Friday, August 22, 2008

ಹುಳ ಚರಿತ್ರೆ ಅಥವಾ ಪಾರ್ಥೇನಿಯಂ ಪುರಾಣ ತಿಲಕಂಈ ಹುಳುವನ್ನು ನೋಡದೆ ಇರುವವರು ಯಾರು? ಅರೇ, ಇದು ಪಾರ್ಥೇನಿಯಮ್ ಮೇಲಿರುತ್ತಲ್ಲಾ ಅದೇ ಹುಳು ಅಲ್ಲವೇ?

ಅರವತ್ತು ವರ್ಷಗಳ ಕೆಳಗೆ ನಾನು ಈ ಪ್ರಶ್ನೆಯನ್ನು ನಮ್ಮ ದೇಶದಲ್ಲಿ ಯಾರ ಮುಂದೆಯೂ ಕೇಳುವಂತಿರಲಿಲ್ಲ. ಯಾಕೆಂದರೆ ಆಗ ಈ ಹುಳುವೂ ಇರಲಿಲ್ಲ, ಪಾರ್ಥೇನಿಯಮ್ಮೂ ಇರಲಿಲ್ಲ. ನಮ್ಮಜ್ಜನ ಕಾಲದಲ್ಲಿ ಪಾರ್ಥೇನಿಯಮ್ - Parthenium hysterophorus ಕಲ್ಪನೆಯೂ ಇರಲಿಲ್ಲ ಭಾರತದಲ್ಲಿ.

ಐವತ್ತರ ದಶಕದ ದಿನಗಳಲ್ಲಿ ಮೆಕ್ಸಿಕೋ ದೇಶದಿಂದ ಭಾರತಕ್ಕೆ ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದರು. ಪಿ.ಎಲ್. 480 ಎಂಬ ವಿಶೇಷ ಗೋಧಿ. ಇದರ ಜೊತೆಗೆ ಹಾದಿ ತಪ್ಪಿ ಒಮ್ಮೆ ಒಂದು 'ಕಳೆ' (weed) ಬಂದುಬಿಟ್ಟಿತು. ಸರಿ, ನಮ್ಮ ರೈತರಿಗೆ ಅಷ್ಟು ಅರಿವಾಗಲಿಲ್ಲ. ಆದರೆ ಯಾವಾಗ ಸಿಕ್ಕ ಸಿಕ್ಕ ಕಡೆ ಖಾಲಿ ನಿವೇಶನಗಳಲ್ಲಿ, ಮೋರಿಯ ಪಕ್ಕ, ರೈಲ್ವೇ ಹಳಿಗಳ ಮೇಲೆ, ಹೊಲದ ಆಸುಪಾಸುಗಳಲ್ಲಿ ಹೀಗೆ ಕಂಡ ಕಂಡ ಕಡೆ ಎಲ್ಲಾ ಕೆಲವೇ ದಿನಗಳಲ್ಲಿ ಬೆಳೆದುಬಿಟ್ಟಿತೋ ಆಗ ಇಡೀ ಗ್ರಾಮೀಣ ದೇಶ ತತ್ತರಿಸಿಬಿಟ್ಟಿತು. ನೋಡೋಕೆ ಕ್ಯಾರೆಟ್ ಗಿಡದಂತಿರುವ ಈ ಪಾರ್ಥೇನಿಯಮ್‍ನನ್ನು ರೈತರು ಮತ್ತು ಸಸ್ಯಶಾಸ್ತ್ರಜ್ಞರು ಕ್ಯಾರೆಟ್ ವೀಡ್ ಎಂದೇ ಕರೆದರು. Weed ಅಥವಾ ಕಳೆ ಎಂದರೆ ನಿರುಪಯುಕ್ತ ಬೆಳೆ ಎಂದರ್ಥ. ಯಾವ ಗಿಡ ಎಲ್ಲಿ ಬೆಳೆಯಬಾರದೋ ಅಲ್ಲಿ ಬೆಳೆದರೆ ರೈತರ ಭಾಷೆಯಲ್ಲಿ ಅದನ್ನು ಕಳೆ ಎನ್ನಬಹುದು.ಈ ಪಾರ್ಥೇನಿಯಮ್ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಲು ಕಾರಣವಿದೆ. ಇದರ ಹೂಗಳಲ್ಲಿರುವ pollen grains (ಕನ್ನಡದಲ್ಲಿ ಏನಂತಾರೋ ಗೊತ್ತಿಲ್ಲ) ಜನರಿಗೆ ಅಲರ್ಜಿಯನ್ನುಂಟು ಮಾಡುತ್ತೆ, ಇದರ ಎಲೆ ಬೆರೆತುಕೊಂಡ ಗಿಡಗಳನ್ನೋ ಸೊಪ್ಪನ್ನೋ ತಿಂದ ಆಕಳು 'ಕಹಿ ಹಾಲು' ಉತ್ಪತ್ತಿ ಮಾಡುತ್ತೆ, ಹೂವನ್ನು ಸೋಕಿಸಿಕೊಂಡರೆ ತುರಿಕೆ, ಇದರ ಗಾಳಿ ಸೇವಿಸಿದರೆ ಉಸಿರಾಟದ ತೊಂದರೆ, ಗೂರಲು, ಆಸ್ತಮ. ಸುತ್ತ ಮುತ್ತಲಿನ ಬೆಳೆಗಳಲ್ಲಿ ಶೇಕಡ ಐವತ್ತರಷ್ಟು ನಾಶ ಮಾಡಬಲ್ಲುದು. ಅಬ್ಬಬ್ಬಾಹ್.. ಜೊತೆಗೆ ಒಂದೊಂದು ಗಿಡವೂ ಸಾವಿರ ಸಾವಿರಗಟ್ಟಲೆ ಬೀಜಗಳನ್ನು ಉತ್ಪತ್ತಿ ಮಾಡುವುದೂ ಅಲ್ಲದೇ, ಕೇವಲ ಗಾಳಿಯಿಂದ ಪರಾಗಸ್ಪರ್ಶವಾಗುವ ತಾಕತ್ತುಳ್ಳದ್ದು. ಪ್ರಕೃತಿಯಲ್ಲಿ ಇಂಥಾ ಭಯಾನಕ ಜೀವಿಯೊಂದಿದೆಯೇ, ಅದರಲ್ಲೂ ಸಸ್ಯವರ್ಗದಲ್ಲಿ ಎಂದು ಅಚ್ಚರಿಯನ್ನುಂಟು ಮಾಡುವುದಲ್ಲವೇ?

ಮೆಕ್ಸಿಕೋದವರ ಸಮಸ್ಯೆ ಇನ್ನೂ ಗಂಭೀರವಾಗಿತ್ತು. ಅಲ್ಲಿನ ಹವಾಗುಣಕ್ಕೆ ಬೆಳೆಯುತ್ತಿದ್ದ ಪಾರ್ಥೇನಿಯಮ್ಮುಗಳಲ್ಲಿ ಹೈಮೆನಿನ್ ಎಂಬ ವಿಷಪೂರಿತ ರಾಸಾಯನಿಕವಿತ್ತು. ಅದೊಂದು ಡಯಾಸ್ಟಿರಿಯೋಮರ್ ಆಗಿರುವುದು ಆ ಜನರ ದುರದೃಷ್ಟ. (ನಾಲ್ಕೈದು ವೆಬ್‍ಸೈಟುಗಳನ್ನು ಹುಡುಕಾಡಿದ ಮೇಲೆ, simplest ವಿವರಣೆ ನೀಡಿರುವ ತಾಣವಿದು ಎಂದೆನಿಸಿತಷ್ಟೆ. ಅದೊಂದು ವಿಷ ಎಂದರ್ಥವಾದರಷ್ಟು ಸಾಕು).

Parthenium Dermatitis ಎಂಬ ಕಾಯಿಲೆಯನ್ನು ನಮ್ಮ ದೇಶದಲ್ಲಿ ಹುಟ್ಟುಹಾಕಿಬಿಟ್ಟಿತು ಈ ಗಿಡ.

ಪಾರ್ಥೇನಿಯಮ್ ಗಿಡವನ್ನು ತಿನ್ನುವ ಒಂದು ಪ್ರಾಣಿಯೂ ನಮ್ಮಲ್ಲಿರಲಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಗೇ ಕಳಂಕ ಈ ಪಾರ್ಥೇನಿಯಮ್ಮು. ಕನ್ನಡನಾಡನ್ನು ಗಂಧದ ಗುಡಿ ಎಂದು ನಾವು ಹೇಳಿಕೊಳ್ಳುವಂತೆ ಮೆಕ್ಸಿಕೋ ದೇಶದಲ್ಲಿ ಈ ಪಾರ್ಥೇನಿಯಮ್ಮು ಹೇರಳವಾಗಿದ್ದುದರಿಂದ ಅವರು ಅಲ್ಲಿ ಇದರ ನಿರ್ಮೂಲನೆಗೆ ಏನು ಮಾಡುತ್ತಿದ್ದಾರೆಂದು ಅರಿತುಕೊಂಡ ನಮ್ಮ ದೇಶದ ತಜ್ಞರು, ಆ ಚಿಕ್ಕ ಹುಳುವನ್ನು ಆಮದು ಮಾಡಿಕೊಂಡರು. ಅದನ್ನು ಮೆಕ್ಸಿಕನ್ ಬೀಟ್ಲ್ - zygogramma bicolorata ಎಂದು ಕರೆದರು. ಅದೇ ಹುಳುವೇ ಮೇಲಿರುವ ಚಿತ್ರದಲ್ಲಿ ಪೋಸು ಕೊಡುತ್ತಿರುವುದು.

ನನಗೆ ನೆನಪಿದೆ, ಬಾಲ್ಯದಲ್ಲಿ ಈ ಹುಳುಗಳನ್ನು "ಲೇಡಿ ಬರ್ಡ್" ಎಂದು ತಪ್ಪು ತಿಳಿದುಕೊಂಡಿದುದಲ್ಲದೆ, ಇದನ್ನು ಸಾಕಬೇಕೆಂದು ಮನೆಗೆ ತಂದು ಡಬ್ಬಿಯೊಳಗೆಲ್ಲಾ ಹಾಕಿಟ್ಟು, ಸಕ್ಕರೆ ತಿನ್ನುತ್ತೆಂದು ಭಾವಿಸಿ ಪಾಪ, ಪಾರ್ಥೇನಿಯಮ್ ಬದಲು ಸಕ್ಕರೆ ಹಾಕಿ ಅದೆಷ್ಟು ಮೆಕ್ಸಿಕೋ ಹುಳುವನ್ನು ಕೊಂದೆನೋ ಏನೋ.. ಈ ಹುಳುಗಳು ಹಾರುತ್ತವೆ ಕೂಡ ಎಂದು ನನಗೆ ತಿಳಿದಿದ್ದು ಹಠಾತ್ತೆನೆ ನನ್ನ ಕಣ್ಣಿಗೆ ಹೊಡೆದಾಗ. ಆಗಿನ್ನೂ ನನಗೆ ಐದಾರು ವಯಸ್ಸಿರಬಹುದು. ಬನಶಂಕರಿ ಸೆಕೆಂಡ್ ಸ್ಟೇಜ್ ಮನೆಯ ಆಸುಪಾಸಿನಲ್ಲಿ ಪಾರ್ಥೇನಿಯಮ್ಮಿಗೆ ಬರವಂತೂ ಇರಲಿಲ್ಲ. ಆ ಪಾರ್ಥೆನಿಯಮ್ ಕಾಡಿನಲ್ಲೇ ಕಾಲುದಾರಿಗಳೂ ಹೇರಳವಾಗಿತ್ತು. ಆ ದಾರಿಯಲ್ಲಿ ಒಮ್ಮೆ ನಡೆದು ಹೋಗಿ ಬಂದರಾಯಿತು, ಬಟ್ಟೆ ಬರೆ ಎಲ್ಲಾ ಘಮಘಮ - ಪಾರ್ಥೇನಿಯಮ್ಮಿನದು. ಪುಣ್ಯಕ್ಕೆ ಮೇಲೆ ಹೆಸರಿಸಿದ ಯಾವ ಕಾಯಿಲೆಗೂ ನಾನಾಗಲೀ ಮನೆಯವರಾಗಲೀ ತುತ್ತಾಗಲಿಲ್ಲ.

ಈ ಹುಳುಗಳು ಆತ್ಮರಕ್ಷಣೆಗೋಸ್ಕರ ಗಬ್ಬು ವಾಸನೆಯ ದ್ರವವನ್ನು ಹೊರಹಾಕುತ್ತೆ. ಕೈಯೆಲ್ಲಾ ವಾಸನೆ. ಆದರೂ ಬೇಸರ ಪಟ್ಟುಕೊಳ್ಳದೆ ಇದನ್ನು ಸಾಕುತ್ತೇನೆಂದು ಸಾಕು ಸಾಕೆಂದರೂ ಸಾಯಿಸಿದ್ದೆ.

ಎಲ್ಲ ದುಂಬಿಗಳಂತೆ, ಚಿಟ್ಟೆಗಳಂತೆ ಈ ಹುಳವೂ ಸಹ ಲಾರ್ವಾ ಹಂತದಿಂದಲೇ ಬೆಳೆಯುವುದು. ಅವರೆಕಾಯಿ ಹುಳುವಿನಂತೆ ಕಾಣಿಸುವ ಇದರ ಲಾರ್ವಾ ಸುಮಾರು ಎಂಟು ಹತ್ತು ಎಲೆಗಳನ್ನು ತಿಂದು ಹದಿನೈದು ಇಪ್ಪತ್ತು ದಿನಗಳೊಳಗೆ ಪ್ಯೂಪಾ ಕೂಡ ಮುಗಿಸಿ ಬೆಳೆದು ನಿಂತಿರುತ್ತೆ. ಈ ಪ್ರಪಂಚದಲ್ಲಿ ಪಾರ್ಥೇನಿಯಮ್ಮಿನಂಥ ಬ್ರಹ್ಮರಾಕ್ಷಸನನ್ನು ತಿನ್ನಲು ಶಕ್ತಿಯಿರುವುದು ಈ ಮೆಕ್ಸಿಕನ್ ಬೀಟ್ಲ್ ಒಂದಕ್ಕೇ ಆದರೂ, ಒಂದು ಗಿಡವು ಸಂಪೂರ್ಣವಾಗಿ ಹೋಗಲು ಕನಿಷ್ಠ ನೂರು ಹುಳು ಬೇಕಾದೀತು. ಆದರೆ ಇವು ಮಳೆಗಾಲದಲ್ಲಿ ಮಾತ್ರ ಬದುಕುವ ಹುಳುಗಳು. ಏನು ಮಾಡೋದು ಈಗ? ರಾಷ್ಟ್ರೀಯ ಕಳೆ ವಿಜ್ಞಾನ ಸಂಸ್ಥೆಯು ಎಷ್ಟು ಸಾಧ್ಯವೋ ಅಷ್ಟು ಪಾರ್ಥೇನಿಯಮ್ ನಿರ್ಮೂಲನೆಯಾಗಲಿ ಎಂದು ಹೋರಾಟ ಮಾಡುತ್ತಾ ಈ ಮೆಕ್ಸಿಕನ್ ಬೀಟ್ಲ್ ಕೀಟ ಸೈನ್ಯವನ್ನು ಬಳಸಿಕೊಳ್ಳುತ್ತಿದ್ದಾರೆ.

ಮೆಕ್ಸಿಕೋ ದೇಶದಿಂದ ಬಂದ ಶತ್ರುವಿನಾಶಕ್ಕೆ ಮೆಕ್ಸಿಕೋ ಇಂದಲೇ ರಕ್ಷಕನನ್ನೂ ಕರೆತರುವಂತಾಯ್ತು. ಆದರೆ ಈ ಹುಳು ಸೂರ್ಯಕಾಂತಿಯ ಮೇಲೂ ದಾಳಿ ಮಾಡುವುದು ರೈತರ ಇನ್ನೊಂದು ತಲೆನೋವು. ಇದರ ಸಲುವಾಗಿ ಕೀಟನಾಶಕ ಬಳಸಿ ಇದನ್ನು ಕೊಲ್ಲುತ್ತಾರೆ. ಪಾರ್ಥೇನಿಯಮ್‍ಗೆ ಮಾತ್ರ ಬೇರೆ ಯಾವ ನಾಶಕಗಳೂ ಇಲ್ಲ.

ಅಂದ ಹಾಗೆ, ಪಾರ್ಥೇನಿಯಮ್ ಗಿಡವನ್ನು ಕಾಂಗ್ರೆಸ್ ಗಿಡವೆಂದೂ ಕರೆಯುತ್ತಾರೆ. ಐವತ್ತಾರನೆಯ ಇಸವಿಯಲ್ಲಿ ಪುಣೆಗೆ US ಕಾಂಗ್ರೆಸ್ಸು ಮೆಕ್ಸಿಕನ್ ಗೋಧಿಯನ್ನು ರವಾನಿಸಿತ್ತು. ಆ ಕಾರಣದಿಂದ ಈ ಗಿಡಕ್ಕೆ ಕಾಂಗ್ರೆಸ್ ಗಿಡವೆಂದು ಹೆಸರು ಬಂತು. ಆಗಲೇ ಹೇಳಿದಂತೆ ನೋಡಲು ಕ್ಯಾರೆಟ್ ಗಿಡದಂತಿರುವ ಪಾರ್ಥೇನಿಯಮ್ಮಿಗೆ ಕ್ಯಾರೆಟ್ ಕಳೆ ಎಂದೂ ಕರೆಯುತ್ತಾರೆ.
ಆಗಲೇ ಕೇಳಿದ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿಕೊಳ್ಳಬೇಕಾಗಿದೆ. ಪ್ರಕೃತಿಯಲ್ಲಿ, ಅದರಲ್ಲೂ ಸಸ್ಯವರ್ಗದಲ್ಲಿ ಇಷ್ಟು ಕೆಟ್ಟ ಜೀವಿಯಿರಲು ಸಾಧ್ಯವೇ? ಇದರಿಂದ ಮೆಕ್ಸಿಕನ್ ಬೀಟ್ಲ್ ಹೊರೆತು ಪಡಿಸಿ ಬೇರೆ ಯಾವ ಜೀವಿಗೂ ಉಪಯೋಗವಾಗದೇ?

ನಮಗೆ ಉಪಯೋಗವಾಗುತ್ತಿದೆ ಎನ್ನುತ್ತೆ ಹೋಮಿಯೋಪತಿ!!

ಇಲಿಗಳಲ್ಲಿ ಟ್ಯೂಮರ್‍ಗಳನ್ನೇ ನಾಶ ಮಾಡಿತು ಪಾರ್ಥೇನಿಯಮ್ ಗಿಡದಲ್ಲಿರುವ ಪಾರ್ಥೆನಿನ್ ಎಂಬ ರಾಸಾಯನಿಕ ವಸ್ತು. ಮನುಷ್ಯನಲ್ಲೂ ನಿಧಾನಕ್ಕೆ ಕೆಲಸ ಮಾಡುತ್ತೆ ಎಂದು ಹೋಮಿಯೋಪತಿ ವೈದ್ಯರ ಅಂಬೋಣ.

ಪಾರ್ಥೇನಿಯಮ್ ಬೇರುಗಳಿಂದ ಮಾಡಿದ ಟಾನಿಕ್ಕು, ಗುಳಿಗೆಗಳು ವಾಂತಿ ಬೇಧಿಗಳನ್ನು ತಡೆಗಟ್ಟುತ್ತೆ.

ಪಿತ್ತಕೋಶದ ತೊಂದರೆ (hepatic amoebiosis)ಗೆ ಇದರ ಬೇರುಗಳ ಡಿಕಾಕ್ಷನ್ನು ಕೊಡುತ್ತಾರೆ.

ಪಾರ್ಥೇನಿಯಮ್ ಗಿಡದ ವಿಷವೆಂದೇ ಕುಖ್ಯಾತಿಗೊಳಗಾದ ಪಾರ್ಥೆನಿನ್ ರಸಾಯನ, ರುಮ್ಯಾಟಿಸಮ್‍ನನ್ನೇ ಗುಣಪಡಿಸುವ ಔಷಧಿಯಾಗಿಬಿಟ್ಟಿದೆ.

ದುರಾದೃಷ್ಟವಶಾತ್ ನಮ್ಮ ಜನಕ್ಕೆ ಆಂಗ್ಲಪದ್ಧತಿಯ ಮೇಲಿರುವ 'ಮೂಢ' ನಂಬಿಕೆಯು ಹೋಮಿಯೋಪತಿಯನ್ನಾಗಲೀ ಆಯುರ್ವೇದವನ್ನಾಗಲೀ ಹೆಚ್ಚಾಗಿ ಬೆಳೆಯಲು ಬಿಟ್ಟಿಲ್ಲ. ಆದರೆ ಕಾಲವು ಮುಂದಿದೆ.

ಅಥಾ ಹುಳಚರಿತ್ರಾ ಅಥವಾ ಪಾರ್ಥೇನಿಯಂ ಪುರಾಣ ತಿಲಕಂ ಸಂಪೂರ್ಣಮ್.

-ಅ
22.08.2008
5.15AM

8 comments:

 1. ಸುಂದರಂ ಸವಿಸ್ತಾರಂ ಜ್ಞಾನದಂ ಚಾಸ್ತಿ |

  ReplyDelete
 2. ushshshshhappppppaaaaa :-)
  very informative ... alli naavu aata aadbeku antha iddid field nalli baree kainalle parthenium kittu clean maadidvi ... nenpidya??
  punya ... idella gothirlilla aaga :-) :-)

  ReplyDelete
 3. ಅಬ್ಬಾ. ಒಳ್ಳೆ ಮಾಹಿತಿ ಕಣ್ರೀ ಮೇಸ್ಟ್ರೆ. ಥ್ಯಾಂಕ್ಸ್
  ಅದು ಥೇಟು ಕಾಂಗ್ರೆಸ್ ಪಕ್ಷದಂತೆ ಸಿಕ್ಕಾಪಟ್ಟೆ ಫಾಸ್ಟಾಗಿ, ವೈಡಾಗಿ ಹರಡಿದ್ರಿಂದ ಮತ್ತು ಅಷ್ಟೇ ದೇಶಕ್ಕೆ ತೊಂದರೆ ಮಾಡಿದ್ದರಿಂದ ಕಾಂಗ್ರೆಸ್ ಗಿಡ ಅಂತ ಕರೀತಾರೇನೋ ಅಂದುಕೊಂಡಿದ್ದೆ ! :) ಇದನ್ನೂ ಔಷಧಿಗಳಿಗೆ ಬಳಸಿಕೊಳ್ಳುತ್ತಿರುವುದು ಗ್ರೇಟು. ಇನ್ನೊಂದು ರೀತಿಯ ಕಳೆ ಗಿಡ ಈ ಪಾರ್ಥೇನಿಯಂ ಗಿಡವನ್ನು ಮೆಟ್ಟಿನಿಂತು ಬೆಳೆದು ನಿಲ್ಲುತ್ತದೆ. ಅದು ಕಾಂಗ್ರೆಸ್ ಗಿಡವನ್ನು ನೈಸರ್ಗಿಕವಾಗಿ ನಿಯಂತ್ರಣ ಮಾಡಿದೆ. ಅದೂ ಅಲ್ಲದೇ ಆ ಗಿಡದಿಂದ ಪಾರ್ಥೇನಿಯಂನಂತೆ ಅಲರ್ಜಿ ಅಥವಾ ಇನ್ಯಾವುದೇ ತೊಂದರೆಯೂ ಇಲ್ಲ.

  pollen grainsಗೆ ಕನ್ನಡದಲ್ಲಿ ಏನಂತಾರೆ ಗೊತ್ತಿಲ್ಲ ಅಂತ ಮುಂದೆ ಹೋಗಿಬಿಟ್ರೆ ಆಯ್ತಾ? ತಿಳ್ಕೊಂಡು ನಮಗೂ ಹೇಳ್ಕೊಡ್ರಿ :)

  ReplyDelete
 4. congress gida antha yaake kareethaare antha eega gottaithu nange..... :-)

  ReplyDelete
 5. [ಶ್ರೀಕಾಂತ್] ಅಸ್ತಿ, ಸ್ತಃ, ಸನ್ತಿ!

  [ವಿಜಯಾ] ಕೈಯೆಲ್ಲಾ ಪಾರ್ಥೇನಿಯಂ ಪರಿಮಳವೂ ನೆನಪಿದೆ.

  [ವಿಕಾಸ ಹೆಗಡೆ] ಗಿಡಗಳಲ್ಲೂ ಪಾಲಿಟಿಕ್ಸು ನೋಡಿ.
  pollen grainsಗೆ ಏನಂತಾರೆ ಅಂತ ಯಾರಾದರೂ ವಾಚಕ ಬಂಧುಗಳು ಹೇಳುತ್ತಾರೇನೋ ನೋಡೋಣ.

  [ಶ್ರೀಧರ] ಹೋಪ್‍ಲೆಸ್ ಫೆಲೋ ಅಂತ ನಿನ್ನ ಯಾಕೆ ಕರೀತಾರೆ ಅಂತಾನೂ ತಿಳ್ಕೊ. ;-)

  ReplyDelete
 6. Pollen grain = ಪರಾಗ, ಪರಾಗರೇಣು, ಪುಷ್ಪಧೂಳಿ

  ReplyDelete
 7. nange samaajasevaki lalitaamba nenpaadlu...adara jotege naavu schoolnalli maaDida shramaadaanav nu nenpaaytu !

  ReplyDelete
 8. Harish,
  tumba thanks ree.. :-)

  Lakumi,
  aahhaa, shramaadaana maaddya neenu???

  ReplyDelete

ಒಂದಷ್ಟು ಚಿತ್ರಗಳು..