Sunday, June 08, 2008

ಅಪ್ಪನ ಕಥೆ - ಭಾಗ ೪

ಈವರೆಗಿನ ಅಪ್ಪನ ಕಥೆಗಳು ಇಂತಿವೆ.

ಭಾಗ ೧ - ಎಂಪರರ್ ಪೆಂಗ್ವಿನ್
ಭಾಗ ೨ - ಸಮುದ್ರ ಕುದುರೆ
ಭಾಗ ೩ - ಗೀಜಗ (Weaver bird)

.....................................................................................ನಾನು ಹುಟ್ಟಿದಾಗಿನಿಂದ ಅಪ್ಪನನ್ನು ನೋಡೇ ಇಲ್ಲ. ಅಮ್ಮನನ್ನು ಕೇಳಿದೆ, "ಅಮ್ಮಾ, ಅಪ್ಪ ಎಲ್ಲಿ? ಅಪ್ಪ ಯಾರು?" ಅಂತ. ಅದಕ್ಕೆ ಧಡೂತಿ ನಮ್ಮಮ್ಮ ಹೇಳಿದ್ದು ಏನು ಗೊತ್ತೇ?

"ಮಗಳೇ, ನಿಮ್ಮಪ್ಪ ನನ್ನ ಹೊಟ್ಟೆಯೊಳಗೆ ಜೀರ್ಣ ಆಗಿ ತಿಂಗಳುಗಳೇ ಆಗಿವೆ. ಅವನ ಚಿಂತೆ ಬಿಡು. ನೀನು ದೊಡ್ಡವಳಾದ ಮೇಲೆ ನಿನ್ನ ಗಂಡನು ನಿನ್ನ ತೆಕ್ಕೆಯನ್ನು ಬಿಡಿಸಿಕೊಂಡು ಬಚಾವ್ ಆಗದೇ ಇರುವುದು ಹೇಗೆ ಅಂತ ನೀನು ಯೋಚನೆ ಮಾಡು."

"ಗಂಡನನ್ನು ತಿನ್ನುವುದೇ? ಎಲ್ಲಾದರೂ ಉಂಟೇ? ನೀನು ಅಪ್ಪನನ್ನು ತಿಂದುಬಿಟ್ಟೆಯಾ? ಯಾವ 'ಜೇಡಾ'ರ್ಥಕ್ಕಾಗಿ??

"ಅವನು ನನಗಿಂತ ತೀರ ಸಣ್ಣ. ಗಂಡಸರೇ ಹೀಗೆ. ವಿಪರೀತ ಸಣ್ಣ ಇರ್ತಾರೆ. ಚಿಕ್ಕದಾಗಿ ಒಳ್ಳೇ ಹುಳು ಥರ ಇರ್ತಾರೆ. ನಮ್ಮಿಬ್ಬರ ಮಿಲನ ಆದಮೇಲೆ ಅವನಿಗೆ ಇನ್ನೇನು ಕೆಲಸ. ನಾನು ನೋಡು, ಎಷ್ಟು ದೈತ್ಯೆ! ಅವನ ಹತ್ತರಷ್ಟು ದೊಡ್ಡದಾಗಿದ್ದೀನಿ. ಅವನೊಬ್ಬ ಹುಳುಜೇಡನಷ್ಟೆ! ಸಂಭೋಗ ನಡೆದ ತಕ್ಷಣ ಓಡಿಹೋಗಲು ಯತ್ನಿಸಿದ. ನಾನು ಬಿಡ್ತೀನಾ? ಕಬಳಿಸಿಬಿಟ್ಟೆ!!""ನನ್ನ ಹಾಗೆ, ನಿನ್ನ ಹಾಗೆ ಅಪ್ಪನ ಬಾಯಲ್ಲೂ ವಿಷವಿರಲಿಲ್ಲವೇ? ಅವನು ಕಚ್ಚಲಿಲ್ಲವೇ??"

"ನನ್ನ ಬಾಯಲ್ಲಿ ಇರುವ ವಿಷದಿಂದ, ಮಗಳೇ, ಇದುವರೆಗೂ ಇಪ್ಪತ್ತು ಮನುಷ್ಯರನ್ನೇ ಕೊಂದಿದ್ದೀನಿ. ಅವನ ವಿಷ ಯಾವ ಲೆಕ್ಕ ನನಗೆ! ಅವನು ತೀರ ಎಳೆಸು! ಅವನಿಗೆ ಒಬ್ಬ ಮನುಷ್ಯನನ್ನು ಕೊಲ್ಲುವಷ್ಟೂ ವಿಷವಿರಲಿಲ್ಲ. ಗಂಡಸರಿಗೆ ವಿಷವೆಲ್ಲಿರುತ್ತೆ! ಇದು ಸ್ತ್ರೀ ಸಾಮ್ರಾಜ್ಯ. ನಮ್ಮ ಬಲೆಯಲ್ಲಿ ಹೆಂಗಸರಿರಬೇಕಷ್ಟೆ. ಗಂಡಸರು ನಿನ್ನಂಥ ಚೆಲುವೆಯರ ಜನ್ಮಕ್ಕೆ ಕಾರಣರಾಗುವ ಕೆಲಸದವರೆಗಷ್ಟೆ ಬದುಕಲು ಅರ್ಹರು. ಆಮೇಲೆ ನಮ್ಮ ಆಹಾರವಾಗುತ್ತಾರೆ. ನ ಪುರುಷಮ್ ಸ್ವಾತಂತ್ರ್ಯಮರ್ಹತಿ! "

"ಓಹ್, ಮನು ಹೇಳಿದ್ದು. ಆದರೂ ಈ ವಿಧವೆ ಪಟ್ಟ ನಮ್ಗೆ ಶಾಶ್ವತವಲ್ಲವೇ?"

"ಹೌದು ಮಗು. ಅದಕ್ಕೆ ನಮ್ಮನ್ನು ವಿಧವೆ ಜೇಡಗಳೆಂದೇ ಹೆಸರಿಟ್ಟಿದ್ದಾರೆ. ಅದರಲ್ಲೂ ನಮ್ಮ ಜಾತಿಯವರಿದ್ದಾರಲ್ಲಾ, ಫಳ ಫಳ ಅಂತ ಕಪ್ಪಗೆ ಹೊಳೆಯುತ್ತೀವಲ್ಲಾ, ನಮ್ಮನ್ನು Black Widow Spider ಎಂದೇ ಹೆಸರಿಸಿದ್ದಾರೆ. ನಮ್ಮ ಕರ್ತವ್ಯ ಅಲ್ಲವೇ ವಿಧವೆಯರಾಗೋದು!"ಅಮ್ಮ ನನಗೆ ನನ್ನ ಗಂಡನನ್ನು ತಿನ್ನುವುದು ಹೇಗೆ ಎಂದು ಹೇಳಿಕೊಡಲೇ ಇಲ್ಲ. ಎಲ್ಲ ತಾಯಂದಿರಂತೆ ನಾವು ಎಂಟುನೂರು ಸಹೋದರ ಸಹೋದರಿಯರು ಹುಟ್ಟಿ ಕೆಲವು ದಿನಗಳೊಳಗೆಯೇ ಹೋಗಿಬಿಟ್ಟಳು. ನನಗಿನ್ನೂ ಮದುವೆಯಾಗಿಲ್ಲ.

ನಾನು ಎಷ್ಟು ದೊಡ್ಡದಾಗಿದ್ದೇನೆ, ಆದರೆ ನಮ್ಮಪ್ಪ ಹೀಗಿರಲಿಲ್ಲವಂತೆ. ನನ್ನ ಹೊಟ್ಟೆಗಿಂತ ಚಿಕ್ಕ ಗಾತ್ರದವನಂತೆ. ನನ್ನ ಗಂಡನೂ ಹಾಗೇ ಇರುತ್ತಾನಂತೆ. ಬಲೆಯಲ್ಲಿ ಬಿದ್ದ ಹುಳುಗಳನ್ನೆಲ್ಲಾ ಕ್ಷಣಮಾತ್ರದಲ್ಲಿ ನಮ್ಮ ವಿಷದಿಂದ ಕೊಂದು ತಿಂದು ತೇಗುವುದನ್ನು ಕಲಿಸಿಕೊಟ್ಟಿದ್ದಾಳೆ ಅಮ್ಮ, ಆದರೆ ಅವಳು ಅಪ್ಪನನ್ನು ಸಂಭೋಗದ ನಂತರ ಕೊಂದು ತಿಂದಿದ್ದು ಹೇಗೆಂದು ಮಾತ್ರ ಹೇಳಿಕೊಡಲಿಲ್ಲ. ನನಗೆ ಭಯ. ನನ್ನನ್ನು ಕೂಡಲು ಬರುವವನಿಗೆ ನನ್ನ ಸಂಚಿನ ಅರಿವಿದ್ದು ನನ್ನನ್ನೇ ಕೊಂದುಬಿಟ್ಟರೆ?
ಹಾಗಾಗಲಾರದು. ಅಮ್ಮನ ಪ್ರಕಾರ ಅವನು ಹುಳುವಿನಂತೆಯೇ!

ಅಂತೂ ಅಪ್ಪನನ್ನು ನೋಡುವ ಭಾಗ್ಯವಂತೂ ನನಗಿಲ್ಲ. ಗಂಡನನ್ನಾದರೂ ನೋಡಿ, ಅವನನ್ನು ಕೂಡಿ, ನಂತರ ತಿಂದು ತೇಗುವ ಕೆಲಸವೊಂದನ್ನು ಬಾಕಿಯುಳಿಸಿಕೊಂಡಿದ್ದೇನೆ.

ಹ್ಞಾಂ.. ಇನ್ನೊಂದು ಪಾಠ ನೆನಪಾಯಿತು. ಆದರೆ ಇದನ್ನು ಯಾಕೆ ಮಾಡಬೇಕೋ ಗೊತ್ತಿಲ್ಲ. ಅಮ್ಮ, ಅಪ್ಪನನ್ನು ತಿಂದ ಕೆಲವೇ ಹೊತ್ತಿನಲ್ಲಿ ಹೊಟ್ಟೆಯನ್ನು ಮೇಲೆ ಮಾಡಿಕೊಂಡು ಬಲೆಗೆ ನೇತುಹಾಕಿಕೊಂಡಳಂತೆ. ನಾನು ಅದನ್ನು ಮಾಡಿದ ಮೇಲೆಯೇ ಗೊತ್ತಾಗೋದು ಯಾಕೆ ಹಾಗೆ ಮಾಡಬೇಕು ಅಂತ. ಆದರೆ ಯಾರಿಗೂ ಹೇಳೋದಿಲ್ಲ, ಯಾಕೆ ನೇತುಹಾಕಿಕೊಳ್ಳಬೇಕು ಅಂತ.

.....................................................................................

Black Widow Spider (Latrodectus hesperus) ಎಂಬ ಜೇಡವು ಉತ್ತರ ಅಮೇರಿಕದಲ್ಲಿ ಅತ್ಯಂತ ಹೆದರಿಕೆಯನ್ನು ಹುಟ್ಟಿಸುವ ಕೀಟ. ನಾವು ಹಾವು ಚೇಳುಗಳಿಗೆ ಹೆದರಿಕೊಳ್ಳುವಂತೆ ಇಲ್ಲಿನ ಜನರು ಈ ಜೇಡಕ್ಕೆ ಹೆದರುತ್ತಾರೆ. ಇದು ಮನೆಯ ಒಳಗೆ ಬೇಕಾದರೂ ಬಂದುಬಿಡಬಹುದು. ಸೌದೆಯ ರಾಶಿಯೊಳಗೆ, ಗೋಡೆಯ ಮೇಲೆ, ಬಚ್ಚಲು ಮನೆಯಲ್ಲಿ, ಮಂಚದ ಕೆಳಗೆ, ಎಲ್ಲಿ ಬೇಕೆಂದರಲ್ಲಿ ತನ್ನ ಬಲೆಯ ಸಾಮ್ರಾಜ್ಯವನ್ನು ನಿರ್ಮಿಸಿಬಿಡಬಹುದು. ಇದನ್ನು ಮುಟ್ಟಿದವರಿಗೆ ಥಟ್ಟನೆ ತನ್ನ ವಿಷಪೂರಿತ ಕೊಂಡಿಯಿಂದ ಚುಚ್ಚಿ ಗಾಯಗೊಳಿಸಬಲ್ಲುದು. ಸರಿಯಾಗಿ ಚಿಕಿತ್ಸೆ ಮಾಡಿಸದಿದ್ದರೆ ಸಾವಿಗೂ ಕಾರಣವಾಗಬಹುದು.

ಈ ಜೇಡಕ್ಕೆ widow ಎಂದು ಯಾಕೆ ಕರೆಯುತ್ತಾರೆಂದರೆ ಸಂಭೋಗ ಕ್ರಿಯೆ ಮುಗಿದ ತತ್‍ಕ್ಷಣವೇ ತನ್ನ ಸಂಗಾತಿಯನ್ನು ಕಬಳಿಸಿಬಿಡುತ್ತೆ. ಶಾಶ್ವತ ವಿಧವೆಯಾಗಿ ಉಳಿಯುತ್ತೆ. ಗಂಡಿಗೂ ಹೆಣ್ಣಿಗೂ ಅಜಗಜಾಂತರ ಗಾತ್ರ. ಆದರೆ ಇದು ಎಲ್ಲಾ ಸಲವೂ ಆಗುವುದಿಲ್ಲ. ಅನೇಕ ಬಾರಿ ಗಂಡು ಜೇಡವು ಸಂಭೋಗ ಮುಗಿದ ಕ್ಷಣವೇ ಪರಾರಿಯಾಗಿಬಿಡುತ್ತೆ. ಆದರೆ ಎಂದೋ ಎಲ್ಲೋ ಇನ್ಯಾವುದೋ ಹೆಣ್ಣು ಜೇಡದ ಹೊಟ್ಟೆಯೊಳಗೇ ಇದರ ಭವಿಷ್ಯವು ಅಡಗಿರುತ್ತೆ.

ಮುಂದಿನ ಭಾಗದಲ್ಲಿ ಬೇರೊಂದು ಅಪ್ಪನ ಕಥೆಯನ್ನು ಕ್ಷಿತಿಜದೆಡೆಗೆ ಕರೆದೊಯ್ಯಲು ಯತ್ನಿಸುತ್ತೇನೆ.

-ಅ
08.06.2008
9.45PM

15 comments:

 1. ಅರುಣ್,
  ಬಹಳ ಸುಂದರ ನಿರೂಪಣೆ. ಅಮ್ಮ ಮಗಳ ಸಂಭಾಷಣೆಗೆ ಮನಸೋತೆ. ’ಅಪ್ಪನ ಕಥೆ’ ಸರಣಿ ಬಹಳ ಮಾಹಿತಿಯನ್ನು ನೀಡುತ್ತಿದೆ. ಆ ಮಾಹಿತಿಯನ್ನು ಕಲೆಹಾಕುವ ಹಿಂದೆ ಬಹಳ ಶ್ರಮವಿದೆ. ಅಷ್ಟೆಲ್ಲಾ ಶ್ರಮಪಟ್ಟು ಓದುಗರಿಗೆ ಉತ್ತಮ ಮಾಹಿತಿ ನೀಡುತ್ತಿರುವ ನಿಮ್ಮ ಪ್ರಯತ್ನವನ್ನು ಎಷ್ಟು ಶ್ಲಾಘಿಸಿದರೂ ಕಡಿಮೆ.

  ReplyDelete
 2. veryyyyyy nice story....oLLe appana saraNi... :-)

  ReplyDelete
 3. Arun,
  Really very nice story....
  Appana kathe bahusha mugeetu antha helidde neenu, bhaala bejaaragitthu. eega khushi aaythu,
  heege bareetha iru :)

  ReplyDelete
 4. nimma blogu yava animal planet goo kammi illa arun.. eshtondu maahithi sigthide namge..

  ReplyDelete
 5. brilliant post-o maaraaya.. sakkat series-u.. waiting for the next appa's story :)

  ReplyDelete
 6. "ನ ಪುರುಷಃ ಸ್ವಾತಂತ್ರ್ಯಮ್ ಅರ್ಹತಿ"

  Z ಗೆ ಆತ್ಮತೃಪ್ತಿ ಆಯ್ತಂತೆ ಇದನ್ನ ಓದಿ ! ;)

  ಅಪ್ಪನ ಕಥೆ ಸರಣಿ ಅತ್ಯದ್ಭುತವಾಗಿದೆ ಗುರುಗಳೇ ! ಸಿಕ್ಕ್ ಸಿಕ್ಕಾಪಟ್ಟೆ ಮಾಹಿತಿ ಇದೆ ! ಅದರ ಹಿಂದೆ ನಿಮ್ಮ ಆಸಕ್ತಿ, ಆಸ್ಥೆ, ಶ್ರದ್ಧೆ ಶ್ರಮಗಳು ಎದ್ದು ಕಾಣ್ತಿದೆ.

  waiting for more !

  ReplyDelete
 7. [ಲಕುಮಿ] ಮನುಸ್ಮೃತಿಯೆಂಬ outdated ಕೃತಿಯ ಸಾಲನ್ನು ಸುಮ್ನೆ ಬದಲಾಯಿಸಿದ್ದನ್ನು ಮತ್ತೆ ನೆನಪಿಸಿಕೊಂಡಿದ್ದೀಯೆ ಕಮೆಂಟಿನಲ್ಲಿ. ಗೂದ್. ;-)

  ಆತ್ಮತೃಪ್ತಿಯಾಗಿ ತೇಗ್ಬಿಡು ಅತ್ಲಾಗೆ!

  ಹ್ಞಾಂ.. ಒಂದಿಷ್ಟು ಶ್ರಮವಿದೆ ಅಷ್ಟೆ. ಮೋರ್‍ಗೆ ಟ್ರೈ ಮಾಡ್ತೀನಿಮ್ಮಾ.

  [ಗಂಡಭೇರುಂಡ] ಥ್ಯಾಂಕ್ಸೋ ಮಾರಾಯ, ಯಾಕೋ ಈ ನಡುವೆ ಇಂಗ್ಲೀಷ್ ಜಾಸ್ತಿಯಾಗಿದೆ ನಿಂದು. ಇರ್ಲಿ. ಅದೆಂಥದೋ ಸಿಂಡ್ರೋಮು ಅಂದ್ಯಲ್ಲಾ, ಅದೇ.

  [ಸುಶ್ರುತ] ನಿಂಗೂ ಒಂದು ಥ್ಯಾಂಕ್ಸ್ ಕಣಪ್ಪೋ. ಮತ್ತೆ, ಎನಿಮಲ್ ಪ್ಲಾನೆಟ್ ಜೊತೆಗೆ ಪ್ಲಾಂಟ್ ಪ್ಲಾನೆಟ್‍ ಬಗ್ಗೆಯೂ ಯೋಚಿಸೋಣ ಅಂತ, ಏನಂತೀಯಾ? ಅಲ್ಲಾ, ಇರ್ಲಿ ಅಂತ ಹೇಳ್ದೆ ಅಷ್ಟೆ. ;-)

  [ಅನ್ನಪೂರ್ಣ] ಹೌದು ರೀ, ನಂಗೂ ಬೇಜಾರ್ ಆಗೋಗಿತ್ತು, ಅಪ್ಪಂದಿರು ಇಷ್ಟೇನಾ ಇರೋದು ಅಂತ. ಆಮೇಲೆ ನನ್ನ ಚಿಕ್ಕ ಬೌಂಡರಿಯಲ್ಲಿ ಕಾಣಿಸಿದ್ದು ಇಷ್ಟೇ ಎಂದು ತಲೆ ಮೇಲೆ ಹೊಡ್ಕೊಂಡು ಒಂದಷ್ಟು ಪುಸ್ತಕಗಳನ್ನು, ತಾಣಗಳನ್ನು, ವ್ಯಕ್ತಿಗಳನ್ನು (ಕ್ರಮವಾಗಿ) ಓದಿ, ಅಭ್ಯಸಿಸಿ, ಮಾತನಾಡಿಸಿ ಇನ್ನೊಂದಷ್ಟಕ್ಕೆ ಸಿದ್ಧವಾಗುತ್ತಿದ್ದೇನೆ. ನೀವೂ ಒಂದು ರೀತಿ ಇನ್ಸ್ಪಿರೇಷನ್ನುಪ್ಪಾ..

  ಅಂದ ಹಾಗೆ, ಈ ಬ್ಲ್ಯಾಕ್ ವಿಡೋ ಸ್ಪೈಡರ್‍ನ ನೋಡೋಕೆ ನಾರ್ತ್ ಅಮೇರಿಕಾಕ್ಕೆ ಹೋಣಾ?? :-)

  [ಶ್ರೀಕಾಂತ್] ನಿನ್ ಲೈಫಲ್ಲೇ ಇದು ಅತ್ಯಂತ ಚಿಕ್ಕ ಕಮೆಂಟ್ ಅಂತ ಕಮೆಂಟಿಸಲಿಚ್ಛಿಸುತ್ತೇನೆ.

  [ವಿಕಾಸ್] ಧನ್ಯವಾದಗಳು ಸರ್.

  [ಶ್ರೀಧರ] ಈ ಅಪ್ಪನ ಸರಣಿ ಮುಗಿಯಲ್ಲಪ್ಪಾ. ನೀನು ಮದುವೆ ಆಗಿ, ನಾಳೆ ನಿಂಗೆ ನಾಕ್ ಮಕ್ಳಾಗಿ, ಆಮೇಲೆ ಅಪ್ಪನ ಕಥೆ ಭಾಗ ೫೦ರಲ್ಲಿ ನಿನ್ನದೇ ಕಥೆಯಿರುವನ್ನು ಓದಿ ನೀನೂ ನಿನ್ನ ಮಕ್ಕಳೂ ಕಮೆಂಟಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.

  [ರಾಜೇಶ್ ನಾಯ್ಕ] ನಿಮ್ಮ ಶ್ಲಾಘನೆಗೆ ನಾನು ತುಂಬಾ ಕೃತಜ್ಞ. ಅಲ್ಪ ಸ್ವಲ್ಪ ಪಟ್ಟ ಶ್ರಮಕ್ಕೆ ಈ ರೀತಿ ಪ್ರಶಂಸೆ ಸಿಕ್ಕಾಗ ಬಹಳ ಸಂತೋಷ ಆಗುತ್ತೆ. ತುಂಬಾ ಥ್ಯಾಂಕ್ಸ್ ಸರ್.

  ReplyDelete
 8. viShya bEkaadashTu hELideera, jothege superr narrative style! subtle humour rocks! sakkhat (baraha hanging, bayykobEDi plz:p)

  ReplyDelete
 9. ’ಪುರುಷಮ್’ ಸರಿಯಲ್ಲ ಅದನ್ನ ’ಪುರುಷಃ’ ಮಾಡಿ.
  ಮಾಡಿಯಾದ ಮೇಲೆ ಈ comment ಕೂಡ delete ಮಾಡಿ.

  ReplyDelete
 10. [ಶ್ರೀ] ಬಹಳ ಧನ್ಯವಾದಗಳು ರೀ, ಬೈಕೊಳಲ್ಲ. :-)

  [ಶಶಾಂಕ] ಆ ಜೇಡಕ್ಕೆ ಸಂಸ್ಕೃತ ಬರಲ್ವಂತೆ. ನಂಗೂ!!
  ಹೇಳಿದ್ದಕ್ಕೆ ಧನ್ಯವಾದಗಳು. ಅದರ ಕರೆಕ್ಷನ್ನು ಇಲ್ಲೇ ಇರಲಿ ಬಿಡಿ.

  ReplyDelete
 11. ಈ ಭಾಗದಲ್ಲಿ ನನಗೆ ಎಷ್ಟೋ ಹೊಸ ವಿಷಯಗಳನ್ನ ತಿಳಿದುಕೊಂಡೆ.ತುಂಬಾ ಚೆನ್ನಾಗಿ ಮೂಡಿಬರ್ತಿದೆ.

  ReplyDelete

ಒಂದಷ್ಟು ಚಿತ್ರಗಳು..