Sunday, April 27, 2008

ನಂದ ಥಿಯೇಟರ್ ರಸ್ತೆ

ಬೆಂಗಳೂರಿನ ಸೌತ್-ಎಂಡ್-ಸರ್ಕಲ್‍ನಿಂದ ನಂದ ಥಿಯೇಟರ್‍ಗೆ ಹೋಗುವ ದಾರಿಯಲ್ಲಿ ದಟ್ಟವಾಗಿ ಬೆಳೆದು ನಿಂತು ರಾರಾಜಿಸುತ್ತಿರುವ ಹೆಮ್ಮರಗಳು ಬೆಳವಣಿಗೆಯ ಮುಖವಾಡ ಹೊತ್ತಿರುವ 'ಬೃಹತ್' ಬೆಂಗಳೂರಿಗೆ ಆಹುತಿಯಾಗುತ್ತಿವೆ. ರಸ್ತೆಗಳು ವಾಹನಗಳ ಸಂದಣಿಯನ್ನು ಭರಿಸಲಾಗದೆ ವಿಸ್ತೃತಗೊಳ್ಳುವ ಹಂಬಲದಿಂದ ನೂರಾರು ವರ್ಷಗಳಿಂದ ಬಾಳ್ವೆ ಮಾಡಿಕೊಂಡ ಮರಗಳಿಗೆ ಮೃತ್ಯುವಾಗಿವೆ.

ಬೆಂಗಳೂರಿನಲ್ಲಿ ಈಗ ಏರಿರುವ ತಾಪ ಸಾಲದೇ? ಬೆಂಗಳೂರು ಜ್ವಾಲಾಮುಖಿಯಾಗಬೇಕೆ? ಅಧಿಕಾರಿಗಳಿಗೆ, ಖುರ್ಚಿ-ಅಧಿಪತಿಗಳಿಗೆ, A.C. ಕಾರಿನಲ್ಲಿ ಓಡಾಡುವವರಿಗೆ ಮರಗಳ ಬೆಲೆ ಅರ್ಥವಾಗುವುದಿಲ್ಲವೇ?

ನೂರೈವತ್ತಕ್ಕೂ ಹೆಚ್ಚು ಜನರು ಈಗಾಗಲೇ ನಗರ ಪಾಲಿಕೆಯ ಈ ಕೆಟ್ಟ ಕಾರ್ಯಾಚರಣೆಯ ವಿರುದ್ಧ ಹೋರಾಡಲು ನೊಂದಾಯಿಸಿಕೊಂಡಿದ್ದಾರೆ. ಜನರಿಗೆ ತೊಂದರೆಯಾಗದ ಹಾಗೆ, ಟ್ರಾಫಿಕ್ಕನ್ನು ಕೆಡಿಸದ ಹಾಗೆ ಚಳುವಳಿ ಸಾಗಲಿ.

ಬೆಂಗಳೂರು ಉಳಿಯಲಿ. ಹಸಿರಾಗಿರಲಿ.

ಈ ಚಳುವಳಿಗೆ ನಿಮ್ಮ ಹೆಸರನ್ನು ಸೇರಿಸಲು ಇಲ್ಲಿ ಕ್ಲಿಕ್ಕಿಸಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಗೆಳೆಯ ಶರತ್ ಜೊತೆ chat ಮಾಡುತ್ತಿರುವಾಗ ಇದರ ಬಗ್ಗೆ ಅರಿವಾಯಿತು. ಧನ್ಯವಾದಗಳು, ಶರತ್.

-ಅ
27.04.2008
11.50PM

Saturday, April 26, 2008

ಅನಾಕೊಂಡಾ..

ಈಮೈಲ್ ಒಂದರಲ್ಲಿ ಬಂದ ವಿಡಿಯೋ.. ಕಳಿಸಿದ ದಿವ್ಯಾಗೆ ಧನ್ಯವಾದಗಳು.


When Anacondas Attack

-ಅ
26.04.2008
9.30PM

Tuesday, April 15, 2008

ಅಪ್ಪನ ಕಥೆ - ಭಾಗ ೨

ಸಂದರ್ಶಕನೊಬ್ಬನನ್ನು ಆಸ್ಟ್ರೇಲಿಯಾಕ್ಕೆ ಕಳಿಸಿದ್ದೇನೆ. ಅವನು ಯಾರನ್ನು ಹೇಗೆ ಸಂದರ್ಶನ ಮಾಡಿದ್ದಾನೆಂಬುದನ್ನು ತಿಳಿದುಕೊಳ್ಳಲು ನನಗೆ ಕುತೂಹಲ.

"ಬನ್ನಿ ಸಮುದ್ರದ ಆಳಕ್ಕಿಳಿಯೋಣ. ಈ ಆಳದಲ್ಲಿ ಸಮುದ್ರ ಬಹಳ ಬಣ್ಣಬಣ್ಣವಾಗಿ ಕಾಣುತ್ತೆ. ನಮ್ಮ ಅತಿಥಿ ಹೆಚ್ಚು ದೂರವಿಲ್ಲ. ಅರ್ಧದಷ್ಟಿಳಿದರೆ ಸಾಕು. ಅದೋ. ಅಲ್ಲೇ ಇದ್ದಾರೆ ನೋಡಿ.."

ಸಂದರ್ಶಕ: ನಮಸ್ಕಾರ, ನೀರ್ಕುದುರೆಗೆ...

ನೀರ್ಕುದುರೆ: ಓಹ್, ನಮಸ್ಕಾರ ಬನ್ನಿ ಬನ್ನಿ....
ಸಂ: ಕ್ಷಮಿಸಿ, ನೀವು 'ಈ' ಹಂತದಲ್ಲಿದ್ದೀರ ಅಂತ ಗೊತ್ತಿರ್ಲಿಲ್ಲ. ಆದರೂ ಸಂದರ್ಶನಕ್ಕೆ ನಮಗೆ ಅಪಾಯಿಂಟ್‍ಮೆಂಟ್ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್.

ನೀಕು: 'ಈ' ಹಂತ ಅಂತ ಯಾಕ್ ಹೇಳ್ತೀರಾ? ನಾನೀಗ ತುಂಬು ಬಸುರ.

ಸಂ: 'ಬಸುರ'??

ನೀಕು: ನೀವು ಹೆಂಗಸರಿಗೆ 'ಬಸುರಿ' ಅಂತೀರಲ್ಲಾ... ನಮ್ಮಲ್ಲಿ ಹೆಂಗಸರು ಗರ್ಭಧಾರಣೆ ಮಾಡೋದಿಲ್ಲ, ಅದಕ್ಕೆ 'ಬಸುರ' ಎಂದು ತಮಾಷೆ ಮಾಡಿದೆ. ಇನ್ನೂ ಎರಡು ದಿನ ಬಾಕಿ ಇದೆ. ನಾನು ಹಡೆಯೋದಕ್ಕೆ.

ಸಂದರ್ಶಕನಿಗೆ ಖುಷಿಯಾಗಿ, ತುಂಬು ಬಸುರ ನೀರ್ಕುದುರೆಯ ಹೊಟ್ಟೆಯನ್ನೊಮ್ಮೆ ಸವರಿ, "Wowwww.... ಎಷ್ಟು ಮಕ್ಕಳ 'ತಂದೆ-ತಾಯಿ' ಆಗ್ತೀರ ಅಂತ ನಿಮ್ಮನಿಸಿಕೆ?"

ನೀಕು: ಹೋದ ಸಲ, ಎರಡು ಸಾವಿರ!! ಈ ಸಲ ಅಷ್ಟು ಇದೆಯೋ ಇಲ್ಲವೋ ಗೊತ್ತಿಲ್ಲ!

ಸಂ: ಎರಡು ಸಾವಿರ!! ಅಬ್ಬಾಹ್!! ಅದ್ ಸರಿ, ನಿಮ್ಮ ಪತ್ನಿಯೆಲ್ಲೋ ಕಾಣಿಸ್ತಿಲ್ವಲ್ಲಾ...

ನೀಕು: ಅವಳು ಬೆಳಿಗ್ಗೆ ಬಂದಿದ್ಲು. ಈಗ ಸುತ್ತಾಡಿಕೊಂಡು ಬರೋಕೆ ಹೋಗಿದ್ದಾಳೆ. ಬೇರೆ ಪ್ರಾಣಿಗಳ ಥರ ನಮ್ಮ ಮೇಲೆ ಡೌಟು ಪಡ್ಬೇಡಿಪ್ಪಾ.. ಮನುಷ್ಯನಿಗಿಂತಲೂ ನಾವು ಪವಿತ್ರರು. ಏಕ ಪತಿ-ಪತ್ನಿ ವ್ರತಸ್ಥರು ನಾವು!!
ಸಂ: ಹೌದಾ?? ಆಶ್ಚರ್ಯ!! ನಿಮ್ಮ ಬಾಳು ಚೆನ್ನಾಗಿರ್ಲಿ. ನಿಮ್ಮ ಬಗ್ಗೆ ವಯಕ್ತಿಕ ಪ್ರಶ್ನೆಗಳನ್ನು ಕೇಳ್ಬೋದಾ?

ನೀಕು: ಏನ್ ಬೇಕಾದ್ರೂ ಕೇಳಿಪ್ಪಾ.. ಗೌಪ್ಯ ಸಂಗತಿಗಳು ಇರೋದು ಮನುಷ್ಯರಲ್ಲಿ ಮಾತ್ರ. ನಾವು ಮುಕ್ತ ಮನಸ್ಸಿನೋರು..

ಸಂ: ನಿಮ್ಮ ದಾಂಪತ್ಯ ಜೀವನದ ಬಗ್ಗೆ ಹೇಳಿ..

ನೀಕು: ನಾನು 'ದೊಡ್ಡೋನ್' ಆದ ಕೆಲವೇ ದಿನಗಳಲ್ಲಿ ನನಗೆ ಅವಳು ಸಿಕ್ಕಳು. ಇದು ನಮ್ಮ ಎರಡನೇ ಸಂಭೋಗದ ಫಲ. 'ಚೀಲ' ತುಂಬಿಸಲು ನಾನೂ ಅವಳೂ ತುಂಬಾ ಹಾತೊರೆಯುತ್ತಾ ಒಬ್ಬರನ್ನೊಬ್ಬರು ಸೇರಿದೆವು. ನಾನು ಗರ್ಭಧಾರಣೆ ಮಾಡಿದೆ. ಅವಳು ಹೊರಗೆ ಹೋಗುತ್ತಾಳೆ. ಪ್ರತಿದಿನ ಬೆಳಿಗ್ಗೆ ಬಂದು ನನ್ನನ್ನೂ ಚೀಲದೊಳಗಿನ ತನ್ನ ಮಕ್ಕಳನ್ನೂ ನೋಡಿ ಹೋಗುತ್ತಾಳೆ. ನಮ್ಮದು ಶಾಶ್ವತ ಪ್ರೀತಿ. ಇದರ ಬಗ್ಗೆ ನನಗೆ ಹೆಮ್ಮೆ!!

ಸಂ: ಬಹಳ ಸಂತೋಷ ನೀಕು.. ನಿಮ್ಮ ಮಕ್ಕಳು?

ನೀಕು: ಚೀಲದಲ್ಲಿ ಈಗ ಸುಮಾರು ಎರಡು ಸಾವಿರ ಮೊಟ್ಟೆಗಳಿವೆ. ಎಲ್ಲವೂ ಹೊರಬರುವವರೆಗೂ ನಾನು ಭದ್ರವಾಗಿ ನೋಡಿಕೊಳ್ತೀನಿ. ಅಕ್ಕ ಪಕ್ಕ ಓಡಾಡೋ ಹಾಗಿಲ್ಲ ಒಂದು ತಿಂಗಳು. ಒಂದು ಹನಿ ನೀರೂ ಕುಡೀದೇ ಉಪವಾಸ ಮಾಡ್ಬೇಕು. ನನ್ನ ಚೀಲದಲ್ಲಿ ಉಪ್ಪು ನೀರು ತುಂಬಿಕೊಂಡಿದ್ದೀನಿ. ಮಕ್ಕಳು ಹೊರಗೆ ಬಂದ ತಕ್ಷಣ ಅವು ತಮ್ಮ ಕಾಲು ಮೇಲೆ ತಾವು ನಿಂತ್ಕೋಬೇಕು ನೋಡಿ, ಅದಕ್ಕೆ ಸಮುದ್ರವನ್ನು ನನ್ನ ಈ ಉದರಚೀಲದಲ್ಲೇ ಸೃಷ್ಟಿ ಮಾಡಿರ್ತೀನಿ.

ಸಂ: ಈಗ ಹೆತ್ತ ಮೇಲೆ, ಮತ್ತೆ ಎಷ್ಟು ದಿನ ಆದ್ಮೇಲೆ....?????

ನೀಕು: ನಿಮ್ಗೆ ತುಂಬಾ ಸಂಕೋಚ ಅನ್ಸುತ್ತೆ ಮಾತಾಡೋಕೆ. ಇರಲಿ. ಈಗ ಹೆತ್ತ ಮೇಲೆ, ನಮ್ಮ ಮುಂದಿನ ಸಂಭೋಗಕ್ಕೆ ಹೆಚ್ಚೇನು ದಿನ ಇರಲ್ಲ. ಒಂದು ವಾರದ ಒಳಗೆ ಅವಳ ಮಿಲನಕ್ಕೆ ನಾನು ಕಾಯುತ್ತಿರುತ್ತೇನೆ. ಮತ್ತೆ ಇನ್ನೆರಡು ಸಾವಿರ ಮಕ್ಕಳ ತಂದೆ ಆಗುತ್ತೇನೆ ನಾನು..

ಸಂ: ಬರೀ ತಂದೆ ಅಲ್ಲ, ತಾಯಿಯೂ ಆಗುತ್ತೀರ ನೀವು.

ನೀಕು: ಏನೇ ಆಗಲಿ, ಅವಳ ಜೊತೆಯ ಮಿಲನದಿಂದಲ್ಲವೇ ನಾನು ಗರ್ಭ ಧರಿಸುವುದು? ಅವಳ ಮೊಟ್ಟೆಗಳಿಂದಲ್ಲವೇ ಈ ಮರಿಗಳು? ಹಾಗಾಗಿ ಅವಳೇ ತಾಯಿ, ನಾನೇ ತಂದೆ.

...................................................................................................................................................................

ನೀರ್ಕುದುರೆಗಳ (Hippocampus ingens) ವೈಶಿಷ್ಟ್ಯವೇನೆಂದರೆ ಗಂಡು ಗರ್ಭ ಧರಿಸುತ್ತೆ, ಹೆಣ್ಣು ತನ್ನ ಗರ್ಭಪಾಶವನ್ನು ಗಂಡಿನ ಚೀಲದೊಳಕ್ಕೆ ಸೇರಿಸಿ ತನ್ನೊಳಗೆ ರಚಿಸಿರುವ ಮೊಟ್ಟೆಗಳನ್ನು ಸೇರಿಸುತ್ತೆ. ಸಂಭೋಗ ಕ್ರಿಯೆಯಲ್ಲಿ ಸೊಗಸಾದ ನೃತ್ಯವನ್ನು ಗಂಡೂ ಹೆಣ್ಣೂ ಆಡುತ್ತವೆ. ಒಂದು ತಿಂಗಳ ಗರ್ಭದ ನಂತರ ಸಾವಿರಕ್ಕೂ ಹೆಚ್ಚು ಚಿಕ್ಕ ಚಿಕ್ಕ ಮರಿಗಳು ಚೀಲದೊಳಗಿನಿಂದ ಹೊರಬರುತ್ತವೆ. ನೂರಿನ್ನೂರು ಕೂಡ ತನ್ನ ಜೀವವನ್ನುಳಿಸಿಕೊಳ್ಳಲು ಪರದಾಡುತ್ತವೆ. ದೊಡ್ಡ ದೊಡ್ಡ ಮೀನುಗಳಿಗೆ ಆಹಾರವಾಗಿ ಹೋಗುತ್ತವೆ. ಇನ್ನೊಂದು ವಿಶೇಷವೆಂದರೆ ನೀರ್ಕುದುರೆಗಳು ಏಕ ಪತಿ-ಪತ್ನಿ ವ್ರತಸ್ತ ಪ್ರಾಣಿಗಳು!! ಯಾವ ಪ್ರಾಣಿಯಲ್ಲೂ ಕಾಣಸಿಗದ ಈ ವಿಶೇಷ ಗುಣ ನೀರ್ಕುದುರೆಯಲ್ಲಿದೆ.

ಮಕ್ಕಳನ್ನು ಹಡೆಯುವ ತಂದೆ - ತಾಯಿ ನೀರ್ಕುದುರೆಯ ವಿಡಿಯೋ ಇಲ್ಲಿದೆ...
ಈ ಸುಂದರವಾದ ಸೊಗಸಾದ ವಿಶೇಷವಾದ ನೀರ್ಕುದುರೆಯನ್ನು ಅನೇಕರು ತಿಂದು ಖಾಲಿ ಮಾಡುತ್ತಿದ್ದಾರೆ - ಬಹಳ ರುಚಿಯಿರುತ್ತೆ ಅಂತ. ಇದನ್ನು ಅಕ್ವೇರಿಯಮ್‍ನಲ್ಲಿ ಸಾಕುವ ಶೋಕಿ ಇನ್ನು ಕೆಲವರಿಗಾದರೆ, ಚೈನಾದವರಿಗೆ ಇದರಿಂದ ಔಷಧಿ ಮಾಡುವ ಅಭ್ಯಾಸ. ಹೀಗಾಗಿ ನೀರ್ಕುದುರೆಗಳು ತಿಂಗಳಿಗೆ ಒಂದು ಲಕ್ಷ ಹುಟ್ಟಿದರೆ ತೊಂಭತ್ತೊಂಭತ್ತು ಸಾವಿರವು ಮನುಷ್ಯನಿಂದ ಹತವಾಗುತ್ತಿವೆ.

ಮುಂದಿನ ಭಾಗದಲ್ಲಿ ಬೇರೊಂದು ಪ್ರಾಣಿಯ 'ಅಪ್ಪನ ಕಥೆ'ಯನ್ನು ನೋಡೋಣ..

-ಅ
15.04.2008
3PM

Friday, April 04, 2008

ಅಪ್ಪನ ಕಥೆ - ಭಾಗ ೧ನಾನು ಹುಟ್ಟಿದಾಗ ನಮ್ಮಮ್ಮ ಎದುರು ಇರಲೇ ಇಲ್ಲ. ವಲಸೆ ಹೋಗಿಬಿಟ್ಟಿದ್ದಳು. ಪಕ್ಕದ ಮಗುವಿನ ಅಮ್ಮ ಅಂತೂ ಹುಟ್ಟಿ ಒಂದು ವಾರವಾದ ಮೇಲೆ ಹಿಂದಿರುಗಿದಳು. ನಮ್ಮಮ್ಮ ಬರಲೇ ಇಲ್ಲ.ಮೊಟ್ಟೆಯಿಟ್ಟು "ಬೈ" ಎಂದು ಹೋದವಳು ಎಲ್ಲಿಗೆ ಹೋದಳೋ ಗೊತ್ತಿಲ್ಲ. ಹುಟ್ಟಿದ ತಕ್ಷಣ ನಾನು ನೋಡಿದ್ದು ಅಪ್ಪನನ್ನು. ಅಪ್ಪನ ಎರಡು ಕಾಲುಗಳ ಮಧ್ಯೆ ಬೆಚ್ಚಗಿದ್ದೆ. ಹೊರಬರಲು ಧೈರ್ಯವಿರಲಿಲ್ಲ, ಮನಸ್ಸೂ ಇರಲಿಲ್ಲ. ಯಾವನು ಚಳಿಯಲ್ಲಿ ಹೊರಬರುತ್ತಾನೆ? ಅಪ್ಪನ ಸ್ಪರ್ಶ ತುಂಬಾ ಹಿತಕರವಾಗಿತ್ತು.ಆದರೆ, ನನಗೆ ಹಸಿವಾದಾಗ, ಅಪ್ಪ ತುಂಬಾ ಪರದಾಡುತ್ತಿದ್ದ. ಕೆಳಗಿದ್ದ ಮಂಜುಗೆಡ್ಡೆಯನ್ನೇ ತಿಂದು, ಬಾಯಲ್ಲಿ ಅರ್ಧ ಕರಗಿಸಿಕೊಂಡು, ಇನ್ನರ್ಧ ನನಗೆ ಕೊಡುತ್ತಿದ್ದ. ನನ್ನ ಆಹಾರವು ಅದೇ ಎಂದು ನಂಬಿದ್ದೆ. ಮೊನ್ನೆಯಷ್ಟೇ ನನ್ನ ಗೆಳೆಯ ಮೀನು ಹಿಡಿಯುವುದನ್ನು ಹೇಳಿಕೊಟ್ಟ ಮೇಲೆ ನನಗೆ ಅರ್ಥವಾಯಿತು, ಅಪ್ಪ ವಿಧಿಯಿಲ್ಲದೆ ನನಗೆ ಆ ಆಹಾರ ಕೊಟ್ಟು ಬೆಳೆಸಿದ ಎಂದು.


ಅಮ್ಮ ನಿಜಕ್ಕೂ ಎಲ್ಲಿ ಹೋದಳು? ಎಲ್ಲಾ ಪ್ರಾಣಿಗಳಿಗೂ ತಾಯಿಯೇ ಮೊದಲ ದೇವರಂತೆ. ಅದರಲ್ಲೂ ನನ್ನಂಥ ಧಡೂತಿ ದೇಹದ ಪಕ್ಷಿಗಳು ತಾಯಿಯನ್ನು ನೋಡದೇ ಜನ್ಮ ತಾಳುವುದು ಎಂದರೆ ಯಾವ ನ್ಯಾಯ? ನಮ್ಮ ಗುಂಪಿನಲ್ಲೇ ಒಂದು ಮಗು ಸತ್ತು ಹೋಯಿತು. ಅದರ ಅಮ್ಮನೂ ಬರಲೇ ಇಲ್ಲ. ಎಲ್ಲಿಗೆ ಹೋಗಿದ್ದಳು? ಹೇಗೋ ನನ್ನ ಜೀವ ಉಳಿಯಿತು. ಈಗ ನನಗೂ ಒಬ್ಬಳು ಸಂಗಾತಿ ಕಾಯುತ್ತಿದ್ದಾಳೆ. ಅಮ್ಮನು ಅಪ್ಪನನ್ನು ಬಿಟ್ಟು ಹೋದ ಹಾಗೆ ಇವಳು ನನ್ನ ಬಿಟ್ಟು ಹೋಗದಿದ್ದರೆ ಅಷ್ಟೇ ಸಾಕು!

....................................................................................

ನಮ್ಮದು ಬಹಳ ದೊಡ್ಡ ಗುಂಪು. ಎಲ್ಲರಿಗೂ ನಮ್ಮದೇ ಆದ ಸಂಸಾರ - ಗಂಡ ಹೆಂಡತಿ. ಆದರೆ ಮನೆ ಮಾತ್ರ ಕಟ್ಟಲು ಸಿದ್ಧರಿಲ್ಲ. ಬಯಲಲ್ಲೇ ನಮ್ಮ ವಾಸ. ಕೋಟ್ಯಾನುಕೊಟಿ ಮಂದಿಗಳು ನಾವು ಬಯಲಲ್ಲೇ ಇರುತ್ತೇವೆ. ಚಳಿಗಾಲದಲ್ಲಿ ಎಲ್ಲರದೂ ಒಟ್ಟಿಗೇ ಮಿಲನದ ಕಾರ್ಯಕ್ರಮ. ಗಂಡನು ಎಂದೂ ನನ್ನ ಬಿಟ್ಟು ಬೇರೆ ಹೆಣ್ಣಿನ ಮೋಹಕ್ಕೆ ಸಿಲುಕಲಿಲ್ಲ.


ಹೆಚ್ಚು ಕಡಿಮೆ ಎರಡು ತಿಂಗಳುಗಳ ಕಾಲ ನಾನು ಗರ್ಭವತಿಯಾಗಿದ್ದೇನೆ. ಪಕ್ಷಿಸಂಕುಲದಲ್ಲಿ ಬೇರೆ ಯಾರು ತಾನೆ ಇಷ್ಟು ದಿನ ಗರ್ಭವನ್ನು ಧರಿಸಿಯಾರು? ನನ್ನ ತಾಯ್ತನವನ್ನು ಪಡೆದುಕೊಳ್ಳುವವರೆಗೂ ನನಗೆ ಸರಿಯಾದ ಆಹಾರವೇ ಇಲ್ಲ. ನಮ್ಮೂರಲ್ಲಿ ಎಲ್ಲಿ ನೋಡಿದರೂ ಬರೀ ಮಂಜು. ನಾನು ಹೆತ್ತದ್ದು ಚಳಿಗಾಲದಲ್ಲಿ. ನಮ್ಮ ಜಾತಿಯವರು ಮಾತ್ರ ಚಳಿಗಾಲದಲ್ಲಿ ಹೆರುವುದು. ಆ ಕಾಲದಲ್ಲಿ ನೆಲವೆಲ್ಲವೂ ಗಟ್ಟಿಯಾಗಿ ಗೆಡ್ಡೆಯಾಗಿಬಿಟ್ಟಿರುತ್ತೆ. ಎರಡು ತಿಂಗಳು ನಾನು ಹೊಟ್ಟೆಗೆ ಮೋಸ ಮಾಡಿಕೊಂಡಿದ್ದೆ. ಗಂಡ ಏನೋ ತಂದು ಕೊಡುತ್ತಿದ್ದ, ಆದರೆ ಅದು ಸಾಕಾಗುತ್ತಿರಲಿಲ್ಲ. ಸರಿ, ಮೊಟ್ಟೆಯನ್ನು ಅವನ ಕೈಗೆ ಕೊಟ್ಟು ನಾನು ಆಹಾರ ಹುಡುಕಿಕೊಂಡು ಹೊರಟೆ. ಮಗು ಹುಟ್ಟೋ ವೇಳೆಗೆ ಆಹಾರ ಸಮೇತವಾಗಿ ಹಿಂದಿರುಗಬೇಕು ಎಂಬ ಉದ್ದೇಶದಿಂದಲೇ ಹೊರಟೆ. ಯಾಕೆಂದರೆ ಮಗು ಹುಟ್ಟೋ ವರೆಗೂ ಮೊಟ್ಟೆಯನ್ನು ನನ್ನ ಗಂಡ ತಾನೇ ನೋಡಿಕೊಳ್ಳೋದು! ಅವನಿಗೂ ತಿಂಡಿ ಬೇಕು.


ಉದ್ದೇಶವೇನೋ ಇತ್ತು. ಆದರೆ ಈಗ ದಾರಿ ತಪ್ಪಿ ಹೋಗಿದ್ದೇನೆ. ಎಲ್ಲಿಗೆ ಹೋಗಬೇಕೆಂಬುದೇ ಗೊತ್ತಾಗುತ್ತಿಲ್ಲ. ನಾನು ಹೆತ್ತು ಒಂದು ವರ್ಷವಾಗುತ್ತ ಬಂತು. ನನ್ನ ಮಗು ಎಲ್ಲಿದೆಯೋ, ಹೇಗಿದೆಯೋ ಗೊತ್ತಿಲ್ಲ. ನನ್ನ ಗಂಡನು ಏನು ತಿಂದನೋ ಏನು ಕಥೆಯೋ.. ಅಯ್ಯೋ ವಿಧಿಯೇ.. ನನ್ನ ಗೆಳತಿ ಹೊರಟ ಎರಡು ದಿನಕ್ಕೇ ಸತ್ತು ಹೋದಳು. ಪಾಪ, ಅವಳ ಗಂಡ ಮಗುವಿನ ಪಾಡು ಏನಾಯಿತೋ..

.....................................................................................


ಒಂದುವರೆ ತಿಂಗಳು ಕಣ್ರೀ.. ಒಂದು ಅಡಿಯೂ ಸಹ ನಾನು ನಡೆದಿಲ್ಲ. ನಿಂತಲ್ಲಿ ಗೂಟ ಹೊಡ್ಕೊಂಡು ನಿಂತಿದೀನಿ. ನನ್ನ ಎರಡು ಕಾಲುಗಳ ಮಧ್ಯೆ ಮೊಟ್ಟೆ, ಆಮೇಲೆ ಮಗು. ಇಡೀ ಒಂದುವರೆ ತಿಂಗಳು ನಾನು ಒಂದು ಗುಟಕು ನೀರೂ ಕುಡಿದಿಲ್ಲ. ನನ್ನ ಕಣ್ಣು, ಮೂಗು, ಕಿವಿ, ಎಲ್ಲಾ ಇಂದ್ರಿಯಗಳೂ ನನ್ನ ಮಗುವನ್ನು ಕಾಪಾಡುವುದರಲ್ಲೇ ತೊಡಗಿತ್ತು. ನನ್ನ ಕೈಗೆ ಮೊಟ್ಟೆಯನ್ನಿತ್ತು ಹೋದವಳು ಇವತ್ತು ಬರುತ್ತಾಳೆ, ನಾಳೆ ಬರುತ್ತಾಳೆ ಅಂತ ಕಾದೆ ಕಾದೆ... ಬರಲೇ ಇಲ್ಲ. ಆಹಾರವೇನು ನಮ್ಮ ಬಾಯಿಗೆ ತಾವೇ ಹುಡುಕಿಕೊಂಡು ಬರುತ್ತವೆಯೇ? ಅವಳು ಬಸುರಿಯಾಗಿದ್ದಾಗ ನಾನು ಏಳುನೂರು ಅಡಿ ಆಳಕ್ಕೆ ಧುಮುಕಿ, ಒಂದು ಸ್ಕ್ವಿಡ್ ತಂದುಕೊಟ್ಟಿದ್ದೆ. ಒಂದು ವಾರ ತಿಂದಿದ್ದಳು ಒಬ್ಬಳೇ. ಲಕ್ಕವಿಲ್ಲದಷ್ಟು ಮೀನುಗಳನ್ನು ತಂದುಕೊಟ್ಟಿದ್ದೆ. ನೆಲ ಗೆಡ್ಡೆಯಾಗಿದೆ ಅಂತ ನನ್ನನ್ನೂ ಹುಟ್ಟಲಿರುವ ಮಗುವನ್ನೂ ಬಿಟ್ಟು ಹೋದರೆ ಯಾವ ನ್ಯಾಯ ರೀ..

ಮಗು ಹುಟ್ಟೇ ಬಿಟ್ಟಿತು. ಅವಳಂತೂ ಬರಲಿಲ್ಲ. ಇನ್ನೇನು ಮಾಡಲಿ, ಮಗುವನ್ನು ಸಾಕಲೇ ಬೇಕಲ್ಲವೇ? ಬಿಟ್ಟು ಹೋಗಿ ಮೀನು ಹಿಡಿಯೋದಕ್ಕಾಗಲ್ಲ. ಐಸನ್ನೇ ಕೊಟ್ಟೆ ಕಣ್ರೀ.. ನಾನೂ ಅದನ್ನೇ ತಿಂದೆ. ಸುಮಾರು ಮೂರು ತಿಂಗಳು ನಾನು, ನನ್ನ ಮಗ ಬರೀ ಐಸು ತಿಂದುಕೊಂಡು ಬದುಕಿದ್ದೀವಿ. ಈಗ ಅವನು ದೊಡ್ಡೋನಾಗಿದ್ದಾನೆ. ನಾನೂ ಮೀನು ಹಿಡಿಯುತ್ತೇನೆ, ಅವನೂ ಹಿಡಿಯುತ್ತಾನೆ. ಈಗ ನನಗಾಗಲೀ ಅವನಿಗಾಗಲೀ ಅವಳ ಅವಶ್ಯಕತೆಯೇ ಇಲ್ಲ. ಅವಳು ಎಲ್ಲಿ ಹೋಗಿದ್ದಾಳೋ ಏನೋ.


ಆದರೆ, ಒಂದು ಮಾತ್ರ ನಾನು ಮರೆಯೋದಕ್ಕೆ ಆಗೋದೇ ಇಲ್ಲ. ನನ್ನ ದೇಹದ ಮೂರನೇ ಒಂದು ಭಾಗದಷ್ಟು ತೂಕ ಕಡಿಮೆ ಮಾಡಿಕೊಂಡ ನಾನು, ನನ್ನ ಮಗನನ್ನೂ ಕರೆದುಕೊಂಡು ನೂರು ಕಿಲೋಮೀಟರು ಚಾರಣ ಮಾಡಿದ್ದೀನಿ - ಅದೂ ಬರೀ ಐಸು ತಿಂದುಕೊಂಡು. ಯಾಕೆ ಅಂತೀರ? ನಾವಿದ್ದ ಜಾಗದಲ್ಲಿ ಊಟವೇ ಇಲ್ಲ! ನೆಲವೆಲ್ಲಾ ಗೆಡೆ! ನಮಗೆ ಊಟ ಬೇಕಿತ್ತು. ನೂರು ಕಿ.ಮಿ. ನಡೆದರೇನೇ ನಮಗೆ ಊಟ. ನನ್ನ ಕಾಲುನೋವು ಇನ್ನೂ ನೀಗಿಲ್ಲ. ಇರಲಿ, ಇದು ನನ್ನ ಹಣೆಬರಹ. ಮುಂದಿನ ಸಲ ಹೀಗಾಗದ ಹಾಗೆ ನೋಡಿಕೊಳ್ಳುತ್ತೀನಿ. ಮುಂದಿನ ಹೆಂಡತಿ, ಮಗು ಬರಲಿ..

.....................................................................................

ಅಂಟಾರ್ಕ್ಟಿಕಾದಲ್ಲಿ ವಿಶೇಷವಾಗಿ ಕಾಣಿಸುವ ಪಕ್ಷಿ - ಎಂಪರರ್ ಪೆಂಗ್ವಿನ್ (Aptenodytes forsteri). ಇದು ಎಲ್ಲಾ ಬಗೆಯ ಪೆಂಗ್ವಿನ್‍ಗಿಂತಲೂ ದೊಡ್ಡದಾದದ್ದು. -80 ಡಿಗ್ರೀ ತಾಪಮಾನವನ್ನೂ ತಡೆಯಬಲ್ಲ ಚರ್ಮವನ್ನು ಹೊಂದಿರುತ್ತವೆ. ಸ್ಕ್ವಿಡ್‍ಗಳು, ಮೀನುಗಳು, ಮತ್ತು ಏಡಿಗಳನ್ನು ತಿಂದು ಬದುಕುವ ಈ ಪಕ್ಷಿಯ ಸಂತತಿ ಬೆಳವಣಿಗೆ ಕ್ರಿಯೆ ಮಾತ್ರ ಬಹಳ ವಿಭಿನ್ನವಾಗಿದೆ. ಮೇಲೆ ಮಗ, ಅಮ್ಮ ಮತ್ತು ಅಪ್ಪ ಮೂರೂ ಪೆಂಗ್ವಿನ್‍ಗಳ ಮಾತುಗಳಿಂದ ಅವು ಹೇಗೆ ವಿಶಿಷ್ಟವೆಂದು ತಿಳಿದಿದೆಯೆನಿಸುತ್ತೆ. ಸಂತತಿ ಬೆಳವಣಿಗೆ ಕ್ರಿಯೆಯಲ್ಲಿ ಒಂದೇ ಸ್ಥಳದಲ್ಲಿ ಸರಿಸುಮಾರು ಎರಡು ಲಕ್ಷ ಪೆಂಗ್ವಿನ್ನುಗಳು ತಮ್ಮ ತಮ್ಮ ಸಂಗಾತಿಗಳೊಡನೆ ಸೇರಿರುತ್ತವೆ. ಅಚ್ಚರಿಯೆಂದರೆ ಯಾವುದಕ್ಕೂ ತನ್ನ ಸಂಗಾತಿ ಯಾರು ಎಂದು ಎಂದೂ ಗೊಂದಲವುಂಟಾಗುವುದಿಲ್ಲ. ಆಹಾರಕ್ಕಾಗಿ ವಲಸೆಗೆ ಹೋದ ತಾಯಿ ಪಕ್ಷಿ ಸಾಧಾರಣವಾಗಿ ಹಿಂದಿರುಗುತ್ತದೆ. ಕೆಲ ತಾಯಿಗಳು ಅನೇಕ ಕಾರಣಗಳಿಂದ ಬರುವುದಿಲ್ಲ. ದಾರಿ ತಪ್ಪಬಹುದು, ಸತ್ತು ಹೋಗಬಹುದು ಇತ್ಯಾದಿ. ತಂದೆ ಪೆಂಗ್ವಿನ್ನಿನ ಜವಾಬ್ದಾರಿ ಆಗ ವಿಪರೀತ ಹೆಚ್ಚುತ್ತದೆ. ಎಷ್ಟೋ ಸಲ ತಂದೆ - ಮಗು ಎರಡೂ ಆಹಾರವಿಲ್ಲದೆ ಸತ್ತು ಹೋಗುತ್ತವೆ.ಸೃಷ್ಟಿ ವಿಸ್ಮಯವಲ್ಲವೇ?

ಮುಂದಿನ ಭಾಗದಲ್ಲಿ ಬೇರೊಂದು ಪ್ರಾಣಿಯ "ಅಪ್ಪನ ಕಥೆ"ಯನ್ನು ತೆಗೆದುಕೊಂಡು ಬರುತ್ತೇನೆ..

-ಅ
04.04.2008
2AM

ಒಂದಷ್ಟು ಚಿತ್ರಗಳು..