Wednesday, May 07, 2008

ಅಪ್ಪನ ಕಥೆ - ಭಾಗ ೩

ಶಾಲೆಯಲ್ಲಿ ಮಕ್ಕಳಿಗೆ Environmental Studies ವಿಷಯದಲ್ಲಿ ನಾನು ಮೊದಲು ಆರಿಸಿಕೊಂಡಿದ್ದು ಈ ಒಂದು ವಿಶಿಷ್ಟ 'ಅಪ್ಪ'ನ ಕಥೆಯನ್ನು ವಿವರಿಸಲು. ಮಕ್ಕಳೆಲ್ಲರೂ ಒಂದು ರೀತಿ ಥ್ರಿಲ್ ಆಗಿದ್ದರು. ಅಲ್ಲಿಯವರೆಗೂ ಮಕ್ಕಳು ಯಾವ ಗೂಡನ್ನೂ ಕೈಯಲ್ಲಿ ಹಿಡಿದುಕೊಂಡಿರಲಿಲ್ಲ. ಬೆಂಗಳೂರು ನಗರದ ಇಂಗ್ಲಿಷ್ ಶಾಲೆಯ ಮಕ್ಕಳೆಂದರೆ ಹಾಗೇ. ಅವರಿಗೆ ಡಿಸ್ಕವರಿ ಚಾನೆಲ್ ಗೊತ್ತಿರುತ್ತೆ, ಗುಬ್ಬಚ್ಚಿಯನ್ನೂ ಸಹ ಕಣ್ಣಿಂದ ನೋಡಿರೋದಿಲ್ಲ. ಟಾಮ್ ಎಂಡ್ ಜೆರಿ ಗೊತ್ತಿರುತ್ತೆ, ಬೆಕ್ಕು ಇಲಿಯನ್ನು ಹಿಡಿಯುವುದನ್ನು ನೋಡೇ ಇರೋದಿಲ್ಲ.

ಅಂಥಾ ಮಕ್ಕಳಿಗೆ ನಾನು ಗೀಜಗ ಅನ್ನೋ ಪಕ್ಷಿ ಬಗ್ಗೆ ಹೇಳುವಾಗ ನನಗೂ ಒಂದು ರೀತಿ ಥ್ರಿಲ್ ಆಗಿತ್ತು. ಯಾಕೆಂದರೆ ಸರಿಯಾಗಿ ನಾಯಿ ಬೆಕ್ಕುಗಳನ್ನೇ ಗಮನಿಸಿ ಅಭ್ಯಾಸ ಇಲ್ಲದ ಮಕ್ಕಳಿಗೆ ಈ ಪಕ್ಷಿ ಬಗ್ಗೆ ಏನು ಹೇಳೋದು, ಹೇಗೆ ಹೇಳೋದು ಅಂತ ನನ್ನೊಳಗೆ ನನಗೇ ಸವಾಲುಗಳಿದ್ದವು.

ನನ್ನ ಕೈಯಲ್ಲಿ ಸಂಪೂರ್ಣವಾಗಿದ್ದ ಒಂದು ಗೂಡನ್ನು ಹಿಡಿದುಕೊಂಡು ವಿವರಿಸಲು ಆರಂಭಿಸಿದೆ.

"ಇದು ಗೀಜಗನ ಗೂಡು, ಗೀಜಗ ಅಂದರೆ, ವೀವರ್ ಬರ್ಡ್ ಅಂತ. ನಿಮ್ಮಲ್ಲಿ ಹಳ್ಳಿಯಿಂದ ಯಾರಾದರೂ ಬಂದಿದ್ರೆ, ಅವರು ಇದನ್ನು ನೋಡಿರ್ತಾರೆ, ಮರದ ಮೇಲೆ ನೇತಾಡ್ತಾ ಇರುತ್ತೆ." ಯಾರಿಂದಲೂ ಉತ್ತರ ಬರಲಿಲ್ಲ. ಹಳ್ಳಿಯಿಂದ ಬಂದವರು ಯಾರೂ ಇಲ್ಲ ಎಂದು ಖಾತ್ರಿಯಾಯಿತು.
"ಸರಿ, ಇದು ನಾನು ತೆಗೆದಿರೋ ಫೊಟೋಸು. ನೋಡ್ಬಿಟ್ಟು ವಾಪಸ್ ಕೊಡಿ" ಎಂದು ಹೇಳಿ ಗೀಜಗನ ಗೂಡಿನ ಫೋಟೋಗಳನ್ನು ಮಕ್ಕಳ ಕೈಗೆ ಕೊಟ್ಟೆ.
ಒಬ್ಬ ಧೈರ್ಯಶಾಲಿ ಹುಡುಗ ಪ್ರಶ್ನೆ ಕೇಳಿ ನನ್ನನ್ನು ಸಂತೋಷಗೊಳಿಸಿದ. ಸುಮ್ಮನೆ ನಾನು ಹೇಳಿದ್ದು - ಅವರು ಕೇಳಿದ್ದು ಆಗಬಾರದು. ಪಾಠ ಎಂದರೆ ಅಲ್ಲಿ ಚರ್ಚೆಯಿರಬೇಕು, ಪ್ರಶ್ನೋತ್ತರವಿರಬೇಕು ಎಂದು ನನ್ನ ನಿಲುವು. ಆ ಹುಡುಗ, "ಸರ್, ಈ ಗೂಡು ಇಷ್ಟೊಂದು ಗಟ್ಟಿಯಿದೆ? ಪಕ್ಷಿ ತುಂಬಾ ಚಿಕ್ಕದು ಅನ್ಸುತ್ತೆ? ಗೂಡಿನ ಬಾಗಿಲು ತುಂಬಾ ಚಿಕ್ಕದಾಗಿದೆ??" ಎಂದ.

"ಹೌದಪ್ಪ. ಈ ಪಕ್ಷಿ ತುಂಬಾನೇ ಚಿಕ್ಕದಾಗಿರುತ್ತೆ. ಇದರ ಗೂಡಿದೆಯಲ್ಲಾ, ಇದು ಹುಲ್ಲುಗರಿಗಳಿಂದ ಮಾಡಿದೆ. ಆ ಹುಲ್ಲುಗರಿಗಳು ತುಂಬಾ ಗಟ್ಟಿಯಿರುತ್ತವೆ. ನೈಲಾನ್ ದಾರದಂತೆ!! ಇದನ್ನು ಹೊಲಿಯಬೇಕಾದರೆ ಯಾವುದೇ ಟೈಲರಿಂಗ್ ಮೆಷೀನು ಉಪಯೋಗಿಸೋದಿಲ್ಲ, ಎಲ್ಲಾ ಕೊಕ್ಕಲ್ಲೇ!! ಒಂದೊಂದೇ ಎಳೆಯನ್ನು ತೆಗೆದುಕೊಂಡು ಬರುವ ಈ ಪಕ್ಷಿ, ತನ್ನ ಗೂಡು ಸಂಪೂರ್ಣ ಆಗುವ ಹೊತ್ತಿಗೆ ಸುಮಾರು ಐದು ನೂರು ಟ್ರಿಪ್ಪು ಹೊಡೆದಿರುತ್ತೆ!"

ಮಕ್ಕಳ ಮುಖದಲ್ಲಿ ಆಶ್ಚರ್ಯ ಎದ್ದು ಕಾಣುತ್ತಿತ್ತು. ನಾನು ಅವರ ಅಚ್ಚರಿಯನ್ನು ಇನ್ನಷ್ಟು ಪ್ರಚೋದಿಸಲು, "ಹುಲ್ಲುಗರಿಗಳನ್ನು ಸುಮ್ಮನೆ ತೆಗೆದುಕೊಂಡು ಬರಲಾಗುವುದಿಲ್ಲ. ಈ ಗೂಡನ್ನು ಬಿಡಿಸಿದರೆ ನಮಗೆ ತಿಳಿಯುತ್ತೆ, ಎಲ್ಲಾ ಗರಿಗಳೂ ಒಂದೇ ಗಾತ್ರದಲ್ಲಿರುತ್ತವೆ!! ಪಕ್ಷಿಯು ಸುಮಾರು ನಲವತ್ತು ಸೆಂಟಿಮೀಟರಿನಷ್ಟಕ್ಕೆ ಹುಲ್ಲನ್ನು ಕತ್ತರಿಸಿ ನಂತರ ಕೊಕ್ಕಿನಲ್ಲಿ ಹಿಡಿದುಕೊಂಡು ಮರದ ಬಳಿ ಹಾರಿ ಬಂದು ಒಂದೊಂದೇ ಎಳೆಯನ್ನು ಸೇರಿಸಿ ಹೊಲೆಯುತ್ತೆ! ಮೂರು ತಿಂಗಳು ಬರೀ ಗೂಡು ಕಟ್ಟೋ ಕೆಲಸ ಮಾಡುತ್ತೆ ಈ ಪಕ್ಷಿ. ಗೂಡಿನಲ್ಲಿ ಸುಮಾರು ಐದು ಸಾವಿರ ಎಳೆಗಳಿರುತ್ತವೆ".

ಆರನೇ ತರಗತಿಯ ಒಬ್ಬಳು ಹುಡುಗಿ ಎದ್ದು ನಿಂತು, "ಅಷ್ಟೊಂದು ಕಷ್ಟ ಪಟ್ಟು ಯಾಕೆ ಗೂಡು ಕಟ್ಟುತ್ತೆ? ಬೇರೆ ಪಕ್ಷಿಗಳು ಹೀಗೆ ಗೂಡು ಕಟ್ಟೋದಿಲ್ವಾ?" ಎಂದು ಕೇಳಿದಳು. "ಬೇರೆ ಪಕ್ಷಿಗಳು ಇಷ್ಟೊಂದು ಕಷ್ಟ ಪಡಲ್ಲ. ಟೈಲರ್ ಬರ್ಡ್ ಅಂತ ಒಂದಿದೆ. ಅದು ಪಡುತ್ತೆ ಅಷ್ಟೆ. ಮಿಕ್ಕ ಪಕ್ಷಿಗಳು ಈ ರೀತಿ ಗೂಡು ಕಟ್ಟಲ್ಲ. ಯಾಕಪ್ಪ ಇಷ್ಟು ಕಷ್ಟ ಪಡುತ್ತೆ ಅನ್ನೋದು ಇನ್ನೂ ಇಂಟರೆಸ್ಟಿಂಗ್ ವಿಷಯ. ಹೆಣ್ಣು ಪಕ್ಷಿಯನ್ನು ಖುಷಿ ಪಡಿಸೋಕೆ!!"
"ಅಂದರೆ, ಈ ಗೂಡನ್ನು ಗಂಡು ಪಕ್ಷಿ ಕಟ್ಟುತ್ತಾ?" ಹತ್ತನೇ ತರಗತಿಯ ಧ್ವನಿ ಕೇಳಿಬಂತು. "ಹೌದು. ಗಂಡು ಪಕ್ಷಿ ಗೂಡು ಕಟ್ಟುತ್ತೆ. ಆಮೇಲೆ, ಹೆಣ್ಣನ್ನು ಕರೆತರುತ್ತೆ. ಹೆಣ್ಣು ಪಕ್ಷಿಗೆ ಆಹ್ವಾನ ಇಷ್ಟವಾದಲ್ಲಿ ಗೂಡಿಗೆ ಬಂದು "inspect" ಮಾಡಿ ಗೂಡು ಹಿಡಿಸಿದರೆ ಗಂಡಿನ ಜೊತೆಯಿದ್ದು breed ಮಾಡಿ ಮೊಟ್ಟೆಯಿಟ್ಟು ನಂತರ ಹಾರಿ ಹೋಗುತ್ತೆ!!" Breeding ಎಂದರೇನು ಎಂದು ಪ್ರೈಮರಿ ಶಾಲೆಯ ಮಕ್ಕಳಿಗೆ ವಿವರಿಸಲು ಸುಸ್ತುಹೊಡೆದುಬಿಟ್ಟೆ.

"ಹೆಣ್ಣನ್ನು impress ಮಾಡಲು ಗೂಡಿನ ಒಳಗೆ ಬಣ್ಣ ಬಣ್ಣದ ಹೂವನ್ನು ಸಹ ಸಿಕ್ಕಿಸಿರುತ್ತೆ - ಜೇಡಿ ಮಣ್ಣಿನ ಸಹಾಯದಿಂದ! ನೋಡಿದ್ರಾ, ಈ ಇಂಜಿನೀಯರ್ ಪಕ್ಷಿಯ ಬುದ್ಧಿ ಹೇಗಿದೆ ಅಂತ. ಈ ಇಂಜಿನಿಯರುಗಳಲ್ಲೂ ದಡ್ಡರು ಇದ್ದಾರೆ. ಕೆಲವು ಪಕ್ಷಿಗಳು ಅರ್ಧಂಬರ್ಧ ಕಟ್ಟಿದ ಗೂಡುಗಳನ್ನೇ ನೆಚ್ಚಿಕೊಂಡು ಹೆಣ್ಣನ್ನು ಕರೆದುಕೊಂಡು ಬರುತ್ತವೆ. ಒಳ್ಳೇ ಹೆಲ್ಮೆಟ್ ಥರ ಇದೆ ನೋಡಿ ಈ ಗೂಡು (ಕೈಯಲ್ಲಿದ್ದ ಇನ್ನೊಂದು ಅರೆನಿರ್ಮಿತ ಗೂಡನ್ನು ತೋರಿಸಿದೆ), ಇಂಥಾ ಗೂಡುಗಳನ್ನು ಹೆಣ್ಣು ಪಕ್ಷಿಗಳು ನಿಕೃಷ್ಟವಾಗಿ ತಳ್ಳಿ ಹಾಕಿಬಿಡುತ್ತವೆ. ಆಗ ಗಂಡು ಪಕ್ಷಿ ಮತ್ತೆ ಮೊದಲಿನಿಂದ ಕಟ್ಟಲು ಆರಂಭಿಸುತ್ತೆ. ಕೆಲವು ಅದೃಷ್ಟ ಪಕ್ಷಿಗಳು ಒಟ್ಟಿಗೇ ಸೇರಿ ಗೂಡನ್ನು ಸಂಪೂರ್ಣಗೊಳಿಸುತ್ತವೆ."ಪಕ್ಕದಲ್ಲಿ ನಿಂತಿದ್ದ ಪಿ.ಟಿ. ಮೇಷ್ಟ್ರು, ಸೋಷಿಯಲ್ ಸ್ಟಡೀಸ್ ಮೇಡಮ್ಮು, ಪ್ರಾಂಶುಪಾಲರು ಬಿಟ್ಟಕಣ್ಣು ಬಿಟ್ಟುಕೊಂಡು ಗೂಡುಗಳನ್ನೇ ನೋಡುತ್ತಿದ್ದರು. ಪಿ.ಟಿ. ಮೇಷ್ಟ್ರನ್ನು ಕರೆದು ಗೂಡನ್ನು ಹಿಡಿದುಕೊಳ್ಳಲು ಹೇಳಿ, ಅದರ ಬಾಗಿಲ ಒಳಗೆ ಕೈ ಹಾಕಿ ಗೂಡಿನ ರೀತಿಯನ್ನು ವಿವರಿಸತೊಡಗಿದೆ. "ಗೂಡಿನಲ್ಲಿ ಎರಡು ಛೇಂಬರ್ ಇದೆ. ಒಂದು ಕೆಳಭಾಗ, ಇನ್ನೊಂದು ಮೇಲ್ಭಾಗ. ಹೆಣ್ಣು ಮೊಟ್ಟೆಯಿಟ್ಟು ಹಾರಿಹೋದರೆ ನಂತರ ಗಂಡು ಅದಕ್ಕೆ ಕಾವು ಕೊಟ್ಟು ಮರಿ ಮಾಡುತ್ತೆ. ಇಲ್ಲವಾದರೆ ಹೆಣ್ಣು ಒಳಗೆ ಕೆಳಗಿನ ಛೇಂಬರಿನಲ್ಲಿ ಮೊಟ್ಟೆಯ ಜೊತೆ ಇರುತ್ತೆ, ಗಂಡು ಮೇಲಿರುತ್ತೆ.
ಮರದ ಮೇಲೆ ಗೂಡು ಇರೋದರಿಂದ ವೈರಿಗಳ ಕಾಟ ಜಾಸ್ತಿ. ಹಾವೋ, ಹದ್ದೋ ಬಂದು ಮೊಟ್ಟೆಯನ್ನು, ಮರಿಗಳನ್ನು ತಿಂದು ತೇಗಬಹುದು. ಅದಕ್ಕೋಸ್ಕರವಾಗಿಯೇ ಈ ಕೆಳಭಾಗದ ಛೇಂಬರು. ವೈರಿಗೆ ಒಳಗೆ ಬಂದು ಕೆಳಭಾಗಕ್ಕೆ ಇಳಿಯುವುದು ಕಷ್ಟಸಾಧ್ಯ. ಮತ್ತೆ ಕೆಳಭಾಗದ ಛೇಂಬರಿನಲ್ಲಿ ಮರಿಗೆ ಹಿತವಾಗಿರಲೆಂದು ಹತ್ತಿಯನ್ನೋ, ಹುಲ್ಲನ್ನೋ ತಂದು ಹಾಸಿಗೆಯನ್ನು ಮಾಡಿಕೊಟ್ಟಿರುತ್ತೆ. ಕತ್ತಲೆಯಿರಬಾರದೆಂದು ದೀಪದ ಹುಳುವನ್ನು ಹಿಡಿದು ತಂದು ಜೇಡಿ ಮಣ್ಣಿನ ಸಹಾಯದಿಂದ ಗೂಡಿನ ಗೋಡೆಗಳಿಗೆ ಸಿಕ್ಕಿಸುತ್ತೆ. ತಂದೆ ಪಕ್ಷಿಯು ಮೇಲ್ಭಾಗದ ಛೇಂಬರಿನಲ್ಲಿದ್ದುಕೊಂಡು ಮರಿಗಳನ್ನು ಕಾಯುತ್ತಿರುತ್ತೆ. ಬೆಳಿಗ್ಗೆ ಒಂದು ಹೊತ್ತು ಹಾರಿ ಹೋಗಿ ಆಹಾರದ ಬೇಟೆಯಾಡಿಕೊಂಡು ಬಂದು ಮರಿಗಳಿಗೆ ತಿನ್ನಿಸುತ್ತೆ.

ಕೆಲವು ದಿನಗಳ ನಂತರ ಮತ್ತೆ ಬೇರೆ ಗೂಡು ಕಟ್ಟಲು ಆರಂಭಿಸುತ್ತೆ, ಮತ್ತೆ ಬೇರೆ ಹೆಣ್ಣು, ಬೇರೆ ಮರಿಗಳು!"

ಚಪ್ಪಾಳೆಯೇನೋ ಹೊಡೆದರು. ಆದರೆ, ಮಕ್ಕಳಿಗೆ ಇಂಥಾ ಪಾಠಗಳನ್ನು ಸ್ವಾಭಾವಿಕವಾಗಿ ಕಲಿಸಲು ಈ ನಗರ ಸಹಕಾರಿಯಾಗಿಲ್ಲವಲ್ಲಾ ಎಂಬ ಬೇಸರ ನನಗೆ ತುಂಬಾ ಇದೆ. ಅವರು ಎತ್ತ ನೋಡಿದರೂ ಕಟ್ಟಡಗಳೇ. ಮನೆಯೊಳಗೆ ಹೊಕ್ಕರೆಂದರೆ ಮುಗಿಯಿತು, ಟಿ.ವಿ. ಮುಂದೆ ಪ್ರತಿಷ್ಠಾಪಿಸಿಕೊಂಡುಬಿಡುತ್ತಾರೆ, ಅಥವಾ, ಪುಸ್ತಕದ ಹುಳುಗಳಾಗಿಬಿಡುತ್ತಾರೆ. ವಿಪರ್ಯಾಸವೆಂದರೆ ಇದನ್ನೆಲ್ಲಾ ನೋಡಿ ಅನುಭವಿಸಿರುವ ಪೋಷಕರೂ ಸಹ ಮಕ್ಕಳಿಗೆ ಏನೂ ಹೇಳುವುದಿಲ್ಲ. ಶಾಲೆಯಲ್ಲಿ ಬಿಡುವಾದಾಗ ಮಕ್ಕಳನ್ನು ಗುಂಪುಗೂಡಿಸಿಕೊಂಡು ನಾನು ಇಂಥಾ ಕಥೆಗಳನ್ನು ಹೇಳುತ್ತಿರುವಾಗ ನನಗೂ ಒಂದು ಬಗೆಯ ಆನಂದವಾಗುತ್ತಿರುತ್ತೆ.

.....................................................................................

ಗೀಜಗ - ವೀವರ್ ಬರ್ಡ್ (Ploceus philippinus) ಪಕ್ಷಿಯ ಬಗ್ಗೆ ನನಗೆ ಮೊದಲು ಪಾಠ ಹೇಳಿಕೊಟ್ಟಿದ್ದು ಆ ದಿನಗಳಲ್ಲಿ World Wide Fund for Nature ನಲ್ಲಿದ್ದ ಶ್ರೀ ಕಾರ್ತಿಕೇಯನ್ ಅವರು. ನಂತರ ಕೃಷ್ಣ ಎನ್ನುವ ಪ್ರಖ್ಯಾತ ಪಕ್ಷಿತಜ್ಞರ ಬಳಿ ನಾನು ಪಕ್ಷಿವೀಕ್ಷಣಾ ತರಬೇತಿ ಪಡೆಯುತ್ತಿದ್ದಾಗ ಇನ್ನಷ್ಟು ವಿಷಯ ತಿಳಿಯಿತು. ಆಗ ನಾನೂ ಹೈಸ್ಕೂಲಿನಲ್ಲಿದ್ದೆ. ಅಂದಿನಿಂದ ಇಂದಿನವರೆಗೂ ಅವಕಾಶ ಸಿಕ್ಕಾಗೆಲ್ಲಾ ವೀವರ್ ಬರ್ಡ್ ಬಗ್ಗೆ ನನ್ನವರಿಗೆಲ್ಲಾ ಹೇಳುತ್ತಿರುತ್ತೇನೆ.

ಗೂಡು ಕಟ್ಟುವುದರಲ್ಲಿ ನಿಸ್ಸೀಮ ಇದಾದರೆ, ಅತ್ಯುತ್ತಮ ಪೋಷಕ ಪ್ರಶಸ್ತಿ ಕೂಡ ಪಡೆಯಬಲ್ಲ ಸಮರ್ಥ ಈ "ತಂದೆ" ಪಕ್ಷಿ.ಮುಂದಿನ ಭಾಗದಲ್ಲಿ ಬೇರೊಂದು "ಅಪ್ಪನ ಕಥೆ"ಯನ್ನು ಕೇಳೋಣ, ಓದೋಣ.

-ಅ
07.05.2008
2.45PM

19 comments:

 1. ನವ ಪೀಳಿಗೆಗೆ ಪ್ರಕೃತಿಯ ಪ್ರತಿ ವಿಸ್ಮಯಗಳನ್ನ ಪರಿಚಯಿಸುತ್ತಿರುವ ನಿಮ್ಮ ಕೆಲಸ ಸುಗಮವಾಗಿ ಸಾಗಲಿ ...... :))

  ReplyDelete
 2. simply fantabulous gurugaLE.... sakhattaagide. ee pakshiya engineering skills extraordinary. beLakirli anta deepada huLu na jEDi maNNali taMdu sikkisOdantu very very innovative !!

  Thanks for a brilliant article !!

  ReplyDelete
 3. ಇದನ್ನ ಓದ್ತಾ ಇದ್ರೆ ನಾನೂ ನಿಮ್ಮ ಸ್ಕೂಲುಮಕ್ಕಳ ಮಧ್ಯದಲ್ಲಿ ಕೂತು ನಿನ್ನ ಪಾಠ ಕೇಳಿದಂತಾಯ್ತು! ಸೂಪರ್ಬ್!

  ReplyDelete
 4. Pratiyondu barahagaloo chennaagi moodi bartive Aruna :)
  Prati vishayadalloo, baryo shyli chennaagide, haagoo thumba upayuktavaagive. kuthoohaladinda odo thara ive.

  Bareetha iru :)

  ReplyDelete
 5. [ಅನ್ನಪೂರ್ಣ] ಒಂದಷ್ಟು ಪುಸ್ತಕ, ಒಂದಷ್ಟು ಚಾರಣ, ಮತ್ತೆ ನಿಮ್ಮಂಥವರ ಒಡನಾಟ ಇಂಥಾ ಬರಹಗಳಿಗೆ ಸ್ಫೂರ್ತಿ. ಧನ್ಯವಾದಗಳು.

  [ಶ್ರೀಕಾಂತ್] ಸ್ಕೂಲ್ ಮಕ್ಕಳ ಹಾಗೆ "ಶಾಲ್ ಐ ಗೋ ಟು ಟಾಯ್ಲೆಟ್?" ಅಂತ ಮಧ್ಯೆ ಕೇಳ್ಬೇಡಪ್ಪಾ ಆಮೇಲೆ!! ;-)

  [ಲಕುಮಿ] ಪ್ರಕೃತಿ ವಿಸ್ಮಯ ಅಲ್ಲವೇ?

  [ಅಮರ] ಬಹಳ ಧನ್ಯವಾದಗಳು ನಿಮ್ಮ ಆಶಯಕ್ಕೆ :-)

  ReplyDelete
 6. ಸರಿ. ಹೋಗಬೇಕಾದ್ರೆ ಹೇಳ್ದೇ, ಕೇಳ್ದೇ ಎದ್ದು ಹೋಗ್ತೀನಿ... ಅಲ್ಲೇ ಮಾಡ್ಕೊಳೋ ವಯಸ್ಸಲ್ಲ ನನ್ನದು ನೋಡು... ಅದಿಕ್ಕೆ!!

  ReplyDelete
 7. very interesting kaNappa... ee goodugaLanna nange neenu balamuri falls hatra torsidde..aaglu explain maadidde..i remember -u....
  ninge remember idhya ? ;-)

  ReplyDelete
 8. ಚೆನ್ನಾಗಿ ಬಂದಿದೆ ಅಪ್ಪನ ಕಥೆ.

  ಗೀಜಗನ ಗೂಡಿನಲ್ಲಿ ಮಜಲುಗಲಿರುತ್ತವೆ ಎಂದು ಕೇಳಿದ್ದೆ. ಆದರೆ ಇಷ್ಟು ವಿವರವಾಗಿ ಯಾರೂ ತಿಳಿಸಿಕೊಟ್ಟಿರಲಿಲ್ಲ.
  ಧನ್ಯವಾದಗಳು.

  ReplyDelete
 9. [ಹರೀಶ್] ಟುವ್ವಿ ಹಕ್ಕಿ (Tailor Bird)ನ ಮಜಲು ಕೂಡ ಅದ್ಭುತ ಸರ್... ಆದರೆ ಅಲ್ಲಿ "ಅಪ್ಪ"ನ ಪ್ರಾಮುಖ್ಯತೆ ಅಷ್ಟಿರಲ್ಲ ನೋಡಿ... :-)

  [ಶ್ರೀಧರ] Actually, ಮರೆತು ಹೋಗಿತ್ತು.. ಆಮೇಲೆ ನೆನಪಾಯ್ತು..

  [ಶ್ರೀಕಾಂತ್] ಗುಡ್ ಬಾಯ್.

  ReplyDelete
 10. sakkath ... as usual :-)...
  aadre ... ee fault finding tendency ide nodu ... adakke helteeni ... ಒಂದೊಂದೇ ಎಳೆಯನ್ನು ಸೇರಿಸಿ ಹೊಲೆಯುತ್ತೆ antha bardidya ... geejuga holeyolla ... nEyutte ... avattu heLde ... rupaari maadteeni andidde ... just reminding :-)

  ReplyDelete
 11. ಹ್ಯಾಪಿ ಮದರ್ಸ್ ಡೇ ಅಲ್ಲ.. ಹ್ಯಾಪಿ ಅಪ್ಪಂದಿರ ದಿನಾಚರಣೆ ಅನ್ನಬೇಕು... ಇನ್ನು ಹೆಚ್ಚಿನ ಅಪ್ಪಂದಿರ ಕಥೆಯನ್ನು ನೀ ಹೇಳ್ತಾ ಹೋಗು ನಾವ್ ಕೇಳ್ತಾ ಹೋಗ್ತಿವಿ...

  ReplyDelete
 12. ಆರುಣ್,
  ಗೀಜಗನ ಗೂಡಿನಲ್ಲಿ ಕಳಗಿನ ಛೇ೦ಬರ್ ತೆರೆದಿರುತ್ತೆ ಅಲ್ವಾ, ಅಲ್ಲಿ೦ದಲೇ ತಾನೇ ಪಕ್ಷಿ ಗೂಡೊಳಕ್ಕೆ ಪ್ರವೇಶಿಸುವುದು? ಅಲ್ಲಿ ಓಪನಿ೦ಗ್ ಇದ್ರೆ ಪಕ್ಷಿ ಕುಳಿತುಕೊಳ್ಳೋದು ಹೇಗೆ?
  ಮತ್ತೆ ಈ ವಾಕ್ಯದ ಅರ್ಥವೇನು "ಕೆಳಭಾಗದ ಛೇಂಬರಿನಲ್ಲಿ ಮರಿಗೆ ಹಿತವಾಗಿರಲೆಂದು ಹತ್ತಿಯನ್ನೋ, ಹುಲ್ಲನ್ನೋ ತಂದು ಹಾಸಿಗೆಯನ್ನು ಮಾಡಿಕೊಟ್ಟಿರುತ್ತೆ" ? ಮರಿಗಳು ಕೆಳಗೆ ಬೀಳೋದಿಲ್ವಾ? ಹತ್ತಿಯನ್ನೋ, ಹುಲ್ಲನ್ನೋ ಹಾಕುವುದಾದರೂ ಎಲ್ಲಿಗೆ, ಅದಕ್ಕೆ ಒ೦ದು base ಬೇಕಲ್ವಾ?

  ReplyDelete
 13. [ಶಶಾಂಕ] ಆ cross section ಚಿತ್ರ ನೋಡಿ. ಅಲ್ಲಿ ಮೊಟ್ಟೆ ಇರುವ ಜಾಗ ಕೆಳಗಿನ ಛೇಂಬರ್. ಅದರ ಮೇಲೆ ಇನ್ನೊಂದು ಛೇಂಬರ್ ಇರುತ್ತೆ. ಉದ್ದಕ್ಕೆ ಆನೆಯ ಸೊಂಡಿಲಿನ ಹಾಗಿರುವುದು ಛೇಂಬರ್ ಅಲ್ಲ. ಅದು ಗೂಡಿನ ದ್ವಾರವಷ್ಟೆ. ಅದರೊಳಗೆ ಹೊಕ್ಕು ನಂತರ ತಿರುಗಿ ಕೆಳಗಿಳಿಯಬೇಕು.

  [ವಿಜಯಾ] ಹೌದು, ನೇಯುತ್ತೆ. ತಿದ್ದುತ್ತೇನೆ.

  [ನನ್ ಮನೆ] ಫಾದರ್ಸ್ ಡೇ ಪ್ರಯುಕ್ತ ಹೇಳ್ತೀನಿ!!! :-)

  ReplyDelete
 14. Happened to come to your blog by chance. Nimma baravaNigeya shyli tumba chennagide.

  ReplyDelete
 15. idu nimma nija jeevanada anubhavana? Tumba chennagide. makkala mugdhateyalli naavu makkalagi bidutteve ;)

  ReplyDelete
 16. [ಕನಸು] ಹೌದು. ಮತ್ತೆ ಅವರು ದೊಡ್ಡವರ ಪ್ರಬುದ್ಧತೆಯಲ್ಲಿ ದೊಡ್ಡವರಾಗಿಬಿಡುತ್ತಾರೆ. ;-)

  ReplyDelete
 17. thumbha chennagidhe, and thank you

  ReplyDelete

ಒಂದಷ್ಟು ಚಿತ್ರಗಳು..