Sunday, March 30, 2008

ಸರ್ಪಸಂಸ್ಕಾರರಾಹು ಕೇತುಗಳ ಮಧ್ಯೆ ಮಿಕ್ಕೆಲ್ಲಾ ಗ್ರಹಗಳೂ ವಕ್ಕರಿಸಿದ್ದರೆ ಅದನ್ನು ಕಾಳಸರ್ಪದೋಷವೆನ್ನಬಹುದು. ಸಾಕ್ಷಾತ್ ಶ್ರೀಕೃಷ್ಣನನ್ನೂ ಬಿಡಲಿಲ್ಲ ಈ ಸರ್ಪದೋಷ. ದೋಷಪರಿಹಾರಕ್ಕೇನು ಮಾಡಬೇಕು? ಸರ್ಪಸಂಸ್ಕಾರ! ಮನುಷ್ಯರ ಸಂಸ್ಕಾರದಂತೆ ಸರ್ಪಸಂಸ್ಕಾರವನ್ನೂ ಮಾಡುತ್ತಾರೆ. ಸರ್ಪವನ್ನು ಪೂಜಿಸುವಾಗ ವಿಪರೀತ ಮಡಿಯಿಂದಿರಬೇಕಂತೆ. ನಾಗಪ್ಪನು ಮಡಿಯಲ್ಲಿರದಿದ್ದರೆ ಕುಪಿತನಾಗುತ್ತಾನಂತೆ. ಹಿಂದುಗಳಲ್ಲಿ, ಒಟ್ಟಿನಲ್ಲಿ ಎಲ್ಲಾ ಪ್ರಾಣಿಗಳಂತೆ ಹಾವನ್ನೂ ದೇವರ ಸ್ಥಾನಕ್ಕೇರಿಸಿದ್ದಾರೆ. ಬಹುಶಃ ನಾಗಪ್ಪನು ಎಲ್ಲಾ ಪ್ರಾಣಿ ದೇವರುಗಳಿಗಿಂತ ಹೆಚ್ಚು ಹೆದರಿಸುವವನು ಎನ್ನಿಸುತ್ತೆ. ಹಾವನ್ನು ಕೊರಳಿಗೆ ಸುತ್ತಿಕೊಂಡಿರುವ ಶಿವನಿಗೂ ಸಹ ಜನ ಅಷ್ಟು ಹೆದರುವುದಿಲ್ಲ.
ನಾಗಪ್ಪನಿಗೆ ಹುತ್ತದಲ್ಲಿ ಪೂಜೆ ಮಾಡುತ್ತಾರೆ (ಹೀಗೆ ಮಾಡುವುದರಿಂದ ಹಾವುಗಳ ಪ್ರಾಣಕ್ಕೆ ತೊಂದರೆ ಎಂಬುದು ಎಲ್ಲರಿಗೂ ಅರಿವಾದರೆ ಒಳ್ಳೆಯದು.), ಕಲ್ಲಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ, ದೇವಸ್ಥಾನಗಳನ್ನು ಕಟ್ಟಿಸುತ್ತಾರೆ, ಮನೆಗೆ ಹಾವಾಡಿಗರು ಬಂದರೆ ಬುಟ್ಟಿಯೊಳಗಿನ ಹಾವುಗಳಿಗೆ ನಮಸ್ಕರಿಸುತ್ತಾರೆ.. ಭಾರತದ ಹಾವುಗಳು ಪುಣ್ಯ ಮಾಡಿವೆ!
ವಿಷಪೂರಿತ ಹಾವುಗಳನ್ನು ಸೆರೆಹಿಡಿದು, ಅದರಿಂದ ವಿಷವನ್ನು ಹೊರತೆಗೆದು, ಆ ವಿಷವನ್ನು ಔಷಧಿಗೆ ಬಳಸುವ ಕೆಲಸಗಾರರಿದ್ದಾರೆ. ಅದಕ್ಕೆ ಬೇರೆಯದೇ ಲೈಸೆನ್ಸಿನ ಅಗತ್ಯವಿದೆ. ಹಾವಿನ ವಿಷ ತೆಗೆಯುವವನಿಗಿರಲಿ, ಹಾವನ್ನು ಕಾಪಾಡುವವನಿಗೂ ಸಹ ಲೈಸೆನ್ಸು ಇರಬೇಕು. Snake Rescue License! ಔಷಧಿಯನ್ನು ವಿಷದ ಹಾವಿನಿಂದ ಕಚ್ಚಿಸಿಕೊಂಡಾಗಲೇ ಬಳಸುವುದು ಎಂಬುದೂ ವಿಶೇಷ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಹಾವಿನ ವಿಷವು ತನ್ನ ವಿಷಕ್ಕೇ ಔಷಧಿಯಾಗುತ್ತೆ. ಆದರೆ ನಮ್ಮಲ್ಲಿ ಯಾರುಯಾರೋ ಹಾವು ಹಿಡಿದು, 'ಹಲ್ಲು ಕೀಳುವ' ಕೆಲಸ ಮಾಡುತ್ತಿರುವುದು ದುರಂತ. ಹಾವುಗಳ ಹಲ್ಲು ಕೀಳುವುದು ಸಾಮಾನ್ಯವಾಗಿ ಹಾವಾಡಿಗರು. ಆದರೆ ಹಲ್ಲು ಕೀಳುವುದರಿಂದ ಹಾವಿನ ವಿಷ ಹೋಗುವುದಿಲ್ಲ. ಬದಲಿಗೆ ಕೆಲ ದಿನಗಳ ನಂತರ ಹಾವೇ ಹೋಗುತ್ತೆ!
ಈ ಹಾವಾಡಿಗರು ನಮ್ಮಲ್ಲಿ ಹುಟ್ಟಿಕೊಂಡಿದ್ದಾದರೂ ಹೇಗೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಇದು ಶತಶತಮಾನದಿಂದಲೂ ಬಂದಿರುವ ಕಸುಬು. ಹೊಟ್ಟೆಪಾಡಿಗೆ ಪ್ರಾಣಿಗಳನ್ನು ಅವಲಂಬಿಸುವುದು ಕೆಲವು ವರ್ಗದ ಜನರಿಗೆ ಸಹಜ. ಜೇನು, ಕರಡಿ, ಹುಲಿ, ಚಿರತೆ, ಯಾವುವೂ ಇದಕ್ಕೆ ಹೊರೆತುಪಡಿಸಿಲ್ಲ. ನಾಗರ ಹಾವು ಹೆಡೆಯೆತ್ತಿದಾಗ ಬಹಳ ಸುಂದರವಾಗಿ ಕಾಣಿಸುವುದರಿಂದ, ಪುಂಗಿಯನ್ನು ಹಾಗೆ ಹೀಗೆ ಅಲುಗಾಡಿಸಿದಾಗ ಹಾವೂ ತನ್ನ ಹೆಡೆಯನ್ನು ತೂಗುವುದರಿಂದ ಆ ಕಾಲದ ಹಣವಂತರು ಖುಷಿಗೊಂಡು, ಹಾವಾಡಿಗನು ಏನೋ ದೊಡ್ಡ ಸಾಧನೆ ಮಾಡಿದ್ದಾನೆಂದು ಹೊಗಳಿ ಬಹುಶಃ ಹಣ ಕೊಟ್ಟಿರಬೇಕು, ಈ ಕಸುಬು ಮುಂದುವರೆದಿರಬೇಕು!
ಬಹಳ ಹಿಂದಿನ ಕಾಲದಲ್ಲಿ ಬೆಡಗಿಯರು ತಮ್ಮ ಬೆತ್ತಲೆ/ಅರೆಬೆತ್ತಲೆ ಮೈಮೇಲೆ ಹಾವುಗಳನ್ನು ಹೊದ್ದು ಚಿತ್ರ ಬರೆಸಿಕೊಳ್ಳುವುದು ಹವ್ಯಾಸವೂ ಆಗಿತ್ತು. ಈಗಿನ ಎಷ್ಟೋ ರೂಪದರ್ಶಿಗಳು ಅದನ್ನು ಪುನರಾವರ್ತಿಸುತ್ತಿರುವುದನ್ನು ನಾವು ನೋಡುತ್ತೇವೆ. ಸಾಮಾನ್ಯವಾಗಿ ಇವರುಗಳು ಅತಿ ದಪ್ಪಗಿರುವ, ಮತ್ತು ಕೊಂಚವೂ ತೊಂದರೆ ಮಾಡದ ರಾಕ್ ಪೈಥಾನ್‍ಗಳನ್ನು ಮೈ ಮೇಲೆ ಬಿಟ್ಟುಕೊಳ್ಳುತ್ತಾರೆ. ಆದರೆ, ಕೆಲವು ರೂಪದರ್ಶಿಗಳು ಮತ್ತೆ ಕೆಲವು ದಾಖಲೆಯನ್ನು ನಿರ್ಮಿಸಲು ಹೊರಟಿರುವವರು ಬ್ಲಾಕ್ ಮಾಂಬಾ ಕೂಡ ಮೈಮೇಲೆ ಹರಿಸಿಕೊಳ್ಳುತ್ತಾರೆಂಬುದು ವಿಪರ್ಯಾಸ.
AXNನಂಥ ಚಾನೆಲ್ಲುಗಳಲ್ಲಿ ಆಗಾಗ್ಗೆ ಬಿತ್ತರವಾಗುವ ಕಾರ್ಯಕ್ರಮಗಳಲ್ಲಿ ನೂರಾರು ಹಾವುಗಳನ್ನು ಮುಖದ ಮೇಲೆ ಸುರಿದುಕೊಳ್ಳುವುದು, ಡಬ್ಬಿಯೊಂದರಲ್ಲಿ ನೂರಾರು ಹಾವುಗಳಿದ್ದು ಅದರೊಳಗೆ ಕೈಹಾಕಿ ಬೀಗದ ಕೈ ಹುಡುಕುವುದು ಇವೆಲ್ಲಾ ಸಾಮಾನ್ಯ ದೃಶ್ಯ. ಹಾವುಗಳನ್ನು ಹೊದ್ದು ವೇದಿಕೆಯ ಮೇಲೆ ನೃತ್ಯವಾಡುವುದೂ ಸಹ ರೂಢಿಯಲ್ಲಿದೆ.
ಮಡಿಯಿಂದ ನಾಗಪ್ಪನನ್ನು ಪೂಜಿಸುವ ನಮ್ಮ ಭಾರತದಲ್ಲೂ ಹಾವುಗಳ ಚರ್ಮಗಳನ್ನು ಹರಿದು ತುಂಡು ತುಂಡು ಮಾಡಿ ಚಪ್ಪಲಿ, ಪರ್ಸು, ಚೀಲ ಮಾಡಿಕೊಳ್ಳುತ್ತಾರೆಂದರೆ ಅಚ್ಚರಿಯೇನಿಲ್ಲ. ಹಸುಗಳು, ಮೊಸಲೆಗಳು, ತಿಮಿಂಗಿಲಗಳು, ಹಾವುಗಳು ಈ ಲೆದರ್ ಇಂಡಸ್ಟ್ರಿಗೆ ಸಾಮಾನ್ಯವಾಗಿ ತಮ್ಮ ಚರ್ಮಗಳನ್ನರ್ಪಿಸುವ ಸಂಪನ್ಮೂಲ ವಸ್ತುಗಳು. Raw Materials!!

ಹಾವುಗಳನ್ನು ಹಿಡಿದು, ಅದನ್ನು ಕಾಪಾಡುವಂತೆ, ಹಾವುಗಳ ಬಗ್ಗೆ ತಿಳಿವಳಿಕೆ ಹೇಳುವವರ ಅಗತ್ಯವೂ ಕೂಡ ಜಗತ್ತಿಗಿದೆ. ಹಾವನ್ನು 'ಕ್ರೂರ' ಎಂದು ಬಾಲ್ಯದಲ್ಲಿ ಯಾರೋ ಹೇಳಿರುವುದು ಮನಸ್ಸಿನಲ್ಲಿ ಹೇಗೆ ಉಳಿದುಕೊಂಡುಬಿಟ್ಟಿರುತ್ತೆ ಅಂದರೆ, ಹಾವನ್ನು ಕಂಡರೆ ಸಾಕು ಒಂದು ಮೈಲಿ ದೂರ ಓಡುತ್ತಾರೆ ಅಥವಾ ಧೈರ್ಯಗೆಟ್ಟು ದೊಡ್ಡ ದೊಣ್ಣೆ ತೆಗೆದುಕೊಂಡು ಹಾವಿನ ತಲೆಯ ಮೇಲೆ ಬೀಸಿ ಕೊಲ್ಲುತ್ತಾರೆ. ಹೇಡಿಗಳು!! ಹಾವುಗಳ ಬಗ್ಗೆ ಅನೇಕ 'ಅಜ್ಜಿ' ಕತೆಗಳನ್ನು ಕೇಳಿ ಮನಸ್ಸು ಕೆಡಿಸಿಕೊಂಡವರು ನಾಗರಪಂಚಮಿಯ ದಿನ ತಪ್ಪದೆ ಕಲ್ಲು ನಾಗರ ಹಾವಿಗೆ ಹಾಲೆರಯದೆ ಇರುವುದಿಲ್ಲ. ತಿಳಿದವರು ತಮ್ಮ ಮಕ್ಕಳಿಗೆ, ಸುತ್ತಮುತ್ತಲಿನವರಿಗೆ ಅರಿವು ಮೂಡಿಸುವುದು ಬಹಳ ಅಗತ್ಯವಿದೆ. ಹಾವುಗಳಿಗೆ ರಕ್ಷಣೆ ಬೇಕಿದೆ, ಗೌರವ ಬೇಕಿದೆ, ಪ್ರೀತಿ ಬೇಕಿದೆ!
ಥಾಯ್ಲೆಂಡಿನಲ್ಲಿ ಹಾವನ್ನು ತಿನ್ನುವವರು ಎಷ್ಟು passionate ಆಗಿರುತ್ತಾರೆಂದರೆ, ಗಾಡಿಯ ಮೇಲೆ ನಮಗೆ ಬೇಕಾದ ಜೋಳವನ್ನು ನಾವು ಆರಿಸಿಕೊಳ್ಳುತ್ತೀವಲ್ಲಾ, ಹಾಗೆ ಶೋಕೇಸಿನಲ್ಲಿರುವ ಸರ್ಪವನ್ನು ಅವರು ಆರಿಸಿಕೊಳ್ಳಬಹುದು. ಹಾವು ಇನ್ನೂ ಬದುಕಿರುತ್ತೆ. ನಂತರ ಅವನ ಎದುರೇ ಅದರ ಚರ್ಮವನ್ನು ಸುಲಿದು, ಹುರಳಿಕಾಯಿ ತೊಟ್ಟು ಮುರಿದಂತೆ ಅದರ ಬಾಲವನ್ನು ಮುರಿದು, ಬೇಯಿಸಿ ತಟ್ಟೆಯಲ್ಲಿ ಹಾಕಿಕೊಡುತ್ತಾನೆ. ಥಾಯ್ಲೆಂಡಿನಲ್ಲಿ ಇನ್ನೊಂದು ವಿಶೇಷವೆಂದರೆ, ಹಾವನ್ನು ವೈನ್ ಬಾಟಲಿಯೊಳಗೆ, ವ್ಹಿಸ್ಕಿ ಬಾಟಲಿಯೊಳಗೆ ಮುಳುಗಿಸಿ, ಅದಕ್ಕೆ ಚೆನ್ನಾಗಿ ಕುಡಿಸಿ, ನಂತರ ಕುಡಿದು ಟೈಟಾದ ಹಾವನ್ನು ಇವರು ತಿನ್ನುತ್ತಾರೆ. ಇಂಥಾ ವೈನ್‍ಗೆ, ವ್ಹಿಸ್ಕಿ ಬಹಳ ಬಹಳ ತುಟ್ಟಿ!

ಇಲ್ಲೊಂದು ವಿಡಿಯೋ, ಥಾಯ್ಲೆಂಡಿನ ರಾತ್ರಿಯೂಟದ ಬಗ್ಗೆ..
ಇವು ನೆನಪಿರಲಿ..

--> ಹಾವನ್ನು ಪೂಜೆ ಮಾಡುವುದಿದ್ದರೆ ಮೊಟ್ಟೆ ಕೊಟ್ಟರೆ ಒಳ್ಳೆಯದು. ಹಾವು ಹಾಲು ಕುಡಿಯುವುದಿಲ್ಲ. ಅದು ಮಾಂಸಾಹಾರಿ.

--> ಹಾವು ಕಂಡರೆ ಕಿರುಚಿಕೊಂಡರೆ ಎಳ್ಳಷ್ಟೂ ಪ್ರಯೋಜನವಾಗದು. ಹಾವಿಗೆ ಕಿವಿಯೇ ಇಲ್ಲ. ಅದು ಕಂಪನಾಶಕ್ತಿಯಿಂದ ಪ್ರತಿಕ್ರಯಿಸುತ್ತೆ.

--> ಹಾವುಗಳನ್ನು ಕೊಲ್ಲುವುದು ಕಾನೂನು ಪ್ರಕಾರ ಅಪರಾಧ. ವರ್ಷಗಟ್ಟಲೆ ಕಂಬಿ ಎಣಿಸುವುದಂತೂ ಖಚಿತ.

--> ಹಾವು ಮನುಷ್ಯನನ್ನು ತಿನ್ನುವುದಿಲ್ಲ.

--> ಭಾರತದಲ್ಲಿ ರಾಟಲ್ ಸ್ನೇಕ್ ಇಲ್ಲ, ಅನಾಕೊಂಡಾ ಇಲ್ಲ - ಫ್ಲೈಯಿಂಗ್ ಸ್ನೇಕ್ ಇದೆ, ಕರ್ನಾಟಕದಲ್ಲೇ ಇದೆ!

--> ಹಾವಿಗೆ ನೆನಪಿನ ಶಕ್ತಿ ತೀರ ಕಡಿಮೆ. ಅದರ ಮೆದುಳು ಒಂದು ಇಂಚು ಇರಬಹುದಷ್ಟೆ.

--> ಹಾವು ಕಚ್ಚಿದಾಗ ಬಹುಪಾಲು ಮಂದಿ ಸಾಯುವುದು ಗಾಬರಿಯಿಂದ, ವಿಷದಿಂದಲ್ಲ. ಕೇರೆ ಹಾವು ಕಚ್ಚಿ ಸತ್ತಿರುವವರೂ ಇದ್ದಾರೆ!

--> ಹಾವಿಗೆ ಸಾಮನ್ಯವಾಗಿ ತೊಂದರೆಯಾವುದು ಇವುಗಳಿಂದ - ಮುಂಗುಸಿ, ನವಿಲು, ಹದ್ದು, ಮತ್ತು ಮನುಷ್ಯ.

--> ಹಾವುಗಳಿಗೆ ಬೇಕಾಗಿರುವುದು ಕರುಣೆಯಲ್ಲ, ಪ್ರೀತಿ, ರಕ್ಷಣೆ, ಗೌರವ. ಸಲ್ಲಿಸೋಣ. ಇದಲ್ಲವೇ ಸರ್ಪಸಂಸ್ಕಾರ ಎಂದರೆ?-ಅ
31.03.2008
1AM

12 comments:

 1. very gud write up. nange monne maneli haavige sambhandsidde "ashlesha bali" homa madsiddu!!! sumne koothidde !

  ReplyDelete
 2. ಕೆಲವು ತಿಂಗಳುಗಳ ಹಿಂದೆ ಆಂಗ್ಲ ಪತ್ರಿಕೆಯೊಂದಕ್ಕೆ ಹಾವಾಡಿಗರೊಬ್ಬರು ಹೇಳಿದ ಮಾತು - "ನಾನು ಹಾವನ್ನು ಹಿಡಿದರೆ ಇತರ ಹಾವಾಡಿಗರಂತೆ ಹಲ್ಲು ಕೀಳುವುದಿಲ್ಲ. ಹಾವಿಗೆ ಹಲ್ಲಿಲ್ಲದೇ ಬದುಕುವುದು ಅಸಾಧ್ಯ".

  ಯಾರು ಹೇಳಿದ್ದು ಈ ಮಾತು ಅಂತ ನೆನಪಿಗೆ ಬರ್ತಿಲ್ಲ. ಸ್ವಲ್ಪ ಯೋಚಿಸಿದರೆ ಈ ಮಾತು ನಿಜ ಎನ್ನಿಸುತ್ತದೆ. ಎಷ್ಟೋ ಜನ ಉರಗ'ತಜ್ಞ'ರು ಪೇಟಿಯಲ್ಲಿ ಹಾವುಗಳನ್ನು ಹಿಡಿದು ಹಲ್ಲು ಕಿತ್ತು ಯಾವುದೋ ಕಾಡಿಗೆ ಬಿಡುತ್ತಾರೆ. ಏನು ಹೇಳಬೇಕು ಇಂಥಾ ಜನಕ್ಕೆ?

  BTW, ಲೇಖನ ಚೆನ್ನಾಗಿದೆ. ಸಿಕ್ಸಿಕ್ಕಾಪಟ್ಟೆ ಮಾಹಿತಿ ಇದೆ! ನನಗೂ ಎಷ್ಟೋ ಹೊಸ ವಿಚಾರ ತಿಳೀತು. ಥ್ಯಾಂಕ್ಸ್!

  ReplyDelete
 3. Abbha !! buddhi iruva, saundarya iruva manushyanolage entha kraurya !! paapa adu oddadtirovaaga nagthare.... innondu jeevada novinalli thamma santhosha kano manushyaru uddhara agthaaara... mansella vyagra agutthe ee video nodidre !!

  ReplyDelete
 4. good one, lots of interesting info. I had done a speech on snakes once, and also have put the same in here: http://sillylittlethings.blogspot.com/2007/04/toastmasters-speech-2.html

  ReplyDelete
 5. ಹಾವುಗಳಿಗೆ ಬೇಕಾಗಿರುವುದು ಕರುಣೆಯಲ್ಲ, ಪ್ರೀತಿ, ರಕ್ಷಣೆ, ಗೌರವ. ಸಲ್ಲಿಸೋಣ. ಇದಲ್ಲವೇ ಸರ್ಪಸಂಸ್ಕಾರ ಎಂದರೆ?
  super -u...
  oLLe write up....
  very very informative....
  Thank you..

  Best Regards,
  -Sridhara

  ReplyDelete
 6. [ಶ್ರೀಧರ] ವಿಡಿಯೋ ನೋಡಿ 'ಯಾವ್' ಥರ ಅನ್ಸ್ತು?

  [ಶ್ರೀಧರ] ಬೆಸ್ಟ್ ರಿಗಾರ್ಡ್ಸ್ ಬೇರೆ!!

  [ಶ್ರೀಲತಾ] ನಿಮ್ಮ ಬ್ಲಾಗು ಬಹಳ ಸೊಗಸಾಗಿದೆ. ನೀವು ಬರೆಯುವ ಶೈಲಿ ತುಂಬಾ ಹಿಡಿಸಿತು.

  [ಅನ್ನಪೂರ್ಣ] ಮನಸ್ಸು ವ್ಯಗ್ರವೇ? ಅವರಿಗೆ ಬಹುಶಃ ನಾವು ತಿನ್ನುವ ಸೌತೇಕಾಯಿಯನ್ನು ನೋಡಿದರೆ ಹಾಗಾಗಬಹುದು!

  [ಶ್ರೀನಿಧಿ] ಆಶ್ಲೇಶ ಬಲಿ - ಒಳ್ಳೇ ಮಜ ಮಾಡಿದ್ದೀಯ ಅನ್ನು!

  ReplyDelete
 7. [ಶ್ರೀಕಾಂತ್] ಬಹುಶಃ ನೀನು ನೋಡಿರುವುದು ಸ್ನೇಕ್ ಶ್ಯಾಮ್ ಸಂದರ್ಶನ ಇರಬೇಕು. ಆತ ಹಾವಾಡಿಗರಲ್ಲ. ಉರಗ ತಜ್ಞ. ನಾನು ತಿಳಿದ ಮಟ್ಟಿಗೆ ಉರಗತಜ್ಞರು ಹಲ್ಲು ಕೀಳುವುದಿಲ್ಲ. ಹಾವಾಡಿಗರು ಕೀಳುತ್ತಾರೆ. ಆದರೆ ಈಗ ಹಾವಾಡಿಗರೂ ಕೂಡ ಕಡಿಮೆಯಾಗಿರುವ ಕಾಲ!

  ನಮ್ಮ ಮನೆಯಲ್ಲಿ ಒಂದು ಸಲ ಒಂದು ನಾಗರ ಹಾವು ಬಂದಿತ್ತು. ಅಲ್ಲಿ ಒಬ್ಬ ಹಾವಾಡಿಗ ಇದ್ದ. ಅವನನ್ನು ಕರೆಸಿ ಹಿಡಿಸಿದೆವು. ಆತ ಕೋಲೊಂದರಲ್ಲಿ ಆ ಹಾವನ್ನು ತಲೆಯ ಮೇಲೆ ಜಜ್ಜಿ ಜಜ್ಜಿ ಕೊಂದುಬಿಟ್ಟ. ಮಾರನೆಯ ದಿನ ಬಂದು ಹಾಲನ್ನು ಆ ಹಾವಿದ್ದ ಜಾಗದಲ್ಲಿ ಚೆಲ್ಲಿ ನಮಸ್ಕಾರ ಮಾಡಿಬಿಟ್ಟ. ಆಗ ನಾನು ಮೂರನೇ ತರಗತಿಯಲ್ಲಿದ್ದೆ. ಹಾವು ತೊಲಗಿತಲ್ಲಾ ಅನ್ನೋ ಖುಷಿಯಿತ್ತಷ್ಟೆ. ಈಗ ಅದನ್ನು ನೆನೆಸಿಕೊಂಡು ಬೇಸರ ಪಟ್ಟುಕೊಳ್ಳುತ್ತೇನೆ.

  ReplyDelete
 8. ಉತ್ತಮವಾದ ಲೇಖನ. ನಿಮ್ಮ ಈ ಮುಂಚಿನ ಪ್ರಶ್ನೋತ್ತರ ಲೇಖನದ ಲಿಂಕ್ ಇದರಲ್ಲಿ ಸೇರಿಸಿ. ಇದು ಅದರ ವಿಸ್ತೃತ ಭಾಗದಂತಿದೆ. ಅರಿವೇ ನಮ್ಮ ಗುರು. ನಿಮ್ಮ ವಿಚಾರ ಲಹರಿ ಎಲ್ಲಡೆ ಹರಡಲಿ.

  ReplyDelete
 9. [ಮಲೆನಾಡಿಗ] ಅದರ ವಿಸ್ತೃತ ಎಂದು ನೀವು ಹೇಳಿದ ಮೇಲೆ ನನಗೂ ಅನ್ನಿಸುತ್ತಿದೆ.. :-)

  ದಟ್ಸ್ ಕನ್ನಡದಲ್ಲಿ ಈ ಪೋಸ್ಟ್ ಲಿಂಕ್‍ನ ಕೊಟ್ಟಿದ್ದಕ್ಕೆ ಧನ್ಯವಾದಗಳು.

  ReplyDelete
 10. article monne ne noDidroo video ivatte noDiddu... intha krutyagaLannu esaguva jana manushyaru anta karskoLakke naalaayakku anta maatra heLaballe. manushya jaatigE avamaana avaru!!

  ReplyDelete
 11. ಚೆನ್ನಾಗಿದೆ ಬರಹ. ಅದಕ್ಕೆ ಕಳೆಕಟ್ಟುವಂತೆ ಫೊಟೊಗಳು ಹಾಗೂ ವಿಡಿಯೋ ಸೇರಿಸಿದ್ದೀರಿ. ಒಂದೇ ಕಡೆ ಸಾಕಷ್ಟು ಮಾಹಿತಿ, ವಿಶ್ಲೇಷಣೆ ಸಿಕ್ಕಂತಾಗಿದೆ.

  ReplyDelete

ಒಂದಷ್ಟು ಚಿತ್ರಗಳು..