Wednesday, March 12, 2008

ಪುಷ್ಪಗಿರಿ

ಸ್ಫಟಿಕದ ಜೊತೆಗೆ ಸ್ಪರ್ಧಿಸುವ ಕುಮಾರಧಾರೆಯ ಹೊಳಪಿನಲ್ಲಿ ಅರ್ಧದಷ್ಟೇ ಕಾಣುವ ಪುಷ್ಪಗಿರಿಯ ಬಿಂಬ ನೋಡಲು ಒಂದಷ್ಟು ಕಷ್ಟ ಪಡಬೇಕಾದೀತು. ಪ್ರಕೃತಿಪ್ರೇಮಿಗಳು ಅದನ್ನು ಕಷ್ಟ ಅನ್ನರು. ಅದನ್ನು ಸಾಹಸ ಎನ್ನುತ್ತಾರೆ. ಅದನ್ನು ಸೌಂದರ್ಯ ಎನ್ನುತ್ತಾರೆ. ಅದನ್ನು ಬದುಕು ಎನ್ನುತ್ತಾರೆ. ಕುಮಾರಧಾರೆಯ ಹೊಳಪಿನಲ್ಲಿ ಗೆಳೆಯರಿಗೆ ಪುಷ್ಪಗಿರಿಯ ಬಿಂಬವನ್ನು ತೋರಿಸಿ ನಾಲ್ಕು ತಿಂಗಳುಗಳಾಗಿದ್ದವು ಅಷ್ಟೆ. ಈಗ ಬಿಂಬದಲ್ಲಿ ಕಾಣುತ್ತಿದ್ದ ಗಿರಿಯ ತುದಿಯನ್ನು ಮುಟ್ಟಿಬಂದಾಗಿದೆ!

ಮಳೆಗಾಲದಲ್ಲಾದರೆ ಎಲ್ಲಾ ಗಿಡಗಳ ಮೇಲೂ ಮುತ್ತಿನ ರಾಶಿಯಿರುತ್ತಿತ್ತು. ಲಂಟಾನದ ಸೈನ್ಯವು ಯುದ್ಧಕ್ಕೆ ಕಾದಿರುತ್ತಿತ್ತು. ಜಿಗಣೆಗಳು ಹಬ್ಬದೂಟಕ್ಕೆ ಸಜ್ಜಾಗಿರುತ್ತಿದ್ದುವು. ಮೋಡವು ಮುಖವನ್ನು ಶುಚಿ ಮಾಡುತ್ತಿತ್ತು. ಆನೆಗಳು ಎಲ್ಲಿವೆಯೋ ತಿಳಿಯದಾಗುತ್ತಿತ್ತು. ಬೇಸಿಗೆಯ ಆರಂಭವಾದ್ದರಿಂದ ಇವು ಯಾವುವೂ ಇರಲಿಲ್ಲ. ಪಶ್ಚಿಮ ಘಟ್ಟವಾದ್ದರಿಂದ, ಕೊಡಗು ಜಿಲ್ಲೆಯಾದ್ದರಿಂದ ತಂಪಿಲ್ಲದಿದ್ದರೂ ಶಾಖವಂತೂ ಇರಲಿಲ್ಲ. ಚರ್ಮಕ್ಕೆ ಹಿತವಾಗುವಂತಹ ಎಳೆಬಿಸಿಲು. ಚಾರಣಕ್ಕೆ ಅಡ್ಡಿ ಬರುವ ಒಂದು ಸಂಗತಿಯೂ ಇಲ್ಲ. ಸೂರ್ಯನ ಸ್ವಾಗತಕ್ಕೆ ಸಂತಸಗೊಂಡು ಭೂಮಿಯನ್ನು ಸ್ವರ್ಗವನ್ನಾಗಿಸಲು ಬಗೆ ಬಗೆಯಾದ ಹಕ್ಕಿಗಳು ಬಗೆ ಬಗೆಯಾದ ರಾಗಗಳನ್ನು ಒಂದೇ ಶೃತಿಯಲ್ಲಿ ಹಾಡುತ್ತಿದ್ದವು.

ಚಾರಣ ಆರಂಭವಾದ ಕೆಲವು ಗಂಟೆಗಳಲ್ಲೇ ರಸ್ತೆ ಮಾಯವಾಗಿ ಕಾಡು ಸಿಕ್ಕಿತು. ಕಾಡಿನ ದೈತ್ಯತೆಗೆ ಸೂರ್ಯನ ಕಿರಣಗಳು ಹೆದರಿ ನೆಲವನ್ನು ಸೋಕಿಸುತ್ತಿರಲಿಲ್ಲ. ಒಣಗಿದ ಹಳದಿ, ಕೇಸರಿ, ಕಂದು ಎಲೆಗಳು ನೆಲದ ಮೇಲೆ ಬಿದ್ದಿದ್ದು, ಅವು ಹೂವಿನ ಹಾಸನ್ನೇ ನಮಗಾಗಿ ಸಿದ್ಧಪಡಿಸಿರುವುದಕ್ಕೇನೇ ಬಹುಶಃ ಈ ಬೆಟ್ಟವನ್ನು ಪುಷ್ಪಗಿರಿ ಎನ್ನುತ್ತಾರೆಂದೆನಿಸಿತು. ಚಿಟ್ಟೆಗಳಿಗಿಂತ ಚಿಕ್ಕದಾದ ಹಕ್ಕಿಗಳನ್ನು ನೋಡುತ್ತಾ, ಹಕ್ಕಿಗಳಿಗಿಂತ ದೊಡ್ಡ ಚಿಟ್ಟೆಗಳನ್ನು ನೋಡುತ್ತ ಅದೆಷ್ಟು ಕಿಲೋಮೀಟರುಗಳನ್ನು ಕಾಲುಗಳು ಸವೆಸಿದವೋ ವನಹಾದಿಗೇ ಗೊತ್ತು.

ಎಷ್ಟು ಜನರಿಗಿದೆ ಭಾಗ್ಯ? ರಜದ ದಿನ ಎಲ್ಲಾ ರೀತಿಯ ಹಸಿರುಗಳನ್ನು ಕಣ್ಣಲ್ಲಿ ತುಂಬಿಕೊಳ್ಳುವುದು, ಕುಡಿದ ತಕ್ಷಣ ಜನ್ಮ ಜನ್ಮದ ದಾಹವೆಲ್ಲಾ ನೀಗುವಂತ ತೊರೆಗಳ ನೀರನ್ನು ಕುಡಿಯುವುದು, ದಟ್ಟಡವಿಯಲ್ಲಿ ನಡೆಯುತ್ತಿರುವಾಗ ಹಠಾತ್ತೆನೆ ಎದುರಾಗುವ ಫಳ ಫಳ ಹೊಳೆಯುವ ಬೃಹತ್ ಬಂಡೆಗಳನ್ನು ಕೈಕಾಲು ತರೆಚಿಕೊಂಡು ಹತ್ತುವುದು, ಕಗ್ಗತ್ತಲ ಕಾಡಿರುಳನ್ನು ಬೆಟ್ಟದ ಮೇಲೆ ಕಳೆಯುವುದು.. ಈ ಭಾಗ್ಯ ಎಷ್ಟು ಮಹಾ ಜನಕ್ಕೆ ಸಿಕ್ಕೀತು? ಟೆಂಟಿಲ್ಲದೆ ಕಾಡಿನಲ್ಲಿ ನಕ್ಷತ್ರಗಳನ್ನು ಹೊದ್ದು ಮಲಗುವ ಮಜವೇ ಬೇರೆ! ಅದರಲ್ಲೂ ಆರು ಗಂಟೆಗಳ ಕಾಲ ಆಟವಾಡಿಕೊಂಡು ನಿಧಾನವಾಗಿ ಚಾರಣ ಮಾಡಿದ ಪುಷ್ಪಗಿರಿಯ ಮೇಲೆ ಉಲ್ಕೆಯ ರಾಶಿಗಳನ್ನೇ ವೀಕ್ಷಿಸುತ್ತಾ ಮಲಗಿದ ಕಂಗಳೇ ಧನ್ಯ!!

ಪುಷ್ಪಗಿರಿಯ ಒಂದು ಭಾಗ ಕೊಡಗಾದರೆ ಮತ್ತೊಂದು ಭಾಗ ದಕ್ಷಿಣ ಕನ್ನಡ ಜಿಲ್ಲೆ. ಕಾಡಿನ ತೀವ್ರತೆಯಲ್ಲೇನೂ ವ್ಯತ್ಯಾಸವಿಲ್ಲದಿದ್ದರೂ, ದ.ಕ. ಭಾಗದಲ್ಲಿ ಶೋಲಾ ಕಾಡಿನ ಅನುಭವ ಬಹಳ ಮನೋಹರವಾಗಿರುವಂಥದ್ದು. ಐದುವರೆ ಸಾವಿರ ಅಡಿ ಎತ್ತರದಲ್ಲಿ ಬೆಟ್ಟದ ಅಂಚಿನಲ್ಲೇ ನಡೆದು ಸಾಗುವ ಯಾರಿಗಾದರೂ ಪ್ರಪಾತಕ್ಕೆ ಬಿದ್ದರೇನಪ್ಪಾ ಅನ್ನುವ ಭಯವಿರಲಿಲ್ಲ. ಕಾರಣ, ಪ್ರಪಾತವನ್ನೂ ಸೌಂದರ್ಯವೆಂದು ಕಂಡವರು ನಾವು. ದಟ್ಟಡವಿಯಲ್ಲೇ ಮನೆಮಾಡಿಕೊಂಡು ಚಾರಣಿಗರಿಗೆ ಊಟವಸತಿಗಳನ್ನು ಕೊಡುವ ಆರು ವರ್ಷದ ಗೆಳೆಯರಾದ ಭಟ್ಟರನ್ನು ಮಾತನಾಡಿಸಿ ಬಹಳ ಸಮಯವೇ ಆಗಿತ್ತು. 'ಚಿತ್ರಚಾಪ' ಪುಸ್ತಕವು ಅವರ ಕೈ ಕೂಡ ತಲುಪಿತು. ಬೆಟ್ಟದ ತಪ್ಪಲನ್ನು ಮುಟ್ಟುವ ಹೊತ್ತಿಗೆ ಕತ್ತಲೆಂಬ ಚೆಲುವೆಯು ಎರಗಿಯೇ ಬಿಟ್ಟಿದ್ದಳು. ಚಾರಣಿಗನ ಜೀವಾಳವಾದ ಟಾರ್ಚು ರಕ್ಷಿಸಿ, ಸೂಕ್ತ ಸ್ಥಳಕ್ಕೆ ತಲುಪಿಸಿತು. ಕಗ್ಗತ್ತಲಲ್ಲಿ ಟಾರ್ಚಿನ ಎದುರು ದೀಪವನ್ನು ಹೊರೆತು, ಅಕ್ಕಪಕ್ಕ ಎಲ್ಲಿ ಏನೇ ನೋಡಿದರೂ ಕಪ್ಪೊಂದೇ! ಬಳಿಯ ಬಳ್ಳಿಯು ಹೆಬ್ಬಾವಿನಂತೆ, ದೂರದ ಬಂಡೆಯು ಆನೆಯಂತೆ ಕಂಡವು. ಬಿದಿರು ಮೆಳೆ ಮುರಿದರೆ ಕಾಟಿಯಿರಬೇಕೆನಿಸಿತು. ಪೊದೆಯೊಳಗೆ ಶಬ್ದವಾದರೆ ಚಿರತೆಯಿರಬಹುದೆನಿಸಿತು. ಅದೇನೇ ಬಂದರೂ ಬದುಕಲೂ ಸಾಯಲೂ ಸಿದ್ಧವಾದ ಮೇಲೆಯೇ ಚಾರಣಕ್ಕೆ ಹೊರಟಿದ್ದು! ಚಾರಣ ಮುಗಿಸುವ ಹೊತ್ತಿಗೆ ಕಾಲುಗಳ ಮಾಂಸಖಂಡಗಳು ಗಟ್ಟಿಯಾಗಿಬಿಟ್ಟಿದ್ದವು. ಮೈ ಕೈ ಬೆವರಿ ಒದ್ದೆಯಾಗಿಬಿಟ್ಟಿದ್ದವು. ತಲೆಗೂದಲು ಕೆದರಿ ಕಾಡಾಗಿ ಹೋಗಿತ್ತು. ಕನ್ನಡಕದ ಮೇಲೂ ಬೆವರು! ಕಣ್ಣುಗಳು ಆಯಾಸದಿಂದ ಕೆಂಪಾಗಿದ್ದವು. ಶುಭ್ರವಾದ ಆಕಾಶದಲ್ಲಿ ನಗುತ್ತಿದ್ದ ಬಿದಿಗೆ ಚಂದ್ರನ ನೋಡಿದ ಮನಸ್ಸು ಮಾತ್ರ ಹರ್ಷದಿಂದ ಹಾಡುತ್ತಿತ್ತು. ಹಿಂದೆ ನಿಂತಿದ್ದ ಆಕಾಶದೆತ್ತರದ ಬೆಟ್ಟವನ್ನು ಕಪ್ಪು ಕತ್ತಲಲ್ಲಿ ನೋಡಿ ಮತ್ತೊಮ್ಮೆ ಭೇಷ್ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡು ಸಂತಸ ಪಟ್ಟೆವು.

ಚಾರಣಿಗರು:
೧. ಡೀನ್
೨. ಅರುಣ್
೩. ರೇಖಾ
೪. ವಿಜಯಾ
೫. ಶ್ರೀಕಾಂತ್
೬. ಶ್ರೀನಿವಾಸ

Pushpagiri


-ಅ
13.03.2008
1AM

10 comments:

 1. oohh ... idu naav hogid trek e na?? :-) ... chennag bardideeya ... jeevanakke aasare aago nanna savi nenapugalalli ondakke padagalu sikkhaage ... aadre sheshaparvatadalli nange bhaya aagiddu nija ... adu ... aa betta nodi alla ... aali hodaaga, nange baro feelings ge.

  ReplyDelete
 2. ನಮಸ್ಕಾರ ಅರುಣ್ ಅವರೇ ,
  ಕಾಫಿ ಆಯ್ತಾ?

  ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

  ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

  ಡೇಟು: 16 ಮಾರ್ಚ್ 2008
  ಟೈಮು: ಇಳಿಸಂಜೆ ನಾಲ್ಕು
  ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

  ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

  ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

  ಅಲ್ಲಿ ಸಿಗೋಣ,
  ಇಂತಿ,
  -ಶ್ರೀಧರ

  ReplyDelete
 3. regular travelogues thara illa....
  :-)aadru nanna biTT hogiddu khandaneeya...adke nimge nimma maamsakhandagaLu haage tondre kottiddu ;-)

  ReplyDelete
 4. ಚಾರಣದ ಸವಿಯನ್ನು ಮನಸಾರೆ ಉಂಡು ಭಾರಿ ತೃಪ್ತಿ ಅನುಭವಿಸಿ ಹೊರಬಂದ ಸುಂದರ ಚುಟುಕು ಚಾರಣ ಬರಹ.

  ಶ್ರೀಕಾಂತ್ ಅನುಭವ ಓದಿದ ಬಳಿಕ ಅರುಣ್ ಏನಾದರು ಗೀಚಿದ್ದಾರ ಎಂದು ಇಲ್ಲಿಗೆ ಬಂದೆ. ಒಂದೇ ಚಾರಣದ ಅನುಭವ ಬೇರೆ ಬೇರೆ ದೃಷ್ಟಿಕೋನದಿಂದ ಓದಿ ಸಂತಸವಾಯಿತು.

  ReplyDelete
 5. ಈ ಲೇಖನ ಪ್ರಕಟಿಸಿದ ಹತ್ತು ನಿಮಿಷದಲ್ಲೇ ನಾನಿದನ್ನು ಓದಿದ್ದೆ. ಈಗ ಮತ್ತೊಮ್ಮೆ ಓದಿದೆ. ನೀನು ಪ್ರಕೃತಿಯನ್ನು ನೋಡುವ ರೀತಿಯೇ ಚೆನ್ನ. ನೀನು ನೋಡಿದ್ದನ್ನು ಇಲ್ಲಿ ಬರೆದಿರುವ ರೀತಿ ಮತ್ತಷ್ಟು ಚೆನ್ನ.

  ಪುಷ್ಪಗಿರಿ ಚಾರಣದ ಎಲ್ಲಾ ಉತ್ಕೃಷ್ಟವಾದ ಅನುಭವಗಳನ್ನು ಮನಮುಟ್ಟುವ ರೀತಿಯಲ್ಲಿ ಪದಗಳಿಗೆ ಇಳಿಸಿದ್ದೀಯ. ಅದ್ಭುತ!

  ReplyDelete
 6. [ಶ್ರೀಕಾಂತ್] ನೀನೂ ಕೂಡ ಆಮೂಲಾಗ್ರವಾಗಿ ಬರೆದಿದ್ದೀಯ. ಸೊಗಸಾಗಿ.

  [ರಾಜೇಶ್ ನಾಯ್ಕ] ಚಾರಣ ಮಾಡುವಾಗ ಏನಾದರೂ ಬರೆಯಲೇ ಬೇಕು ಅಂತ ತಲೆಯಲ್ಲಿ ಕೂತ್ಬಿಟಿರುತ್ತೆ ನೋಡಿ.

  [ಶ್ರೀಧರ] ಮಗನೇ ನೀನೇ ತಪ್ಪಿಸಿಕೊಂಡಿದ್ದು.

  [ವಿಜಯಾ] ಒಳ್ಳೇ ಶೇಷಪರ್ವತ.

  ReplyDelete
 7. ಅದರಲ್ಲೂ ಆರು ಗಂಟೆಗಳ ಕಾಲ ಆಟವಾಡಿಕೊಂಡು ನಿಧಾನವಾಗಿ ಚಾರಣ ಮಾಡಿದ ಪುಷ್ಪಗಿರಿಯ ಮೇಲೆ ಉಲ್ಕೆಯ ರಾಶಿಗಳನ್ನೇ ವೀಕ್ಷಿಸುತ್ತಾ ಮಲಗಿದ ಕಂಗಳೇ ಧನ್ಯ!!

  ಈ ಭಾಗ್ಯ ನನಗೂ ಸಿಗುವಂತಾಗಲಿ !! ನಾನು ಒಮ್ಮೆಯಾದರೂ trek ಮಾಡಲೇಬೇಕೆಂದು ಆಸೆ ಆಗ್ತಿದೆ !!!

  ReplyDelete
 8. nanagU chaaraNakke barabEkemba aase... nimma jothege barabahuda?

  ReplyDelete
 9. [ಸುಧೇಶ್ ಶೆಟ್ಟಿ] ಖಂಡಿತ. ನಿಮ್ಮ email IDಯನ್ನು ಕೊಡಿ. ನಮ್ಮ mailing listಗೆ add ಮಾಡ್ತೀನಿ. ಚಾರಣಗಳಿಗೆ ಹೊರಡುವ ಮುನ್ನ ನಿಮಗೊಂದು email ಕಳ್ಸ್ತೀನಿ.

  [ಲಕುಮಿ] ಬರೀ ಅನ್ನಿಸಿದರೆ ಸಾಲದು ರೀ..

  ReplyDelete
 10. ತು೦ಬಾ ಧನ್ಯವಾದಗಳು ಪರಿಸರ ಪ್ರೇಮಿಯವರೇ….
  ನನ್ನ ಇ-ಮೇಲ್ ವಿಳಾಸ ಇ೦ತಿದೆ.
  sudhesh.shetty@gmail.com or
  sudesh.shetty@hcl.in
  Please let me know when you are going next time.

  ReplyDelete

ಒಂದಷ್ಟು ಚಿತ್ರಗಳು..