Sunday, March 30, 2008

ಸರ್ಪಸಂಸ್ಕಾರರಾಹು ಕೇತುಗಳ ಮಧ್ಯೆ ಮಿಕ್ಕೆಲ್ಲಾ ಗ್ರಹಗಳೂ ವಕ್ಕರಿಸಿದ್ದರೆ ಅದನ್ನು ಕಾಳಸರ್ಪದೋಷವೆನ್ನಬಹುದು. ಸಾಕ್ಷಾತ್ ಶ್ರೀಕೃಷ್ಣನನ್ನೂ ಬಿಡಲಿಲ್ಲ ಈ ಸರ್ಪದೋಷ. ದೋಷಪರಿಹಾರಕ್ಕೇನು ಮಾಡಬೇಕು? ಸರ್ಪಸಂಸ್ಕಾರ! ಮನುಷ್ಯರ ಸಂಸ್ಕಾರದಂತೆ ಸರ್ಪಸಂಸ್ಕಾರವನ್ನೂ ಮಾಡುತ್ತಾರೆ. ಸರ್ಪವನ್ನು ಪೂಜಿಸುವಾಗ ವಿಪರೀತ ಮಡಿಯಿಂದಿರಬೇಕಂತೆ. ನಾಗಪ್ಪನು ಮಡಿಯಲ್ಲಿರದಿದ್ದರೆ ಕುಪಿತನಾಗುತ್ತಾನಂತೆ. ಹಿಂದುಗಳಲ್ಲಿ, ಒಟ್ಟಿನಲ್ಲಿ ಎಲ್ಲಾ ಪ್ರಾಣಿಗಳಂತೆ ಹಾವನ್ನೂ ದೇವರ ಸ್ಥಾನಕ್ಕೇರಿಸಿದ್ದಾರೆ. ಬಹುಶಃ ನಾಗಪ್ಪನು ಎಲ್ಲಾ ಪ್ರಾಣಿ ದೇವರುಗಳಿಗಿಂತ ಹೆಚ್ಚು ಹೆದರಿಸುವವನು ಎನ್ನಿಸುತ್ತೆ. ಹಾವನ್ನು ಕೊರಳಿಗೆ ಸುತ್ತಿಕೊಂಡಿರುವ ಶಿವನಿಗೂ ಸಹ ಜನ ಅಷ್ಟು ಹೆದರುವುದಿಲ್ಲ.
ನಾಗಪ್ಪನಿಗೆ ಹುತ್ತದಲ್ಲಿ ಪೂಜೆ ಮಾಡುತ್ತಾರೆ (ಹೀಗೆ ಮಾಡುವುದರಿಂದ ಹಾವುಗಳ ಪ್ರಾಣಕ್ಕೆ ತೊಂದರೆ ಎಂಬುದು ಎಲ್ಲರಿಗೂ ಅರಿವಾದರೆ ಒಳ್ಳೆಯದು.), ಕಲ್ಲಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ, ದೇವಸ್ಥಾನಗಳನ್ನು ಕಟ್ಟಿಸುತ್ತಾರೆ, ಮನೆಗೆ ಹಾವಾಡಿಗರು ಬಂದರೆ ಬುಟ್ಟಿಯೊಳಗಿನ ಹಾವುಗಳಿಗೆ ನಮಸ್ಕರಿಸುತ್ತಾರೆ.. ಭಾರತದ ಹಾವುಗಳು ಪುಣ್ಯ ಮಾಡಿವೆ!
ವಿಷಪೂರಿತ ಹಾವುಗಳನ್ನು ಸೆರೆಹಿಡಿದು, ಅದರಿಂದ ವಿಷವನ್ನು ಹೊರತೆಗೆದು, ಆ ವಿಷವನ್ನು ಔಷಧಿಗೆ ಬಳಸುವ ಕೆಲಸಗಾರರಿದ್ದಾರೆ. ಅದಕ್ಕೆ ಬೇರೆಯದೇ ಲೈಸೆನ್ಸಿನ ಅಗತ್ಯವಿದೆ. ಹಾವಿನ ವಿಷ ತೆಗೆಯುವವನಿಗಿರಲಿ, ಹಾವನ್ನು ಕಾಪಾಡುವವನಿಗೂ ಸಹ ಲೈಸೆನ್ಸು ಇರಬೇಕು. Snake Rescue License! ಔಷಧಿಯನ್ನು ವಿಷದ ಹಾವಿನಿಂದ ಕಚ್ಚಿಸಿಕೊಂಡಾಗಲೇ ಬಳಸುವುದು ಎಂಬುದೂ ವಿಶೇಷ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಹಾವಿನ ವಿಷವು ತನ್ನ ವಿಷಕ್ಕೇ ಔಷಧಿಯಾಗುತ್ತೆ. ಆದರೆ ನಮ್ಮಲ್ಲಿ ಯಾರುಯಾರೋ ಹಾವು ಹಿಡಿದು, 'ಹಲ್ಲು ಕೀಳುವ' ಕೆಲಸ ಮಾಡುತ್ತಿರುವುದು ದುರಂತ. ಹಾವುಗಳ ಹಲ್ಲು ಕೀಳುವುದು ಸಾಮಾನ್ಯವಾಗಿ ಹಾವಾಡಿಗರು. ಆದರೆ ಹಲ್ಲು ಕೀಳುವುದರಿಂದ ಹಾವಿನ ವಿಷ ಹೋಗುವುದಿಲ್ಲ. ಬದಲಿಗೆ ಕೆಲ ದಿನಗಳ ನಂತರ ಹಾವೇ ಹೋಗುತ್ತೆ!
ಈ ಹಾವಾಡಿಗರು ನಮ್ಮಲ್ಲಿ ಹುಟ್ಟಿಕೊಂಡಿದ್ದಾದರೂ ಹೇಗೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಇದು ಶತಶತಮಾನದಿಂದಲೂ ಬಂದಿರುವ ಕಸುಬು. ಹೊಟ್ಟೆಪಾಡಿಗೆ ಪ್ರಾಣಿಗಳನ್ನು ಅವಲಂಬಿಸುವುದು ಕೆಲವು ವರ್ಗದ ಜನರಿಗೆ ಸಹಜ. ಜೇನು, ಕರಡಿ, ಹುಲಿ, ಚಿರತೆ, ಯಾವುವೂ ಇದಕ್ಕೆ ಹೊರೆತುಪಡಿಸಿಲ್ಲ. ನಾಗರ ಹಾವು ಹೆಡೆಯೆತ್ತಿದಾಗ ಬಹಳ ಸುಂದರವಾಗಿ ಕಾಣಿಸುವುದರಿಂದ, ಪುಂಗಿಯನ್ನು ಹಾಗೆ ಹೀಗೆ ಅಲುಗಾಡಿಸಿದಾಗ ಹಾವೂ ತನ್ನ ಹೆಡೆಯನ್ನು ತೂಗುವುದರಿಂದ ಆ ಕಾಲದ ಹಣವಂತರು ಖುಷಿಗೊಂಡು, ಹಾವಾಡಿಗನು ಏನೋ ದೊಡ್ಡ ಸಾಧನೆ ಮಾಡಿದ್ದಾನೆಂದು ಹೊಗಳಿ ಬಹುಶಃ ಹಣ ಕೊಟ್ಟಿರಬೇಕು, ಈ ಕಸುಬು ಮುಂದುವರೆದಿರಬೇಕು!
ಬಹಳ ಹಿಂದಿನ ಕಾಲದಲ್ಲಿ ಬೆಡಗಿಯರು ತಮ್ಮ ಬೆತ್ತಲೆ/ಅರೆಬೆತ್ತಲೆ ಮೈಮೇಲೆ ಹಾವುಗಳನ್ನು ಹೊದ್ದು ಚಿತ್ರ ಬರೆಸಿಕೊಳ್ಳುವುದು ಹವ್ಯಾಸವೂ ಆಗಿತ್ತು. ಈಗಿನ ಎಷ್ಟೋ ರೂಪದರ್ಶಿಗಳು ಅದನ್ನು ಪುನರಾವರ್ತಿಸುತ್ತಿರುವುದನ್ನು ನಾವು ನೋಡುತ್ತೇವೆ. ಸಾಮಾನ್ಯವಾಗಿ ಇವರುಗಳು ಅತಿ ದಪ್ಪಗಿರುವ, ಮತ್ತು ಕೊಂಚವೂ ತೊಂದರೆ ಮಾಡದ ರಾಕ್ ಪೈಥಾನ್‍ಗಳನ್ನು ಮೈ ಮೇಲೆ ಬಿಟ್ಟುಕೊಳ್ಳುತ್ತಾರೆ. ಆದರೆ, ಕೆಲವು ರೂಪದರ್ಶಿಗಳು ಮತ್ತೆ ಕೆಲವು ದಾಖಲೆಯನ್ನು ನಿರ್ಮಿಸಲು ಹೊರಟಿರುವವರು ಬ್ಲಾಕ್ ಮಾಂಬಾ ಕೂಡ ಮೈಮೇಲೆ ಹರಿಸಿಕೊಳ್ಳುತ್ತಾರೆಂಬುದು ವಿಪರ್ಯಾಸ.
AXNನಂಥ ಚಾನೆಲ್ಲುಗಳಲ್ಲಿ ಆಗಾಗ್ಗೆ ಬಿತ್ತರವಾಗುವ ಕಾರ್ಯಕ್ರಮಗಳಲ್ಲಿ ನೂರಾರು ಹಾವುಗಳನ್ನು ಮುಖದ ಮೇಲೆ ಸುರಿದುಕೊಳ್ಳುವುದು, ಡಬ್ಬಿಯೊಂದರಲ್ಲಿ ನೂರಾರು ಹಾವುಗಳಿದ್ದು ಅದರೊಳಗೆ ಕೈಹಾಕಿ ಬೀಗದ ಕೈ ಹುಡುಕುವುದು ಇವೆಲ್ಲಾ ಸಾಮಾನ್ಯ ದೃಶ್ಯ. ಹಾವುಗಳನ್ನು ಹೊದ್ದು ವೇದಿಕೆಯ ಮೇಲೆ ನೃತ್ಯವಾಡುವುದೂ ಸಹ ರೂಢಿಯಲ್ಲಿದೆ.
ಮಡಿಯಿಂದ ನಾಗಪ್ಪನನ್ನು ಪೂಜಿಸುವ ನಮ್ಮ ಭಾರತದಲ್ಲೂ ಹಾವುಗಳ ಚರ್ಮಗಳನ್ನು ಹರಿದು ತುಂಡು ತುಂಡು ಮಾಡಿ ಚಪ್ಪಲಿ, ಪರ್ಸು, ಚೀಲ ಮಾಡಿಕೊಳ್ಳುತ್ತಾರೆಂದರೆ ಅಚ್ಚರಿಯೇನಿಲ್ಲ. ಹಸುಗಳು, ಮೊಸಲೆಗಳು, ತಿಮಿಂಗಿಲಗಳು, ಹಾವುಗಳು ಈ ಲೆದರ್ ಇಂಡಸ್ಟ್ರಿಗೆ ಸಾಮಾನ್ಯವಾಗಿ ತಮ್ಮ ಚರ್ಮಗಳನ್ನರ್ಪಿಸುವ ಸಂಪನ್ಮೂಲ ವಸ್ತುಗಳು. Raw Materials!!

ಹಾವುಗಳನ್ನು ಹಿಡಿದು, ಅದನ್ನು ಕಾಪಾಡುವಂತೆ, ಹಾವುಗಳ ಬಗ್ಗೆ ತಿಳಿವಳಿಕೆ ಹೇಳುವವರ ಅಗತ್ಯವೂ ಕೂಡ ಜಗತ್ತಿಗಿದೆ. ಹಾವನ್ನು 'ಕ್ರೂರ' ಎಂದು ಬಾಲ್ಯದಲ್ಲಿ ಯಾರೋ ಹೇಳಿರುವುದು ಮನಸ್ಸಿನಲ್ಲಿ ಹೇಗೆ ಉಳಿದುಕೊಂಡುಬಿಟ್ಟಿರುತ್ತೆ ಅಂದರೆ, ಹಾವನ್ನು ಕಂಡರೆ ಸಾಕು ಒಂದು ಮೈಲಿ ದೂರ ಓಡುತ್ತಾರೆ ಅಥವಾ ಧೈರ್ಯಗೆಟ್ಟು ದೊಡ್ಡ ದೊಣ್ಣೆ ತೆಗೆದುಕೊಂಡು ಹಾವಿನ ತಲೆಯ ಮೇಲೆ ಬೀಸಿ ಕೊಲ್ಲುತ್ತಾರೆ. ಹೇಡಿಗಳು!! ಹಾವುಗಳ ಬಗ್ಗೆ ಅನೇಕ 'ಅಜ್ಜಿ' ಕತೆಗಳನ್ನು ಕೇಳಿ ಮನಸ್ಸು ಕೆಡಿಸಿಕೊಂಡವರು ನಾಗರಪಂಚಮಿಯ ದಿನ ತಪ್ಪದೆ ಕಲ್ಲು ನಾಗರ ಹಾವಿಗೆ ಹಾಲೆರಯದೆ ಇರುವುದಿಲ್ಲ. ತಿಳಿದವರು ತಮ್ಮ ಮಕ್ಕಳಿಗೆ, ಸುತ್ತಮುತ್ತಲಿನವರಿಗೆ ಅರಿವು ಮೂಡಿಸುವುದು ಬಹಳ ಅಗತ್ಯವಿದೆ. ಹಾವುಗಳಿಗೆ ರಕ್ಷಣೆ ಬೇಕಿದೆ, ಗೌರವ ಬೇಕಿದೆ, ಪ್ರೀತಿ ಬೇಕಿದೆ!
ಥಾಯ್ಲೆಂಡಿನಲ್ಲಿ ಹಾವನ್ನು ತಿನ್ನುವವರು ಎಷ್ಟು passionate ಆಗಿರುತ್ತಾರೆಂದರೆ, ಗಾಡಿಯ ಮೇಲೆ ನಮಗೆ ಬೇಕಾದ ಜೋಳವನ್ನು ನಾವು ಆರಿಸಿಕೊಳ್ಳುತ್ತೀವಲ್ಲಾ, ಹಾಗೆ ಶೋಕೇಸಿನಲ್ಲಿರುವ ಸರ್ಪವನ್ನು ಅವರು ಆರಿಸಿಕೊಳ್ಳಬಹುದು. ಹಾವು ಇನ್ನೂ ಬದುಕಿರುತ್ತೆ. ನಂತರ ಅವನ ಎದುರೇ ಅದರ ಚರ್ಮವನ್ನು ಸುಲಿದು, ಹುರಳಿಕಾಯಿ ತೊಟ್ಟು ಮುರಿದಂತೆ ಅದರ ಬಾಲವನ್ನು ಮುರಿದು, ಬೇಯಿಸಿ ತಟ್ಟೆಯಲ್ಲಿ ಹಾಕಿಕೊಡುತ್ತಾನೆ. ಥಾಯ್ಲೆಂಡಿನಲ್ಲಿ ಇನ್ನೊಂದು ವಿಶೇಷವೆಂದರೆ, ಹಾವನ್ನು ವೈನ್ ಬಾಟಲಿಯೊಳಗೆ, ವ್ಹಿಸ್ಕಿ ಬಾಟಲಿಯೊಳಗೆ ಮುಳುಗಿಸಿ, ಅದಕ್ಕೆ ಚೆನ್ನಾಗಿ ಕುಡಿಸಿ, ನಂತರ ಕುಡಿದು ಟೈಟಾದ ಹಾವನ್ನು ಇವರು ತಿನ್ನುತ್ತಾರೆ. ಇಂಥಾ ವೈನ್‍ಗೆ, ವ್ಹಿಸ್ಕಿ ಬಹಳ ಬಹಳ ತುಟ್ಟಿ!

ಇಲ್ಲೊಂದು ವಿಡಿಯೋ, ಥಾಯ್ಲೆಂಡಿನ ರಾತ್ರಿಯೂಟದ ಬಗ್ಗೆ..
ಇವು ನೆನಪಿರಲಿ..

--> ಹಾವನ್ನು ಪೂಜೆ ಮಾಡುವುದಿದ್ದರೆ ಮೊಟ್ಟೆ ಕೊಟ್ಟರೆ ಒಳ್ಳೆಯದು. ಹಾವು ಹಾಲು ಕುಡಿಯುವುದಿಲ್ಲ. ಅದು ಮಾಂಸಾಹಾರಿ.

--> ಹಾವು ಕಂಡರೆ ಕಿರುಚಿಕೊಂಡರೆ ಎಳ್ಳಷ್ಟೂ ಪ್ರಯೋಜನವಾಗದು. ಹಾವಿಗೆ ಕಿವಿಯೇ ಇಲ್ಲ. ಅದು ಕಂಪನಾಶಕ್ತಿಯಿಂದ ಪ್ರತಿಕ್ರಯಿಸುತ್ತೆ.

--> ಹಾವುಗಳನ್ನು ಕೊಲ್ಲುವುದು ಕಾನೂನು ಪ್ರಕಾರ ಅಪರಾಧ. ವರ್ಷಗಟ್ಟಲೆ ಕಂಬಿ ಎಣಿಸುವುದಂತೂ ಖಚಿತ.

--> ಹಾವು ಮನುಷ್ಯನನ್ನು ತಿನ್ನುವುದಿಲ್ಲ.

--> ಭಾರತದಲ್ಲಿ ರಾಟಲ್ ಸ್ನೇಕ್ ಇಲ್ಲ, ಅನಾಕೊಂಡಾ ಇಲ್ಲ - ಫ್ಲೈಯಿಂಗ್ ಸ್ನೇಕ್ ಇದೆ, ಕರ್ನಾಟಕದಲ್ಲೇ ಇದೆ!

--> ಹಾವಿಗೆ ನೆನಪಿನ ಶಕ್ತಿ ತೀರ ಕಡಿಮೆ. ಅದರ ಮೆದುಳು ಒಂದು ಇಂಚು ಇರಬಹುದಷ್ಟೆ.

--> ಹಾವು ಕಚ್ಚಿದಾಗ ಬಹುಪಾಲು ಮಂದಿ ಸಾಯುವುದು ಗಾಬರಿಯಿಂದ, ವಿಷದಿಂದಲ್ಲ. ಕೇರೆ ಹಾವು ಕಚ್ಚಿ ಸತ್ತಿರುವವರೂ ಇದ್ದಾರೆ!

--> ಹಾವಿಗೆ ಸಾಮನ್ಯವಾಗಿ ತೊಂದರೆಯಾವುದು ಇವುಗಳಿಂದ - ಮುಂಗುಸಿ, ನವಿಲು, ಹದ್ದು, ಮತ್ತು ಮನುಷ್ಯ.

--> ಹಾವುಗಳಿಗೆ ಬೇಕಾಗಿರುವುದು ಕರುಣೆಯಲ್ಲ, ಪ್ರೀತಿ, ರಕ್ಷಣೆ, ಗೌರವ. ಸಲ್ಲಿಸೋಣ. ಇದಲ್ಲವೇ ಸರ್ಪಸಂಸ್ಕಾರ ಎಂದರೆ?-ಅ
31.03.2008
1AM

Friday, March 28, 2008

ಹಸಿರನ್ನು ಉಳಿಸೋಣ..

ಈ ಚಿತ್ರವನ್ನು ಕಳಿಸಿದ ಶ್ರೀನಿವಾಸನಿಗೆ ಧನ್ಯವಾದಗಳು.

ಹಸಿರನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಮಾತಿಗಿಂತ ಈ ಚಿತ್ರ ಮನಮುಟ್ಟುವಂತೆ ವಿವರಿಸುತ್ತೆ.-ಅ
28.03.2008
9.50PM

Wednesday, March 12, 2008

ಪುಷ್ಪಗಿರಿ

ಸ್ಫಟಿಕದ ಜೊತೆಗೆ ಸ್ಪರ್ಧಿಸುವ ಕುಮಾರಧಾರೆಯ ಹೊಳಪಿನಲ್ಲಿ ಅರ್ಧದಷ್ಟೇ ಕಾಣುವ ಪುಷ್ಪಗಿರಿಯ ಬಿಂಬ ನೋಡಲು ಒಂದಷ್ಟು ಕಷ್ಟ ಪಡಬೇಕಾದೀತು. ಪ್ರಕೃತಿಪ್ರೇಮಿಗಳು ಅದನ್ನು ಕಷ್ಟ ಅನ್ನರು. ಅದನ್ನು ಸಾಹಸ ಎನ್ನುತ್ತಾರೆ. ಅದನ್ನು ಸೌಂದರ್ಯ ಎನ್ನುತ್ತಾರೆ. ಅದನ್ನು ಬದುಕು ಎನ್ನುತ್ತಾರೆ. ಕುಮಾರಧಾರೆಯ ಹೊಳಪಿನಲ್ಲಿ ಗೆಳೆಯರಿಗೆ ಪುಷ್ಪಗಿರಿಯ ಬಿಂಬವನ್ನು ತೋರಿಸಿ ನಾಲ್ಕು ತಿಂಗಳುಗಳಾಗಿದ್ದವು ಅಷ್ಟೆ. ಈಗ ಬಿಂಬದಲ್ಲಿ ಕಾಣುತ್ತಿದ್ದ ಗಿರಿಯ ತುದಿಯನ್ನು ಮುಟ್ಟಿಬಂದಾಗಿದೆ!

ಮಳೆಗಾಲದಲ್ಲಾದರೆ ಎಲ್ಲಾ ಗಿಡಗಳ ಮೇಲೂ ಮುತ್ತಿನ ರಾಶಿಯಿರುತ್ತಿತ್ತು. ಲಂಟಾನದ ಸೈನ್ಯವು ಯುದ್ಧಕ್ಕೆ ಕಾದಿರುತ್ತಿತ್ತು. ಜಿಗಣೆಗಳು ಹಬ್ಬದೂಟಕ್ಕೆ ಸಜ್ಜಾಗಿರುತ್ತಿದ್ದುವು. ಮೋಡವು ಮುಖವನ್ನು ಶುಚಿ ಮಾಡುತ್ತಿತ್ತು. ಆನೆಗಳು ಎಲ್ಲಿವೆಯೋ ತಿಳಿಯದಾಗುತ್ತಿತ್ತು. ಬೇಸಿಗೆಯ ಆರಂಭವಾದ್ದರಿಂದ ಇವು ಯಾವುವೂ ಇರಲಿಲ್ಲ. ಪಶ್ಚಿಮ ಘಟ್ಟವಾದ್ದರಿಂದ, ಕೊಡಗು ಜಿಲ್ಲೆಯಾದ್ದರಿಂದ ತಂಪಿಲ್ಲದಿದ್ದರೂ ಶಾಖವಂತೂ ಇರಲಿಲ್ಲ. ಚರ್ಮಕ್ಕೆ ಹಿತವಾಗುವಂತಹ ಎಳೆಬಿಸಿಲು. ಚಾರಣಕ್ಕೆ ಅಡ್ಡಿ ಬರುವ ಒಂದು ಸಂಗತಿಯೂ ಇಲ್ಲ. ಸೂರ್ಯನ ಸ್ವಾಗತಕ್ಕೆ ಸಂತಸಗೊಂಡು ಭೂಮಿಯನ್ನು ಸ್ವರ್ಗವನ್ನಾಗಿಸಲು ಬಗೆ ಬಗೆಯಾದ ಹಕ್ಕಿಗಳು ಬಗೆ ಬಗೆಯಾದ ರಾಗಗಳನ್ನು ಒಂದೇ ಶೃತಿಯಲ್ಲಿ ಹಾಡುತ್ತಿದ್ದವು.

ಚಾರಣ ಆರಂಭವಾದ ಕೆಲವು ಗಂಟೆಗಳಲ್ಲೇ ರಸ್ತೆ ಮಾಯವಾಗಿ ಕಾಡು ಸಿಕ್ಕಿತು. ಕಾಡಿನ ದೈತ್ಯತೆಗೆ ಸೂರ್ಯನ ಕಿರಣಗಳು ಹೆದರಿ ನೆಲವನ್ನು ಸೋಕಿಸುತ್ತಿರಲಿಲ್ಲ. ಒಣಗಿದ ಹಳದಿ, ಕೇಸರಿ, ಕಂದು ಎಲೆಗಳು ನೆಲದ ಮೇಲೆ ಬಿದ್ದಿದ್ದು, ಅವು ಹೂವಿನ ಹಾಸನ್ನೇ ನಮಗಾಗಿ ಸಿದ್ಧಪಡಿಸಿರುವುದಕ್ಕೇನೇ ಬಹುಶಃ ಈ ಬೆಟ್ಟವನ್ನು ಪುಷ್ಪಗಿರಿ ಎನ್ನುತ್ತಾರೆಂದೆನಿಸಿತು. ಚಿಟ್ಟೆಗಳಿಗಿಂತ ಚಿಕ್ಕದಾದ ಹಕ್ಕಿಗಳನ್ನು ನೋಡುತ್ತಾ, ಹಕ್ಕಿಗಳಿಗಿಂತ ದೊಡ್ಡ ಚಿಟ್ಟೆಗಳನ್ನು ನೋಡುತ್ತ ಅದೆಷ್ಟು ಕಿಲೋಮೀಟರುಗಳನ್ನು ಕಾಲುಗಳು ಸವೆಸಿದವೋ ವನಹಾದಿಗೇ ಗೊತ್ತು.

ಎಷ್ಟು ಜನರಿಗಿದೆ ಭಾಗ್ಯ? ರಜದ ದಿನ ಎಲ್ಲಾ ರೀತಿಯ ಹಸಿರುಗಳನ್ನು ಕಣ್ಣಲ್ಲಿ ತುಂಬಿಕೊಳ್ಳುವುದು, ಕುಡಿದ ತಕ್ಷಣ ಜನ್ಮ ಜನ್ಮದ ದಾಹವೆಲ್ಲಾ ನೀಗುವಂತ ತೊರೆಗಳ ನೀರನ್ನು ಕುಡಿಯುವುದು, ದಟ್ಟಡವಿಯಲ್ಲಿ ನಡೆಯುತ್ತಿರುವಾಗ ಹಠಾತ್ತೆನೆ ಎದುರಾಗುವ ಫಳ ಫಳ ಹೊಳೆಯುವ ಬೃಹತ್ ಬಂಡೆಗಳನ್ನು ಕೈಕಾಲು ತರೆಚಿಕೊಂಡು ಹತ್ತುವುದು, ಕಗ್ಗತ್ತಲ ಕಾಡಿರುಳನ್ನು ಬೆಟ್ಟದ ಮೇಲೆ ಕಳೆಯುವುದು.. ಈ ಭಾಗ್ಯ ಎಷ್ಟು ಮಹಾ ಜನಕ್ಕೆ ಸಿಕ್ಕೀತು? ಟೆಂಟಿಲ್ಲದೆ ಕಾಡಿನಲ್ಲಿ ನಕ್ಷತ್ರಗಳನ್ನು ಹೊದ್ದು ಮಲಗುವ ಮಜವೇ ಬೇರೆ! ಅದರಲ್ಲೂ ಆರು ಗಂಟೆಗಳ ಕಾಲ ಆಟವಾಡಿಕೊಂಡು ನಿಧಾನವಾಗಿ ಚಾರಣ ಮಾಡಿದ ಪುಷ್ಪಗಿರಿಯ ಮೇಲೆ ಉಲ್ಕೆಯ ರಾಶಿಗಳನ್ನೇ ವೀಕ್ಷಿಸುತ್ತಾ ಮಲಗಿದ ಕಂಗಳೇ ಧನ್ಯ!!

ಪುಷ್ಪಗಿರಿಯ ಒಂದು ಭಾಗ ಕೊಡಗಾದರೆ ಮತ್ತೊಂದು ಭಾಗ ದಕ್ಷಿಣ ಕನ್ನಡ ಜಿಲ್ಲೆ. ಕಾಡಿನ ತೀವ್ರತೆಯಲ್ಲೇನೂ ವ್ಯತ್ಯಾಸವಿಲ್ಲದಿದ್ದರೂ, ದ.ಕ. ಭಾಗದಲ್ಲಿ ಶೋಲಾ ಕಾಡಿನ ಅನುಭವ ಬಹಳ ಮನೋಹರವಾಗಿರುವಂಥದ್ದು. ಐದುವರೆ ಸಾವಿರ ಅಡಿ ಎತ್ತರದಲ್ಲಿ ಬೆಟ್ಟದ ಅಂಚಿನಲ್ಲೇ ನಡೆದು ಸಾಗುವ ಯಾರಿಗಾದರೂ ಪ್ರಪಾತಕ್ಕೆ ಬಿದ್ದರೇನಪ್ಪಾ ಅನ್ನುವ ಭಯವಿರಲಿಲ್ಲ. ಕಾರಣ, ಪ್ರಪಾತವನ್ನೂ ಸೌಂದರ್ಯವೆಂದು ಕಂಡವರು ನಾವು. ದಟ್ಟಡವಿಯಲ್ಲೇ ಮನೆಮಾಡಿಕೊಂಡು ಚಾರಣಿಗರಿಗೆ ಊಟವಸತಿಗಳನ್ನು ಕೊಡುವ ಆರು ವರ್ಷದ ಗೆಳೆಯರಾದ ಭಟ್ಟರನ್ನು ಮಾತನಾಡಿಸಿ ಬಹಳ ಸಮಯವೇ ಆಗಿತ್ತು. 'ಚಿತ್ರಚಾಪ' ಪುಸ್ತಕವು ಅವರ ಕೈ ಕೂಡ ತಲುಪಿತು. ಬೆಟ್ಟದ ತಪ್ಪಲನ್ನು ಮುಟ್ಟುವ ಹೊತ್ತಿಗೆ ಕತ್ತಲೆಂಬ ಚೆಲುವೆಯು ಎರಗಿಯೇ ಬಿಟ್ಟಿದ್ದಳು. ಚಾರಣಿಗನ ಜೀವಾಳವಾದ ಟಾರ್ಚು ರಕ್ಷಿಸಿ, ಸೂಕ್ತ ಸ್ಥಳಕ್ಕೆ ತಲುಪಿಸಿತು. ಕಗ್ಗತ್ತಲಲ್ಲಿ ಟಾರ್ಚಿನ ಎದುರು ದೀಪವನ್ನು ಹೊರೆತು, ಅಕ್ಕಪಕ್ಕ ಎಲ್ಲಿ ಏನೇ ನೋಡಿದರೂ ಕಪ್ಪೊಂದೇ! ಬಳಿಯ ಬಳ್ಳಿಯು ಹೆಬ್ಬಾವಿನಂತೆ, ದೂರದ ಬಂಡೆಯು ಆನೆಯಂತೆ ಕಂಡವು. ಬಿದಿರು ಮೆಳೆ ಮುರಿದರೆ ಕಾಟಿಯಿರಬೇಕೆನಿಸಿತು. ಪೊದೆಯೊಳಗೆ ಶಬ್ದವಾದರೆ ಚಿರತೆಯಿರಬಹುದೆನಿಸಿತು. ಅದೇನೇ ಬಂದರೂ ಬದುಕಲೂ ಸಾಯಲೂ ಸಿದ್ಧವಾದ ಮೇಲೆಯೇ ಚಾರಣಕ್ಕೆ ಹೊರಟಿದ್ದು! ಚಾರಣ ಮುಗಿಸುವ ಹೊತ್ತಿಗೆ ಕಾಲುಗಳ ಮಾಂಸಖಂಡಗಳು ಗಟ್ಟಿಯಾಗಿಬಿಟ್ಟಿದ್ದವು. ಮೈ ಕೈ ಬೆವರಿ ಒದ್ದೆಯಾಗಿಬಿಟ್ಟಿದ್ದವು. ತಲೆಗೂದಲು ಕೆದರಿ ಕಾಡಾಗಿ ಹೋಗಿತ್ತು. ಕನ್ನಡಕದ ಮೇಲೂ ಬೆವರು! ಕಣ್ಣುಗಳು ಆಯಾಸದಿಂದ ಕೆಂಪಾಗಿದ್ದವು. ಶುಭ್ರವಾದ ಆಕಾಶದಲ್ಲಿ ನಗುತ್ತಿದ್ದ ಬಿದಿಗೆ ಚಂದ್ರನ ನೋಡಿದ ಮನಸ್ಸು ಮಾತ್ರ ಹರ್ಷದಿಂದ ಹಾಡುತ್ತಿತ್ತು. ಹಿಂದೆ ನಿಂತಿದ್ದ ಆಕಾಶದೆತ್ತರದ ಬೆಟ್ಟವನ್ನು ಕಪ್ಪು ಕತ್ತಲಲ್ಲಿ ನೋಡಿ ಮತ್ತೊಮ್ಮೆ ಭೇಷ್ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡು ಸಂತಸ ಪಟ್ಟೆವು.

ಚಾರಣಿಗರು:
೧. ಡೀನ್
೨. ಅರುಣ್
೩. ರೇಖಾ
೪. ವಿಜಯಾ
೫. ಶ್ರೀಕಾಂತ್
೬. ಶ್ರೀನಿವಾಸ

Pushpagiri


-ಅ
13.03.2008
1AM

Thursday, March 06, 2008

ದೇವಕಾರದ ಹಾದಿಯಲ್ಲಿಒಂದು ವರ್ಷದ ಕೆಳಗೆ ಹದಿನೈದು ಜನರಿಗೆ ಈ ಚಿತ್ರ ಕಳಿಸಿ, ಹದಿನೈದು ಶೀರ್ಷಿಕೆಗಳನ್ನು ಪಡೆದು, ಹದಿನೈದೂ ಜನರಿಗೆ ಉಡುಗೊರೆ ಕೊಟ್ಟಿದ್ದೆ. ಈ ಚಿತ್ರ ನೋಡುತ್ತಿದ್ದರೆ ಬದುಕು ಪ್ರತಿಬಿಂಬಿಸುವಂತಿದೆ.

ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಾನೋ ಶ್ರೀನಿಧಿಯೋ ಇನ್ನೂ ವಿವಾದದಲ್ಲಿದೆ. ;-)

-ಅ
06.03.2008
1AM

Monday, March 03, 2008

ಸಿಂಹದ ಮರಿ ಸೈನ್ಯ

ಸೃಷ್ಟಿಯಲ್ಲಿರೋ ಜೀವಿಗಳಿಗೆಲ್ಲಾ ಒಂದಲ್ಲಾ ಒಂದು ಶತ್ರು ಇದ್ದೇ ಇದೆ. ತಾಯಿಯು ಮರಿಗಳನ್ನು ಯಾವಾಗಲೂ ಕಾಪಾಡುತ್ತಲೇ ಇರುತ್ತೆ. ಸಿಂಹದ ಮರಿಗಳಿಗೆ ಚಿರತೆ, ಕತ್ತೆಕಿರುಬ, ತೋಳ ಮುಂತಾದ ಪ್ರಾಣಿಗಳಿಂದ ಬಹಳ ತೊಂದರೆಗಳು ಉಂಟಾಗುತ್ತಿರುತ್ತೆ. ಕಚ್ಚಿ ಕೊಂದು ಕಬಳಿಸಿಬಿಡುತ್ತವೆಂದು ತಾಯಿಯು ತನ್ನ ಮರಿಗಳ ಜೊತೆಯೇ ಇರುತ್ತೆ. ಆದರೆ ಸಿಂಹದ ಮರಿಗಳಿಗೆ ಬಹಳ ದೊಡ್ಡ ಶತ್ರು 'ಗಂಡು' ಸಿಂಹ. (ಸಿಂಹ ಎಂದರೆ ಗಂಡು, ಹೆಣ್ಣು ಸಿಂಹಕ್ಕೆ ಸಿಂಹಿಣಿ ಎನ್ನುತ್ತಾರೆಂಬ ವ್ಯಾಕರಣವನ್ನು ಬದಿಗಿಡೋಣ ಈ ಅಂಕಣದಲ್ಲಿ.)

ಎಲ್ಲಾ ಸಿಂಹಗಳೂ ತನ್ನದೇ ಆದ ಗುಂಪಿನಲ್ಲಿರುತ್ತವೆ. ಗುಂಪಿನ ಒಡೆಯ ಒಬ್ಬ 'ಕೇಸರಿ' ಇರುತ್ತಾನೆ. ಹೊರಗಿನ ಗುಂಪು ತನ್ನ ಕೇಸರಿಯೊಂದಿಗೆ ಬಂದು ಈ ಗುಂಪಿನ ಕೇಸರಿಯನ್ನು ಕೊಂದರೆ, ಗುಂಪನ್ನು ಗೆದ್ದ ಹಾಗೆ, ಮತ್ತು ಇಲ್ಲಿರುವ ಹೆಣ್ಣು ಸಿಂಹಗಳೆಲ್ಲಾ ಈ ಹೊಸ ಕೇಸರಿಯ ಪಾಲು! ಇದನ್ನೇ ವರಿಸಬೇಕು. ಆದರೆ, ಹೆಣ್ಣು ಸಿಂಹಗಳು ತಮ್ಮ ಮರಿಗಳಿಗೆ ಒಂದುವರೆ ವರ್ಷವಾಗುವವರೆಗೂ ವರಿಸಲು ಇಷ್ಟ ಪಡುವುದಿಲ್ಲ. ಗಂಡು ಸಿಂಹದೊಂದಿಗೆ ಸಹಕರಿಸುವುದೇ ಇಲ್ಲ. ಈ ಕಾರಣಕ್ಕಾಗಿ, ಕೇಸರಿಯು ಗುಂಪಿನಲ್ಲಿರುವ ಪ್ರತಿಯೊಂದು ಮರಿಯನ್ನೂ ಕಚ್ಚಿ ಕೊಂದುಬಿಡುತ್ತೆ! ಮತ್ತೆ ಹೊಸದಾಗಿ ಮಿಲನ! ಹೊಸ ಮರಿಗಳು!! ಹೊಸ ಕೇಸರಿ ಬಂದು ಇದನ್ನು ಕೊಲ್ಲುವ ವರೆಗೂ...

ಮರಿಗಳನ್ನು ರಕ್ಷಿಸಿಕೊಳ್ಳಲು ಶತಪ್ರಯತ್ನವನ್ನು ತಾಯಿ ಸಿಂಹ ಮಾಡುವುದುಂಟು. ಆದರೆ ಕೇಸರಿಯು ಆಕಾರದಲ್ಲಿ ಬಹಳ ದೊಡ್ಡದಾಗಿದ್ದು, ಶೂರನಾಗಿದ್ದು ಹೆಣ್ಣನ್ನು ಓಡಿಸಿ ಮರಿಗಳನ್ನು ಕೊಂದುಬಿಡುತ್ತವೆ. ಇರುವುದನ್ನು ಉಳಿಸಿಕೊಳ್ಳುವುದು ಹೆಣ್ಣಿನ ಧರ್ಮ, ಹೋದ ಕಡೆ ಹೊಸದನ್ನು ಸೃಷ್ಟಿಸುವುದು ಪುರುಷಕರ್ಮ - ಪ್ರಕೃತಿನಿಯಮ!

ಈ ವಿಡಿಯೋ ನೋಡಿ ಕನಿಕರ ಪಡುವುದು ಅನುಚಿತ. ಇದರಲ್ಲಿ ಯಾರದೂ ತಪ್ಪಿಲ್ಲ. ಎಲ್ಲವೂ ಸ್ವಾಭಾವಿಕ. ಎಲ್ಲವೂ ನೈಸರ್ಗಿಕ. ಎಲ್ಲವೂ ಪ್ರಾಕೃತಿಕ. ಎಲ್ಲವೂ ವಿಸ್ಮಯ!!
-ಅ
03.03.2008
1.50AM

ಒಂದಷ್ಟು ಚಿತ್ರಗಳು..