Wednesday, August 27, 2008

ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ....ಜಿರಲೆ ಬಗ್ಗೆ ಮತ್ತೆ ಬರೆಯುವಂತಾಗಿದೆ. ಅದೇನೋ ಜಿರಲೆಯಷ್ಟು ವಿಶೇಷ ಜೀವಿ ಬೇರೊಂದಿಲ್ಲ ಎನ್ನಿಸುತ್ತೆ ನನಗೆ. ನಮಗಿರುವುದು ಎರಡೇ ಕಣ್ಣುಗಳು, ನೋಟವೊಂದೇ. ಒಂದೊಂದು ಕಣ್ಣಿಗೊಂದೊಂದೇ ಲೆನ್ಸು (ಮಸೂರ). ಆದರೆ ಈ ಯಕ್ಕಶ್ಚಿತ್ ಹುಳುವಿಗೆ ಒಂದೊಂದು ಕಣ್ಣಲ್ಲೂ ಎರಡು ಸಾವಿರಕ್ಕೂ ಹೆಚ್ಚು ಮಸೂರಗಳಿರುತ್ತವೆ. ಅದ್ಯಾಕೋ ನಾ ಕಾಣೆ. ಅದೂ ಸರಿ, ಕೇವಲ ಎರಡೇ ಲೆನ್ಸಿನಲ್ಲಿ ಹೇಗೆ ಕಾಣುವುದು!! ಜಿರಲೆಗಳ ಲೆನ್ಸುಗಳ ಸಮಸ್ಯೆಯೆಂದರೆ ಕೆಂಪು ದೀಪದಡಿ ಇರುವಾಗ ಜಿರಲೆಗಳು ಕುರುಡು! ಹಸಿರು ದೀಪದಡಿ ಜಿರಲೆಗಳು ಮಹಾನ್ ದೂರದೃಷ್ಟಿವಂತರು!ಜಿರಲೆ ಕಥೆ ಇದಾದರೆ, ಜೇಡದ್ದು ಒಂದು ಕೈ ಮೇಲೆ. ಮುವ್ವತ್ತು ಸಾವಿರ ಲೆನ್ಸುಗಳು!! ಆದರೆ ನಮ್ಮ ಹಾಗೆ ಎರಡೇ ಕಣ್ಣಲ್ಲ. ಬಹುತೇಕ ಜೇಡಗಳಿಗೆ ಎಂಟು ಕಣ್ಣುಗಳಿರುತ್ತವೆ! ತಲೆಯ ಮೇಲೆ, ಮುಖದ ಮುಂದೆ ಹೀಗೆ ಎಲ್ಲೆಲ್ಲೋ ಕಣ್ಣುಗಳಿದ್ದರೂ ಬಹಳ ಮಂದ ದೃಷ್ಟಿ. ಎದುರಿರುವ 'ವಸ್ತು'ವಿನ ಪ್ರಖರತೆಯು (light ಅಥವಾ dark) ಮಾತ್ರ ಗೊತ್ತಾಗುತ್ತೆ ಜೇಡಗಳಿಗೆ. ಅದಕ್ಕೇ ಬಲೆಯೊಳಗೆ ಏನು ಬಿದ್ದರೂ ಅದರ ಬಳಿ ಮೊದಲು ಓಡಿ ಬರುತ್ತೆ, ನಂತರ ಪ್ರಖರತೆ ಹೆಚ್ಚಾದರೆ ದೂರ ಹೋಗಿ ಬಲೆಯೆಲ್ಲಾ ಅಲ್ಲಾಡುವಂತೆ ಕುಣಿಯುತ್ತೆ, ಹಾಗಾದರೂ ಆ ವಸ್ತು ಕೆಳಗೆ ಬಿದ್ದು ಹೋಗಲಿ ಅಂತ. ಪ್ರಖರತೆ ಹೆಚ್ಚಾಗದಿದ್ದರೆ ಬಲೆಯಿಂದ ಹೆಣೆದು ಗುಳುಂ ಸ್ವಾಹ ಮಾಡಿಬಿಡುತ್ತೆ.
ನಾವು "ಆ ಮನುಷ್ಯನಿಗೆ ಹದ್ದಿನ ಕಣ್ಣು" ಎಂಬಂತಹ ವಾಕ್ಯಗಳನ್ನು ಉಪಯೋಗಿಸುವುದುಂಟು. ಅವನಿಗೇನೋ ಹದ್ದಿನ ಕಣ್ಣು, ಆದರೆ ಹದ್ದಿಗೆ ಎಂಥಾ ಕಣ್ಣು? ಮನುಷ್ಯನ ಕಣ್ಣುಗಳು ಒಂದು ವಸ್ತುವನ್ನು ಗುರುತಿಸಲು ಆ ವಸ್ತುವು ಎಷ್ಟು ದೂರದಲ್ಲಿರಬೇಕೋ ಅದಕ್ಕಿಂತ ಎರಡರಷ್ಟು ದೂರದಲ್ಲಿರುವ ಅದೇ ಗಾತ್ರದ ವಸ್ತುವನ್ನು ಗುರುತಿಸಬಲ್ಲ ಶಕ್ತಿ ಹದ್ದುಗಳಿಗಿವೆ. ಅರ್ಥಾತ್, ಮನುಷ್ಯನ ಲೆನ್ಸುಗಳಿಗಿರುವ ಶಕ್ತಿಗಿಂತ ದುಪ್ಪಟ್ಟು ಶಕ್ತಿ ಹದ್ದುಗಳ ಲೆನ್ಸುಗಳಿಗಿವೆ. ಇದನ್ನು Spacial Frequency ಅಂತ ಕರೆಯುತ್ತಾರೆ. ಫಾಲ್ಕನ್ - Falco sparverius ಎಂಬ ಒಂದು ಬಗೆಯ ಹದ್ದು ನಮಗಿಂತ 2.6ರಷ್ಟು ಹೆಚ್ಚಿನ SF ಹೊಂದಿದೆ. ಸಾರಾಂಶವೆಂದರೆ ಹದ್ದುಗಳು ನಾವು ಏನನ್ನು ನೋಡುತ್ತೇವೆಯೋ ಅದನ್ನು zoom ಮಾಡಿಕೊಂಡು clear format ಅಲ್ಲಿ ನೋಡುತ್ತವೆ.ನಾವು ಹದ್ದಿನ ಕಣ್ಣು ಎಂದು ಹೇಳುವಂತೆ ಇಂಗ್ಲಿಷಿನವರು ಗುರಿ ಚೆನ್ನಾಗಿದ್ದವರಿಗೆ "ಬುಲ್ಸ್ ಐ" ಎನ್ನುತ್ತಾರೆ. ಗೂಳಿ ಕಣ್ಣು ಎಂದು ತರ್ಜುಮೆ ಮಾಡಿದರೆ ಅಷ್ಟು ಚೆನ್ನಾಗಿರುವುದಿಲ್ಲವಾದರೂ ಅರ್ಥ ಒಂದೇ. ಗೂಳಿಯನ್ನು ಕೆಣಕಿದರೆ ಅಟ್ಟಿಕೊಂಡು ಬರುವಾಗ ಅದರ ನೋಟ ಎದುರು ಇರುವ ವೈರಿಯ ಪ್ರಖರವಾದ ಒಂದು ಭಾಗದ ಮೇಲಿರುತ್ತೆ. ಎದುರಿರುವ ವೈರಿಯ ಬಟ್ಟೆಯ ಮೇಲೋ, ಕೈಯ ಮೇಲೋ, ಕಾಲಿನ ಮೇಲೋ, ಅಥವಾ.. ಎಲ್ಲೋ. ಅದರ ಗುರಿ, ಆ 'ಭಾಗ'ವನ್ನು ಗುದ್ದುವ ತನಕ ಬದಲಾಗುವುದಿಲ್ಲ. ನೇರ ನೋಟ. ಅದನ್ನೇ ನೋಡುತ್ತಲೇ, ಧಾವಿಸುತ್ತೆ. ಚಂಚಲಗೊಳ್ಳುವುದಿಲ್ಲ.

ಸಂಜೆಯ ಮಸುಕು ಮಸುಕು ಕತ್ತಲಲ್ಲದ ಬೆಳಕಿನಲ್ಲಿ, ಬೆಳಕಲ್ಲದ ಕತ್ತಲಿನಲ್ಲಿ ಮೊಬೈಲ್ ಫೋನು ಕಳೆದು ಹೋದಾಗ ಅದನ್ನು ಹುಡುಕಬೇಕೆಂದರೆ ಮನೆಯಲ್ಲಿ ಒಂದು ಬೆಕ್ಕು ಸಾಕಿಕೊಳ್ಳಬೇಕು. ನಮಗೆ ಎಷ್ಟು ಬೆಳಕು ಬೇಕೋ, ಅದರ ಎರಡರಷ್ಟು ಕಡಿಮೆ ಬೆಳಕಿನಲ್ಲಿ ಸ್ಪಷ್ಟವಾಗಿ ನೋಡಬಲ್ಲುದು ಬೆಕ್ಕು. ಬೆಕ್ಕಿನ ಕಣ್ಣು ಚೆಲುವಿಗೂ ಹೆಸರುವಾಸಿ. ಇದಕ್ಕೆ ಕಾರಣ ಹಲವು. ಬೆಕ್ಕುಗಳು ಪ್ರೀತಿ ವಾತ್ಸಲ್ಯವನ್ನು ವ್ಯಕ್ತ ಪಡಿಸುವುದು ಕಣ್ಣುಗಳಿಂದ, ನಾಯಿಗಳು ಬಾಲದಲ್ಲಿ ವ್ಯಕ್ತ ಪಡಿಸುವಂತೆ. ದುರುಗುಟ್ಟಿ ನೋಡಿ, ಕಣ್ಣು ಮಿಟುಕಿಸಿದರೆ ಆ ಬೆಕ್ಕು ತನ್ನ ಪ್ರೀತಿಯನ್ನು ತೋರಿಕೊಳ್ಳುತ್ತಿದೆಯೆಂದರ್ಥ. ಪ್ರತಿಯೊಂದು ಪ್ರಾಣಿಗೂ body language ಇರುತ್ತೆ. ಕೋಪಗೊಂಡಾಗ ಹೇಗಿರುತ್ತೆ, ಶಾಂತವಾದಾಗ ಹೇಗಿರುತ್ತೆ ಇತ್ಯಾದಿ - ಇರುವೆಗೂ ಕೂಡ! ಪ್ರಾಣಿಗಳ ಜೊತೆ ಇರುವವರು ಇದನ್ನು ಗಮನಿಸುತ್ತಲೇ ಇರುತ್ತಾರೆ. ಬೆಕ್ಕುಗಳಿಗೆ ದೂರದ ವಸ್ತುಗಳು ಚೆನ್ನಾಗಿ ಅದ್ಭುತವಾಗಿ ಕಂಡರೂ, ಕತ್ತಲಲ್ಲಿ ಏನೇನೇಲ್ಲಾ ಸಾಧಿಸಿದರೂ ಹತ್ತಿರದ ವಸ್ತುಗಳು ಮಂಜು ಮಂಜಾಗಿಬಿಡುತ್ತವೆ. ಮತ್ತೊಂದು ಅಚ್ಚರಿಯೆಂದರೆ ತನ್ನ ಮೂಗಿನ ನೇರಕ್ಕೆ ಬೆಕ್ಕು ಎಂದೂ ನೋಡಲಾಗದು!ನಮ್ಮ ಹಿರಿಯ ಕವಿಗಳು ಕಣ್ಣನ್ನು ಕಮಲಕ್ಕೆ ಹೋಲಿಸಿರುವುದು ಯಾಕೆ ಅಂತ ನನಗೆ ಇನ್ನೂ ಅರ್ಥ ಆಗಿಲ್ಲ. ಆದರೆ ಕವಿಗಳ ಪ್ರಕೃತಿಪ್ರೇಮವನ್ನು ಮೆಚ್ಚಬೇಕು. ಅದೇ ರೀತಿ ಮನುಷ್ಯ ಹೆಂಗಸಿನ ಕಣ್ಣನ್ನು "ಮೀನಾಕ್ಷಿ" ಎಂದೂ ಬಳಸಿಕೊಂಡಿದ್ದಾರೆ. ಗಂಡಸಿಗೆ ಮೀನಾಕ್ಷಿ ಇರುವುದಿಲ್ಲವೇನೋ ಪಾಪ, ಬೆಸ್ತಾಕ್ಷಿ ಅನ್ನಬಹುದೇನೋ ಗಂಡಸಿನ ಕಣ್ಣನ್ನು. ಮೀನಿನ ಕಣ್ಣು ಯಾಕೆ ಅಷ್ಟು ಪ್ರಸಿದ್ಧಿ ಪಡೆಯಿತು? ಕಣ್ಣು ತುಂಬಾ ಚಂಚಲವಾಗಿದ್ದರೆ ಅದನ್ನು ಸೌಂದರ್ಯ ಅನ್ನುತ್ತಾರೆ ಕವಿಗಳು. ಆದರೆ ಮನಸ್‍ಶಾಸ್ತ್ರಜ್ಞರು ಚಂಚಲ ಕಣ್ಣುಗಳಿರುವವರು ಸುಳ್ಳು ಹೇಳುವುದು ಜಾಸ್ತಿ ಎನ್ನುತ್ತಾರೆ. ಸೌಂದರ್ಯ ಮತ್ತು ಸುಳ್ಳು ಜೊತೆಜೊತೆಗೆ ಇರುತ್ತೆ ಅನ್ನಿಸುತ್ತೆ. ಮೀನುಗಳು ದೇವತೆಗಳಂತೆ ಅನಿಮಿಷಗಳು, ಅಂದರೆ ರೆಪ್ಪೆಗಳಿಲ್ಲದ ಜೀವಿಗಳು. ಬಹುಶಃ ದೇವತೆಗಳಿಗೆ ರೆಪ್ಪೆಯಿಲ್ಲ ಎನ್ನುವ ಕಲ್ಪನೆ ಕವಿಗಳಿಗೆ ಬಂದಿದ್ದು ಮೀನುಗಳನ್ನು ನೋಡಿದ ಮೇಲೆಯೇ ಅನ್ನಿಸುತ್ತೆ. ಪಾಪ, ಕಣ್ಣು ಬಿಟ್ಟುಕೊಂಡೇ ನಿದ್ದೆ ಮಾಡಬೇಕು ಮೀನುಗಳು!
ಇದು ಪುಫರ್‍ ಫಿಷ್ ಎಂಬ ಮೀನಿನ ಕಣ್ಣು


ಮೀನಿನ ಕಣ್ಣುಗಳಂತೆಯೇ ಜಿಂಕೆಯ ಕಣ್ಣುಗಳೂ ಸಹ ಬಹಳ ಪ್ರಸಿದ್ಧ. ಜಿಂಕೆಗೆ ಅಂಥಾ ದೂರದೃಷ್ಟಿಯಾಗಲೀ, ಚುರುಕು ಕಣ್ಣುಗಳಾಗಲೀ ಇಲ್ಲ. ಹೊಳೆಯುವ ಚಂಚಲ ಕಣ್ಣುಗಳಿವೆ. ಬಹುಶಃ ಹೆಂಗಸನ್ನು ವ್ಯಂಗ್ಯ ಮಾಡಲು ಜಿಂಕೆಯ ಕಣ್ಣವಳೇ ಎಂದು ಹೇಳಿದರೆನಿಸುತ್ತೆ ಹಿಂದಿನ ಗಂಡು ಕವಿಗಳು.


ಜಿಂಕೆ ಮೀನುಗಳ ಕಣ್ಣುಗಳ ಚೆಲುವಿಗಿಂತ ಸೊಗಸಾಗಿರುವುದು ಗೋಸುಂಬೆ (Chameleon) ಕಣ್ಣು! ಎರಡು ಕಣ್ಣು - ಎರಡು ನೋಟ!! ಎಡಗಣ್ಣು ಎಡಗಡೆ, ಬಲಗಣ್ಣು ಬಲಗಡೆ ತಿರುಗಿಸಿ, ಎರಡು ಭಿನ್ನ ನೋಟಗಳನ್ನು ಗ್ರಹಿಸಬಹುದಾದ ಶಕ್ತಿ ಗೋಸುಂಬೆಗಿದೆ. ಆದರೆ ಬೇಟೆಯ ಸಮಯದಲ್ಲಿ ಮಾತ್ರ ಈ ಎರಡೂ ಕಣ್ಣುಗಳು ಒಂದೇ ದಿಕ್ಕಿನಲ್ಲಿ ನೋಡುತ್ತಿರುತ್ತೆ.
ಕಣ್ಣುಗಳಿದ್ದು ಇಷ್ಟೆಲ್ಲಾ ಆಟಗಳಾಡುವ ಈ ಎಲ್ಲ ಜೀವಿಗಳಿಗಿಂತ ಕಣ್ಣೇ ಇಲ್ಲದೆ ಸಾಧಿಸುವ ಒಂದು ಪ್ರಾಣಿಗೆ ತಲೆಬಾಗುತ್ತವೆ. ಮನುಷ್ಯ ಕೂಡ ಇದನ್ನು ಕಂಡರೆ ಮೈಲಿ ದೂರ ಓಡುತ್ತಾನೆ. ಇದು ಕಣ್ಣಿಂದ ನೋಡಲು ಸಾಧ್ಯವೇ ಇಲ್ಲ, ಕಣ್ಣುಗಳೆಂಬ ಆಕೃತಿಗಳೇ ಇಲ್ಲ ಇದಕ್ಕೆ. ಇದು ಕೇವಲ ಉಷ್ಣವನ್ನು ಗ್ರಹಿಸಿ ಆಕ್ರಮಣ ಮಾಡುವ ಪ್ರಾಣಿ. ಇದರ ಹೆಸರು ಜಿಗಣೆ!

ಆದರೂ ನಮ್ಮ ಕಣ್ಣುಗಳು ಪುಣ್ಯ ಮಾಡಿವೆ. ಈ ಎಲ್ಲಾ ಪ್ರಾಣಿಗಳನ್ನೂ ನಾವು ನೋಡುತ್ತೇವೆ. ಮೇಲೆ ಹೆಸರಿಸಿದ ಯಾವ ಪ್ರಾಣಿಯೂ ಬೇರೆ ಎಲ್ಲಾ ಪ್ರಾಣಿಗಳನ್ನೂ ನೋಡಿರಲಾರದು. ನಮಗಿರುವುದು ಎರಡೇ ಕಣ್ಣು, ಎರಡೇ ಲೆನ್ಸು, ಒಂದೇ ನೋಟ - ನಾವು ಮನುಜರೂ... ನಾವು ಮನುಜರೂ...

-ಅ
28.08.2008
12AM

14 comments:

 1. channagide. tumba informative.......heege OLLoLLe information kodtiru naavu kaltkobodu.... all the best!!

  ReplyDelete
 2. maathinalli heLalaarenu, rekheyalli geechalaarenoooo..aadaroonu comment maadade uLiyalaarenu.... :-D :-D
  sakkath aagidhe...
  ಸೌಂದರ್ಯ ಮತ್ತು ಸುಳ್ಳು ಜೊತೆಜೊತೆಗೆ ಇರುತ್ತೆ ಅನ್ನಿಸುತ್ತೆ.. diTam diTam diTam....

  ReplyDelete
 3. sakkath alwa?
  ee water birds ivyalla ... avu hunt maadbekaadre bari kanninda nodi, guri idodu maathra alla ... refraction angle saha calculate maadi ... adu dive maado hottige meenu ellirutte anta lekhkha haaki bete aadutvante ... super alwa?

  ReplyDelete
 4. super super

  ಅವತ್ತು ನಿಮಗೇನೋ ಹೇಳಿದ್ದೆ....ನೆನಪಿದೆಯಾ? ಅದನ್ನಾರೂ ಮಾಡ್ರೀ.

  ReplyDelete
 5. kaNNugaLa bagge for the first time "informative" article na odide. bari kathe kavana odi naanu change na huDuktidde...note-e sikbiDtu !!!

  ReplyDelete
 6. sakkat informative blog-u maaraaya..heege bareeta iru :)

  heege praaNigaLa bagge bareyodara oTTige manushyana dEhada bagge nu bareyokke shuru maaDu. tumba janakke adu bekaagide.

  ReplyDelete
 7. ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ! ಒಳ್ಳೆ ಇನ್ಫಾರ್ಮೇಶನ್ :-)

  ReplyDelete
 8. ಅದ್ಭುತಮ್ ಅಕ್ಷಪುರಾಣಮ್ ಇದಮ್!

  ReplyDelete
 9. [ಭವ್ಯಾ] ಅಂತೂ "ಇನ್‍ಫರ್‍ಮೇಟಿವ್" ಅನ್ನೋ ಪದವನ್ನು ಹಚ್ಚೋಕೆ ಶುರು ಮಾಡ್ಬಿಟ್ರಾ? ;-)

  [ಶ್ರೀಧರ] ಕವಿರಾಜ ಹೇಳ್ಕೊಟ್ನಾ?

  [ವಿಜಯಾ] ಬಹುಶಃ ಅವುಗಳ ಮಸೂರಗಳೇ ಹಾಗೆ ಮಾರ್ಪಾಟುಗಳನ್ನೊಳಗೊಂಡಿರುತ್ತೆ ಅನ್ನಿಸುತ್ತೆ. ಅದ್ಭತ!

  [ವಿಕಾಸ ಹೆಗಡೆ] ಆವತ್ತು ನೀವೇನೋ ಒಂದು ಹೇಳಿದ್ದು ನನಗೆ ನೆನಪಿನಲ್ಲಿಲ್ಲ ರೀ.. :-(

  [ಲಕುಮಿ] ಕಣ್ಣಿನ ಬಗ್ಗೆ ಕವನ, ಸುಭಾಷಿತ, ಕಥೆ, ಸಿನಿಮಾ - ಎಲ್ಲವೂ ಸಿಗುತ್ತೆ. ಈಗ ನೋಟು ಸಿಕ್ಕಿದ್ದಕ್ಕೆ ನಾನು ಕೃತಾರ್ಥ.

  [ಗಂಡಭೇರುಂಡ] ಮನುಷ್ಯನ ದೇಹದ ಬಗ್ಗೆ ಇರುವ ಆಸಕ್ತಿಯಿಂದಲೇ ಪ್ರಾಣಿಗಳ ಬಗ್ಗೆ ಬರೆಯುವ, ಗಿಡಗಳ ಬಗ್ಗೆ ಬರೆಯುವ ಪ್ರಯತ್ನಗಳನ್ನು ಮಾಡುತ್ತಿರುವುದು ಕಣಯ್ಯಾ.. ಅಂದ ಹಾಗೆ, ಮನುಷ್ಯನ ಬಗ್ಗೆಯೂ ಬರೆಯುವಂತಾಗುತ್ತೇನೆ, ಒಂದಲ್ಲಾ ಒಂದು ದಿನ.. ಓದೇ ಬಿಡು ಅತ್ಲಾಗೆ!!

  [ಹರೀಶ್] ಧನ್ಯವಾದಾಃ.

  [ಶ್ರೀಕಾಂತ್] ಚಕ್ಷುರುನ್ಮಿಲಿತಂ ಅನ್ನು!! ;-)

  ReplyDelete
 10. ಅರುಣ್ ಅವರೆ,

  ನನಗೆ ತಿಳಿಯದ ಅದೆಷ್ಟೋ ವಿಷಯಗಳನ್ನು ತಿಳಿದಂತಾಯಿತು. ಹಿಂದೆ ಕೆಲವೊಂದು ವಿಷಯಗಳನ್ನು ಅಭ್ಯಸಿಸಿದ್ದರೂ ಈಗ ಮತ್ತೆ ನಿಮ್ಮ ಸುಂದರ ಲೇಖನ ಅವೆಲ್ಲವನ್ನೂ ನೆನಪಿಸುವಂತೆ ಮಾಡಿತು. ತುಂಬಾ ಧನ್ಯವಾದಗಳು. ಇಂತಹ ಒಳ್ಳೆಯ ಲೇಖನಗಳಿಗೆ ತಪ್ಪದೇ ಬರುವೆ. ದಯವಿಟ್ಟು ಬರೆಯುತ್ತಿರಿ.

  ಆದರೆ ಅರುಣ್ ಅವರೆ "ಸೌಂದರ್ಯ ಮತ್ತು ಸುಳ್ಳು ಜೊತೆಜೊತೆಗೆ ಇರುತ್ತೆ ಅನ್ನಿಸುತ್ತೆ..ಬಹುಶಃ ಹೆಂಗಸನ್ನು ವ್ಯಂಗ್ಯ ಮಾಡಲು ಜಿಂಕೆಯ ಕಣ್ಣವಳೇ ಎಂದು ಹೇಳಿದರೆನಿಸುತ್ತೆ ಹಿಂದಿನ ಗಂಡು ಕವಿಗಳು." ಈ ಸಾಲುಗಳೇಕೋ ನನಗೆ ಅಷ್ಟು ಒಪ್ಪಿಗೆಯಾಗಲಿಲ್ಲ.

  ಮೊದಲಿಗೆ ಕವಿಗಳು ಜಿಂಕೆಯ ಕಣ್ಣನ್ನು ಮುಗ್ಧತೆಗೆ ಹೆಚ್ಚು ಹೋಲಿಸಿದ್ದಾರೆ. ಹಾಗಾಗಿ ಅದು ಹೆಣ್ಣಿನ ಕಣ್ಣಿಗೂ ಹೋಲಿಕೆಯಾಯಿತು. ಹೆಚ್ಚಿನವರು ಪ್ರಶಂಸೆಗಾಗಿ ಹೇಳಿದ್ದಾರೆಯೇ ಹೊರತು ವ್ಯಂಗವಾಗಿಯಂತೂ ಅಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. :)

  "ಆದರೂ ನಮ್ಮ ಕಣ್ಣುಗಳು ಪುಣ್ಯ ಮಾಡಿವೆ. ಈ ಎಲ್ಲಾ ಪ್ರಾಣಿಗಳನ್ನೂ ನಾವು ನೋಡುತ್ತೇವೆ. ಮೇಲೆ ಹೆಸರಿಸಿದ ಯಾವ ಪ್ರಾಣಿಯೂ ಬೇರೆ ಎಲ್ಲಾ ಪ್ರಾಣಿಗಳನ್ನೂ ನೋಡಿರಲಾರದು. ನಮಗಿರುವುದು ಎರಡೇ ಕಣ್ಣು, ಎರಡೇ ಲೆನ್ಸು, ಒಂದೇ ನೋಟ - ನಾವು ಮನುಜರೂ... ನಾವು ಮನುಜರೂ... " - ನಿಜ.. ಆದರೆ ಅದಕ್ಕೆ ಕಾರಣ ಇವುಗಳಿಲ್ಲವುದಕ್ಕಿಂತ ಹೆಚ್ಚಿನ ಬುದ್ಧಿ ಹಾಗೂ ಯೋಚನಾಶಕ್ತಿ ನಮ್ಮೊಳಗಿರುವದರಿಂದ- ನಾವು ಬುದ್ಧಿವಂತರು..(!)

  ReplyDelete
 11. [ತೇಜಸ್ವಿನಿ ಹೆಗಡೆ] ನಿಮಗೆ ಒಪ್ಪಿಗೆಯಾಗದ ಸಾಲುಗಳ ಬಗ್ಗೆ: ಅವು ಕೇವಲ ತಮಾಷೆಗಾಗಿ ಬರೆದದ್ದು.. ತಮಾಷೆ ತೀರಾ ಹೋಪ್‍ಲೆಸ್ ಆಗಿದೆ ಎನ್ನಿಸಿದರೆ ಬೈದುಬಿಡಿ, ಪರವಾಗಿಲ್ಲ, ಬೈಸಿಕೊಳ್ತೀನಿ.

  ಜಿಂಕೆಯ ಕಣ್ಣು ಮುಗ್ಧವಾಗಿಯೂ ಮುದ್ದಾಗಿಯೂ ಇರುವುದು ದಿಟ. ಕವಿಗಳು ಯಾವಾಗಲೂ ಪ್ರಶಂಸೆ ಮಾಡುತ್ತಲೇ ಇರುತ್ತಾರೆ ಎಂಬುದನ್ನು ನಾನು ಬಲ್ಲೆ. ಶ್ರೀನಿಧಿ, ಸುಶ್ರುತ, ಶ್ರೀನಿವಾಸ, ಶ್ರೀಕಾಂತ, ಹೀಗೆ ನನ್ನ ಗೆಳೆಯ ವರ್ಗದಲ್ಲೇ ಹಲವಾರು ಕವಿಗಳಿದ್ದಾರಾದ್ದರಿಂದ ಅವರನ್ನು ನೋಡಿದ್ದೇನೆ, ಅವರ ಸಾಲುಗಳನ್ನು ಮೆಚ್ಚಿಕೊಂಡಿದ್ದೇನೆ, ಅವರಂತೆ ಬರೆಯಲು ಪ್ರಯತ್ನಿಸಿಯೂ ಇದ್ದೇನೆ. ಇವೆಲ್ಲವೂ ಹಿಂದಿನ ಕಾಲದ ಕವಿಗಳಿಂದಲೇ ಬಂದಿರುವ ಸಂಪ್ರದಾಯವೆಂದರೂ ತಪ್ಪಾಗಲಾರದಲ್ಲವೇ?

  ಹೌದು. ಕಣ್ಣು ನೋಡುತ್ತೆ, ಬುದ್ಧಿಯು ನೋಡಿದ್ದನ್ನು ಗ್ರಹಿಸುತ್ತೆ. ಕಂಪ್ಯೂಟರ್ ಮೇಷ್ಟ್ರಾದ್ದರಿಂದ ಅದನ್ನು ಹೀಗೆ ಉಲ್ಲೇಖಿಸಬಹುದು: ಕಣ್ಣು input device ಇದ್ದಹಾಗೆ. ಬುದ್ಧಿ CPU ಥರ. ಮಿದುಳು hard disk ಆಗಬಹುದು.. ಇದೂ ಕೆಟ್ಟ ಉದಾಹರಣೆಯೆಂದು ಎರಡನೇ ಸಲ ಓದಿದಾಗ ಅನ್ನಿಸುತ್ತೆ, ಅದಕ್ಕೆ ಎರಡನೇ ಸಲ ಓದುವ ಮುನ್ನ ಪಬ್ಲಿಷ್ ಮಾಡ್ಬಿಡ್ತೀನಿ. :-)

  ReplyDelete
 12. ಕಣ್ಣುಗಳ ಚಿತ್ರ ನೋಡಿ, ಲೇಖನ ಓದಿ, ಕಣ್ ಕಣ್ ಬಿಡುವಂತಾಯ್ತು. ನೀವು ಕೊಡ್ತಾ ಇರೋ ವಿಷಯ ತುಂಬಾ ಸ್ವಾರಸ್ಯಕರವಾಗಿದೆ. ಜಿರಳೆ ಬಗ್ಗೆ ಬರೆದಿರೋ ಪದ್ಯಾನೂ ಸೊಗಸಾಗಿದೆ.(ಬೇಂದ್ರೆಯವರು ತಿಗಣೆ ಬಗ್ಗೆ ಒಂದು ಪದ್ಯ ಬರೆದಿದ್ದಾರೆ.)
  ನಿಮ್ಮ ಮುಂದಿನ postಗಳಿಗೆ ಕಾಯ್ತಿರ್ತೀನಿ.

  ReplyDelete
 13. [ಸುನಾಥ್] ಓಹ್, ಹೌದಾ, ತಿಗಣೆ ಬಗ್ಗೆ ಪದ್ಯವೇ? ಸೂಪರ್.. ಓದ್ಬೇಕಲ್ಲಾ....

  ಲೇಖನ ಮೆಚ್ಚಿಕೊಂಡಿದ್ದಾಗಿ ಧನ್ಯವಾದಗಳು ಸರ್..

  ReplyDelete

ಒಂದಷ್ಟು ಚಿತ್ರಗಳು..