Tuesday, August 19, 2008

ಶಕ್ತಿಶಾಲಿಗೇ ಜಯ

ಮೊಸಲೆ ತಾನ್ ಕೂಗಿತು
ಮೂರು ಸಾಸಿರ ಲಕ್ಷವರ್ಷಗಳಿಂದಲೂ
ಕೊಂದು ತಿಂದು ಮಿಂದು ಇಂದು
ಬದುಕಿ ಉಳಿದು ಬೆಳೆದು ಸೆಳೆದು
ನದಿಗೆ ನಾನೆ ರಾಜನೆಂದು
ನನ್ನ ಕೊಲುವರಾರೂ ಇಲ್ಲ
ಜಲದಿ ಇರುವೆನೊಬ್ಬನೇ
ವೀರ ನಾನೆಂದು!

ಆಮೆಯೊಂದು ಶನಿಗತಿಯೊಳು
ಕಡಲ ಹೊರಗೆ ಶಾಂತಮತಿಯೊಳು
ನುಡಿಯಿತು
ವರ್ಷ ವರ್ಷ ನನಗೆ ಹರ್ಷ
ಶತ್ರುವಿಲ್ಲ ಜಗದಲಿ
ನುಸುಳಿ ಬಿಡುವೆ ಚಿಪ್ಪಿನೊಳಗೆ
ಜೀವಿಸಿರುವೆ ಸೊಗದಲಿ
ಕಡಲಿನರಸ ಮತ್ಸ್ಯವಲ್ಲ ಕೂರ್ಮವು
ಬದುಕಿ ಬೆಳೆದಿರುವುದೆನ್ನ ಮರ್ಮವು.

ಕೆಲವೆ ವರ್ಷ ಸಂದು ಆಯ್ತು
ಮಂಗನಿಂದ ಮಾನವ
ಮೊಸಲೆ ಕೂರ್ಮ ಒಂದು ಬಿಡದೆ
ಎಲ್ಲ ಕೊಂದ ದಾನವ
ಒಳಿತು ಹುಳಿತು ಒಂದನರಿತು
ಬಾಳಲರಿತು ನಡೆಯದೆ
ಹಳತು ಹೊಸತು ಎಲ್ಲ ಮುಗಿಸಿ
ವೀರೆನೆಂದು ಮೆರೆವನು

ಶೀತವಲಯದಲ್ಲಿ ಹೊದಿಕೆ
ಉಷ್ಣದಲ್ಲಿ ಬೀಸಣಿಕೆಯು
ನೀರಿನಲ್ಲಿ ದೋಣಿಯಾನ ಬಾಂ-
ದಳದಲವನ ವಿಮಾನವು
ಧ್ರುವವ ಮುಟ್ಟಿ, ಶಿಖರ ಹತ್ತಿ
ಕಡಲ ಆಳ ಬಲ್ಲನು
ಆದರೇನು, ಮನುಜ ತಾನು
ಪ್ರಕೃತಿಯೆದುರು ನಿಲ್ಲನು.

ಮನುಜಕಿಂತ ಶಕ್ತಿಶಾಲಿ ಜೀವಿಯುಂಟೆ ಜಗದೊಳು?
ಇಹುದು, ಇಲ್ಲೆ ಶತಶತಮಾನದಿಂದ
ಮೊಸಲೆ ಕೂರ್ಮ ಜನನದಿಂದ
ನೋಡಿ ತಿಳಿದ ಜೀವಿಯು
ಧ್ರುವದ ಚಿಂತೆ ಇದಕೆ ಇಲ್ಲ
ಚಳಿ ಶೆಖೆಗಳ ಭೀತಿಯಿಲ್ಲ
ತಾಪ ಶಾಪ ಕೂಪ ಭೂಪ
ನಶಿಸಲಾಗದೆಂದಿಗೂ
ಮನುಜ ಬರುವ ಮುನ್ನ ಬಂದು
ಮನುಜ ಹೋದ ಮೇಲೂ ಇದ್ದು
ಮೆರೆವುದರಸನಾಗಿಯೇ

ಸಾಸಿರ ಕಂಗಳಲಿ ಜಗವನೆಲ್ಲ ನೋಡುತ
ಎರಡು ಚಾಟಿಗಳಲಿ ಎಲ್ಲರ ಕಾಡುತ
ನೆಲದಿ ಹೊಲದಿ ಹರಿಯಲಿದಕೆ ಷಟ್ಪಾದವು
ಜೀರ್ಣವಿದಕೆ ಸಕಲೋಪನಿಷದ್ವೇದವು
ಮನುಜ ಬರುವ ಮುನ್ನ ಬಂದ ಜೀವಿಯಲ್ಲ ತರಳೆಯು
ಮನುಜ ಹೋದ ಮೇಲೂ ಇದ್ದು ಮೆರೆವುದೀ ಜಿರಳೆಯು!!

-ಅ
19.08.2008
1.20AM

6 comments:

Vijaya said...

:-) super!!!! jirale ge jai!!

sakkttagide ... aa jirale mundedu tumba tumba adaptible ... enoo siglilla andre tanna rekkene taanu tindu badkirutte!.

ಶ್ರೀನಿಧಿ.ಡಿ.ಎಸ್ said...

hmm,

konkana sutti mailaarakke hogodo bekitta?;)

ಅಂತರ್ವಾಣಿ said...

ಲೇಖನಗಳಲ್ಲಿದ ಪ್ರಾಣಿಗಳು ನಿಮ್ಮ ಕವನದಲ್ಲಿ ಬಂದಿವೆ. ಸಕ್ಕತ್ತಾಗಿದೆ.

Parisarapremi said...

[ಅಂತರ್ವಾಣಿ] ಧನ್ಯವಾದಗಳು..

[ಶ್ರೀನಿಧಿ] ಕೊಂಕಣದಲ್ಲೇ ವಾಸ್ತವ ತಿರುಳು ಇರುವುದು ನೋಡು.

[ವಿಜಯಾ] ಹೌದು, ಅತ್ಯಂತ ಆಕರ್ಶಕ ಜೀವಿ ಈ ಜಿರಲೆ.

ತೇಜಸ್ವಿನಿ ಹೆಗಡೆ- said...

ಸುಂದರ ಕವನ. ಶಕ್ತಿಶಾಲಿಗಿಂತ, ಶಕ್ತಿಯೊಡನೆ ಯುಕ್ತಿಬೆರೆತವನಿಗೇ ಜಯವಾಗುತ್ತದೆ. ಕುಯುಕ್ತಿ ಇಲ್ಲದಿದ್ದರೂ ಸಾಕು.. ಬದುಕಬಹುದು!

Lakshmi S said...

bolo shaktishaali jirale ki JAI !

Post a Comment

ಒಂದಷ್ಟು ಚಿತ್ರಗಳು..