Saturday, June 28, 2008

ಅಪ್ಪನ ಕಥೆ ಭಾಗ - ೫

ಶಾಲೆಯಲ್ಲಿ ಒಬ್ಬ ಹುಡುಗನ ತಂದೆ ಬಂದು ಇಂಗ್ಲೀಷ್ ಟೀಚರ್ ಮೇಲೆ ರೇಗಾಡುತ್ತಿದ್ದರು.

"ಇದೇನು, disk ಅಂತ ಬರೆಯೋ ಕಡೆ dick ಅಂತ ಬರೆದಿದ್ದಾನೆ ನನ್ನ ಮಗ, ಇದನ್ನು correct ಅಂತ ಹಾಕಿದ್ದೀರ, ನೀವೆಂಥಾ ಇಂಗ್ಲೀಷ್ ಟೀಚರ್ರು ರೀ??"

ಆ ಪೋಷಕರನ್ನು ಸಮಾಧಾನ ಮಾಡಲು ಪಾಪ ಸ್ತ್ರೀ ವರ್ಗದ ಟೀಚರುಗಳು ಹೈರಾಣಾಗಿ ಹೋಗಿದ್ದರು. ಆಮೇಲೆ ನಾವು ನಾಲ್ಕೈದು ಜನ ಪುರುಷವರ್ಗದವರು ಹೇಗೋ ಅವರ ಕೋಪ ಶಮನ ಮಾಡಿ ಮನೆಗೆ ಕಳಿಸಿದೆವು. ನಂತರ ಚಳಿಯಲ್ಲೂ ಬೆವತ ನಾನು ಮುಖವನ್ನೊರೆಸಿಕೊಂಡು ಕಂಪ್ಯೂಟರ್ ಲ್ಯಾಬಿನ ಪಕ್ಕದಲ್ಲೇ ಇರುವ "ರಿಸೋರ್ಸ್ ರೂಮ್"ಗೆ ಹೋದೆ. ಅಲ್ಲಿ ಶಾಲೆಯ ಕೌನ್ಸೆಲರ್ ಒಬ್ಬರೇ ಕೂತು ಪ್ಲಾಸ್ಟಿಕ್ ಆಟಿಕೆಗಳಿಂದ ಏನೋ ಆಟವಾಡುತ್ತಿದ್ದರು. ಈ ನಮ್ಮ ಶಾಲೆಯಲ್ಲಿ ಕೌನ್ಸೆಲರ್ ಅಂತ ಒಬ್ಬ ಮಕ್ಕಳ ಮನಶ್ಶಾಸ್ತ್ರಜ್ಞರನ್ನೂ ಕೆಲಸಕ್ಕಿಟ್ಟುಕೊಂಡಿರುವುದು ಹೆಮ್ಮೆಯ ವಿಷಯ. Education field-ಉ ಬೆಳೆಯುತ್ತಿದೆ ಎಂದು ಖುಷಿಯಾಗುತ್ತಿರುತ್ತೆ.

ಅವರ ಮುಂದೆ ಗೊಣಗಿದೆ. "ಎಂಥಾ ದರಿದ್ರ ಪೇರೆಂಟು! ಹೆಂಗಸರ ಹತ್ತಿರ ಹೇಗೆ ಮಾತಾಡ್ಬೇಕು ಅಂತಾನೂ ಗೊತ್ತಿಲ್ಲ. ಹೋಪ್‍ಲೆಸ್ ಫೆಲೋಸ್".

ಅವರು ಆಟಿಕೆಯನ್ನು ಕೈಯಲ್ಲಿ ಹಿಡಿದುಕೊಂಡೇ ನನ್ನೆಡೆಗೆ ಬಂದರು.

"ಮಿಸ್ಟರ್ ಅರುಣ್, ನೀವು ಬರೋಕೆ ಮುಂಚೆ ಇನ್ನೊಬ್ಬ ಪೇರೆಂಟು ಪಿ.ಟಿ. ಮೇಷ್ಟ್ರ ಮೇಲೆ ಕೆಂಡ ಕಾರ್ತಾ ಇದ್ರು. 'ನಾವೇ ನಮ್ ಮಕ್ಕಳನ್ನ ಹೊಡೆಯಲ್ಲ, ನೀವ್ ಯಾರ್ರೀ ಹೊಡೆಯೋಕೆ?' ಅಂತ. ಪುಣ್ಯಕ್ಕೆ ಹೆಡ್ ಮೇಡಮ್ಮು ಮಧ್ಯೆ ಬರದಿದ್ದರೆ ಪಿ.ಟಿ. ಮೇಷ್ಟ್ರ ಹೆಣ ಬಿದ್ದಿರ್ತಿತ್ತು ಅನ್ಸುತ್ತೆ!" ಅಂದು ಸ್ವಲ್ಪ ಹೊತ್ತು ಸುಮ್ಮನಾಗಿ, "ಅಲ್ಲಾ ಸಾರ್ ನೀವೇ ನೋಡಿ, ಅಮ್ಮಂದಿರು ಮಕ್ಕಳನ್ನು ಮುದ್ದಿಸ್ತಾರೆ, ಅಪ್ಪಂದಿರು ರಕ್ಷಿಸ್ತಾರೆ! ಇದು ನ್ಯಾಚುರಲ್ ಅರುಣ್.. ಮಕ್ಕಳಿಗೆ ತೊಂದರೆ ಆಗಿದೆ ಅಂದ್ರೆ ತಂದೆಯರು ರಾಕ್ಷಸ ಬೇಕಾದ್ರೂ ಆಗ್ತಾರೆ, ದೇವರು ಬೇಕಾದ್ರೂ ಆಗ್ತಾರೆ" ಎಂದರು..

"ಇವೆಲ್ಲಾ ಬರೀ ಮನುಷ್ಯರಲ್ಲಿ ಅಲ್ವಾ? ಬೇರೆ ಪ್ರಾಣಿಗಳಲ್ಲಿ ಹೀಗಿಲ್ವಲ್ಲಾ.. ಎಲ್ಲಾ ಮರಿಗಳೂ ತಾಯಿಯ ಮೊರೆ ಹೋಗುತ್ತವಲ್ಲಾ?"

"ಹೌದು. ಆದರೆ ಕೇವಲ ಮನುಷ್ಯರಲ್ಲಿ ಅಲ್ಲ. ಮನುಷ್ಯರಿಗೆ ಈ ಗುಣ ಎಲ್ಲಿಂದ ಬಂತು ಅಂತ ಗೊತ್ತಾ?"

"ಮಂಗನಿಂದ ಬಂತೇ? ಆದ್ರೆ ಮಂಗಗಳೂ ಸಹ ತನ್ನ ತಾಯಿಯನ್ನೇ ತಬ್ಬಿಕೊಂಡಿರುತ್ತವಲ್ಲಾ? ಅಪ್ಪನ ಜೊತೆ ಎಲ್ಲಿರುತ್ತೆ?"

ಪುರುಷರು

"ನೀವು ತಪ್ ತಿಳಿದಿದ್ದೀರ. ಬಹುಶಃ ಎಲ್ಲರಂತೆ ನೀವೂ ಕೋತಿಗಳಿಂದಲೇ ಮನುಷ್ಯ ವಿಕಾಸಗೊಂಡಿರುವುದು ಎಂದು ನಂಬಿದ್ದೀರೆನಿಸುತ್ತೆ"

"ಅದು ತಪ್ಪೇ?"

"ಹೌದು. ಕೋತಿ ಮತ್ತು ಮನುಷ್ಯ ಎರಡು ಸ್ಪೀಷೀಸುಗಳೂ ಒಂದೇ ಪ್ರೈಮೇಟ್ ಜಾತಿಯಿಂದ ಬಂದಿರುವುದು. ಅದಕ್ಕೇ ಕೋತಿಯ ಕೆಲವು (ಕೆಲವೇನು, ಹಲವು) ಗುಣಗಳು ಮನುಷ್ಯನಿಗೆ, ಮನುಷ್ಯನ ಕೆಲವು ಗುಣಗಳು ಕೋತಿಗಳಿಗೆ ಇರುವುದು. ಅಂಥಾ ಒಂದು ವಿಶೇಷವನ್ನು ನಿಮಗೆ ತೋರ್ಸ್ತೀನಿ ಬನ್ನಿ" ಎಂದು ಕುರ್ಚಿ ತೋರಿಸಿ ಕುಳಿತುಕೊಳ್ಳಲು ಹೇಳಿ ತಮ್ಮ ಕೈಯಲ್ಲಿದ್ದ ಆಟಿಕೆಯನ್ನು ಮೇಜಿನ ಮೇಲಿಟ್ಟರು. ಅದು ಒಂದು puzzle ಆಟವಾಗಿತ್ತು. ನನ್ನ ಜೊತೆ ಮಾತನಾಡುತ್ತ ಆಡುತ್ತಾ ಆ ಪ್ಲಾಸ್ಟಿಕ್ ಕಡ್ಡಿಗಳನ್ನೆಲ್ಲಾ ಜೋಡಿಸಿ ಒಂದು ಇಲಿ ಮಾಡಿದ್ದರು.

"ಇಲ್ಲಿ ನೋಡಿ, ಈ ಮರಿಗಳು ತಾಯಿಯ ಬಳಿ ಇರುತ್ತವೆ ನಿಜ. ಹಾಲುಣಿಸೋದು ತಾಯಿಯಲ್ಲವೇ, ಅದಕ್ಕೆ. ಆದರೆ ಭಯವಾದಾಗ, ನಿಸ್ಸಹಾಯಕ ಎನ್ನಿಸಿದಾಗ, ರಕ್ಷಣೆ ಬೇಕಾದಾಗ ತಂದೆಯನ್ನು ತಬ್ಬಿಕೊಂಡುಬಿಡುತ್ತೆ. ಯಾರಾದರೂ ಅದರ ಹತ್ತಿರ ಹೋದರೆ ಸಾಕು ಕೊಲೆ, ಕೊಲೆ!!! ನೋಡಿದ್ದೀರಾ ಅದರ ಹಲ್ಲುಗಳು ಹೇಗೆ ಕತ್ತಿಯ ಹಾಗಿರುತ್ತೆ ಅಂತ?"

"ನೋಡಿ ಈ ಚಿತ್ರ."

"ಅಯ್ಯೋ, ಇದು ಕೋತಿ ಅಲ್ವಾ?"


ಅಪ್ಪ - ಮಗ(ಳು)

"ನಾವು ಇಲ್ಲಿ ನೋಡುವ ಸಾಧಾರಣ ಕೋತಿಗಳಲ್ಲ ಇವು. ಇದು ಬಬೂನ್ ಅಂತ. ನಾನು ಹೋದ ವರ್ಷ ಆಫ್ರಿಕಾದ ಒಂದು ಕಾಡಿನ ಶಾಲೆಯ ಮಕ್ಕಳನ್ನು ಸ್ಟಡಿ ಮಾಡೋಕೆ ಹೋಗಿದ್ದೆ. ನಿಮ್ಮ ಹಾಗೇ ನಾನೂ ಟ್ರೆಕ್ಕರ್ರು. ಮೌಂಟ್ ಕಿಲಿಮಂಜಾರೋ ಪರ್ವತಾರೋಹಣ ಮಾಡುವ ಸಮಯದಲ್ಲಿ ಅಲ್ಲಿ ನನಗೆ ಬಿದ್ದ ದೃಶ್ಯಗಳಿವು."

"ಅದ್ಭುತ!"

"ಹೌದು. ಇಲ್ಲಿ ನೋಡಿ, ಬೇರೆ ಬಬೂನ್ ಬರ್ತಿದೆ, ಆಗ ತಂದೆ ರಕ್ಷಣೆ ಕೊಡ್ತಿದೆ. ತಾಯಿಯೆಲ್ಲೋ ನಾಪತ್ತೆ. Actually, ಈ ಬಬೂನ್‍ಗಳು ಎಲ್ಲಾ ವಾನರಗಳಂತೆ ಬಹುಸಂಗಾತಿಗಳುಳ್ಳ ಪ್ರಾಣಿಗಳು. ಒಂದೇ ವಾರದಲ್ಲಿ ಹತ್ತು ಹೆಣ್ಣು ಬಬೂನುಗಳ ಸಂಗಾತಿಯಾಗಿರುವ ಸಾಧ್ಯತೆಯಿದೆ. ಅಂತೆಯೇ ಹೆಣ್ಣು ಬಬೂನುಗಳು ಕೂಡ. ಒಂದೇ ವಾರದಲ್ಲಿ ಹತ್ತು ಗಂಡು ಬಬೂನುಗಳ ಮಿಲನ ಮಾಡಿಕೊಂಡಿರುತ್ತೆ. ಅಷ್ಟಿಲ್ಲದೆ ಹಿರಿಯರು ಹೇಳ್ತಾರಾ, ಮನುಷ್ಯನ ಮನಸ್ಸು ಮಂಗನಂತೆ ಅಂತ?? ಇಷ್ಟೆಲ್ಲಾ ಇದ್ರೂ ತಮ್ಮ ಮರಿಗಳು ತಮಗೆ ಗೊತ್ತಿರುತ್ತವೆ. ತಾಯಿಗೆ ಅದು ಸಹಜ. ಇಲ್ಲಿ ವಿಶೇಷ ಎಂದರೆ ತಂದೆಗೂ ಗೊತ್ತಿರುತ್ತೆ. ಒಂದು ಗುಂಪಿನಲ್ಲಿ ಅರವತ್ತು ಬಬೂನುಗಳಿದ್ದರೆ ತಮ್ಮ ತಮ್ಮ ಸಂಗಾತಿಗಳು ಯಾರು ಯಾರು ಮತ್ತು ಮರಿಗಳು ಯಾರು ಅಂತ!"

ಹೊರಗಿನವರಿಂದ ರಕ್ಷಣೆ ನೀಡುತ್ತಿರುವ ಅಪ್ಪ


ಹಲ್ಲೋ ಇದು ಕತ್ತಿಯೋ?

"ಅಚ್ಚರಿ, ಆದರೆ ಒಂದೇ ಹೆಣ್ಣು ಬಬೂನು ನಾಲ್ಕು ಗಂಡಿನೊಂದಿಗೆ ಮಿಲನವಾಗಿದ್ದರೆ? ಆ ಮರಿಗಳ ತಂದೆ ಯಾರು ಎಂದು ಹೇಗೆ ತೀರ್ಮಾನ ಆಗುತ್ತೆ?" ಒಳ್ಳೇ ಉದಯಾ ಟಿ.ವಿ. ಸೀರಿಯಲ್ಲಿನವರ ಥರ ಪ್ರಶ್ನೆ ಹಾಕಿದೆ.

"ಮರಿಗಳನ್ನು ಹಡೆಯುವ ಸಮಯದಲ್ಲಿ ಜೊತೆಗೆ ಯಾವ ಗಂಡು ಇರುತ್ತೋ ಅದೇ ಮರಿಗಳ ಅಧಿಕೃತ ತಂದೆ. ಬೇರೆ ಗಂಡು ಹತ್ತಿರ ಬಂದರೆ ಯುದ್ಧ, ಜಗಳ, ಕದನ!!"

"ಓಹ್ ಹಾಗೆ!"

"ಮರಿಗಳು ದೊಡ್ಡದಾದ ಮೇಲೆ ಹೆಣ್ಣಿಗೆ ಮತ್ತು ಮರಿಗಳಿಗೆ ಆಹಾರ ತಂದುಕೊಡುವ ಜವಾಬ್ದಾರಿ ಕೂಡ ತಂದೆಯದೇ ಅನೇಕ ಬಾರಿ!"

"ಅಪ್ಪಾ, ನಂಗೆ ಭಯ ಆಗುತ್ತೆ ಅವನನ್ನು ನೋಡಿದರೆ..."

"ಈಗ ಗೊತ್ತಾಯ್ತಾ, ತಂದೆಗಳಿಗೆ ಮಕ್ಕಳನ್ನು ರಕ್ಷಣೆ ಮಾಡುವ ಬುದ್ಧಿ ಎಲ್ಲಿಂದ ಬಂದಿದೆ ಅಂತ?"

"ಹೆ ಹ್ಹೆ ಹ್ಹೆ.. ಹ್ಞೂಂ. ಆದರೆ....??"

"ಆದ್ರೆ ಗೀದ್ರೆ ಏನೂ ಇಲ್ಲ. ಪೋಷಕರನ್ನು ಬೈಬೇಡಿ. ಟೀಚರುಗಳು ಮಕ್ಕಳನ್ನು ಸರಿಯಾದ ದಾರಿಗೆ ತರಬೇಕು. ತಿದ್ದುವಾಗ ಸರಿಯಾಗಿ ತಿದ್ದಬೇಕು. ಹೊಡೆಯದೇ ಪಾಠ ಹೇಳಬೇಕು. At least, ಹಣ ಕೊಟ್ಟು ಮಕ್ಕಳನ್ನು ಸ್ಕೂಲಿಗೆ ಸೇರಿಸಿರುವ ಪೋಷಕರಿಗೋಸ್ಕರ!!"

ಬಬೂನ್ ಸೈನ್ಯ

"ನೀವು ಕೋತಿ ಸೈಕಾಲಜಿಯನ್ನೂ ಸ್ಟಡಿ ಮಾಡ್ತೀರಾ?"

"ಹೌದು. ನಿಮ್ಮ ಸೈಕಾಲಜಿ ಕೂಡ!!"

"ನಂಗೆ ಟೈಮ್ ಆಯ್ತು ಸಾರ್, ನಾನ್ ಹೊರಡುತ್ತೇನೆ." ಎಂದು ಕಾಲ್ಕಿತ್ತೆ.

......................................................................................

ಬಬೂನ್ (Papio hamadryas) - ಇದು ಒಂದು ಬಗೆಯ ಬಬೂನ್ ಅಷ್ಟೆ - ಎಂಬ ವಾನರವು ಮನುಷ್ಯನ ಪೂರ್ವಜರಿಗೆ ಬಹಳ ಹತ್ತಿರದ ಸಂಬಂಧಿ. ಸಾಮಾನ್ಯವಾಗಿ ವಾನರಗಳಲ್ಲಿ ಪಾಲಿಗಮಿ (ಬಹುಸಂಗಾತಿಗುಣ) ಕಂಡುಬಂದರೂ ಮರಿಗಳ ವಿಷಯಕ್ಕೆ ಬಂದಾಗ ವಿಪರೀತ ರಕ್ಷಣಾಗುಣಗಳನ್ನುಳ್ಳವಾಗಿರುತ್ತವೆ. ಮನುಷ್ಯನಲ್ಲಿ ಪಾಲಿಗಮಿಯಿಲ್ಲದಿರಲು ಕಾರಣ ಸಂಸ್ಕೃತಿಯಷ್ಟೆ. (ಅನಧಿಕೃತವಾಗಿ ಮನುಷ್ಯನ ಮನಸ್ಸು ಮಂಗನಂತೆ ಎಂದು ನಿರೂಪಣೆಯಾಗಿರುವುದು ಇಲ್ಲಿ ಅಪ್ರಸ್ತುತ).

ಕದನಕ್ಕೆ ಸಿದ್ಧ

ತಂದೆ ಬಬೂನ್‍ಗಳು ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳುವ ಬಗೆಯನ್ನು ಮೇಲೆ ವಿವರಿಸಲಾಗಿದೆಯಾದರೂ ಅದು ಒಂದು ಸಂಗಾತಿಯನ್ನು ಹೊಂದಲು ಪಡುವ ಕಷ್ಟಗಳು ಅಷ್ಟಿಷ್ಟಲ್ಲ. ಹೆಣ್ಣುಗಳನ್ನು ಇಂಪ್ರೆಸ್ ಮಾಡಬೇಕು (ಸಾಧಾರಣವಾಗಿ ಕೋತಿಗಳಲ್ಲಿ ಹೆಣ್ಣನ್ನು ಗಂಡು ಒಪ್ಪಿಕೊಳ್ಳಬೇಕು ಇಂಪ್ರೆಸ್ ಆಗಿ, ಮತ್ತು ಗಂಡನ್ನು ಹೆಣ್ಣು ಒಪ್ಪಬೇಕು), ನಂತರ ಗುಂಪಿನ ದೊಡ್ಡ ಬಬೂನ್‍ಗಳೊಡನೆ ಕಾದಾಡಿ ಸ್ವಯಂವರದಲ್ಲಿ ಗೆಲ್ಲಬೇಕು, ನಂತರ ಬೇರೆ ಹೆಣ್ಣನ್ನು ಇಂಪ್ರೆಸ್ ಮಾಡಬೇಕು, ಮತ್ತೆ ಬೇರೆ ಕಡೆ ಜಗಳ.. ಹಾಗಾಗಿ ಜೀವಕ್ಕೆ ಎಂದೆಂದಿಗೂ ಕುತ್ತೇ! ಜಯವಿರುವವರೆಗೂ ಭಯವಿಲ್ಲ.

ನಮ್ಮ ಸಂಸಾರ...

ಇತರ ಬಬೂನ್ ಸ್ಪೀಷೀಗಳು ಇಂತಿವೆ. ಗುಣಲಕ್ಷಣಗಳಲ್ಲಿ ಅಷ್ಟೇನು ಭಿನ್ನತೆಯಿಲ್ಲ.

1. ದಕ್ಷಿಣ ಆಫ್ರಿಕಾದ ಬಬೂನ್ - Papio hamadryas
2. ಇಥಿಯೋಪಿಯಾದ ಬಬೂನ್ - Papio anubis
3. ಗಿನಿಯಾದ ಬಬೂನ್ - Papio papio
4. ಪೂರ್ವ ಆಫ್ರಿಕಾದ ಬಬೂನ್ - Papio cynocephalus
5. ಚಕ್ಮಾದ ಬಬೂನ್ - Papio ursinus


ಮುಂದಿನ ಭಾಗದಲ್ಲಿ ಬೇರೊಂದು ಅಪ್ಪನ ಕಥೆಯ ಪುಟಗಳನ್ನು ತೆರೆದಿಡುವ ಪ್ರಯತ್ನ ಮಾಡುತ್ತೇನೆ.

-ಅ
28.06.2008
7.20PM

Sunday, June 08, 2008

ಅಪ್ಪನ ಕಥೆ - ಭಾಗ ೪

ಈವರೆಗಿನ ಅಪ್ಪನ ಕಥೆಗಳು ಇಂತಿವೆ.

ಭಾಗ ೧ - ಎಂಪರರ್ ಪೆಂಗ್ವಿನ್
ಭಾಗ ೨ - ಸಮುದ್ರ ಕುದುರೆ
ಭಾಗ ೩ - ಗೀಜಗ (Weaver bird)

.....................................................................................ನಾನು ಹುಟ್ಟಿದಾಗಿನಿಂದ ಅಪ್ಪನನ್ನು ನೋಡೇ ಇಲ್ಲ. ಅಮ್ಮನನ್ನು ಕೇಳಿದೆ, "ಅಮ್ಮಾ, ಅಪ್ಪ ಎಲ್ಲಿ? ಅಪ್ಪ ಯಾರು?" ಅಂತ. ಅದಕ್ಕೆ ಧಡೂತಿ ನಮ್ಮಮ್ಮ ಹೇಳಿದ್ದು ಏನು ಗೊತ್ತೇ?

"ಮಗಳೇ, ನಿಮ್ಮಪ್ಪ ನನ್ನ ಹೊಟ್ಟೆಯೊಳಗೆ ಜೀರ್ಣ ಆಗಿ ತಿಂಗಳುಗಳೇ ಆಗಿವೆ. ಅವನ ಚಿಂತೆ ಬಿಡು. ನೀನು ದೊಡ್ಡವಳಾದ ಮೇಲೆ ನಿನ್ನ ಗಂಡನು ನಿನ್ನ ತೆಕ್ಕೆಯನ್ನು ಬಿಡಿಸಿಕೊಂಡು ಬಚಾವ್ ಆಗದೇ ಇರುವುದು ಹೇಗೆ ಅಂತ ನೀನು ಯೋಚನೆ ಮಾಡು."

"ಗಂಡನನ್ನು ತಿನ್ನುವುದೇ? ಎಲ್ಲಾದರೂ ಉಂಟೇ? ನೀನು ಅಪ್ಪನನ್ನು ತಿಂದುಬಿಟ್ಟೆಯಾ? ಯಾವ 'ಜೇಡಾ'ರ್ಥಕ್ಕಾಗಿ??

"ಅವನು ನನಗಿಂತ ತೀರ ಸಣ್ಣ. ಗಂಡಸರೇ ಹೀಗೆ. ವಿಪರೀತ ಸಣ್ಣ ಇರ್ತಾರೆ. ಚಿಕ್ಕದಾಗಿ ಒಳ್ಳೇ ಹುಳು ಥರ ಇರ್ತಾರೆ. ನಮ್ಮಿಬ್ಬರ ಮಿಲನ ಆದಮೇಲೆ ಅವನಿಗೆ ಇನ್ನೇನು ಕೆಲಸ. ನಾನು ನೋಡು, ಎಷ್ಟು ದೈತ್ಯೆ! ಅವನ ಹತ್ತರಷ್ಟು ದೊಡ್ಡದಾಗಿದ್ದೀನಿ. ಅವನೊಬ್ಬ ಹುಳುಜೇಡನಷ್ಟೆ! ಸಂಭೋಗ ನಡೆದ ತಕ್ಷಣ ಓಡಿಹೋಗಲು ಯತ್ನಿಸಿದ. ನಾನು ಬಿಡ್ತೀನಾ? ಕಬಳಿಸಿಬಿಟ್ಟೆ!!""ನನ್ನ ಹಾಗೆ, ನಿನ್ನ ಹಾಗೆ ಅಪ್ಪನ ಬಾಯಲ್ಲೂ ವಿಷವಿರಲಿಲ್ಲವೇ? ಅವನು ಕಚ್ಚಲಿಲ್ಲವೇ??"

"ನನ್ನ ಬಾಯಲ್ಲಿ ಇರುವ ವಿಷದಿಂದ, ಮಗಳೇ, ಇದುವರೆಗೂ ಇಪ್ಪತ್ತು ಮನುಷ್ಯರನ್ನೇ ಕೊಂದಿದ್ದೀನಿ. ಅವನ ವಿಷ ಯಾವ ಲೆಕ್ಕ ನನಗೆ! ಅವನು ತೀರ ಎಳೆಸು! ಅವನಿಗೆ ಒಬ್ಬ ಮನುಷ್ಯನನ್ನು ಕೊಲ್ಲುವಷ್ಟೂ ವಿಷವಿರಲಿಲ್ಲ. ಗಂಡಸರಿಗೆ ವಿಷವೆಲ್ಲಿರುತ್ತೆ! ಇದು ಸ್ತ್ರೀ ಸಾಮ್ರಾಜ್ಯ. ನಮ್ಮ ಬಲೆಯಲ್ಲಿ ಹೆಂಗಸರಿರಬೇಕಷ್ಟೆ. ಗಂಡಸರು ನಿನ್ನಂಥ ಚೆಲುವೆಯರ ಜನ್ಮಕ್ಕೆ ಕಾರಣರಾಗುವ ಕೆಲಸದವರೆಗಷ್ಟೆ ಬದುಕಲು ಅರ್ಹರು. ಆಮೇಲೆ ನಮ್ಮ ಆಹಾರವಾಗುತ್ತಾರೆ. ನ ಪುರುಷಮ್ ಸ್ವಾತಂತ್ರ್ಯಮರ್ಹತಿ! "

"ಓಹ್, ಮನು ಹೇಳಿದ್ದು. ಆದರೂ ಈ ವಿಧವೆ ಪಟ್ಟ ನಮ್ಗೆ ಶಾಶ್ವತವಲ್ಲವೇ?"

"ಹೌದು ಮಗು. ಅದಕ್ಕೆ ನಮ್ಮನ್ನು ವಿಧವೆ ಜೇಡಗಳೆಂದೇ ಹೆಸರಿಟ್ಟಿದ್ದಾರೆ. ಅದರಲ್ಲೂ ನಮ್ಮ ಜಾತಿಯವರಿದ್ದಾರಲ್ಲಾ, ಫಳ ಫಳ ಅಂತ ಕಪ್ಪಗೆ ಹೊಳೆಯುತ್ತೀವಲ್ಲಾ, ನಮ್ಮನ್ನು Black Widow Spider ಎಂದೇ ಹೆಸರಿಸಿದ್ದಾರೆ. ನಮ್ಮ ಕರ್ತವ್ಯ ಅಲ್ಲವೇ ವಿಧವೆಯರಾಗೋದು!"ಅಮ್ಮ ನನಗೆ ನನ್ನ ಗಂಡನನ್ನು ತಿನ್ನುವುದು ಹೇಗೆ ಎಂದು ಹೇಳಿಕೊಡಲೇ ಇಲ್ಲ. ಎಲ್ಲ ತಾಯಂದಿರಂತೆ ನಾವು ಎಂಟುನೂರು ಸಹೋದರ ಸಹೋದರಿಯರು ಹುಟ್ಟಿ ಕೆಲವು ದಿನಗಳೊಳಗೆಯೇ ಹೋಗಿಬಿಟ್ಟಳು. ನನಗಿನ್ನೂ ಮದುವೆಯಾಗಿಲ್ಲ.

ನಾನು ಎಷ್ಟು ದೊಡ್ಡದಾಗಿದ್ದೇನೆ, ಆದರೆ ನಮ್ಮಪ್ಪ ಹೀಗಿರಲಿಲ್ಲವಂತೆ. ನನ್ನ ಹೊಟ್ಟೆಗಿಂತ ಚಿಕ್ಕ ಗಾತ್ರದವನಂತೆ. ನನ್ನ ಗಂಡನೂ ಹಾಗೇ ಇರುತ್ತಾನಂತೆ. ಬಲೆಯಲ್ಲಿ ಬಿದ್ದ ಹುಳುಗಳನ್ನೆಲ್ಲಾ ಕ್ಷಣಮಾತ್ರದಲ್ಲಿ ನಮ್ಮ ವಿಷದಿಂದ ಕೊಂದು ತಿಂದು ತೇಗುವುದನ್ನು ಕಲಿಸಿಕೊಟ್ಟಿದ್ದಾಳೆ ಅಮ್ಮ, ಆದರೆ ಅವಳು ಅಪ್ಪನನ್ನು ಸಂಭೋಗದ ನಂತರ ಕೊಂದು ತಿಂದಿದ್ದು ಹೇಗೆಂದು ಮಾತ್ರ ಹೇಳಿಕೊಡಲಿಲ್ಲ. ನನಗೆ ಭಯ. ನನ್ನನ್ನು ಕೂಡಲು ಬರುವವನಿಗೆ ನನ್ನ ಸಂಚಿನ ಅರಿವಿದ್ದು ನನ್ನನ್ನೇ ಕೊಂದುಬಿಟ್ಟರೆ?
ಹಾಗಾಗಲಾರದು. ಅಮ್ಮನ ಪ್ರಕಾರ ಅವನು ಹುಳುವಿನಂತೆಯೇ!

ಅಂತೂ ಅಪ್ಪನನ್ನು ನೋಡುವ ಭಾಗ್ಯವಂತೂ ನನಗಿಲ್ಲ. ಗಂಡನನ್ನಾದರೂ ನೋಡಿ, ಅವನನ್ನು ಕೂಡಿ, ನಂತರ ತಿಂದು ತೇಗುವ ಕೆಲಸವೊಂದನ್ನು ಬಾಕಿಯುಳಿಸಿಕೊಂಡಿದ್ದೇನೆ.

ಹ್ಞಾಂ.. ಇನ್ನೊಂದು ಪಾಠ ನೆನಪಾಯಿತು. ಆದರೆ ಇದನ್ನು ಯಾಕೆ ಮಾಡಬೇಕೋ ಗೊತ್ತಿಲ್ಲ. ಅಮ್ಮ, ಅಪ್ಪನನ್ನು ತಿಂದ ಕೆಲವೇ ಹೊತ್ತಿನಲ್ಲಿ ಹೊಟ್ಟೆಯನ್ನು ಮೇಲೆ ಮಾಡಿಕೊಂಡು ಬಲೆಗೆ ನೇತುಹಾಕಿಕೊಂಡಳಂತೆ. ನಾನು ಅದನ್ನು ಮಾಡಿದ ಮೇಲೆಯೇ ಗೊತ್ತಾಗೋದು ಯಾಕೆ ಹಾಗೆ ಮಾಡಬೇಕು ಅಂತ. ಆದರೆ ಯಾರಿಗೂ ಹೇಳೋದಿಲ್ಲ, ಯಾಕೆ ನೇತುಹಾಕಿಕೊಳ್ಳಬೇಕು ಅಂತ.

.....................................................................................

Black Widow Spider (Latrodectus hesperus) ಎಂಬ ಜೇಡವು ಉತ್ತರ ಅಮೇರಿಕದಲ್ಲಿ ಅತ್ಯಂತ ಹೆದರಿಕೆಯನ್ನು ಹುಟ್ಟಿಸುವ ಕೀಟ. ನಾವು ಹಾವು ಚೇಳುಗಳಿಗೆ ಹೆದರಿಕೊಳ್ಳುವಂತೆ ಇಲ್ಲಿನ ಜನರು ಈ ಜೇಡಕ್ಕೆ ಹೆದರುತ್ತಾರೆ. ಇದು ಮನೆಯ ಒಳಗೆ ಬೇಕಾದರೂ ಬಂದುಬಿಡಬಹುದು. ಸೌದೆಯ ರಾಶಿಯೊಳಗೆ, ಗೋಡೆಯ ಮೇಲೆ, ಬಚ್ಚಲು ಮನೆಯಲ್ಲಿ, ಮಂಚದ ಕೆಳಗೆ, ಎಲ್ಲಿ ಬೇಕೆಂದರಲ್ಲಿ ತನ್ನ ಬಲೆಯ ಸಾಮ್ರಾಜ್ಯವನ್ನು ನಿರ್ಮಿಸಿಬಿಡಬಹುದು. ಇದನ್ನು ಮುಟ್ಟಿದವರಿಗೆ ಥಟ್ಟನೆ ತನ್ನ ವಿಷಪೂರಿತ ಕೊಂಡಿಯಿಂದ ಚುಚ್ಚಿ ಗಾಯಗೊಳಿಸಬಲ್ಲುದು. ಸರಿಯಾಗಿ ಚಿಕಿತ್ಸೆ ಮಾಡಿಸದಿದ್ದರೆ ಸಾವಿಗೂ ಕಾರಣವಾಗಬಹುದು.

ಈ ಜೇಡಕ್ಕೆ widow ಎಂದು ಯಾಕೆ ಕರೆಯುತ್ತಾರೆಂದರೆ ಸಂಭೋಗ ಕ್ರಿಯೆ ಮುಗಿದ ತತ್‍ಕ್ಷಣವೇ ತನ್ನ ಸಂಗಾತಿಯನ್ನು ಕಬಳಿಸಿಬಿಡುತ್ತೆ. ಶಾಶ್ವತ ವಿಧವೆಯಾಗಿ ಉಳಿಯುತ್ತೆ. ಗಂಡಿಗೂ ಹೆಣ್ಣಿಗೂ ಅಜಗಜಾಂತರ ಗಾತ್ರ. ಆದರೆ ಇದು ಎಲ್ಲಾ ಸಲವೂ ಆಗುವುದಿಲ್ಲ. ಅನೇಕ ಬಾರಿ ಗಂಡು ಜೇಡವು ಸಂಭೋಗ ಮುಗಿದ ಕ್ಷಣವೇ ಪರಾರಿಯಾಗಿಬಿಡುತ್ತೆ. ಆದರೆ ಎಂದೋ ಎಲ್ಲೋ ಇನ್ಯಾವುದೋ ಹೆಣ್ಣು ಜೇಡದ ಹೊಟ್ಟೆಯೊಳಗೇ ಇದರ ಭವಿಷ್ಯವು ಅಡಗಿರುತ್ತೆ.

ಮುಂದಿನ ಭಾಗದಲ್ಲಿ ಬೇರೊಂದು ಅಪ್ಪನ ಕಥೆಯನ್ನು ಕ್ಷಿತಿಜದೆಡೆಗೆ ಕರೆದೊಯ್ಯಲು ಯತ್ನಿಸುತ್ತೇನೆ.

-ಅ
08.06.2008
9.45PM

Thursday, June 05, 2008

ವಿಶ್ವ ಪರಿಸರ ದಿನ

ಎಲ್ಲ ಜೀವಿಗಳ ಹುಟ್ಟು, ಬದುಕು ಮತ್ತು ಸಾವಿನ ಕಾರಣವಾದ ಪರಿಸರವನ್ನು ಪ್ರೀತಿಸಿ ಬದುಕೋಣ.

ವಿಶ್ವ ಪರಿಸರ ದಿನದ ಶುಭಾಶಯಗಳು.

-ಅ
05.06.2008
7AM

ಒಂದಷ್ಟು ಚಿತ್ರಗಳು..