Wednesday, August 27, 2008

ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ....ಜಿರಲೆ ಬಗ್ಗೆ ಮತ್ತೆ ಬರೆಯುವಂತಾಗಿದೆ. ಅದೇನೋ ಜಿರಲೆಯಷ್ಟು ವಿಶೇಷ ಜೀವಿ ಬೇರೊಂದಿಲ್ಲ ಎನ್ನಿಸುತ್ತೆ ನನಗೆ. ನಮಗಿರುವುದು ಎರಡೇ ಕಣ್ಣುಗಳು, ನೋಟವೊಂದೇ. ಒಂದೊಂದು ಕಣ್ಣಿಗೊಂದೊಂದೇ ಲೆನ್ಸು (ಮಸೂರ). ಆದರೆ ಈ ಯಕ್ಕಶ್ಚಿತ್ ಹುಳುವಿಗೆ ಒಂದೊಂದು ಕಣ್ಣಲ್ಲೂ ಎರಡು ಸಾವಿರಕ್ಕೂ ಹೆಚ್ಚು ಮಸೂರಗಳಿರುತ್ತವೆ. ಅದ್ಯಾಕೋ ನಾ ಕಾಣೆ. ಅದೂ ಸರಿ, ಕೇವಲ ಎರಡೇ ಲೆನ್ಸಿನಲ್ಲಿ ಹೇಗೆ ಕಾಣುವುದು!! ಜಿರಲೆಗಳ ಲೆನ್ಸುಗಳ ಸಮಸ್ಯೆಯೆಂದರೆ ಕೆಂಪು ದೀಪದಡಿ ಇರುವಾಗ ಜಿರಲೆಗಳು ಕುರುಡು! ಹಸಿರು ದೀಪದಡಿ ಜಿರಲೆಗಳು ಮಹಾನ್ ದೂರದೃಷ್ಟಿವಂತರು!ಜಿರಲೆ ಕಥೆ ಇದಾದರೆ, ಜೇಡದ್ದು ಒಂದು ಕೈ ಮೇಲೆ. ಮುವ್ವತ್ತು ಸಾವಿರ ಲೆನ್ಸುಗಳು!! ಆದರೆ ನಮ್ಮ ಹಾಗೆ ಎರಡೇ ಕಣ್ಣಲ್ಲ. ಬಹುತೇಕ ಜೇಡಗಳಿಗೆ ಎಂಟು ಕಣ್ಣುಗಳಿರುತ್ತವೆ! ತಲೆಯ ಮೇಲೆ, ಮುಖದ ಮುಂದೆ ಹೀಗೆ ಎಲ್ಲೆಲ್ಲೋ ಕಣ್ಣುಗಳಿದ್ದರೂ ಬಹಳ ಮಂದ ದೃಷ್ಟಿ. ಎದುರಿರುವ 'ವಸ್ತು'ವಿನ ಪ್ರಖರತೆಯು (light ಅಥವಾ dark) ಮಾತ್ರ ಗೊತ್ತಾಗುತ್ತೆ ಜೇಡಗಳಿಗೆ. ಅದಕ್ಕೇ ಬಲೆಯೊಳಗೆ ಏನು ಬಿದ್ದರೂ ಅದರ ಬಳಿ ಮೊದಲು ಓಡಿ ಬರುತ್ತೆ, ನಂತರ ಪ್ರಖರತೆ ಹೆಚ್ಚಾದರೆ ದೂರ ಹೋಗಿ ಬಲೆಯೆಲ್ಲಾ ಅಲ್ಲಾಡುವಂತೆ ಕುಣಿಯುತ್ತೆ, ಹಾಗಾದರೂ ಆ ವಸ್ತು ಕೆಳಗೆ ಬಿದ್ದು ಹೋಗಲಿ ಅಂತ. ಪ್ರಖರತೆ ಹೆಚ್ಚಾಗದಿದ್ದರೆ ಬಲೆಯಿಂದ ಹೆಣೆದು ಗುಳುಂ ಸ್ವಾಹ ಮಾಡಿಬಿಡುತ್ತೆ.
ನಾವು "ಆ ಮನುಷ್ಯನಿಗೆ ಹದ್ದಿನ ಕಣ್ಣು" ಎಂಬಂತಹ ವಾಕ್ಯಗಳನ್ನು ಉಪಯೋಗಿಸುವುದುಂಟು. ಅವನಿಗೇನೋ ಹದ್ದಿನ ಕಣ್ಣು, ಆದರೆ ಹದ್ದಿಗೆ ಎಂಥಾ ಕಣ್ಣು? ಮನುಷ್ಯನ ಕಣ್ಣುಗಳು ಒಂದು ವಸ್ತುವನ್ನು ಗುರುತಿಸಲು ಆ ವಸ್ತುವು ಎಷ್ಟು ದೂರದಲ್ಲಿರಬೇಕೋ ಅದಕ್ಕಿಂತ ಎರಡರಷ್ಟು ದೂರದಲ್ಲಿರುವ ಅದೇ ಗಾತ್ರದ ವಸ್ತುವನ್ನು ಗುರುತಿಸಬಲ್ಲ ಶಕ್ತಿ ಹದ್ದುಗಳಿಗಿವೆ. ಅರ್ಥಾತ್, ಮನುಷ್ಯನ ಲೆನ್ಸುಗಳಿಗಿರುವ ಶಕ್ತಿಗಿಂತ ದುಪ್ಪಟ್ಟು ಶಕ್ತಿ ಹದ್ದುಗಳ ಲೆನ್ಸುಗಳಿಗಿವೆ. ಇದನ್ನು Spacial Frequency ಅಂತ ಕರೆಯುತ್ತಾರೆ. ಫಾಲ್ಕನ್ - Falco sparverius ಎಂಬ ಒಂದು ಬಗೆಯ ಹದ್ದು ನಮಗಿಂತ 2.6ರಷ್ಟು ಹೆಚ್ಚಿನ SF ಹೊಂದಿದೆ. ಸಾರಾಂಶವೆಂದರೆ ಹದ್ದುಗಳು ನಾವು ಏನನ್ನು ನೋಡುತ್ತೇವೆಯೋ ಅದನ್ನು zoom ಮಾಡಿಕೊಂಡು clear format ಅಲ್ಲಿ ನೋಡುತ್ತವೆ.ನಾವು ಹದ್ದಿನ ಕಣ್ಣು ಎಂದು ಹೇಳುವಂತೆ ಇಂಗ್ಲಿಷಿನವರು ಗುರಿ ಚೆನ್ನಾಗಿದ್ದವರಿಗೆ "ಬುಲ್ಸ್ ಐ" ಎನ್ನುತ್ತಾರೆ. ಗೂಳಿ ಕಣ್ಣು ಎಂದು ತರ್ಜುಮೆ ಮಾಡಿದರೆ ಅಷ್ಟು ಚೆನ್ನಾಗಿರುವುದಿಲ್ಲವಾದರೂ ಅರ್ಥ ಒಂದೇ. ಗೂಳಿಯನ್ನು ಕೆಣಕಿದರೆ ಅಟ್ಟಿಕೊಂಡು ಬರುವಾಗ ಅದರ ನೋಟ ಎದುರು ಇರುವ ವೈರಿಯ ಪ್ರಖರವಾದ ಒಂದು ಭಾಗದ ಮೇಲಿರುತ್ತೆ. ಎದುರಿರುವ ವೈರಿಯ ಬಟ್ಟೆಯ ಮೇಲೋ, ಕೈಯ ಮೇಲೋ, ಕಾಲಿನ ಮೇಲೋ, ಅಥವಾ.. ಎಲ್ಲೋ. ಅದರ ಗುರಿ, ಆ 'ಭಾಗ'ವನ್ನು ಗುದ್ದುವ ತನಕ ಬದಲಾಗುವುದಿಲ್ಲ. ನೇರ ನೋಟ. ಅದನ್ನೇ ನೋಡುತ್ತಲೇ, ಧಾವಿಸುತ್ತೆ. ಚಂಚಲಗೊಳ್ಳುವುದಿಲ್ಲ.

ಸಂಜೆಯ ಮಸುಕು ಮಸುಕು ಕತ್ತಲಲ್ಲದ ಬೆಳಕಿನಲ್ಲಿ, ಬೆಳಕಲ್ಲದ ಕತ್ತಲಿನಲ್ಲಿ ಮೊಬೈಲ್ ಫೋನು ಕಳೆದು ಹೋದಾಗ ಅದನ್ನು ಹುಡುಕಬೇಕೆಂದರೆ ಮನೆಯಲ್ಲಿ ಒಂದು ಬೆಕ್ಕು ಸಾಕಿಕೊಳ್ಳಬೇಕು. ನಮಗೆ ಎಷ್ಟು ಬೆಳಕು ಬೇಕೋ, ಅದರ ಎರಡರಷ್ಟು ಕಡಿಮೆ ಬೆಳಕಿನಲ್ಲಿ ಸ್ಪಷ್ಟವಾಗಿ ನೋಡಬಲ್ಲುದು ಬೆಕ್ಕು. ಬೆಕ್ಕಿನ ಕಣ್ಣು ಚೆಲುವಿಗೂ ಹೆಸರುವಾಸಿ. ಇದಕ್ಕೆ ಕಾರಣ ಹಲವು. ಬೆಕ್ಕುಗಳು ಪ್ರೀತಿ ವಾತ್ಸಲ್ಯವನ್ನು ವ್ಯಕ್ತ ಪಡಿಸುವುದು ಕಣ್ಣುಗಳಿಂದ, ನಾಯಿಗಳು ಬಾಲದಲ್ಲಿ ವ್ಯಕ್ತ ಪಡಿಸುವಂತೆ. ದುರುಗುಟ್ಟಿ ನೋಡಿ, ಕಣ್ಣು ಮಿಟುಕಿಸಿದರೆ ಆ ಬೆಕ್ಕು ತನ್ನ ಪ್ರೀತಿಯನ್ನು ತೋರಿಕೊಳ್ಳುತ್ತಿದೆಯೆಂದರ್ಥ. ಪ್ರತಿಯೊಂದು ಪ್ರಾಣಿಗೂ body language ಇರುತ್ತೆ. ಕೋಪಗೊಂಡಾಗ ಹೇಗಿರುತ್ತೆ, ಶಾಂತವಾದಾಗ ಹೇಗಿರುತ್ತೆ ಇತ್ಯಾದಿ - ಇರುವೆಗೂ ಕೂಡ! ಪ್ರಾಣಿಗಳ ಜೊತೆ ಇರುವವರು ಇದನ್ನು ಗಮನಿಸುತ್ತಲೇ ಇರುತ್ತಾರೆ. ಬೆಕ್ಕುಗಳಿಗೆ ದೂರದ ವಸ್ತುಗಳು ಚೆನ್ನಾಗಿ ಅದ್ಭುತವಾಗಿ ಕಂಡರೂ, ಕತ್ತಲಲ್ಲಿ ಏನೇನೇಲ್ಲಾ ಸಾಧಿಸಿದರೂ ಹತ್ತಿರದ ವಸ್ತುಗಳು ಮಂಜು ಮಂಜಾಗಿಬಿಡುತ್ತವೆ. ಮತ್ತೊಂದು ಅಚ್ಚರಿಯೆಂದರೆ ತನ್ನ ಮೂಗಿನ ನೇರಕ್ಕೆ ಬೆಕ್ಕು ಎಂದೂ ನೋಡಲಾಗದು!ನಮ್ಮ ಹಿರಿಯ ಕವಿಗಳು ಕಣ್ಣನ್ನು ಕಮಲಕ್ಕೆ ಹೋಲಿಸಿರುವುದು ಯಾಕೆ ಅಂತ ನನಗೆ ಇನ್ನೂ ಅರ್ಥ ಆಗಿಲ್ಲ. ಆದರೆ ಕವಿಗಳ ಪ್ರಕೃತಿಪ್ರೇಮವನ್ನು ಮೆಚ್ಚಬೇಕು. ಅದೇ ರೀತಿ ಮನುಷ್ಯ ಹೆಂಗಸಿನ ಕಣ್ಣನ್ನು "ಮೀನಾಕ್ಷಿ" ಎಂದೂ ಬಳಸಿಕೊಂಡಿದ್ದಾರೆ. ಗಂಡಸಿಗೆ ಮೀನಾಕ್ಷಿ ಇರುವುದಿಲ್ಲವೇನೋ ಪಾಪ, ಬೆಸ್ತಾಕ್ಷಿ ಅನ್ನಬಹುದೇನೋ ಗಂಡಸಿನ ಕಣ್ಣನ್ನು. ಮೀನಿನ ಕಣ್ಣು ಯಾಕೆ ಅಷ್ಟು ಪ್ರಸಿದ್ಧಿ ಪಡೆಯಿತು? ಕಣ್ಣು ತುಂಬಾ ಚಂಚಲವಾಗಿದ್ದರೆ ಅದನ್ನು ಸೌಂದರ್ಯ ಅನ್ನುತ್ತಾರೆ ಕವಿಗಳು. ಆದರೆ ಮನಸ್‍ಶಾಸ್ತ್ರಜ್ಞರು ಚಂಚಲ ಕಣ್ಣುಗಳಿರುವವರು ಸುಳ್ಳು ಹೇಳುವುದು ಜಾಸ್ತಿ ಎನ್ನುತ್ತಾರೆ. ಸೌಂದರ್ಯ ಮತ್ತು ಸುಳ್ಳು ಜೊತೆಜೊತೆಗೆ ಇರುತ್ತೆ ಅನ್ನಿಸುತ್ತೆ. ಮೀನುಗಳು ದೇವತೆಗಳಂತೆ ಅನಿಮಿಷಗಳು, ಅಂದರೆ ರೆಪ್ಪೆಗಳಿಲ್ಲದ ಜೀವಿಗಳು. ಬಹುಶಃ ದೇವತೆಗಳಿಗೆ ರೆಪ್ಪೆಯಿಲ್ಲ ಎನ್ನುವ ಕಲ್ಪನೆ ಕವಿಗಳಿಗೆ ಬಂದಿದ್ದು ಮೀನುಗಳನ್ನು ನೋಡಿದ ಮೇಲೆಯೇ ಅನ್ನಿಸುತ್ತೆ. ಪಾಪ, ಕಣ್ಣು ಬಿಟ್ಟುಕೊಂಡೇ ನಿದ್ದೆ ಮಾಡಬೇಕು ಮೀನುಗಳು!
ಇದು ಪುಫರ್‍ ಫಿಷ್ ಎಂಬ ಮೀನಿನ ಕಣ್ಣು


ಮೀನಿನ ಕಣ್ಣುಗಳಂತೆಯೇ ಜಿಂಕೆಯ ಕಣ್ಣುಗಳೂ ಸಹ ಬಹಳ ಪ್ರಸಿದ್ಧ. ಜಿಂಕೆಗೆ ಅಂಥಾ ದೂರದೃಷ್ಟಿಯಾಗಲೀ, ಚುರುಕು ಕಣ್ಣುಗಳಾಗಲೀ ಇಲ್ಲ. ಹೊಳೆಯುವ ಚಂಚಲ ಕಣ್ಣುಗಳಿವೆ. ಬಹುಶಃ ಹೆಂಗಸನ್ನು ವ್ಯಂಗ್ಯ ಮಾಡಲು ಜಿಂಕೆಯ ಕಣ್ಣವಳೇ ಎಂದು ಹೇಳಿದರೆನಿಸುತ್ತೆ ಹಿಂದಿನ ಗಂಡು ಕವಿಗಳು.


ಜಿಂಕೆ ಮೀನುಗಳ ಕಣ್ಣುಗಳ ಚೆಲುವಿಗಿಂತ ಸೊಗಸಾಗಿರುವುದು ಗೋಸುಂಬೆ (Chameleon) ಕಣ್ಣು! ಎರಡು ಕಣ್ಣು - ಎರಡು ನೋಟ!! ಎಡಗಣ್ಣು ಎಡಗಡೆ, ಬಲಗಣ್ಣು ಬಲಗಡೆ ತಿರುಗಿಸಿ, ಎರಡು ಭಿನ್ನ ನೋಟಗಳನ್ನು ಗ್ರಹಿಸಬಹುದಾದ ಶಕ್ತಿ ಗೋಸುಂಬೆಗಿದೆ. ಆದರೆ ಬೇಟೆಯ ಸಮಯದಲ್ಲಿ ಮಾತ್ರ ಈ ಎರಡೂ ಕಣ್ಣುಗಳು ಒಂದೇ ದಿಕ್ಕಿನಲ್ಲಿ ನೋಡುತ್ತಿರುತ್ತೆ.
ಕಣ್ಣುಗಳಿದ್ದು ಇಷ್ಟೆಲ್ಲಾ ಆಟಗಳಾಡುವ ಈ ಎಲ್ಲ ಜೀವಿಗಳಿಗಿಂತ ಕಣ್ಣೇ ಇಲ್ಲದೆ ಸಾಧಿಸುವ ಒಂದು ಪ್ರಾಣಿಗೆ ತಲೆಬಾಗುತ್ತವೆ. ಮನುಷ್ಯ ಕೂಡ ಇದನ್ನು ಕಂಡರೆ ಮೈಲಿ ದೂರ ಓಡುತ್ತಾನೆ. ಇದು ಕಣ್ಣಿಂದ ನೋಡಲು ಸಾಧ್ಯವೇ ಇಲ್ಲ, ಕಣ್ಣುಗಳೆಂಬ ಆಕೃತಿಗಳೇ ಇಲ್ಲ ಇದಕ್ಕೆ. ಇದು ಕೇವಲ ಉಷ್ಣವನ್ನು ಗ್ರಹಿಸಿ ಆಕ್ರಮಣ ಮಾಡುವ ಪ್ರಾಣಿ. ಇದರ ಹೆಸರು ಜಿಗಣೆ!

ಆದರೂ ನಮ್ಮ ಕಣ್ಣುಗಳು ಪುಣ್ಯ ಮಾಡಿವೆ. ಈ ಎಲ್ಲಾ ಪ್ರಾಣಿಗಳನ್ನೂ ನಾವು ನೋಡುತ್ತೇವೆ. ಮೇಲೆ ಹೆಸರಿಸಿದ ಯಾವ ಪ್ರಾಣಿಯೂ ಬೇರೆ ಎಲ್ಲಾ ಪ್ರಾಣಿಗಳನ್ನೂ ನೋಡಿರಲಾರದು. ನಮಗಿರುವುದು ಎರಡೇ ಕಣ್ಣು, ಎರಡೇ ಲೆನ್ಸು, ಒಂದೇ ನೋಟ - ನಾವು ಮನುಜರೂ... ನಾವು ಮನುಜರೂ...

-ಅ
28.08.2008
12AM

Friday, August 22, 2008

ಹುಳ ಚರಿತ್ರೆ ಅಥವಾ ಪಾರ್ಥೇನಿಯಂ ಪುರಾಣ ತಿಲಕಂಈ ಹುಳುವನ್ನು ನೋಡದೆ ಇರುವವರು ಯಾರು? ಅರೇ, ಇದು ಪಾರ್ಥೇನಿಯಮ್ ಮೇಲಿರುತ್ತಲ್ಲಾ ಅದೇ ಹುಳು ಅಲ್ಲವೇ?

ಅರವತ್ತು ವರ್ಷಗಳ ಕೆಳಗೆ ನಾನು ಈ ಪ್ರಶ್ನೆಯನ್ನು ನಮ್ಮ ದೇಶದಲ್ಲಿ ಯಾರ ಮುಂದೆಯೂ ಕೇಳುವಂತಿರಲಿಲ್ಲ. ಯಾಕೆಂದರೆ ಆಗ ಈ ಹುಳುವೂ ಇರಲಿಲ್ಲ, ಪಾರ್ಥೇನಿಯಮ್ಮೂ ಇರಲಿಲ್ಲ. ನಮ್ಮಜ್ಜನ ಕಾಲದಲ್ಲಿ ಪಾರ್ಥೇನಿಯಮ್ - Parthenium hysterophorus ಕಲ್ಪನೆಯೂ ಇರಲಿಲ್ಲ ಭಾರತದಲ್ಲಿ.

ಐವತ್ತರ ದಶಕದ ದಿನಗಳಲ್ಲಿ ಮೆಕ್ಸಿಕೋ ದೇಶದಿಂದ ಭಾರತಕ್ಕೆ ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದರು. ಪಿ.ಎಲ್. 480 ಎಂಬ ವಿಶೇಷ ಗೋಧಿ. ಇದರ ಜೊತೆಗೆ ಹಾದಿ ತಪ್ಪಿ ಒಮ್ಮೆ ಒಂದು 'ಕಳೆ' (weed) ಬಂದುಬಿಟ್ಟಿತು. ಸರಿ, ನಮ್ಮ ರೈತರಿಗೆ ಅಷ್ಟು ಅರಿವಾಗಲಿಲ್ಲ. ಆದರೆ ಯಾವಾಗ ಸಿಕ್ಕ ಸಿಕ್ಕ ಕಡೆ ಖಾಲಿ ನಿವೇಶನಗಳಲ್ಲಿ, ಮೋರಿಯ ಪಕ್ಕ, ರೈಲ್ವೇ ಹಳಿಗಳ ಮೇಲೆ, ಹೊಲದ ಆಸುಪಾಸುಗಳಲ್ಲಿ ಹೀಗೆ ಕಂಡ ಕಂಡ ಕಡೆ ಎಲ್ಲಾ ಕೆಲವೇ ದಿನಗಳಲ್ಲಿ ಬೆಳೆದುಬಿಟ್ಟಿತೋ ಆಗ ಇಡೀ ಗ್ರಾಮೀಣ ದೇಶ ತತ್ತರಿಸಿಬಿಟ್ಟಿತು. ನೋಡೋಕೆ ಕ್ಯಾರೆಟ್ ಗಿಡದಂತಿರುವ ಈ ಪಾರ್ಥೇನಿಯಮ್‍ನನ್ನು ರೈತರು ಮತ್ತು ಸಸ್ಯಶಾಸ್ತ್ರಜ್ಞರು ಕ್ಯಾರೆಟ್ ವೀಡ್ ಎಂದೇ ಕರೆದರು. Weed ಅಥವಾ ಕಳೆ ಎಂದರೆ ನಿರುಪಯುಕ್ತ ಬೆಳೆ ಎಂದರ್ಥ. ಯಾವ ಗಿಡ ಎಲ್ಲಿ ಬೆಳೆಯಬಾರದೋ ಅಲ್ಲಿ ಬೆಳೆದರೆ ರೈತರ ಭಾಷೆಯಲ್ಲಿ ಅದನ್ನು ಕಳೆ ಎನ್ನಬಹುದು.ಈ ಪಾರ್ಥೇನಿಯಮ್ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಲು ಕಾರಣವಿದೆ. ಇದರ ಹೂಗಳಲ್ಲಿರುವ pollen grains (ಕನ್ನಡದಲ್ಲಿ ಏನಂತಾರೋ ಗೊತ್ತಿಲ್ಲ) ಜನರಿಗೆ ಅಲರ್ಜಿಯನ್ನುಂಟು ಮಾಡುತ್ತೆ, ಇದರ ಎಲೆ ಬೆರೆತುಕೊಂಡ ಗಿಡಗಳನ್ನೋ ಸೊಪ್ಪನ್ನೋ ತಿಂದ ಆಕಳು 'ಕಹಿ ಹಾಲು' ಉತ್ಪತ್ತಿ ಮಾಡುತ್ತೆ, ಹೂವನ್ನು ಸೋಕಿಸಿಕೊಂಡರೆ ತುರಿಕೆ, ಇದರ ಗಾಳಿ ಸೇವಿಸಿದರೆ ಉಸಿರಾಟದ ತೊಂದರೆ, ಗೂರಲು, ಆಸ್ತಮ. ಸುತ್ತ ಮುತ್ತಲಿನ ಬೆಳೆಗಳಲ್ಲಿ ಶೇಕಡ ಐವತ್ತರಷ್ಟು ನಾಶ ಮಾಡಬಲ್ಲುದು. ಅಬ್ಬಬ್ಬಾಹ್.. ಜೊತೆಗೆ ಒಂದೊಂದು ಗಿಡವೂ ಸಾವಿರ ಸಾವಿರಗಟ್ಟಲೆ ಬೀಜಗಳನ್ನು ಉತ್ಪತ್ತಿ ಮಾಡುವುದೂ ಅಲ್ಲದೇ, ಕೇವಲ ಗಾಳಿಯಿಂದ ಪರಾಗಸ್ಪರ್ಶವಾಗುವ ತಾಕತ್ತುಳ್ಳದ್ದು. ಪ್ರಕೃತಿಯಲ್ಲಿ ಇಂಥಾ ಭಯಾನಕ ಜೀವಿಯೊಂದಿದೆಯೇ, ಅದರಲ್ಲೂ ಸಸ್ಯವರ್ಗದಲ್ಲಿ ಎಂದು ಅಚ್ಚರಿಯನ್ನುಂಟು ಮಾಡುವುದಲ್ಲವೇ?

ಮೆಕ್ಸಿಕೋದವರ ಸಮಸ್ಯೆ ಇನ್ನೂ ಗಂಭೀರವಾಗಿತ್ತು. ಅಲ್ಲಿನ ಹವಾಗುಣಕ್ಕೆ ಬೆಳೆಯುತ್ತಿದ್ದ ಪಾರ್ಥೇನಿಯಮ್ಮುಗಳಲ್ಲಿ ಹೈಮೆನಿನ್ ಎಂಬ ವಿಷಪೂರಿತ ರಾಸಾಯನಿಕವಿತ್ತು. ಅದೊಂದು ಡಯಾಸ್ಟಿರಿಯೋಮರ್ ಆಗಿರುವುದು ಆ ಜನರ ದುರದೃಷ್ಟ. (ನಾಲ್ಕೈದು ವೆಬ್‍ಸೈಟುಗಳನ್ನು ಹುಡುಕಾಡಿದ ಮೇಲೆ, simplest ವಿವರಣೆ ನೀಡಿರುವ ತಾಣವಿದು ಎಂದೆನಿಸಿತಷ್ಟೆ. ಅದೊಂದು ವಿಷ ಎಂದರ್ಥವಾದರಷ್ಟು ಸಾಕು).

Parthenium Dermatitis ಎಂಬ ಕಾಯಿಲೆಯನ್ನು ನಮ್ಮ ದೇಶದಲ್ಲಿ ಹುಟ್ಟುಹಾಕಿಬಿಟ್ಟಿತು ಈ ಗಿಡ.

ಪಾರ್ಥೇನಿಯಮ್ ಗಿಡವನ್ನು ತಿನ್ನುವ ಒಂದು ಪ್ರಾಣಿಯೂ ನಮ್ಮಲ್ಲಿರಲಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಗೇ ಕಳಂಕ ಈ ಪಾರ್ಥೇನಿಯಮ್ಮು. ಕನ್ನಡನಾಡನ್ನು ಗಂಧದ ಗುಡಿ ಎಂದು ನಾವು ಹೇಳಿಕೊಳ್ಳುವಂತೆ ಮೆಕ್ಸಿಕೋ ದೇಶದಲ್ಲಿ ಈ ಪಾರ್ಥೇನಿಯಮ್ಮು ಹೇರಳವಾಗಿದ್ದುದರಿಂದ ಅವರು ಅಲ್ಲಿ ಇದರ ನಿರ್ಮೂಲನೆಗೆ ಏನು ಮಾಡುತ್ತಿದ್ದಾರೆಂದು ಅರಿತುಕೊಂಡ ನಮ್ಮ ದೇಶದ ತಜ್ಞರು, ಆ ಚಿಕ್ಕ ಹುಳುವನ್ನು ಆಮದು ಮಾಡಿಕೊಂಡರು. ಅದನ್ನು ಮೆಕ್ಸಿಕನ್ ಬೀಟ್ಲ್ - zygogramma bicolorata ಎಂದು ಕರೆದರು. ಅದೇ ಹುಳುವೇ ಮೇಲಿರುವ ಚಿತ್ರದಲ್ಲಿ ಪೋಸು ಕೊಡುತ್ತಿರುವುದು.

ನನಗೆ ನೆನಪಿದೆ, ಬಾಲ್ಯದಲ್ಲಿ ಈ ಹುಳುಗಳನ್ನು "ಲೇಡಿ ಬರ್ಡ್" ಎಂದು ತಪ್ಪು ತಿಳಿದುಕೊಂಡಿದುದಲ್ಲದೆ, ಇದನ್ನು ಸಾಕಬೇಕೆಂದು ಮನೆಗೆ ತಂದು ಡಬ್ಬಿಯೊಳಗೆಲ್ಲಾ ಹಾಕಿಟ್ಟು, ಸಕ್ಕರೆ ತಿನ್ನುತ್ತೆಂದು ಭಾವಿಸಿ ಪಾಪ, ಪಾರ್ಥೇನಿಯಮ್ ಬದಲು ಸಕ್ಕರೆ ಹಾಕಿ ಅದೆಷ್ಟು ಮೆಕ್ಸಿಕೋ ಹುಳುವನ್ನು ಕೊಂದೆನೋ ಏನೋ.. ಈ ಹುಳುಗಳು ಹಾರುತ್ತವೆ ಕೂಡ ಎಂದು ನನಗೆ ತಿಳಿದಿದ್ದು ಹಠಾತ್ತೆನೆ ನನ್ನ ಕಣ್ಣಿಗೆ ಹೊಡೆದಾಗ. ಆಗಿನ್ನೂ ನನಗೆ ಐದಾರು ವಯಸ್ಸಿರಬಹುದು. ಬನಶಂಕರಿ ಸೆಕೆಂಡ್ ಸ್ಟೇಜ್ ಮನೆಯ ಆಸುಪಾಸಿನಲ್ಲಿ ಪಾರ್ಥೇನಿಯಮ್ಮಿಗೆ ಬರವಂತೂ ಇರಲಿಲ್ಲ. ಆ ಪಾರ್ಥೆನಿಯಮ್ ಕಾಡಿನಲ್ಲೇ ಕಾಲುದಾರಿಗಳೂ ಹೇರಳವಾಗಿತ್ತು. ಆ ದಾರಿಯಲ್ಲಿ ಒಮ್ಮೆ ನಡೆದು ಹೋಗಿ ಬಂದರಾಯಿತು, ಬಟ್ಟೆ ಬರೆ ಎಲ್ಲಾ ಘಮಘಮ - ಪಾರ್ಥೇನಿಯಮ್ಮಿನದು. ಪುಣ್ಯಕ್ಕೆ ಮೇಲೆ ಹೆಸರಿಸಿದ ಯಾವ ಕಾಯಿಲೆಗೂ ನಾನಾಗಲೀ ಮನೆಯವರಾಗಲೀ ತುತ್ತಾಗಲಿಲ್ಲ.

ಈ ಹುಳುಗಳು ಆತ್ಮರಕ್ಷಣೆಗೋಸ್ಕರ ಗಬ್ಬು ವಾಸನೆಯ ದ್ರವವನ್ನು ಹೊರಹಾಕುತ್ತೆ. ಕೈಯೆಲ್ಲಾ ವಾಸನೆ. ಆದರೂ ಬೇಸರ ಪಟ್ಟುಕೊಳ್ಳದೆ ಇದನ್ನು ಸಾಕುತ್ತೇನೆಂದು ಸಾಕು ಸಾಕೆಂದರೂ ಸಾಯಿಸಿದ್ದೆ.

ಎಲ್ಲ ದುಂಬಿಗಳಂತೆ, ಚಿಟ್ಟೆಗಳಂತೆ ಈ ಹುಳವೂ ಸಹ ಲಾರ್ವಾ ಹಂತದಿಂದಲೇ ಬೆಳೆಯುವುದು. ಅವರೆಕಾಯಿ ಹುಳುವಿನಂತೆ ಕಾಣಿಸುವ ಇದರ ಲಾರ್ವಾ ಸುಮಾರು ಎಂಟು ಹತ್ತು ಎಲೆಗಳನ್ನು ತಿಂದು ಹದಿನೈದು ಇಪ್ಪತ್ತು ದಿನಗಳೊಳಗೆ ಪ್ಯೂಪಾ ಕೂಡ ಮುಗಿಸಿ ಬೆಳೆದು ನಿಂತಿರುತ್ತೆ. ಈ ಪ್ರಪಂಚದಲ್ಲಿ ಪಾರ್ಥೇನಿಯಮ್ಮಿನಂಥ ಬ್ರಹ್ಮರಾಕ್ಷಸನನ್ನು ತಿನ್ನಲು ಶಕ್ತಿಯಿರುವುದು ಈ ಮೆಕ್ಸಿಕನ್ ಬೀಟ್ಲ್ ಒಂದಕ್ಕೇ ಆದರೂ, ಒಂದು ಗಿಡವು ಸಂಪೂರ್ಣವಾಗಿ ಹೋಗಲು ಕನಿಷ್ಠ ನೂರು ಹುಳು ಬೇಕಾದೀತು. ಆದರೆ ಇವು ಮಳೆಗಾಲದಲ್ಲಿ ಮಾತ್ರ ಬದುಕುವ ಹುಳುಗಳು. ಏನು ಮಾಡೋದು ಈಗ? ರಾಷ್ಟ್ರೀಯ ಕಳೆ ವಿಜ್ಞಾನ ಸಂಸ್ಥೆಯು ಎಷ್ಟು ಸಾಧ್ಯವೋ ಅಷ್ಟು ಪಾರ್ಥೇನಿಯಮ್ ನಿರ್ಮೂಲನೆಯಾಗಲಿ ಎಂದು ಹೋರಾಟ ಮಾಡುತ್ತಾ ಈ ಮೆಕ್ಸಿಕನ್ ಬೀಟ್ಲ್ ಕೀಟ ಸೈನ್ಯವನ್ನು ಬಳಸಿಕೊಳ್ಳುತ್ತಿದ್ದಾರೆ.

ಮೆಕ್ಸಿಕೋ ದೇಶದಿಂದ ಬಂದ ಶತ್ರುವಿನಾಶಕ್ಕೆ ಮೆಕ್ಸಿಕೋ ಇಂದಲೇ ರಕ್ಷಕನನ್ನೂ ಕರೆತರುವಂತಾಯ್ತು. ಆದರೆ ಈ ಹುಳು ಸೂರ್ಯಕಾಂತಿಯ ಮೇಲೂ ದಾಳಿ ಮಾಡುವುದು ರೈತರ ಇನ್ನೊಂದು ತಲೆನೋವು. ಇದರ ಸಲುವಾಗಿ ಕೀಟನಾಶಕ ಬಳಸಿ ಇದನ್ನು ಕೊಲ್ಲುತ್ತಾರೆ. ಪಾರ್ಥೇನಿಯಮ್‍ಗೆ ಮಾತ್ರ ಬೇರೆ ಯಾವ ನಾಶಕಗಳೂ ಇಲ್ಲ.

ಅಂದ ಹಾಗೆ, ಪಾರ್ಥೇನಿಯಮ್ ಗಿಡವನ್ನು ಕಾಂಗ್ರೆಸ್ ಗಿಡವೆಂದೂ ಕರೆಯುತ್ತಾರೆ. ಐವತ್ತಾರನೆಯ ಇಸವಿಯಲ್ಲಿ ಪುಣೆಗೆ US ಕಾಂಗ್ರೆಸ್ಸು ಮೆಕ್ಸಿಕನ್ ಗೋಧಿಯನ್ನು ರವಾನಿಸಿತ್ತು. ಆ ಕಾರಣದಿಂದ ಈ ಗಿಡಕ್ಕೆ ಕಾಂಗ್ರೆಸ್ ಗಿಡವೆಂದು ಹೆಸರು ಬಂತು. ಆಗಲೇ ಹೇಳಿದಂತೆ ನೋಡಲು ಕ್ಯಾರೆಟ್ ಗಿಡದಂತಿರುವ ಪಾರ್ಥೇನಿಯಮ್ಮಿಗೆ ಕ್ಯಾರೆಟ್ ಕಳೆ ಎಂದೂ ಕರೆಯುತ್ತಾರೆ.
ಆಗಲೇ ಕೇಳಿದ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿಕೊಳ್ಳಬೇಕಾಗಿದೆ. ಪ್ರಕೃತಿಯಲ್ಲಿ, ಅದರಲ್ಲೂ ಸಸ್ಯವರ್ಗದಲ್ಲಿ ಇಷ್ಟು ಕೆಟ್ಟ ಜೀವಿಯಿರಲು ಸಾಧ್ಯವೇ? ಇದರಿಂದ ಮೆಕ್ಸಿಕನ್ ಬೀಟ್ಲ್ ಹೊರೆತು ಪಡಿಸಿ ಬೇರೆ ಯಾವ ಜೀವಿಗೂ ಉಪಯೋಗವಾಗದೇ?

ನಮಗೆ ಉಪಯೋಗವಾಗುತ್ತಿದೆ ಎನ್ನುತ್ತೆ ಹೋಮಿಯೋಪತಿ!!

ಇಲಿಗಳಲ್ಲಿ ಟ್ಯೂಮರ್‍ಗಳನ್ನೇ ನಾಶ ಮಾಡಿತು ಪಾರ್ಥೇನಿಯಮ್ ಗಿಡದಲ್ಲಿರುವ ಪಾರ್ಥೆನಿನ್ ಎಂಬ ರಾಸಾಯನಿಕ ವಸ್ತು. ಮನುಷ್ಯನಲ್ಲೂ ನಿಧಾನಕ್ಕೆ ಕೆಲಸ ಮಾಡುತ್ತೆ ಎಂದು ಹೋಮಿಯೋಪತಿ ವೈದ್ಯರ ಅಂಬೋಣ.

ಪಾರ್ಥೇನಿಯಮ್ ಬೇರುಗಳಿಂದ ಮಾಡಿದ ಟಾನಿಕ್ಕು, ಗುಳಿಗೆಗಳು ವಾಂತಿ ಬೇಧಿಗಳನ್ನು ತಡೆಗಟ್ಟುತ್ತೆ.

ಪಿತ್ತಕೋಶದ ತೊಂದರೆ (hepatic amoebiosis)ಗೆ ಇದರ ಬೇರುಗಳ ಡಿಕಾಕ್ಷನ್ನು ಕೊಡುತ್ತಾರೆ.

ಪಾರ್ಥೇನಿಯಮ್ ಗಿಡದ ವಿಷವೆಂದೇ ಕುಖ್ಯಾತಿಗೊಳಗಾದ ಪಾರ್ಥೆನಿನ್ ರಸಾಯನ, ರುಮ್ಯಾಟಿಸಮ್‍ನನ್ನೇ ಗುಣಪಡಿಸುವ ಔಷಧಿಯಾಗಿಬಿಟ್ಟಿದೆ.

ದುರಾದೃಷ್ಟವಶಾತ್ ನಮ್ಮ ಜನಕ್ಕೆ ಆಂಗ್ಲಪದ್ಧತಿಯ ಮೇಲಿರುವ 'ಮೂಢ' ನಂಬಿಕೆಯು ಹೋಮಿಯೋಪತಿಯನ್ನಾಗಲೀ ಆಯುರ್ವೇದವನ್ನಾಗಲೀ ಹೆಚ್ಚಾಗಿ ಬೆಳೆಯಲು ಬಿಟ್ಟಿಲ್ಲ. ಆದರೆ ಕಾಲವು ಮುಂದಿದೆ.

ಅಥಾ ಹುಳಚರಿತ್ರಾ ಅಥವಾ ಪಾರ್ಥೇನಿಯಂ ಪುರಾಣ ತಿಲಕಂ ಸಂಪೂರ್ಣಮ್.

-ಅ
22.08.2008
5.15AM

Tuesday, August 19, 2008

ಶಕ್ತಿಶಾಲಿಗೇ ಜಯ

ಮೊಸಲೆ ತಾನ್ ಕೂಗಿತು
ಮೂರು ಸಾಸಿರ ಲಕ್ಷವರ್ಷಗಳಿಂದಲೂ
ಕೊಂದು ತಿಂದು ಮಿಂದು ಇಂದು
ಬದುಕಿ ಉಳಿದು ಬೆಳೆದು ಸೆಳೆದು
ನದಿಗೆ ನಾನೆ ರಾಜನೆಂದು
ನನ್ನ ಕೊಲುವರಾರೂ ಇಲ್ಲ
ಜಲದಿ ಇರುವೆನೊಬ್ಬನೇ
ವೀರ ನಾನೆಂದು!

ಆಮೆಯೊಂದು ಶನಿಗತಿಯೊಳು
ಕಡಲ ಹೊರಗೆ ಶಾಂತಮತಿಯೊಳು
ನುಡಿಯಿತು
ವರ್ಷ ವರ್ಷ ನನಗೆ ಹರ್ಷ
ಶತ್ರುವಿಲ್ಲ ಜಗದಲಿ
ನುಸುಳಿ ಬಿಡುವೆ ಚಿಪ್ಪಿನೊಳಗೆ
ಜೀವಿಸಿರುವೆ ಸೊಗದಲಿ
ಕಡಲಿನರಸ ಮತ್ಸ್ಯವಲ್ಲ ಕೂರ್ಮವು
ಬದುಕಿ ಬೆಳೆದಿರುವುದೆನ್ನ ಮರ್ಮವು.

ಕೆಲವೆ ವರ್ಷ ಸಂದು ಆಯ್ತು
ಮಂಗನಿಂದ ಮಾನವ
ಮೊಸಲೆ ಕೂರ್ಮ ಒಂದು ಬಿಡದೆ
ಎಲ್ಲ ಕೊಂದ ದಾನವ
ಒಳಿತು ಹುಳಿತು ಒಂದನರಿತು
ಬಾಳಲರಿತು ನಡೆಯದೆ
ಹಳತು ಹೊಸತು ಎಲ್ಲ ಮುಗಿಸಿ
ವೀರೆನೆಂದು ಮೆರೆವನು

ಶೀತವಲಯದಲ್ಲಿ ಹೊದಿಕೆ
ಉಷ್ಣದಲ್ಲಿ ಬೀಸಣಿಕೆಯು
ನೀರಿನಲ್ಲಿ ದೋಣಿಯಾನ ಬಾಂ-
ದಳದಲವನ ವಿಮಾನವು
ಧ್ರುವವ ಮುಟ್ಟಿ, ಶಿಖರ ಹತ್ತಿ
ಕಡಲ ಆಳ ಬಲ್ಲನು
ಆದರೇನು, ಮನುಜ ತಾನು
ಪ್ರಕೃತಿಯೆದುರು ನಿಲ್ಲನು.

ಮನುಜಕಿಂತ ಶಕ್ತಿಶಾಲಿ ಜೀವಿಯುಂಟೆ ಜಗದೊಳು?
ಇಹುದು, ಇಲ್ಲೆ ಶತಶತಮಾನದಿಂದ
ಮೊಸಲೆ ಕೂರ್ಮ ಜನನದಿಂದ
ನೋಡಿ ತಿಳಿದ ಜೀವಿಯು
ಧ್ರುವದ ಚಿಂತೆ ಇದಕೆ ಇಲ್ಲ
ಚಳಿ ಶೆಖೆಗಳ ಭೀತಿಯಿಲ್ಲ
ತಾಪ ಶಾಪ ಕೂಪ ಭೂಪ
ನಶಿಸಲಾಗದೆಂದಿಗೂ
ಮನುಜ ಬರುವ ಮುನ್ನ ಬಂದು
ಮನುಜ ಹೋದ ಮೇಲೂ ಇದ್ದು
ಮೆರೆವುದರಸನಾಗಿಯೇ

ಸಾಸಿರ ಕಂಗಳಲಿ ಜಗವನೆಲ್ಲ ನೋಡುತ
ಎರಡು ಚಾಟಿಗಳಲಿ ಎಲ್ಲರ ಕಾಡುತ
ನೆಲದಿ ಹೊಲದಿ ಹರಿಯಲಿದಕೆ ಷಟ್ಪಾದವು
ಜೀರ್ಣವಿದಕೆ ಸಕಲೋಪನಿಷದ್ವೇದವು
ಮನುಜ ಬರುವ ಮುನ್ನ ಬಂದ ಜೀವಿಯಲ್ಲ ತರಳೆಯು
ಮನುಜ ಹೋದ ಮೇಲೂ ಇದ್ದು ಮೆರೆವುದೀ ಜಿರಳೆಯು!!

-ಅ
19.08.2008
1.20AM

Monday, August 11, 2008

ಹೋದವರು ಮತ್ತೆ ಬರಲಾರರು

ಬಾಲ್ಯದಲ್ಲಿ ನಮ್ಮ ಮೇಷ್ಟ್ರುಗಳು ಹೇಳಿಕೊಡುತ್ತಿದ್ದುದು ಚೆನ್ನಾಗಿ ನೆನಪಿದೆ. "ಈ ಪ್ರಾಣಿಗಳನ್ನೆಲ್ಲಾ ನಾವು ಉಳಿಸದೆ ಇದ್ದರೆ ನಮ್ಮ ಮುಂದಿನ ಪೀಳಿಗೆಯವರು ಕೇವಲ ಚಿತ್ರಪಟಗಳಲ್ಲಿ ನೋಡಬೇಕಾಗುತ್ತೆ" ಅಂತ. ಇಂಥಾ ಜೀವಸಂಕುಲಗಳನ್ನು "Endangered Species" ಎನ್ನುತ್ತೇವೆ. ಆದರೆ ಕೆಲವು ಸಂಕುಲಗಳು ಸಂಪೂರ್ಣ ನಶಿಸಿ ಹೋಗಿವೆ. ನೂರಕ್ಕೆ ತೊಂಭತ್ತೊಂಭತ್ತು ಜೀವಸಂಕುಲಗಳು ಅಳಿಯಲು ಮನುಷ್ಯನೇ ನೇರ ಕಾರಣ. ಇನ್ನುಳಿದ ಭಾಗದ ಸಂಕುಲದ ನಾಶಕ್ಕೆ ಸ್ವತಃ ಸೃಷ್ಟಿಕರ್ತ ಪ್ರಕೃತಿಯೇ ಕಾರಣವಾಗಿರುತ್ತೆ, ವಿಕಾಸದ ಸಲುವಾಗಿ.

ಭಾರತದಲ್ಲಿ ರಾರಾಜಿಸುತ್ತಿದ್ದ ಅರಣ್ಯಗಳಲ್ಲಿದ್ದ ಪ್ರಾಣಿ ಪಕ್ಷಿ ಗಿಡ ಮರಗಳ ಪೈಕಿ ಅನೇಕವು ಈಗ ಇಲ್ಲ. ಹಲವಾರು ಕೇವಲ ಮೃಗಾಲಯಗಳಲ್ಲಿವೆ ಎಂಬುದು ತಿಳಿದಿರುವ ವಿಷಯವೇ.

ಆ ಗತಕಾಲದ ವೈಭವವನ್ನು ನೆನಪಿಸಿಕೊಂಡು ಅವಕ್ಕೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಈ ಸರಣಿ.

........................................................................................

ಕಾಲ: 1990

ತೀರ ಇತ್ತೀಚೆ ಅನ್ನಿಸುತ್ತಾ?

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಂದು ವರದಿಯಾಗಿತ್ತು. "ಬಹುಶಃ" ಕಾಣಿಸಿದ್ದು ಚಿರತೆಯೇ ಅಂತ. ನಲವತ್ತೈದು ವರ್ಷದಿಂದ ಕಾಣಿಸಿರಲಿಲ್ಲ.

ಇದೇನು ಚಿರತೆಗಳು ಅಷ್ಟೊಂದು ಇದೆ ಅಂತಾರಲ್ಲಾ?ದಕ್ಷಿಣ ಭಾರತದ ಚಿರತೆಗಳೇ ಬೇರೆ. ಇದು ಲೆಪರ್ಡ್ - Panthera pardus. ಆದರೆ ಚೀತಾಹ್ ಅನ್ನೋ ಇನ್ನೊಂದು ಪ್ರಾಣಿ ಇತ್ತು ನಮ್ಮ ದೇಶದಲ್ಲಿ. Asiatic Cheetah - Acinonyx jubatus venaticus ಅಂತಲೇ ಕರೆದಿದ್ದೆವು. ಪೂರ್ವ ಹಿಮಾಲಯದ ತಪ್ಪಲಿನ ಅರಣ್ಯಗಳಿಂದ ಹಿಡಿದು ಪಶ್ಚಿಮ ಘಟ್ಟದ ತುದಿಯ ವರೆಗೂ ಎಲ್ಲೆಡೆಯೂ ಇತ್ತು. ವಿಶ್ವದ ಅತಿ ವೇಗದ ಪ್ರಾಣಿ ಈಗ ಕೇವಲ ಆಫ್ರಿಕಾದಲ್ಲಿದೆ. ಬೇರೆ ಕಡೆ ಕಾಣಿಸುವುದು ಬೆರಳೆಣಿಕೆಯಷ್ಟು ಅಷ್ಟೆ. ನಮ್ಮ ದೇಶದಲ್ಲಿ ಇದರ ಹೆಸರು ಅಳಿಸಿ ಹೋಗಿ ಕೆಲವು ಹತ್ತಾರು ವರ್ಷಗಳಾಗಿವೆ ಅಷ್ಟೆ.ಪಾಕಿಸ್ತಾನ, ಬಲೂಚಿಸ್ತಾನದಲ್ಲಿ ಆಗಾಗ್ಗೆ ವರದಿಗಳು ಬರುತ್ತಿವೆ. ಆದರೆ ಈಗಲೋ ಆಗಲೋ ಅಳಿಯುವ ಘಟ್ಟದಲ್ಲಿ ಚೀತಾಹ್ ಇದೆ.

ಮನುಷ್ಯನಿಗೆ ಈ ಚೀತಾಹ್ ತುಂಬಾ ಹತ್ತಿರದ ಗೆಳೆಯನಾಗಿತ್ತು. ನಮ್ಮ ರಾಜರು ಇದನ್ನು ಬೇಟೆಗೆ ಬಳಸಿಕೊಳ್ಳುವುದಕ್ಕೋಸ್ಕರ ಸಾಕುತ್ತಿದ್ದರು. ಅಕ್ಬರನು ಸಾವಿರಕ್ಕೂ ಹೆಚ್ಚು ಚಿರತೆಗಳನ್ನು ಸಾಕಿದ್ದನಂತೆ. ಚಿರತೆಗಳನ್ನು ಪಳಗಿಸುವುದು ಬಹಳ ಸುಲಭವಾಗಿತ್ತು. ನಾಯಿಯನ್ನು ಪಳಗಿಸುವಷ್ಟೇ ಸುಲಭ ಎಂದು ಪ್ರಾಣಿತಜ್ಞರು ಉಲ್ಲೇಖಿಸುತ್ತಾರೆ. ಬ್ಲ್ಯಾಕ್ ಬಕ್, ಗ್ಯಾಜೆಲ್ ಮುಂತಾದ ಜಿಂಕೆಗಳನ್ನು ಬೇಟೆಯಾಡಲು ಚಿರತೆಗಳು ತುಂಬಾ ಉಪಯುಕ್ತವಾಗಿದ್ದವು. ಪಳಗಿಸಿ, ಕಣ್ಣಿಗೆ ಬಟ್ಟೆ ಕಟ್ಟಿ, ಕಾಡಿಗೆ ಕರೆದೊಯ್ದು ಬೇಟೆಯಾಡಿಸುತ್ತಿದ್ದರು. ನಂತರ ಚಿರತೆಯನ್ನೂ ಬೇಟೆಯಾಡಿ ಕೊಂದು "ವೀರ" ಎಂದು ಚಿರತೆಯ ಶವದ ಮೇಲೆ ಕಾಲಿಟ್ಟು ಚಿತ್ರ ಬರೆಸಿಕೊಳ್ಳುತ್ತಿದ್ದರು. ಪರ್ಶಿಯನ್ ಚಿತ್ರಗಳನೇಕವು ಚಿರತೆಗಳನ್ನೊಳಗೊಂಡಿವೆ.

1990ರಲ್ಲಿ ಕಾಣಿಸಿತು ಎಂದು ವರದಿಯಾದರೂ ಅದನ್ನು ನಂಬದೇ ಇರಲು ಕಾರಣಗಳಿವೆ. ಅದಕ್ಕೆ ಮುಂಚೆ ಚಿರತೆಯು ಕಾಣಿಸಿದ್ದು 1947ರಲ್ಲಿ.
ಹೆಚ್ಚು ಕಡಿಮೆ ನಲವತ್ತೈದು ವರ್ಷಗಳು ಬಚ್ಚಿಟ್ಟುಕೊಂಡಿರಲು ಸಾಧ್ಯವೇ ಇಲ್ಲ.

1947ರಲ್ಲಿ ಮಧ್ಯಪ್ರದೇಶದ ಸುರ್ಗುಜದ ರಾಜನೊಬ್ಬನು ಭಾರತದ ಉಳಿದಿದ್ದ ಕೊನೆಯ ಮೂರು ಚಿರತೆಯನ್ನು ಗುಂಡಿಟ್ಟು ಬೇಟೆಯಾಡಿದ. ಆಗ ಅವನಿಗೇನು ಗೊತ್ತು, ಇದು ಕೊನೆಯ ಚಿರತೆ ಅಂತ. ಕಾಡಿನಲ್ಲಿ ಇನ್ನೂ ಲಕ್ಷ ಲಕ್ಷ ಚಿರತೆಗಳಿವೆ ಎಂದೇ ತಿಳಿದಿದ್ದನನಿಸುತ್ತೆ. ತೊಂಭತ್ತನೆಯ ಇಸವಿಯ ಹೊತ್ತಿಗೆ ಇಡೀ ಏಷಿಯಾ ಖಂಡದಿಂದ ಮರೆಯಾಗುವಂತಾಗಿ ಹೋಯಿತು ಚಿರತೆ. ಇರಾನ್‍ನಲ್ಲಿ ಮಾತ್ರ ಇನ್ನೂರು ಇದೆ ಎನ್ನುತ್ತಾರೆ. ಅದೂ ಅನುಮಾನವೇ.ಈಗಲೂ ನಮ್ಮಲ್ಲಿ ಕಾಡುಗಳಲ್ಲಿ "ಕ್ರೂರ" ಮೃಗಗಳಿವೆ ಎಂದು ನಂಬಿರುವವರು ಎಷ್ಟೋ ಜನರಿದ್ದಾರೆ. ಹುಲಿ, ಸಿಂಹ, ಚಿರತೆ, ಕರಡಿ ಎಲ್ಲವೂ ಹೇರಳವಾಗಿವೆ, ಕಾಡು ಅಪಾಯ ಎಂದೆಲ್ಲಾ ನಂಬಿಕೊಂಡಿದ್ದಾರೆ. ಎಲ್ಲಾ "ಕ್ರೂರ"ವನ್ನೂ ಮೀರಿ ಸರ್ವನಶದ ಕೊನೆಯ ಹಂತದಲ್ಲಿರುವ ನಮ್ಮ (ಮನುಷ್ಯನ) ಕ್ರೂರತನವನ್ನು ಅರಿತವರು ತುಂಬಾ ಕಡಿಮೆ ಜನ. ನಗರೀಕರಣ ಎಷ್ಟು ವೇಗವಾಗಿ ಸಾಗುತ್ತಿದೆಯೆ೦ದರೆ ಇನ್ನು ಕೆಲವೇ ವರ್ಷಗಳಲ್ಲಿ, ಹುಲಿ ಮತ್ತು ಸಿಂಹಗಳೂ ನಮ್ಮ ದೇಶದಿಂದ ಮರೆಯಾದರೆ ಅಚ್ಚರಿಯೇ ಇಲ್ಲ.

ಹುಲಿಯ ರಕ್ಷಣೆಗೆ ಅನೇಕ ಸಂಘ ಸಂಸ್ಥೆಗಳು ನಿಂತು ಕೆಲಸ ಆರಂಭಿಸಿದ ಹಾಗೆ, ಸಿಂಹವನ್ನು ಕಾಪಾಡಲು ಮುಂದೆ ಬಂದ ಗುಂಪುಗಳ ಹಾಗೆ ಚಿರತೆಯನ್ನು ರಕ್ಷಿಸಲು ಯಾರೂ ಬರಲೇ ಇಲ್ಲ. ಇಂಥದ್ದೊಂದು ಪ್ರಾಣಿ ನಮ್ಮಲ್ಲೂ ತೀರ ಮೊನ್ನೆ ಮೊನ್ನೆವರೆಗೂ ಇತ್ತು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾದ ವರ್ಷದಲ್ಲೇ ಚಿರತೆಗೆ ಮುಕ್ತಿಯೂ ಸಿಕ್ಕಿತೆಂಬುದು ದೊಡ್ಡ ವಿಪರ್ಯಾಸದ ಸಂಗತಿಯಲ್ಲವೇ?

ಮನುಷ್ಯನು ಅಷ್ಟೊಂದು ಬೇಟೆಯಾಡಿದೆನೇ? ಎಂದು ಯಾರಾದರೂ ಕೇಳಬಹುದು. ಮನುಷ್ಯ ಬೇಟೆ ಆಡಿರುವುದು ಬರೀ ಚಿರತೆಯನ್ನಲ್ಲ. ಅದರ ಮುಖ್ಯ ಆಹಾರವಾದ ಜಿಂಕೆಗಳನ್ನು ಮತ್ತು ಆವಾಸಸ್ಥಾನವಾದ ಅರಣ್ಯ ಸಂಪತ್ತನ್ನು. ಹೊಟ್ಟೆಗೆ ಊಟವಿಲ್ಲ, ಉಳಿಯಲು ಜಾಗವಿಲ್ಲ ಎಂಬ ಪ್ರಾಣಿ ಉಳಿಯುವುದಾದರೂ ಎಲ್ಲಿ? ಮೃಗಾಲಯಗಳಲ್ಲೇ? ಚಿರತೆಯಂಥ ಪ್ರಾಣಿ ಮೃಗಾಲಯಗಳಲ್ಲಿ ಉಳಿಯುವುದು ತುಂಬಾ ಕಷ್ಟ. ಹುಲಿ ಸಿಂಹಗಳೋ ಚಿರತೆಯಷ್ಟು ವೇಗವಾಗಿ ಆಗಲೀ, flexible ಆಗಲೀ ಇಲ್ಲ. ಅವಕ್ಕೆ ತಮ್ಮದೇ ಆದ ನಿರ್ದಿಷ್ಟ ರಾಜ್ಯವಿರುತ್ತೆ. ಚಿರತೆಗಳು ಹಾಗಲ್ಲ. ಅಲೆಮಾರಿಗಳು. ಒಂದು ಕಡೆ ಕೂಡಿ ಹಾಕಲು ಸಾಧ್ಯವಿಲ್ಲ.

ಇರಾನ್ ದೇಶದಲ್ಲಿ ಇರುವ ಕೆಲವೇ ಚಿರತೆಗಳನ್ನು ಉಳಿಸಲು ಕೆಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಭೇಷ್.

ಬಿ.ಬಿ.ಸಿ. ವರದಿಯೊಂದು 2005 ಆಗಸ್ಟಿನಲ್ಲಿ ಇಂತಿತ್ತು. http://news.bbc.co.uk/2/hi/science/nature/4201180.stm.

ಇರಾನ್ ದೇಶಕ್ಕೆ ಚಿರತೆಯನ್ನು ಉಳಿಸುವ ಸಲುವಾಗಿ ಆಲ್ ದಿ ಬೆಸ್ಟ್. ನಮ್ಮ ಕೈಲೇನಾಗುತ್ತೋ ನಾವೂ ಮಾಡೋಣ. ಚಿರತೆ ಉಳಿಯಲಿ. ಭಾರತದ ಕಾಡುಗಳು ಮತ್ತೆ ಬೆಳೆದರೆ, ಇಲ್ಲಿಗೆ ಮತ್ತೆ ಬರಲಿ. ಬರುವುದೇ?-ಅ
13.08.2008
12AM

Friday, August 01, 2008

ಅಪ್ಪನ ಕಥೆ - ಭಾಗ ೬ನಮಸ್ಕಾರ.

ನನ್ನ ಹೆಸರು ಸ್ಟಾಂಫಾರ್ಡ್ ರಾಫಲ್ಸ್ ಅಂತ. ನನ್ನ ಪರಿಚಯ ಎಲ್ಲರಿಗೂ ಇರುವುದಿಲ್ಲ ಬಿಡಿ. ನನಗೆ ಬ್ರಿಟಿಷ್ ಸರ್ಕಾರ "ಸರ್" ಪ್ರಶಸ್ತಿ ಬೇರೆ ಕೊಟ್ಟಿದ್ದಾರೆ. ಆದರೂ ಗೊತ್ತಿಲ್ಲ ಜನಕ್ಕೆ ನಾನು ಯಾರು ಅಂತ. ನನಗೇನೂ ಬೇಸರವಿಲ್ಲ ಬಿಡಿ.

ನಿಮ್ಮನ್ನೆಲ್ಲಾ ಸುಮಾರು ಇನ್ನೂರು ವರ್ಷ ಹಿಂದಕ್ಕೆ ಕರೆದೊಯ್ಯೋಣವೆಂದು ಇಲ್ಲಿಗೆ ಬಂದಿದ್ದೇನೆ.

ನನ್ನನ್ನು ಸರ್ಕಾರದವರು ಗವರ್ನರ್ ಆಗಿ ಇಂಡೋನೇಷಿಯಾದ ಸುಮಾತ್ರಕ್ಕೆ ಕಳಿಸಿದರು. ನನಗೂ ಅದು ಬೇಕಾಗಿತ್ತು. ಇಂಗ್ಲೆಂಡಿನಲ್ಲಿ ಏನಿದೆ, ಬರೀ ಕಟ್ಟಡಗಳು, ವಾಹನಗಳು, ಹೊಗೆ! ಇಂಡೋನೇಷಿಯಾ ಆದರೆ ಕಗ್ಗಾಡಿನ ಪ್ರದೇಶ. ನನಗೋ ಮೊದಲಿನಿಂದಲೂ ಕಾಡು ಮೇಡು, ಪ್ರಾಣಿ ಪಕ್ಷಿ, ಗಿಡ ಮರಗಳೆಂದರೆ ಎಲ್ಲಿಲ್ಲದ ಪ್ರೀತಿ! ಯೂರೋಪಿನಲ್ಲಿದ್ದು ಹಣ ಸಂಪಾದಿಸುವುದಕ್ಕಿಂತ ಏಷಿಯಾದ ಅರಣ್ಯದಲ್ಲಿ ಮನೆ ಮಾಡಿಕೊಂಡಿರುವುದು ಸ್ವರ್ಗದ ಸಮಾನ!

ಆಗಿನ್ನೂ ಚಾರ್ಲ್ಸ್ ಡಾರ್ವಿನ್ ತನ್ನ 'ವಿಕಾಸ ವಾದ' ಮಂಡಿಸಿರಲಿಲ್ಲ. ಒಂದು ವೇಳೆ, ಡಾರ್ವಿನ್ ಇನ್ನಷ್ಟು ಹಳಬನಾಗಿದ್ದಿದ್ದರೆ ನನ್ನ ಕೆಲಸ ಸರಾಗವಾಗಿಬಿಡುತ್ತಿತ್ತು. ಜಗತ್ತಿನಲ್ಲಿರುವ ಎಲ್ಲಾ ಜೀವಿಗಳೂ ಒಬ್ಬನಿಂದ ಸೃಷ್ಟಿಯಾಗಿದ್ದು ಎಂಬ ಯಾವುದೋ ಭ್ರಮೆಯಲ್ಲಿದ್ದ ಕಾಲ ಅದು. ನನಗೆ ಒಪ್ಪಿಗೆಯಿಲ್ಲದಿದ್ದರೂ ಒತ್ತಡಗಳಿಂದಲೂ, ಸಾಕ್ಷಿ ಪುರಾವೆಗಳಿಲ್ಲದ್ದರಿಂದಲೂ ಅದನ್ನೇ ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿದ್ದ ಕಾಲ ಅದು. ಈಗ ಬಿಡಿ, ಬುದ್ಧಿವಂತರು, ತಿಳಿವಳಿಕೆಯಿರುವವರು, ವಿಚಾರವಾದಿಗಳು, ಎಲ್ಲೆಡೆ ಬೆಳೆಯುತ್ತಿದ್ದಾರೆ.

ಡಾ.ಆರ್ನಾಲ್ಡ್ ಅಂತ ನನ್ನ ಗೆಳೆಯ. ಸುಮಾತ್ರದ ಅಡವಿಯನ್ನೆಲ್ಲಾ ಜಾಲಾಡಲು ನನ್ನೊಂದಿಗೆ ಸರ್ಕಾರ ಕಳಿಸಿದ್ದು ಇವನನ್ನೇ. ಈತ ಮತ್ತು ನಾನು ಕಾಡಿನ ಮೂಲೆಮೂಲೆಯನ್ನೂ ಅಲೆಯುತ್ತಿದ್ದಾಗ ಒಮ್ಮೆ, ಅತಿ ಸಮೀಪದಲ್ಲೇ ದನವೋ ಎಮ್ಮೆಯೋ ಸತ್ತು ಕೊಳೆಯುತ್ತಿದ್ದ ವಾಸನೆ, ತಡೆಯಲಾಗದಂತೆ ಮೂಗಿಗೆ ಹೊಡೆಯಿತು. ಯಾವುದಾದರೂ ಪ್ರಾಣಿಯ ಬೇಟೆಯಿರಬಹುದೆಂದು ಜಾಗರೂಕರಾದೆವು. ಆದರೆ ನಮ್ಮ ಕಣ್ಣ ಮುಂದೆ ಕಂಡ ಅಚ್ಚರಿ ಇಡೀ ಜಗತ್ತನ್ನು ನೂರಾರು ವರ್ಷ ತಲೆಕೆಡಿಸಿದ ದೃಶ್ಯ. ಅದೊಂದು ಹೂವಾಗಿತ್ತು ಎಂಬುದು ನಮಗೆ ಅರ್ಥ ಆಗಲು ದಿನಗಳೇ ಬೇಕಾದವು. ಆ ಹೂವಿಗೆ ನಮ್ಮದೇ ಹೆಸರಿಟ್ಟೆವು - Rafflesia Arnoldii ಅಂತ.ಈ ಕಾಡು ಬಹಳ ಉಗ್ರವಾಗಿತ್ತು. ತೀಕ್ಷ್ಣವಾಗಿತ್ತು. ಆನೆಗಳು ಮೆರೆಯುತ್ತಿದ್ದವು. ನಾವು ಕ್ಯಾಂಪ್ ಮಾಡಿದ್ದ ಕಡೆ ಅನೇಕ ಬಾರಿ ಆನೆಗಳು ದಾಳಿ ಮಾಡಿದ್ದು, ಅದೆಷ್ಟು ಸಲ ನಾವು ತಪ್ಪಿಸಿಕೊಂಡಿದ್ದೇವೋ ಏನೋ. ಆದರೆ, ಕಾಡಿನ ತೀವ್ರತೆ ಗೆಳೆಯನನ್ನು ಬಲಿ ತೆಗೆದುಕೊಂಡುಬಿಟ್ಟಿತು. ಈ ರೆಫ್ಲೀಸಿಯಾ ಬಗ್ಗೆ ಕೆಲಸವನ್ನು ಮುಂದುವರೆಸಿದೆ.

ಎಲ್ಲಾ ಹೂವುಗಳಂತಲ್ಲಾ ಈ ರೆಫ್ಲೀಸಿಯಾ. ಇದೊಂದು ದೈತ್ಯ.

ವಿಶ್ವದ ಅತಿ ದೊಡ್ಡ ಹೂವು. ಇದರ ಸುತ್ತಳತೆಯೇ ಒಂದು ಮೀಟರಿದ್ದು ಮತ್ತು ಹತ್ತರಿಂದ ಹನ್ನೊಂದು ಕೆ.ಜಿ. ತೂಕವಿದೆ. "ಹೂವಿನಷ್ಟು ಹಗುರ" ಎಂದು ನಮ್ಮ ವರ್ಡ್ಸವರ್ತ್ ಬರೆದಾಗ ಅವನನ್ನು ಕೇಳಬೇಕೆಂದಿದ್ದೆ, ನಾನು ಒಂದು ಹೂವನ್ನು ಕಂಡು ಹಿಡಿದಿದ್ದೇನೆ, ಅದನ್ನು ನೋಡಿದ ಮೇಲೂ ಹೀಗೇ ಬರೀತೀಯಾ?" ಅಂತ.
ರೆಫ್ಲೀಸಿಯಾ ಹೆಣ್ಣು ಹೂವುಗಳ ಸಂತತಿ ಗಂಡು ಹೂವುಗಳಿಗಿಂತ ಹೆಚ್ಚಿದೆ. ಹೌದು. ಹೂವುಗಳಲ್ಲೂ ಹೆಣ್ಣು ಗಂಡುಗಳೆಂಬ ಪ್ರಭೇದಗಳಿವೆ. ಪರಾಗಸ್ಪರ್ಶ (Pollination) ಆಗಬೇಕಾದರೆ ಗಂಡು ಮತ್ತು ಹೆಣ್ಣು ಒಟ್ಟಿಗೇ ಒಂದೇ ಆತಿಥೇಯ ಗಿಡದಲ್ಲಿರಬೇಕು. ಆದರೆ ಇದು ಸಾಧ್ಯವಾಗುವುದು ಬಹಳ ಕಷ್ಟ. ಒಂದೇ ಸ್ಥಳದಲ್ಲಿ ಗಂಡು ಮತ್ತು ಹೆಣ್ಣು ರೆಫ್ಲೀಸಿಯಾಗಳು ಬೆಳೆಯುವುದೇ ಅಪರೂಪ. ಹಾಗಾಗಿ ಇದರ ಸಂತತಿ ಉತ್ಪನ್ನವೇ ವಿಪರೀತ ಕಷ್ಟವಾಗಿಹೋಗಿದೆ. ಒಂದು ಹೂವು ಸಂಪೂರ್ಣ ಅರಳಲು ಹತ್ತು ತಿಂಗಳು ಕಾಲಾವಕಾಶ ತೆಗೆದುಕೊಂಡಿತು. ನಾನು ಮತ್ತು ಅರ್ನಾಲ್ಡ್ ಇದರ ಮುಂದೆಯೇ ಕ್ಯಾಂಪ್ ಮಾಡಿದ್ದೆವು.ನಾನು ಆಗಲೇ ಹೇಳಿದೆನಲ್ಲಾ, ದನ ಸತ್ತ ವಾಸನೆ ಬರುತ್ತಿತ್ತು ಅಂತ. ಅದು ಈ ಹೂವು ಸುತ್ತಮುತ್ತಲಿನ ಹುಳು ಹುಪ್ಪಟೆಗಳನ್ನು ಸೆಳೆಯಲು ಆ ರೀತಿ ವಾಸನೆಯನ್ನುಂಟು ಮಾಡಿತ್ತು. ಹೆಣ್ಣು ಹೂವನ್ನು ಹುಡುಕಿಯೇ ಬಿಟ್ಟೆವು. ಅದು ಸ್ವಲ್ಪ ದೂರ ಚಾರಣ ಮಾಡಿದ ನಂತರ ನಮಗೆ ಕಂಡ ಅದೇ ರೀತಿಯ ಟೆಟ್ರಾಸ್ಟಿಗ್ಮಾ ವೈನ್ ಮರದ ಕಾಂಡಗಳ ಮೇಲೆ ಸಿಕ್ಕವು. ಆದರೆ ತುಂಬಾ ಕಡಿಮೆ.

ನಾಯಿಕೊಡೆಯಂತೆ ಇದರಲ್ಲೂ ಕ್ಲೋರೋಫಿಲ್ ಇರುವುದಿಲ್ಲವಾದ್ದರಿಂದ ಈ ಗಿಡದ ಯಾವ ಭಾಗದಲ್ಲೂ ಹಸಿರಿನ ಛಾಯೆಯೇ ಇರುವುದಿಲ್ಲ. ಇದು ದ್ಯುತಿಸಂಶ್ಲೇಷಣಕ್ರಿಯೆಯಲ್ಲೂ ಭಾಗವಹಿಸುವುದಿಲ್ಲ. ಪರಾವಲಂಬಿ ಜೀವಿ ಇದಾಗಿರುವುದರಿಂದ ಗಂಡು-ಹೆಣ್ಣನ್ನು ಸೇರಿಸುವ ಕೆಲಸ ಬೇರೆಯವರದ್ದಾಗಿದೆ.
ಸುಮಾರು ಇನ್ನೂ ಇಪ್ಪತ್ತು ರೀತಿಯ ರೆಫ್ಲೀಸಿಯಾ ಹೂವುಗಳನ್ನು ಇದೇ ಕಾಡಿನಲ್ಲೇ ಕಂಡುಹಿಡಿದೆ ನಾನು. ಹೂವಿನ ಒಂದು ಸಂಪೂರ್ಣ ಸಂಸಾರವೇ ಸಿಕ್ಕಿತು. ಅಪ್ಪ - ಅಮ್ಮ - ಮಕ್ಕಳು ಅನ್ನುವ ಹಾಗೆ. ಹೆಣ್ಣು ಹೂವುಗಳನ್ನು ನಾವು ಬೆಳೆಸಲು ಸಾಧ್ಯವೇ ಎಂದು ನನ್ನ ತಲೆಯಲ್ಲಿ ಯೋಚನೆ ಬರುವ ಮುಂಚೆಯೇ ನಾನು ಕಾಲವಾಗಿಬಿಟ್ಟೆ. ಮುಂದಿನ ಪೀಳಿಗೆಯ ವಿಜ್ಞಾನಿಗಳೇನಾದರೂ ಇದಕ್ಕೆ ಉತ್ತರ ಕಂಡು ಹಿಡಿದಾರು ಎಂಬ ಭರವಸೆಯಿತ್ತು. ಇನ್ನೂ ಇಲ್ಲ. ಸರ್ಕಾರ ಇದನ್ನು 'ನಶಿಸುತ್ತಿರುವ ಜೀವಿ' ಎಂದು ಘೋಷಿಸಿದ್ದಾರಷ್ಟೆ.

1818ನೇ ಇಸವಿಯಿಂದ 2008ನೇ ಇಸವಿಯಲ್ಲಿ ಅಷ್ಟೇನೂ ಬದಲಾಗಿಲ್ಲ - ನಾಶವಾಗುವುದೊಂದು ಬಿಟ್ಟು. ಇಂಡೊನೇಷಿಯಾ ಕಾಡು ಈಗ ಮೊದಲಿದ್ದಂತಿಲ್ಲ. ಗಂಡು ಹೆಣ್ಣು ರೆಫ್ಲೀಸಿಯಾಗಳಿಗೆ ನೆಲೆಯು ಮೊದಲಿದ್ದಂತಿಲ್ಲ.

....................................................................................

ರೆಫ್ಲೀಸಿಯಾ - Rafflesia arnoldii ವಿಶ್ವದ ಅತಿ ದೊಡ್ಡ ಹೂವು. ಇಂಡೋನೇಷಿಯಾದ ಸುಮಾತ್ರ ಮತ್ತು ಬೊರ್ನಿಯೋದಲ್ಲಿ ಬೆಳೆಯುತ್ತೆ. ಸಮುದ್ರ ಮಟ್ಟದಿಂದ ಆರುನೂರರಿಂದ ಏಳುನೂರು ಅಡಿ ಎತ್ತರದ ಪ್ರದೇಶದಲ್ಲಿ ಮಾತ್ರ ಕಾಣುವುದು. ಹೂವು ಮೊಗ್ಗಿನಿಂದ ಅರಳಲು ಒಂಭತ್ತರಿಂದ ಹತ್ತು ತಿಂಗಳು ತೆಗೆದುಕೊಳ್ಳುವುದಲ್ಲದೆ ಅರಳಿದ ಮೇಲೆ ಒಂದು ವಾರವಷ್ಟೆ ಬದುಕಿರುವುದು. ನಲವತ್ತಾರು ಮಿಲಿಯನ್ ವರ್ಷದ ಕೆಳಗೆ ಇದು ಸ್ಪರ್ಜ್ ಎಂಬ ಗಿಡದಿಂದ ವಿಕಾಸಗೊಂಡಾಗಿನಿಂದ ಈಗಿನವರೆಗೆ ಇದು ನೂರರಷ್ಟು ದೊಡ್ಡದಾಗಿದೆಯೆಂದು ತಜ್ಞರು ಹೇಳುತ್ತಾರೆ. ಆಗ ಒಂದು ಇಂಚಷ್ಟೇ ಇದ್ದದ್ದು. ಈಗ ಒಂದು ಮೀಟರನ್ನು ಸಮೀಪಿಸಿದೆ. ಇದೊಂದೇ ಜೀವಿ ಈ ರೀತಿ ವಿಕಾಸಗೊಂಡಿರುವುದು.
ಈ ಹೂವಿಗೆ ಪರಾಗಸ್ಪರ್ಶವಾಗ ಬೇಕಾದರೆ ಗಂಡು ಮತ್ತು ಹೆಣ್ಣು ಜಾತಿಯ ಹೂವುಗಳು ಹತ್ತಿರಹತ್ತಿರವೇ ಇರಬೇಕು. ಅದು ಬಹಳ ಕಷ್ಟಸಾಧ್ಯವಾದ್ದರಿಂದ ಈ ಹೂವನ್ನು Endangered species ಪಟ್ಟಿಯಲ್ಲಿ ಸೇರಿಸಿದ್ದಾರೆ. ಗಂಡು ಹೂವುಗಳು ಹೆಚ್ಚಾಗಿ ಬೆಳೆಯುತ್ತವೆ, ಆದರೇನಾಯಿತು, ಹೆಣ್ಣೇ ಇಲ್ಲದಿದ್ದರೆ!!

ಮುಂದಿನ ಸಲ ಬೇರೊಂದು ಅಪ್ಪನ ಕಥೆಯನ್ನು ಇಲ್ಲಿ ತರಲು ಯತ್ನಿಸುತ್ತೇನೆ.

-ಅ
01.08.2008
3PM

ಒಂದಷ್ಟು ಚಿತ್ರಗಳು..