತೆರೆದ ತಟ್ಟೆಗಳು ಮುಚ್ಚಿಕೊಂಡುಬಿಡುತ್ತೆ. ಇದಕ್ಕೆ ಮಿದುಳಾಗಲೀ, ನರಗಳಾಗಲೀ ಇಲ್ಲವಾದರೂ ಇದಕ್ಕೆ ಈ 'ಬುದ್ಧಿವಂತಿಕೆ' ಹೇಗೆ ಬಂದಿದೆಯೆಂಬುದು ಇನ್ನೂ ಬಗೆಹರಿಯದ ಪ್ರಶ್ನೆ.

ಪ್ರಕೃತಿಯು ತನ್ನ ಎಲ್ಲ ರಚನೆಗಳನ್ನೂ ಮನುಷ್ಯನಿಗೆ ಅಷ್ಟು ಸುಲಭವಾಗಿ ತಿಳಿಸುವುದಿಲ್ಲ. ಮನುಷ್ಯ ಪ್ರಕೃತಿಯ ಒಂದು ಅಂಗವಷ್ಟೆ. ಅಂತೆಯೇ ಉಳಿದ ಜೀವಿಗಳೂ ಕೂಡ. ಪ್ರಕೃತಿಯು ಸರ್ವೋಚ್ಚ. Nature is the boss!

ಪಿಂಗ್ವಿಕ್ಯೂಲ - Pinguicula primuliflora - ಎಂಬ ಇನ್ನೊಂದು ಕುತೂಹಲಕಾರಿ ಕೀಟಾಹಾರಿಯ ಬೇಟೆಯ ಸ್ಲೈಡ್ ಶೋ ಈ ಕೆಳಗೆ ಇದೆ!-ಅ
19.09.2008
2AM

Friday, September 12, 2008

ನೂರನೆಯದು..

ಕ್ಷಿತಿಜದೆಡೆಗೆಗಿನ ಪಯಣದಲ್ಲಿ ಇದು ನೂರನೆಯ ಪೋಸ್ಟ್..

ಏಕಕೋಶ ಜೀವಿ ಆಲ್ಗೇ ಇಂದ ತಿಮಿಂಗಿಲದ ವರೆಗೂ ಒಂದಷ್ಟು ಜೀವಿಗಳನ್ನು ಕರೆತಂದು ಒಂದು ಆಹಾರ ಬಲೆ (Food Web) ಯನ್ನು ಇಲ್ಲಿ ಸ್ಲೈಡ್ ಶೋ ಮಾಡಿದ್ದೇನೆ.ಪ್ರಕೃತಿಗಿಂತ ಹಿರಿದಾದುದು, ಚೆಲುವಾದುದು ಇನ್ಯಾವುದೂ ಇಲ್ಲವೆಂಬ ಮಾತು ಎಷ್ಟು ಸತ್ಯವಲ್ಲವೇ?

-ಅ
12.09.2008
11.14PM

Tuesday, September 09, 2008

ಹೋದವರು ಮತ್ತೆ ಬರಲಾರರು - ೨

ಭಾರತದಲ್ಲಿ ಚೀತಾಹ್ ಹೋಗಿರುವುದರ ಬಗ್ಗೆ ಅರಿತುಕೊಂಡಿದ್ದಾಯಿತು.

ಚಿರತೆಯಂತೆಯೇ ಮಾಯವಾಗಿರುವ, ಹತವಾಗಿರುವ, ನಿರ್ಣಾಮವಾಗಿರುವ, ನಾಶವಾಗಿರುವ ಇನ್ನೂ ಅನೇಕ ಜೀವಸಂಕುಲಗಳನ್ನು ಪರಿಚಯ ಮಾಡಿಕೊಳ್ಳುವುದೇ ಈ ಸರಣಿಯ ಉದ್ದಿಶ್ಯ.

ಇವತ್ತಿನ ನಮ್ಮ ಗತಕಾಲದ ಅತಿಥಿ - ಗೇಂಡಾಮೃಗ.ಇದೇನು, ಮೈಸೂರು ಮೃಗಾಲಯದಲ್ಲೇ ಮೊನ್‍ಮೊನ್ನೆ ನೋಡಿದ್ದೇನಲ್ಲಾ ಎಂದೆನಿಸಬಹುದು. ಅದು ಬೇರೆಯದೇ ಸಂಕುಲ. ಇಲ್ಲಿ ಹೇಳ ಹೊರಟಿರುವ ಗೇಂಡಾಮೃಗದ ಪೂರ್ಣ ಹೆಸರು ಸುಮಾತ್ರದ ಗೇಂಡಾಮೃಗ - Dicerorhinus sumatrensis. (ಕೆಲವು ಪ್ರಾಣಿಗಳನ್ನು ತಮ್ಮ ತಾಯ್ನಾಡಿನಿಂದ ಗುರುತಿಸುತ್ತೇವೆ. ಮನುಷ್ಯರನ್ನೂ ಗುರುತಿಸುವುದಿಲ್ಲವೇ, 'ಮೈಸೂರು ಅನಂತಸ್ವಾಮಿ', 'ಬಾಂಬೆ ಸಿಸ್ಟರ್ಸ್' - ಹಾಗೆ!)
ಪ್ರಾಣಿಗಳ ಹೆಸರಿನಿಂದ ಗೊಂದಲಕ್ಕೀಡಾಗುವವರು ಅದರ 'ಸಾಮಾನ್ಯ' ಹೆಸರನ್ನು ತಿಳಿದುಕೊಳ್ಳುವುದಕ್ಕಿಂತ ವೈಜ್ಞಾನಿಕ ಹೆಸರನ್ನು ಅರಿತುಕೊಂಡರೆ ಎಲ್ಲಾ ಸಮಸ್ಯೆಯೂ ಪರಿಹಾರವಾದಂತೆ. ಯಾವ ಕನ್ಫ್ಯೂಷನ್ನೂ ಇರುವುದಿಲ್ಲ. ಅದಕ್ಕಾಗಿಯೇ ಎಲ್ಲಾ ಪ್ರಾಣಿಗಳ ಪಕ್ಕದಲ್ಲಿ ಅದರ ವೈಜ್ಞಾನಿಕ ಹೆಸರನ್ನೂ ಸೊಟ್ಟಸೊಟ್ಟಗೆ (italics) ಹೆಸರಿಸುವ ಕಾನೂನಿನ ಪ್ರಕಾರ ಬರೆದಿರುತ್ತೇನೆ.

ಇದರ ಹೆಸರನ್ನು ಗಮನಿಸಿದರೆ ಅರ್ಥವಾಗುವುದಿಷ್ಟೆ. ಇದು ಇಂಡೊನೇಷಿಯಾದ ಸುಮಾತ್ರದಲ್ಲಿ ಜನಿಸಿದ ಪ್ರಾಣಿ, ಇದಕ್ಕೆ ಎರಡು ಕೊಂಬುಗಳಿವೆ (ಕೊಂಬುಗಳಿತ್ತು) ಎಂದು. ವಲಸೆ ಬಂದು ಭಾರತದಲ್ಲಿ ಯಾವುದೋ ತಾತರಾಯನ ಕಾಲದಲ್ಲಿ ನೆಲೆಸಿತ್ತು. ಸುಮಾತ್ರದ ದಟ್ಟ ಅರಣ್ಯ ಶ್ರೇಣಿ ಎತ್ತೆತ್ತ ಹರಡಿತ್ತೋ ಅಲ್ಲೆಲ್ಲಾ ಪ್ರಯಾಣ ಬೆಳೆಸಿ ಬೀಡು ಬಿಟ್ಟಿತ್ತು. ಮಲೇಷಿಯಾ, ಥಾಯ್ಲೆಂಡ್, ವಿಯಟ್ನಮ್, ಕಾಂಬೋಡಿಯಾ, ಮಯನ್ಮಾರ್, ಬಾಂಗ್ಲಾದೇಶ, ಮತ್ತು ನಮ್ಮ ಅಸ್ಸಾಮ್. (ಅಸ್ಸಾಮ್ ಎಂಬುದನ್ನು ಅಸ್ಸಾಮಿಗಳು ಅಹೋಮ್ ಎಂದು ಉಚ್ಚರಿಸುತ್ತಾರೆ). ಆನೆಗಳಂತೆ ಇದು ದೊಡ್ಡ ಅಲೆಮಾರಿ.
ಎರಡು ಕೊಂಬುಗಳಿರುವ ಗೇಂಡಾಮೃಗವು ಆಫ್ರಿಕಾದಲ್ಲಿ ಸಾಮಾನ್ಯವಾಗಿದ್ದರೂ ಏಶಿಯಾದಲ್ಲಿ ಅಪರೂಪವಾಗಿತ್ತು. ಸಂಪೂರ್ಣವಾಗಿ ಸತ್ತು ಹೋಗಿತ್ತೆಂದು ನಂಬಿದ್ದೆವು. ಅವಸಾನವಾಗಿದೆಯೆಂದು ನಂಬಿದ ನಲವತ್ತು ವರ್ಷದ ನಂತರ, ಎಂಭತ್ತೇಳರಲ್ಲಿ, ಮಲೇಷಿಯಾದಲ್ಲಿ ಕಾಣಿಸಿಕೊಂಡಿತು. ಈಗ ಅಲ್ಲಿ ಇನ್ನೂರೈವತ್ತು ಗೇಂಡಾಮೃಗಗಳಿವೆಯೆನ್ನುತ್ತಾರೆ. ಆದರೆ ಈ ಸಂಕುಲವೇ ಬೇರೆ. ಇದರ ಹೆಸರು - Dicerorhinus sumatrensis sumatrensis . ಬಾರ್ನಿಯಾದಲ್ಲಿ ಹಿಂದೆ ರಾಜ್ಯವನ್ನಾಳುವ ಅರಸನಂತೆ ಮೆರೆದ ಗೇಂಡಾಮೃಗಗಳು ಈಗ ಕೇವಲ ಐವತ್ತಿವೆ ಅಷ್ಟೆ. ಇದು ಇನ್ನೊಂದು ಸಂಕುಲ. ಇದರ ಹೆಸರೇ ಬೇರೆ. Dicerorhinus sumatrensis harrissoni.ಆದರೆ ದುರಂತದ ಕಥೆಯೆಂದರೆ ಅಂದು ಭಾರತದ ಅಸ್ಸಾಮಿನ ಅರಣ್ಯಗಳಲ್ಲಿ ಹೇರಳವಾಗಿದ್ದ ಗೇಂಡಾಮೃಗಗಳ ಸಂಖ್ಯೆ ಇಂದು ಶೂನ್ಯವಾಗಿಬಿಟ್ಟಿದೆ.

ಒಂದು ಕುತೂಹಲ ಮಾಹಿತಿಯಷ್ಟೆ: ಗೇಂಡಾಮೃಗದ ಕೊಂಬು ವಾಸ್ತವವಾಗಿ ಕೊಂಬಲ್ಲ. ಅದು ಕೂದಲು, ಉಗುರುಗಳಲ್ಲಿರುವ ಕೆರಾಟಿನ್ ಎಂಬ ವಸ್ತುವಷ್ಟೆ.

-ಅ
09.09.2008
8.15PM

ಒಂದಷ್ಟು ಚಿತ್ರಗಳು..