Friday, April 04, 2008

ಅಪ್ಪನ ಕಥೆ - ಭಾಗ ೧ನಾನು ಹುಟ್ಟಿದಾಗ ನಮ್ಮಮ್ಮ ಎದುರು ಇರಲೇ ಇಲ್ಲ. ವಲಸೆ ಹೋಗಿಬಿಟ್ಟಿದ್ದಳು. ಪಕ್ಕದ ಮಗುವಿನ ಅಮ್ಮ ಅಂತೂ ಹುಟ್ಟಿ ಒಂದು ವಾರವಾದ ಮೇಲೆ ಹಿಂದಿರುಗಿದಳು. ನಮ್ಮಮ್ಮ ಬರಲೇ ಇಲ್ಲ.ಮೊಟ್ಟೆಯಿಟ್ಟು "ಬೈ" ಎಂದು ಹೋದವಳು ಎಲ್ಲಿಗೆ ಹೋದಳೋ ಗೊತ್ತಿಲ್ಲ. ಹುಟ್ಟಿದ ತಕ್ಷಣ ನಾನು ನೋಡಿದ್ದು ಅಪ್ಪನನ್ನು. ಅಪ್ಪನ ಎರಡು ಕಾಲುಗಳ ಮಧ್ಯೆ ಬೆಚ್ಚಗಿದ್ದೆ. ಹೊರಬರಲು ಧೈರ್ಯವಿರಲಿಲ್ಲ, ಮನಸ್ಸೂ ಇರಲಿಲ್ಲ. ಯಾವನು ಚಳಿಯಲ್ಲಿ ಹೊರಬರುತ್ತಾನೆ? ಅಪ್ಪನ ಸ್ಪರ್ಶ ತುಂಬಾ ಹಿತಕರವಾಗಿತ್ತು.ಆದರೆ, ನನಗೆ ಹಸಿವಾದಾಗ, ಅಪ್ಪ ತುಂಬಾ ಪರದಾಡುತ್ತಿದ್ದ. ಕೆಳಗಿದ್ದ ಮಂಜುಗೆಡ್ಡೆಯನ್ನೇ ತಿಂದು, ಬಾಯಲ್ಲಿ ಅರ್ಧ ಕರಗಿಸಿಕೊಂಡು, ಇನ್ನರ್ಧ ನನಗೆ ಕೊಡುತ್ತಿದ್ದ. ನನ್ನ ಆಹಾರವು ಅದೇ ಎಂದು ನಂಬಿದ್ದೆ. ಮೊನ್ನೆಯಷ್ಟೇ ನನ್ನ ಗೆಳೆಯ ಮೀನು ಹಿಡಿಯುವುದನ್ನು ಹೇಳಿಕೊಟ್ಟ ಮೇಲೆ ನನಗೆ ಅರ್ಥವಾಯಿತು, ಅಪ್ಪ ವಿಧಿಯಿಲ್ಲದೆ ನನಗೆ ಆ ಆಹಾರ ಕೊಟ್ಟು ಬೆಳೆಸಿದ ಎಂದು.


ಅಮ್ಮ ನಿಜಕ್ಕೂ ಎಲ್ಲಿ ಹೋದಳು? ಎಲ್ಲಾ ಪ್ರಾಣಿಗಳಿಗೂ ತಾಯಿಯೇ ಮೊದಲ ದೇವರಂತೆ. ಅದರಲ್ಲೂ ನನ್ನಂಥ ಧಡೂತಿ ದೇಹದ ಪಕ್ಷಿಗಳು ತಾಯಿಯನ್ನು ನೋಡದೇ ಜನ್ಮ ತಾಳುವುದು ಎಂದರೆ ಯಾವ ನ್ಯಾಯ? ನಮ್ಮ ಗುಂಪಿನಲ್ಲೇ ಒಂದು ಮಗು ಸತ್ತು ಹೋಯಿತು. ಅದರ ಅಮ್ಮನೂ ಬರಲೇ ಇಲ್ಲ. ಎಲ್ಲಿಗೆ ಹೋಗಿದ್ದಳು? ಹೇಗೋ ನನ್ನ ಜೀವ ಉಳಿಯಿತು. ಈಗ ನನಗೂ ಒಬ್ಬಳು ಸಂಗಾತಿ ಕಾಯುತ್ತಿದ್ದಾಳೆ. ಅಮ್ಮನು ಅಪ್ಪನನ್ನು ಬಿಟ್ಟು ಹೋದ ಹಾಗೆ ಇವಳು ನನ್ನ ಬಿಟ್ಟು ಹೋಗದಿದ್ದರೆ ಅಷ್ಟೇ ಸಾಕು!

....................................................................................

ನಮ್ಮದು ಬಹಳ ದೊಡ್ಡ ಗುಂಪು. ಎಲ್ಲರಿಗೂ ನಮ್ಮದೇ ಆದ ಸಂಸಾರ - ಗಂಡ ಹೆಂಡತಿ. ಆದರೆ ಮನೆ ಮಾತ್ರ ಕಟ್ಟಲು ಸಿದ್ಧರಿಲ್ಲ. ಬಯಲಲ್ಲೇ ನಮ್ಮ ವಾಸ. ಕೋಟ್ಯಾನುಕೊಟಿ ಮಂದಿಗಳು ನಾವು ಬಯಲಲ್ಲೇ ಇರುತ್ತೇವೆ. ಚಳಿಗಾಲದಲ್ಲಿ ಎಲ್ಲರದೂ ಒಟ್ಟಿಗೇ ಮಿಲನದ ಕಾರ್ಯಕ್ರಮ. ಗಂಡನು ಎಂದೂ ನನ್ನ ಬಿಟ್ಟು ಬೇರೆ ಹೆಣ್ಣಿನ ಮೋಹಕ್ಕೆ ಸಿಲುಕಲಿಲ್ಲ.


ಹೆಚ್ಚು ಕಡಿಮೆ ಎರಡು ತಿಂಗಳುಗಳ ಕಾಲ ನಾನು ಗರ್ಭವತಿಯಾಗಿದ್ದೇನೆ. ಪಕ್ಷಿಸಂಕುಲದಲ್ಲಿ ಬೇರೆ ಯಾರು ತಾನೆ ಇಷ್ಟು ದಿನ ಗರ್ಭವನ್ನು ಧರಿಸಿಯಾರು? ನನ್ನ ತಾಯ್ತನವನ್ನು ಪಡೆದುಕೊಳ್ಳುವವರೆಗೂ ನನಗೆ ಸರಿಯಾದ ಆಹಾರವೇ ಇಲ್ಲ. ನಮ್ಮೂರಲ್ಲಿ ಎಲ್ಲಿ ನೋಡಿದರೂ ಬರೀ ಮಂಜು. ನಾನು ಹೆತ್ತದ್ದು ಚಳಿಗಾಲದಲ್ಲಿ. ನಮ್ಮ ಜಾತಿಯವರು ಮಾತ್ರ ಚಳಿಗಾಲದಲ್ಲಿ ಹೆರುವುದು. ಆ ಕಾಲದಲ್ಲಿ ನೆಲವೆಲ್ಲವೂ ಗಟ್ಟಿಯಾಗಿ ಗೆಡ್ಡೆಯಾಗಿಬಿಟ್ಟಿರುತ್ತೆ. ಎರಡು ತಿಂಗಳು ನಾನು ಹೊಟ್ಟೆಗೆ ಮೋಸ ಮಾಡಿಕೊಂಡಿದ್ದೆ. ಗಂಡ ಏನೋ ತಂದು ಕೊಡುತ್ತಿದ್ದ, ಆದರೆ ಅದು ಸಾಕಾಗುತ್ತಿರಲಿಲ್ಲ. ಸರಿ, ಮೊಟ್ಟೆಯನ್ನು ಅವನ ಕೈಗೆ ಕೊಟ್ಟು ನಾನು ಆಹಾರ ಹುಡುಕಿಕೊಂಡು ಹೊರಟೆ. ಮಗು ಹುಟ್ಟೋ ವೇಳೆಗೆ ಆಹಾರ ಸಮೇತವಾಗಿ ಹಿಂದಿರುಗಬೇಕು ಎಂಬ ಉದ್ದೇಶದಿಂದಲೇ ಹೊರಟೆ. ಯಾಕೆಂದರೆ ಮಗು ಹುಟ್ಟೋ ವರೆಗೂ ಮೊಟ್ಟೆಯನ್ನು ನನ್ನ ಗಂಡ ತಾನೇ ನೋಡಿಕೊಳ್ಳೋದು! ಅವನಿಗೂ ತಿಂಡಿ ಬೇಕು.


ಉದ್ದೇಶವೇನೋ ಇತ್ತು. ಆದರೆ ಈಗ ದಾರಿ ತಪ್ಪಿ ಹೋಗಿದ್ದೇನೆ. ಎಲ್ಲಿಗೆ ಹೋಗಬೇಕೆಂಬುದೇ ಗೊತ್ತಾಗುತ್ತಿಲ್ಲ. ನಾನು ಹೆತ್ತು ಒಂದು ವರ್ಷವಾಗುತ್ತ ಬಂತು. ನನ್ನ ಮಗು ಎಲ್ಲಿದೆಯೋ, ಹೇಗಿದೆಯೋ ಗೊತ್ತಿಲ್ಲ. ನನ್ನ ಗಂಡನು ಏನು ತಿಂದನೋ ಏನು ಕಥೆಯೋ.. ಅಯ್ಯೋ ವಿಧಿಯೇ.. ನನ್ನ ಗೆಳತಿ ಹೊರಟ ಎರಡು ದಿನಕ್ಕೇ ಸತ್ತು ಹೋದಳು. ಪಾಪ, ಅವಳ ಗಂಡ ಮಗುವಿನ ಪಾಡು ಏನಾಯಿತೋ..

.....................................................................................


ಒಂದುವರೆ ತಿಂಗಳು ಕಣ್ರೀ.. ಒಂದು ಅಡಿಯೂ ಸಹ ನಾನು ನಡೆದಿಲ್ಲ. ನಿಂತಲ್ಲಿ ಗೂಟ ಹೊಡ್ಕೊಂಡು ನಿಂತಿದೀನಿ. ನನ್ನ ಎರಡು ಕಾಲುಗಳ ಮಧ್ಯೆ ಮೊಟ್ಟೆ, ಆಮೇಲೆ ಮಗು. ಇಡೀ ಒಂದುವರೆ ತಿಂಗಳು ನಾನು ಒಂದು ಗುಟಕು ನೀರೂ ಕುಡಿದಿಲ್ಲ. ನನ್ನ ಕಣ್ಣು, ಮೂಗು, ಕಿವಿ, ಎಲ್ಲಾ ಇಂದ್ರಿಯಗಳೂ ನನ್ನ ಮಗುವನ್ನು ಕಾಪಾಡುವುದರಲ್ಲೇ ತೊಡಗಿತ್ತು. ನನ್ನ ಕೈಗೆ ಮೊಟ್ಟೆಯನ್ನಿತ್ತು ಹೋದವಳು ಇವತ್ತು ಬರುತ್ತಾಳೆ, ನಾಳೆ ಬರುತ್ತಾಳೆ ಅಂತ ಕಾದೆ ಕಾದೆ... ಬರಲೇ ಇಲ್ಲ. ಆಹಾರವೇನು ನಮ್ಮ ಬಾಯಿಗೆ ತಾವೇ ಹುಡುಕಿಕೊಂಡು ಬರುತ್ತವೆಯೇ? ಅವಳು ಬಸುರಿಯಾಗಿದ್ದಾಗ ನಾನು ಏಳುನೂರು ಅಡಿ ಆಳಕ್ಕೆ ಧುಮುಕಿ, ಒಂದು ಸ್ಕ್ವಿಡ್ ತಂದುಕೊಟ್ಟಿದ್ದೆ. ಒಂದು ವಾರ ತಿಂದಿದ್ದಳು ಒಬ್ಬಳೇ. ಲಕ್ಕವಿಲ್ಲದಷ್ಟು ಮೀನುಗಳನ್ನು ತಂದುಕೊಟ್ಟಿದ್ದೆ. ನೆಲ ಗೆಡ್ಡೆಯಾಗಿದೆ ಅಂತ ನನ್ನನ್ನೂ ಹುಟ್ಟಲಿರುವ ಮಗುವನ್ನೂ ಬಿಟ್ಟು ಹೋದರೆ ಯಾವ ನ್ಯಾಯ ರೀ..

ಮಗು ಹುಟ್ಟೇ ಬಿಟ್ಟಿತು. ಅವಳಂತೂ ಬರಲಿಲ್ಲ. ಇನ್ನೇನು ಮಾಡಲಿ, ಮಗುವನ್ನು ಸಾಕಲೇ ಬೇಕಲ್ಲವೇ? ಬಿಟ್ಟು ಹೋಗಿ ಮೀನು ಹಿಡಿಯೋದಕ್ಕಾಗಲ್ಲ. ಐಸನ್ನೇ ಕೊಟ್ಟೆ ಕಣ್ರೀ.. ನಾನೂ ಅದನ್ನೇ ತಿಂದೆ. ಸುಮಾರು ಮೂರು ತಿಂಗಳು ನಾನು, ನನ್ನ ಮಗ ಬರೀ ಐಸು ತಿಂದುಕೊಂಡು ಬದುಕಿದ್ದೀವಿ. ಈಗ ಅವನು ದೊಡ್ಡೋನಾಗಿದ್ದಾನೆ. ನಾನೂ ಮೀನು ಹಿಡಿಯುತ್ತೇನೆ, ಅವನೂ ಹಿಡಿಯುತ್ತಾನೆ. ಈಗ ನನಗಾಗಲೀ ಅವನಿಗಾಗಲೀ ಅವಳ ಅವಶ್ಯಕತೆಯೇ ಇಲ್ಲ. ಅವಳು ಎಲ್ಲಿ ಹೋಗಿದ್ದಾಳೋ ಏನೋ.


ಆದರೆ, ಒಂದು ಮಾತ್ರ ನಾನು ಮರೆಯೋದಕ್ಕೆ ಆಗೋದೇ ಇಲ್ಲ. ನನ್ನ ದೇಹದ ಮೂರನೇ ಒಂದು ಭಾಗದಷ್ಟು ತೂಕ ಕಡಿಮೆ ಮಾಡಿಕೊಂಡ ನಾನು, ನನ್ನ ಮಗನನ್ನೂ ಕರೆದುಕೊಂಡು ನೂರು ಕಿಲೋಮೀಟರು ಚಾರಣ ಮಾಡಿದ್ದೀನಿ - ಅದೂ ಬರೀ ಐಸು ತಿಂದುಕೊಂಡು. ಯಾಕೆ ಅಂತೀರ? ನಾವಿದ್ದ ಜಾಗದಲ್ಲಿ ಊಟವೇ ಇಲ್ಲ! ನೆಲವೆಲ್ಲಾ ಗೆಡೆ! ನಮಗೆ ಊಟ ಬೇಕಿತ್ತು. ನೂರು ಕಿ.ಮಿ. ನಡೆದರೇನೇ ನಮಗೆ ಊಟ. ನನ್ನ ಕಾಲುನೋವು ಇನ್ನೂ ನೀಗಿಲ್ಲ. ಇರಲಿ, ಇದು ನನ್ನ ಹಣೆಬರಹ. ಮುಂದಿನ ಸಲ ಹೀಗಾಗದ ಹಾಗೆ ನೋಡಿಕೊಳ್ಳುತ್ತೀನಿ. ಮುಂದಿನ ಹೆಂಡತಿ, ಮಗು ಬರಲಿ..

.....................................................................................

ಅಂಟಾರ್ಕ್ಟಿಕಾದಲ್ಲಿ ವಿಶೇಷವಾಗಿ ಕಾಣಿಸುವ ಪಕ್ಷಿ - ಎಂಪರರ್ ಪೆಂಗ್ವಿನ್ (Aptenodytes forsteri). ಇದು ಎಲ್ಲಾ ಬಗೆಯ ಪೆಂಗ್ವಿನ್‍ಗಿಂತಲೂ ದೊಡ್ಡದಾದದ್ದು. -80 ಡಿಗ್ರೀ ತಾಪಮಾನವನ್ನೂ ತಡೆಯಬಲ್ಲ ಚರ್ಮವನ್ನು ಹೊಂದಿರುತ್ತವೆ. ಸ್ಕ್ವಿಡ್‍ಗಳು, ಮೀನುಗಳು, ಮತ್ತು ಏಡಿಗಳನ್ನು ತಿಂದು ಬದುಕುವ ಈ ಪಕ್ಷಿಯ ಸಂತತಿ ಬೆಳವಣಿಗೆ ಕ್ರಿಯೆ ಮಾತ್ರ ಬಹಳ ವಿಭಿನ್ನವಾಗಿದೆ. ಮೇಲೆ ಮಗ, ಅಮ್ಮ ಮತ್ತು ಅಪ್ಪ ಮೂರೂ ಪೆಂಗ್ವಿನ್‍ಗಳ ಮಾತುಗಳಿಂದ ಅವು ಹೇಗೆ ವಿಶಿಷ್ಟವೆಂದು ತಿಳಿದಿದೆಯೆನಿಸುತ್ತೆ. ಸಂತತಿ ಬೆಳವಣಿಗೆ ಕ್ರಿಯೆಯಲ್ಲಿ ಒಂದೇ ಸ್ಥಳದಲ್ಲಿ ಸರಿಸುಮಾರು ಎರಡು ಲಕ್ಷ ಪೆಂಗ್ವಿನ್ನುಗಳು ತಮ್ಮ ತಮ್ಮ ಸಂಗಾತಿಗಳೊಡನೆ ಸೇರಿರುತ್ತವೆ. ಅಚ್ಚರಿಯೆಂದರೆ ಯಾವುದಕ್ಕೂ ತನ್ನ ಸಂಗಾತಿ ಯಾರು ಎಂದು ಎಂದೂ ಗೊಂದಲವುಂಟಾಗುವುದಿಲ್ಲ. ಆಹಾರಕ್ಕಾಗಿ ವಲಸೆಗೆ ಹೋದ ತಾಯಿ ಪಕ್ಷಿ ಸಾಧಾರಣವಾಗಿ ಹಿಂದಿರುಗುತ್ತದೆ. ಕೆಲ ತಾಯಿಗಳು ಅನೇಕ ಕಾರಣಗಳಿಂದ ಬರುವುದಿಲ್ಲ. ದಾರಿ ತಪ್ಪಬಹುದು, ಸತ್ತು ಹೋಗಬಹುದು ಇತ್ಯಾದಿ. ತಂದೆ ಪೆಂಗ್ವಿನ್ನಿನ ಜವಾಬ್ದಾರಿ ಆಗ ವಿಪರೀತ ಹೆಚ್ಚುತ್ತದೆ. ಎಷ್ಟೋ ಸಲ ತಂದೆ - ಮಗು ಎರಡೂ ಆಹಾರವಿಲ್ಲದೆ ಸತ್ತು ಹೋಗುತ್ತವೆ.ಸೃಷ್ಟಿ ವಿಸ್ಮಯವಲ್ಲವೇ?

ಮುಂದಿನ ಭಾಗದಲ್ಲಿ ಬೇರೊಂದು ಪ್ರಾಣಿಯ "ಅಪ್ಪನ ಕಥೆ"ಯನ್ನು ತೆಗೆದುಕೊಂಡು ಬರುತ್ತೇನೆ..

-ಅ
04.04.2008
2AM

22 comments:

 1. ಬೊಂಬಾಟಾಗಿದೆ ಕಣೋ, ಸೂಪರ್ ಆಗಿದೆ. ಕೀಪ್ ಇಟ್ ಅಪ್.
  ನಿನಗೆ ಆ ದೇವರು ಬರೆಯಲು ಇನ್ನಷ್ಟು ಶಕ್ತಿಯನ್ನು ಕೊಡಲಿ.
  ಸತ್ಯಪ್ರಕಾಶ್

  ReplyDelete
 2. ನಮಸ್ಕಾರ ಅರುಣ್,
  ಮೊನ್ನೆ "ಪ್ಲಾನೆಟ್ ಅರ್ಥ" ಡಿವಿಡಿ ತಂದು ಎಲ್ಲಾ ಎಪಿಸೋಡುಗಳನ್ನು ನೋಡಿದೆ. -೭೦ ಡಿಗ್ರೀ ತಾಪಮಾನದಲ್ಲಿ ಗಂಡು ಪೇಂಗ್ವೀನ್ ಗಳು ಮೊಟ್ಟೆಯನ್ನು ಜೋಪಾನವಾಗಿ ಕಾಪಾಡುವ ಪರಿಯನ್ನು ನೋಡಿ ಅದ್ಭುತವೆನಿಸಿತು.
  ಅವುಗಳ ಪಾಡು, ಕಷ್ಟ ಎಲ್ಲಾ ನೋಡಿ ಅವುಗಳ "struggle for existence" ಮುಂದೆ ನಮ್ಮ ಕಷ್ಟಗಳೆಲ್ಲ ಏನೂ ಅಲ್ಲವೆನಿಸಿತು.

  ಒಳ್ಳೆಯ ಲೇಖನಕಾಗಿ ಧನ್ಯವಾದಗಳು.
  ~ಮಧು

  ReplyDelete
 3. Happy Feet movie nenpige banthu :-)
  Good article ...
  Btw ... kelavu varshagala hinde nam pediatrician heltidru ... eegina appandiru badlaagidaare, makkalabagge tilkondidaare (im talking about small babies), yeshto sala eLe makklanna avre check up ge karkondu bartaare antha. Appandiralloo amma ello ond kade irtaale alva? Gandaadre appa, hennadre amma antha nan manassu oppolla ... appandiroo taayi aagirtaare :-)

  ReplyDelete
 4. just superb!! gottildiro eshto vishya tiLsatte ninna blog-u! keep going...

  ReplyDelete
 5. ವಿವರಣೆ ಮತ್ತು ಚಿತ್ರಗಳನ್ನು ಚೆನ್ನಾಗಿ blend ಮಾಡಿದ್ದೀರಿ. ನಮ್ಮನ್ನು ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತದೆ ನಿಮ್ಮ ಲೇಖನ. ಹೆಚ್ಚಿನ ಮಾಹಿತಿಗಾಗಿ ನಿಮಗೆ ತಿಳಿದಿರುವ ವೆಬ್ ವಿಳಾಸಗಳನ್ನು ನೀಡಿದರೆ ಬಹಳ ಅನುಕೂಲವಾಗುತ್ತದೆ.

  -ಮಾಕೆಂ

  ReplyDelete
 6. ಎಕ್ಸಲೆಂಟ್! ಸಿಕ್ಕಾಪಟ್ಟೆ ಚೆನ್ನಾಗಿದೆ: ಬರಹ, ಶೈಲಿ, ನಿರೂಪಣಾ ವಿಧಾನ, ಬಳಸಿಕೊಂಡ ಪ್ರತಿಮೆಗಳು... ಎಲ್ಲಾ ಅದ್ಭುತ.

  ಇದನ್ನ ಯಾವುದಾದ್ರೂ ಪತ್ರಿಕೆಗೆ ಕಳುಹಿಸಬಹುದಿತ್ತು... :-/

  ReplyDelete
 7. ಸುಪರ್, ಸುಪರ್, ಪೆ೦ಗ್ವಿನ್ ನ೦ತೆಯೇ ಕ್ಯೂಟಾಗಿದೆ ಬರಹ ... :)

  ReplyDelete
 8. ಅಬ್ಬಾ.............. ಃಏಗೆ ಇದಕ್ಕೆ ಪ್ರತಿಕಿಯಿಸೋದು ಅಂತನೇ ಗೊತ್ತಾಗ್ತಿಲ್ಲ . ಹಮ್ "ಕ್ಷಿತಿಜದೆಡೆಗೆ" ಬ್ಲಾಗ್ ನಲ್ಲಿರುವ ಎಲ್ಲಾ ಆರ್ಟಿಕಲ್ಸ್ ಓದಿದ್ದಿನಿ ನನಗೆ ಅವೆಲ್ಲಕ್ಕಿಂತ ಇದು ವಿಭಿನ್ನವಾಗಿದೆ ಅನಿಸಿತು; ಪ್ರತಿಯೊಂದು ಅಂಶದಲ್ಲು ವಿಭಿನ್ನತೆಯೆ ಎದ್ದುಕಾಣ್ತಿದೆ ಇದರಲ್ಲಿ.
  ಪದ ಬಳಕೆ ಲೇಖಕ ನ ಆಲೋಚನೆಯೆಲ್ಲವೂ ರೋಮಾಂಚನ ನೀಡುತ್ತಾ ಸಾಗುತ್ತೆ ಓದ್ತಾ ಹೋಗ್ತಿದ್ರೆ.

  ಅಲ್ಲಲ್ಲಿ ಪೆಂಗ್ವಿನ್ ಚಿತ್ರಗಳ ಬಳಕೆ ,ಕೊನೆಯಲ್ಲಿ ಒಂದು ಸೊಗಸಾದ, ಮುದನೀಡುವ ವಿಡಿಯೋ ಎಲ್ಲವು ಸೂಪರ್ ಆಗಿದೆ .


  "ಪ್ರಣತಿ" ಸಂಸ್ಥೆಯಡಿಯಲ್ಲಿ ಚಿತ್ರಚಾಪ ಭಾಗ-೨ ನ್ನ ಹೊರತರುವಾಗ ಈ ಆರ್ಟಿಕಲ್ ನ ಮುದ್ರಿಸೋದನ್ನ ಮರಿದೆ ಇರಲಿ.:-)

  ReplyDelete
 9. i really feel sad that kannada main stream bloggers are not visiting ur blog:(

  ತುಂಬ ಚೆನ್ನಾದ ಬರಹ, ನೂತನ ಶೈಲಿ ಹಿಡಿಸಿತು.

  ReplyDelete
 10. Antu Bloggers' meet-u help aaitu. Ee ondu post informative aagi, interesting aagi ide.

  Btw, kannada du wikipedia nalli idanna haakdre innu hechhu janakke use aagatte. Illi nodu...

  http://kn.wikipedia.org/

  ReplyDelete
 11. [ಸತ್ಯಪ್ರಕಾಶ್] ಬಹಳ ತಿಂಗಳುಗಳಾದ ಮೇಲೆ ನನ್ನ ಬ್ಲಾಗಿನಲ್ಲಿ ಕಮೆಂಟಿಸುತ್ತಿದ್ದೀರ.. ಏನೋ ಹೊಸ ಪ್ರಯತ್ನ ಮಾಡಿದ್ದಕ್ಕೂ ಸಾರ್ಥಕ ಅನ್ನಿಸುತ್ತಿದೆ.

  [ಮಧು] ಮೊನ್ನೆ "ವರ್ಲ್ಡ್ ಅರ್ಥ್ ಡೇ" ಇತ್ತು. ಅದರ ಅಂಗವಾಗಿ ನೀವು ಬಹಳ ಉತ್ತಮ ಕೆಲಸ ಮಾಡಿದ್ದೀರ. ನಿಜ, ಸ್ಟ್ರಗ್ಲ್ ಫಾರ್ ಎಕ್ಸಿಸ್ಟೆನ್ಸ್ ಎಂಬ ಡಾರ್ವಿನಿನ ವಾದ ಅತ್ಯಂತ ಕಟುಸತ್ಯವಾದರೆ, ಇನ್ನೊಂದು ಸತ್ಯವೆಂದರೆ "ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್!

  ಕಮೆಂಟಿಸಿದ್ದಕ್ಕೆ ಥ್ಯಾಂಕ್ಸ್, ಮಧು ಅವರೇ.

  [ವಿಜಯಾ] ನಾನು 'ಹ್ಯಾಪಿ ಫೀಟ್' ನೋಡಿಲ್ಲ :-(
  ಅಪ್ಪಂದಿರಲ್ಲಿ ಅಮ್ಮ 'ಎಲ್ಲೋ ಒಂದ್ ಕಡೆ' ಇರ್ತಾರೆ ಅಂದಿದ್ದೀಯ, ಎಲ್ಲಿ?? ;-)

  [ಶ್ರೀಕಾಂತ್] ಥ್ಯಾಂಕ್ಸ್ ಕಣೋ.

  [ಮಾಕೆಂ] ನಾನು ಚಿತ್ರಗಳಿಗಾಗಿಯಷ್ಟೇ ಅಂತರ್ಜಾಲ ತಾಣಗಳನ್ನು ನೋಡಿದ್ದೆ. ಪುಸ್ತಕಗಳನ್ನೋದಿ ಮಾಡಿಕೊಂಡ ನೋಟ್ಸು, ಟಿ.ವಿ. ನೋಡಿ ಮಾಡಿಕೊಂಡ ಟಿಪ್ಪಣಿಗಳು ಹೆಚ್ಚು ಸಹಾಯ ಮಾಡಿದವು ಸರ್. ಬ್ಲೆಂಡ್ ಸವಿದೆನೆಂದು ಹೇಳಿದ್ದು ಕೇಳಿ ಸಂತಸವಾಯಿತು. ಧನ್ಯವಾದಗಳು.

  [ಸುಶ್ರುತ] ಯಾವುದಾದರೂ ಪತ್ರಿಕೆ! ನಾನು , ಶ್ರೀನಿಧಿ ಬಹಳ ಹಿಂದೆಯೇ ಮಾತನಾಡಿಕೊಳ್ಳುತ್ತಿದ್ದೆವು, ನಮ್ಮದೇ ಪತ್ರಿಕೆ ಮಾಡಿದರೆ ನಮಗೆ ಏನು ಬೇಕೋ ಎಲ್ಲಾ ಪ್ರಕಟಿಸಬಹುದು ಅಂತ. ತಲೆಯಲ್ಲಿದೆ ಆ ಐಡಿಯಾ! :-) ಹೊಗಳಿಕೆಗೆ ಸಂಕೋಚವಾಗುತ್ತಿದೆ. ಥ್ಯಾಂಕ್ಸ್.

  [ಹರ್ಷ] ಕ್ಯೂಟಾಗಿದೆ ಕಮೆಂಟು!!

  [ಪುಷ್ಪಲತಾ] ಕ್ಷಿತಿಜದೆಡೆಗೆ..ಯನ್ನು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಓದುತ್ತಿದ್ದೀಯೆ. ನಿನ್ನ ಜಡ್ಜ್ಮೆಂಟಿಗೆ ನಾನು ಸಂತುಷ್ಟ. 'ಪ್ರಣತಿ'ಯನ್ನು ಕೇಳಿಕೊಳ್ಳುತ್ತೇನೆ, ಹಾಗೇ ನಮ್ಮ ಚಿ.ಚಾ. ತಂಡದವರನ್ನೂ ಸಹ. ಒಪ್ಪಿದರೆ ಮಾಡುವುದೇ!!

  [ಶ್ರೀನಿಧಿ] ಇವತ್ತು ತಾನೇ ಗೆಳೆಯ ಅರ್ಜುನ್‍ನ ಬ್ಲಾಗನ್ನು ಓದುತ್ತಿದ್ದೆ. ಎರಡು ವರ್ಷ ಆಯಿತು ಬ್ಲಾಗಿಸಲು ಶುರು ಮಾಡಿ ಎಂದು ಬರೆದುಕೊಂಡಿದ್ದ. ಅವನದೇ ಕೆಲವು ಸಾಲುಗಳು ಈ ರೀತಿಯಿತ್ತು: "ನಾನು ಈ ಬ್ಲಾಗಿಂಗ್ ಪ್ರಪಂಚದಲ್ಲಿ ನನ್ನನ್ನೂ ಸೇರಿಸಿ ಹತ್ತು ಜನ ಓದುಗರನ್ನು ಸಂಪಾದಿಸಿದ್ದೇನೆ, ಅಷ್ಟು ಸಾಕು ನನಗೆ." ಎಂದು. ನೀವುಗಳು ಓದುತ್ತೀರ.. ನನಗೆ ಅಷ್ಟು ಸಂತೋಷ ಕಣೋ ನಿಜಕ್ಕೂ.. :-)

  ReplyDelete
 12. [ಸ್ವರೂಪ] ಓಹ್, ವಿಕಿಪೀಡಿಯಾ ಕನ್ನಡದಲ್ಲೂ ಇದೆಯಾ? ನನಗೆ ಗೊತ್ತೇ ಇರಲಿಲ್ಲ. ಥ್ಯಾಂಕ್ಸ್ ಕಣಪ್ಪಾ. :-)

  ReplyDelete
 13. ನಿಜಕ್ಕೂ ಒಳ್ಳೆ ನಿರೂಪಣೆ.. ಹೀಗೂ ಇದೆಯೇ ಅಂತನೇ ಗೊತ್ತಿರಲಿಲ್ಲ.. ಬರವಣಿಗೆ ಹೀಗೇ ಮುಂದುವರಿಸುತ್ತಿರು..

  ReplyDelete
 14. ಸರ್ಪಗಳ ಬರಹದ ಗುಂಗಿನಲ್ಲೇ ಇದ್ದಾಗಲೇ ಪೆಂಗ್ವಿನ್-ಗಳು! ಸರ್ಪಗಳ ಲೇಖನದಲ್ಲಿದ್ದ ವಿಡಿಯೋ ನೋಡಿ ಬಹಳ ನೋವಾಗಿತ್ತು. ಇಲ್ಲಿನ ವಿಡಿಯೋ ನೋಡಿ ಉಲ್ಲಸಿತನಾದೆ. ಉನ್ನತ ಲೇಖನ. ಪ್ರಾಣಿಲೋಕದ ಮಾಹಿತಿಗಳ ಆಗರವಾಗುತ್ತಿದೆ ’ಕ್ಷಿತಿಜದೆಡೆಗೆ’. ಧನ್ಯವಾದಗಳು ಅರುಣ್. ಮುಂದಿನ ’ಪ್ರಾಣಿ’ಗೆ ಕಾಯುತ್ತಿದ್ದೇನೆ.

  ReplyDelete
 15. Aruna,
  Chennagide hosa prayathna.... shubhavagali :)

  ReplyDelete
 16. ತುಂಬಾ ಚೆನ್ನಾಗಿದೆ, ಚಿಕ್ಕವಳಿದ್ದಾಗ ನನ್ನ್ ಹತ್ರ ಒಂದು ಪ್ರಾಣಿಗಳ,ಮುಖ್ಯವಾಗಿ ಆನೆಗಳ ಕಥೆಪುಸ್ತಕ ಇತ್ತು, ಅವುಗಳ ಸಂಸಾರ, ಆಹಾರ, ಖೆಡ್ದಾ - ಇವುಗಳಬಗ್ಗೆಯೆಲ್ಲಾ ಕಥೆಯಮೂಲಕ ಹೇಳ್ತಿತ್ತು. ನಂಗೆ ತುಂಬಾ ಇಷ್ಟವಾದ ಪುಸ್ತಕ...ಯಾವಾಗ್ಲೋ ಕಳ್ಕೊಂಡ್ಬಿಟ್ಟೆ, ಪುಸ್ತಕ ಯಾರ್ ಬರೆದಿದ್ರು ಅಂತನೂ ನೆನಪಿಲ್ಲ, ಎಲ್ಲಾ ಬುಕ್ ಎಕ್ಸಿಬಿಶನ್ನಲ್ಲೂ ಹುಡುಕ್ತಾನೇ ಇದೀನಿ, ನನ್ನ ಪುಟ್ಟ nieceಗಾಗಿ... ನಿಮ್ಮ ಈ ಬರಹ ನೋಡ್ದಾಗ ಆ ಪುಸ್ತಕ ನೆನಪಾಯ್ತು...ನಮ್ಮನೆ ಪುಟ್ಟಿಗೆ ಓದಿ ಹೇಳ್ತೀನಿ:) ಹಾಂ, ನನ್ನಂಥಾ ದೊಡ್ಡ್ ಮಕ್ಕಳಿಗೂ ಇಷ್ಟವಾಗೋ ಶೈಲಿ, ತಿಳ್ಕೊಳ್ಳಬೇಕಾದ ವಿಷ್ಯ! ಮುಂದಿನ್ ಕಥೆಗೆ ಜಾಸ್ತಿ ಕಾಯಿಸಬೇಡಿ!:)

  ReplyDelete
 17. ತು೦ಬಾ ವಿಭಿನ್ನವಾಗಿತ್ತು. ಅಷ್ಟೇ ಮಾಹಿತಿಪೂರ್ಣವಾಗಿತ್ತು. ನಿಮ್ಮ ಮು೦ದಿನ ಬರಹಕ್ಕೆ ಕಾಯುತ್ತಿದ್ದೇನೆ.

  ReplyDelete
 18. [ನನ್ ಮನೆ] ಹಾಗೂ ಇದೆ. ಇನ್ನೂ ಇದೆ!! :-) ನಿಮ್ಗೆ ಒಂದು ವಿಶೇಷ ಧನ್ಯವಾದ!


  [ರಾಜೇಶ್ ನಾಯ್ಕ] ಸರ್ಪಗಳ ವಿಡಿಯೋ ನನಗೂ ಬೇಸರ ತರಿಸಿತು. ಆದರೆ ನಮ್ಮಲ್ಲಿ ಕೋಳಿ ಫಾರಂ‍ನಂತೆ ಅಲ್ಲಿ ಸ್ನೇಕ್ ಫಾರಂಗಳು ಇರುತ್ತವೆ. ತಿನ್ನೋಕೆ ಅಂತ ಬೆಳೆಸುತ್ತಾರೆ ಪ್ರಾಣಿಗಳನ್ನು - ಸರ್ಪಗಳನ್ನು. Non veg ತಿನ್ನೋದು ಅಪರಾಧವೆಂದರೆ ಇದು ಅಪರಾಧ, ಇಲ್ಲ ಅಂದರೆ ಅಪರಾಧವಲ್ಲವೆಂದು ಅವರ ವಾದ. ವಿಚಿತ್ರ!!

  ಬೆಟ್ಟ ಗುಡ್ಡ, ನದಿ ಕಡಲು, ಇವುಗಳ ಬಗ್ಗೆ ನೀವು ಅತ್ಯಂತ ಸೊಗಸಾಗಿ ಬರೆಯುತ್ತೀರಲ್ಲಾ, ಅದಕ್ಕೆ ಪ್ರಾಣಿಗಳಿಗೆ ಒಂದಷ್ಟು ಪಕ್ಷಪಾತ ಮಾಡೋಣ ಅಂತ ಅಷ್ಟೇ.. ;-)

  [ಅನ್ನಪೂರ್ಣ] ಥ್ಯಾಂಕ್ಸ್ ರೀ...

  [ಶ್ರೀ] ಪುಸ್ತಕದ ಹೆಸರು ಹೇಳಿಪ್ಪಾ, ನಾನೂ ಟ್ರೈ ಮಾಡ್ತೀನಿ ಹುಡುಕೋಕೆ.. :-)

  [ಸುಧೇಶ್ ಶೇಟ್ಟಿ] ಧನ್ಯವಾದಗಳು ಸುಧೇಶ್ ಅವರೇ..

  ReplyDelete
 19. ಸ್ಪ್ಯಾಮ್ ಮಾಡುತ್ತಿರುವುದಕ್ಕೆ ಕ್ಷಮೆ ಕೋರುತ್ತಾ,

  ಆತ್ಮೀಯರೆ,

  ಕಳೆದ ತಿಂಗಳು ನಡೆದ ಬ್ಲಾಗಿಗರ ಸಮಾವೇಶದ ನಂತರ, ನನ್ನ ಮನಸ್ಸಿನಲ್ಲಿ ಮೊಳಕೆಯೊಡೆದ ಆಸೆಯಂತೆ, ಅಂತರ್ಜಾಲವನ್ನೆಲ್ಲ ತಡಕಾಡಿ, ಅಸ್ತಿತ್ವದಲ್ಲಿರುವ ಎಲ್ಲ ಕನ್ನಡ ಬ್ಲಾಗುಗಳ ಪರಿವಿಡಿಯನ್ನು ತಯಾರಿಸುವ ಪ್ರಯತ್ನವನ್ನು ಮಾಡಿದ್ದೇನೆ(೫-೪-೨೦೦೮ ರಂದು ಇದ್ದಂತೆ ೫೫೦). ಅದನ್ನು ಇಲ್ಲಿ http://kannadabala.blogspot.com ನೋಡಬಹುದು. ಹಾಗೆಯೇ ಕನ್ನಡ ಬ್ಲಾಗ್ ಲೋಕದ ಆಗುಹೋಗುಗಳಿಗೆ ನನ್ನ ಪ್ರತಿಕ್ರಿಯೆ/ದನಿ ಸೇರಿಸಲು ಈ ಬ್ಲಾಗನ್ನು ಮೀಸಲಿರಿಸಿದ್ದೇನೆ. ಆಗಾಗ ಬರುತ್ತಿರಿ.

  ವಿಶ್ವಾಸಿ,
  ರೋಹಿತ್ ರಾಮಚಂದ್ರಯ್ಯ.

  ReplyDelete
 20. sikk sikkapatte late aag comment maadtirodakke kshame korutta...."hopeless fellow..shudda somaari" antha bydbidu.. :-D

  barahada shaili different -u...oLLe info heLiro reethi super -u...hmm hosa hosa experiments maadtidya...hmmm...
  berondu praaniya appana kathe na blog nalli publish maadbeda...STRICTLY...book ge antha irli... :-D :-D

  ReplyDelete
 21. ನಂಗೆ ನೆನಪಿರೋ ಕಾಲದಿಂದ ಆ ಪುಸ್ತಕಕ್ಕೆ cover pageಏ ಇರಲಿಲ್ಲ... ಹಾಗಾಗಿ ಹೆಸ್ರೂ ನನಪಿಲ್ಲ:( ಆಗೆಲ್ಲ ರಶ್ಯನ್ ಪುಸ್ತಕಗಳ ಅನುವಾದಗಳು ಬರ್ತಿದ್ವು - ಇದೂ ಅಂಥದ್ದೇ ಅನ್ಸುತ್ತೆ... ಐಬಿಎಚ್ ಅಥವಾ ನ್ಯಾಶನಲ್ ಬುಕ್ ಟ್ರಸ್ಟ್ ಪ್ರಕಟನೆ ಇರಬೇಕು...
  ಪುಸ್ತಕ ನಾವ್ ಹುಡುಕ್ತೀವಿ, ನೀವು ಅದಕ್ಕೆ ಈ ಥರ ಒಳ್ಳೆ substitution ಕಥೆಗಳನ್ನ ಬರೀರಿ ಸಾಕು;))

  ReplyDelete
 22. [ಶ್ರೀಧರ]ಪ್ರೀತಿಯ ಹೋಪ್‍ಲಸ್ ಫೆಲೋ ಸೋಮಾರಿಯವ್ರೇ, ನಿಮ್ಮ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ;-)

  [ಶ್ರೀ] ನೀವು ಹುಡುಕಿ, ಪುಸ್ತಕ ಸಿಕ್ರೆ ನಂಗೂ ಒಂದು copy ತೊಗೊಳಿಪ್ಪಾ...

  ReplyDelete

ಒಂದಷ್ಟು ಚಿತ್ರಗಳು..