Friday, July 11, 2008

ಕಡಲ ಚಿಟ್ಟೆ

ಪ್ರಪ್ರಥಮ ಬಾರಿಗೆ ಈ ಕ್ಷಿತಿಜದೆಡೆಗೆ ಪಯಣದಲ್ಲಿ ಸಮುದ್ರದ ಆಳಕ್ಕೆ ಹೋಗುತ್ತಿರುವುದು ಇದು.

ನಮ್ಮ ವರದಿಗಾರ ತನ್ನ ದೋಣಿಯಿಂದ ಧುಮುಕಿದ. ನನಗೆ ಈಜು ಬಾರದ ಕಾರಣ ದೋಣಿಯಲ್ಲೇ ಉಳಿದು ಸಮುದ್ರದ ಅಲೆಗಳನ್ನೇ ನೋಡಿ ಕವಿತೆಯೇನಾದರೂ ಹೊಳೆದೀತೇ ಎಂದು ಪುಟ್ಟಪ್ಪ ಬೇಂದ್ರೆಯರನ್ನೆಲ್ಲಾ ಸ್ಮರಿಸುತ್ತಿದ್ದೆ. ಗೆಳೆಯನ ಕ್ಯಾಮೆರಾ ಸಹಿತ ಧುಮುಕಿ ಕೆಲವೇ ಹೊತ್ತಿನಲ್ಲಿ ಒಂದಷ್ಟು ಡಾಲ್ಫಿನ್ನುಗಳ ಚಿತ್ರೀಕರಣ ಮಾಡಿದ್ದು ದೋಣಿಯ ಟಿ.ವಿಯಲ್ಲಿ ನೇರಪ್ರಸಾರವಾಯಿತು. ಬಗೆಬಗೆಯ ಮೀನುಗಳು ಮನಸೆಳೆದವು. ಶಾರ್ಕು ಕಾಣಿಸಲೇ ಇಲ್ಲವೆಂಬ ಬೇಸರ ಕೂಡ ಇತ್ತು.ಮತ್ತಷ್ಟು ಕೆಳಕ್ಕಿಳಿದ. ಬೆಳಕು ಕ್ಷೀಣಿಸುತ್ತಾ ಹೋಯಿತು. ಅವನ ಕುತ್ತಿಗೆಗೆ ಹಾಕಿಕೊಂಡಿದ್ದ ಕೃತಕ ದೀಪವೇ ಗತಿಯಾಗುವ ಮುಂಚೆಯೇ ಸಮುದ್ರದ ವಿಸ್ಮಯ ಜೀವಿಗಳೆಲ್ಲಾ ಒಂದೊಂದಾಗೇ ಪ್ರತ್ಯಕ್ಷವಾಗತೊಡಗಿದವು. ನಾವು ಹುಡುಕ ಹೊರಟಿದ್ದ ಜೀವಿಯು ಕಾಣಿಸಲು ತುಂಬಾ ಪ್ರಯಾಸ ಪಡಬೇಕೆಂಬುದನ್ನು ವಿವರಿಸುತ್ತಿದ್ದ ಗೆಳೆಯ. ಆದರೆ, ಪ್ರಯಾಸದ ಹೆಸರಿನಲ್ಲಿ ಬೋರು ಹೊಡೆಯುವುದಿಲ್ಲ ಎಂಬ ಧೈರ್ಯದ ಮಾತನ್ನೂ ಹೇಳುತ್ತಿದ್ದ. ಯಾಕೆಂದರೆ, ಸಮುದ್ರದಲ್ಲಿರುವ ಜೀವಿಗಳ ಶೇ.50ಕ್ಕೂ ಹೆಚ್ಚು ಆವಿಷ್ಕಾರವೇ ಆಗಿಲ್ಲ. ಎಲ್ಲೆಲ್ಲಿ ಏನೇನು ಹೊಸತು ಸಿಗುತ್ತೋ ಎಂಬ ಕಾತುರತೆ, ಉತ್ಸುಕತೆ ಇದ್ದೇ ಇರುತ್ತೆ. ಹಾಗಾಗಿ ಹುಡುಕಾಟದಲ್ಲಿ ಹೊಸ ಹೊಸ ಗೆಳೆಯರು ಸಿಗುತ್ತಲೇ ಇರುತ್ತಾರೆ ಎಂದಿದ್ದ. ಲಕ್ಕಿ ಫೆಲೋ. ನಾನು ಮೇಲೆ ಉಬ್ಬುತ್ತಗ್ಗುತ್ತೇರುತ್ತಿಳಿಯುತ್ತಿರುವ (ಕುವೆಂಪು ಕವನದಲ್ಲಿ ಬರುವ ಸಾಲು) ತೆರೆಗಳನ್ನು ನೋಡುತ್ತಲೇ ಹಾರುತ್ತಿರುವ sea gullsನ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದೆ. ಜೊತೆಗೆ ಟಿ.ವಿ.ಯಲ್ಲಿ ಬರುವ ನೇರ ಪ್ರಸಾರ ಬೇರೆ!

ನಮ್ಮ ಹುಡುಕಾಟ ಇದ್ದದ್ದು ಸಮುದ್ರದ ಚಿಟ್ಟೆಗೆ. ಇದು ಅತಿ ಸಣ್ಣ ಜೀವಿ. ಅಷ್ಟು ಸುಲಭವಾಗಿ ಕಾಣಿಸುವುದಿಲ್ಲ. ಕೆಳಗೆ ಹೋಗುತ್ತಾ ಹೋಗುತ್ತಾ, ಸಮುದ್ರದ "Abyss" ತಲುಪಿದ ಮೇಲಂತೂ ಕಗ್ಗತ್ತಲು. ಅಲ್ಲಿರುವುದು ಬರೀ ಕಡಲ ದೈತ್ಯಗಳಾದ ಕಿಲ್ಲರ್ ವ್ಹೇಲ್, ಆಕ್ಟೊಪಸ್ ಇಂಥವು. ಆದರೆ, ಬಹಳ ಒಳ್ಳೇ ಪ್ಲಾನ್ ಎಂದರೆ, ಸಮುದ್ರ ಚಿಟ್ಟೆಯನ್ನು ಹುಡುಕಲು ಇರುವುದು ಎರಡು ದಾರಿ. ಅದರ ಆಹಾರವನ್ನೋ ಅಥವಾ ಅದನ್ನು ತಿನ್ನುವ ಪ್ರಾಣಿಯನ್ನೋ ಪತ್ತೆ ಮಾಡುವುದು. ಪ್ರಕೃತಿಯಲ್ಲಿ ಈ ಆಹಾರ ಸರಪಳಿಯು ಸತತವಾಗಿ ನಡೆದು ಬರುತ್ತಿರುವುದರಿಂದ, ಎಲ್ಲಾ ಜೀವಿಗಳೂ ಇದನ್ನು ಪ್ರಾಮಾಣಿಕವಾಗಿ ಅನುಸರಿಸುತ್ತಿರುವುದರಿಂದ ಈ ಯೋಜನೆ ಸೂಕ್ತವೆನಿಸಿತು.

ಸಮುದ್ರ ಚಿಟ್ಟೆಯೇ ಸೂಕ್ಷ್ಮ ಜೀವಿಯೆಂದರೆ ಅದರ ಆಹಾರ ಇನ್ನೂ ಸೂಕ್ಷ್ಮವಲ್ಲವೇ? ಅದನ್ನು ಹೇಗೆ ಹುಡುಕುವುದು ಎಂಬುದು ನನ್ನ ಪ್ರಶ್ನೆಯಾಗಿತ್ತು. ಆದರೆ ಗೆಳೆಯ ನಕ್ಕುಬಿಟ್ಟ. ನಾನು ಆಳಕ್ಕಿಳಿದ ಮೇಲೆ ಚಿತ್ರ ತೋರಿಸುತ್ತೇನೆ, ಆಗ ನೋಡಿ ಹೇಳು ಎಂದ. ಜಗತ್ತಿನ ಅತಿ ದೊಡ್ಡ ಜೀವಿ ನೀಲಿ ತಿಮಿಂಗಿಲವು ಸಸ್ಯಾಹಾರಿಯೆಂಬುದು ಬಹಳ ಜನಕ್ಕೆ ಗೊತ್ತಿಲ್ಲ. ಅದು ತಿನ್ನುವುದು ತುಂಬಾ ಸಣ್ಣ ಸಣ್ಣ ಗಿಡಗಳಾದ "ಪ್ಲ್ಯಾಂಕ್ಟಾನ್" ಎಂಬುದನ್ನು. ಗಿಡದ ಜಾತಿಯಾದ್ದರಿಂದ ಇದನ್ನು ಜೀವ ಶಾಸ್ತ್ರಜ್ಞರು phytoplanktons ಎನ್ನುತ್ತಾರೆ. ಇದನ್ನು ಹುಡುಕುವುದು ಕಷ್ಟವೆನಿಸಿದರೆ ಇದನ್ನು ತಿನ್ನುವ ತಿಮಿಂಗಿಲವನ್ನು ಹುಡುಕಬಹುದಲ್ಲಾ? ಬಹಳ ಸುಲಭ. ಆನೆಗಿಂತ ಹತ್ತರಷ್ಟು ದೊಡ್ಡ ಪ್ರಾಣಿಯನ್ನು ಗುರುತಿಸುವುದು ಕಷ್ಟವಲ್ಲವಷ್ಟೆ.

ಸಿಕ್ಕೇ ಬಿಟ್ಟಿತು ತಿಮಿಂಗಿಲ. ದೂರವೇ ಉಳಿದ. ಯಾಕೆಂದರೆ, ಅದು ಗ್ಯಾಲನ್ನುಗಟ್ಟಲೆ ನೀರನ್ನು ಕುಡಿದು ತನ್ನ ಆಹಾರವನ್ನು ತಿಂದು ನಂತರ ಉಳಿದ ನೀರನ್ನೂ ಆಹಾರವಲ್ಲದ್ದನ್ನೂ ಹೊರಹಾಕುತ್ತೆ. ಇದಕ್ಕೆ ಸಿಕ್ಕಿಹಾಕಿಕೊಂಡರೆ ಕಷ್ಟ, ಪ್ರಾಣ ಕಳೆದುಕೊಳ್ಳಬೇಕಾಗುತ್ತೆ. ಚಿಟ್ಟೆ ಹುಡುಕಲು ಹೊರಟು ತಿಮಿಂಗಿಲದ ಹೊಟ್ಟೆ ಪಾಲಾದಂತೆ! ಅದೂ ಆಹಾರವೂ ಆಗದೆ!!ತಿಮಿಂಗಿಲದ ಬಳಿ ಫಳಫಳನೆ ಹೊಳೆಯುತ್ತಿದ್ದ ಆಕೃತಿಗಳು ಹಲವಾರು ಕಂಡವು.ತಕ್ಷಣ ಗೆಳೆಯನ ಕ್ಯಾಮೆರಾ ಕೆಲಸ ಚುರುಕಾಗತೊಡಗಿತು. ತಿಮಿಂಗಿಲದಿಂದ ದೂರ ಸರಿದು ತನ್ನ ಕಾಲಹತ್ತಿರವೇ ಕ್ಯಾಮೆರಾ ತಿರುಗಿಸಿದ. ಸಮುದ್ರದುದ್ದಕ್ಕೂ ಉತ್ಸವದ ದೀಪದಂತೆ ಬೆಳಗುತ್ತಿದ್ದ phytoplanktons ನೋಡಿ ಅವನಿಗೆ ಆದ ಖುಷಿ, ನನಗೆ ಆದ ಅಚ್ಚರಿ ಅಷ್ಟಿಷ್ಟಲ್ಲ. ನಲವತ್ತು ವ್ಯಾಟ್ ಬಲ್ಬಿನಂತೆ ಒಂದೊಂದೂ ಪ್ರಕಾಶಿಸುತ್ತಿದ್ದವು.ಗುಂಪಿನಲ್ಲಿ (ನೀರಿನಲ್ಲೇ) ಹಾರಿಕೊಂಡು ಬಂದವು ಚಿಟ್ಟೆಗಳು!!

ಕ್ಯಾಮೆರಾ ಸ್ವಲ್ಪವೂ ಕದಲಲಿಲ್ಲ. ದೋಣಿಯಲ್ಲಿ ಪರದೆಯ ಮೇಲೆ ಅದ್ಭುತ ದೃಶ್ಯಗಳು. ನೀರೊಳಗಿನ ದೀಪ! ಯಾವುದು ಈ ರೂಪ? ನನಗೆ ಈಜು ಬಾರದು ಅಯ್ಯೋ ಪಾಪ!ಒಂದೊಂದು ಚಿಟ್ಟೆಯೂ ಸುಮಾರು ಐದು ಸೆಂಟಿಮೀಟರಿತ್ತು ಅಷ್ಟೆ. ಸುಮಾರು ಹತ್ತು ಸಾವಿರ ಇತ್ತು ಅನ್ನಿಸುತ್ತೆ. ಮುಕ್ಕಾಲುಗಂಟೆ ಇದರ ಚಿತ್ರೀಕರಣ ಮುಗಿಸಿದ ಗೆಳೆಯ ಸಂತೃಪ್ತಿಯಿಂದ ಮೇಲೆ ಬರುವಾಗ ಇನ್ನಷ್ಟು ಚಿತ್ರಗಳನ್ನು ತೆಗೆದುಕೊಂಡವನೇ ದೋಣಿಗೆ ಬಂದು ಹಸ್ತಲಾಘವ ಮಾಡಿ ಆಲಿಂಗಿಸಿದ. ಚಿತ್ರವನ್ನು ತೋರಿಸುತ್ತ ಈ ಚಿಟ್ಟೆಗಳ ಬಗ್ಗೆ ವಿವರಿಸಿದ. ಅವನ ಬಾಯಲ್ಲೇ ಕೇಳೋಣ.

"ಈ ಸಮುದ್ರ ಚಿಟ್ಟೆಯನ್ನು ನೋಡಬೇಕು ಅಂದರೆ, to be honest, ಇಷ್ಟು ಆಳಕ್ಕೆ ಹೋಗುವ ಅವಶ್ಯಕತೆಯಿಲ್ಲ. ನಾನು ಆಗಲೇ ಹೇಳಿದ ಹಾಗೆ, ಆಹಾರಸರಪಳಿಯನ್ನು ಅನುಸರಿಸಿ ಹೋದರೆ ಸಾಕು. ಈ ಚಿಟ್ಟೆಗಳು ಸಮುದ್ರದ ಮೂರು ಹಂತದಲ್ಲೂ ಇರುತ್ತೆ. Abyss, continental slope, ಮತ್ತು continental shelf - ಮೂರರಲ್ಲೂ! ಪೆಂಗ್ವಿನ್ನುಗಳು, ಧ್ರುವ ಕರಡಿಗಳು ಇದನ್ನು ಬಹಳ ಇಷ್ಟ ಪಟ್ಟುಕೊಂಡು ತಿನ್ನುತ್ತವೆ. ಈ ಸಲ ನಾನು ಸಮುದ್ರದ ಕೆಲವು ಜೀವಿಗಳನ್ನೂ ನೋಡಬೇಕಿತ್ತು, ಅದಕ್ಕೇ ಕೆಳಗೆ ಹೋಗಿದ್ದು!"

"ಈ ಚಿಟ್ಟೆಗಳು ಶಂಖದ ಹುಳು ಜಾತಿಗೆ ಸೇರಿದ್ದು ಅಂದರೆ ಆಶ್ಚರ್ಯ ಆಗುತ್ತಾ? ಹೌದು. ಅವೆಲ್ಲಾ ಒಂದೇ ಜಾತಿ! ಮತ್ತೆ, ಆಗಲೇ ನೋಡಿದ ಹಾಗೆ ಇವು ತಿನ್ನುವುದು ಫೈಟೋಪ್ಲಾಂಕ್ಟನ್ನುಗಳು ದೀಪ ಬೆಳಗುವ ಸಣ್ಣ ಗಿಡಗಳು. ಆದರೆ, ಇದು ಹಾರುವ ದೀಪ! ನೀರಿನಲ್ಲಿ ಹಾರುವ ದೀಪ!! ನನ್ನ ಗೆಳತಿ ಒಬ್ಬಳು ಇದ್ದಾಳೆ, ಗ್ರೆಚೆನ್ನ್ ಹೂಫ್ಮನ್ ಅಂತ. ಅವನು ಈ ಚಿಟ್ಟೆಗಳನ್ನು 'ಸಮುದ್ರದ ಚಿಪ್ಸು' ಅಂತ ಹೇಳಿದ್ದಳು. ಫೋಟೋ ತೆಕ್ಕೊಂಡ್ ಬರ್ತೀನಿ ಅಂತ ಬಂದೆ ನಾನು.""ಸಮುದ್ರದಲ್ಲಿ ಆಮ್ಲವು ಹೆಚ್ಚಾಗುತ್ತಿದೆ, ಕಾವು ಕೂಡ. ಇನ್ನೊಂದು ಐವತ್ತು ವರ್ಷಕ್ಕೆ ಈ ಪ್ರಾಣಿ ಅವಸಾನವಾಗಿರುತ್ತೆ. ಆಹಾರಸರಪಳಿಗೆ ಬಹಳ ದೊಡ್ಡ ಪೆಟ್ಟು ಇದು."ನಾನು ಬೆಳಕನ್ನು ಕೊಡುವ ಜೀವಿಯನ್ನು ನೋಡಿರುವುದು ಒಂದನ್ನೇ. ಮಿಂಚು ಹುಳ.

-ಅ
11.07.2008
9.30PM

ಒಂದಷ್ಟು ಚಿತ್ರಗಳು..