Wednesday, May 28, 2008

ಅರಸ ಕೇಳ್, ಆಯುಷ್ಯವುಳ್ಳರೆ...

ಸಿಕೊಯಿಯಾದಂತೆ ಜೀವನೋತ್ಸಾಹ ಇದ್ದರೆ ಸಾಕೇ? ಆಯುಷ್ಯ ಕೂಡ ಇರಬೇಕಲ್ಲವೇ?

ಗಿಡಮರಗಳಿಗೆ ವಿಪರೀತ ಆಯಸ್ಸು ಕೊಟ್ಟಿದೆ ಪ್ರಕೃತಿ. ಬೇಕಾದ್ದೇ. ಆದರೂ ನಗರೀಕರಣ, ಬೆಳವಣಿಗೆ ಅನ್ನೋ ಹೆಸರಲ್ಲಿ ಗಿಡಮರಗಳ ಆಯಸ್ಸು ಕಡಿಮೆ ಆಗುತ್ತಿದೆ ಎನ್ನುವುದು ದುರಂತ.ನಾವೇನೋ ಎಪ್ಪತ್ತೆಂಭತ್ತು ವರ್ಷ ಬದುಕಿ ಹೋಗುತ್ತೇವೆ. ಆದರೆ ಪ್ರಾಣಿಗಳು? ನಮ್ಮ ಮನೆಯಲ್ಲಿದ್ದ ನಾಯಿ ಹೋದ ವರ್ಷ ಸತ್ತು ಹೋಯಿತು, ಅದಕ್ಕೆ ಇಪ್ಪತ್ತು ವರ್ಷ ವಯಸ್ಸಾಗಿತ್ತೆಂದರೆ ಕೇಳಿದವರೆಲ್ಲಾ ಕಣ್ಣರಳಿಸಿ "ಇಪ್ಪತ್ತು ವರ್ಷಾನಾ, ಪೂರ್ಣಾಯಸ್ಸು ಬಿಡಿ" ಅನ್ನುತ್ತಿದ್ದರು. ಬೆಕ್ಕುಗಳೂ, ಹುಲಿಗಳೂ ಅಷ್ಟೆ, ನಾಯಿಗಳಷ್ಟೇ ಆಯಸ್ಸುಳ್ಳದ್ದು. ಕಾಡಿನಲ್ಲಿರುವಾಗ ಪ್ರಾಣಿಗಳು ಬೇಗ ಸಾಯುತ್ತವೆ, ಮೃಗಾಲಯಗಳಲ್ಲಿ sanctuaryಗಳಲ್ಲಿ ಹೆಚ್ಚು ದಿನಗಳ ಕಾಲ ಬದುಕುತ್ತವೆ. ಆಹಾರಕ್ಕೆ, ಸಂಗಾತಿಗೆ, ಮಲಗುವುದಕ್ಕೆ, ನೀರು ಕುಡಿಯುವುದಕ್ಕೆ ಎಲ್ಲಕ್ಕೂ ಜಗಳ ಕಾಡಿನಲ್ಲಿ. ಅಲ್ಲಿ ಡಾರ್ವಿನ್ ಸಿದ್ಧಾಂತವನ್ನು ನೀಯತ್ತಿನಿಂದ ಪಾಲಿಸಬೇಕಾಗುತ್ತದೆ. Survival of the fittest.ಸಿಂಹವು ಕಾಡಿನ ಅರಸನಾದರೂ ಮೂವತ್ತು ವರ್ಷವಾದ ಮೇಲೆ, ನರಿಗಳ, ಹದ್ದುಗಳ ಆಹಾರ! ಮೊಸಲೆಗಳಿಗೆ, ಆನೆಗಳಿಗೆ ಮನುಷ್ಯನ ಹೊರೆತು ಹೆಚ್ಚು ಶತ್ರುಗಳಿಲ್ಲ. ಹಾಗಾಗಿ ಎಪ್ಪತ್ತೆಂಭತ್ತು ವರ್ಷಗಳು ಉಸಿರಾಟವನ್ನಾಡುತ್ತವೆ. ಕಾಗೆ ಗುಬ್ಬಚ್ಚಿಗಳು ಇಪ್ಪತ್ತು ವರ್ಷ ಬದುಕಿದರೆ, ಹದ್ದುಗಳು ಐವತ್ತು ವರ್ಷ ಜೀವಿಸುತ್ತವೆ. ಅಚ್ಚರಿಯೆಂದರೆ ಗಿಣಿಗಳು ಬಂಧನದಲ್ಲಿಲ್ಲದಿದ್ದರೂ ಕನಿಷ್ಠಪಕ್ಷ ಎಂಭತ್ತು ವರ್ಷ ಆಯಸ್ಸು ಹೊಂದಿರುತ್ತವೆ. ಟರ್ಕಿ ಬಜರ್ಡ್ ಅನ್ನೋ ಕೋಳಿ ಜಾತಿಯ ಪಕ್ಷಿಯು ಮತ್ತು ಹಂಸವೆಂದೇ ಗುರುಸಿಕೊಳ್ಳುವ ಬಾತುಕೋಳಿಗಳು ನೂರನ್ನು ದಾಟುವ ಪಕ್ಷಿಗಳು.ಭೂಗ್ರಹದ ಅತಿದೊಡ್ಡ ಸಸ್ತನಿ ನೀಲಿ ತಿಮಿಂಗಿಲ ಐವತ್ತಕ್ಕೇ ಕೊನೆಯುಸಿರೆಳುತ್ತೆ. ದೊಡ್ಡಾಮೆ - ಇಂಗ್ಲಿಷಿನಲ್ಲಿ ಜಯಂಟ್ ಟಾರ್ಟಾಯ್ಸ್ ಮಾತ್ರ ಎಲ್ಲರನ್ನೂ ಮೀರಿಸಿ ನೂರೈವತ್ತು ದಾಟುತ್ತದೆ. ಆಮೆಯ ಜಾತಿಗೇ ಸೇರಿದ ಇನ್ನೊಂದು ಬಾಕ್ಸ್ ಟರ್ಟ್ಲ್ ಎಂಬುದು ಇದಕ್ಕೆ ಸ್ಪರ್ಧಿಯಾದರೂ ಇಷ್ಟು ದೀರ್ಘಕಾಲ ಬದುಕುವುದಿಲ್ಲ. ಡೈನಾಸರ್ ಕಾಲದಿಂದಲೂ ಭೂಮಿಯಲ್ಲಿರುವ ಈ ಆಮೆಗಳಿಗೆ ಶತ್ರುಗಳೇ ಇಲ್ಲ. ನಿಧಾನಗತಿಯಲ್ಲಿಯೇ ಬದುಕುತ್ತದೆ.ರಾಣಿಜೇನುಗಳು ಐದು ವರ್ಷಗಳಿಗೆ ಕೊನೆಯುಸಿರೆಳೆದರೆ, ಕೆಲಸಗಾರ ಜೇನುಗಳು ಸ್ವಾಭಾವಿಕವಾಗಿ ಸತ್ತರೆ, ಒಂದೇ ವರ್ಷಕ್ಕೆ ಸಾಯುತ್ತವೆ. ಇರುವೆಗಳೂ ಅಷ್ಟೆ, ಒಂದು ವರ್ಷ ಎಲ್ಲಾ ಕಾಲಗಳನ್ನೂ ನೋಡಿ ಸಾಯುತ್ತವೆ. ಸರ್ಪಗಳು ಬಂಧನದಲ್ಲಿದ್ದರೆ ಇಪ್ಪತ್ತು ವರ್ಷ ಬದುಕುತ್ತವೆ, ಆದರೆ ಕಾಡಿನಲ್ಲಿ ಐದು ವರ್ಷ ಬದುಕಿದರೆ ಹೆಚ್ಚೆಚ್ಚು. ರಾಣಿ ಇರುವೆಗಳು ಎರಡು ಮೂರು ವರ್ಷ ಬದುಕಿದರೆ, ಕೆಲಸಗಾರ ಇರುವೆಗಳಿಗೆ ಆರುತಿಂಗಳಿಗೆ ಆಯಸ್ಸು ಮುಗಿದಿರುತ್ತದೆ.

ಸಾಮಾನ್ಯವಾಗಿ ಮನುಷ್ಯನ ಹಾಗೂ ಮನುಷ್ಯನೊಡನೆ ಬದುಕುವ ಪ್ರಾಣಿಗಳ ಹೊರೆತು ಬೇರೆ ಪ್ರಾಣಿಗಳಿಗೆ ಸಹಜ ಸಾವು (Natural Death) ಬರುವುದು ಅಪರೂಪ. ವಯಸ್ಸಾಗಿ ಸತ್ತ ಪ್ರಾಣಿ ಸಿಗುವುದು ವಿರಳ. ಶತ್ರುವಿನೊಡನೆ ಹೋರಾಡಿ ಸಾಯುವುದು, ಬೇರೆ ಪ್ರಾಣಿಗಳಿಗೆ ಆಹಾರವಾಗುವುದು ಸರ್ವೇಸಾಮಾನ್ಯ. ಆಗಲೇ ಹೇಳಿದ ಹಾಗೆ ಕಾಡಿನಲ್ಲಿ ಡಾರ್ವಿನ್ ಸಿದ್ಧಾಂತ ಪಾಲಿಸಿದರೆ ಮಾತ್ರ ಬದುಕಲು ಸಾಧ್ಯ. ದುರದೃಷ್ಟವಷಾತ್ ಮನುಷ್ಯರ ನಡುವೆಯೂ ಈ ಸಿದ್ಧಾಂತ ಸತ್ಯವೆನಿಸುತ್ತೆ.ಗ್ಯಾಸ್ಟ್ರೋಥ್ರಿಕ್ಸ್ ಅಂತ ಒಂದು ಪ್ರಾಣಿ. ಎರಡು ಮಿಲಿಮೀಟರು ಉದ್ದ ಇರಬಹುದಷ್ಟೆ. ಸೂಕ್ಷ್ಮದರ್ಷಕಗಳಿಂದ ನೋಡಬೇಕು. ಇದರ ಆಯುಷ್ಯವು ಮೂರು ದಿನಗಳಷ್ಟೇ.

ಕುಮಾರವ್ಯಾಸ ಹೇಳುವಂತೆ, ಅರಸ ಕೇಳ್, ಆಯುಷ್ಯವುಳ್ಳರೆ ಹರಿಹರಬ್ರಹ್ಮಾದಿಗಳೂ ಸಂಹರಿಸಲರಿಯರು....

-ಅ
28.05.2008
1.30AM

Wednesday, May 21, 2008

ಜೀವನೋತ್ಸಾಹ

"ಸಾಕಪ್ಪಾ ಸಾಕು, ಜೀವನ. ಎಷ್ಟು ನೋವು ಅನುಭವಿಸಬೇಕು? ನನ್ನ ಸಾವು ಯಾವಾಗ ಬರುತ್ತೋ? ಹೀಗೆಂದು ಉತ್ಸಾಹ ಕಳೆದುಕೊಳ್ಳುವವರು ನಮ್ಮ ನಡುವೆ ಅನೇಕರಿದ್ದಾರೆ.

ನಾವು ಬೇರೆ ಜೀವಿಗಳಿಂದ ಕಲಿಯಬೇಕಾದ ಮೊದಲ ಅಂಶವೆಂದರೆ ಜೀವನೋತ್ಸಾಹ. ಕೊನೆಯ ಘಳಿಗೆಯ ವರೆಗೂ ಬದುಕುವ ಹಂಬಲ.

ಕ್ಯಾಲಿಫೋರ್ನಿಯಾದಲ್ಲಿ ಒಂದು ಮರವಿದೆ. ಸುಮಾರು ಎರಡು ಮುಕ್ಕಾಲು ಸಾವಿರಕ್ಕೂ ಹೆಚ್ಚು ವಯಸ್ಸಾಗಿದೆ!! ಆ ರಾಷ್ಟ್ರೀಯ ಉದ್ಯಾನದವರು ಆ ಮರಕ್ಕೆ ಜೆನೆರಲ್ ಶೆರ್ಮನ್ ಟ್ರೀ (Sequoia Gigantea) ಎಂದು ಹೆಸರಿಟ್ಟಿದ್ದಾರೆ. ಅದರ ಸುತ್ತಳತೆಯೇ ನೂರು ಅಡಿಗಳಿಗೂ ಮೀರಿದೆ. ಅಂದರೆ ಇಡೀ ಮರವನ್ನು ತಬ್ಬಿಕೊಳ್ಳಲು ಸುಮಾರು ಐವತ್ತಕ್ಕೂ ಹೆಚ್ಚು ಜನ ಬೇಕು! ಇದು ವಿಶ್ವದಲ್ಲೇ ಅತಿ ದೊಡ್ಡ ಮರ ಮಾತ್ರವಲ್ಲ, ಅತಿ ದೊಡ್ಡ ಜೀವಿ ಕೂಡ."
ಟಿವಿ ಕಾರ್ಯಕ್ರಮವೊಂದರಲ್ಲಿ ಮನೋವೈದ್ಯರೊಬ್ಬರು ಹೇಳುತ್ತಿದ್ದರು.

"ಇಂಥಾ ಸಿಕೊಯಿಯಾ ಮರವು ಈ ಹೆಮ್ಮರವಾಗುವುದಕ್ಕೆ ಮುಂಚೆ, ಒಂದು ಸಣ್ಣ ಸಸಿಯಾಗಿಯೇ ಇತ್ತು. ಇದು ಇಷ್ಟೆತ್ತರ ಬೆಳೆಯಲು ಅದಕ್ಕಿರುವ ಜೀವನೋತ್ಸಾಹವೇ ಕಾರಣ. ಅದು ಯಾವ ನೋವಿಗೂ ಅಳುಕದೆ ಎದುರಿಸಿ ನಿಂತಿದೆ. ಅದು ಸಾಯಲೂ ಸಿದ್ಧವಾಗಿದೆಯೇ ಹೊರೆತು, ಹಾತೊರೆದಿಲ್ಲ. ಸಾವು ಬಂದಾಗ ಬರಲಿ, ಅಲ್ಲಿಯವರೆಗೂ ಬದುಕಿರೋಣ. ಹಿಂದಿನ ಕಾಲದ ಋಷಿಗಳೆಲ್ಲಾ ತಪಸ್ಸು ಮಾಡಿ ಸಾವಿರಾರು ವರ್ಷ ಆಯುಷ್ಯ ಪಡೆದುಕೊಳ್ಳುತ್ತಿದ್ದರು. ಬದುಕುವ ಹಂಬಲವಿರಬೇಕು."
ಈ ಮರದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ನನಗೆ ಥಟ್ಟನೆ ನೆನಪಾದದ್ದು ಬಿಳಿಗಿರಿರಂಗನ ಬೆಟ್ಟದ ದೊಡ್ಡ ಸಂಪಿಗೆ ಮರ. ಇದಕ್ಕೂ ಎರಡು ಸಾವಿರ ವರ್ಷ ವಯಸ್ಸಾಗಿದೆ. ಇದರ ಬುಡದ ಬಳಿಯಿರುವ ಪೊಟರೆಯೊಳಗೆ ಪ್ರದಕ್ಷಿಣೆ ಹಾಕಿ ಬರಬಹುದು. ಒಂದು ದೇವಸ್ಥಾನವನ್ನೇ ಈ ಮರದಲ್ಲಿ ಕಟ್ಟಿದ್ದಾರೆ. ಆದರೆ ನಾನು ಕಳೆದ ಬಾರಿ ಇಲ್ಲಿಗೆ ಹೋದಾಗ, ಅರಣ್ಯ ಇಲಾಖೆಯವರು ಒಂದು ಬೋರ್ಡನ್ನು ಹಾಕಿದ್ದರು. "ಇದು ವೀರಪ್ಪನ್ ಕಾರ್ಯಾಚರಣೆಯಿರುವ ಸ್ಥಳ. ಸಾರ್ವಜನಿಕರಿಗೆ ಪ್ರವೇಶವಿಲ್ಲ." ಆದರೆ ಈಗಲೂ ಇಲ್ಲಿಗೆ ಹೋಗಲು ವಿಶೇಷ ಪರವಾನಗಿಯನ್ನು ಬೆಟ್ಟಕ್ಕೆ ಐವತ್ತು ಕಿಲೋಮೀಟರಿಗಿಂತ ದೂರವಿರುವ ಚಾಮರಾಜನಗರದಲ್ಲಿ ತೆಗೆದುಕೊಳ್ಳಬೇಕು. ಡಿ.ಸಿ.ಎಫ್.ಗೆ ಮೂಡ್ ಚೆನ್ನಾಗಿಲ್ಲದಿದ್ದರೆ ಪರವಾನಗಿ ಮರೆತುಬಿಡಬೇಕು.. ಹೇಗೋ, ಮರಕ್ಕೆ ತೊಂದರೆಯಾಗದಿದ್ದರೆ ಸರಿ.
ಜೀವಮಾನದಲ್ಲಿ ಒಮ್ಮೆಯಾದರೂ ಈ ದೊಡ್ಡಸಂಪಿಗೆ ಮರವನ್ನು ನೋಡಬೇಕು. ನಾನು ನೋಡಿಯಾಯಿತು! ಸಿಕೊಯಿಯಾ ನೋಡಬೇಕಷ್ಟೆ. ಕ್ಯಾಲಿಫೋರ್ನಿಯಾಗೆ ಎಂದು ಪಯಣವೋ ಗೊತ್ತಿಲ್ಲ!

ಜೀವನೋತ್ಸಾಹ ಮಾತ್ರ ಕುಂದುವುದಿಲ್ಲ. ಆದರ್ಶ ವೃಕ್ಷಗಳಲ್ಲವೇ?

-ಅ
21.05.2008
12.45AM

Wednesday, May 07, 2008

ಅಪ್ಪನ ಕಥೆ - ಭಾಗ ೩

ಶಾಲೆಯಲ್ಲಿ ಮಕ್ಕಳಿಗೆ Environmental Studies ವಿಷಯದಲ್ಲಿ ನಾನು ಮೊದಲು ಆರಿಸಿಕೊಂಡಿದ್ದು ಈ ಒಂದು ವಿಶಿಷ್ಟ 'ಅಪ್ಪ'ನ ಕಥೆಯನ್ನು ವಿವರಿಸಲು. ಮಕ್ಕಳೆಲ್ಲರೂ ಒಂದು ರೀತಿ ಥ್ರಿಲ್ ಆಗಿದ್ದರು. ಅಲ್ಲಿಯವರೆಗೂ ಮಕ್ಕಳು ಯಾವ ಗೂಡನ್ನೂ ಕೈಯಲ್ಲಿ ಹಿಡಿದುಕೊಂಡಿರಲಿಲ್ಲ. ಬೆಂಗಳೂರು ನಗರದ ಇಂಗ್ಲಿಷ್ ಶಾಲೆಯ ಮಕ್ಕಳೆಂದರೆ ಹಾಗೇ. ಅವರಿಗೆ ಡಿಸ್ಕವರಿ ಚಾನೆಲ್ ಗೊತ್ತಿರುತ್ತೆ, ಗುಬ್ಬಚ್ಚಿಯನ್ನೂ ಸಹ ಕಣ್ಣಿಂದ ನೋಡಿರೋದಿಲ್ಲ. ಟಾಮ್ ಎಂಡ್ ಜೆರಿ ಗೊತ್ತಿರುತ್ತೆ, ಬೆಕ್ಕು ಇಲಿಯನ್ನು ಹಿಡಿಯುವುದನ್ನು ನೋಡೇ ಇರೋದಿಲ್ಲ.

ಅಂಥಾ ಮಕ್ಕಳಿಗೆ ನಾನು ಗೀಜಗ ಅನ್ನೋ ಪಕ್ಷಿ ಬಗ್ಗೆ ಹೇಳುವಾಗ ನನಗೂ ಒಂದು ರೀತಿ ಥ್ರಿಲ್ ಆಗಿತ್ತು. ಯಾಕೆಂದರೆ ಸರಿಯಾಗಿ ನಾಯಿ ಬೆಕ್ಕುಗಳನ್ನೇ ಗಮನಿಸಿ ಅಭ್ಯಾಸ ಇಲ್ಲದ ಮಕ್ಕಳಿಗೆ ಈ ಪಕ್ಷಿ ಬಗ್ಗೆ ಏನು ಹೇಳೋದು, ಹೇಗೆ ಹೇಳೋದು ಅಂತ ನನ್ನೊಳಗೆ ನನಗೇ ಸವಾಲುಗಳಿದ್ದವು.

ನನ್ನ ಕೈಯಲ್ಲಿ ಸಂಪೂರ್ಣವಾಗಿದ್ದ ಒಂದು ಗೂಡನ್ನು ಹಿಡಿದುಕೊಂಡು ವಿವರಿಸಲು ಆರಂಭಿಸಿದೆ.

"ಇದು ಗೀಜಗನ ಗೂಡು, ಗೀಜಗ ಅಂದರೆ, ವೀವರ್ ಬರ್ಡ್ ಅಂತ. ನಿಮ್ಮಲ್ಲಿ ಹಳ್ಳಿಯಿಂದ ಯಾರಾದರೂ ಬಂದಿದ್ರೆ, ಅವರು ಇದನ್ನು ನೋಡಿರ್ತಾರೆ, ಮರದ ಮೇಲೆ ನೇತಾಡ್ತಾ ಇರುತ್ತೆ." ಯಾರಿಂದಲೂ ಉತ್ತರ ಬರಲಿಲ್ಲ. ಹಳ್ಳಿಯಿಂದ ಬಂದವರು ಯಾರೂ ಇಲ್ಲ ಎಂದು ಖಾತ್ರಿಯಾಯಿತು.
"ಸರಿ, ಇದು ನಾನು ತೆಗೆದಿರೋ ಫೊಟೋಸು. ನೋಡ್ಬಿಟ್ಟು ವಾಪಸ್ ಕೊಡಿ" ಎಂದು ಹೇಳಿ ಗೀಜಗನ ಗೂಡಿನ ಫೋಟೋಗಳನ್ನು ಮಕ್ಕಳ ಕೈಗೆ ಕೊಟ್ಟೆ.
ಒಬ್ಬ ಧೈರ್ಯಶಾಲಿ ಹುಡುಗ ಪ್ರಶ್ನೆ ಕೇಳಿ ನನ್ನನ್ನು ಸಂತೋಷಗೊಳಿಸಿದ. ಸುಮ್ಮನೆ ನಾನು ಹೇಳಿದ್ದು - ಅವರು ಕೇಳಿದ್ದು ಆಗಬಾರದು. ಪಾಠ ಎಂದರೆ ಅಲ್ಲಿ ಚರ್ಚೆಯಿರಬೇಕು, ಪ್ರಶ್ನೋತ್ತರವಿರಬೇಕು ಎಂದು ನನ್ನ ನಿಲುವು. ಆ ಹುಡುಗ, "ಸರ್, ಈ ಗೂಡು ಇಷ್ಟೊಂದು ಗಟ್ಟಿಯಿದೆ? ಪಕ್ಷಿ ತುಂಬಾ ಚಿಕ್ಕದು ಅನ್ಸುತ್ತೆ? ಗೂಡಿನ ಬಾಗಿಲು ತುಂಬಾ ಚಿಕ್ಕದಾಗಿದೆ??" ಎಂದ.

"ಹೌದಪ್ಪ. ಈ ಪಕ್ಷಿ ತುಂಬಾನೇ ಚಿಕ್ಕದಾಗಿರುತ್ತೆ. ಇದರ ಗೂಡಿದೆಯಲ್ಲಾ, ಇದು ಹುಲ್ಲುಗರಿಗಳಿಂದ ಮಾಡಿದೆ. ಆ ಹುಲ್ಲುಗರಿಗಳು ತುಂಬಾ ಗಟ್ಟಿಯಿರುತ್ತವೆ. ನೈಲಾನ್ ದಾರದಂತೆ!! ಇದನ್ನು ಹೊಲಿಯಬೇಕಾದರೆ ಯಾವುದೇ ಟೈಲರಿಂಗ್ ಮೆಷೀನು ಉಪಯೋಗಿಸೋದಿಲ್ಲ, ಎಲ್ಲಾ ಕೊಕ್ಕಲ್ಲೇ!! ಒಂದೊಂದೇ ಎಳೆಯನ್ನು ತೆಗೆದುಕೊಂಡು ಬರುವ ಈ ಪಕ್ಷಿ, ತನ್ನ ಗೂಡು ಸಂಪೂರ್ಣ ಆಗುವ ಹೊತ್ತಿಗೆ ಸುಮಾರು ಐದು ನೂರು ಟ್ರಿಪ್ಪು ಹೊಡೆದಿರುತ್ತೆ!"

ಮಕ್ಕಳ ಮುಖದಲ್ಲಿ ಆಶ್ಚರ್ಯ ಎದ್ದು ಕಾಣುತ್ತಿತ್ತು. ನಾನು ಅವರ ಅಚ್ಚರಿಯನ್ನು ಇನ್ನಷ್ಟು ಪ್ರಚೋದಿಸಲು, "ಹುಲ್ಲುಗರಿಗಳನ್ನು ಸುಮ್ಮನೆ ತೆಗೆದುಕೊಂಡು ಬರಲಾಗುವುದಿಲ್ಲ. ಈ ಗೂಡನ್ನು ಬಿಡಿಸಿದರೆ ನಮಗೆ ತಿಳಿಯುತ್ತೆ, ಎಲ್ಲಾ ಗರಿಗಳೂ ಒಂದೇ ಗಾತ್ರದಲ್ಲಿರುತ್ತವೆ!! ಪಕ್ಷಿಯು ಸುಮಾರು ನಲವತ್ತು ಸೆಂಟಿಮೀಟರಿನಷ್ಟಕ್ಕೆ ಹುಲ್ಲನ್ನು ಕತ್ತರಿಸಿ ನಂತರ ಕೊಕ್ಕಿನಲ್ಲಿ ಹಿಡಿದುಕೊಂಡು ಮರದ ಬಳಿ ಹಾರಿ ಬಂದು ಒಂದೊಂದೇ ಎಳೆಯನ್ನು ಸೇರಿಸಿ ಹೊಲೆಯುತ್ತೆ! ಮೂರು ತಿಂಗಳು ಬರೀ ಗೂಡು ಕಟ್ಟೋ ಕೆಲಸ ಮಾಡುತ್ತೆ ಈ ಪಕ್ಷಿ. ಗೂಡಿನಲ್ಲಿ ಸುಮಾರು ಐದು ಸಾವಿರ ಎಳೆಗಳಿರುತ್ತವೆ".

ಆರನೇ ತರಗತಿಯ ಒಬ್ಬಳು ಹುಡುಗಿ ಎದ್ದು ನಿಂತು, "ಅಷ್ಟೊಂದು ಕಷ್ಟ ಪಟ್ಟು ಯಾಕೆ ಗೂಡು ಕಟ್ಟುತ್ತೆ? ಬೇರೆ ಪಕ್ಷಿಗಳು ಹೀಗೆ ಗೂಡು ಕಟ್ಟೋದಿಲ್ವಾ?" ಎಂದು ಕೇಳಿದಳು. "ಬೇರೆ ಪಕ್ಷಿಗಳು ಇಷ್ಟೊಂದು ಕಷ್ಟ ಪಡಲ್ಲ. ಟೈಲರ್ ಬರ್ಡ್ ಅಂತ ಒಂದಿದೆ. ಅದು ಪಡುತ್ತೆ ಅಷ್ಟೆ. ಮಿಕ್ಕ ಪಕ್ಷಿಗಳು ಈ ರೀತಿ ಗೂಡು ಕಟ್ಟಲ್ಲ. ಯಾಕಪ್ಪ ಇಷ್ಟು ಕಷ್ಟ ಪಡುತ್ತೆ ಅನ್ನೋದು ಇನ್ನೂ ಇಂಟರೆಸ್ಟಿಂಗ್ ವಿಷಯ. ಹೆಣ್ಣು ಪಕ್ಷಿಯನ್ನು ಖುಷಿ ಪಡಿಸೋಕೆ!!"
"ಅಂದರೆ, ಈ ಗೂಡನ್ನು ಗಂಡು ಪಕ್ಷಿ ಕಟ್ಟುತ್ತಾ?" ಹತ್ತನೇ ತರಗತಿಯ ಧ್ವನಿ ಕೇಳಿಬಂತು. "ಹೌದು. ಗಂಡು ಪಕ್ಷಿ ಗೂಡು ಕಟ್ಟುತ್ತೆ. ಆಮೇಲೆ, ಹೆಣ್ಣನ್ನು ಕರೆತರುತ್ತೆ. ಹೆಣ್ಣು ಪಕ್ಷಿಗೆ ಆಹ್ವಾನ ಇಷ್ಟವಾದಲ್ಲಿ ಗೂಡಿಗೆ ಬಂದು "inspect" ಮಾಡಿ ಗೂಡು ಹಿಡಿಸಿದರೆ ಗಂಡಿನ ಜೊತೆಯಿದ್ದು breed ಮಾಡಿ ಮೊಟ್ಟೆಯಿಟ್ಟು ನಂತರ ಹಾರಿ ಹೋಗುತ್ತೆ!!" Breeding ಎಂದರೇನು ಎಂದು ಪ್ರೈಮರಿ ಶಾಲೆಯ ಮಕ್ಕಳಿಗೆ ವಿವರಿಸಲು ಸುಸ್ತುಹೊಡೆದುಬಿಟ್ಟೆ.

"ಹೆಣ್ಣನ್ನು impress ಮಾಡಲು ಗೂಡಿನ ಒಳಗೆ ಬಣ್ಣ ಬಣ್ಣದ ಹೂವನ್ನು ಸಹ ಸಿಕ್ಕಿಸಿರುತ್ತೆ - ಜೇಡಿ ಮಣ್ಣಿನ ಸಹಾಯದಿಂದ! ನೋಡಿದ್ರಾ, ಈ ಇಂಜಿನೀಯರ್ ಪಕ್ಷಿಯ ಬುದ್ಧಿ ಹೇಗಿದೆ ಅಂತ. ಈ ಇಂಜಿನಿಯರುಗಳಲ್ಲೂ ದಡ್ಡರು ಇದ್ದಾರೆ. ಕೆಲವು ಪಕ್ಷಿಗಳು ಅರ್ಧಂಬರ್ಧ ಕಟ್ಟಿದ ಗೂಡುಗಳನ್ನೇ ನೆಚ್ಚಿಕೊಂಡು ಹೆಣ್ಣನ್ನು ಕರೆದುಕೊಂಡು ಬರುತ್ತವೆ. ಒಳ್ಳೇ ಹೆಲ್ಮೆಟ್ ಥರ ಇದೆ ನೋಡಿ ಈ ಗೂಡು (ಕೈಯಲ್ಲಿದ್ದ ಇನ್ನೊಂದು ಅರೆನಿರ್ಮಿತ ಗೂಡನ್ನು ತೋರಿಸಿದೆ), ಇಂಥಾ ಗೂಡುಗಳನ್ನು ಹೆಣ್ಣು ಪಕ್ಷಿಗಳು ನಿಕೃಷ್ಟವಾಗಿ ತಳ್ಳಿ ಹಾಕಿಬಿಡುತ್ತವೆ. ಆಗ ಗಂಡು ಪಕ್ಷಿ ಮತ್ತೆ ಮೊದಲಿನಿಂದ ಕಟ್ಟಲು ಆರಂಭಿಸುತ್ತೆ. ಕೆಲವು ಅದೃಷ್ಟ ಪಕ್ಷಿಗಳು ಒಟ್ಟಿಗೇ ಸೇರಿ ಗೂಡನ್ನು ಸಂಪೂರ್ಣಗೊಳಿಸುತ್ತವೆ."ಪಕ್ಕದಲ್ಲಿ ನಿಂತಿದ್ದ ಪಿ.ಟಿ. ಮೇಷ್ಟ್ರು, ಸೋಷಿಯಲ್ ಸ್ಟಡೀಸ್ ಮೇಡಮ್ಮು, ಪ್ರಾಂಶುಪಾಲರು ಬಿಟ್ಟಕಣ್ಣು ಬಿಟ್ಟುಕೊಂಡು ಗೂಡುಗಳನ್ನೇ ನೋಡುತ್ತಿದ್ದರು. ಪಿ.ಟಿ. ಮೇಷ್ಟ್ರನ್ನು ಕರೆದು ಗೂಡನ್ನು ಹಿಡಿದುಕೊಳ್ಳಲು ಹೇಳಿ, ಅದರ ಬಾಗಿಲ ಒಳಗೆ ಕೈ ಹಾಕಿ ಗೂಡಿನ ರೀತಿಯನ್ನು ವಿವರಿಸತೊಡಗಿದೆ. "ಗೂಡಿನಲ್ಲಿ ಎರಡು ಛೇಂಬರ್ ಇದೆ. ಒಂದು ಕೆಳಭಾಗ, ಇನ್ನೊಂದು ಮೇಲ್ಭಾಗ. ಹೆಣ್ಣು ಮೊಟ್ಟೆಯಿಟ್ಟು ಹಾರಿಹೋದರೆ ನಂತರ ಗಂಡು ಅದಕ್ಕೆ ಕಾವು ಕೊಟ್ಟು ಮರಿ ಮಾಡುತ್ತೆ. ಇಲ್ಲವಾದರೆ ಹೆಣ್ಣು ಒಳಗೆ ಕೆಳಗಿನ ಛೇಂಬರಿನಲ್ಲಿ ಮೊಟ್ಟೆಯ ಜೊತೆ ಇರುತ್ತೆ, ಗಂಡು ಮೇಲಿರುತ್ತೆ.
ಮರದ ಮೇಲೆ ಗೂಡು ಇರೋದರಿಂದ ವೈರಿಗಳ ಕಾಟ ಜಾಸ್ತಿ. ಹಾವೋ, ಹದ್ದೋ ಬಂದು ಮೊಟ್ಟೆಯನ್ನು, ಮರಿಗಳನ್ನು ತಿಂದು ತೇಗಬಹುದು. ಅದಕ್ಕೋಸ್ಕರವಾಗಿಯೇ ಈ ಕೆಳಭಾಗದ ಛೇಂಬರು. ವೈರಿಗೆ ಒಳಗೆ ಬಂದು ಕೆಳಭಾಗಕ್ಕೆ ಇಳಿಯುವುದು ಕಷ್ಟಸಾಧ್ಯ. ಮತ್ತೆ ಕೆಳಭಾಗದ ಛೇಂಬರಿನಲ್ಲಿ ಮರಿಗೆ ಹಿತವಾಗಿರಲೆಂದು ಹತ್ತಿಯನ್ನೋ, ಹುಲ್ಲನ್ನೋ ತಂದು ಹಾಸಿಗೆಯನ್ನು ಮಾಡಿಕೊಟ್ಟಿರುತ್ತೆ. ಕತ್ತಲೆಯಿರಬಾರದೆಂದು ದೀಪದ ಹುಳುವನ್ನು ಹಿಡಿದು ತಂದು ಜೇಡಿ ಮಣ್ಣಿನ ಸಹಾಯದಿಂದ ಗೂಡಿನ ಗೋಡೆಗಳಿಗೆ ಸಿಕ್ಕಿಸುತ್ತೆ. ತಂದೆ ಪಕ್ಷಿಯು ಮೇಲ್ಭಾಗದ ಛೇಂಬರಿನಲ್ಲಿದ್ದುಕೊಂಡು ಮರಿಗಳನ್ನು ಕಾಯುತ್ತಿರುತ್ತೆ. ಬೆಳಿಗ್ಗೆ ಒಂದು ಹೊತ್ತು ಹಾರಿ ಹೋಗಿ ಆಹಾರದ ಬೇಟೆಯಾಡಿಕೊಂಡು ಬಂದು ಮರಿಗಳಿಗೆ ತಿನ್ನಿಸುತ್ತೆ.

ಕೆಲವು ದಿನಗಳ ನಂತರ ಮತ್ತೆ ಬೇರೆ ಗೂಡು ಕಟ್ಟಲು ಆರಂಭಿಸುತ್ತೆ, ಮತ್ತೆ ಬೇರೆ ಹೆಣ್ಣು, ಬೇರೆ ಮರಿಗಳು!"

ಚಪ್ಪಾಳೆಯೇನೋ ಹೊಡೆದರು. ಆದರೆ, ಮಕ್ಕಳಿಗೆ ಇಂಥಾ ಪಾಠಗಳನ್ನು ಸ್ವಾಭಾವಿಕವಾಗಿ ಕಲಿಸಲು ಈ ನಗರ ಸಹಕಾರಿಯಾಗಿಲ್ಲವಲ್ಲಾ ಎಂಬ ಬೇಸರ ನನಗೆ ತುಂಬಾ ಇದೆ. ಅವರು ಎತ್ತ ನೋಡಿದರೂ ಕಟ್ಟಡಗಳೇ. ಮನೆಯೊಳಗೆ ಹೊಕ್ಕರೆಂದರೆ ಮುಗಿಯಿತು, ಟಿ.ವಿ. ಮುಂದೆ ಪ್ರತಿಷ್ಠಾಪಿಸಿಕೊಂಡುಬಿಡುತ್ತಾರೆ, ಅಥವಾ, ಪುಸ್ತಕದ ಹುಳುಗಳಾಗಿಬಿಡುತ್ತಾರೆ. ವಿಪರ್ಯಾಸವೆಂದರೆ ಇದನ್ನೆಲ್ಲಾ ನೋಡಿ ಅನುಭವಿಸಿರುವ ಪೋಷಕರೂ ಸಹ ಮಕ್ಕಳಿಗೆ ಏನೂ ಹೇಳುವುದಿಲ್ಲ. ಶಾಲೆಯಲ್ಲಿ ಬಿಡುವಾದಾಗ ಮಕ್ಕಳನ್ನು ಗುಂಪುಗೂಡಿಸಿಕೊಂಡು ನಾನು ಇಂಥಾ ಕಥೆಗಳನ್ನು ಹೇಳುತ್ತಿರುವಾಗ ನನಗೂ ಒಂದು ಬಗೆಯ ಆನಂದವಾಗುತ್ತಿರುತ್ತೆ.

.....................................................................................

ಗೀಜಗ - ವೀವರ್ ಬರ್ಡ್ (Ploceus philippinus) ಪಕ್ಷಿಯ ಬಗ್ಗೆ ನನಗೆ ಮೊದಲು ಪಾಠ ಹೇಳಿಕೊಟ್ಟಿದ್ದು ಆ ದಿನಗಳಲ್ಲಿ World Wide Fund for Nature ನಲ್ಲಿದ್ದ ಶ್ರೀ ಕಾರ್ತಿಕೇಯನ್ ಅವರು. ನಂತರ ಕೃಷ್ಣ ಎನ್ನುವ ಪ್ರಖ್ಯಾತ ಪಕ್ಷಿತಜ್ಞರ ಬಳಿ ನಾನು ಪಕ್ಷಿವೀಕ್ಷಣಾ ತರಬೇತಿ ಪಡೆಯುತ್ತಿದ್ದಾಗ ಇನ್ನಷ್ಟು ವಿಷಯ ತಿಳಿಯಿತು. ಆಗ ನಾನೂ ಹೈಸ್ಕೂಲಿನಲ್ಲಿದ್ದೆ. ಅಂದಿನಿಂದ ಇಂದಿನವರೆಗೂ ಅವಕಾಶ ಸಿಕ್ಕಾಗೆಲ್ಲಾ ವೀವರ್ ಬರ್ಡ್ ಬಗ್ಗೆ ನನ್ನವರಿಗೆಲ್ಲಾ ಹೇಳುತ್ತಿರುತ್ತೇನೆ.

ಗೂಡು ಕಟ್ಟುವುದರಲ್ಲಿ ನಿಸ್ಸೀಮ ಇದಾದರೆ, ಅತ್ಯುತ್ತಮ ಪೋಷಕ ಪ್ರಶಸ್ತಿ ಕೂಡ ಪಡೆಯಬಲ್ಲ ಸಮರ್ಥ ಈ "ತಂದೆ" ಪಕ್ಷಿ.ಮುಂದಿನ ಭಾಗದಲ್ಲಿ ಬೇರೊಂದು "ಅಪ್ಪನ ಕಥೆ"ಯನ್ನು ಕೇಳೋಣ, ಓದೋಣ.

-ಅ
07.05.2008
2.45PM

ಒಂದಷ್ಟು ಚಿತ್ರಗಳು..