Monday, August 11, 2008

ಹೋದವರು ಮತ್ತೆ ಬರಲಾರರು

ಬಾಲ್ಯದಲ್ಲಿ ನಮ್ಮ ಮೇಷ್ಟ್ರುಗಳು ಹೇಳಿಕೊಡುತ್ತಿದ್ದುದು ಚೆನ್ನಾಗಿ ನೆನಪಿದೆ. "ಈ ಪ್ರಾಣಿಗಳನ್ನೆಲ್ಲಾ ನಾವು ಉಳಿಸದೆ ಇದ್ದರೆ ನಮ್ಮ ಮುಂದಿನ ಪೀಳಿಗೆಯವರು ಕೇವಲ ಚಿತ್ರಪಟಗಳಲ್ಲಿ ನೋಡಬೇಕಾಗುತ್ತೆ" ಅಂತ. ಇಂಥಾ ಜೀವಸಂಕುಲಗಳನ್ನು "Endangered Species" ಎನ್ನುತ್ತೇವೆ. ಆದರೆ ಕೆಲವು ಸಂಕುಲಗಳು ಸಂಪೂರ್ಣ ನಶಿಸಿ ಹೋಗಿವೆ. ನೂರಕ್ಕೆ ತೊಂಭತ್ತೊಂಭತ್ತು ಜೀವಸಂಕುಲಗಳು ಅಳಿಯಲು ಮನುಷ್ಯನೇ ನೇರ ಕಾರಣ. ಇನ್ನುಳಿದ ಭಾಗದ ಸಂಕುಲದ ನಾಶಕ್ಕೆ ಸ್ವತಃ ಸೃಷ್ಟಿಕರ್ತ ಪ್ರಕೃತಿಯೇ ಕಾರಣವಾಗಿರುತ್ತೆ, ವಿಕಾಸದ ಸಲುವಾಗಿ.

ಭಾರತದಲ್ಲಿ ರಾರಾಜಿಸುತ್ತಿದ್ದ ಅರಣ್ಯಗಳಲ್ಲಿದ್ದ ಪ್ರಾಣಿ ಪಕ್ಷಿ ಗಿಡ ಮರಗಳ ಪೈಕಿ ಅನೇಕವು ಈಗ ಇಲ್ಲ. ಹಲವಾರು ಕೇವಲ ಮೃಗಾಲಯಗಳಲ್ಲಿವೆ ಎಂಬುದು ತಿಳಿದಿರುವ ವಿಷಯವೇ.

ಆ ಗತಕಾಲದ ವೈಭವವನ್ನು ನೆನಪಿಸಿಕೊಂಡು ಅವಕ್ಕೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಈ ಸರಣಿ.

........................................................................................

ಕಾಲ: 1990

ತೀರ ಇತ್ತೀಚೆ ಅನ್ನಿಸುತ್ತಾ?

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಂದು ವರದಿಯಾಗಿತ್ತು. "ಬಹುಶಃ" ಕಾಣಿಸಿದ್ದು ಚಿರತೆಯೇ ಅಂತ. ನಲವತ್ತೈದು ವರ್ಷದಿಂದ ಕಾಣಿಸಿರಲಿಲ್ಲ.

ಇದೇನು ಚಿರತೆಗಳು ಅಷ್ಟೊಂದು ಇದೆ ಅಂತಾರಲ್ಲಾ?ದಕ್ಷಿಣ ಭಾರತದ ಚಿರತೆಗಳೇ ಬೇರೆ. ಇದು ಲೆಪರ್ಡ್ - Panthera pardus. ಆದರೆ ಚೀತಾಹ್ ಅನ್ನೋ ಇನ್ನೊಂದು ಪ್ರಾಣಿ ಇತ್ತು ನಮ್ಮ ದೇಶದಲ್ಲಿ. Asiatic Cheetah - Acinonyx jubatus venaticus ಅಂತಲೇ ಕರೆದಿದ್ದೆವು. ಪೂರ್ವ ಹಿಮಾಲಯದ ತಪ್ಪಲಿನ ಅರಣ್ಯಗಳಿಂದ ಹಿಡಿದು ಪಶ್ಚಿಮ ಘಟ್ಟದ ತುದಿಯ ವರೆಗೂ ಎಲ್ಲೆಡೆಯೂ ಇತ್ತು. ವಿಶ್ವದ ಅತಿ ವೇಗದ ಪ್ರಾಣಿ ಈಗ ಕೇವಲ ಆಫ್ರಿಕಾದಲ್ಲಿದೆ. ಬೇರೆ ಕಡೆ ಕಾಣಿಸುವುದು ಬೆರಳೆಣಿಕೆಯಷ್ಟು ಅಷ್ಟೆ. ನಮ್ಮ ದೇಶದಲ್ಲಿ ಇದರ ಹೆಸರು ಅಳಿಸಿ ಹೋಗಿ ಕೆಲವು ಹತ್ತಾರು ವರ್ಷಗಳಾಗಿವೆ ಅಷ್ಟೆ.ಪಾಕಿಸ್ತಾನ, ಬಲೂಚಿಸ್ತಾನದಲ್ಲಿ ಆಗಾಗ್ಗೆ ವರದಿಗಳು ಬರುತ್ತಿವೆ. ಆದರೆ ಈಗಲೋ ಆಗಲೋ ಅಳಿಯುವ ಘಟ್ಟದಲ್ಲಿ ಚೀತಾಹ್ ಇದೆ.

ಮನುಷ್ಯನಿಗೆ ಈ ಚೀತಾಹ್ ತುಂಬಾ ಹತ್ತಿರದ ಗೆಳೆಯನಾಗಿತ್ತು. ನಮ್ಮ ರಾಜರು ಇದನ್ನು ಬೇಟೆಗೆ ಬಳಸಿಕೊಳ್ಳುವುದಕ್ಕೋಸ್ಕರ ಸಾಕುತ್ತಿದ್ದರು. ಅಕ್ಬರನು ಸಾವಿರಕ್ಕೂ ಹೆಚ್ಚು ಚಿರತೆಗಳನ್ನು ಸಾಕಿದ್ದನಂತೆ. ಚಿರತೆಗಳನ್ನು ಪಳಗಿಸುವುದು ಬಹಳ ಸುಲಭವಾಗಿತ್ತು. ನಾಯಿಯನ್ನು ಪಳಗಿಸುವಷ್ಟೇ ಸುಲಭ ಎಂದು ಪ್ರಾಣಿತಜ್ಞರು ಉಲ್ಲೇಖಿಸುತ್ತಾರೆ. ಬ್ಲ್ಯಾಕ್ ಬಕ್, ಗ್ಯಾಜೆಲ್ ಮುಂತಾದ ಜಿಂಕೆಗಳನ್ನು ಬೇಟೆಯಾಡಲು ಚಿರತೆಗಳು ತುಂಬಾ ಉಪಯುಕ್ತವಾಗಿದ್ದವು. ಪಳಗಿಸಿ, ಕಣ್ಣಿಗೆ ಬಟ್ಟೆ ಕಟ್ಟಿ, ಕಾಡಿಗೆ ಕರೆದೊಯ್ದು ಬೇಟೆಯಾಡಿಸುತ್ತಿದ್ದರು. ನಂತರ ಚಿರತೆಯನ್ನೂ ಬೇಟೆಯಾಡಿ ಕೊಂದು "ವೀರ" ಎಂದು ಚಿರತೆಯ ಶವದ ಮೇಲೆ ಕಾಲಿಟ್ಟು ಚಿತ್ರ ಬರೆಸಿಕೊಳ್ಳುತ್ತಿದ್ದರು. ಪರ್ಶಿಯನ್ ಚಿತ್ರಗಳನೇಕವು ಚಿರತೆಗಳನ್ನೊಳಗೊಂಡಿವೆ.

1990ರಲ್ಲಿ ಕಾಣಿಸಿತು ಎಂದು ವರದಿಯಾದರೂ ಅದನ್ನು ನಂಬದೇ ಇರಲು ಕಾರಣಗಳಿವೆ. ಅದಕ್ಕೆ ಮುಂಚೆ ಚಿರತೆಯು ಕಾಣಿಸಿದ್ದು 1947ರಲ್ಲಿ.
ಹೆಚ್ಚು ಕಡಿಮೆ ನಲವತ್ತೈದು ವರ್ಷಗಳು ಬಚ್ಚಿಟ್ಟುಕೊಂಡಿರಲು ಸಾಧ್ಯವೇ ಇಲ್ಲ.

1947ರಲ್ಲಿ ಮಧ್ಯಪ್ರದೇಶದ ಸುರ್ಗುಜದ ರಾಜನೊಬ್ಬನು ಭಾರತದ ಉಳಿದಿದ್ದ ಕೊನೆಯ ಮೂರು ಚಿರತೆಯನ್ನು ಗುಂಡಿಟ್ಟು ಬೇಟೆಯಾಡಿದ. ಆಗ ಅವನಿಗೇನು ಗೊತ್ತು, ಇದು ಕೊನೆಯ ಚಿರತೆ ಅಂತ. ಕಾಡಿನಲ್ಲಿ ಇನ್ನೂ ಲಕ್ಷ ಲಕ್ಷ ಚಿರತೆಗಳಿವೆ ಎಂದೇ ತಿಳಿದಿದ್ದನನಿಸುತ್ತೆ. ತೊಂಭತ್ತನೆಯ ಇಸವಿಯ ಹೊತ್ತಿಗೆ ಇಡೀ ಏಷಿಯಾ ಖಂಡದಿಂದ ಮರೆಯಾಗುವಂತಾಗಿ ಹೋಯಿತು ಚಿರತೆ. ಇರಾನ್‍ನಲ್ಲಿ ಮಾತ್ರ ಇನ್ನೂರು ಇದೆ ಎನ್ನುತ್ತಾರೆ. ಅದೂ ಅನುಮಾನವೇ.ಈಗಲೂ ನಮ್ಮಲ್ಲಿ ಕಾಡುಗಳಲ್ಲಿ "ಕ್ರೂರ" ಮೃಗಗಳಿವೆ ಎಂದು ನಂಬಿರುವವರು ಎಷ್ಟೋ ಜನರಿದ್ದಾರೆ. ಹುಲಿ, ಸಿಂಹ, ಚಿರತೆ, ಕರಡಿ ಎಲ್ಲವೂ ಹೇರಳವಾಗಿವೆ, ಕಾಡು ಅಪಾಯ ಎಂದೆಲ್ಲಾ ನಂಬಿಕೊಂಡಿದ್ದಾರೆ. ಎಲ್ಲಾ "ಕ್ರೂರ"ವನ್ನೂ ಮೀರಿ ಸರ್ವನಶದ ಕೊನೆಯ ಹಂತದಲ್ಲಿರುವ ನಮ್ಮ (ಮನುಷ್ಯನ) ಕ್ರೂರತನವನ್ನು ಅರಿತವರು ತುಂಬಾ ಕಡಿಮೆ ಜನ. ನಗರೀಕರಣ ಎಷ್ಟು ವೇಗವಾಗಿ ಸಾಗುತ್ತಿದೆಯೆ೦ದರೆ ಇನ್ನು ಕೆಲವೇ ವರ್ಷಗಳಲ್ಲಿ, ಹುಲಿ ಮತ್ತು ಸಿಂಹಗಳೂ ನಮ್ಮ ದೇಶದಿಂದ ಮರೆಯಾದರೆ ಅಚ್ಚರಿಯೇ ಇಲ್ಲ.

ಹುಲಿಯ ರಕ್ಷಣೆಗೆ ಅನೇಕ ಸಂಘ ಸಂಸ್ಥೆಗಳು ನಿಂತು ಕೆಲಸ ಆರಂಭಿಸಿದ ಹಾಗೆ, ಸಿಂಹವನ್ನು ಕಾಪಾಡಲು ಮುಂದೆ ಬಂದ ಗುಂಪುಗಳ ಹಾಗೆ ಚಿರತೆಯನ್ನು ರಕ್ಷಿಸಲು ಯಾರೂ ಬರಲೇ ಇಲ್ಲ. ಇಂಥದ್ದೊಂದು ಪ್ರಾಣಿ ನಮ್ಮಲ್ಲೂ ತೀರ ಮೊನ್ನೆ ಮೊನ್ನೆವರೆಗೂ ಇತ್ತು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾದ ವರ್ಷದಲ್ಲೇ ಚಿರತೆಗೆ ಮುಕ್ತಿಯೂ ಸಿಕ್ಕಿತೆಂಬುದು ದೊಡ್ಡ ವಿಪರ್ಯಾಸದ ಸಂಗತಿಯಲ್ಲವೇ?

ಮನುಷ್ಯನು ಅಷ್ಟೊಂದು ಬೇಟೆಯಾಡಿದೆನೇ? ಎಂದು ಯಾರಾದರೂ ಕೇಳಬಹುದು. ಮನುಷ್ಯ ಬೇಟೆ ಆಡಿರುವುದು ಬರೀ ಚಿರತೆಯನ್ನಲ್ಲ. ಅದರ ಮುಖ್ಯ ಆಹಾರವಾದ ಜಿಂಕೆಗಳನ್ನು ಮತ್ತು ಆವಾಸಸ್ಥಾನವಾದ ಅರಣ್ಯ ಸಂಪತ್ತನ್ನು. ಹೊಟ್ಟೆಗೆ ಊಟವಿಲ್ಲ, ಉಳಿಯಲು ಜಾಗವಿಲ್ಲ ಎಂಬ ಪ್ರಾಣಿ ಉಳಿಯುವುದಾದರೂ ಎಲ್ಲಿ? ಮೃಗಾಲಯಗಳಲ್ಲೇ? ಚಿರತೆಯಂಥ ಪ್ರಾಣಿ ಮೃಗಾಲಯಗಳಲ್ಲಿ ಉಳಿಯುವುದು ತುಂಬಾ ಕಷ್ಟ. ಹುಲಿ ಸಿಂಹಗಳೋ ಚಿರತೆಯಷ್ಟು ವೇಗವಾಗಿ ಆಗಲೀ, flexible ಆಗಲೀ ಇಲ್ಲ. ಅವಕ್ಕೆ ತಮ್ಮದೇ ಆದ ನಿರ್ದಿಷ್ಟ ರಾಜ್ಯವಿರುತ್ತೆ. ಚಿರತೆಗಳು ಹಾಗಲ್ಲ. ಅಲೆಮಾರಿಗಳು. ಒಂದು ಕಡೆ ಕೂಡಿ ಹಾಕಲು ಸಾಧ್ಯವಿಲ್ಲ.

ಇರಾನ್ ದೇಶದಲ್ಲಿ ಇರುವ ಕೆಲವೇ ಚಿರತೆಗಳನ್ನು ಉಳಿಸಲು ಕೆಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಭೇಷ್.

ಬಿ.ಬಿ.ಸಿ. ವರದಿಯೊಂದು 2005 ಆಗಸ್ಟಿನಲ್ಲಿ ಇಂತಿತ್ತು. http://news.bbc.co.uk/2/hi/science/nature/4201180.stm.

ಇರಾನ್ ದೇಶಕ್ಕೆ ಚಿರತೆಯನ್ನು ಉಳಿಸುವ ಸಲುವಾಗಿ ಆಲ್ ದಿ ಬೆಸ್ಟ್. ನಮ್ಮ ಕೈಲೇನಾಗುತ್ತೋ ನಾವೂ ಮಾಡೋಣ. ಚಿರತೆ ಉಳಿಯಲಿ. ಭಾರತದ ಕಾಡುಗಳು ಮತ್ತೆ ಬೆಳೆದರೆ, ಇಲ್ಲಿಗೆ ಮತ್ತೆ ಬರಲಿ. ಬರುವುದೇ?-ಅ
13.08.2008
12AM

8 comments:

 1. hOudu chirathe,huli ellA AlisihOgthirodu irli.....ondu gubbachhi nOdOna andre kAnsolla eega.iddelladara pariNAma ondalla onddina mAnava saMkulave aLisiHOdru acchari illa bidi.

  by d way video thumbAne chennagide:)danyAvada odhugArondige hanchikondiddakke!

  ReplyDelete
 2. "ಈ ಚಿರತೆಯನ್ನು 'ಕ್ರೂರ ಮೃಗ' ಅಂತ ನಿರ್ನಾಮ ಮಾಡುತ್ತಾರಲ್ಲ ಈ ಮನುಷ್ಯರು... ಹೇಗಿದ್ದರೂ 'ಕ್ರೂರ' ಎಂಬ ಬಿರುದು ಬಂದಾಗಿದೆ... ಇವನ್ನು ಮುಂದೆ ಕ್ರೂರ ಪ್ರಾಣಿಗಳನ್ನಾಗೇ ಹುಟ್ಟಿಸುತ್ತೇನೆ" ಎಂದು ಮುನಿದುಕೊಂಡು ದೇವರು ಚಿರತೆಗಳಾಗಿದ್ದ ಜೀವಗಳನ್ನೆಲ್ಲಾ ಈಗ ಮನುಷ್ಯರನ್ನಾಗಿ ಹುಟ್ಟಿಸಿರಬೇಕು. ಅದಕ್ಕೇ ನೋಡು ಜಿಂಕೆಯಂಥ ಪ್ರಾಣಿಗಳನ್ನು ಕೊಲ್ಲುವ ಬುದ್ಧಿ ಬಂದಿದೆ ಕೆಲವು ಮನುಷ್ಯರಿಗೆ... ಪ್ರಾರಬ್ಧ ಸಂಸ್ಕಾರಗಳು!

  ReplyDelete
 3. che ! anyaaya aagoytalla...eshtOndh praani santati na naavu naashamaaDbittiddeve ! tumbaa feel aagtide. aa video dalllina pratiyondu chirte nODdaaglu nange ivigaLella anyaaya naasha aagodhvalla anta sankaTA aaytu !

  ReplyDelete
 4. [ಲಕುಮಿ] ನಿಜ. ಅನ್ಯಾಯ. ನಮ್ಮ ನಿರ್ನಾಮದ ಕಾಲ ದೂರವಿಲ್ಲ.

  [ಶ್ರೀಕಾಂತ್] ಹೌದು.

  [ಪುಷ್ಪಲತಾ] ಮೇಲೆ ಲಕುಮಿಗೆ ಬರೆದಿರುವ ಕಮೆಂಟನ್ನೂ ನೀವೂ ಓದಿಕೊಂಡುಬಿಡಿಪ್ಪಾ..

  ReplyDelete
 5. ಮನೋಹರ ಮಾಳಗಾವಕರ ಅವರು ಕೆಲವು ವರ್ಷಗಳ ಹಿಂದೆ
  Deccan Heraldದಲ್ಲಿ ಬರೆದ ಒಂದು ಲೇಖನದಲ್ಲಿ,
  ಬ್ರಿಟಿಶರು ಭಾರತಕ್ಕೆ ಬಂದ ಮೇಲೆ ಬೇಟೆಯಾಡಿದ ಕಾಡುಪ್ರಾಣಿಗಳ ಸಂಖ್ಯೆಯನ್ನು ಕೊಟ್ಟಿದ್ದರು. ಗಾಬರಿ ಹುಟ್ಟಿಸುವಂತಿತ್ತು ಆ ಸಂಖ್ಯೆ!
  ಮನುಷ್ಯ ಬೇಟೆಯಾಡಿ ಕೊಲ್ಲುವದಕ್ಕಿಂತ ಹೆಚ್ಚಾಗಿ ಉಪವಾಸ ಬೀಳಿಸಿ ಈ ಪ್ರಾಣಿಗಳನ್ನು ಕೊಲ್ಲುತ್ತಿದ್ದಾನೆ. ಹೇಗೆಂದರೆ ಹೆಚ್ಚುತ್ತಿರುವ ಜನಸಂಖ್ಯೆಗೆ ಬೇಕಾಗುವ ವಸತಿಗಾಗಿ, ಉರುವಲಕ್ಕಾಗಿ,ಟಿಂಬರ್‌ಗಾಗಿ ಮತ್ತು ಆಹಾರಕ್ಕಾಗಿ ಅರಣ್ಯಪ್ರದೇಶವನ್ನು ನಾಶ ಮಾಡುವದು ಅನಿವಾರ್ಯವಾಗಿದೆ. ಅರಣ್ಯನಾಶದ ಜೊತೆಗೇ ಕಾಡುಪ್ರಾಣಿಗಳ ನಾಶ ತಾನಾಗಿಯೇ ಆಗುತ್ತಿದೆ.
  ಕಾಡುಪ್ರಾಣಿಗಳು ಉಳಿಯಬೇಕಾದರೆ, ಮನುಷ್ಯನ ಜನಸಂಖ್ಯೆಯ ಮೇಲೆ ಕಡಿವಾಣ ಬೇಕು.

  ReplyDelete
 6. nice article, ivath reading.. ellinda ot madteeyo maraya information na!

  ReplyDelete
 7. odtiddaga nange aa kawasaki bajaj ad nalli chirate bartittalla ade nenpaagtittu :-) (adu chirte no leopard-o nange innu doubt-u ... aadroo ... )... and you know what ... even kb100 is extinct now !!!!

  ReplyDelete
 8. [ಸುನಾತ್] ಸರಿಯಾಗಿ ಹೇಳಿದಿರಿ. ಆದರೆ ಎಷ್ಟು ಬೇಸರದ ಸಂಗತಿಯಲ್ಲವೇ ಇದು..

  [ಶ್ರೀನಿಧಿ] ಮನೆ ತುಂಬಾ ಪುಸ್ತಕ, ಫೋನ್ ತುಂಬಾ ಕಾಂಟ್ಯಾಕ್ಟ್ಸು ಇರೋದು ವೇಸ್ಟ್ ಆಗ್ಬಾರ್ದು ಕಣಪ್ಪಾ.. ;-)

  [ವಿಜಯಾ] ಒಳ್ಳೇ ಕವಾಸಾಕಿ. ಚಿರತೆಯ ಹಾದಿ ಹಿಡಿದಿದೆ..

  ReplyDelete

ಒಂದಷ್ಟು ಚಿತ್ರಗಳು..